ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಭಾರತವು ಸದಾ ಜ್ಞಾನಯೋಗದ ಮಾರ್ಗಕ್ಕೆ ಸಮರ್ಪಿತವಾಗಿದೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ವೇದಗಳು ಇಂದಿಗೂ ಸ್ಫೂರ್ತಿ ನೀಡುತ್ತಿವೆ: ಪ್ರಧಾನಮಂತ್ರಿ

ಭಗವಾನ್ ಸ್ವಾಮಿನಾರಾಯಣ ಅವರು ಆಧ್ಯಾತ್ಮಿಕ ಸಾಧನೆ ಮತ್ತು ಸೇವೆ ಎರಡರ ಸಂಕೇತವಾಗಿದ್ದರು: ಪ್ರಧಾನಮಂತ್ರಿ

ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಲು ʻಜ್ಞಾನ ಭಾರತಂ ಯೋಜನೆʼಗೆ ಎಲ್ಲರ ಸಹಕಾರ ಕೋರಿದ ಪ್ರಧಾನಮಂತ್ರಿ

प्रविष्टि तिथि: 23 JAN 2026 1:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಶಿಕ್ಷಾಪತ್ರಿ ದ್ವಿಶತಾಬ್ದಿ ಮಹೋತ್ಸವʼದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾಗಿ ತಮ್ಮ ಮಾತುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಸ್ವಾಮಿನಾರಾಯಣ ಅವರ ʻಶಿಕ್ಷಾಪತ್ರಿʼಯ 200ನೇ ವರ್ಷಾಚರಣೆಯ ವಿಶೇಷ ಸಂದರ್ಭಕ್ಕೆ ಇಂದು ಎಲ್ಲರೂ ಸಾಕ್ಷಿಯಾಗುತ್ತಿದ್ದಾರೆ ಎಂದು ಒತ್ತಿ ಹೇಳಿದರು. ದ್ವಿಶತಮಾನೋತ್ಸವ ಆಚರಣೆಯು ಈ ಪವಿತ್ರ ಸಂದರ್ಭದ ಭಾಗಿಯಾಗುವುದು ನಿಜಕ್ಕೂ ಪ್ರತಿಯೊಬ್ಬರ ಸೌಭಾಗ್ಯವೇ ಸರಿ ಎಂದರು. ಈ ಪವಿತ್ರ ಸಮಯದಲ್ಲಿ ಎಲ್ಲಾ ಸಂತರಿಗೆ ನಮಸ್ಕರಿಸುವುದಾಗಿ ಹೇಳಿದ ಶ್ರೀ ಮೋದಿ ಅವರು, ದ್ವಿಶತಮಾನೋತ್ಸವದ ಸಂದರ್ಭದಲ್ಲಿ ಭಗವಾನ್ ಸ್ವಾಮಿನಾರಾಯಣರ ಕೋಟ್ಯಂತರ ಅನುಯಾಯಿಗಳಿಗೆ ಶುಭಾಶಯಗಳನ್ನು ಕೋರಿದರು.

ಭಾರತವು ಸದಾ ಜ್ಞಾನಯೋಗದ ಮಾರ್ಗಕ್ಕೆ ಸಮರ್ಪಿತವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸಾವಿರಾರು ವರ್ಷಗಳಷ್ಟು ಹಳೆಯದಾದ ವೇದಗಳು ಇಂದಿಗೂ ಸ್ಫೂರ್ತಿ ನೀಡುತ್ತಲೇ ಇವೆ ಎಂದರು. ಸಂತರು ಮತ್ತು ದಾರ್ಶನಿಕರು ವೇದಗಳ ಬೆಳಕಿನಲ್ಲಿ ತಮ್ಮ ಕಾಲದ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ವೇದಗಳಿಂದ ಉಪನಿಷತ್ತುಗಳು, ಉಪನಿಷತ್ತುಗಳಿಂದ ಪುರಾಣಗಳು ಬಂದವು ಮತ್ತು ಶ್ರುತಿ, ಸ್ಮೃತಿ, ಕಥಾವಾಚನ ಹಾಗೂ ಗಾಯನದ ಮೂಲಕ ಸಂಪ್ರದಾಯವು ಶಕ್ತಿಯುತವಾಗಿ ಉಳಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಿವಿಧ ಯುಗಗಳಲ್ಲಿ, ಶ್ರೇಷ್ಠ ಸಂತರು, ದಾರ್ಶನಿಕರು ಮತ್ತು ಚಿಂತಕರು ಆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಈ ಸಂಪ್ರದಾಯಕ್ಕೆ ಹೊಸ ಅಧ್ಯಾಯಗಳನ್ನು ಸೇರಿಸಿದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಗವಾನ್ ಸ್ವಾಮಿನಾರಾಯಣರ ಜೀವನ ಪ್ರಸಂಗಗಳು ಸಾರ್ವಜನಿಕ ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯೊಂದಿಗೆ ಆಳವಾದ ಸಂಬಂಧ ಹೊಂದಿದ್ದವು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು. ಈ ಅನುಭವವನ್ನು ಸರಳ ಪದಗಳಲ್ಲಿ ವಿವರಿಸಲಾಗಿದೆ ಮತ್ತು ʻಶಿಕ್ಷಾಪತ್ರಿʼ ಮೂಲಕ ಭಗವಾನ್ ಸ್ವಾಮಿನಾರಾಯಣರು ಜೀವನಕ್ಕೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು ಎಂದು ಶ್ರೀ ಮೋದಿ ಹೇಳಿದರು.

ದ್ವಿಶತಮಾನೋತ್ಸವ ಆಚರಣೆಯು ʻಶಿಕ್ಷಾಪತ್ರಿʼಯಿಂದ ಯಾವೆಲ್ಲಾ ಹೊಸ ಪಾಠಗಳನ್ನು ಕಲಿಯಲಾಗುತ್ತಿದೆ ಮತ್ತು ಅದರ ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ನಿರ್ಣಯಿಸಲು ಅವಕಾಶ ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಗವಾನ್ ಸ್ವಾಮಿನಾರಾಯಣರ ಜೀವನವು ಆಧ್ಯಾತ್ಮಿಕ ಸಾಧನೆ ಮತ್ತು ಸೇವೆ ಎರಡರ ಸಂಕೇತವಾಗಿತ್ತು. ಇಂದು ಅವರ ಅನುಯಾಯಿಗಳು ಸಮಾಜ, ರಾಷ್ಟ್ರ ಮತ್ತು ಮಾನವೀಯತೆಗೆ ಸಮರ್ಪಿತವಾದ ಹಲವಾರು ಅಭಿಯಾನಗಳನ್ನು ನಡೆಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು, ರೈತರ ಕಲ್ಯಾಣದ ಬದ್ಧತೆಗಳು ಹಾಗೂ ನೀರಿಗೆ ಸಂಬಂಧಿಸಿದ ಉಪಕ್ರಮಗಳು ನಿಜವಾಗಿಯೂ ಶ್ಲಾಘನೀಯ ಎಂದು ಪ್ರಧಾನಮಂತ್ರಿ ಹೇಳಿದರು. ಸಂತರು ಸಮಾಜ ಸೇವೆಯ ಕಡೆಗೆ ತಮ್ಮ ಜವಾಬ್ದಾರಿಗಳನ್ನು ನಿರಂತರವಾಗಿ ವಿಸ್ತರಿಸುತ್ತಿರುವುದನ್ನು ನೋಡುವುದು ಬಹಳ ಸ್ಪೂರ್ತಿದಾಯಕವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ದೇಶವು ಸ್ವದೇಶಿ ಮತ್ತು ಸ್ವಚ್ಛತೆಯಂತಹ ಜನಾಂದೋಲನಗಳನ್ನು ಮುನ್ನಡೆಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, "ವೋಕಲ್ ಫಾರ್ ಲೋಕಲ್" ಮಂತ್ರದ ಅನುರಣನವು ಪ್ರತಿ ಮನೆಯನ್ನು ತಲುಪುತ್ತಿದೆ ಎಂದರು. ಈ ಪ್ರಯತ್ನಗಳು ಇಂತಹ ಅಭಿಯಾನಗಳೊಂದಿಗೆ ಸಂಪರ್ಕ ಹೊಂದಿದಾಗ, ʻಶಿಕ್ಷಾಪತ್ರಿʼ ದ್ವಿಶತಮಾನೋತ್ಸವ ಆಚರಣೆಯು ಇನ್ನಷ್ಟು ಅವಿಸ್ಮರಣೀಯವಾಗುತ್ತದೆ ಎಂದು ಅವರು ಹೇಳಿದರು. ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆಗಾಗಿ ರಾಷ್ಟ್ರವು ʻಜ್ಞಾನ ಭಾರತಂ ಯೋಜನʼಎಯನ್ನು ಪ್ರಾರಂಭಿಸಿದೆ ಎಂದು ಅವರು ಗಮನಸೆಳೆದರು ಮತ್ತು ಈ ಕೆಲಸದಲ್ಲಿ ಹೆಚ್ಚಿನ ಸಹಕಾರವನ್ನು ನೀಡುವಂತೆ ಎಲ್ಲಾ ಪ್ರಬುದ್ಧ ಸಂಸ್ಥೆಗಳನ್ನು ಒತ್ತಾಯಿಸಿದರು. ಭಾರತದ ಪ್ರಾಚೀನ ಜ್ಞಾನ ಮತ್ತು ಅದರ ಅಸ್ಮಿತೆಯನ್ನು ಸಂರಕ್ಷಿಸಬೇಕು. ಇಂತಹ ಸಂಸ್ಥೆಗಳ ಸಹಕಾರದಿಂದ ʻಜ್ಞಾನ ಭಾರತಂ ಯೋಜನೆʼಯು ಯಶಸ್ಸು ಹೊಸ ಎತ್ತರವನ್ನು ತಲುಪುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ರಾಷ್ಟ್ರವು ಪ್ರಸ್ತುತ ಭವ್ಯ ಸಾಂಸ್ಕೃತಿಕ ಉತ್ಸವ ʻಸೋಮನಾಥ ಸ್ವಾಭೀಮಾನ್ ಪರ್ವʼ ಆಚರಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಸೋಮನಾಥ ದೇವಾಲಯವನ್ನು ಮೊದಲ ಬಾರಿಗೆ ನಾಶಮಾಡಿದಂದಿನಿಂದ ಹಿಡಿದು ಇಲ್ಲಿಯವರೆಗೆ, ಈ ಹಬ್ಬದ ಮೂಲಕ ದೇಶವು ಸಾವಿರ ವರ್ಷಗಳ ಪ್ರಯಾಣವನ್ನು ಸ್ಮರಿಸುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಈ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಅದರ ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದರು. ಅನುಯಾಯಿಗಳ ಪ್ರಯತ್ನಗಳ ಮುಖೇನ ಭಾರತದ ಅಭಿವೃದ್ಧಿ ಪಯಣಕ್ಕೆ ಭಗವಾನ್ ಸ್ವಾಮಿನಾರಾಯಣರ ಆಶೀರ್ವಾದ ಮುಂದುವರಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.

 

*****


(रिलीज़ आईडी: 2217666) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Gujarati , Tamil , Telugu , Malayalam