ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

प्रविष्टि तिथि: 27 JAN 2026 2:36PM by PIB Bengaluru

ಗೌರವಾನ್ವಿತರೇ,

ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮತ್ತು ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್,

ಎರಡೂ ದೇಶಗಳ ಪ್ರತಿನಿಧಿಗಳೇ,್

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಭಾರತಕ್ಕೆ ಐತಿಹಾಸಿಕ ಭೇಟಿಯಲ್ಲಿ ನನ್ನ ಇಬ್ಬರು ಆಪ್ತ ಮಿತ್ರರಾದ ಅಧ್ಯಕ್ಷರಾದ ಕೋಸ್ಟಾ ಮತ್ತು ಅಧ್ಯಕ್ಷರಾದ ವಾನ್ ಡೆರ್ ಲೇಯೆನ್ ಅವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತದೆ

ಅಧ್ಯಕ್ಷರಾದ ಕೋಸ್ಟಾ ಅವರು ತಮ್ಮ ಸರಳ ಜೀವನ ವಿಧಾನ ಮತ್ತು ಸಮಾಜಕ್ಕೆ ಆಳವಾದ ಬದ್ಧತೆಗಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ, ಇದು ಅವರಿಗೆ "ಲಿಸ್ಬನ್ನ ಗಾಂಧಿ" ಎಂಬ ಪ್ರೀತಿಯ ಬಿರುದನ್ನು ಗಳಿಸಿಕೊಟ್ಟಿದೆ. ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು -ಜರ್ಮನಿಯ ಮೊದಲ ಮಹಿಳಾ ರಕ್ಷಣಾ ಸಚಿವೆಯಾಗಿ ಮಾತ್ರವಲ್ಲ, ಯುರೋಪಿಯನ್ ಆಯೋಗದ ಮೊದಲ ಮಹಿಳಾ ಅಧ್ಯಕ್ಷರಾಗಿಯೂ ಸಹ ವಿಶ್ವಾದ್ಯಂತ ಸ್ಫೂರ್ತಿಯ ಮೂಲವಾಗಿದ್ದಾರೆ.

ನಿನ್ನೆ ಒಂದು ಐತಿಹಾಸಿಕ ಕ್ಷಣವನ್ನು ದಾಖಲಿಸಿತು, ಏಕೆಂದರೆ ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟದ ನಾಯಕರು ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇಂದು ಮತ್ತೊಂದು ಐತಿಹಾಸಿಕ ಸಂದರ್ಭವನ್ನು ಸಾದರಪಡಿಸಿದೆ, ಏಕೆಂದರೆ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳು ತಮ್ಮ ಸಂಬಂಧಕ್ಕೆ ಒಂದು ನಿರ್ಣಾಯಕ ಅಧ್ಯಾಯವನ್ನು ಸೇರಿಸಲು ಜೊತೆಯಾಗಿ ಬಂದಿವೆ.

ಸ್ನೇಹಿತರೇ,

ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಂಬಂಧಗಳು ಗಮನಾರ್ಹ ಪ್ರಗತಿಯನ್ನು ಕಂಡಿವೆ. ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಆರ್ಥಿಕ ಸಂಯೋಜನೆ ಮತ್ತು ಬಲವಾದ ಜನತೆ-ಜನತೆ ನಡುವಿನ ಸಂಬಂಧಗಳನ್ನು ಆಧರಿಸಿದ ನಮ್ಮ ಪಾಲುದಾರಿಕೆಯು ಹೊಸ ಎತ್ತರವನ್ನು ತಲುಪುತ್ತಿದೆ. ಇಂದು, ನಾವು 180 ಶತಕೋಟಿ ಯುರೋಗಳಷ್ಟು ಮೌಲ್ಯದ ವ್ಯಾಪಾರವನ್ನು ಹೊಂದಿದ್ದೇವೆ. ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ 800,000ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ.

ಕಾರ್ಯತಂತ್ರದ ತಂತ್ರಜ್ಞಾನಗಳಿಂದ ಶುದ್ಧ ಇಂಧನದವರೆಗೆ, ಡಿಜಿಟಲ್ ಆಡಳಿತದಿಂದ ಅಭಿವೃದ್ಧಿ ಪಾಲುದಾರಿಕೆಯವರೆಗೆ ಪ್ರತಿಯೊಂದು ವಲಯದಲ್ಲೂ ನಾವು ಸಹಕಾರದ ಹೊಸ ಆಯಾಮಗಳನ್ನು ಸ್ಥಾಪಿಸಿದ್ದೇವೆ. ಈ ಸಾಧನೆಗಳ ಆಧಾರದ ಮೇಲೆ, ಇಂದಿನ ಶೃಂಗಸಭೆಯಲ್ಲಿ, ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನಕಾರಿಯಾದ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ.

ಸ್ನೇಹಿತರೇ,

ಇಂದು, ಭಾರತವು ತನ್ನ ಇತಿಹಾಸದಲ್ಲಿ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದೆ. ತಿಂಗಳ 27ನೇ ದಿನದಂದು ಭಾರತವು ಯುರೋಪಿಯನ್ ಒಕ್ಕೂಟದ 27 ಸದಸ್ಯ ರಾಷ್ಟ್ರಗಳೊಂದಿಗೆ ಎಫ್.ಟಿ.ಎ. (FTA) ಗೆ ಪ್ರವೇಶಿಸುತ್ತಿರುವುದು ಒಂದು ಸಂತೋಷದ ಕಾಕತಾಳೀಯ ವಿದ್ಯಮಾನವಾಗಿದೆ. ಈ ಐತಿಹಾಸಿಕ ಒಪ್ಪಂದವು ನಮ್ಮ ರೈತರು ಮತ್ತು ಸಣ್ಣ ಉದ್ಯಮಗಳಿಗೆ ಯುರೋಪಿಯನ್ ಮಾರುಕಟ್ಟೆಗಳಿಗೆ ಸುಲಭ ಪ್ರವೇಶವನ್ನು ಸುಗಮಗೊಳಿಸುತ್ತದೆ, ಉತ್ಪಾದನೆಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಸೇವಾ ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.

ಇದಲ್ಲದೆ, ಈ ಎಫ್.ಟಿ.ಎ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಹೂಡಿಕೆಯನ್ನು ಹೆಚ್ಚಿಸುತ್ತದೆ, ಹೊಸ ನಾವೀನ್ಯತೆಯ ಪಾಲುದಾರಿಕೆಗಳನ್ನು ಬೆಳೆಸುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಕೇವಲ ವ್ಯಾಪಾರ ಒಪ್ಪಂದವಲ್ಲ; ಇದು ಹಂಚಿಕೆಯ ಸಮೃದ್ಧಿಗಾಗಿ ಹೊಸ ನೀಲನಕ್ಷೆಯಾಗಿದೆ.

ಸ್ನೇಹಿತರೇ,

ಮಹತ್ವಾಕಾಂಕ್ಷೆಯ ಎಫ್.ಟಿ.ಎ. ಜೊತೆಗೆ, ನಾವು ಚಲನಶೀಲತೆಗಾಗಿ ಹೊಸ ಚೌಕಟ್ಟನ್ನು ಸಹ ರಚಿಸುತ್ತಿದ್ದೇವೆ. ಇದು ಭಾರತೀಯ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವೃತ್ತಿಪರರಿಗೆ ಯುರೋಪಿಯನ್ ಒಕ್ಕೂಟದಲ್ಲಿ ಹೊಸ ಅವಕಾಶಗಳನ್ನು ತೆರೆಯುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮಗೆ ದೀರ್ಘಕಾಲದ ಮತ್ತು ವ್ಯಾಪಕವಾದ ಸಹಕಾರವಿದೆ. ಇಂದು, ನಾವು ಪ್ರಮುಖ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ.

ಸ್ನೇಹಿತರೇ,

ರಕ್ಷಣೆ ಮತ್ತು ಭದ್ರತೆಗಳು ಯಾವುದೇ ಪಾಲುದಾರಿಕೆಗೆ ಬಲವಾದ ಅಡಿಪಾಯವಾಗಿದೆ. ಇಂದು, ನಾವು ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯ ಮೂಲಕ ಇದನ್ನು ಅಧಿಕೃತಗೊಳಿಸುತ್ತಿದ್ದೇವೆ. ಇದು ಭಯೋತ್ಪಾದನೆ ನಿಗ್ರಹ, ಕಡಲ ಭದ್ರತೆ ಮತ್ತು ಸೈಬರ್ ಭದ್ರತೆಯ ಕುರಿತು ಹೆಚ್ಚು ನಿಕಟವಾಗಿ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತದೆ.

ಇದು ನಿಯಮ ಆಧಾರಿತ ಅಂತಾರಾಷ್ಟ್ರೀಯ ಕ್ರಮಕ್ಕೆ ನಮ್ಮ ಹಂಚಿಕೆಯ ಬದ್ಧತೆಯನ್ನು ಬಲಪಡಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ಸಹಕಾರವು ಬೆಳೆಯುತ್ತದೆ ಮತ್ತು ನಮ್ಮ ರಕ್ಷಣಾ ಕಂಪನಿಗಳು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ಹೊಸ ಅವಕಾಶಗಳನ್ನು ಪಡೆಯುತ್ತವೆ.

ಸ್ನೇಹಿತರೇ,

ಇಂದಿನ ಸಾಧನೆಗಳ ಆಧಾರದ ಮೇಲೆ, ಮುಂದಿನ ಐದು ವರ್ಷಗಳವರೆಗೆ ನಾವು ಇನ್ನೂ ಹೆಚ್ಚು ಮಹತ್ವಾಕಾಂಕ್ಷೆಯ ಮತ್ತು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯನ್ನು ಪ್ರಾರಂಭಿಸುತ್ತಿದ್ದೇವೆ. ಸಂಕೀರ್ಣ ಜಾಗತಿಕ ಪರಿಸರದಲ್ಲಿ, ಈ ಕಾರ್ಯಸೂಚಿಯು ಸ್ಪಷ್ಟ ನಿರ್ದೇಶನವನ್ನು ಒದಗಿಸುತ್ತದೆ, ನಮ್ಮ ಹಂಚಿಕೆಯ ಸಮೃದ್ಧಿಯನ್ನು ಮುನ್ನಡೆಸುತ್ತದೆ, ನಾವೀನ್ಯತೆಯನ್ನು ವೇಗಗೊಳಿಸುತ್ತದೆ, ಭದ್ರತಾ ಸಹಕಾರವನ್ನು ಬಲಪಡಿಸುತ್ತದೆ ಮತ್ತು ಜನರಿಂದ ಜನರಿಗೆ ಸಂಬಂಧಗಳನ್ನು ಗಾಢವಾಗಿಸುತ್ತದೆ.

ಸ್ನೇಹಿತರೇ,

ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಹಕಾರವು "ಜಾಗತಿಕ ಒಳಿತಿಗಾಗಿ ಪಾಲುದಾರಿಕೆ"ಯಾಗಿದೆ. ನಾವು ಇಂಡೋ-ಪೆಸಿಫಿಕ್‌ನಿಂದ ಕೆರಿಬಿಯನ್‌ಗೆ ತ್ರಿಪಕ್ಷೀಯ ಯೋಜನೆಗಳನ್ನು ವಿಸ್ತರಿಸುತ್ತೇವೆ, ಆ ಮೂಲಕ ಸುಸ್ಥಿರ ಕೃಷಿ, ಶುದ್ಧ ಇಂಧನ ಮತ್ತು ಮಹಿಳಾ ಸಬಲೀಕರಣಕ್ಕೆ ಸ್ಪಷ್ಟವಾದ ಬೆಂಬಲವನ್ನು ಒದಗಿಸುತ್ತೇವೆ. ಜಾಗತಿಕ ವ್ಯಾಪಾರ ಮತ್ತು ಸುಸ್ಥಿರ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿ ಐ.ಎಂ.ಇ.ಸಿ. (IMEC)  ಕಾರಿಡಾರ್ ಅನ್ನು ಸ್ಥಾಪಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.

ಸ್ನೇಹಿತರೇ,

ಇಂದು, ಜಾಗತಿಕ ವ್ಯವಸ್ಥೆಯು ಆಳವಾದ ಪ್ರಕ್ಷುಬ್ಧತೆಗೆ ಒಳಗಾಗುತ್ತಿದೆ. ಈ ಸಂದರ್ಭದಲ್ಲಿ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪಾಲುದಾರಿಕೆಯು ಅಂತರರಾಷ್ಟ್ರೀಯ ವ್ಯವಸ್ಥೆಯೊಳಗೆ ಸ್ಥಿರತೆಯನ್ನು ಬಲಪಡಿಸುತ್ತದೆ. ಈ ಹಿನ್ನೆಲೆಯಲ್ಲಿ, ಉಕ್ರೇನ್, ಪಶ್ಚಿಮ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ಹಲವಾರು ಜಾಗತಿಕ ವಿಷಯಗಳ ಕುರಿತು ನಾವು ಇಂದು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಬಹುಪಕ್ಷೀಯತೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಗೌರವವು ಹಂಚಿಕೆಯ ಆದ್ಯತೆಯಾಗಿ ಉಳಿದಿದೆ. ನಮ್ಮ ಕಾಲದ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳ ಸುಧಾರಣೆ ಅತ್ಯಗತ್ಯ ಎಂಬ ನಮ್ಮ ಅಭಿಪ್ರಾಯದಲ್ಲಿ ನಾವು ಒಗ್ಗಟ್ಟಾಗಿದ್ದೇವೆ.

ಸ್ನೇಹಿತರೇ,

ರಾಷ್ಟ್ರಗಳ ನಡುವಿನ ಸಂಬಂಧಗಳ ಹಾದಿಯಲ್ಲಿ, ದಿಕ್ಕು ಬದಲಾಯಿತು, ಹೊಸ ಯುಗ ಪ್ರಾರಂಭವಾಯಿತು ಎಂದು ಇತಿಹಾಸವೇ ಘೋಷಿಸುವ ಕ್ಷಣಗಳಿರುತ್ತವೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಇಂದಿನ ಐತಿಹಾಸಿಕ ಶೃಂಗಸಭೆಯು ಅಂತಹ ಕ್ಷಣವನ್ನು ಪ್ರತಿನಿಧಿಸುತ್ತದೆ.

ಈ ಅಸಾಧಾರಣ ಪ್ರಯಾಣಕ್ಕಾಗಿ, ಭಾರತದ ಬಗೆಗಿನ ನಿಮ್ಮ ಸ್ನೇಹಕ್ಕಾಗಿ ಮತ್ತು ನಮ್ಮ ಹಂಚಿಕೆಯ ಭವಿಷ್ಯದ ಬಗ್ಗೆ ನಿಮ್ಮ ಬದ್ಧತೆಗಾಗಿ ಅಧ್ಯಕ್ಷರಾದ ಕೋಸ್ಟಾ ಮತ್ತು ಅಧ್ಯಕ್ಷರಾದ ವಾನ್ ಡೆರ್ ಲೇಯೆನ್ ಅವರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****


(रिलीज़ आईडी: 2219410) आगंतुक पटल : 3
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Punjabi , Gujarati , Telugu