ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

प्रविष्टि तिथि: 14 JAN 2026 11:41AM by PIB Bengaluru

ವಣಕ್ಕಂ!

ಇನಿಯಾ ಪೊಂಗಲ್ ನಲ್ವಾಟ್ಟುಕ್ಕಾ! ಪೊಂಗಲ್ ಹಬ್ಬದ ಈ ಸಂತೋಷದ ಸಂದರ್ಭದಲ್ಲಿ ಶುಭಾಶಯಗಳು!

ಇಂದು ಪೊಂಗಲ್ ನಿಜವಾಗಿಯೂ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಪ್ರಪಂಚದಾದ್ಯಂತ, ತಮಿಳು ಸಮುದಾಯ ಮತ್ತು ತಮಿಳು ಸಂಸ್ಕೃತಿಯನ್ನು ಪ್ರೀತಿಸುವವರು ಇದನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ ಮತ್ತು ನಾನು ಅವರಲ್ಲಿ ಒಬ್ಬನಾಗಿದ್ದೇನೆ. ಈ ವಿಶೇಷ ಹಬ್ಬವನ್ನು ಆಚರಿಸಲು ನಿಮ್ಮೊಂದಿಗೆ ಕೈಜೋಡಿಸುವುದು ನನ್ನ ಸೌಭಾಗ್ಯವಾಗಿದೆ. ತಮಿಳು ಜೀವನದಲ್ಲಿ, ಪೊಂಗಲ್ ಒಂದು ಆಹ್ಲಾದಕರ ಅನುಭವವಾಗಿದೆ. ಇದು ನಮ್ಮ ರೈತರು, ಭೂಮಿ ಮತ್ತು ಸೂರ್ಯನ ಬಗ್ಗೆ ಕೃತಜ್ಞತೆಯನ್ನು ಸಾಕಾರಗೊಳಿಸುತ್ತದೆ. ಇದು ಪ್ರಕೃತಿ, ಕುಟುಂಬ ಮತ್ತು ಸಮಾಜದೊಂದಿಗೆ ಸಾಮರಸ್ಯದ ಮಹತ್ವವನ್ನು ನಮಗೆ ಕಲಿಸುತ್ತದೆ. ಈ ಸಮಯದಲ್ಲಿ, ಭಾರತದ ಇತರ ಪ್ರದೇಶಗಳು ಸಹ ಲೋಹ್ರಿ, ಮಕರ ಸಂಕ್ರಾಂತಿ, ಮಾಘ ಬಿಹು ಮತ್ತು ಹೆಚ್ಚಿನವುಗಳಲ್ಲಿ ಮುಳುಗಿರುತ್ತವೆ. ಪೊಂಗಲ್ ಮತ್ತು ಈ ಎಲ್ಲಾ ಹಬ್ಬಗಳಲ್ಲಿ ನಾನು ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ತಮಿಳು ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಕಳೆದ ವರ್ಷ ತಮಿಳು ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿರುವುದು ನನಗೆ ಬಹಳ ಸಂತೋಷದ ಮೂಲವಾಗಿದೆ. ನಾನು ತಮಿಳುನಾಡಿನ ಸಾವಿರ ವರ್ಷಗಳಷ್ಟು ಹಳೆಯದಾದ ಗಂಗೈಕೊಂಡ ಚೋಳಪುರಂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ವಾರಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮದ ಸಮಯದಲ್ಲಿ, ನಾನು ಅಲ್ಲಿದ್ದ ಪ್ರತಿ ಕ್ಷಣವೂ ಸಾಂಸ್ಕೃತಿಕ ಏಕತೆಯ ರೋಮಾಂಚಕ ಶಕ್ತಿಯನ್ನು ಅನುಭವಿಸಿದೆ. ಪಂಬನ್ ಸೇತುವೆಯ ಉದ್ಘಾಟನೆಗಾಗಿ ನಾನು ರಾಮೇಶ್ವರಂಗೆ ಭೇಟಿ ನೀಡಿದಾಗ, ನಾನು ಮತ್ತೊಮ್ಮೆ ತಮಿಳು ಇತಿಹಾಸದ ಭವ್ಯತೆಗೆ ಸಾಕ್ಷಿಯಾದೆ. ತಮಿಳು ಸಂಸ್ಕೃತಿಯು ಭಾರತದ ಹಂಚಿಕೆಯ ಪರಂಪರೆ ಮಾತ್ರವಲ್ಲ, ಮಾನವೀಯತೆಯ ಹಂಚಿಕೆಯ ಪರಂಪರೆಯೂ ಆಗಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸ್ಫೂರ್ತಿಯು ಪೊಂಗಲ್ ನಂತಹ ಹಬ್ಬಗಳಲ್ಲಿ ಬಲಗೊಳ್ಳುತ್ತದೆ.

ಸ್ನೇಹಿತರೇ,

ವಿಶ್ವದ ಪ್ರತಿಯೊಂದು ನಾಗರಿಕತೆಯೂ ಸುಗ್ಗಿಗೆ ಸಂಬಂಧಿಸಿದ ಹಬ್ಬವನ್ನು ಆಚರಿಸುತ್ತದೆ. ತಮಿಳು ಸಂಸ್ಕೃತಿಯಲ್ಲಿ, ರೈತನನ್ನು ಜೀವನದ ಅಡಿಪಾಯ ಎಂದು ಪರಿಗಣಿಸಲಾಗಿದೆ. ತಿರುಕ್ಕುರಲ್ ಕೃಷಿ ಮತ್ತು ರೈತರ ಬಗ್ಗೆ ವ್ಯಾಪಕವಾಗಿ ಮಾತನಾಡುತ್ತದೆ. ನಮ್ಮ ರೈತರು ರಾಷ್ಟ್ರ ನಿರ್ಮಾಣದಲ್ಲಿ ಬಲಿಷ್ಠ ಪಾಲುದಾರರು ಮತ್ತು ಅವರ ಪ್ರಯತ್ನಗಳು ಆತ್ಮನಿರ್ಭರ ಭಾರತ- ಸ್ವಾವಲಂಬಿ ಭಾರತಕ್ಕೆ ಅಪಾರ ಬಲವನ್ನು ನೀಡುತ್ತಿವೆ. ಕೇಂದ್ರ ಸರಕಾರ ಕೂಡಾ ರೈತರನ್ನು ಸಶಕ್ತೀಕರಣ ಮಾಡಲು ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ.

ಸ್ನೇಹಿತರೇ,

ಪೊಂಗಲ್ ಹಬ್ಬವು ಪ್ರಕೃತಿಯ ಬಗೆಗಿನ ಕೃತಜ್ಞತೆ ಕೇವಲ ಪದಗಳಿಗೆ ಸೀಮಿತವಾಗದೆ ಒಂದು ಜೀವನ ವಿಧಾನವಾಗುವಂತೆ ನಮಗೆ ಪ್ರೇರಣೆ ನೀಡುತ್ತದೆ. ಭೂಮಿಯು ನಮಗೆ ತುಂಬಾ ನೀಡಿದಾಗ, ಅದನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ, ಮಣ್ಣನ್ನು ಆರೋಗ್ಯಕರವಾಗಿಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಬಳಸುವುದು ಅತ್ಯಂತ ಮಹತ್ವದ್ದಾಗಿದೆ. ಮಿಷನ್ ಲೈಫ್, ಏಕ್ ಪೇಡ್ ಮಾ ಕೆ ನಾಮ್ ಮತ್ತು ಅಮೃತ್ ಸರೋವರದಂತಹ ಉಪಕ್ರಮಗಳು ಈ ಮನೋಭಾವವನ್ನು ಸಾಕಾರಗೊಳಿಸುತ್ತವೆ. ಕೃಷಿಯನ್ನು ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ, ಸುಸ್ಥಿರ ಕೃಷಿ ಪದ್ಧತಿಗಳು, ನೀರಿನ ನಿರ್ವಹಣೆ- ನಾನು ಆಗಾಗ್ಗೆ ಹೇಳುವಂತೆ, ಪ್ರತಿ ಹನಿ ಹೆಚ್ಚು ಬೆಳೆ ನೈಸರ್ಗಿಕ ಕೃಷಿ, ಕೃಷಿ-ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ಯುವಕರು ಈ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುಂದುವರಿಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ, ನಾನು ತಮಿಳುನಾಡಿನಲ್ಲಿ ನೈಸರ್ಗಿಕ ಕೃಷಿ ಕುರಿತ ಸಮ್ಮೇಳನದಲ್ಲಿ ಭಾಗವಹಿಸಿದ್ದೆ, ಅಲ್ಲಿ ತಮಿಳು ಯುವಕರು ತಮ್ಮನ್ನು ಹೊಲಗಳಿಗೆ ಸಮರ್ಪಿಸಿಕೊಳ್ಳಲು ದೊಡ್ಡ ವೃತ್ತಿಪರ ಅನ್ವೇಷಣೆಗಳನ್ನು ಬಿಟ್ಟು ಎಷ್ಟು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾನು ನೋಡಿದೆ. ಸುಸ್ಥಿರ ಕೃಷಿಯಲ್ಲಿ ಕ್ರಾಂತಿಗಾಗಿ ಈ ಆಂದೋಲನವನ್ನು ವಿಸ್ತರಿಸುವಂತೆ ಕೃಷಿಯಲ್ಲಿ ತೊಡಗಿರುವ ನನ್ನ ಯುವ ತಮಿಳು ಸ್ನೇಹಿತರನ್ನು ನಾನು ಒತ್ತಾಯಿಸುತ್ತೇನೆ. ನಮ್ಮ ತಟ್ಟೆಗಳು ತುಂಬಿರಬೇಕು, ನಮ್ಮ ಜೇಬುಗಳು ತುಂಬಿರಬೇಕು ಮತ್ತು ನಮ್ಮ ಗ್ರಹವು ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಗುರಿಯಾಗಿರಬೇಕು.

ಸ್ನೇಹಿತರೇ,

ತಮಿಳು ಸಂಸ್ಕೃತಿಯು ವಿಶ್ವದ ಅತ್ಯಂತ ಹಳೆಯ ಜೀವಂತ ನಾಗರಿಕತೆಗಳಲ್ಲಿ ಒಂದಾಗಿದೆ. ಇದು ಶತಮಾನಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ, ಇತಿಹಾಸದಿಂದ ಕಲಿಯುತ್ತದೆ ಮತ್ತು ವರ್ತಮಾನವನ್ನು ಭವಿಷ್ಯದತ್ತ ಮಾರ್ಗದರ್ಶನ ಮಾಡುತ್ತದೆ. ಇದರಿಂದ ಪ್ರೇರಿತರಾಗಿ, ಇಂದಿನ ಭಾರತವು ತನ್ನ ಬೇರುಗಳಿಂದ ಶಕ್ತಿಯನ್ನು ಪಡೆದು ಹೊಸ ಸಾಧ್ಯತೆಗಳತ್ತ ಸಾಗುತ್ತಿದೆ. ಪೊಂಗಲ್ ನ ಈ ಪವಿತ್ರ ಸಂದರ್ಭದಲ್ಲಿ, ಭಾರತವು ತನ್ನ ಸಂಸ್ಕೃತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದುವ, ತನ್ನ ಭೂಮಿಯನ್ನು ಗೌರವಿಸುವ ಮತ್ತು ಅದರ ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿರುವ ರಾಷ್ಟ್ರವನ್ನು ಮುನ್ನಡೆಸುವ ನಂಬಿಕೆಯನ್ನು ನಾವು ಅನುಭವಿಸುತ್ತೇವೆ.

ನಿಮಗೆ ಪೊಂಗಲ್ ಹಬ್ಬದ ಶುಭಾಶಯಗಳು! ವಾಗಾ ತಮಿಃ, ವಾಗಾ ಭಾರತಂ! ಮತ್ತೊಮ್ಮೆ, ನಿಮ್ಮೆಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ. ತುಂಬ ಧನ್ಯವಾದಗಳು.

ವಣಕ್ಕಂ!

 

*****


(रिलीज़ आईडी: 2214490) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Bengali , Assamese , Manipuri , Punjabi , Gujarati , Odia