ಹಣಕಾಸು ಸಚಿವಾಲಯ
ಭಾರತದ ಬಾಹ್ಯ ಕಾರ್ಯಕ್ಷಮತೆಯು ಜಾಗತಿಕ ಆಘಾತಗಳಿಗೆ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನುಪ್ರದರ್ಶಿಸುತ್ತದೆ: ಆರ್ಥಿಕ ಸಮೀಕ್ಷೆ 2025-26
2005 ಮತ್ತು 2024ರ ನಡುವೆ ಜಾಗತಿಕ ಸರಕು ರಫ್ತಿನಲ್ಲಿ ಭಾರತದ ಪಾಲು 1% ರಿಂದ 1.8% ಕ್ಕೆ ದ್ವಿಗುಣಗೊಂಡಿದೆ
ಯು.ಎನ್.ಸಿ.ಟಿ.ಎ.ಡಿ. ಭಾರತವನ್ನು ವ್ಯಾಪಾರ ಪಾಲುದಾರರ ವೈವಿಧ್ಯೀಕರಣದಲ್ಲಿ ಪ್ರಮುಖ ಆರ್ಥಿಕತೆಯಾಗಿ ಶ್ರೇಣೀಕರಿಸಿದೆ, ಜಾಗತಿಕ ದಕ್ಷಿಣದಲ್ಲಿ ಅದು ಮೂರನೇ ಸ್ಥಾನದಲ್ಲಿದೆ
ರಫ್ತು ವೇಗ ಹಣಕಾಸು ವರ್ಷ 26 ರಲ್ಲೂ ಮುಂದುವರೆದಿದೆ, ಕ್ಯೂ 1, ಕ್ಯೂ 2 ಮತ್ತು ಕ್ಯೂ 3 ರಲ್ಲಿ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಆಯಾ ತ್ರೈಮಾಸಿಕಗಳಿಗೆ ಇದುವರೆಗಿನ ಪ್ರಮಾಣಕ್ಕೆ ಹೋಲಿಸಿದಾಗ ಅತ್ಯಧಿಕ ರಫ್ತುಗಳನ್ನು ದಾಖಲಿಸಿದೆ
ಸೇವೆಗಳ ರಫ್ತು ಹ.ವ. (ಹಣಕಾಸು ವರ್ಷ ) 25 ರಲ್ಲಿ 387.6 ಶತಕೋಟಿ ಯು.ಎಸ್.ಡಿ.ಯಷ್ಟಾಗಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ, 13.6% ರಷ್ಟು ಬೆಳವಣಿಗೆ ದಾಖಲಿಸಿದೆ.
ಹಣಕಾಸು ವರ್ಷ25 ರಲ್ಲಿ ದೂರಸಂಪರ್ಕ ಉಪಕರಣಗಳ ರಫ್ತು 51.2 ಶೇಕಡಾ (ವರ್ಷದಿಂದ ವರ್ಷಕ್ಕೆ) ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಗಿದೆ
प्रविष्टि तिथि:
29 JAN 2026 2:04PM by PIB Bengaluru
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೊರೇಟ್) ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2025-26ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಭಾರತದ ಬಾಹ್ಯ ಕಾರ್ಯಕ್ಷಮತೆಯು ಜಾಗತಿಕ ಆಘಾತಗಳಿಗೆ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚು ಆಳವಾಗಿ ಸಂಯೋಜಿಸಲ್ಪಟ್ಟು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಸಂಬಂಧಿಸಿದ ರಚನಾತ್ಮಕ ಗುಣಲಕ್ಷಣಗಳನ್ನು ಉಲ್ಲೇಖಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.
ಭಾರತದ ವ್ಯಾಪಾರ ಕಾರ್ಯಕ್ಷಮತೆಯಲ್ಲಿ ಪ್ರವೃತ್ತಿಗಳು
ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುವ ದೇಶವಾಗಿ ಭಾರತದ ಸ್ಥಿರ ಏರಿಕೆಯು ಜಾಗತಿಕ ಸರಕು ರಫ್ತು ಮತ್ತು ವಾಣಿಜ್ಯ ಸೇವೆಗಳ ರಫ್ತು ಎರಡರಲ್ಲೂ ಅದರ ಹೆಚ್ಚುತ್ತಿರುವ ಪಾಲಿನಲ್ಲಿ ಸ್ಪಷ್ಟವಾಗಿದೆ ಎಂದು ಆರ್ಥಿಕ ಸಮೀಕ್ಷೆ ಗಮನಿಸುತ್ತದೆ. ಡಬ್ಲ್ಯು.ಟಿ.ಒ. ದ ವಿಶ್ವ ವ್ಯಾಪಾರ ಅಂಕಿಅಂಶಗಳ ಪ್ರಕಾರ, 2005 ಮತ್ತು 2024ರ ನಡುವೆ, ಜಾಗತಿಕ ಸರಕು ರಫ್ತಿನಲ್ಲಿ ಭಾರತದ ಪಾಲು ಬಹುತೇಕ ದ್ವಿಗುಣಗೊಂಡಿದೆ, ಶೇ. 1 ರಿಂದ ಶೇ. 1.8 ಕ್ಕೆ ಏರಿದೆ, ಅದೇ ರೀತಿ, ಜಾಗತಿಕ ವಾಣಿಜ್ಯ ಸೇವೆಗಳ ರಫ್ತಿನಲ್ಲಿ ಅದರ ಪಾಲು ದ್ವಿಗುಣಗೊಂಡಿದೆ, ಶೇ. 2 ರಿಂದ ಶೇ. 4.3 ಕ್ಕೆ ಏರಿದೆ.
ಭಾರತವು ಜಾಗತಿಕ ವ್ಯಾಪಾರದಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಂಡಿದ್ದು ಮಾತ್ರವಲ್ಲದೆ ತನ್ನ ಪಾಲುದಾರಿಕೆಗಳು ಮತ್ತು ಅದು ವ್ಯಾಪಾರ ಮಾಡುವ ಉತ್ಪನ್ನಗಳ ಶ್ರೇಣಿಯನ್ನು ವೈವಿಧ್ಯಗೊಳಿಸಿದೆ. ಯು.ಎನ್.ಸಿ.ಟಿ.ಎ.ಡಿ. ಯ ವ್ಯಾಪಾರ ಮತ್ತು ಅಭಿವೃದ್ಧಿ ವರದಿ 2025 ರ ಪ್ರಕಾರ, ಭಾರತವು ವ್ಯಾಪಾರ ಪಾಲುದಾರರ ವೈವಿಧ್ಯೀಕರಣದಲ್ಲಿ ಪ್ರಮುಖ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ, ಜಾಗತಿಕ ದಕ್ಷಿಣದಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ಎಲ್ಲಾ ಜಾಗತಿಕ ಉತ್ತರ ಆರ್ಥಿಕತೆಗಳಿಗಿಂತ ಹೆಚ್ಚಿನ ವ್ಯಾಪಾರ ವೈವಿಧ್ಯತೆಯ ಅಂಕಗಳನ್ನು ದಾಖಲಿಸಿದೆ. ಸರಕು ವ್ಯಾಪಾರ ವೈವಿಧ್ಯತೆಯ ಸೂಚಕದ ವಿಷಯದಲ್ಲಿ, ಥೈಲ್ಯಾಂಡ್, ಚೀನಾ ಮತ್ತು ಟರ್ಕಿಯ ನಂತರ, 0.88 ಸೂಚ್ಯಂಕ ಅಂಕಗಳೊಂದಿಗೆ ಭಾರತವು ಜಾಗತಿಕ ದಕ್ಷಿಣದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಭಾರತದ ಒಟ್ಟು ರಫ್ತುಗಳು ಹಣಕಾಸು ವರ್ಷ 25 ರಲ್ಲಿ ದಾಖಲೆಯ 825.3 ಶತಕೋಟಿ ಯು.ಎಸ್.ಡಿ. ಯನ್ನು ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 6.1 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಪ್ರಾಥಮಿಕವಾಗಿ ಸೇವೆಗಳ ರಫ್ತುಗಳಲ್ಲಿನ ಬಲವಾದ ಬೆಳವಣಿಗೆಯಿಂದ ನಡೆಸಲ್ಪಟ್ಟಿದೆ, ಇದು ಶೇಕಡಾ 13.6 (ವರ್ಷದಿಂದ ವರ್ಷಕ್ಕೆ) ಹೆಚ್ಚಳವನ್ನು ದಾಖಲಿಸಿದೆ. ಈ ರಫ್ತು ಹೆಚ್ಚಳದ ವೇಗವು ಹಣಕಾಸು ವರ್ಷ 26 ರಲ್ಲೂ ಮುಂದುವರೆಯಿತು, ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಕ್ಯೂ (ತ್ರೈಮಾಸಿಕ) 1, ಕ್ಯೂ 2 ಮತ್ತು ಕ್ಯೂ3 ಗಳಲ್ಲೂ ಆಯಾ ತ್ರೈಮಾಸಿಕಗಳಿಗೆ ಮುಂದುವರೆದು ಇದುವರೆಗೆ ಅತ್ಯಧಿಕ ರಫ್ತುಗಳನ್ನು ದಾಖಲಿಸಿದೆ.
ವಾಣಿಜ್ಯ ವ್ಯಾಪಾರ
2025ನೇ ಹಣಕಾಸು ವರ್ಷದಲ್ಲಿ ಭಾರತದ ಸರಕು ರಫ್ತು ಒಟ್ಟು 437.7 ಶತಕೋಟಿ ಯು.ಎಸ್.ಡಿ.ಯಾಗಿದ್ದು, ಇದರಲ್ಲಿ ಪೆಟ್ರೋಲಿಯಂಯೇತರ ರಫ್ತುಗಳು 374.3 ಶತಕೋಟಿ ಯು.ಎಸ್.ಡಿ.ಯಷ್ಟು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಎಲೆಕ್ಟ್ರಾನಿಕ್ಸ್, ಔಷಧಗಳು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಆಟೋಮೊಬೈಲ್‌ಗಳು ಪ್ರಮುಖ ರಫ್ತು ಬೆಳವಣಿಗೆಯ ಚಾಲಕಶಕ್ತಿಯಾಗಿ ಹೊರಹೊಮ್ಮಿವೆ, ಇದು ಹೆಚ್ಚಿನ ಮೌಲ್ಯದ ಉತ್ಪಾದನಾ ವಿಭಾಗಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ.
ಆರ್ಥಿಕ ಸಮೀಕ್ಷೆಯು ದೂರಸಂಪರ್ಕ ಉಪಕರಣಗಳ ರಫ್ತುಗಳು ಶೇಕಡಾ 51.2 (ವರ್ಷದಿಂದ ವರ್ಷಕ್ಕೆ)ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದರೆ, ಔಷಧ ಸೂತ್ರೀಕರಣಗಳು ಮತ್ತು ಜೈವಿಕ ವಸ್ತುಗಳ ರಫ್ತುಗಳು ಹಣಕಾಸು ವರ್ಷ 25 ರಲ್ಲಿ ಶೇಕಡಾ 11.2 (ವರ್ಷದಿಂದ ವರ್ಷಕ್ಕೆ) ರಷ್ಟು ಬೆಳವಣಿಗೆಯನ್ನು ಕಂಡಿವೆ ಎಂದು ತೋರಿಸುತ್ತದೆ. ಈ ಪ್ರವೃತ್ತಿಗಳು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ದೇಶದ ಹೆಚ್ಚುತ್ತಿರುವ ಬಲಕ್ಕೆ ಸಾಕ್ಷಿಯಾಗಿದೆ ಮತ್ತು ಜಾಗತಿಕ ಔಷಧೀಯ ಕೇಂದ್ರವಾಗಿ ಅದರ ಸ್ಥಾನವನ್ನು ಪುನರುಚ್ಚರಿಸುತ್ತವೆ.
ಕೃಷಿ ರಫ್ತುಗಳು ಹಣಕಾಸು ವರ್ಷ 20 ರಲ್ಲಿ 34.5 ಶತಕೋಟಿ ಯು.ಎಸ್.ಡಿ.ಯಿಂದ ಹಣಕಾಸು ವರ್ಷ 25 ರಲ್ಲಿ 51.1 ಶತಕೋಟಿ ಯು.ಎಸ್. ಡಿ.ಗೆ ಏರಿದ್ದು, ಶೇಕಡಾ 8.2 ರಷ್ಟು ಸಿ.ಎ.ಜಿ.ಆರ್. ಅನ್ನು ದಾಖಲಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕೃಷಿ, ಸಮುದ್ರ ಉತ್ಪನ್ನಗಳು ಮತ್ತು ಆಹಾರ ಮತ್ತು ಪಾನೀಯಗಳ ಒಟ್ಟಾರೆ ರಫ್ತು 100 ಶತಕೋಟಿ ಡಾಲರ್ ತಲುಪುವ ಸಾಮರ್ಥ್ಯವನ್ನು ದೇಶ ಹೊಂದಿದೆ.
ಪಿ.ಎಲ್.ಐ. ಉಪಕ್ರಮವು ಮೊಬೈಲ್ ಉತ್ಪಾದನೆ, ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳು, ಸಕ್ರಿಯ ಔಷಧೀಯ ಪದಾರ್ಥಗಳು, ವೈದ್ಯಕೀಯ ಸಾಧನಗಳು ಸೇರಿದಂತೆ ಇತರ ವಲಯಗಳ ಗಮನಾರ್ಹ ವ್ಯಾಪಾರ ಕಾರ್ಯಕ್ಷಮತೆಯನ್ನು ಸಕ್ರಿಯಗೊಳಿಸಿದೆ ಎಂದು ಸಮೀಕ್ಷೆಯು ಉಲ್ಲೇಖಿಸುತ್ತದೆ. ಹಣಕಾಸು ವರ್ಷ 21- ಹಣಕಾಸು ವರ್ಷ 25 ಅವಧಿಯಲ್ಲಿ, ಈ ವಲಯಗಳಿಂದ ರಫ್ತಿನ ಸರಾಸರಿ ವಾರ್ಷಿಕ ಬೆಳವಣಿಗೆ ದರ (AAGR) ಶೇಕಡಾ 10.6 ರಷ್ಟಿದೆ, ಆಮದುಗಳು ಶೇಕಡಾ 12.6 ರಷ್ಟಿದೆ.
ಹಣಕಾಸು ವರ್ಷ 01 ಮತ್ತು ಹಣಕಾಸು ವರ್ಷ 25ರ ನಡುವೆ, ಔಷಧೀಯ ರಫ್ತು ಹಣಕಾಸು ವರ್ಷ 25 ರಲ್ಲಿ 1.9 ಬಿಲಿಯನ್ ಯು.ಎಸ್.ಡಿ.ಯಿಂದ 30.5 ಬಿಲಿಯನ್ ಯು.ಎಸ್.ಡಿ.ಗೆ ಹೆಚ್ಚಾಗಿದೆ, ಇದು ಮಾರುಕಟ್ಟೆ ವೈವಿಧ್ಯೀಕರಣ, ನಿಯಂತ್ರಕ ಜೋಡಣೆ ಮತ್ತು ಸಾಮರ್ಥ್ಯದಲ್ಲಿನ ವರ್ಧನೆಗಳಿಂದ ಸುಮಾರು 16 ಪಟ್ಟು ಏರಿಕೆಯಾಗಿದೆ.
ಆಮದು ಭಾಗದಲ್ಲಿ, ಸರಕುಗಳ ಆಮದು ಹಣಕಾಸು ವರ್ಷ 25 ರಲ್ಲಿ ಶೇಕಡಾ 6.3 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದ್ದು, ಇದು 721.2 ಬಿಲಿಯನ್ ಯು.ಎಸ್.ಡಿ. ಆಗಿತ್ತು. ಈ ಹೆಚ್ಚಳವು ಪ್ರಾಥಮಿಕವಾಗಿ ಪೆಟ್ರೋಲಿಯಂ ಅಲ್ಲದ, ರತ್ನವಲ್ಲದ ಮತ್ತು ಆಭರಣಗಳ ಆಮದುಗಳ ಏರಿಕೆಯಿಂದ ಉಂಟಾಗಿದೆ, ಇದು ಹಣಕಾಸು ವರ್ಷ 24 ರಲ್ಲಿ 421 ಬಿಲಿಯನ್ ಯು.ಎಸ್.ಡಿ.ಯಿಂದ 446.5 ಬಿಲಿಯನ್ ಯು.ಎಸ್.ಡಿ.ಗೆ ಹೆಚ್ಚಾಗಿದೆ. ಈ ಪ್ರವೃತ್ತಿಗೆ ನಿರ್ಣಾಯಕ ಮಧ್ಯಂತರ ಒಳಹರಿವು ಮತ್ತು ಬಂಡವಾಳ ಸರಕುಗಳಿಗೆ ಹೆಚ್ಚಿನ ಬೇಡಿಕೆ ಕಾರಣ, ಇದು ದೇಶೀಯ ಬೇಡಿಕೆಯಲ್ಲಿ ಚೇತರಿಕೆಯನ್ನು ಸೂಚಿಸುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಯುಕೆ ಸಿಇಟಿಎ ಮತ್ತು ಭಾರತ-ಓಮನ್ ಸಿಇಪಿಎ ಸೇರಿದಂತೆ ವಿಸ್ತರಿಸುತ್ತಿರುವ ಎಫ್‌ಟಿಎ ಜಾಲ ಮತ್ತು ಯುಎಸ್, ಚಿಲಿ ಹಾಗು ಪೆರುವಿನೊಂದಿಗೆ ನಡೆಯುತ್ತಿರುವ ಪರಸ್ಪರ ತೊಡಗಿಕೊಳ್ಳುವಿಕೆಯ ಮಾತುಕತೆಗಳು/ನಿಶ್ಚಿತಾರ್ಥಗಳು ಭಾರತದ ವೈವಿಧ್ಯಮಯ ವ್ಯಾಪಾರ ಕಾರ್ಯತಂತ್ರವನ್ನು ಬೆಂಬಲಿಸುತ್ತವೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಆಳವಾದ ಏಕೀಕರಣವನ್ನು ಬೆಂಬಲಿಸುತ್ತವೆ. ನ್ಯೂಜಿಲೆಂಡ್ ಮತ್ತು ಇಯು ಜೊತೆಗಿನ ಎಫ್‌ಟಿಎಗಾಗಿ ಮಾತುಕತೆಗಳು ಕ್ರಮವಾಗಿ ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಮುಕ್ತಾಯಗೊಂಡವು.
ಸೇವೆಗಳ ವ್ಯಾಪಾರ
ಸೇವೆಗಳ ರಫ್ತುಗಳು ಹಣಕಾಸು ವರ್ಷ 25 ರಲ್ಲಿ 387.6 ಬಿಲಿಯನ್ ಯು.ಎಸ್.ಡಿ.ಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು, ಶೇಕಡಾ 13.6 ರಷ್ಟು ಬೆಳೆದು, ತಂತ್ರಜ್ಞಾನ ಮತ್ತು ವ್ಯಾಪಾರ ಸೇವೆಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದವು. ಈ ಬೆಳವಣಿಗೆಗೆ ಹಣಕಾಸು ವರ್ಷ 20 ರಿಂದ ಹಣಕಾಸು ವರ್ಷ 25 ರವರೆಗೆ 7 ಪ್ರತಿಶತ ಸಿ.ಎ.ಜಿ.ಆರ್. ನಲ್ಲಿ ಬೆಳೆದ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿ.ಸಿ.ಸಿ.ಗಳು) ಜಾಗತಿಕ ತಾಣವಾಗಿ ದೇಶದ ಯಶಸ್ಸು ಕಾರಣವಾಗಿದೆ.
ಅದೇ ಸಮಯದಲ್ಲಿ, ಸೇವೆಗಳ ಆಮದುಗಳು ಶೇಕಡಾ 11.4 (ವರ್ಷದಿಂದ ವರ್ಷಕ್ಕೆ) ಬೆಳವಣಿಗೆಯನ್ನು ದಾಖಲಿಸಿವೆ ಮತ್ತು ಮೊತ್ತ 198.7 ಬಿಲಿಯನ್ ಯು.ಎಸ್.ಡಿ. ಆಗಿತ್ತು. ಆಮದುಗಳಲ್ಲಿನ ಬೆಳವಣಿಗೆ ವ್ಯಾಪಾರ ಮತ್ತು ಹಣಕಾಸು ಸೇವೆಗಳಿಗೆ ಗಡಿಯಾಚೆಗಿನ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ, ಹಣಕಾಸು ವರ್ಷ25 ರಲ್ಲಿ, ಸೇವಾ ವ್ಯಾಪಾರ ಹೆಚ್ಚುವರಿ 188.8 ಶತಕೋಟಿ ಯು.ಎಸ್.ಡಿ.ಗೆ ಏರಿತು, ಆ ಮೂಲಕ ಇದುವರೆಗೆ ದಾಖಲಾದುದಕ್ಕಿಂತ ಹೆಚ್ಚಿನ ಅತ್ಯುನ್ನತ ಮಟ್ಟವನ್ನು ತಲುಪಿತು.
******
(रिलीज़ आईडी: 2220477)
आगंतुक पटल : 6