ಹಣಕಾಸು ಸಚಿವಾಲಯ
ಅಧಿಕೃತ ವ್ಯಾಖ್ಯಾನಗಳು ಸೂಚಿಸುವುದಕ್ಕಿಂತಲೂ ಭಾರತವು ಆರ್ಥಿಕ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಹೆಚ್ಚು ನಗರೀಕರಣಗೊಂಡಿದೆ: ಆರ್ಥಿಕ ಸಮೀಕ್ಷೆ 2025-26
ಭಾರತವು ಬೃಹತ್ ತ್ವರಿತ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಿದ್ದು, ಸುಮಾರು 24 ನಗರಗಳಲ್ಲಿ ಸುಮಾರು 1,036 ಕಿಮೀ ಮೆಟ್ರೋ/ಆರ್ ಆರ್ ಟಿ ಎಸ್ (RRTS) ಕಾರ್ಯಾಚರಣೆಯಲ್ಲಿದೆ
ನಗರಸಭೆಯ ಘನತ್ಯಾಜ್ಯದ (MSW) ಮನೆ-ಮನೆ ಸಂಗ್ರಹಣೆಯು 2025–26ರ ವೇಳೆಗೆ ನಗರ ಪ್ರದೇಶದ ಶೇಕಡಾ 98 ರಷ್ಟು ವಾರ್ಡ್ ಗಳಿಗೆ ವಿಸ್ತರಿಸಿದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (PMAY-U) ನ ಎರಡು ಹಂತಗಳ ಅಡಿಯಲ್ಲಿ ಒಟ್ಟು 122.06 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ
ಭವಿಷ್ಯದ ನಗರ ನೀತಿಯು ಸ್ವತಂತ್ರ ಯೋಜನೆಗಳಿಗಿಂತ ವ್ಯವಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಗೆ ಆದ್ಯತೆ ನೀಡಬೇಕು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ
प्रविष्टि तिथि:
29 JAN 2026 1:42PM by PIB Bengaluru
“ಭಾರತದ ನಗರಗಳು ಕೇವಲ ವಾಸಸ್ಥಳಗಳಲ್ಲ, ಬದಲಿಗೆ ಅವು ನಿರ್ಣಾಯಕ ಆರ್ಥಿಕ ಮೂಲಸೌಕರ್ಯಗಳಾಗಿ ಕಾರ್ಯನಿರ್ವಹಿಸುತ್ತವೆ. ಜನಸಾಂದ್ರತೆ ಮತ್ತು ಸಾಮೀಪ್ಯವು ಉತ್ಪಾದಕತೆಯನ್ನು ಹೆಚ್ಚಿಸುವ, ಕಾರ್ಮಿಕ ಮಾರುಕಟ್ಟೆಗಳನ್ನು ಗಾಢವಾಗಿಸುವ ಮತ್ತು ನಾವೀನ್ಯತೆಯನ್ನು ಸಕ್ರಿಯಗೊಳಿಸುವ 'ಅಗ್ಲೋಮರೇಶನ್ ಎಕಾನಮಿಗಳನ್ನು' (ಒಟ್ಟುಗೂಡುವಿಕೆಯ ಆರ್ಥಿಕ ಲಾಭಗಳು) ಸೃಷ್ಟಿಸುತ್ತವೆ. ಆದ್ದರಿಂದ ಭಾರತದ ಬೆಳವಣಿಗೆಯ ಪಥದಲ್ಲಿ ನಗರಗಳ ಆರ್ಥಿಕ ಪಾತ್ರವು ಕೇಂದ್ರಬಿಂದುವಾಗಿದೆ,” ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ.
ಆರ್ಥಿಕ ಸಮೀಕ್ಷೆ 2025-26 ರ ಪ್ರಕಾರ, ಭಾರತವು ಆರ್ಥಿಕವಾಗಿ ಈಗಾಗಲೇ ಆಳವಾಗಿ ನಗರೀಕರಣಗೊಂಡಿದೆ ಮತ್ತು ರಾಷ್ಟ್ರೀಯ ಉತ್ಪನ್ನದ ಬಹುಪಾಲು ನಗರ ಹಾಗೂ ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುತ್ತಿದೆ. ಆ ನಗರೀಕರಣವನ್ನು ನಾಗರಿಕರಿಗೆ ಗೋಚರ ಮತ್ತು ಅಗೋಚರ ರೀತಿಯಲ್ಲಿ ಉತ್ತಮವಾಗಿ ಪ್ರಯೋಜನಕಾರಿಯಾಗುವಂತೆ ಮಾಡುವುದು ಈಗಿನ ಮುಂದಿರುವ ಕಾರ್ಯವಾಗಿದೆ.
ಸಮೀಕ್ಷೆಯು ನಗರಗಳನ್ನು ಉದ್ದೇಶಪೂರ್ವಕ ಹೂಡಿಕೆ ಮತ್ತು ಕಾರ್ಯತಂತ್ರದ ಯೋಜನೆಯ ಅಗತ್ಯವಿರುವ 'ಆರ್ಥಿಕ ಆಸ್ತಿಗಳು' ಎಂದು ಬಿಂಬಿಸಿದೆ. ನಗರಗಳನ್ನು ಆರ್ಥಿಕ ಮೂಲಸೌಕರ್ಯಗಳೆಂದು ಗುರುತಿಸುವುದು ಸಾರ್ವಜನಿಕ ನೀತಿ, ಹಣಕಾಸಿನ ಆದ್ಯತೆಗಳು ಮತ್ತು ಯೋಜನಾ ಚೌಕಟ್ಟುಗಳನ್ನು ಭಾರತದ ಅಭಿವೃದ್ಧಿಯ ಪಥದೊಂದಿಗೆ ಜೋಡಿಸುವತ್ತ ಇಡಬೇಕಾದ ಅಗತ್ಯ ಮೊದಲ ಹೆಜ್ಜೆಯಾಗಿದೆ ಎಂದು ಅದು ಹೇಳಿದೆ.
ನಗರಗಳು ಬೆಳವಣಿಗೆಯ ಇಂಜಿನ್ ಗಳು
ಆರ್ಥಿಕ ಸಮೀಕ್ಷೆ 2025-26 ರ ಪ್ರಕಾರ, ಅಧಿಕೃತ ವ್ಯಾಖ್ಯಾನಗಳು ಸೂಚಿಸುವುದಕ್ಕಿಂತಲೂ ಭಾರತವು ಆರ್ಥಿಕ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಹೆಚ್ಚು ನಗರೀಕರಣಗೊಂಡಿದೆ. ಯುರೋಪಿಯನ್ ಕಮಿಷನ್ ನ ಗ್ರೂಪ್ ಆನ್ ಅರ್ಥ್ ಅಬ್ಸರ್ವೇಶನ್ಸ್ನ 'ಗ್ಲೋಬಲ್ ಹ್ಯೂಮನ್ ಸೆಟಲ್ಮೆಂಟ್ಸ್ ಲೇಯರ್' (GHSL) ನ ಉಪಗ್ರಹ ದತ್ತಾಂಶದ ಆಧಾರದ ಮೇಲೆ, ಭಾರತವು 2015 ರಲ್ಲಿ ಶೇ. 63 ರಷ್ಟು ನಗರೀಕರಣಗೊಂಡಿತ್ತು; ಇದು 2011 ರ ಜನಗಣತಿಯಲ್ಲಿ ವರದಿಯಾದ ನಗರೀಕರಣದ ದರಕ್ಕಿಂತ ಸುಮಾರು ಎರಡರಷ್ಟಿದೆ.
ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ 2036 ರ ವೇಳೆಗೆ ಭಾರತದ ಪಟ್ಟಣಗಳು ಮತ್ತು ನಗರಗಳು 60 ಕೋಟಿ ಜನರಿಗೆ ಅಂದರೆ ಒಟ್ಟು ಜನಸಂಖ್ಯೆಯ ಶೇ. 40 ರಷ್ಟು ಜನರಿಗೆ ನೆಲೆಯಾಗಲಿವೆ (ಇದು 2011 ರಲ್ಲಿ ಶೇ. 31 ರಷ್ಟಿತ್ತು) ಮತ್ತು ನಗರ ಪ್ರದೇಶಗಳು ಜಿಡಿಪಿ (GDP) ಗೆ ಸುಮಾರು ಶೇ. 70 ರಷ್ಟು ಕೊಡುಗೆ ನೀಡಲಿವೆ ಎಂದು ಆರ್ಥಿಕ ಸಮೀಕ್ಷೆಯು ಪ್ರತಿಪಾದಿಸಿದೆ.
ಸಂಚಾರ ಮತ್ತು ಸಾರಿಗೆ
ಆರ್ಥಿಕ ಸಮೀಕ್ಷೆ 2025-26 ರ ಪ್ರಕಾರ, ಭಾರತವು ಕಳೆದ ದಶಕದಲ್ಲಿ ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಅನ್ನು (ಬೃಹತ್ ತ್ವರಿತ ಸಾರಿಗೆ ವ್ಯವಸ್ಥೆ) ಗಣನೀಯವಾಗಿ ವಿಸ್ತರಿಸಿದೆ. 2025 ರ ವೇಳೆಗೆ, ಸುಮಾರು 24 ನಗರಗಳಲ್ಲಿ ಸುಮಾರು 1,036 ಕಿಮೀ ಮೆಟ್ರೋ/ಆರ್ಆರ್ಟಿಎಸ್ (RRTS) ಕಾರ್ಯಾಚರಣೆಯಲ್ಲಿದ್ದು, ಇನ್ನೂ ಹೆಚ್ಚಿನ ಕಾರಿಡಾರ್ಗಳು ನಿರ್ಮಾಣ ಹಂತದಲ್ಲಿವೆ.
ನಗರ ಬಸ್ ಕಾರ್ಯಾಚರಣೆಗಳನ್ನು ಬಲಪಡಿಸಲು ಸರ್ಕಾರವು 'ಪಿಎಂ ಇ-ಬಸ್ ಸೇವಾ' (PM e-Bus Sewa) ಯೋಜನೆಯನ್ನು ಪ್ರಾರಂಭಿಸಿದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 10,000 ಇ-ಬಸ್ ಗಳನ್ನು ಪರಿಚಯಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ₹20,000 ಕೋಟಿ ಕೇಂದ್ರ ನೆರವು ಮತ್ತು ಆಪರೇಟರ್ಗಳ ನಗದು ಹರಿವನ್ನು ಖಚಿತಪಡಿಸಲು ಪಾವತಿ ಭದ್ರತಾ ವ್ಯವಸ್ಥೆಯ (PSM) ಬೆಂಬಲ ನೀಡಲಾಗಿದೆ. ಆರ್ಥಿಕ ವರ್ಷ 2024-25ರ ಅವಧಿಯಲ್ಲಿ, 14 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ 7,293 ಇ-ಬಸ್ಗಳಿಗೆ ಅನುಮೋದನೆ ನೀಡಲಾಗಿದೆ. ಡಿಪೋ ಮತ್ತು ಪವರ್ ಇನ್ಫ್ರಾಸ್ಟ್ರಕ್ಚರ್ ಗಾಗಿ ₹983.75 ಕೋಟಿ ಮಂಜೂರಾಗಿದ್ದು, ಈಗಾಗಲೇ ₹437.5 ಕೋಟಿ ಬಿಡುಗಡೆ ಮಾಡಲಾಗಿದೆ.
ಫಲಿತಾಂಶಗಳನ್ನು ಇನ್ನಷ್ಟು ಸುಧಾರಿಸಲು, ಬಸ್ ಫ್ಲೀಟ್ಗಳ ಹೆಚ್ಚಳ ಮತ್ತು ನಗದುರಹಿತವಾಗಿಸುವಿಕೆ (ಡಿಜಿಟಲೀಕರಣ), ಫೈನಾನ್ಸ್-ಫಸ್ಟ್ ಇ-ಬಸ್ ನಿಯೋಜನೆ, ಲಾಸ್ಟ್-ಮೈಲ್ ಮತ್ತು ಹಂಚಿಕೆಯ ಸಾರಿಗೆಯನ್ನು ಮುಖ್ಯವಾಹಿನಿಗೆ ತರುವುದು, ಟ್ರಾನ್ಸಿಟ್-ಓರಿಯೆಂಟೆಡ್ ಡೆವಲಪ್ ಮೆಂಟ್ (TOD) ಅನುಷ್ಠಾನ ಮತ್ತು ನಿಲ್ದಾಣಗಳ ಸುತ್ತಮುತ್ತಲಿನ ಮೌಲ್ಯವರ್ಧನೆಗೆ ಆರ್ಥಿಕ ಸಮೀಕ್ಷೆ 2025-26 ಸೂಚಿಸಿದೆ.
ನಗರ ನೈರ್ಮಲ್ಯ
ಕಳೆದ ದಶಕದಲ್ಲಿ, ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್-ಅರ್ಬನ್ (SBM-U) ಅಡಿಯಲ್ಲಿ ಜಾಗತಿಕವಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಬೃಹತ್ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮಗಳಲ್ಲಿ ಒಂದನ್ನು ಕೈಗೊಂಡಿದೆ ಎಂದು ಆರ್ಥಿಕ ಸಮೀಕ್ಷೆ 2025-26 ಹೈಲೈಟ್ ಮಾಡಿದೆ. ಇದಕ್ಕೆ ಪೂರಕವಾಗಿ ಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫರ್ಮೇಷನ್ (AMRUT) ಮತ್ತು ಅಮೃತ್ 2.0 ಅಡಿಯಲ್ಲಿ ಹೂಡಿಕೆಗಳನ್ನು ಮಾಡಲಾಗಿದೆ. ಈ ಕ್ರಮಗಳು ನೈರ್ಮಲ್ಯದ ಫಲಿತಾಂಶಗಳಲ್ಲಿ ಗಮನಾರ್ಹ ಲಾಭಗಳನ್ನು ನೀಡಿವೆ, ಇದರಲ್ಲಿ ಪ್ರಮುಖವಾಗಿ ಎಲ್ಲಾ ನಗರಗಳಲ್ಲಿ ಬಯಲು ಶೌಚ ಮುಕ್ತ ಸ್ಥಿತಿಯನ್ನು ಸಾಧಿಸಲಾಗಿದೆ.
ನಗರಸಭೆಯ ಘನತ್ಯಾಜ್ಯದ (MSW) ಮನೆ-ಮನೆ ಸಂಗ್ರಹಣೆಯು 2014-15ರಲ್ಲಿ ಅತ್ಯಲ್ಪವಾಗಿತ್ತು. ಸಮೀಕ್ಷೆಯ ಪ್ರಕಾರ, ಇದು 2025-26ರ ವೇಳೆಗೆ ನಗರದ ಶೇ. 98 ರಷ್ಟು ವಾರ್ಡ್ಗಳಿಗೆ ವಿಸ್ತರಿಸಿದೆ ಮತ್ತು ಇದಕ್ಕೆ ರಾಷ್ಟ್ರವ್ಯಾಪಿ 2.5 ಲಕ್ಷಕ್ಕೂ ಹೆಚ್ಚು ತ್ಯಾಜ್ಯ ಸಂಗ್ರಹಣಾ ವಾಹನಗಳ ಬೆಂಬಲವಿದೆ.

ತಂತ್ರಜ್ಞಾನ ಅಳವಡಿಕೆಯ ಮೂಲಕ ನಗರಾಭಿವೃದ್ಧಿ
ಸ್ಮಾರ್ಟ್ ಸಿಟೀಸ್ ಮಿಷನ್ (SCM) ಅಡಿಯಲ್ಲಿ ನಗರಗಳು ಯೋಜಿತ ಯೋಜನೆಗಳಲ್ಲಿ ಗಣನೀಯ ಬಹುಪಾಲು ಕೆಲಸಗಳನ್ನು ಪೂರ್ಣಗೊಳಿಸಿವೆ ಎಂದು ಸಮೀಕ್ಷೆಯು ತಿಳಿಸಿದೆ. ಮೇ 9, 2025 ರ ಹೊತ್ತಿಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ— ಸ್ಮಾರ್ಟ್ ರಸ್ತೆಗಳು, ಸೈಕಲ್ ಟ್ರ್ಯಾಕ್ ಗಳು, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಗಳು, ಮೇಲ್ದರ್ಜೆಗೇರಿಸಿದ ನೀರು ಮತ್ತು ಒಳಚರಂಡಿ ಜಾಲಗಳು ಹಾಗೂ ಆಕರ್ಷಕ ಸಾರ್ವಜನಿಕ ಸ್ಥಳಗಳು ಸೇರಿದಂತೆ ಒಟ್ಟು 8,067 ಯೋಜನೆಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಕೆಲಸಗಳು ಪೂರ್ಣಗೊಂಡಿವೆ ಮತ್ತು ಸುಮಾರು ₹1.64 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ.
ನಗರ ಪ್ರದೇಶಗಳಲ್ಲಿ ಕೈಗೆಟುಕುವ ದರದ ವಸತಿಯನ್ನು ಬೆಂಬಲಿಸಲು ಸರ್ಕಾರವು ನೇರ ತೆರಿಗೆ ಮತ್ತು ಜಿಎಸ್ಟಿ (GST) ಪ್ರಯೋಜನಗಳು, ಆದ್ಯತೆಯ ವಲಯದ ಸಾಲ ನೀಡಿಕೆಯಲ್ಲಿ ಸೇರ್ಪಡೆ ಮತ್ತು ಮೂಲಸೌಕರ್ಯದ ಸ್ಥಾನಮಾನ ನೀಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಅರ್ಬನ್ (PMAY-U) ನ ಎರಡು ಹಂತಗಳ ಅಡಿಯಲ್ಲಿ, ನವೆಂಬರ್ 24, 2025 ರವರೆಗೆ ದೇಶಾದ್ಯಂತ ಒಟ್ಟು 122.06 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ, ಅದರಲ್ಲಿ 96.02 ಲಕ್ಷ ಮನೆಗಳು ಪೂರ್ಣಗೊಂಡಿವೆ ಅಥವಾ ಫಲಾನುಭವಿಗಳಿಗೆ ಹಸ್ತಾಂತರಿಸಲ್ಪಟ್ಟಿವೆ.
ಸಮೀಕ್ಷೆಯು ವಿವರಿಸಿದಂತೆ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PM SVANidhi) ಯೋಜನೆಯು ನಗರದ ಬೀದಿ ಬದಿ ವ್ಯಾಪಾರಿಗಳ (SV) ಜೀವನೋಪಾಯವನ್ನು ಮರುಸ್ಥಾಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಆದೇಶಗಳನ್ನು ಸಮನ್ವಯಗೊಳಿಸುವುದು, ಫಲಿತಾಂಶಗಳ ಮಾಲೀಕತ್ವವನ್ನು ಸ್ಪಷ್ಟಪಡಿಸುವುದು ಮತ್ತು ದಿನನಿತ್ಯದ ಜಾರಿ ಪ್ರಕ್ರಿಯೆಗಳನ್ನು ಅನಗತ್ಯ ಹಸ್ತಕ್ಷೇಪಗಳಿಂದ ಮುಕ್ತವಾಗಿಡುವುದು ದೈನಂದಿನ ನಗರ ಆಡಳಿತದಲ್ಲಿ ನಿಯಮಗಳ ನಿಶ್ಚಿತತೆಯನ್ನು ವಿಶ್ವಾಸಾರ್ಹಗೊಳಿಸಲು ಅತ್ಯಂತ ಅವಶ್ಯಕವಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ.
ಯೋಜನೆ, ಆಡಳಿತ ಮತ್ತು ಹಣಕಾಸು
ಯೋಜನೆ, ಆಡಳಿತ ಮತ್ತು ಹಣಕಾಸು ನಗರ ಮತ್ತು ನಗರಾಭಿವೃದ್ಧಿಯ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಭಾರತ ಸರ್ಕಾರವು ಸರಣಿ ಸಂಘಟಿತ ಪ್ರಯತ್ನಗಳನ್ನು ಕೈಗೊಂಡಿದೆ. ಸಾಲದ ಅರ್ಹತೆ ಇಲ್ಲದಿದ್ದರೂ ಕಾರ್ಯಸಾಧ್ಯವಾದ ಮೂಲಸೌಕರ್ಯ ಯೋಜನೆಗಳನ್ನು ಹೊಂದಿರುವ ಎರಡನೇ ಹಂತದ (Tier-2) ಮತ್ತು ಮೂರನೇ ಹಂತದ (Tier-3) ನಗರಗಳನ್ನು ಬೆಂಬಲಿಸಲು 2023-24ರ ಕೇಂದ್ರ ಬಜೆಟ್ನಲ್ಲಿ ₹10,000 ಕೋಟಿಗಳ ಆರಂಭಿಕ ವೆಚ್ಚದೊಂದಿಗೆ 'ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ'ಯನ್ನು (UIDF) ಘೋಷಿಸಲಾಗಿತ್ತು. ಇದು ಹಣಕಾಸು ಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುವ ಆವರ್ತಕ ನಿಧಿಯಾಗಿದೆ ಎಂದು ಆರ್ಥಿಕ ಸಮೀಕ್ಷೆ 2025-26 ತಿಳಿಸಿದೆ.
ಇಂದು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ಪ್ರತಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಕಡ್ಡಾಯವಾಗಿ 20 ವರ್ಷಗಳ 'ಶಾಸನಬದ್ಧ ನಗರ ಪ್ರಾದೇಶಿಕ ಮತ್ತು ಆರ್ಥಿಕ ಯೋಜನೆ'ಯನ್ನು (City Spatial and Economic Plan) ಸಿದ್ಧಪಡಿಸಬೇಕು ಮತ್ತು ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ನವೀಕರಿಸಬೇಕು ಎಂದು ಪ್ರಸ್ತಾಪಿಸಿದೆ. ಈ ಯೋಜನೆಯು ಮೂರು ಅತಿ ಮುಖ್ಯ ಅಂಶಗಳನ್ನು ಹೊಂದಿರಬೇಕು:
- ಸಾರಿಗೆ ಜಾಲದ ಯೋಜನೆ,
- ವಾರ್ಷಿಕ ಘಟಕ ಗುರಿಗಳೊಂದಿಗೆ ವಸತಿ ಪೂರೈಕೆ ಯೋಜನೆ, ಮತ್ತು
- ಮೂಲಸೌಕರ್ಯ ಕಾರಿಡಾರ್ ಗಳಿಗೆ ಜೋಡಿಸಲಾದ ಭೂ-ಮೌಲ್ಯ ವೃದ್ಧಿ ಚೌಕಟ್ಟು.
ವ್ಯವಸ್ಥಿತ ಆಧಾರಿತ ನಾಗರಿಕ ಪ್ರಜ್ಞೆಯ ಜಾಗೃತಿ
ಸಂವಹನವು ವ್ಯವಸ್ಥೆಗಳಿಗೆ ಪರ್ಯಾಯವಾಗುವ ಬದಲು, ಮುನ್ಸೂಚಿಸಬಹುದಾದ ವ್ಯವಸ್ಥೆಗಳನ್ನು ಬಲಪಡಿಸುವಂತಿರಬೇಕು ಎಂದು ಸಮೀಕ್ಷೆಯು ತಿಳಿಸಿದೆ. ಕ್ರಿಯೆಯ ಹಂತದಲ್ಲಿ (point of action) ತಲುಪಿಸುವ ಸರಳ, ಸ್ಥಳೀಯ ಮತ್ತು ಪುನರಾವರ್ತಿತ ಸಂದೇಶಗಳು ಹಾಗೂ ಹೆಚ್ಚಿನ ಪ್ರಭಾವ ಬೀರುವ ಸಣ್ಣ ಪ್ರಮಾಣದ ನಡವಳಿಕೆಗಳ ಮೇಲೆ ಕೇಂದ್ರೀಕರಿಸುವುದು ಉತ್ತಮವಾಗಿ ಕೆಲಸ ಮಾಡುತ್ತದೆ.
ಉಪಸಂಹಾರ
ಭವಿಷ್ಯದ ನಗರ ನೀತಿಯು ಸ್ವತಂತ್ರ ಯೋಜನೆಗಳಿಗಿಂತ ಹೆಚ್ಚಾಗಿ ವ್ಯವಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಗೆ ಆದ್ಯತೆ ನೀಡಬೇಕು—ವಸತಿ, ಸಾರಿಗೆ, ನೈರ್ಮಲ್ಯ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹಣಕಾಸನ್ನು ಸಂಯೋಜಿಸಬೇಕು—ಅದರೊಂದಿಗೆ ಒಳಗೊಳ್ಳುವಿಕೆ ಮತ್ತು ದೀರ್ಘಕಾಲದ ಆರ್ಥಿಕ ದಕ್ಷತೆಯನ್ನು ಬೆಂಬಲಿಸುವ ವಾಸಯೋಗ್ಯ ಹಾಗೂ ಹವಾಮಾನ-ಸಿದ್ಧ ನಗರಗಳನ್ನು ವಿನ್ಯಾಸಗೊಳಿಸಬೇಕು.
ಭಾರತದ ನಗರ ಭವಿಷ್ಯವನ್ನು ನಿರ್ಮಿಸುವ ಭರವಸೆಯು ನಮ್ಮ ನಗರಗಳನ್ನು ಆರ್ಥಿಕವಾಗಿ ಕ್ರಿಯಾತ್ಮಕವಾಗಿ, ಸಾಮಾಜಿಕವಾಗಿ ಒಳಗೊಳ್ಳುವಂತೆ, ಪರಿಸರ ಸ್ನೇಹಿಯಾಗಿ ಮತ್ತು ಸಾಂಸ್ಥಿಕವಾಗಿ ಸಮರ್ಥವಾಗಿ ರೂಪಿಸುವುದರಲ್ಲಿ ಅಡಗಿದೆ ಎಂದು ಆರ್ಥಿಕ ಸಮೀಕ್ಷೆ 2025-26 ಹೇಳಿದೆ.
*****
(रिलीज़ आईडी: 2220092)
आगंतुक पटल : 4