ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18ನೇ 'ಉದ್ಯೋಗ ಮೇಳ'ವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು


ಇತ್ತೀಚಿನ ವರ್ಷಗಳಲ್ಲಿ, ಉದ್ಯೋಗ ಮೇಳವು ಒಂದು ಸಂಸ್ಥೆಯಾಗಿ ವಿಕಸನಗೊಂಡಿದೆ ಮತ್ತು ಅದರ ಮೂಲಕ, ಲಕ್ಷಾಂತರ ಯುವಕರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ: ಪ್ರಧಾನಮಂತ್ರಿ

ಇಂದು, ಭಾರತವು ವಿಶ್ವದ ಅತ್ಯಂತ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಒಳಗೆ ಮತ್ತು ಜಗತ್ತಿನಾದ್ಯಂತ ಭಾರತದ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ: ಪ್ರಧಾನಮಂತ್ರಿ

ಇಂದು, ಭಾರತ ಸರ್ಕಾರವು ಹಲವಾರು ದೇಶಗಳೊಂದಿಗೆ ವ್ಯಾಪಾರ ಮತ್ತು ಸಂಚಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ, ಇದು ಭಾರತದ ಯುವಕರಿಗೆ ಅಸಂಖ್ಯಾತ ಹೊಸ ಅವಕಾಶಗಳನ್ನು ತೆರೆಯುತ್ತದೆ: ಪ್ರಧಾನಮಂತ್ರಿ

ಇಂದು, ದೇಶಾದ್ಯಂತ ಜೀವನ ಮತ್ತು ವ್ಯವಹಾರ ಎರಡನ್ನೂ ಸುಲಭಗೊಳಿಸುವ ಉದ್ದೇಶದಿಂದ ರಾಷ್ಟ್ರವು 'ಸುಧಾರಣಾ ಎಕ್ಸ್‌ಪ್ರೆಸ್‌'  ಅನ್ನು ಪ್ರಾರಂಭಿಸಿದೆ: ಪ್ರಧಾನಮಂತ್ರಿ

प्रविष्टि तिथि: 24 JAN 2026 12:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 18ನೇ ಉದ್ಯೋಗ ಮೇಳವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ ಅವರು 2026ನೇ ವರ್ಷವು ಜನರ ಜೀವನದಲ್ಲಿ ಹೊಸ ಸಂತೋಷವನ್ನು ತರುವ ಮೂಲಕ ಮತ್ತು ಇದೇವೇಳೆ, ನಾಗರಿಕರನ್ನು ಅವರ ಸಾಂವಿಧಾನಿಕ ಕರ್ತವ್ಯಗಳೊಂದಿಗೆ ಸಂಪರ್ಕಿಸುವ ಮೂಲಕ ಪ್ರಾರಂಭವಾಗಿದೆ ಎಂದು ಹೇಳಿದರು. ಈ ಅವಧಿಯು ಭವ್ಯ ಗಣರಾಜ್ಯೋತ್ಸವದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ರಾಷ್ಟ್ರವು 'ಪರಾಕ್ರಮ್ ದಿವಸ್' ಅನ್ನು ಆಚರಿಸಿತು ಮತ್ತು ನಾಳೆ, ಜನವರಿ 25 ರಂದು 'ರಾಷ್ಟ್ರೀಯ ಮತದಾರರ ದಿನ' ಮತ್ತು ಮರುದಿನ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಶ್ರೀ ಮೋದಿ ಸ್ಮರಿಸಿದರು. ಇಂದು ವಿಶೇಷವಾಗಿದೆ, ಏಕೆಂದರೆ ಇದೇ ದಿನ ಸಂವಿಧಾನವು 'ಜನ ಗಣ ಮನ'ವನ್ನು ರಾಷ್ಟ್ರಗೀತೆಯಾಗಿ ಮತ್ತು 'ವಂದೇ ಮಾತರಂ' ಅನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಮಹತ್ವದ ದಿನದಂದು, ಅರವತ್ತೊಂದು ಸಾವಿರಕ್ಕೂ ಹೆಚ್ಚು ಯುವಕರು ಸರ್ಕಾರಿ ಸೇವೆಗಳಿಗೆ ನೇಮಕಾತಿ ಪತ್ರಗಳನ್ನು ಸ್ವೀಕರಿಸುವ ಮೂಲಕ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ನೇಮಕಾತಿ ಪತ್ರಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಹ್ವಾನ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವನ್ನು ವೇಗಗೊಳಿಸುವ ಸಂಕಲ್ಪ ಎಂದು ಶ್ರೀ ಮೋದಿ ಬಣ್ಣಿಸಿದರು. ಅನೇಕ ಯುವಕರು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತಾರೆ, ಶಿಕ್ಷಣ ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸಶಕ್ತಗೊಳಿಸುತ್ತಾರೆ, ಹಣಕಾಸು ಸೇವೆಗಳು ಮತ್ತು ಇಂಧನ ಭದ್ರತೆಯನ್ನು ಬಲಪಡಿಸುತ್ತಾರೆ ಜೊತೆಗೆ, ಸಾರ್ವಜನಿಕ ವಲಯದ ಉದ್ಯಮಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಎಲ್ಲಾ ಯುವಜನರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.

ಯುವಕರನ್ನು ಕೌಶಲ್ಯಗಳೊಂದಿಗೆ ಸಂಪರ್ಕಿಸುವುದು ಮತ್ತು ಅವರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸರ್ಕಾರಿ ನೇಮಕಾತಿಗಳನ್ನು ಸಮರೋಪಾದಿಯಲ್ಲಿ ನಡೆಸಲು 'ಉದ್ಯೋಗ ಮೇಳ'ವನ್ನು ಪ್ರಾರಂಭಿಸಲಾಯಿತು, ಇದು ಹಲವು ವರ್ಷಗಳಲ್ಲಿ ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಈ ಉಪಕ್ರಮದ ಮೂಲಕ, ಲಕ್ಷಾಂತರ ಯುವಕರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಈ ಧ್ಯೇಯವನ್ನು ಮತ್ತಷ್ಟು ವಿಸ್ತರಿತ ರೂಪವನ್ನು ಉಲ್ಲೇಖಿಸಿದ ಶ್ರೀ ಮೋದಿ, ಇಂದು ದೇಶಾದ್ಯಂತ ನಲವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಒತ್ತಿ ಹೇಳಿದರು. ಇದೇವೇಳೆ ಈ ಎಲ್ಲಾ ಸ್ಥಳಗಳಲ್ಲಿ ಉಪಸ್ಥಿತರಿರುವ ಯುವಕರನ್ನು ಅವರು ವಿಶೇಷವಾಗಿ ಅಭಿನಂದಿಸಿದರು.

"ಭಾರತವು ಇಂದು ವಿಶ್ವದ ಅತ್ಯಂತ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ, ಮತ್ತು ದೇಶೀಯವಾಗಿ ಮತ್ತು ಜಾಗತಿಕವಾಗಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ," ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತ ಸರ್ಕಾರವು ಹಲವಾರು ದೇಶಗಳೊಂದಿಗೆ ವ್ಯಾಪಾರ ಮತ್ತು ಚಲನವಲನಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ, ಇದು ಯುವ ಭಾರತೀಯರಿಗೆ ಅಸಂಖ್ಯಾತ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ, ಭಾರತವು ಆಧುನಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡಿದೆ, ಇದು ನಿರ್ಮಾಣ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಶ್ರೀ ಮೋದಿ ಗಮನಸೆಳೆದರು. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ವೇಗವಾಗಿ ವಿಸ್ತರಿಸುತ್ತಿದೆ. ಸುಮಾರು ಎರಡು ಲಕ್ಷ ನೋಂದಾಯಿತ ನವೋದ್ಯಮಗಳು ಇಪ್ಪತ್ತೊಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡುತ್ತಿವೆ ಎಂದು ಅವರು ಹೇಳಿದರು. 'ಡಿಜಿಟಲ್ ಇಂಡಿಯಾ'ವು ಹೊಸ ಆರ್ಥಿಕತೆಯನ್ನು ವಿಸ್ತರಿಸಿದೆ, ಭಾರತವು ಅನಿಮೇಷನ್, ಡಿಜಿಟಲ್ ಮಾಧ್ಯಮ ಮತ್ತು ಇತರ ಹಲವಾರು ಕ್ಷೇತ್ರಗಳಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತದ 'ಕ್ರಿಯೇಟರ್‌' ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ, ಯುವಕರಿಗೆ ಹೊಸ ಅವಕಾಶಗಳನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಭಾರತದ ಮೇಲೆ ಬೆಳೆಯುತ್ತಿರುವ ಜಾಗತಿಕ ವಿಶ್ವಾಸವು ಯುವಜನರಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಒಂದು ದಶಕದಲ್ಲಿ ತನ್ನ ಜಿಡಿಪಿಯನ್ನು ದ್ವಿಗುಣಗೊಳಿಸಿದ ವಿಶ್ವದ ಏಕೈಕ ಪ್ರಮುಖ ಆರ್ಥಿಕತೆ ಭಾರತವಾಗಿದೆ ಮತ್ತು ಇಂದು ನೂರಕ್ಕೂ ಹೆಚ್ಚು ದೇಶಗಳು ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ಮೂಲಕ ಭಾರತದಲ್ಲಿ ಹೂಡಿಕೆ ಮಾಡುತ್ತಿವೆ ಎಂದು ಒತ್ತಿ ಹೇಳಿದರು. 2014ರ ಹಿಂದಿನ ದಶಕಕ್ಕೆ ಹೋಲಿಸಿದರೆ, ಭಾರತವು ಎರಡೂವರೆ ಪಟ್ಟು ಹೆಚ್ಚಿನ ವಿದೇಶಿ ನೇರ ಹೂಡಿಕೆಯನ್ನು ಅನ್ನು ಸ್ವೀಕರಿಸಿದೆ ಮತ್ತು ಹೆಚ್ಚಿನ ವಿದೇಶಿ ಹೂಡಿಕೆ ಎಂದರೆ ಭಾರತದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಎಂದರ್ಥ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ಸ್, ಔಷಧಗಳು ಮತ್ತು ಲಸಿಕೆಗಳು, ರಕ್ಷಣೆ ಮತ್ತು ವಾಹನಗಳಂತಹ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ರಫ್ತಿನಲ್ಲಿ ಅಭೂತಪೂರ್ವ ಬೆಳವಣಿಗೆಯೊಂದಿಗೆ ಭಾರತವು ಪ್ರಮುಖ ಉತ್ಪಾದನಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 2014ರಿಂದ, ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಆರು ಪಟ್ಟು ಬೆಳೆದಿದ್ದು, ಈಗ 11 ಲಕ್ಷ ಕೋಟಿ ರೂ.ಗಳನ್ನು ಮೀರಿದೆ. ಇದೇವೇಳೆ, ಎಲೆಕ್ಟ್ರಾನಿಕ್ಸ್ ರಫ್ತು 4ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಶ್ರೀ ಮೋದಿ ಹೇಳಿದರು. 2025ರಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಎರಡು ಕೋಟಿ ಯುನಿಟ್‌ಗಳನ್ನು ಮೀರುವುದರೊಂದಿಗೆ ವಾಹನ ಉದ್ಯಮವು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದೆನಿಸಿದೆ. ಇದು ಕಡಿಮೆ ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ನಾಗರಿಕರಲ್ಲಿ  ಖರೀದಿ ಶಕ್ತಿ ಹೆಚ್ಚಾಗಿರುವುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಈ ಉದಾಹರಣೆಗಳು ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯನ್ನು ಪ್ರದರ್ಶಿಸುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ 8,000ಕ್ಕೂ ಹೆಚ್ಚು ಹೆಣ್ಣುಮಕ್ಕಳು ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಕಳೆದ 11 ವರ್ಷಗಳಲ್ಲಿ ಉದ್ಯೋಗರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹುತೇಕ ದ್ವಿಗುಣಗೊಂಡಿದೆ ಎಂದು ಹೇಳಿದರು. 'ಮುದ್ರಾ' ಮತ್ತು 'ಸ್ಟಾರ್ಟ್ಅಪ್ ಇಂಡಿಯಾ'ದಂತಹ ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿವೆ. ಮಹಿಳಾ ಸ್ವಯಂ ಉದ್ಯೋಗವು ಸುಮಾರು ಶೇಕಡಾ 15ರಷ್ಟು ಹೆಚ್ಚಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು ಗಣನೀಯ ಸಂಖ್ಯೆಯ ಮಹಿಳೆಯರು ನವೋದ್ಯಮಗಳು ಮತ್ತು 'ಎಂಎಸ್ಎಂಇ'ಗಳಲ್ಲಿ ನಿರ್ದೇಶಕರು ಮತ್ತು ಸಂಸ್ಥಾಪಕರ ಸ್ಥಾನ ವಹಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಹಳ್ಳಿಗಳಲ್ಲಿ ಸಹಕಾರಿ ಕ್ಷೇತ್ರಗಳು ಮತ್ತು ಸ್ವಸಹಾಯ ಗುಂಪುಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

"ಇಂದು, ರಾಷ್ಟ್ರವು ಜೀವನ ಮತ್ತು ವ್ಯವಹಾರ ಎರಡನ್ನೂ ಸುಲಭಗೊಳಿಸುವ ಗುರಿಯನ್ನು ಹೊಂದಿರುವ 'ಸುಧಾರಣಾ ಎಕ್ಸ್‌ಪ್ರೆಸ್‌' ಅನ್ನು ಪ್ರಾರಂಭಿಸಿದೆ," ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮುಂದಿನ ಪೀಳಿಗೆಯ 'ಜಿಎಸ್‌ಟಿ' ಸುಧಾರಣೆಗಳು ಯುವ ಉದ್ಯಮಿಗಳು ಮತ್ತು 'ಎಂಎಸ್ಎಂಇ'ಗಳಿಗೆ ಪ್ರಯೋಜನವನ್ನು ನೀಡಿವೆ. ಇದೇವೇಳೆ, ಐತಿಹಾಸಿಕ ಕಾರ್ಮಿಕ ಸುಧಾರಣೆಗಳು ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸಿವೆ, ವ್ಯವಹಾರಗಳಿಗೂ ಪ್ರಯೋಜನವನ್ನು ನೀಡಿವೆ ಎಂದು ಅವರು ಹೇಳಿದರು. ಹೊಸ ಕಾರ್ಮಿಕ ಸಂಹಿತೆಗಳು ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಿವೆ ಮತ್ತು ಕಾರ್ಮಿಕರನ್ನು ಸಶಕ್ತಗೊಳಿಸಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಹೊಸದಾಗಿ ನೇಮಕಗೊಂಡ ಯುವಕರು ಸರ್ಕಾರಿ ಕಚೇರಿಗಳು ಮತ್ತು ಪ್ರಕ್ರಿಯೆಗಳೊಂದಿಗೆ ತಮ್ಮ ಹಿಂದಿನ ಒಡನಾಟಗಳನ್ನು, ಅವರು ಎದುರಿಸಿದ ತೊಂದರೆಗಳನ್ನು ನೆನಪಿಸಿಕೊಳ್ಳಬೇಕು. ತಮ್ಮ ಅಧಿಕಾರಾವಧಿಯಲ್ಲಿ ಅಂತಹ ಕಷ್ಟಗಳು ನಾಗರಿಕರ ಮೇಲೆ ಪರಿಣಾಮ ಬೀರಲು ಬಿಡಬಾರದು ಎಂದು ಸಂಕಲ್ಪ ಮಾಡಬೇಕು ಎಂದು ಪ್ರಧಾನಮಂತ್ರಿ ಒತ್ತಾಯಿಸಿದರು. ಸರ್ಕಾರದ ಭಾಗವಾಗಿ, ಸಾರ್ವಜನಿಕ ಕಲ್ಯಾಣವನ್ನು ಗರಿಷ್ಠಗೊಳಿಸಲು ಹೊಸ ನೌಕರರು ತಮ್ಮ ಮಟ್ಟದಲ್ಲಿ ಸಣ್ಣ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ನೀತಿ ಸುಧಾರಣೆಗಳ ಜೊತೆಗೆ, ಸರ್ಕಾರಿ ನೌಕರರ ಪ್ರಾಮಾಣಿಕತೆಯಿಂದಾಗಿ ಜೀವನ ಸುಗಮತೆ  ಮತ್ತು  ವ್ಯಾಪಾರ ಸುಗಮತೆ ಹೆಚ್ಚಿದೆ ಎಂದು ಅವರು ಹೇಳಿದರು. ವೇಗವಾಗಿ ಬದಲಾಗುತ್ತಿರುವ ಈಗಿನ ತಂತ್ರಜ್ಞಾನದ  ಯುಗದಲ್ಲಿ, ರಾಷ್ಟ್ರದ ಅಗತ್ಯಗಳು ಮತ್ತು ಆದ್ಯತೆಗಳು ಸಹ ವೇಗವಾಗಿ ವಿಕಸನಗೊಳ್ಳುತ್ತಿವೆ. ಹೀಗಾಗಿ ಹೊಸ ಉದ್ಯೋಗಿಗಳು ತಮ್ಮನ್ನು ತಾವು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಶ್ರೀ ಮೋದಿ ಅವರಿಗೆ ನೆನಪಿಸಿದರು. ಈಗಾಗಲೇ ಸುಮಾರು 1.5 ಕೋಟಿ ಸರ್ಕಾರಿ ನೌಕರರನ್ನು ಸಬಲೀಕರಣಗೊಳಿಸಿರುವ 'ಐಜಿಒಟಿ ಕರ್ಮಯೋಗಿ'ಯಂತಹ ವೇದಿಕೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಹೊಸ ನೌಕರರನ್ನು ಪ್ರೋತ್ಸಾಹಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, "ನಾಗರಿಕ ದೇವೋ ಭವ" ಎಂಬ ಮನೋಭಾವದಿಂದ ಕೆಲಸ ಮಾಡುವಂತೆ ಯುವಕರನ್ನು ಒತ್ತಾಯಿಸಿದರು. ಮತ್ತೊಮ್ಮೆ ಅವರೆಲ್ಲರಿಗೂ ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹಾಗೂ ಇತರ ಗಣ್ಯರೊಂದಿಗೆ ಉಪಸ್ಥಿತರಿದ್ದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಗೆ ಅನುಗುಣವಾಗಿ, 'ಉದ್ಯೋಗ ಮೇಳ'ವು  ಆಶಯವಬನ್ನು ಸಾಕಾರಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವಾಗಿದೆ. ಪ್ರಾರಂಭವಾದಾಗಿನಿಂದ ಇದುವರೆಗೂ ದೇಶಾದ್ಯಂತ ಆಯೋಜಿಸಲಾದ ಉದ್ಯೋಗ ಮೇಳಗಳ ಮೂಲಕ 11 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ನೀಡಲಾಗಿದೆ.

18ನೇ ಉದ್ಯೋಗ ಮೇಳವನ್ನು ದೇಶಾದ್ಯಂತ 45 ಸ್ಥಳಗಳಲ್ಲಿ ಆಯೋಜಿಸಲಾಗಿತ್ತು. ಭಾರತದ ಎಲ್ಲಾ ಭಾಗಗಳಿಂದ ಆಯ್ಕೆಯಾದ ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳು ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಸೇವೆಗೆ ಸೇರ್ಪಡೆಗೊಳ್ಳಲಿದ್ದಾರೆ.

 

*****


(रिलीज़ आईडी: 2218120) आगंतुक पटल : 8
इस विज्ञप्ति को इन भाषाओं में पढ़ें: Tamil , Telugu , Malayalam , Malayalam , Bengali , English , Urdu , Marathi , हिन्दी , Manipuri , Assamese , Gujarati