ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಕೇರಳದ ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಚಾಲನೆ
ಕೇರಳದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಪ್ರಯತ್ನಗಳು ಇಂದು ಹೊಸ ವೇಗವನ್ನು ಪಡೆದುಕೊಂಡಿವೆ, ರೈಲು ಸಂಪರ್ಕದ ಸುಧಾರಣೆ ಮತ್ತು ತಿರುವನಂತಪುರವನ್ನು ಪ್ರಮುಖ ಸ್ಟಾರ್ಟ್ಅಪ್ ಹಬ್ ಆಗಿ ಪರಿವರ್ತಿಸುವ ಉಪಕ್ರಮಗಳು ಇದಕ್ಕೆ ಸಾಕ್ಷಿಯಾಗಿವೆ: ಪ್ರಧಾನಮಂತ್ರಿ
ಇಂದು ಕೇರಳದಿಂದ ಬಡವರ ಕಲ್ಯಾಣಕ್ಕಾಗಿ ಪ್ರಮುಖ ರಾಷ್ಟ್ರವ್ಯಾಪಿ ಉಪಕ್ರಮವನ್ನು ಪ್ರಾರಂಭಿಸಲಾಗಿದೆ; ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಲಾಗಿದ್ದು, ಇದು ದೇಶಾದ್ಯಂತ ಇರುವ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು ಮತ್ತು ಫುಟ್ ಪಾತ್ಗಳಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನ ನೀಡಲಿದೆ: ಪ್ರಧಾನಮಂತ್ರಿ
ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ನಗರಗಳು ಪ್ರಮುಖ ಪಾತ್ರವಹಿಸುತ್ತವೆ, ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ನಗರ ಮೂಲಸೌಕರ್ಯಗಳಲ್ಲಿ ಗಣನೀಯ ಹೂಡಿಕೆಗಳನ್ನು ಮಾಡಿದೆ: ಪ್ರಧಾನಮಂತ್ರಿ
प्रविष्टि तिथि:
23 JAN 2026 12:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಉದ್ಘಾಟಿಸಿದರು ಮತ್ತು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ಕೇರಳದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳು ಇಂದು ಹೊಸ ವೇಗವನ್ನು ಪಡೆದುಕೊಂಡಿವೆ ಎಂದು ತಿಳಿಸಿದರು. ಕೇರಳದಲ್ಲಿ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗಿದೆ ಮತ್ತು ತಿರುವನಂತಪುರವನ್ನು ಪ್ರಮುಖ ಸ್ಟಾರ್ಟಪ್ ಹಬ್ ಆಗಿ ಪರಿವರ್ತಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿಹೇಳಿದರು. ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ (PM SVANidhi Credit Card) ಬಿಡುಗಡೆಯೊಂದಿಗೆ ಕೇರಳದಿಂದ ಬಡವರ ಕಲ್ಯಾಣಕ್ಕಾಗಿ ಮಹತ್ವದ ದೇಶವ್ಯಾಪಿ ಉಪಕ್ರಮವು ಪ್ರಾರಂಭವಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಇದು ದೇಶಾದ್ಯಂತ ಇರುವ ಬೀದಿ ಬದಿ ವ್ಯಾಪಾರಿಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಈ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಸುವ ಉಪಕ್ರಮಗಳಿಗಾಗಿ ಅವರು ಕೇರಳದ ಜನತೆಗೆ ಮತ್ತು ದೇಶದ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವಿಕಸಿತ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಇಂದು ಇಡೀ ದೇಶವೇ ಒಂದಾಗಿದೆ ಎಂದು ಹೇಳಿದ ಶ್ರೀ ಮೋದಿಯವರು, ಈ ಉದ್ದೇಶದಲ್ಲಿ ನಗರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೈಲೈಟ್ ಮಾಡಿದರು. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ನಗರ ಮೂಲಸೌಕರ್ಯಗಳಲ್ಲಿ ಗಣನೀಯ ಹೂಡಿಕೆ ಮಾಡಿದೆ ಎಂದು ಅವರು ಪ್ರತಿಪಾದಿಸಿದರು. ನಗರಗಳಲ್ಲಿ ವಾಸಿಸುವ ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆಗಾಗಿ ಕೇಂದ್ರ ಸರ್ಕಾರವು ವ್ಯಾಪಕವಾದ ಕೆಲಸಗಳನ್ನು ಕೈಗೊಂಡಿದೆ ಎಂದು ಪ್ರಧಾನ ಮಂತ್ರಿಗಳು ಇದೇ ವೇಳೆ ಒತ್ತಿ ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ದೇಶಾದ್ಯಂತ ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿ ನೀಡಲಾಗಿದೆ, ಇದರಲ್ಲಿ ನಗರ ಪ್ರದೇಶದ ಬಡವರಿಗಾಗಿ ನಿರ್ಮಿಸಲಾದ 1 ಕೋಟಿಗೂ ಹೆಚ್ಚು ಶಾಶ್ವತ ಮನೆಗಳು ಸೇರಿವೆ ಎಂದು ಅವರು ತಿಳಿಸಿದರು. ಕೇರಳವೊಂದರಲ್ಲೇ ಸುಮಾರು 1.25 ಲಕ್ಷ ನಗರ ಬಡ ಕುಟುಂಬಗಳು ತಮ್ಮ ಶಾಶ್ವತ ಮನೆಗಳನ್ನು ಪಡೆದುಕೊಂಡಿವೆ ಎಂದು ಪ್ರಧಾನ ಮಂತ್ರಿಯವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಬಡ ಕುಟುಂಬಗಳ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು 'ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ'ಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಮಂತ್ರಿಗಳು ಹೈಲೈಟ್ ಮಾಡಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಬಡ ನಾಗರಿಕರು ₹5 ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಮಹಿಳೆಯರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 'ಮಾತೃ ವಂದನಾ ಯೋಜನೆ'ಯಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರವು ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದು, ಇದು ಕೇರಳದ ಮಧ್ಯಮ ವರ್ಗದ ಮತ್ತು ಸಂಬಳ ಪಡೆಯುವ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಕಳೆದ 11 ವರ್ಷಗಳಲ್ಲಿ ಕೋಟ್ಯಂತರ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಲು ಬೃಹತ್ ಪ್ರಯತ್ನ ಮಾಡಲಾಗಿದೆ ಎಂದು ಶ್ರೀ ಮೋದಿ ಗಮನ ಸೆಳೆದರು. ಈಗ ಬಡವರು, ಪ.ಜಾ, ಪ.ಪಂ, ಒಬಿಸಿ ಸಮುದಾಯಗಳು, ಮಹಿಳೆಯರು ಮತ್ತು ಮೀನುಗಾರರು ಸುಲಭವಾಗಿ ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತಿದೆ; ಅವರ ಬಳಿ ಭದ್ರತೆಗಾಗಿ ನೀಡಲು ಏನೂ ಇಲ್ಲದಿದ್ದಾಗ ಕೇಂದ್ರ ಸರ್ಕಾರವೇ ಸ್ವತಃ ಅವರಿಗೆ ಖಾತರಿದಾರರಾಗಿ ನಿಲ್ಲುತ್ತಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು.
ಈ ಹಿಂದೆ ಕೇವಲ ಕೆಲವು ನೂರು ರೂಪಾಯಿಗಳನ್ನು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯಲು ಪರದಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಸ್ಥಿತಿಯು ಪಿಎಂ ಸ್ವನಿಧಿ ಯೋಜನೆಯ ಮೂಲಕ ಸಂಪೂರ್ಣವಾಗಿ ಬದಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಇದೇ ಮೊದಲ ಬಾರಿಗೆ ದೇಶಾದ್ಯಂತ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಬ್ಯಾಂಕ್ಗಳಿಂದ ಸಾಲ ಪಡೆದಿದ್ದಾರೆ, ಇದು ಅವರ ಜೀವನೋಪಾಯವನ್ನು ಸುಧಾರಿಸಲು ಗಮನಾರ್ಹ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸಿದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸುವ ಮೂಲಕ ಭಾರತ ಸರ್ಕಾರವು ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಪ್ರಧಾನಮಂತ್ರಿ ಮೋದಿ ಅಭಿಪ್ರಾಯಪಟ್ಟರು. ಇಲ್ಲಿಯೇ ಪಿಎಂ ಸ್ವನಿಧಿ ಕ್ರೆಡಿಟ್ ಕಾ ಗಳನ್ನು ವಿತರಿಸಲಾಗಿದ್ದು, ಇದರಲ್ಲಿ ಕೇರಳದ 10,000 ಫಲಾನುಭವಿಗಳು ಮತ್ತು ತಿರುವನಂತಪುರದ 600ಕ್ಕೂ ಹೆಚ್ಚು ಫಲಾನುಭವಿಗಳು ಸೇರಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ಹಿಂದೆ ಕೇವಲ ಶ್ರೀಮಂತರಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಗಳು ಲಭ್ಯವಿದ್ದವು, ಆದರೆ ಈಗ ಬೀದಿ ಬದಿ ವ್ಯಾಪಾರಿಗಳೂ ಸಹ ಸ್ವನಿಧಿ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ ಎಂದು ಪ್ರಧಾನಮಂತ್ರಿಗಳು ಹೆಮ್ಮೆಯಿಂದ ಉಲ್ಲೇಖಿಸಿದರು.
ಕೇಂದ್ರ ಸರ್ಕಾರವು ಸಂಪರ್ಕ, ವಿಜ್ಞಾನ ಮತ್ತು ನಾವೀನ್ಯತೆ ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೇರಳದಲ್ಲಿ ಸಿ ಎಸ್ ಐ ಆರ್ ನಾವೀನ್ಯತಾ ಹಬ್ ಉದ್ಘಾಟನೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ರೇಡಿಯೋ ಸರ್ಜರಿ ಕೇಂದ್ರದ ಚಾಲನೆಯನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಈ ಉಪಕ್ರಮಗಳು ಕೇರಳವನ್ನು ವಿಜ್ಞಾನ, ನಾವೀನ್ಯತೆ ಮತ್ತು ಆರೋಗ್ಯ ರಕ್ಷಣೆಯ ಪ್ರಮುಖ ಕೇಂದ್ರವನ್ನಾಗಿ ಸ್ಥಾಪಿಸಲು ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು.
ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡುವ ಮೂಲಕ ಕೇರಳದ ರೈಲು ಸಂಪರ್ಕವನ್ನು ಬಲಪಡಿಸಲಾಗಿದೆ, ಇದು ಪ್ರಯಾಣದ ಸುಲಭತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು. ಗುರುವಾಯೂರು ಮತ್ತು ತ್ರಿಶೂರ್ ನಡುವಿನ ಹೊಸ ಪ್ಯಾಸೆಂಜರ್ ರೈಲು ಯಾತ್ರಾರ್ಥಿಗಳ ಪ್ರಯಾಣವನ್ನು ಸುಲಭಗೊಳಿಸಲಿದೆ ಎಂದು ಅವರು ತಿಳಿಸಿದರು. ಈ ಎಲ್ಲಾ ಯೋಜನೆಗಳು ಕೇರಳದ ಅಭಿವೃದ್ಧಿಯನ್ನು ವೇಗಗೊಳಿಸಲಿವೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಲು 'ವಿಕಸಿತ ಕೇರಳ' ಅತ್ಯಗತ್ಯ ಮತ್ತು ಕೇಂದ್ರ ಸರ್ಕಾರವು ಯಾವಾಗಲೂ ಕೇರಳದ ಜನರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅವರು ಮತ್ತೊಮ್ಮೆ ಎಲ್ಲರಿಗೂ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್, ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ಕೇಂದ್ರ ಸಚಿವರಾದ ಶ್ರೀ ವಿ ಸೋಮಣ್ಣ ಮತ್ತು ಶ್ರೀ ಜಾರ್ಜ್ ಕುರಿಯನ್, ತಿರುವನಂತಪುರದ ಮೇಯರ್ ಶ್ರೀ ವಿ ವಿ ರಾಜೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಈ ಯೋಜನೆಗಳು ರೈಲು ಸಂಪರ್ಕ, ನಗರ ಜೀವನೋಪಾಯ, ವಿಜ್ಞಾನ ಮತ್ತು ನಾವೀನ್ಯತೆ, ನಾಗರಿಕ ಕೇಂದ್ರಿತ ಸೇವೆಗಳು ಮತ್ತು ಸುಧಾರಿತ ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಇದು ಸಮಗ್ರ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಧಾನ ಮಂತ್ರಿಯವರ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ.
ರೈಲು ಸಂಪರ್ಕಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಗಳು ಮೂರು ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಮತ್ತು ಒಂದು ಪ್ಯಾಸೆಂಜರ್ ರೈಲು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ನಾಗರ್ ಕೋಯಿಲ್-ಮಂಗಳೂರು ಅಮೃತ್ ಭಾರತ್ ಎಕ್ಸ್ ಪ್ರೆಸ್, ತಿರುವನಂತಪುರಂ-ತಾಂಬರಂ ಅಮೃತ್ ಭಾರತ್ ಎಕ್ಸ್ ಪ್ರೆಸ್, ತಿರುವನಂತಪುರಂ-ಚೆರ್ಲಪಲ್ಲಿ ಅಮೃತ್ ಭಾರತ್ ಎಕ್ಸ್ ಪ್ರೆಸ್ ಮತ್ತು ತ್ರಿಶೂರ್ ಮತ್ತು ಗುರುವಾಯೂರು ನಡುವಿನ ಹೊಸ ಪ್ಯಾಸೆಂಜರ್ ರೈಲು ಸೇರಿವೆ. ಈ ಸೇವೆಗಳ ಪ್ರಾರಂಭವು ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವಿನ ದೂರದ ಮತ್ತು ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ, ಇದರಿಂದ ಪ್ರಯಾಣಿಕರಿಗೆ ಪ್ರಯಾಣವು ಹೆಚ್ಚು ಕೈಗೆಟುಕುವಂತೆ, ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ದೊರೆಯಲಿದೆ. ಈ ಸುಧಾರಿತ ಸಂಪರ್ಕವು ಈ ಪ್ರದೇಶದ ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ, ಉದ್ಯೋಗ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಬಲವಾದ ಉತ್ತೇಜನವನ್ನು ನೀಡಲಿದೆ.
ನಗರ ಜೀವನೋಪಾಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಪ್ರಧಾನ ಮಂತ್ರಿಗಳು ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದರು, ಇದು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಒಳಗೊಳ್ಳುವಿಕೆಯ ಮುಂದಿನ ಹಂತವನ್ನು ಸೂಚಿಸುತ್ತದೆ. ಯುಪಿಐ-ಸಂಯೋಜಿತ, ಬಡ್ಡಿ-ಮುಕ್ತ ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವು ತಕ್ಷಣದ ನಗದು ಲಭ್ಯತೆಯನ್ನು ಒದಗಿಸುತ್ತದೆ, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತದೆ ಮತ್ತು ಫಲಾನುಭವಿಗಳು ಔಪಚಾರಿಕ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರಧಾನ ಮಂತ್ರಿಗಳು ಕೇರಳದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಒಂದು ಲಕ್ಷ ಫಲಾನುಭವಿಗಳಿಗೆ ಪಿಎಂ ಸ್ವನಿಧಿ ಸಾಲವನ್ನೂ ವಿತರಿಸಿದರು. 2020 ರಲ್ಲಿ ಪ್ರಾರಂಭವಾದಾಗಿನಿಂದ, ಪಿಎಂ ಸ್ವನಿಧಿ ಯೋಜನೆಯು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಮೊದಲ ಬಾರಿಗೆ ಔಪಚಾರಿಕ ಸಾಲದ ಸೌಲಭ್ಯವನ್ನು ಒದಗಿಸಿದೆ ಮತ್ತು ನಗರ ಅಸಂಘಟಿತ ಕಾರ್ಮಿಕರಲ್ಲಿ ಬಡತನ ನಿರ್ಮೂಲನೆ ಹಾಗೂ ಜೀವನೋಪಾಯದ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಪ್ರಧಾನಮಂತ್ರಿಯವರು ತಿರುವನಂತಪುರಂನಲ್ಲಿ CSIR-NIIST ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಹಬ್ ಗೆ (Innovation, Technology and Entrepreneurship Hub) ಶಂಕುಸ್ಥಾಪನೆ ನೆರವೇರಿಸಿದರು. ಈ ಕೇಂದ್ರವು ಜೀವ ವಿಜ್ಞಾನ ಮತ್ತು ಜೈವಿಕ ಆರ್ಥಿಕತೆಯ ಮೇಲೆ ಕೇಂದ್ರೀಕರಿಸಲಿದ್ದು, ಆಯುರ್ವೇದದಂತಹ ಸಾಂಪ್ರದಾಯಿಕ ಜ್ಞಾನ ಪದ್ಧತಿಗಳನ್ನು ಆಧುನಿಕ ಜೈವಿಕ ತಂತ್ರಜ್ಞಾನ, ಸುಸ್ಥಿರ ಪ್ಯಾಕೇಜಿಂಗ್ ಮತ್ತು ಹಸಿರು ಹೈಡ್ರೋಜನ್ ನೊಂದಿಗೆ ಸಂಯೋಜಿಸುತ್ತದೆ. ಅಲ್ಲದೆ, ಇದು ಸ್ಟಾರ್ಟ್ ಅಪ್ ಗಳ ರಚನೆ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಸಹಯೋಗವನ್ನು ಉತ್ತೇಜಿಸುತ್ತದೆ. ಸಂಶೋಧನೆಗಳನ್ನು ಮಾರುಕಟ್ಟೆಗೆ ಸಿದ್ಧವಿರುವ ಪರಿಹಾರಗಳಾಗಿ ಮತ್ತು ಉದ್ಯಮಗಳಾಗಿ ಪರಿವರ್ತಿಸಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು ಈ ಭೇಟಿಯ ಮತ್ತೊಂದು ಪ್ರಮುಖ ಉದ್ದೇಶವಾಗಿದೆ. ಪ್ರಧಾನ ಮಂತ್ರಿಯವರು ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (SCTIMST) ನಲ್ಲಿ ಅತ್ಯಾಧುನಿಕ ರೇಡಿಯೊ ಸರ್ಜರಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸೌಲಭ್ಯವು ಸಂಕೀರ್ಣ ಮೆದುಳಿನ ಕಾಯಿಲೆಗಳಿಗೆ ಅತ್ಯಂತ ನಿಖರವಾದ ಮತ್ತು ಕನಿಷ್ಠ ಆಕ್ರಮಣಕಾರಿ ಚಿಕಿತ್ಸೆಯನ್ನು ಒದಗಿಸುತ್ತದೆ, ಇದು ಪ್ರಾದೇಶಿಕ ತೃತೀಯ ಹಂತದ ಆರೋಗ್ಯ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
ಪ್ರಧಾನ ಮಂತ್ರಿಗಳು ತಿರುವನಂತಪುರಂನಲ್ಲಿ ಹೊಸ ಪೂಜಾಪ್ಪುರ ಪ್ರಧಾನ ಅಂಚೆ ಕಚೇರಿಯನ್ನು ಸಹ ಉದ್ಘಾಟಿಸಿದರು. ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತವಾದ ಈ ಸೌಲಭ್ಯವು ಅಂಚೆ, ಬ್ಯಾಂಕಿಂಗ್, ವಿಮೆ ಮತ್ತು ಡಿಜಿಟಲ್ ಸೇವೆಗಳ ಸಮಗ್ರ ಶ್ರೇಣಿಯನ್ನು ಒದಗಿಸುತ್ತದೆ, ಇದು ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ.
*****
(रिलीज़ आईडी: 2217640)
आगंतुक पटल : 5