ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ʻ72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿʼಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು


ಭಾರತದ ಅಭಿವೃದ್ಧಿಯ ಯಶೋಗಾಥೆ ಮತ್ತು ವಾಲಿಬಾಲ್ ಆಟದ ನಡುವೆ ಅನೇಕ ಹೋಲಿಕೆಗಳಿವೆ. ಯಾವುದೇ ಗೆಲುವನ್ನು ಒಂಟಿಯಾಗಿ ಸಾಧಿಸಲು ಸಾಧ್ಯವಿಲ್ಲ; ನಮ್ಮ ಸಮನ್ವಯ, ನಮ್ಮ ನಂಬಿಕೆ ಮತ್ತು ನಮ್ಮ ತಂಡದ ಸನ್ನದ್ಧತೆಯ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿದೆ ಎಂದು ವಾಲಿಬಾಲ್ ನಮಗೆ ಕಲಿಸುತ್ತದೆ: ಪ್ರಧಾನಮಂತ್ರಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಪಾತ್ರವಿದೆ, ತಮ್ಮದೇ ಆದ ಜವಾಬ್ದಾರಿ ಇದೆ ಮತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪರಿಪೂರ್ಣತೆಯಿಂದ ಪೂರೈಸಿದಾಗ ಮಾತ್ರ ನಾವು ಯಶಸ್ವಿಯಾಗುತ್ತೇವೆ; ನಮ್ಮ ರಾಷ್ಟ್ರವೂ ಅದೇ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ: ಪ್ರಧಾನಮಂತ್ರಿ

2014ರಿಂದ, ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರದರ್ಶನವು ಸ್ಥಿರವಾಗಿ ಸುಧಾರಿಸುತ್ತಿದೆ, ʻಜೆನ್-ಝಡ್ʼ ತಲೆಮಾರಿನವರು ಆಟದ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನೋಡಿದಾಗ ನಮಗೆ ಅಪಾರ ಹೆಮ್ಮೆ ಎನಿಸುತ್ತದೆ: ಪ್ರಧಾನಮಂತ್ರಿ

2030ರ ʻಕಾಮನ್ವೆಲ್ತ್ ಕ್ರೀಡಾಕೂಟʼ ಭಾರತದಲ್ಲಿ ನಡೆಯಲಿದ್ದು, 2036ರ ʻಒಲಿಂಪಿಕ್ಸ್ʼಗೂ ಆತಿಥ್ಯ ವಹಿಸಲು ದೇಶವು ಬಲವಾದ ಪ್ರಯತ್ನಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ

प्रविष्टि तिथि: 04 JAN 2026 1:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ವಾರಣಾಸಿಯ ಸಂಸತ್ ಸದಸ್ಯನಾಗಿ, ಎಲ್ಲಾ ಆಟಗಾರರನ್ನು ಸ್ವಾಗತಿಸಲು ಮತ್ತು ಅಭಿನಂದಿಸಲು ಸಂತಸವಾಗುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಇಂದಿನಿಂದ ವಾರಣಾಸಿಯಲ್ಲಿ ಪ್ರಾರಂಭವಾಗುತ್ತಿದೆ. ಆಟಗಾರರು ಅಪಾರ ಕಠಿಣ ಪರಿಶ್ರಮದ ಬಳಿಕ ಈ ರಾಷ್ಟ್ರೀಯ ಪಂದ್ಯಾವಳಿಯನ್ನು ತಲುಪಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ವಾರಣಾಸಿಯ ಮೈದಾನದಲ್ಲಿ ಅವರ ಪ್ರಯತ್ನಗಳನ್ನು ಪರೀಕ್ಷಿಗೆ ಒಡ್ಡಲಾಗುವುದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇಶದ 28 ರಾಜ್ಯಗಳ ತಂಡಗಳು ಒಟ್ಟುಗೂಡಿ ʻಏಕ ಭಾರತ, ಶ್ರೇಷ್ಠ ಭಾರತʼದ ಸುಂದರ ಚಿತ್ರಣವನ್ನು ಪ್ರಸ್ತುತಪಡಿಸಿವೆ ಎಂದು ಅವರು ಹೇಳಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಪ್ರಧಾನಮಂತ್ರಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಬನಾರಸ್‌ನ ಸ್ಥಳೀಯ ಮಾತೊಂದನ್ನು ಸ್ಮರಿಸಿದ ಶ್ರೀ ಮೋದಿ, ಆಟಗಾರರು ಈಗ ವಾರಣಾಸಿಗೆ ಆಗಮಿಸಿದ್ದಾರೆ ಮತ್ತು ನಗರದ ಬಗ್ಗೆ ಸಹ ಅವರು ತಿಳಿದುಕೊಳ್ಳುತ್ತಾರೆ ಎಂದು ಹೇಳಿದರು. ವಾರಣಾಸಿಯು ಕ್ರೀಡಾ ಪ್ರೇಮಿಗಳ ನಗರವಾಗಿದ್ದು, ನಗರದಲ್ಲಿ ಕುಸ್ತಿ, ಕುಸ್ತಿ ಅಂಕಗಳು, ಬಾಕ್ಸಿಂಗ್, ದೋಣಿ ಸ್ಪರ್ಧೆಗಳು ಮತ್ತು ಕಬಡ್ಡಿ ಬಹಳ ಜನಪ್ರಿಯವಾಗಿವೆ ಎಂದು ಅವರು ಒತ್ತಿ ಹೇಳಿದರು. ವಾರಣಾಸಿಯು ಅನೇಕ ರಾಷ್ಟ್ರಮಟ್ಟದ ಆಟಗಾರರನ್ನು ಸೃಷ್ಟಿಸಿದೆ ಮತ್ತು ʻಬನಾರಸ್ ಹಿಂದೂ ವಿಶ್ವವಿದ್ಯಾಲಯʼ, ಯುಪಿ ಕಾಲೇಜು ಮತ್ತು ʻಕಾಶಿ ವಿದ್ಯಾಪೀಠʼದಂತಹ ಸಂಸ್ಥೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಆಟಗಾರ ಉತ್ತಮ ಸಾಧನೆಗೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು. ಸಾವಿರಾರು ವರ್ಷಗಳಿಂದ ಜ್ಞಾನ ಮತ್ತು ಕಲೆಯ ಅನ್ವೇಷಣೆಗಾಗಿ ಇಲ್ಲಿಗೆ ಬರುವ ಎಲ್ಲರನ್ನೂ ವಾರಣಾಸಿ ಸ್ವಾಗತಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ʻರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿʼಯ ಸಮಯದಲ್ಲಿ ವಾರಣಾಸಿಯ ಉತ್ಸಾಹವು ಇಮ್ಮಡಿಸಲಿದೆ. ಪ್ರೇಕ್ಷಕರರು ಆಟಗಾರರನ್ನು ಹುರಿದುಂಬಿಸುತ್ತಾರೆ ಮತ್ತು ವಾರಣಾಸಿಯು ಹೊಂದಿರುವ ಶ್ರೀಮಂತ ಆತಿಥ್ಯದ ಸಂಪ್ರದಾಯವನ್ನು ಸಹ ಆಟಗಾರರು ಅನುಭವಿಸುತ್ತಾರೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ವಾಲಿಬಾಲ್ ಸಾಮಾನ್ಯ ಕ್ರೀಡೆಯಲ್ಲ, ಏಕೆಂದರೆ ಅದು ಸಮತೋಲನ ಮತ್ತು ಸಹಕಾರವನ್ನು ಬಯಸುವ ಆಟವಾಗಿದೆ. ಅಲ್ಲಿ ಚೆಂಡನ್ನು ಮೇಲಕ್ಕೆತ್ತುವ ಪ್ರಯತ್ನದಲ್ಲಿ ಯಾವಾಗಲೂ ದೃಢನಿಶ್ಚಯವು ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಾಲಿಬಾಲ್ ಆಟಗಾರರಲ್ಲಿ ತಂಡದ ಮನೋಭಾವ ಮೂಡಿಸುತ್ತದೆ. ಪ್ರತಿಯೊಬ್ಬ ಆಟಗಾರನು 'ಟೀಮ್ ಫಸ್ಟ್' ಎಂಬ ಮಂತ್ರದಿಂದ ಮುನ್ನಡೆಸಲ್ಪಡುತ್ತಾರೆ ಎಂದರು. ಪ್ರತಿಯೊಬ್ಬ ಆಟಗಾರನು ವಿಭಿನ್ನ ಕೌಶಲ್ಯಗಳನ್ನು ಹೊಂದಿರಬಹುದು, ಎಲ್ಲರೂ ತಮ್ಮ ತಂಡದ ಗೆಲುವಿಗಾಗಿ ಆಡುತ್ತಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಅಭಿವೃದ್ಧಿಯ ಯಶೋಗಾಥೆ ಮತ್ತು ವಾಲಿಬಾಲ್ ನಡುವಿನ ಹೋಲಿಕೆಗಳನ್ನು ಪಟ್ಟಿ ಮಾಡಿದ ಶ್ರೀ ಮೋದಿ, ಯಾವುದೇ ಗೆಲುವನ್ನು ಒಂಟಿಯಾಗಿ ಸಾಧಿಸಲಾಗುವುದಿಲ್ಲ. ಸಮನ್ವಯ, ನಂಬಿಕೆ ಮತ್ತು ತಂಡದ ಸನ್ನದ್ಧತೆಯ ಮೇಲೆ ಗೆಲುವು ಅವಲಂಬಿತವಾಗಿರುತ್ತದೆ ಎಂದು ಈ ಕ್ರೀಡೆಯು ಕಲಿಸುತ್ತದೆ ಎಂದು ಹೇಳಿದರು. ಇದರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಪಾತ್ರ ಮತ್ತು ಜವಾಬ್ದಾರಿ ಹೊಂದಿರುತ್ತಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಗಂಭೀರವಾಗಿ ಪೂರೈಸಿದಾಗ ಮಾತ್ರ ಯಶಸ್ಸು ಬರುತ್ತದೆ ಎಂದು ಅವರು ಒತ್ತಿ ಹೇಳಿದರು. ದೇಶವೂ ಇದೇ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಸ್ವಚ್ಛತೆಯಿಂದ ಡಿಜಿಟಲ್ ಪಾವತಿಗಳವರೆಗೆ, ʻತಾಯಿಯ ಹೆಸರಲ್ಲಿ ಒಂದು ಸಸಿʼ ಅಭಿಯಾನದಿಂದ ಹಿಡಿದು ʻಅಭಿವೃದ್ಧಿ ಹೊಂದಿದ ಭಾರತʼ ಆಶಯದವರೆಗೆ ಪ್ರತಿಯೊಬ್ಬ ನಾಗರಿಕ, ಪ್ರತಿ ವರ್ಗ ಮತ್ತು ಪ್ರತಿ ಪ್ರಾಂತ್ಯವು ಸಾಮೂಹಿಕ ಸಂಕಲ್ಪದೊಂದಿಗೆ ಮತ್ತು ಭಾರತ ಮೊದಲು ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಜಗತ್ತು ಭಾರತದ ಬೆಳವಣಿಗೆ ಮತ್ತು ಆರ್ಥಿಕತೆಯನ್ನು ಶ್ಲಾಘಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ ಅವರು, ಈ ಪ್ರಗತಿಯು ಕೇವಲ ಆರ್ಥಿಕ ರಂಗಕ್ಕೆ ಸೀಮಿತವಾಗಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಕಾಣಿಸುತ್ತಿರುವ ಆತ್ಮವಿಶ್ವಾಸದಲ್ಲಿಯೂ ಅದು ಪ್ರತಿಫಲಿಸುತ್ತಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, 2014 ರಿಂದ ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರದರ್ಶನವು ಸ್ಥಿರವಾಗಿ ಸುಧಾರಿಸಿದೆ ಎಂದು ಹೇಳಿದರು ಅವರು. ಇದೇವೇಳೆ, ಜೆನ್-ಝಡ್ ತಲೆಮಾರಿನ ಕ್ರೀಡಾಪಟುಗಳು ಆಟದ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುವುದನ್ನು ನೋಡಿ ಹೆಮ್ಮೆಯಾಗುತ್ತದೆ ಎಂದರು ಹೇಳಿದರು.

ಸರ್ಕಾರ ಮತ್ತು ಸಮಾಜಗಳೆರಡೂ ಕ್ರೀಡೆಯ ಬಗ್ಗೆ ಅಸಡ್ಡೆ ತೋರಿದ ಕಾಲವೊಂದಿತ್ತು. ಇದು ಆಟಗಾರರಲ್ಲಿ ಅವರ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಸೃಷ್ಟಿಸಿತು ಮತ್ತು ಕೆಲವೇ ಯುವಕರು ಕ್ರೀಡೆಯನ್ನು ವೃತ್ತಿಯಾಗಿ ಅಳವಡಿಸಿಕೊಂಡರು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಕಳೆದ ದಶಕದಲ್ಲಿ, ಕ್ರೀಡೆಯ ಬಗ್ಗೆ ಸರ್ಕಾರ ಮತ್ತು ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ಕ್ರೀಡಾ ಬಜೆಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇಂದು ಭಾರತದ ಕ್ರೀಡಾ ನೀತಿಯು 'ಕ್ರೀಡಾಪಟು-ಕೇಂದ್ರಿತ'ವಾಗಿದೆ. ಪ್ರತಿಭೆ ಗುರುತಿಸುವಿಕೆ, ವೈಜ್ಞಾನಿಕ ತರಬೇತಿ, ಪೋಷಣೆ ಮತ್ತು ಪಾರದರ್ಶಕ ಆಯ್ಕೆಯ ಮೇಲೆ ಗಮನ ಕೇಂದ್ರೀಕರಿಸಿದೆ. ಪ್ರತಿ ಹಂತದಲ್ಲೂ ಆಟಗಾರರ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದನ್ನು ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

"ಇಂದು ದೇಶವು ʻಸುಧಾರಣಾ ಎಕ್ಸ್‌ಪ್ರೆಸ್‌ʼ ಮೂಲಕ ಸವಾರಿ ಮಾಡುತ್ತಿದೆ. ಪ್ರತಿಯೊಂದು ವಲಯ ಮತ್ತು ಪ್ರತಿಯೊಂದು ಅಭಿವೃದ್ಧಿ ತಾಣವು ಅದರೊಂದಿಗೆ ಸಂಪರ್ಕ ಹೊಂದಿದ್ದು, ಕ್ರೀಡೆಯೂ ಅವುಗಳಲ್ಲಿ ಒಂದಾಗಿದೆ," ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ʻರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆʼ ಮತ್ತು ʻಖೇಲೋ ಭಾರತ್ ನೀತಿ-2025ʼ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸರ್ಕಾರವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಇದು ಅರ್ಹ ಪ್ರತಿಭೆಗಳಿಗೆ ಸೂಕ್ತ ಅವಕಾಶಗಳನ್ನು ಒದಗಿಸುತ್ತದೆ ಮತ್ತು ಕ್ರೀಡಾ ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ನಿಬಂಧನೆಗಳು ಯುವಕರಿಗೆ ಕ್ರೀಡೆ ಮತ್ತು ಶಿಕ್ಷಣ ಎರಡರಲ್ಲೂ ಏಕಕಾಲದಲ್ಲಿ ಮುನ್ನಡೆಯಲು ಅನುವು ಮಾಡಿಕೊಡುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ʻಟಾಪ್ಸ್ʼನಂತಹ ಉಪಕ್ರಮಗಳು ಭಾರತದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುತ್ತಿವೆ. ಬಲವಾದ ಮೂಲಸೌಕರ್ಯಗಳ ನಿರ್ಮಾಣ, ಧನಸಹಾಯ ಸೌಲಭ್ಯಗಳು ಮತ್ತು ಯುವ ಕ್ರೀಡಾಪಟುಗಳಿಗೆ ಜಾಗತಿಕ ಮಾನ್ಯತೆಯನ್ನು ಒದಗಿಸುವತ್ತ ಗಮನ ಹರಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು.  ಕಳೆದ ದಶಕದಲ್ಲಿ ಭಾರತವು ʻಫಿಫಾ ಅಂಡರ್-17 ವಿಶ್ವಕಪ್ʼ, ʻಹಾಕಿ ವಿಶ್ವಕಪ್ʼ, ಪ್ರಮುಖ ಚೆಸ್ ಪಂದ್ಯಾವಳಿಗಳು ಸೇರಿದಂತೆ ಹಲವಾರು ನಗರಗಳಲ್ಲಿ 20ಕ್ಕೂ ಹೆಚ್ಚು ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಪಂದ್ಯಗಳನ್ನು ಆಯೋಜಿಸಿದೆ ಎಂದು ಗಮನಸೆಳೆದರು.  "2030ರ ಕಾಮನ್ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯಲಿದೆ. ಹೆಚ್ಚು ಹೆಚ್ಚು ಆಟಗಾರರಿಗೆ ಸ್ಪರ್ಧಿಸಲು ಹೆಚ್ಚಿನ ಅವಕಾಶಗಳನ್ನು ನೀಡುವ ಉದ್ದೇಶದಿಂದ ದೇಶವು 2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಬಲವಾದ ಪ್ರಯತ್ನಗಳನ್ನು ಮಾಡುತ್ತಿದೆ," ಎಂದು ಪ್ರಧಾನಮಂತ್ರಿ ಹೇಳಿದರು.

ಶಾಲಾ ಮಟ್ಟದಲ್ಲಿಯೂ ಯುವ ಕ್ರೀಡಾಪಟುಗಳನ್ನು ಒಲಿಂಪಿಕ್ ಕ್ರೀಡೆಗಳಿಗೆ ಒಡ್ಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ʻಖೇಲೋ ಇಂಡಿಯಾʼ ಅಭಿಯಾನದ ಮೂಲಕ ನೂರಾರು ಯುವಕರು ರಾಷ್ಟ್ರಮಟ್ಟಕ್ಕೆ ಏರಲು ಅವಕಾಶವನ್ನು ಪಡೆದಿದ್ದಾರೆ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ʻಸಂಸದ್ ಖೇಲ್ ಮಹೋತ್ಸವʼ ಮುಕ್ತಾಯಗೊಂಡಿತು. ಅಲ್ಲಿ ಸುಮಾರು ಒಂದು ಕೋಟಿ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ʻಸಂಸದ್ ಖೇಲ್ ಮಹೋತ್ಸವʼದ ಸಂದರ್ಭದಲ್ಲಿ ವಾರಣಾಸಿಯ ಸುಮಾರು ಮೂರು ಲಕ್ಷ ಯುವಕರು ಮೈದಾನದಲ್ಲಿ ತಮ್ಮ ಶಕ್ತಿ ಮತ್ತು ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ ಎಂಬ ವಿಷಯವನ್ನು ವಾರಣಾಸಿಯ ಸಂಸತ್ ಸದಸ್ಯರಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡರು.

ಕ್ರೀಡಾ ಮೂಲಸೌಕರ್ಯಗಳಲ್ಲಿನ ಪರಿವರ್ತನೆಯು ವಾರಣಾಸಿಗೂ ಪ್ರಯೋಜನವನ್ನು ನೀಡುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ವಿವಿಧ ಆಟಗಳಿಗೆ ಕ್ರೀಡಾಂಗಣಗಳು ತಲೆ ಎತ್ತುತ್ತಿವೆ ಎಂದು ತಿಳಿಸಿದರು. ಹೊಸ ಕ್ರೀಡಾ ಸಂಕೀರ್ಣಗಳು ಹತ್ತಿರದ ಜಿಲ್ಲೆಗಳ ಆಟಗಾರರಿಗೆ ತರಬೇತಿ ಅವಕಾಶಗಳನ್ನು ಒದಗಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ಕಾರ್ಯಕ್ರಮ ನಡೆಯುತ್ತಿರುವ ʻಸಿಗ್ರಾ ಕ್ರೀಡಾಂಗಣʼವು ಈಗ ಹಲವಾರು ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ವಾರಣಾಸಿಯು ಪ್ರಮುಖ ಕ್ರೀಡಾಕೂಟಗಳಿಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ʻರಾಷ್ಟ್ರೀಯ ವಾಲಿಬಾಲ್ ಸ್ಪರ್ಧೆʼಯ ಮೂಲಕ ದೇಶದ ಕ್ರೀಡಾ ನಕ್ಷೆಯಲ್ಲಿ ಸ್ಥಾನ ಪಡೆಯುವುದು ನಗರಕ್ಕೆ ಹೆಚ್ಚು ಮಹತ್ವದ ವಿಷಯವಾಗಿದೆ ಎಂದು ಒತ್ತಿ ಹೇಳಿದರು. ಈ ಚಾಂಪಿಯಮನ್‌ಶಿಪ್‌ಗೆ ಮೊದಲು, ವಾರಣಾಸಿಯು ಸ್ಥಳೀಯ ಜನರಿಗೆ ಅವಕಾಶಗಳನ್ನು ಒದಗಿಸುವ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದರಲ್ಲಿ ʻಜಿ-20ʼ ಸಭೆಗಳು, ʻಕಾಶಿ ತಮಿಳು ಸಂಗಮಂʼ ಮತ್ತು ʻಕಾಶಿ ತೆಲುಗು ಸಂಗಮಂʼ, ಪ್ರವಾಸಿ ಭಾರತೀಯ ಸಮ್ಮೇಳನಗಳು ಸೇರಿವೆ. ಜೊತೆಗೆ, ʻಶಾಂಘೈ ಸಹಕಾರ ಸಂಘಟನೆʼಯ ಸಾಂಸ್ಕೃತಿಕ ರಾಜಧಾನಿಯಾಗಿ ವಾರಣಾಸಿಯನ್ನು ಹೆಸರಿಸಲಾಗಿದೆ ಎಂದು ಅವರು ಸ್ಮರಿಸಿದರು. ಈ ಚಾಂಪಿಯನ್‌ಶಿಪ್ ಈಗ ಈ ಸಾಧನೆಗಳಿಗೆ ಮತ್ತೊಂದು ಮುಕುಟವಾಗಲಿದೆ ಎಂದು ಅವರು ಹೇಳಿದರು. ಇಂತಹ ಕಾರ್ಯಕ್ರಮಗಳು ವಾರಣಾಸಿಯನ್ನು ದೊಡ್ಡ ವೇದಿಕೆಗಳ ಪ್ರಮುಖ ತಾಣವಾಗಿ ರೂಪಿಸುತ್ತಿವೆ ಎಂದರು.

ಪ್ರಸ್ತುತ ವಾರಣಾಸಿಯಲ್ಲಿ ಆಹ್ಲಾದಕರ ಶೀತ ವಾತಾವರಣವಿದ್ದು, ಇಲ್ಲಿನ ರುಚಿಕರವಾದ ಸ್ಥಳೀಯ ಆಹಾರಗ ಜೊತೆಗೆ ʻಮಖಾನ್‌ ಮಲೈʼ  ಸವಿಯುವಂತೆ ಸಲಹೆ ನೀಡಿದರು. ಸ್ವಾಮಿ ವಿಶ್ವನಾಥ ದೇಗುಲಕ್ಕೆ ಭೇಟಿ, ಗಂಗಾ ನದಿಯಲ್ಲಿ ದೋಣಿ ವಿಹಾರ ಮತ್ತು ನಗರದ ಪಾರಂಪರೆಯ ಅಲೆಯಲ್ಲಿ ತೋಯ್ದ ಅನುಭವವನ್ನು ತಮ್ಮೊಂದಿಗೆ ಕೊಂಡೊಯ್ಯುವಂತೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಒತ್ತಾಯಿಸಿದರು. ತಮ್ಮ ಮಾತುಗಳನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಆಟಗಾರರನ್ನು ಪ್ರೋತ್ಸಾಹಿಸಿದರು. ವಾರಣಾಸಿಯ ಮಣ್ಣಿನಿಂದ ಬರುವ ಪ್ರತಿಯೊಂದು ʻಸ್ಪೈಕ್ʼ, ʻಬ್ಲಾಕ್ʼ ಮತ್ತು ʻಪಾಯಿಂಟ್ʼಗಳು ಭಾರತದ ಕ್ರೀಡಾ ಆಕಾಂಕ್ಷೆಗಳನ್ನು ಹೆಚ್ಚಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಜನವರಿ 4ರಿಂದ 11ರವರೆಗೆ ನಡೆಯಲಿರುವ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯು ಭಾರತದಾದ್ಯಂತ ಮೂಲೆ ಮೂಲೆಗಳಿಂದ ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.  ವಿವಿಧ ರಾಜ್ಯಗಳು ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುವ 58 ತಂಡಗಳ ಭಾಗವಾಗಿ 1,000ಕ್ಕೂ ಹೆಚ್ಚು ಆಟಗಾರರು ಸ್ಪರ್ಧಿಸಲಿದ್ದಾರೆ. ಈ ಪಂದ್ಯಾವಳಿಯು ಭಾರತೀಯ ವಾಲಿಬಾಲ್‌ನಲ್ಲಿ ಉನ್ನತ ಗುಣಮಟ್ಟದ ಸ್ಪರ್ಧಾತ್ಮಕತೆ, ಕ್ರೀಡಾ ಮನೋಭಾವ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.

ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಆಯೋಜನೆಯು ನಗರದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಕ್ರೀಡಾಳುಗಳ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚಿನ ಒತ್ತನ್ನು ಸೂಚಿಸುತ್ತದೆ. ಇದು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳ ಕೇಂದ್ರವಾಗಿ ನಗರದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಜೊತೆಗೆ, ಮಹತ್ವದ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಹೆಚ್ಚಿದ ನಗರದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತದೆ.

 

*****

 


(रिलीज़ आईडी: 2211301) आगंतुक पटल : 18
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam