ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಡಿಜಿಟಲ್ ಸೃಜನ ಶೀಲರ ಸಬಲೀಕರಣಕ್ಕಾಗಿ ದೇಶಾದ್ಯಂತ ಡಿಡಿ ನ್ಯೂಸ್ ನಲ್ಲಿ "ಕ್ರಿಯೇಟರ್ಸ್ ಕಾರ್ನರ್"ಗೆ  ಚಾಲನೆ ನೀಡಿದ ಪ್ರಸಾರ ಭಾರತಿ


2026ನೇ ವರ್ಷವು ಪ್ರಸಾರ ಭಾರತಿಯ ಪ್ರಮುಖ ಸುಧಾರಣೆಗಳ ವರ್ಷವಾಗಲಿದೆ: ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್

"ಕ್ರಿಯೇಟರ್ಸ್ ಕಾರ್ನರ್" ಆರೆಂಜ್ ಎಕಾನಮಿ ಕುರಿತಾದ ಪ್ರಧಾನಮಂತ್ರಿ ಮೋದಿಯವರ ಆಶಯದ ಪ್ರತಿಬಿಂಬವಾಗಿದೆ: ಡಾ. ಎಲ್. ಮುರುಗನ್

ವೇವ್ಸ್ ವೇದಿಕೆಯು ಕ್ರಿಯೇಟರ್ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆ ತಂದಿದೆ; ಒಂದು ಕೋಟಿ ಯುವಕರ ಸಬಲೀಕರಣ ಇದರ ಗುರಿ; 5,000 ಕೋಟಿ ರೂಪಾಯಿಗಳ ಆರ್ಥಿಕ ಚಟುವಟಿಕೆಗೆ ನಾಂದಿ: ಅಶ್ವಿನಿ ವೈಷ್ಣವ್

प्रविष्टि तिथि: 09 JAN 2026 4:14PM by PIB Bengaluru

ಡಿಜಿಟಲ್ ಸೃಜನ ಶೀಲರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, ಪ್ರಸಾರ ಭಾರತಿ ಇಂದು ಡಿಡಿ ನ್ಯೂಸ್ ನಲ್ಲಿ ದೇಶಾದ್ಯಂತದ ಡಿಜಿಟಲ್ ಕ್ರಿಯೇಟರ್ ಗಳು ರಚಿಸಿದ ಕಂಟೆಂಟ್‌ ಗಳನ್ನು ಪ್ರದರ್ಶಿಸಲು ಮೀಸಲಾದ ವೇದಿಕೆಯಾದ "ಕ್ರಿಯೇಟರ್ಸ್ ಕಾರ್ನರ್" (Creator’s Corner) ಅನ್ನು ಪ್ರಾರಂಭಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತವು ಪ್ರತಿಯೊಂದು ವಲಯದಲ್ಲೂ ಸುಧಾರಣೆಗಳಿಗೆ ಸಾಕ್ಷಿಯಾಗಿದೆ ಮತ್ತು ಅಂತಹದೇ ಸುಧಾರಣೆಗಳು ಈಗ ಪ್ರಸಾರ ಭಾರತಿಯಲ್ಲೂ ಗೋಚರಿಸುತ್ತಿವೆ ಎಂದು ಹೇಳಿದರು.

2026ನೇ ವರ್ಷವು ಪ್ರಸಾರ ಭಾರತಿಯ ಪ್ರಮುಖ ಸುಧಾರಣೆಗಳ ವರ್ಷವಾಗಲಿದೆ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕೂಡ ಸಂಪೂರ್ಣ ಪುನರ್ರಚನೆಗೆ ಒಳಪಡಲಿದೆ ಎಂದು ಅವರು ತಿಳಿಸಿದರು. ಈ ಸುಧಾರಣೆಗಳು ದೂರದರ್ಶನ ಮತ್ತು ಆಕಾಶವಾಣಿಯಂತಹ (AIR) ಸಂಸ್ಥೆಗಳನ್ನು ಉದ್ಯಮದ ಸಹಭಾಗಿತ್ವ, ಹೊಸ ತಲೆಮಾರಿನ ಕ್ರಿಯೇಟರ್ ಗಳು ಮತ್ತು ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಗಳತ್ತ ಮುನ್ನಡೆಸಲಿವೆ. "ಕ್ರಿಯೇಟರ್ ಕಾರ್ನರ್" (Creator Corner) ಬಿಡುಗಡೆಯು ಈ ಸುಧಾರಣಾ ಪ್ರಯಾಣದ ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಪ್ರಾರಂಭಿಸಲಾದ 'WAVES' ವೇದಿಕೆಯನ್ನು ಉಲ್ಲೇಖಿಸಿದ ಅವರು, ಕ್ರಿಯೇಟರ್ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ, ಒಂದು ಕೋಟಿ ಯುವಕರನ್ನು ಇದರೊಂದಿಗೆ ಜೋಡಿಸುವಲ್ಲಿ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ಈ ಇಕೋಸಿಸ್ಟಮ್ ಗೆ ಸುಮಾರು 5,000 ಕೋಟಿ ರೂಪಾಯಿಗಳ ಕೊಡುಗೆ ನೀಡುವಲ್ಲಿ ಅದರ ಪಾತ್ರವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಎಲ್. ಮುರುಗನ್ ಅವರು, ದೂರದರ್ಶನದ "ಕ್ರಿಯೇಟರ್ಸ್ ಕಾರ್ನರ್" (Creator Corner) ಚಾಲನೆಯು ಭಾರತದ ಬೆಳೆಯುತ್ತಿರುವ ಕಂಟೆಂಟ್ ಕ್ರಿಯೇಟರ್ ಗಳ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಇದು "ಆರೆಂಜ್ ಎಕಾನಮಿ" (Orange Economy) ಕುರಿತಾದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿದೆ ಎಂದು ಅವರು ತಿಳಿಸಿದರು. ದೇಶದ ಸಣ್ಣ ಪಟ್ಟಣಗಳು ಮತ್ತು ವಿವಿಧ ಪ್ರದೇಶಗಳ ಕ್ರಿಯೇಟರ್ ಗಳು ಯಾವುದೇ ದೊಡ್ಡ ಸ್ಟುಡಿಯೋಗಳ ಹಂಗಿಲ್ಲದೆ ಸ್ವತಂತ್ರವಾಗಿ ಕಂಟೆಂಟ್ ಸಿದ್ಧಪಡಿಸುವುದು, ಎಡಿಟ್ ಮಾಡುವುದು ಮತ್ತು ಹಂಚಿಕೊಳ್ಳುವ ಮೂಲಕ ತಮ್ಮ ಜೀವನೋಪಾಯವನ್ನು ರೂಪಿಸಿಕೊಳ್ಳುತ್ತಿರುವುದನ್ನು ಅವರು ಎತ್ತಿ ತೋರಿಸಿದರು. ಇಂತಹ ಕ್ರಿಯೇಟರ್ ಗಳಿಗೆ ದೂರದರ್ಶನವು ಇದೀಗ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಪ್ರಬಲ ವೇದಿಕೆಯನ್ನು ಒದಗಿಸಲಿದೆ ಎಂದು ಹೇಳುತ್ತಾ, ಈ ಕಾರ್ಯಕ್ಕಾಗಿ ದೂರದರ್ಶನ (DD) ತಂಡವನ್ನು ಅಭಿನಂದಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ (MIB) ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು, ಈ ಉಪಕ್ರಮವು ಒಂದು ಕ್ರಿಯಾತ್ಮಕ, ಜವಾಬ್ದಾರಿಯುತ ಮತ್ತು ಸಮಗ್ರ  ಕ್ರಿಯೇಟರ್ ಇಕೋಸಿಸ್ಟಮ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಒತ್ತಿಹೇಳಿದರು. ಇಲ್ಲಿ ಕ್ರಿಯೇಟರ್ ಗಳನ್ನು ಕೇವಲ ನಟರನ್ನಾಗಿ ಮಾತ್ರವಲ್ಲದೆ, ಪೂರ್ಣ ಪ್ರಮಾಣದ 'ಕಂಟೆಂಟ್ ಮೇಕರ್ಸ್' ಎಂದು ಗುರುತಿಸಲಾಗುತ್ತದೆ. ಡಿಡಿ ನ್ಯೂಸ್ ನಲ್ಲಿ ಪ್ರಾರಂಭವಾಗುತ್ತಿರುವ "ಕ್ರಿಯೇಟರ್ಸ್ ಕಾರ್ನರ್" (Creator Corner), ಹಂತಹಂತವಾಗಿ ಎಲ್ಲಾ ದೂರದರ್ಶನ ಚಾನೆಲ್ ಗಳಿಗೆ ವಿಸ್ತರಣೆಯಾಗಲಿದೆ. ಇದು ವಿವಿಧ ಭಾಷೆಗಳು, ಪ್ರದೇಶಗಳು ಮತ್ತು ವಿಭಿನ್ನ ಶೈಲಿಯ ಕ್ರಿಯೇಟರ್ ಗಳಿಗೆ ರಾಷ್ಟ್ರೀಯ ವೇದಿಕೆಯನ್ನು ಒದಗಿಸಲಿದೆ ಎಂದು ಅವರು ತಿಳಿಸಿದರು. ಇದಕ್ಕಾಗಿ ಮೀಸಲಿಟ್ಟಿರುವ 'ಪ್ರೈಮ್-ಟೈಮ್ ಸ್ಲಾಟ್' ಕ್ರಿಯೇಟರ್ ಗಳು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ನೆರವಾಗುವುದಲ್ಲದೆ, ಸಾರ್ವಜನಿಕ ಪ್ರಸಾರಕ್ಕೆ ವೈವಿಧ್ಯಮಯ ದೃಷ್ಟಿಕೋನಗಳನ್ನು ನೀಡುವ ಮೂಲಕ ಅದನ್ನು ಮತ್ತಷ್ಟು ಶ್ರೀಮಂತಗೊಳಿಸಲಿದೆ ಎಂದು ಅವರು ಹೇಳಿದರು.

ಕ್ರಿಯೇಟರ್ಸ್ ಕಾರ್ನರ್ ಬಗ್ಗೆ 

ಗುಣಮಟ್ಟದ ಕಂಟೆಂಟ್ ರಚನೆಯನ್ನು ಉತ್ತೇಜಿಸುವ ಮೂಲಕ ಮತ್ತು ಪ್ರಸಾರ ಭಾರತಿ ಹಾಗೂ ವೈಯಕ್ತಿಕ ಕಂಟೆಂಟ್ ಕ್ರಿಯೇಟರ್ ಗಳ ನಡುವಿನ ಪಾಲುದಾರಿಕೆಯ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುವುದು ಈ ಉಪಕ್ರಮದ ಗುರಿಯಾಗಿದೆ.

"ಕ್ರಿಯೇಟರ್ಸ್ ಕಾರ್ನರ್" (Creator’s Corner) ಸುದ್ದಿಗಳು ಮತ್ತು ಪ್ರಚಲಿತ ವಿದ್ಯಮಾನಗಳು, ಸಂಸ್ಕೃತಿ, ಪ್ರವಾಸೋದ್ಯಮ, ಪಾಕಪದ್ಧತಿ, ಕಲೆ ಮತ್ತು ಸಾಹಿತ್ಯ, ಸಂಗೀತ ಮತ್ತು ನೃತ್ಯ, ಆರೋಗ್ಯ ಮತ್ತು ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸ್ಪೂರ್ತಿದಾಯಕ ಕಥೆಗಳು, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಮನರಂಜನೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತಾದ ಕಂಟೆಂಟ್ ಅನ್ನು ಒಳಗೊಂಡಿರಲಿದೆ.

ಈ ಕಾರ್ಯಕ್ರಮವು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7:00 ಗಂಟೆಗೆ ಡಿಡಿ ನ್ಯೂಸ್ನಲ್ಲಿ (DD News) ಪ್ರಸಾರವಾಗಲಿದ್ದು, ಮರುದಿನ ಬೆಳಿಗ್ಗೆ 9:30 ಕ್ಕೆ ಇದರ ಮರುಪ್ರಸಾರವಿರುತ್ತದೆ. ಪ್ರತಿಯೊಂದು ಸಂಚಿಕೆಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ನಾಲ್ಕರಿಂದ ಆರು ರೀಲ್ಸ್ ಅಥವಾ ವೀಡಿಯೊಗಳನ್ನು ಒಳಗೊಂಡಿರಲಿದೆ.

ಈ ಉಪಕ್ರಮವು ಉಭಯ ಪಕ್ಷಗಳಿಗೂ ಪ್ರಯೋಜನಕಾರಿಯಾದ ಪಾಲುದಾರಿಕೆಯಾಗಿದೆ. ಇದು ಡಿಜಿಟಲ್ ಕ್ರಿಯೇಟರ್ಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವಿಶ್ವಾಸಾರ್ಹ ವೇದಿಕೆ ಮತ್ತು ಪ್ರಸಾರ ಭಾರತಿ/ಡಿಡಿ ನ್ಯೂಸ್ ನ ಬೃಹತ್ ವ್ಯಾಪ್ತಿಯನ್ನು ಒದಗಿಸುತ್ತದೆ. ಹಾಗೆಯೇ, ಯುವ ಪೀಳಿಗೆಯನ್ನು ಸೆಳೆಯುವಂತಹ ನವೀನ ಮತ್ತು ವೈವಿಧ್ಯಮಯ ಕಂಟೆಂಟ್ ಗಳನ್ನು ಪ್ರಸಾರ ಮಾಡಲು ಪ್ರಸಾರ ಭಾರತಿಗೆ ಇದು ಸಹಕಾರಿಯಾಗಲಿದೆ.

ಆಸಕ್ತಿಯುಳ್ಳ ಕಂಟೆಂಟ್ ಕ್ರಿಯೇಟರ್ ಗಳು ಈ ಅಭಿಯಾನದ ಭಾಗವಾಗಲು ತಮ್ಮ ಕಂಟೆಂಟ್ ಅನ್ನು ddnews.creatorscorner[at]gmail[dot]com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು ಅಥವಾ +91-8130555806 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

 

*****


(रिलीज़ आईडी: 2212955) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Gujarati , Odia , Tamil , Telugu , Malayalam