ರೈಲ್ವೇ ಸಚಿವಾಲಯ
azadi ka amrit mahotsav

ನವದೆಹಲಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಸ್ಲೀಪರ್ ರೈಲನ್ನು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದರು

प्रविष्टि तिथि: 03 JAN 2026 8:02PM by PIB Bengaluru

ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಶೀಲನೆಗಾಗಿ ಇಂದು ನವದೆಹಲಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು.

ಸಚಿವರು ಪರಿಶೀಲನೆ ಸಮಯದಲ್ಲಿ, ಆಸನ ಮತ್ತು ಬರ್ತಿಂಗ್ ವ್ಯವಸ್ಥೆಗಳು, ಆಧುನಿಕ ಇಂಟಿರಿಯರ್, ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿರುವ ವ್ಯವಸ್ಥೆಗಳು ಸೇರಿದಂತೆ ಸ್ಲೀಪರ್ ಕೋಚ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಪ್ರಯಾಣಿಕರ ಸುರಕ್ಷತೆ ಮತ್ತು ಆನ್‌ಬೋರ್ಡ್ ಸೌಲಭ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ರೈಲು ಸ್ವಯಂಚಾಲಿತ ಬಾಗಿಲುಗಳು, ಕವಚ್ (KAVACH) ಸುರಕ್ಷತಾ ವ್ಯವಸ್ಥೆ, ಸುಧಾರಿತ ಅಗ್ನಿಶಾಮಕ ಸುರಕ್ಷತಾ ಕಾರ್ಯವಿಧಾನಗಳು, ಸೋಂಕುನಿವಾರಕ ತಂತ್ರಜ್ಞಾನ ಮತ್ತು ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಹೆಚ್ಚಿಸಲು ಮತ್ತು ನೀರು ಎರಚುವುದನ್ನು ತಡೆಯಲು ಹೊಸ ಆವಿಷ್ಕಾರಗಳ ಅಳವಡಿಕೆಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ, ಇದು ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯ ಮತ್ತು ನೈರ್ಮಲ್ಯದತ್ತ  ವಿಶೇಷ ಗಮನ ಹರಿಸಿರುವುದನ್ನು ಪ್ರತಿಬಿಂಬಿಸುತ್ತದೆ.

ದೇಶದಲ್ಲಿ ರಾತ್ರಿ ವೇಳೆ ದೂರದ ರೈಲು ಪ್ರಯಾಣದಲ್ಲಿ ಒಂದು ಪರಿವರ್ತಕ ಹೆಜ್ಜೆಯ ರೂಪದಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ಹೌರಾ ನಡುವೆ ಕಾರ್ಯನಿರ್ವಹಿಸಲಿದೆ. ರೈಲಿನ ಪರೀಕ್ಷೆ, ಪರಿಶೀಲನೆ ಮತ್ತು ಪ್ರಮಾಣೀಕರಣದ ಸಂಪೂರ್ಣ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಜನವರಿ ತಿಂಗಳಲ್ಲಿ, ಈ ಮಾರ್ಗದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಕೇಂದ್ರ ಸಚಿವರು ರೈಲ್ವೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ರೈಲಿನ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದರು, ವಂದೇ ಭಾರತ್ ಸ್ಲೀಪರ್ ರೈಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂಬುದನ್ನು ಗಮನಿಸಿದರು. ಈ ರೈಲಿನ 16-ಕೋಚ್ ಗಳ ರಚನೆಯು 11 ಎಸಿ ಮೂರು ಹಂತದ ಬೋಗಿಗಳು, ನಾಲ್ಕು ಎಸಿ ಎರಡು ಹಂತದ ಬೋಗಿಗಳು ಮತ್ತು ಒಂದು ಎಸಿ ಪ್ರಥಮ ದರ್ಜೆ ಬೋಗಿಗಳನ್ನು ಒಳಗೊಂಡಿದೆ. ಈ ವ್ಯವಸ್ಥೆ ಸುಮಾರು 823 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ, ಪ್ರಯಾಣಿಕರಿಗಾಗಿ ಅನುಕೂಲಕರವಾದ ಒಳಾಂಗಣ ವಿನ್ಯಾಸ ಮತ್ತು ಉನ್ನತ ನೈರ್ಮಲ್ಯ ಮಾನದಂಡಗಳೊಂದಿಗೆ, ಈ ರೈಲನ್ನು ಅತ್ಯುತ್ತಮ ಪ್ರಯಾಣ ಮತ್ತು ಸೌಕರ್ಯವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಸಮಯದಲ್ಲಿ ಆಯಾ ಪ್ರದೇಶದ ನಿರ್ದಿಷ್ಟ ಪಾಕಪದ್ಧತಿಯ ಆಹಾರಗಳನ್ನು ಸೇವಿಸಿ ಆನಂದಿಸಬಹುದಾಗಿದೆ. ಗುವಾಹಟಿಯಿಂದ ಹೊರಡುವ ರೈಲು ಅಧಿಕೃತ ಅಸ್ಸಾಂ ಶೈಲಿಯ ಪಾಕಪದ್ಧತಿಯನ್ನು ಒಳಗೊಂಡಿರುತ್ತದೆ, ಹಾಗೆಯೇ, ಕೋಲ್ಕತ್ತಾದಿಂದ ಹೊರಡುವ ರೈಲು ಸಾಂಪ್ರದಾಯಿಕ ಬಂಗಾಳಿ ಪ್ರಾಂತ್ಯದ ವಿಶೇಷ ಖಾದ್ಯಗಳನ್ನು  ಹೊಂದಿರುತ್ತದೆ, ಇದು ರೈಲಿನಲ್ಲಿರುವ ಪ್ರಯಾಣಿಕರಿಗೆ ಸಂತೋಷವಾದ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾದ ಊಟದ ಅನುಭವವನ್ನು ಖಾತ್ರಿಪಡಿಸುತ್ತದೆ.

ಗಂಟೆಗೆ 180 ಕಿ.ಮೀ. ವರೆಗಿನ ವೇಗದೊಂದಿಗೆ ವಿನ್ಯಾಸಗೊಳಿಸಲಾದ ಸೆಮಿ -ಹೈ-ಸ್ಪೀಡ್ ಸ್ಲೀಪರ್ ರೈಲು - ವಂದೇ ಭಾರತ್, ಅತಿ ಕಡಿಮೆ ಪ್ರಯಾಣದ ಸಮಯದ ಜೊತೆ ಆಧುನಿಕ ಸೌಕರ್ಯಗಳನ್ನೂ ಹೊಂದಿದೆ, ಇದು, ಪ್ರಯಾಣಿಕ-ಕೇಂದ್ರಿತ ಸೇವೆಗಳು ಮತ್ತು ತಾಂತ್ರಿಕ ನಾವೀನ್ಯತೆಯ ಮೇಲೆ ಭಾರತೀಯ ರೈಲ್ವೆ ವಿಶೇಷ ಗಮನಹರಿಸಿರುವುದನ್ನು ಎತ್ತಿ ತೋರುತ್ತದೆ.


*****


(रिलीज़ आईडी: 2211205) आगंतुक पटल : 35
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Malayalam