ಪ್ರಧಾನ ಮಂತ್ರಿಯವರ ಕಛೇರಿ
ಲಕ್ನೋದಲ್ಲಿ ರಾಷ್ಟ್ರ ಪ್ರೇರಣಾ ಸ್ಥಳ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
25 DEC 2025 6:05PM by PIB Bengaluru
ಭಾರತ್ ಮಾತಾ ಕಿ – ಜೈ!
ಭಾರತ್ ಮಾತಾ ಕಿ – ಜೈ!
ಭಾರತ್ ಮಾತಾ ಕಿ – ಜೈ!
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಹಿರಿಯ ಸಹೋದ್ಯೋಗಿ ಮತ್ತು ಲಕ್ನೋದ ಸಂಸತ್ ಸದಸ್ಯ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಿ; ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರೆ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಪಂಕಜ್ ಚೌಧರಿ ಜಿ, ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಜಿ, ಇಲ್ಲಿ ಉಪಸ್ಥಿತರಿರುವ ಇತರೆ ಸಚಿವರೆ, ಜನಪ್ರತಿನಿಧಿಗಳೆ, ಮಹಿಳೆಯರು ಮತ್ತು ಮಹನೀಯರೆ,
ಇಂದು ಈ ಲಕ್ನೋ ಭೂಮಿ ಸ್ಫೂರ್ತಿಯ ಹೊಸ ನೆಲೆಗೆ ಸಾಕ್ಷಿಯಾಗುತ್ತಿದೆ. ಅದರ ಬಗ್ಗೆ ವಿವರವಾಗಿ ಮಾತನಾಡುವ ಮೊದಲು, ನಾನು ದೇಶ ಮತ್ತು ಇಡೀ ವಿಶ್ವದ ಸಹೋದರ ಸಹೋದರಿಯರಿಗೆ ನನ್ನ ಕ್ರಿಸ್‌ಮಸ್ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಭಾರತದಲ್ಲಿಯೂ ಕೋಟ್ಯಂತರ ಕ್ರೈಸ್ತ ಕುಟುಂಬಗಳು ಹಬ್ಬ ಆಚರಿಸುತ್ತಿವೆ. ಈ ಕ್ರಿಸ್‌ಮಸ್ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷ ತರಲಿ! ಇದು ನಮ್ಮ ಆಶಯವೂ ಆಗಿದೆ.
ಸ್ನೇಹಿತರೆ,
ಡಿಸೆಂಬರ್ 25ರ ಈ ದಿನವು ರಾಷ್ಟ್ರದ ಇಬ್ಬರು ಮಹಾನ್ ಪುತ್ರರಾದ - ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಿ ಮತ್ತು ಭಾರತ ರತ್ನ ಮದನ್ ಮೋಹನ್ ಮಾಳವೀಯ ಜಿ ಅವರ ಜನ್ಮ ವಾರ್ಷಿಕೋತ್ಸವಗಳ ಅಪರೂಪದ ಮತ್ತು ಅದ್ಭುತ ಕಾಕತಾಳೀಯತೆಯೂ ಆಗಿದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ಭಾರತದ ಗುರುತು, ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿದರು, ರಾಷ್ಟ್ರ ನಿರ್ಮಾಣದ ಮೇಲೆ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ.
ಸ್ನೇಹಿತರೆ,
ಇಂದು ಡಿಸೆಂಬರ್ 25, ಮಹಾರಾಜ ಬಿಜ್ಲಿ ಪಾಸಿ ಅವರ ಜನ್ಮ ದಿನಾಚರಣೆಯನ್ನು ಸಹ ಸೂಚಿಸುತ್ತದೆ. ಲಕ್ನೋದ ಪ್ರಸಿದ್ಧ ಬಿಜ್ಲಿ ಪಾಸಿ ಕೋಟೆ ಇಲ್ಲಿಂದ ಹೆಚ್ಚು ದೂರದಲ್ಲಿಲ್ಲ. ಮಹಾರಾಜ ಬಿಜ್ಲಿ ಪಾಸಿ ಅವರು ಬಿಟ್ಟುಹೋದ ಶೌರ್ಯ, ಉತ್ತಮ ಆಡಳಿತ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಪರಂಪರೆಯನ್ನು ಪಾಸಿ ಸಮುದಾಯವು ಹೆಮ್ಮೆಯಿಂದ ಮುಂದುವರಿಸಿದೆ. 2000ರಲ್ಲಿ ಮಹಾರಾಜ ಬಿಜ್ಲಿ ಪಾಸಿ ಅವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದವರು ಅಟಲ್ ಜಿ ಎಂಬುದು ಕಾಕತಾಳೀಯ.
ಸ್ನೇಹಿತರೆ,
ಈ ಪವಿತ್ರ ದಿನದಂದು ನಾನು ಮಹಾನ್ ವ್ಯಕ್ತಿ ಮಾಳವೀಯ ಜಿ, ಅಟಲ್ ಜಿ ಮತ್ತು ಮಹಾರಾಜ ಬಿಜ್ಲಿ ಪಾಸಿ ಅವರಿಗೆ ಗೌರವದಿಂದ ನಮಸ್ಕರಿಸುತ್ತೇನೆ, ಅವರಿಗೆ ನನ್ನ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ.
ಸ್ನೇಹಿತರೆ,
ಸ್ವಲ್ಪ ಸಮಯದ ಹಿಂದೆ ನನಗೆ ಇಲ್ಲಿ ರಾಷ್ಟ್ರ ಪ್ರೇರಣಾ ಸ್ಥಳವನ್ನು ಉದ್ಘಾಟಿಸುವ ಸೌಭಾಗ್ಯ ಸಿಕ್ಕಿತು. ಈ ರಾಷ್ಟ್ರ ಪ್ರೇರಣಾ ಸ್ಥಳವು ಭಾರತಕ್ಕೆ ಸ್ವಾಭಿಮಾನ, ಏಕತೆ ಮತ್ತು ಸೇವೆಯ ಮಾರ್ಗವನ್ನು ತೋರಿಸಿದ ಆದರ್ಶಗಳ ಸಂಕೇತವಾಗಿದೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಎತ್ತರದ ಪ್ರತಿಮೆಗಳು ಇಲ್ಲಿವೆ, ಆದರೆ ಅವರು ನೀಡಿದ ಸ್ಫೂರ್ತಿ ಇನ್ನೂ ದೊಡ್ಡದಾಗಿದೆ. ಅಟಲ್ ಜಿ ಒಮ್ಮೆ ಬರೆದರು:
ನೀರವತಾ ಸೆ ಮುಖರಿತ್ ಮಧುಬನ್, ಪರಹಿತ ಅರ್ಪಿತ ಅಪನ ತನ-ಮನ, ಜೀವನ ಕೋ ಶತ-ಶತ ಆಹುತಿ, ಗತಿ, ಗಲನಾ ಹೋಗಾ. ಕದಮ ಮಿಲಾಕರ್ ಚಲನ ಹೋಗಾ.
(ಮೌನದಿಂದ, ಉದ್ಯಾನವು ಮಾತನಾಡುತ್ತದೆ;
ಇತರರ ಕಲ್ಯಾಣಕ್ಕಾಗಿ, ಒಬ್ಬರು ದೇಹ ಮತ್ತು ಆತ್ಮವನ್ನು ಅರ್ಪಿಸಬೇಕು.
ಜೀವನದ ಅಸಂಖ್ಯಾತ ಕೊಡುಗೆಗಳಲ್ಲಿ,
ಒಬ್ಬರು ಸುಡಬೇಕು, ಒಬ್ಬರು ಕರಗಬೇಕು.
ಆದರೆ ನಾವು ಒಟ್ಟಿಗೆ ಹೆಜ್ಜೆ ಹಾಕಬೇಕು.)
ಈ ರಾಷ್ಟ್ರ ಪ್ರೇರಣಾ ಸ್ಥಳವು ನಾವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆ, ನಾವು ಮಾಡುವ ಪ್ರತಿಯೊಂದು ಪ್ರಯತ್ನವನ್ನು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತಗೊಳಿಸಬೇಕು ಎಂಬ ಸಂದೇಶ ನೀಡುತ್ತದೆ. ಇದು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪವನ್ನು ಪೂರೈಸುವ ಎಲ್ಲರ ಸಾಮೂಹಿಕ ಪ್ರಯತ್ನವಾಗಿದೆ. ಈ ಆಧುನಿಕ ಸ್ಫೂರ್ತಿ ಕೇಂದ್ರಕ್ಕಾಗಿ ನಾನು ಉತ್ತರ ಪ್ರದೇಶದ ಲಕ್ನೋ ಮತ್ತು ಇಡೀ ರಾಷ್ಟ್ರವನ್ನು ಅಭಿನಂದಿಸುತ್ತೇನೆ. ಇದನ್ನು ಈಗಷ್ಟೇ ಉಲ್ಲೇಖಿಸಿ ವೀಡಿಯೊದಲ್ಲಿ ತೋರಿಸಿರುವಂತೆ, 30 ಎಕರೆಗಳಿಗಿಂತ ಹೆಚ್ಚು ವಿಸ್ತೀರ್ಣದ ಈ ಪ್ರೇರಣಾ ಸ್ಥಳವನ್ನು ನಿರ್ಮಿಸಲಾದ ಭೂಮಿ ಹಲವಾರು ದಶಕಗಳಿಂದ ಕಸದ ಬೆಟ್ಟವಾಗಿತ್ತು. ಕಳೆದ 3 ವರ್ಷಗಳಲ್ಲಿ ಅದನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಈ ಯೋಜನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳು, ಯೋಜಕರು ಹಾಗೂ ಯೋಗಿ ಜಿ ಮತ್ತು ಅವರ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರಾಷ್ಟ್ರಕ್ಕೆ ನಿರ್ದೇಶನ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ 2 ಸಂವಿಧಾನಗಳು, 2 ಧ್ವಜಗಳು ಮತ್ತು ಇಬ್ಬರು ಪ್ರಧಾನಮಂತ್ರಿಗಳ ವ್ಯವಸ್ಥೆಯನ್ನು ತಿರಸ್ಕರಿಸಿದವರು ಡಾ. ಮುಖರ್ಜಿ. ಸ್ವಾತಂತ್ರ್ಯದ ನಂತರವೂ, ಜಮ್ಮು-ಕಾಶ್ಮೀರದಲ್ಲಿನ ಈ ವ್ಯವಸ್ಥೆಯು ಭಾರತದ ಏಕತೆ ಮತ್ತು ಸಮಗ್ರತೆಗೆ ಪ್ರಮುಖ ಸವಾಲು ಒಡ್ಡಿತು. ನಮ್ಮ ಸರ್ಕಾರಕ್ಕೆ 370ನೇ ವಿಧಿಯ ತಡೆಗೋಡೆಯನ್ನು ಕೆಡವಲು ಅವಕಾಶ ಸಿಕ್ಕಿದೆ ಎಂಬುದಕ್ಕೆ ಬಿಜೆಪಿ ಹೆಮ್ಮೆಪಡುತ್ತದೆ. ಇಂದು ಜಮ್ಮು-ಕಾಶ್ಮೀರದಲ್ಲಿಯೂ ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ.
ಸ್ನೇಹಿತರೆ,
ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ಸಚಿವರಾಗಿ, ಡಾ. ಮುಖರ್ಜಿ ದೇಶದಲ್ಲಿ ಆರ್ಥಿಕ ಸ್ವಾವಲಂಬನೆಗೆ ಭದ್ರ ಅಡಿಪಾಯ ಹಾಕಿದರು. ಅವರು ರಾಷ್ಟ್ರಕ್ಕೆ ತನ್ನ ಮೊದಲ ಕೈಗಾರಿಕಾ ನೀತಿಯನ್ನು ನೀಡಿದರು, ಈ ಮೂಲಕ ಭಾರತದಲ್ಲಿ ಕೈಗಾರಿಕೀಕರಣಕ್ಕೆ ಅಡಿಪಾಯ ಹಾಕಿದರು. ಇಂದು ನಾವು ಸ್ವಾವಲಂಬನೆಯ ಮಂತ್ರವನ್ನೇ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ವಿಶ್ವಾದ್ಯಂತ ಮಾರುಕಟ್ಟೆಗಳನ್ನು ತಲುಪುತ್ತಿವೆ. ಉತ್ತರ ಪ್ರದೇಶವನ್ನು ನೋಡಿ! ಒಂದೆಡೆ, ಒಂದು ಜಿಲ್ಲೆ, ಒಂದು ಉತ್ಪನ್ನ ಬೃಹತ್ ಅಭಿಯಾನವು ಸಣ್ಣ ಕೈಗಾರಿಕೆಗಳು ಮತ್ತು ಘಟಕಗಳನ್ನು ಬಲಪಡಿಸುತ್ತಿದೆ. ಮತ್ತೊಂದೆಡೆ, ರಾಜ್ಯದಲ್ಲಿ ಪ್ರಮುಖ ರಕ್ಷಣಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಜಗತ್ತು ಕಂಡ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿಯನ್ನು ಈಗ ಲಕ್ನೋದಲ್ಲಿ ತಯಾರಿಸಲಾಗುತ್ತಿದೆ. ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ರಕ್ಷಣಾ ಉತ್ಪಾದನೆಗೆ ವಿಶ್ವಾದ್ಯಂತ ಹೆಸರುವಾಸಿಯಾಗುವ ದಿನ ದೂರವಿಲ್ಲ.
ಸ್ನೇಹಿತರೆ,
ದಶಕಗಳ ಹಿಂದೆ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಅಂತ್ಯೋದಯದ ಕನಸು ಕಂಡಿದ್ದರು. ಭಾರತದ ಪ್ರಗತಿಯ ನಿಜವಾದ ಅಳತೆಯು ಕೊನೆಯಲ್ಲಿ ನಿಂತ ವ್ಯಕ್ತಿಯ ಮುಖದಲ್ಲಿನ ನಗುವಿನಲ್ಲೇ ಪ್ರತಿಫಲಿಸುತ್ತದೆ ಎಂದು ಅವರು ನಂಬಿದ್ದರು. ದೇಹ, ಮನಸ್ಸು, ಬುದ್ಧಿಶಕ್ತಿ ಮತ್ತು ಆತ್ಮದ ಸಮಗ್ರ ಅಭಿವೃದ್ಧಿ ಕಲ್ಪಿಸುವ ಸಮಗ್ರ ಮಾನವತಾವಾದದ ತತ್ವಶಾಸ್ತ್ರವನ್ನು ದೀನದಯಾಳ್ ಜಿ ಅವರು ಸಹ ವ್ಯಕ್ತಪಡಿಸಿದರು. ಮೋದಿ ದೀನದಯಾಳ್ ಜಿ ಅವರ ಕನಸನ್ನು ತಮ್ಮ ಸ್ವಂತ ಸಂಕಲ್ಪವನ್ನಾಗಿ ಮಾಡಿಕೊಂಡಿದ್ದಾರೆ. ನಾವು ಅಂತ್ಯೋದಯವನ್ನು ಹೊಸ ವಿಧಾನದ ಮೂಲಕ ವಿಸ್ತರಿಸಿದ್ದೇವೆ, ಅಂದರೆ, ಪ್ರತಿಯೊಬ್ಬ ನಿರ್ಗತಿಕ ವ್ಯಕ್ತಿ ಮತ್ತು ಪ್ರತಿಯೊಬ್ಬ ಫಲಾನುಭವಿಯನ್ನು ಸರ್ಕಾರಿ ಕಲ್ಯಾಣ ಯೋಜನೆಗಳ ವ್ಯಾಪ್ತಿಯೊಳಗೆ ತರುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಪೂರ್ಣತೆಯ ಮನೋಭಾವ ಇದ್ದಾಗ, ಯಾವುದೇ ತಾರತಮ್ಯವಿರುವುದಿಲ್ಲ, ಅದೇ ನಿಜವಾದ ಉತ್ತಮ ಆಡಳಿತ, ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆ. ಇಂದು ಕೋಟ್ಯಂತರ ನಾಗರಿಕರು ಮೊದಲ ಬಾರಿಗೆ ತಾರತಮ್ಯವಿಲ್ಲದೆ ಶಾಶ್ವತ ಮನೆಗಳು, ಶೌಚಾಲಯಗಳು, ನಲ್ಲಿ ನೀರು, ವಿದ್ಯುತ್ ಮತ್ತು ಅನಿಲ ಸಂಪರ್ಕಗಳನ್ನು ಪಡೆಯುತ್ತಿರುವಾಗ, ಕೋಟ್ಯಂತರ ಜನರು ಮೊದಲ ಬಾರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿರುವಾಗ, ಮತ್ತು ಸಾಲಿನಲ್ಲಿ ನಿಂತಿರುವ ಕೊನೆಯ ವ್ಯಕ್ತಿಯನ್ನು ತಲುಪಲು ಪ್ರಯತ್ನಿಸುತ್ತಿರುವಾಗ, ಪಂಡಿತ್ ದೀನದಯಾಳ್ ಅವರ ದೃಷ್ಟಿಕೋನಕ್ಕೆ ನಿಜವಾಗಿಯೂ ನ್ಯಾಯ ಸಿಗುತ್ತಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ಕೋಟ್ಯಂತರ ಭಾರತೀಯರು ಬಡತನವನ್ನು ಹಿಂದಿಕ್ಕಿ ಬೆಳೆದಿದ್ದಾರೆ. ಬಿಜೆಪಿ ಸರ್ಕಾರವು ಹಿಂದುಳಿದವರಿಗೆ ಆದ್ಯತೆ ನೀಡಿದ್ದರಿಂದ ಮತ್ತು ಸಾಲಿನ ಕೊನೆಯಲ್ಲಿ ಇರುವವರಿಗೆ ಆದ್ಯತೆ ನೀಡಿದ್ದರಿಂದ ಇದು ಸಾಧ್ಯವಾಗಿದೆ.
ಸ್ನೇಹಿತರೆ,
2014ರ ಮೊದಲು, ಸುಮಾರು 25 ಕೋಟಿ ನಾಗರಿಕರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಒಳಪಟ್ಟಿದ್ದರು. ಅದು ಕೇವಲ 25 ಕೋಟಿ ಜನರು! ಇಂದು ಸುಮಾರು 95 ಕೋಟಿ ಭಾರತೀಯರು ಈ ರಕ್ಷಣಾತ್ಮಕ ಯೋಜನೆಗೆ ಒಳಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲೂ ಸಹ ಹೆಚ್ಚಿನ ಸಂಖ್ಯೆಯ ಜನರು ಇದರ ಪ್ರಯೋಜನ ಪಡೆದಿದ್ದಾರೆ. ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ಒಂದು ಕಾಲದಲ್ಲಿ ಬ್ಯಾಂಕ್ ಖಾತೆಗಳು ಕೆಲವೇ ಜನರಿಗೆ ಸೀಮಿತವಾಗಿದ್ದಂತೆ, ವಿಮೆಯೂ ಸಹ ಶ್ರೀಮಂತರಿಗೆ ಸೀಮಿತವಾಗಿತ್ತು. ನಮ್ಮ ಸರ್ಕಾರವು ಕೊನೆಯ ವ್ಯಕ್ತಿಗೆ ವಿಮಾ ಭದ್ರತೆ ವಿಸ್ತರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದಕ್ಕಾಗಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಪ್ರಾರಂಭಿಸಲಾಯಿತು, ಇದು ನಾಮಮಾತ್ರ ಕಂತಿನಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮಾ ರಕ್ಷಣೆ ಒದಗಿಸುತ್ತಿದೆ. ಇಂದು 25 ಕೋಟಿಗೂ ಹೆಚ್ಚು ಬಡ ನಾಗರಿಕರು ಈ ಯೋಜನೆಗೆ ಸಂಪರ್ಕ ಹೊಂದಿದ್ದಾರೆ. ಅದೇ ರೀತಿ, ಅಪಘಾತ ವಿಮೆಗಾಗಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಜಾರಿಗೆ ತರಲಾಗುತ್ತಿದೆ, ಸುಮಾರು 55 ಕೋಟಿ ಬಡ ನಾಗರಿಕರು ಇದರ ವ್ಯಾಪ್ತಿಗೆ ಬರುತ್ತಾರೆ. ಈ ಹಿಂದೆ ವಿಮೆಯ ಬಗ್ಗೆ ಯೋಚಿಸಲೂ ಸಾಧ್ಯವಾಗದ ನಾಗರಿಕರು ಇವರಾಗಿದ್ದರು.
ಸ್ನೇಹಿತರೆ,
ಈ ಯೋಜನೆಗಳ ಮೂಲಕ ಸುಮಾರು 25,000 ಕೋಟಿ ರೂಪಾಯಿ ಮೊತ್ತದ ಕ್ಲೇಮ್‌ಗಳನ್ನು ಪಾವತಿಸಲಾಗಿದೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಇದು ಸಾಧಾರಣ ಜೀವನವನ್ನು ನಡೆಸುವ ಸಾಮಾನ್ಯ ಬಡ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಹಣವು ಬಿಕ್ಕಟ್ಟಿನ ಸಮಯದಲ್ಲಿ ಬಡ ಕುಟುಂಬಗಳ ನೆರವಿಗೆ ಬಂದಿದೆ.
ಸ್ನೇಹಿತರೆ,
ಅಟಲ್ ಜಿ ಅವರ ಜನ್ಮ ದಿನಾಚರಣೆ ಇಂದು ಉತ್ತಮ ಆಡಳಿತವನ್ನು ಆಚರಿಸುವ ದಿನವೂ ಆಗಿದೆ. ಬಹಳ ಹಿಂದಿನಿಂದಲೂ ಈ ದೇಶದಲ್ಲಿ "ಗರೀಬಿ ಹಟಾವೊ"ನಂತಹ ಘೋಷಣೆಗಳನ್ನೇ ಆಡಳಿತ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಅಟಲ್ ಜಿ ನಿಜವಾಗಿಯೂ ಉತ್ತಮ ಆಡಳಿತವನ್ನು ವಾಸ್ತವಕ್ಕೆ ತಂದರು. ವಾಸ್ತವವಾಗಿ. ಇಂದು ಡಿಜಿಟಲ್ ಗುರುತಿನ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಅದರ ಅಡಿಪಾಯವನ್ನು ಅಟಲ್ ಜಿ ಅವರ ಸರ್ಕಾರವೇ ಹಾಕಿತ್ತು. ವಿಶೇಷ ಕಾರ್ಡ್‌ನಲ್ಲಿ ಪ್ರಾರಂಭವಾದ ಕೆಲಸವು ಇಂದು ಆಧಾರ್ ಎಂದು ಜಾಗತಿಕವಾಗಿ ಪ್ರಸಿದ್ಧವಾಗಿದೆ. ಭಾರತದಲ್ಲಿ ಟೆಲಿಕಾಂ ಕ್ರಾಂತಿಯನ್ನು ವೇಗಗೊಳಿಸಿದ ಕೀರ್ತಿ ಅಟಲ್ ಜಿ ಅವರಿಗೆ ಸಲ್ಲುತ್ತದೆ. ಅವರ ಸರ್ಕಾರ ರೂಪಿಸಿದ ಟೆಲಿಕಾಂ ನೀತಿಯು ಪ್ರತಿ ಮನೆಗೆ ದೂರವಾಣಿ ಮತ್ತು ಇಂಟರ್ನೆಟ್ ಕೊಂಡೊಯ್ಯುವುದನ್ನು ಸುಲಭಗೊಳಿಸಿತು, ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.
ಅಟಲ್ ಜಿ ಇಂದು ಎಲ್ಲೇ ಇದ್ದರೂ ಕಳೆದ 11 ವರ್ಷಗಳಲ್ಲಿ ಭಾರತವು ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದೆ ಎಂದು ತಿಳಿದರೆ ಅವರಿಗೆ ಸಂತೋಷವಾಗುತ್ತದೆ. ಅವರು ಸಂಸತ್ ಸದಸ್ಯರಾಗಿದ್ದ ಉತ್ತರ ಪ್ರದೇಶವು ಇಂದು ಭಾರತದ ನಂಬರ್ 1 ಮೊಬೈಲ್ ಉತ್ಪಾದನಾ ರಾಜ್ಯವಾಗಿದೆ.
ಸ್ನೇಹಿತರೆ,
ಸಂಪರ್ಕದ ಬಗ್ಗೆ ಅಟಲ್ ಜಿ ಅವರ ದೃಷ್ಟಿಕೋನವು 21ನೇ ಶತಮಾನದ ಭಾರತಕ್ಕೆ ಆರಂಭಿಕ ಶಕ್ತಿ ನೀಡಿತು. ಗ್ರಾಮಗಳನ್ನು ರಸ್ತೆಗಳೊಂದಿಗೆ ಸಂಪರ್ಕಿಸುವ ಅಭಿಯಾನವನ್ನು ಅವರ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಯಿತು. ಹೆದ್ದಾರಿಗಳ ವಿಸ್ತರಣೆಯ ಸುವರ್ಣ ಚತುರ್ಭುಜ ಯೋಜನೆ ಕೆಲಸವೂ ಆಗ ಪ್ರಾರಂಭವಾಯಿತು.
ಸ್ನೇಹಿತರೆ,
2000ನೇ ಇಸವಿಯಿಂದ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಇಲ್ಲಿಯವರೆಗೆ ಹಳ್ಳಿಗಳಲ್ಲಿ ಸುಮಾರು 8,00,000 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕಳೆದ 10–11 ವರ್ಷಗಳಲ್ಲಿ ಸುಮಾರು 4,00,000 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ.
ಸ್ನೇಹಿತರೆ,
ಇಂದು ದೇಶಾದ್ಯಂತ ಅಭೂತಪೂರ್ವ ವೇಗದಲ್ಲಿ ಎಕ್ಸ್‌ಪ್ರೆಸ್‌ವೇಗಳು ಎಷ್ಟು ವೇಗವಾಗಿ ನಿರ್ಮಿಸಲ್ಪಡುತ್ತಿವೆ ಎಂಬುದನ್ನು ನೀವೇ ನೋಡಬಹುದು. ಉತ್ತರ ಪ್ರದೇಶವೂ ಸಹ ಎಕ್ಸ್‌ಪ್ರೆಸ್‌ವೇ ರಾಜ್ಯವಾಗಿ ತನ್ನ ಗುರುತು ಸ್ಥಾಪಿಸುತ್ತಿದೆ. ದೆಹಲಿ ಮೆಟ್ರೋವನ್ನು ಪ್ರಾರಂಭಿಸಿದವರು ಅಟಲ್ ಜಿ. ಇಂದು ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿನ ಮೆಟ್ರೋ ಜಾಲಗಳು ಲಕ್ಷಾಂತರ ಜನರ ಜೀವನವನ್ನು ಸುಲಭಗೊಳಿಸುತ್ತಿವೆ. ಬಿಜೆಪಿ-ಎನ್‌ಡಿಎ ಸರ್ಕಾರವು ಸೃಷ್ಟಿಸಿದ ಉತ್ತಮ ಆಡಳಿತದ ಪರಂಪರೆಯನ್ನು ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಹೊಸ ಎತ್ತರಕ್ಕೆ ಮತ್ತು ಹೊಸ ಆಯಾಮಗಳಿಗೆ ಕೊಂಡೊಯ್ಯುತ್ತಿವೆ.
ಸ್ನೇಹಿತರೆ,
ಈ ಮೂವರು ಮಹಾನ್ ವ್ಯಕ್ತಿಗಳಾದ ಡಾ. ಮುಖರ್ಜಿ, ಪಂಡಿತ್ ದೀನದಯಾಳ್ ಜಿ ಮತ್ತು ಅಟಲ್ ಜಿ ಅವರಿಂದ ಪಡೆದ ಸ್ಫೂರ್ತಿ, ಅವರ ದೂರದೃಷ್ಟಿಯ ಕೆಲಸ ಮತ್ತು ಈ ಎತ್ತರದ ಪ್ರತಿಮೆಗಳು ಒಟ್ಟಾಗಿ 'ವಿಕಸಿತ ಭಾರತ'ಕ್ಕೆ ಬಲವಾದ ಅಡಿಪಾಯ ರೂಪಿಸುತ್ತವೆ. ಇಂದು ಈ ಪ್ರತಿಮೆಗಳು ನಮಗೆ ನವೀಕೃತ ಶಕ್ತಿಯನ್ನು ತುಂಬುತ್ತಿವೆ. ಆದರೆ ಸ್ವಾತಂತ್ರ್ಯದ ನಂತರ ಭಾರತದಲ್ಲಿ ಪ್ರತಿಯೊಂದು ಒಳ್ಳೆಯ ಕೆಲಗಳವನ್ನು ಒಂದೇ ಕುಟುಂಬಕ್ಕೆ ಆರೋಪಿಸುವ ಪ್ರವೃತ್ತಿ ಹೇಗೆ ಬೆಳೆದಿದೆ ಎಂಬುದನ್ನು ನಾವು ಮರೆಯಬಾರದು. ಅದು ಪುಸ್ತಕಗಳಾಗಲಿ, ಸರ್ಕಾರಿ ಯೋಜನೆಗಳಾಗಲಿ, ಸರ್ಕಾರಿ ಸಂಸ್ಥೆಗಳಾಗಲಿ, ಲೇನ್‌ಗಳು, ರಸ್ತೆಗಳು ಅಥವಾ ಸಾರ್ವಜನಿಕ ಚೌಕಗಳಾಗಲಿ, ಎಲ್ಲವೂ ಒಂದು ಕುಟುಂಬವನ್ನು ವೈಭವೀಕರಿಸುವ ಕಸರತ್ತಾಯಿತು. ಹೆಸರುಗಳು, ಪ್ರತಿಮೆಗಳು, ಎಲ್ಲವೂ ಅವರ ಸುತ್ತ ಸುತ್ತುತ್ತವೆ. ಒಂದೇ ಕುಟುಂಬದಿಂದ ಸೆರೆಹಿಡಿಯಲ್ಪಟ್ಟ ಈ ಹಳೆಯ ಪ್ರವೃತ್ತಿಯಿಂದ ಬಿಜೆಪಿ ರಾಷ್ಟ್ರವನ್ನು ಮುಕ್ತಗೊಳಿಸಿದೆ. ಭಾರತ ಮಾತೆಗೆ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಅಮರ ಮಗ ಮತ್ತು ಮಗಳ ಕೊಡುಗೆಯನ್ನು ನಮ್ಮ ಸರ್ಕಾರ ಗೌರವಿಸುತ್ತಿದೆ. ನಾನು ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಇಂದು ದೆಹಲಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯು ಕರ್ತವ್ಯ ಮಾರ್ಗದಲ್ಲಿ ನಿಂತಿದೆ. ನೇತಾಜಿ ತ್ರಿವರ್ಣ ಧ್ವಜವನ್ನು ಹಾರಿಸಿದ ಅಂಡಮಾನ್‌ನಲ್ಲಿರುವ ದ್ವೀಪವು ಈಗ ಅವರ ಹೆಸರನ್ನು ಹೊಂದಿದೆ.
ಸ್ನೇಹಿತರೆ,
ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿ ಹಾಕಲು ಹೇಗೆ ಪ್ರಯತ್ನಗಳು ನಡೆದವು ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್‌ನ ಆಡಳಿತ ಕುಟುಂಬವು ಈ ಗಂಭೀರ ತಪ್ಪು ಮಾಡಿತು, ಇಲ್ಲಿ ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷವು ಅದನ್ನೇ ಮಾಡಲು ಧೈರ್ಯ ಮಾಡಿತು. ಆದರೆ ಬಿಜೆಪಿ ಬಾಬಾಸಾಹೇಬ್ ಅವರ ಪರಂಪರೆಯನ್ನು ಅಳಿಸಲು ಬಿಡಲಿಲ್ಲ. ಇಂದು ದೆಹಲಿಯಿಂದ ಲಂಡನ್‌ವರೆಗೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಂಚ ತೀರ್ಥಗಳು ಅವರ ಪರಂಪರೆಯನ್ನು ಘೋಷಿಸುತ್ತಿವೆ ಮತ್ತು ಆಚರಿಸುತ್ತಿವೆ.
ಸ್ನೇಹಿತರೆ,
ನೂರಾರು ರಾಜಪ್ರಭುತ್ವದ ರಾಜ್ಯಗಳಾಗಿ ಛಿದ್ರಗೊಂಡಿದ್ದ ನಮ್ಮ ದೇಶವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಒಂದುಗೂಡಿಸಿದರು. ಆದರೆ ಸ್ವಾತಂತ್ರ್ಯದ ನಂತರ, ಅವರ ಕೆಲಸ ಮತ್ತು ಅವರ ಸ್ಥಾನಮಾನ ಎರಡನ್ನೂ ಕುಗ್ಗಿಸಲು ಪ್ರಯತ್ನಿಸಲಾಯಿತು. ಸರ್ದಾರ್ ಸಾಹಿಬ್ ಅವರಿಗೆ ನಿಜವಾಗಿಯೂ ಅರ್ಹವಾದ ಗೌರವ ಮತ್ತು ಮನ್ನಣೆಯನ್ನು ನೀಡಿದ್ದು ಬಿಜೆಪಿ. ಬಿಜೆಪಿ ಅವರ ಗೌರವಾರ್ಥ ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಿತು, ಏಕ್ತಾ ನಗರ ಎಂದು ಕರೆಯಲ್ಪಡುವ ಸ್ಪೂರ್ತಿದಾಯಕ ಸ್ಥಳವನ್ನು ಅಭಿವೃದ್ಧಿಪಡಿಸಿತು. ಈಗ, ರಾಷ್ಟ್ರವು ಪ್ರತಿ ವರ್ಷ ಅಕ್ಟೋಬರ್ 31ರಂದು ಅಲ್ಲಿ ರಾಷ್ಟ್ರೀಯ ಏಕತಾ ದಿನದ ಮುಖ್ಯ ಆಚರಣೆಯನ್ನು ಮಾಡುತ್ತಿದೆ.
ಸ್ನೇಹಿತರೆ,
ದಶಕಗಳಿಂದ, ಬುಡಕಟ್ಟು ಸಮುದಾಯಗಳ ಕೊಡುಗೆಗಳಿಗೂ ಸರಿಯಾದ ಸ್ಥಾನಮಾನ ನೀಡಲಾಗಿಲ್ಲ. ಭಗವಾನ್ ಬಿರ್ಸಾ ಮುಂಡಾ ಅವರ ಭವ್ಯ ಸ್ಮಾರಕ ನಿರ್ಮಿಸಿದ್ದು ನಮ್ಮ ಸರ್ಕಾರ. ಕೆಲವೇ ವಾರಗಳ ಹಿಂದೆ, ಛತ್ತೀಸ್‌ಗಢದಲ್ಲಿ ಶಹೀದ್ ವೀರ್ ನಾರಾಯಣ್ ಸಿಂಗ್ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಾಯಿತು.
ಸ್ನೇಹಿತರೆ,
ದೇಶಾದ್ಯಂತ ಇಂತಹ ಅನೇಕ ಉದಾಹರಣೆಗಳಿವೆ. ಉತ್ತರ ಪ್ರದೇಶದಲ್ಲೂ ಮಹಾರಾಜ ಸುಹೇಲ್‌ದೇವ್ ಅವರ ವಿಚಾರ ತೆಗೆದುಕೊಳ್ಳಿ. ಅವರಿಗೆ ಸಮರ್ಪಿತವಾದ ಸ್ಮಾರಕವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ನಿರ್ಮಿಸಲಾಯಿತು. ಇಲ್ಲಿ, ನಿಷಾದರಾಜ್ ಮತ್ತು ಭಗವಾನ್ ಶ್ರೀರಾಮನ ಸಭೆಯ ಸ್ಥಳವು ಅಂತಿಮವಾಗಿ ಅದಕ್ಕೆ ಅರ್ಹವಾದ ಗೌರವ ಮತ್ತು ಮನ್ನಣೆಯನ್ನು ಪಡೆದುಕೊಂಡಿದೆ. ರಾಜ ಮಹೇಂದ್ರ ಪ್ರತಾಪ್ ಸಿಂಗ್‌ರಿಂದ ಚೌರಿ ಚೌರಾದ ಹುತಾತ್ಮರವರೆಗೆ, ಭಾರತ ಮಾತೆಯ ಈ ಪುತ್ರರ ಕೊಡುಗೆಗಳನ್ನು ಪೂರ್ಣ ಗೌರವ ಮತ್ತು ನಮ್ರತೆಯಿಂದ ನೆನಪಿಸಿಕೊಂಡಿದ್ದು ಬಿಜೆಪಿ ಸರ್ಕಾರ.
ಸ್ನೇಹಿತರೆ,
ವಂಶ ಪಾರಂಪರ್ಯದಿಂದ ನಡೆಸಲ್ಪಡುವ ರಾಜಕೀಯವು ವಿಶಿಷ್ಟ ಲಕ್ಷಣವನ್ನು ಹೊಂದಿದೆ: ಅದು ಅಭದ್ರತೆಯಲ್ಲಿ ಬೇರೂರಿದೆ. ಅದಕ್ಕಾಗಿಯೇ, ವಂಶ ಪಾರಂಪರ್ಯದ ರಾಜಕಾರಣಿಗಳಿಗೆ ಇತರರನ್ನು ಲಘುವಾಗಿ ಕಾಣುವುದು ಕಡ್ಡಾಯವಾಗುತ್ತದೆ, ಇದರಿಂದಾಗಿ ಅವರ ಸ್ವಂತ ಕುಟುಂಬವು ದೊಡ್ಡದಾಗಿ ಕಾಣುತ್ತದೆ, ಅವರ ಉದ್ಯಮವು ಮುಂದುವರಿಯುತ್ತದೆ. ಈ ಮನಸ್ಥಿತಿಯು ಭಾರತದಲ್ಲಿ ರಾಜಕೀಯ ಅಸ್ಪೃಶ್ಯತೆಗೆ ಕಾರಣವಾಯಿತು. ಸ್ವತಂತ್ರ ಭಾರತದಲ್ಲಿ ಅನೇಕ ಪ್ರಧಾನ ಮಂತ್ರಿಗಳು ಇದ್ದರು, ಆದರೆ ರಾಜಧಾನಿ ದೆಹಲಿಯಲ್ಲಿ, ಅಸ್ತಿತ್ವದಲ್ಲಿದ್ದ ವಸ್ತುಸಂಗ್ರಹಾಲಯವು ಹಲವಾರು ಮಾಜಿ ಪ್ರಧಾನ ಮಂತ್ರಿಗಳನ್ನು ನಿರ್ಲಕ್ಷಿಸಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಿದ್ದು ಬಿಜೆಪಿ ಮತ್ತು ಎನ್‌ಡಿಎ. ಇಂದು ನೀವು ದೆಹಲಿಗೆ ಹೋದಾಗ, ಪ್ರಧಾನ ಮಂತ್ರಿಗಳ ಭವ್ಯ ವಸ್ತುಸಂಗ್ರಹಾಲಯವು ನಿಮ್ಮನ್ನು ಸ್ವಾಗತಿಸುತ್ತದೆ, ಅಲ್ಲಿ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಧಾನ ಮಂತ್ರಿ, ಅವರ ಅಧಿಕಾರಾವಧಿ ಎಷ್ಟೇ ಕಡಿಮೆಯಿದ್ದರೂ, ಅವರಿಗೆ ಸರಿಯಾದ ಗೌರವ ಮತ್ತು ಸ್ಥಳ ನೀಡಲಾಗಿದೆ.
ಸ್ನೇಹಿತರೆ,
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯಾವಾಗಲೂ ಬಿಜೆಪಿಯನ್ನು ರಾಜಕೀಯವಾಗಿ "ಅಸ್ಪೃಶ್ಯ"ವಾಗಿರಿಸಿದ್ದವು. ಆದರೆ ಬಿಜೆಪಿಯ ಮೌಲ್ಯಗಳು ಎಲ್ಲರನ್ನೂ ಗೌರವಿಸಲು ನಮಗೆ ಕಲಿಸುತ್ತವೆ. ಕಳೆದ 11 ವರ್ಷಗಳ ಬಿಜೆಪಿ ಮತ್ತು ಎನ್‌ಡಿಎ ಆಡಳಿತದಲ್ಲಿ, ನರಸಿಂಹರಾವ್ ಜಿ ಮತ್ತು ಪ್ರಣಬ್ ಬಾಬು ಅವರಿಗೆ ಭಾರತ ರತ್ನ ನೀಡಲಾಗಿದೆ. ಮುಲಾಯಂ ಸಿಂಗ್ ಯಾದವ್ ಜಿ ಮತ್ತು ತರುಣ್ ಗೊಗೊಯ್ ಜಿ ಸೇರಿದಂತೆ ಅನೇಕ ನಾಯಕರನ್ನು ರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಗೌರವಿಸಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷದಿಂದ ಇಂತಹ ಸನ್ನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರ ಆಡಳಿತದ ಸಮಯದಲ್ಲಿ, ಬಿಜೆಪಿ ನಾಯಕರು ಅವಮಾನವನ್ನು ಮಾತ್ರ ಪಡೆದರು.
ಸ್ನೇಹಿತರೆ,
ಉತ್ತರ ಪ್ರದೇಶವು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದೆ. 21ನೇ ಶತಮಾನದ ಭಾರತದಲ್ಲಿ ಉತ್ತರ ಪ್ರದೇಶವು ತನಗಾಗಿ ಒಂದು ವಿಶಿಷ್ಟ ಗುರುತು ರೂಪಿಸಿಕೊಳ್ಳುತ್ತಿದೆ. ನಾನು ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿರುವುದು ನನ್ನ ಅದೃಷ್ಟ. ಇಂದು ಉತ್ತರ ಪ್ರದೇಶದ ಶ್ರಮಶೀಲ ಜನರು ಹೊಸ ಭವಿಷ್ಯ ಬರೆಯುತ್ತಿದ್ದಾರೆ ಎಂದು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ. ಯುಪಿಯನ್ನು ಕಳಪೆ ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ಮಾತ್ರ ಚರ್ಚಿಸಲಾಗುತ್ತಿದ್ದ ಕಾಲವಿತ್ತು ಇಂದು ಯುಪಿಯನ್ನು ಅದರ ಅಭಿವೃದ್ಧಿಗಾಗಿ ಚರ್ಚಿಸಲಾಗುತ್ತಿದೆ. ಇಂದು ಯುಪಿ ದೇಶದ ಪ್ರವಾಸೋದ್ಯಮ ನಕ್ಷೆಯಲ್ಲಿ ವೇಗವಾಗಿ ಹೊರಹೊಮ್ಮುತ್ತಿದೆ. ಅಯೋಧ್ಯೆಯಲ್ಲಿರುವ ಭವ್ಯ ರಾಮ ಮಂದಿರ ಮತ್ತು ಕಾಶಿ ವಿಶ್ವನಾಥ ಧಾಮವು ಯುಪಿಯ ಹೊಸ ಜಾಗತಿಕ ಗುರುತಿನ ಸಂಕೇತಗಳಾಗಿವೆ. ರಾಷ್ಟ್ರ ಪ್ರೇರಣಾ ಸ್ಥಳದಂತಹ ಆಧುನಿಕ ಬೆಳವಣಿಗೆಗಳು ರಾಜ್ಯದ ಹೊಸ ಚಿತ್ರಣವನ್ನು ಮತ್ತಷ್ಟು ಬೆಳಗಿಸುತ್ತಿವೆ.
ಸ್ನೇಹಿತರೆ,
ನಮ್ಮ ಉತ್ತರ ಪ್ರದೇಶವು ಉತ್ತಮ ಆಡಳಿತ, ಸಮೃದ್ಧಿ ಮತ್ತು ನಿಜವಾದ ಸಾಮಾಜಿಕ ನ್ಯಾಯದ ಮಾದರಿಯಾಗಿ ಇನ್ನೂ ಹೆಚ್ಚಿನ ಎತ್ತರ ತಲುಪುತ್ತದೆ ಎಂಬ ಆಶಯದೊಂದಿಗೆ, ರಾಷ್ಟ್ರ ಪ್ರೇರಣಾ ಸ್ಥಳಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ
ನಾನು ಹೇಳುತ್ತೇನೆ: ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಎಂದು, ನೀವು ಅಮರ್ ರಹೇ, ಅಮರ್ ರಹೇ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತೀರಿ.
ನಾನು ಹೇಳುತ್ತೇನೆ: ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀ ಎಂದು, ನೀವು ಅಮರ್ ರಹೇ, ಅಮರ್ ರಹೇ ಎಂದು ಪ್ರತಿಕ್ರಿಯಿಸುತ್ತೀರಿ.
ನಾನು ಹೇಳುತ್ತೇನೆ: ಅಟಲ್ ಬಿಹಾರಿ ವಾಜಪೇಯಿ ಜೀ ಎಂದು, ನೀವು ಪ್ರತಿಕ್ರಿಯಿಸುತ್ತೀರಿ, ಅಮರ್ ರಹೇ, ಅಮರ್ ರಹೇ.
ಶ್ಯಾಮ ಪ್ರಸಾದ್ ಮುಖರ್ಜಿ - ಅಮರ್ ರಹೇ, ಅಮರ್ ರಹೇ.
ಶ್ಯಾಮ ಪ್ರಸಾದ್ ಮುಖರ್ಜಿ - ಅಮರ್ ರಹೇ, ಅಮರ್ ರಹೇ.
ಶ್ಯಾಮ ಪ್ರಸಾದ್ ಮುಖರ್ಜಿ - ಅಮರ್ ರಹೇ, ಅಮರ್ ರಹೇ.
ಪಂಡಿತ್ ದೀನದಯಾಳ್ ಜಿ - ಅಮರ್ ರಹೇ, ಅಮರ್ ರಹೇ.
ಪಂಡಿತ್ ದೀನದಯಾಳ್ ಜಿ - ಅಮರ್ ರಹೇ, ಅಮರ್ ರಹೇ.
ಪಂಡಿತ್ ದೀನದಯಾಳ್ ಜಿ - ಅಮರ್ ರಹೇ, ಅಮರ್ ರಹೇ.
ಅಟಲ್ ಬಿಹಾರಿ ವಾಜಪೇಯಿ ಜೀ - ಅಮರ್ ರಹೇ, ಅಮರ್ ರಹೇ.
ಅಟಲ್ ಬಿಹಾರಿ ವಾಜಪೇಯಿ ಜೀ - ಅಮರ್ ರಹೇ, ಅಮರ್ ರಹೇ.
ಅಟಲ್ ಬಿಹಾರಿ ವಾಜಪೇಯಿ ಜೀ - ಅಮರ್ ರಹೇ, ಅಮರ್ ರಹೇ.
ಭಾರತ್ ಮಾತಾ ಕಿ - ಜೈ!
ವಂದೇ ಮಾತರಂ!
ವಂದೇ ಮಾತರಂ!
ತುಂಬು ಧನ್ಯವಾದಗಳು.
*****
(रिलीज़ आईडी: 2209122)
आगंतुक पटल : 26
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Bengali
,
Manipuri
,
Punjabi
,
Gujarati
,
Odia
,
Malayalam