ಪ್ರಧಾನ ಮಂತ್ರಿಯವರ ಕಛೇರಿ
ಅಸ್ಸಾಂನ ನಮ್ರಪ್‌ನಲ್ಲಿ ಯೂರಿಯಾ ಉತ್ಪಾದನಾ ಸ್ಥಾವರದ ಭೂಮಿಪೂಜೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
21 DEC 2025 4:25PM by PIB Bengaluru
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿ ಮತ್ತು ಇಲ್ಲಿ ನಿಮ್ಮ ಪ್ರತಿನಿಧಿ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಸಂಸತ್ ಸದಸ್ಯರೆ, ವಿಧಾನಸಭಾ ಸದಸ್ಯರೆ, ಇತರೆ ಗಣ್ಯರೆ ಮತ್ತು ನಮ್ಮನ್ನು ಆಶೀರ್ವದಿಸಲು ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವ ನನ್ನ ಎಲ್ಲಾ ಸಹೋದರ ಸಹೋದರಿಯರೆ, ಸಮಾರಂಭದ ಒಳಗೆ ಇರುವುದಕ್ಕಿಂತ ಹೊರಗಿರುವ ಹೆಚ್ಚಿನ ಜನರನ್ನು ನಾನು ನೋಡುತ್ತಿದ್ದೇನೆ.
ಸೌಲುಂಗ್ ಸುಕಫಾ ಮತ್ತು ಮಹಾವೀರ್ ಲಚಿತ್ ಬೋರ್ಫುಕನ್ ಅವರಂತಹ ವೀರರ ಈ ಭೂಮಿ, ಭಿಂಬರ್ ದೇವೂರಿ, ಹುತಾತ್ಮ ಕುಸಲ್ ಕುವರ್, ಮೋರನ್ ರಾಜಾ ಬೊಡೌಸಾ, ಮಾಲತಿ ಮೇಮ್, ಇಂದಿರಾ ಮಿರಿ, ಸ್ವರ್ಗದೇವ್ ಸರ್ಬಾನಂದ ಸಿಂಗ್ ಮತ್ತು ಯೋಧ ಮಹಿಳೆ ಸತಿ ಸಾಧ್ನಿ ಅವರ ಈ ತಪೋಭೂಮಿ, ಉಜಾನಿ ಅಸ್ಸಾಂನ ಈ ಪುಣ್ಯ ಭೂಮಿಗೆ ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ.
ಸ್ನೇಹಿತರೆ,
ದೂರದಲ್ಲಿರುವ ನೀವೆಲ್ಲರೂ ನಿಮ್ಮ ಉತ್ಸಾಹ, ಚೈತನ್ಯ ಮತ್ತು ವಾತ್ಸಲ್ಯ ಸುರಿಸುತ್ತಿರುವುದನ್ನು ನಾನು ನೋಡಬಲ್ಲೆ. ವಿಶೇಷವಾಗಿ, ನನ್ನ ತಾಯಂದಿರು ಮತ್ತು ಸಹೋದರಿಯರೆ, ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ತಂದಿರುವ ಪ್ರೀತಿ ಮತ್ತು ಆಶೀರ್ವಾದಗಳು ನಮಗೆ ದೊಡ್ಡ ಶಕ್ತ ಮತ್ತು ಅದ್ಭುತ ಭಾವನೆಯಾಗಿದೆ. ನನ್ನ ಅನೇಕ ಸಹೋದರಿಯರು ಅಸ್ಸಾಂನ ಚಹಾ ತೋಟಗಳ ಸುಗಂಧವನ್ನು ಹೊತ್ತು ತಂದಿದ್ದಾರೆ. ಚಹಾದ ಈ ಸುವಾಸನೆಯು ಅಸ್ಸಾಂನೊಂದಿಗಿನ ನನ್ನ ಸಂಬಂಧದಲ್ಲಿ ಬಹಳ ವಿಶೇಷವಾದ ಭಾವನೆಯನ್ನು ಹುಟ್ಟುಹಾಕುತ್ತದೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸುತ್ತೇನೆ. ಈ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೆ,
ಇಂದು ಅಸ್ಸಾಂ ಮತ್ತು ಇಡೀ ಈಶಾನ್ಯಕ್ಕೆ ಒಂದು ಅದ್ಭುತ ದಿನವಾಗಿದೆ. ನಮೃಪ್ ಮತ್ತು ದಿಬ್ರುಗಢದ ಬಹುನಿರೀಕ್ಷಿತ ಕನಸು ಇಂದು ಅಂತಿಮವಾಗಿ ನನಸಾಗುತ್ತಿದೆ, ಈ ಇಡೀ ಪ್ರದೇಶದಲ್ಲಿ ಕೈಗಾರಿಕಾ ಪ್ರಗತಿಯ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ, ನಾನು ಇಲ್ಲಿ ಅಮೋನಿಯಾ-ಯೂರಿಯಾ ರಸಗೊಬ್ಬರ ಉತ್ಪಾದನೆ ಸ್ಥಾವರಕ್ಕೆ ಭೂಮಿಪೂಜೆ ನೆರವೇರಿಸಿದ್ದೇನೆ. ದಿಬ್ರುಗಢಕ್ಕೆ ಬರುವ ಮೊದಲು, ನಾನು ಗುವಾಹತಿಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟಿಸಿದೆ. ಅಸ್ಸಾಂ ಅಭಿವೃದ್ಧಿಯ ಹೊಸ ವೇಗ ಪಡೆದುಕೊಂಡಿದೆ ಎಂದು ಎಲ್ಲರೂ ಇಂದು ಹೇಳುತ್ತಿದ್ದಾರೆ. ನೀವು ಈಗ ನೋಡುತ್ತಿರುವುದು, ಅನುಭವಿಸುತ್ತಿರುವುದು ಕೇವಲ ಆರಂಭ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾವು ಅಸ್ಸಾಂ ಅನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಬೇಕು. ನಿಮ್ಮೆಲ್ಲರನ್ನೂ ನಮ್ಮೊಂದಿಗೆ ಕರೆದುಕೊಂಡು ನಾವು ಮುಂದುವರಿಯಬೇಕು. ಅಹೋಮ್ ಸಾಮ್ರಾಜ್ಯದ ಅವಧಿಯಲ್ಲಿ ಅಸ್ಸಾಂ ಹೊಂದಿದ್ದ ಶಕ್ತಿ ಮತ್ತು ಪಾತ್ರ, ಅಸ್ಸಾಂ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಅಷ್ಟೇ ಶಕ್ತಿಶಾಲಿ ಭೂಮಿಯಾಗಲಿದೆ. ಹೊಸ ಕೈಗಾರಿಕೆಗಳ ಆರಂಭ, ಆಧುನಿಕ ಮೂಲಸೌಕರ್ಯಗಳ ನಿರ್ಮಾಣ, ಸೆಮಿಕಂಡಕ್ಟರ್ ಗಳು ಮತ್ತು ಅವುಗಳ ಉತ್ಪಾದನೆಯಲ್ಲಿ ಪ್ರಗತಿ, ಕೃಷಿ ಕ್ಷೇತ್ರದಲ್ಲಿ ಹೊಸ ಅವಕಾಶಗಳು, ಚಹಾ ತೋಟಗಳು ಮತ್ತು ಅವುಗಳ ಕಾರ್ಮಿಕರ ಪ್ರಗತಿ ಮತ್ತು ಪ್ರವಾಸೋದ್ಯಮದಲ್ಲಿ ಬೆಳೆಯುತ್ತಿರುವ ಸಾಮರ್ಥ್ಯದೊಂದಿಗೆ, ಅಸ್ಸಾಂ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿದೆ. ಈ ಆಧುನಿಕ ರಸಗೊಬ್ಬರ ಘಟಕಕ್ಕಾಗಿ ನಿಮ್ಮೆಲ್ಲರಿಗೂ ಮತ್ತು ದೇಶದ ಎಲ್ಲಾ ರೈತ ಸಹೋದರ ಸಹೋದರಿಯರಿಗೂ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ. ಗುವಾಹತಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಸ್ಥಾಪನೆಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಬಿಜೆಪಿಯ ಡಬಲ್-ಎಂಜಿನ್ ಸರ್ಕಾರವು ಉದ್ಯಮ ಮತ್ತು ಸಂಪರ್ಕದ ಕ್ಷೇತ್ರದಲ್ಲಿ ಅಸ್ಸಾಂನ ಆಕಾಂಕ್ಷೆಗಳನ್ನು ಈಡೇರಿಸುತ್ತಿದೆ, ನಮ್ಮ ಯುವಕರಿಗೆ ದೊಡ್ಡ ಕನಸು ಕಾಣಲು ಸ್ಫೂರ್ತಿ ನೀಡುತ್ತಿದೆ.
ಸ್ನೇಹಿತರೆ,
ನಮ್ಮ ದೇಶದ ರೈತರು, ನಮ್ಮ ಅನ್ನದಾತರು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ನಮ್ಮ ಸರ್ಕಾರ ರೈತರ ಹಿತಾಸಕ್ತಿಗಳನ್ನು ಪ್ರಮುಖವಾಗಿಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿದೆ. ಇಲ್ಲಿ ನೀವೆಲ್ಲರೂ ರೈತಸ್ನೇಹಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದೀರಿ. ಕೃಷಿ ಕಲ್ಯಾಣ ಯೋಜನೆಗಳ ಜತೆಗೆ, ನಮ್ಮ ರೈತರು ನಿರಂತರವಾಗಿ ರಸಗೊಬ್ಬರಗಳ ಪೂರೈಕೆ ಮುಂದುವರಿಸುವುದು ಸಹ ಮುಖ್ಯವಾಗಿದೆ. ಈ ಯೂರಿಯಾ ಸ್ಥಾವರವು ಮುಂಬರುವ ವರ್ಷಗಳಲ್ಲಿ ಇದನ್ನು ಖಚಿತಪಡಿಸುತ್ತದೆ. ಈ ರಸಗೊಬ್ಬರ ಯೋಜನೆಗೆ ಸುಮಾರು 11 ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು. ಪ್ರತಿ ವರ್ಷ 12 ಲಕ್ಷ ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ರಸಗೊಬ್ಬರವನ್ನು ಇಲ್ಲಿ ಉತ್ಪಾದಿಸಲಾಗುವುದು. ಇಲ್ಲಿ ಉತ್ಪಾದನೆ ನಡೆದಾಗ, ಪೂರೈಕೆ ವೇಗವಾಗಿರುತ್ತದೆ ಮತ್ತು ಸರಕು ಸಾಗಣೆ ವೆಚ್ಚಗಳು ಕಡಿಮೆಯಾಗುತ್ತವೆ.
ಸ್ನೇಹಿತರೆ,
ನಮ್ರಪ್‌ನ ಈ ಘಟಕವು ಸಾವಿರಾರು ಹೊಸ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಾವರವು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ತಕ್ಷಣ ಅನೇಕ ಜನರಿಗೆ ಇಲ್ಲಿಯೇ ಕಾಯಂ ಉದ್ಯೋಗಗಳು ಸಿಗುತ್ತವೆ. ಇದಲ್ಲದೆ, ನಿರ್ವಹಣೆ, ಪೂರೈಕೆ ಮತ್ತು ನಿರ್ಮಾಣ ಸೇರಿದಂತೆ ಸ್ಥಾವರಕ್ಕೆ ಸಂಬಂಧಿಸಿದ ದೊಡ್ಡ ಪ್ರಮಾಣದ ಕೆಲಸಗಳು ನಡೆಯುತ್ತವೆ. ಈ ಎಲ್ಲಾ ಕ್ಷೇತ್ರಗಳಲ್ಲಿ, ಸ್ಥಳೀಯ ಜನರು, ವಿಶೇಷವಾಗಿ ನಮ್ಮ ಯುವಜನರು ಉದ್ಯೋಗವನ್ನು ಕಂಡುಕೊಳ್ಳುತ್ತಾರೆ.
ಸಹೋದರ ಸಹೋದರಿಯರೆ,
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ರೈತರ ಕಲ್ಯಾಣಕ್ಕಾಗಿ ಕೆಲಸ ಏಕೆ ನಡೆಯುತ್ತಿದೆ ಎಂದು ಯೋಚಿಸಿ? ನಮ್ಮ ನಮ್ರಪ್ ದಶಕಗಳಿಂದ ರಸಗೊಬ್ಬರ ಉತ್ಪಾದನೆಯ ಕೇಂದ್ರವಾಗಿದೆ. ಇಲ್ಲಿ ಉತ್ಪಾದಿಸುವ ರಸಗೊಬ್ಬರ ಸ್ಥಾವರಗಳು ಈಶಾನ್ಯದ ಹೊಲ ಗದ್ದೆಗಳಿಗೆ ವಿದ್ಯುತ್ ಒದಗಿಸುತ್ತಿದ್ದವು, ರೈತರ ಬೆಳೆಗಳನ್ನು ಬೆಂಬಲಿಸುತ್ತಿದ್ದವು. ದೇಶದ ಹಲವು ಭಾಗಗಳಲ್ಲಿ ರಸಗೊಬ್ಬರಗಳ ಪೂರೈಕೆ ಒಂದು ಸವಾಲಾಗಿ ಪರಿಣಮಿಸಿದಾಗಲೂ, ನಮ್ರಪ್ ರೈತರಿಗೆ ಭರವಸೆಯ ಮೂಲವಾಗಿ ಉಳಿಯಿತು. ಆದಾಗ್ಯೂ, ಹಳೆಯ ಕಾರ್ಖಾನೆಗಳ ತಂತ್ರಜ್ಞಾನವು ಕಾಲಾನಂತರದಲ್ಲಿ ಹಳೆಯದಾಯಿತು, ಆದರೆ ಕಾಂಗ್ರೆಸ್ ಸರ್ಕಾರಗಳು ಅದರ ಬಗ್ಗೆ ಗಮನ ಹರಿಸಲಿಲ್ಲ. ಇದರ ಪರಿಣಾಮವಾಗಿ ನಮ್ರಪ್ ಸ್ಥಾವರದ ಅನೇಕ ಘಟಕಗಳು ಮುಚ್ಚಿದವು. ಇಡೀ ಈಶಾನ್ಯ ಪ್ರದೇಶದ ರೈತರು ಬಳಲಿದರು, ದೇಶಾದ್ಯಂತ ರೈತರು ಸಹ ತೊಂದರೆಗಳನ್ನು ಎದುರಿಸಿದರು. ಅವರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು, ಕೃಷಿ ಕ್ಷೇತ್ರ ಹೆಚ್ಚಿ ಸವಾಲು ಎದುರಿಸಿತು. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಈ ಸಮಸ್ಯೆಯನ್ನು ಪರಿಹರಿಸಲು ಏನನ್ನೂ ಮಾಡಲಿಲ್ಲ, ಅವರು ಅಸಡ್ಡೆ ತೋರಿದರು. ಇಂದು ನಮ್ಮ ಡಬಲ್-ಎಂಜಿನ್ ಸರ್ಕಾರವು ಕಾಂಗ್ರೆಸ್ ಪಕ್ಷದಿಂದ ಸೃಷ್ಟಿಯಾದ ಈ ಸಮಸ್ಯೆಗಳನ್ನು ಪರಿಹರಿಸುತ್ತಿದೆ.
ಸ್ನೇಹಿತರೆ,
ಅಸ್ಸಾಂನಂತೆಯೇ, ದೇಶದ ಇತರೆ ರಾಜ್ಯಗಳಲ್ಲಿಯೂ ಅನೇಕ ರಸಗೊಬ್ಬರ ಕಾರ್ಖಾನೆಗಳು ಮುಚ್ಚಿದವು. ಆಗ ರೈತರ ಕಷ್ಟ ನಿಮಗೆ ನೆನಪಿದೆಯೇ? ರೈತರು ಯೂರಿಯಾಕ್ಕಾಗಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಯೂರಿಯಾ ಅಂಗಡಿಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕಾಯಿತು. ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದರು.
ಸಹೋದರ ಸಹೋದರಿಯರೆ,
ಕಾಂಗ್ರೆಸ್ ಸರ್ಕಾರದಿಂದ ಹದಗೆಟ್ಟ ಪರಿಸ್ಥಿತಿಗಳನ್ನು ಸುಧಾರಿಸಲು ನಮ್ಮ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅವರು ಎಲ್ಲವನ್ನು ತುಂಬಾ ಕೆಟ್ಟದಾಗಿ ಮಾಡಿದ್ದಾರೆ, 11 ವರ್ಷಗಳ ಕಾಲ ಶ್ರಮಿಸಿದ ನಂತರವೂ, ನಾನು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ, ರಸಗೊಬ್ಬರ ಕಾರ್ಖಾನೆಗಳು ಮುಚ್ಚಿದವು. ಆದರೆ ನಮ್ಮ ಸರ್ಕಾರವು ಗೋರಖ್‌ಪುರ, ಸಿಂದ್ರಿ, ಬರೌನಿ, ರಾಮಗುಂಡಮ್‌ನಂತಹ ಸ್ಥಳಗಳಲ್ಲಿ ಅನೇಕ ಸ್ಥಾವರಗಳನ್ನು ಪ್ರಾರಂಭಿಸಿದೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯವನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ. ಇಂದು ಇದರ ಪರಿಣಾಮವಾಗಿ, ಮುಂದಿನ ದಿನಗಳಲ್ಲಿ ಯೂರಿಯಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿಕ್ಕಿನಲ್ಲಿ ನಾವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.
ಸ್ನೇಹಿತರೆ,
2014ರಲ್ಲಿ ದೇಶದಲ್ಲಿ ಕೇವಲ 225 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದಿಸಲಾಯಿತು. ನಿಮಗೆ ಆ ಅಂಕಿಅಂಶ ನೆನಪಿದೆಯೇ? ನೀವು 10-11 ವರ್ಷಗಳ ಹಿಂದೆ ನನಗೆ ಕೆಲಸ ಕೊಟ್ಟಿದ್ದೀರಿ, ಆಗ ಉತ್ಪಾದನೆ 225 ಲಕ್ಷ ಮೆಟ್ರಿಕ್ ಟನ್ ಆಗಿದೆ. ಈ ಅಂಕಿಅಂಶವನ್ನು ನೆನಪಿಡಿ. ಕಳೆದ 10-11 ವರ್ಷಗಳಲ್ಲಿ ಕಠಿಣ ಪರಿಶ್ರಮದಿಂದ, ನಾವು ಉತ್ಪಾದನೆಯನ್ನು ಸುಮಾರು 306 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದ್ದೇವೆ. ಆದರೆ ನಾವು ಇಲ್ಲಿಗೆ ನಿಲ್ಲಬಾರದು, ಏಕೆಂದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಅವರು ಆಗ ಮಾಡಬೇಕಾದ ಕೆಲಸವನ್ನು ಮಾಡಲಿಲ್ಲ, ಅದಕ್ಕಾಗಿಯೇ ನಾನು ಈಗ ಸ್ವಲ್ಪ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗಿದೆ. ಈಗ, ನಮಗೆ ಪ್ರತಿ ವರ್ಷ ಸುಮಾರು 380 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ. ನಾವು 306 ಲಕ್ಷ ಮೆಟ್ರಿಕ್ ಟನ್ ಗೆ ತಲುಪಿದ್ದೇವೆ, ನಾವು ಇನ್ನೂ 70-80 ಲಕ್ಷ ಮೆಟ್ರಿಕ್ ಟನ್ ಮಾಡಬೇಕು. ಆದರೆ ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ, ನಾವು ಕಷ್ಟಪಟ್ಟು ಕೆಲಸ ಮಾಡುತ್ತಿರುವ ರೀತಿ, ನಾವು ಯೋಜಿಸುತ್ತಿರುವ ರೀತಿ ಮತ್ತು ನನ್ನ ರೈತ ಸಹೋದರ ಸಹೋದರಿಯರು ನಮ್ಮನ್ನು ಆಶೀರ್ವದಿಸುತ್ತಿರುವ ರೀತಿ, ಸಾಧ್ಯವಾದಷ್ಟು ಬೇಗ ಈ ಕಂದಕ ತುಂಬಲು ಯಾವುದೇ ಕ್ರಮಕ್ಕೆ ಸಿದ್ಧನಿದ್ದೇನೆ. ಅದಕ್ಕಾಗಿಯೇ ನಾನು ಸ್ವಲ್ಪ ಹೆಚ್ಚುವರಿ ಶ್ರಮ ವಹಿಸಬೇಕಾಗಿದೆ.
ಸಹೋದರ ಸಹೋದರಿಯರೆ,
ನಾನು ನಿಮಗೆ ಇನ್ನೊಂದು ವಿಷಯ ಹೇಳಲು ಬಯಸುತ್ತೇನೆ, ನಮ್ಮ ಸರ್ಕಾರವು ನಿಮ್ಮ ಹಿತಾಸಕ್ತಿಗಳ ಬಗ್ಗೆ ಬಹಳ ಸೂಕ್ಷ್ಮವಾಗಿದೆ. ನಾವು ವಿದೇಶಗಳಿಂದ ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ಳಬೇಕಾದ ಯೂರಿಯಾ ದರ ರೈತರಿಗೆ ಮೇಲೆ ಹೊರೆ ಆಗಲು ನಾವು ಬಿಡುವುದಿಲ್ಲ. ಬಿಜೆಪಿ ಸರ್ಕಾರವು ಸಬ್ಸಿಡಿಗಳನ್ನು ಮತ್ತು ಸ್ವತಃ ಖರ್ಚನ್ನು ಭರಿಸುತ್ತದೆ. ಭಾರತದ ರೈತರು ಕೇವಲ 300 ರೂಪಾಯಿಗೆ ಯೂರಿಯಾ ಚೀಲ ಪಡೆಯುತ್ತಾರೆ, ಆದರೆ ಆ 1 ಚೀಲಕ್ಕೆ ಭಾರತ ಸರ್ಕಾರವು ಇತರೆ ದೇಶಗಳಿಗೆ ಪಾವತಿಸಬೇಕಾಗುತ್ತದೆ, ನಾವು ಅದನ್ನು ಆಮದು ಮಾಡಿಕೊಳ್ಳುವ ಸ್ಥಳದಿಂದ, ಸರಿಸುಮಾರು 3,000 ರೂಪಾಯಿಗೆ ನೀಡುತ್ತೇವೆ. ಈಗ ಯೋಚಿಸಿ, ನಾವು ಅದನ್ನು 3,000 ರೂಪಾಯಿಗೆ ಖರೀದಿಸಿ 300 ರೂಪಾಯಿಗೆ ಮಾರಾಟ ಮಾಡುತ್ತೇವೆ. ಈ ಸಂಪೂರ್ಣ ಹೊರೆಯನ್ನು ದೇಶದ ರೈತರ ಮೇಲೆ ಬೀಳಲು ನಾವು ಬಿಡುವುದಿಲ್ಲ. ಸರ್ಕಾರವು ಈ ಸಂಪೂರ್ಣ ವೆಚ್ಚವನ್ನು ಸ್ವತಃ ಭರಿಸುತ್ತದೆ, ಆದ್ದರಿಂದ ನನ್ನ ರೈತ ಸಹೋದರ ಸಹೋದರಿಯರು ಹೊರೆ ಹೊರಬೇಕಾಗಿಲ್ಲ. ಆದರೆ ನೀವು ಸಹ ನನಗೆ ಸಹಾಯ ಮಾಡಬೇಕು ಎಂದು ನಾನು ನನ್ನ ರೈತ ಸಹೋದರ ಸಹೋದರಿಯರಿಗೆ ಮನವಿ ಮಾಡುತ್ತೇನೆ. ಆ ಸಹಾಯವು ನನಗಾಗಿ ಮಾತ್ರವಲ್ಲ, ನಿಮಗಾಗಿಯೂ ಆಗಿದೆ, ನನ್ನ ರೈತ ಸಹೋದರ ಸಹೋದರಿಯರೆ, ಭೂಮಿ ತಾಯಿಯನ್ನು ರಕ್ಷಿಸಬೇಕಿದೆ. ನಾವು ಭೂಮಿ ತಾಯಿಯನ್ನು ರಕ್ಷಿಸದಿದ್ದರೆ, ನಾವು ಎಷ್ಟೇ ಚೀಲ ಯೂರಿಯಾ ಬಳಸಿದರೂ, ಅವಳು ನಮಗೆ ಪ್ರತಿಯಾಗಿ ಏನನ್ನೂ ನೀಡುವುದಿಲ್ಲ. ನಾವು ಅನಾರೋಗ್ಯಕ್ಕೆ ಒಳಗಾದಾಗ, ಸರಿಯಾದ ಪ್ರಮಾಣದಲ್ಲಿ ಔಷಧ ತೆಗೆದುಕೊಳ್ಳಬೇಕಾದಂತೆ, ನಮಗೆ 2 ಮಾತ್ರೆಗಳು ಬೇಕಾಗಿದ್ದಾಗ 4 ಮಾತ್ರೆಗಳನ್ನು ತೆಗೆದುಕೊಂಡರೆ, ಅದು ನಮ್ಮ ದೇಹಕ್ಕೆ ಸಹಾಯ ಮಾಡುವ ಬದಲು ಹಾನಿ ಮಾಡುತ್ತದೆ, ಭೂಮಿ ತಾಯಿಗೂ ಇದು ಅನ್ವಯಿಸುತ್ತದೆ. ನಮ್ಮ ನೆರೆಹೊರೆಯವರು ಅದನ್ನು ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಾವು ಅತಿಯಾದ ಪ್ರಮಾಣದಲ್ಲಿ ಗೊಬ್ಬರ ಸೇರಿಸುತ್ತಲೇ ಇದ್ದರೆ, ಭೂಮಿ ತಾಯಿ ನಮ್ಮ ವಿರುದ್ಧ ತಿರುಗಿ ಬೀಳುತ್ತಾಳೆ. ಭೂಮಿ ತಾಯಿಗೆ ಯೂರಿಯಾವನ್ನು ಬಲವಂತವಾಗಿ ತಿನ್ನಿಸುವ ಮೂಲಕ ಕೊಲ್ಲುವ ಹಕ್ಕು ನಮಗಿಲ್ಲ. ಅವಳು ನಮ್ಮ ತಾಯಿ, ಹಾಗಾಗಿ ನಾವು ಈ ತಾಯಿಯನ್ನೂ ರಕ್ಷಿಸಬೇಕು.
ಸ್ನೇಹಿತರೆ,
ಇಂದು ಬೀಜದಿಂದ ಹಿಡಿದು ಮಾರುಕಟ್ಟೆಯವರೆಗೆ, ಬಿಜೆಪಿ ಸರ್ಕಾರ ರೈತರೊಂದಿಗೆ ನಿಂತಿದೆ. ಕೃಷಿ ಕೆಲಸಕ್ಕಾಗಿ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತಿದೆ, ಇದರಿಂದ ರೈತರು ಸಾಲಕ್ಕಾಗಿ ಅಲೆದಾಡಬೇಕಾಗಿಲ್ಲ. ಇಲ್ಲಿಯವರೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸುಮಾರು 4 ಲಕ್ಷ ಕೋಟಿ ರೂಪಾಯಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಅಂಕಿಅಂಶ ನಿಮಗೆ ನೆನಪಿದೆಯೇ? ನೀವು ಅದನ್ನು ಮರೆತುಬಿಡುತ್ತೀರಾ? ನನ್ನ ದೇಶದ ರೈತರ ಖಾತೆಗಳಿಗೆ 4 ಲಕ್ಷ ಕೋಟಿ ರೂಪಾಯಿ ನೇರವಾಗಿ ಜಮಾ ಮಾಡಲಾಗಿದೆ. ಈ ವರ್ಷ, ರೈತರಿಗೆ ಸಹಾಯ ಮಾಡಲು 35 ಸಾವಿರ ಕೋಟಿ ರೂಪಾಯಿ ಮೊತ್ತದ 2 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅದು 35 ಸಾವಿರ ಕೋಟಿ ರೂಪಾಯಿಗಳು! ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ದಲ್ಹನ್ ಆತ್ಮ ನಿರ್ಭರ್ ತಾ(ದ್ವಿದಳ ಧಾನ್ಯಗಳ ಸ್ವಾವಲಂಬನೆ) ಮಿಷನ್ ಕೃಷಿಯನ್ನು ಉತ್ತೇಜಿಸುತ್ತದೆ.
ಸ್ನೇಹಿತರೆ,
ರೈತರ ಪ್ರತಿಯೊಂದು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿಕೂಲ ಹವಾಮಾನದಿಂದಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರು ಫಸಲ್ ಬಿಮಾ ಯೋಜನೆಯ ಮೂಲಕ ಬೆಂಬಲ ಪಡೆಯುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಖರೀದಿ ವ್ಯವಸ್ಥೆಗಳನ್ನು ಸುಧಾರಿಸಲಾಗಿದೆ. ನಮ್ಮ ರೈತರು ಬಲಿಷ್ಠರಾದಾಗ ಮಾತ್ರ ದೇಶವು ಪ್ರಗತಿ ಹೊಂದುತ್ತದೆ ಎಂದು ನಮ್ಮ ಸರ್ಕಾರ ಸದೃಢವಾಗಿ ನಂಬುತ್ತದೆ, ಇದನ್ನು ಸಾಧಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
ಸ್ನೇಹಿತರೆ,
ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾವು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಹೈನುಗಾರರು ಮತ್ತು ಮೀನುಗಾರರಿಗೆ ವಿಸ್ತರಿಸಿದ್ದೇವೆ. ಕಿಸಾನ್ ಕ್ರೆಡಿಟ್ ಕಾರ್ಡ್, ಕೆಸಿಸಿ, ಕೆಸಿಸಿ ಸೌಲಭ್ಯ ಪಡೆದ ನಂತರ, ನಮ್ಮ ಹೈನುಗಾರರು, ನಮ್ಮ ಮೀನುಗಾರರು, ಅವರೆಲ್ಲರೂ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಅಂಕಿ ಅಂಶವನ್ನು ಸಹ ನೆನಪಿಡಿ, ಈ ವರ್ಷ ಕೆಸಿಸಿ ಮೂಲಕ ರೈತರಿಗೆ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಸಹಾಯ ನೀಡಲಾಗಿದೆ. 10 ಲಕ್ಷ ಕೋಟಿ ರೂಪಾಯಿ. ಜೈವಿಕ ಗೊಬ್ಬರಗಳ ಮೇಲಿನ ಜಿಎಸ್‌ಟಿ ಕಡಿತದಿಂದ ರೈತರು ಸಹ ಹೆಚ್ಚಿನ ಲಾಭ ಪಡೆದಿದ್ದಾರೆ. ಬಿಜೆಪಿ ಸರ್ಕಾರವು ಭಾರತೀಯ ರೈತರಿಗೆ ನೈಸರ್ಗಿಕ ಕೃಷಿಗಾಗಿ ಗಮನಾರ್ಹ ಪ್ರೋತ್ಸಾಹವನ್ನು ನೀಡುತ್ತಿದೆ. ಅಸ್ಸಾಂನಲ್ಲಿ 100% ನೈಸರ್ಗಿಕ ಕೃಷಿ ಮಾಡುವ ಕೆಲವು ಬ್ಲಾಕ್ ಗಳು ಬರಬೇಕೆಂದು ನಾನು ಬಯಸುತ್ತೇನೆ. ನೋಡಿ, ಅಸ್ಸಾಂ ಭಾರತಕ್ಕೆ ನಿರ್ದೇಶನ ನೀಡಬಹುದು. ಅಸ್ಸಾಂನ ರೈತರು ದೇಶಕ್ಕೆ ಮಾರ್ಗದರ್ಶನ ನೀಡಬಹುದು. ನಾವು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಪ್ರಾರಂಭಿಸಿದ್ದೇವೆ. ಇಂದು ಲಕ್ಷಾಂತರ ರೈತರು ಅದರಲ್ಲಿ ಸೇರಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳು-ಎಫ್‌ಪಿಒಗಳನ್ನು ಸ್ಥಾಪಿಸಲಾಗಿದೆ. ಈಶಾನ್ಯವನ್ನು ವಿಶೇಷ ಗಮನದಲ್ಲಿಟ್ಟುಕೊಂಡು, ನಮ್ಮ ಸರ್ಕಾರವು ಖಾದ್ಯ ತೈಲಗಳಿಗೆ, ನಿರ್ದಿಷ್ಟವಾಗಿ ಪಾಮ್ ಎಣ್ಣೆಗೆ ಸಂಬಂಧಿಸಿದ ಮಿಷನ್ ಅನ್ನು ಸಹ ಪ್ರಾರಂಭಿಸಿದೆ. ಈ ಮಿಷನ್ ಖಾದ್ಯ ತೈಲದ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ, ಇಲ್ಲಿನ ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಸ್ನೇಹಿತರೆ,
ಈ ಪ್ರದೇಶದಲ್ಲಿ ನಮಗೆ ಚಹಾ ತೋಟದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಸ್ಸಾಂನ ಏಳೂವರೆ ಲಕ್ಷ ಚಹಾ ತೋಟ ಕಾರ್ಮಿಕರಿಗೆ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು ಬಿಜೆಪಿ ಸರ್ಕಾರವೇ. ಈಗ ಅವರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿರುವುದರಿಂದ, ಈ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರ ಪಾವತಿ ಪಡೆಯಬಹುದು. ನಮ್ಮ ಸರ್ಕಾರವು ಚಹಾ ತೋಟದ ಪ್ರದೇಶಗಳಲ್ಲಿ ಶಾಲೆಗಳು, ರಸ್ತೆಗಳು, ವಿದ್ಯುತ್, ನೀರು ಮತ್ತು ಆಸ್ಪತ್ರೆಗಳ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ.
ಸ್ನೇಹಿತರೆ,
ನಮ್ಮ ಸರ್ಕಾರವು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ. ನಮ್ಮ ಈ ದೃಷ್ಟಿಕೋನವು ನಮ್ಮ ದೇಶದ ಬಡವರ ಜೀವನದಲ್ಲಿ ಗಮನಾರ್ಹ ಪರಿವರ್ತನೆ ತಂದಿದೆ. ಕಳೆದ 11 ವರ್ಷಗಳಲ್ಲಿ ನಮ್ಮ ಪ್ರಯತ್ನಗಳು, ಯೋಜನೆಗಳು, ಯೋಜನೆಗಳ ಅನುಷ್ಠಾನದಿಂದಾಗಿ 25 ಕೋಟಿ ಜನರು ಈ ಅಂಕಿ ಅಂಶವನ್ನು ಸಹ ನೆನಪಿಡಲಿ, 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ದೇಶದಲ್ಲಿ ನವ ಮಧ್ಯಮ ವರ್ಗ ಹೊರಹೊಮ್ಮಿದೆ, ಇದು ಸಂಭವಿಸಿದೆ. ಏಕೆಂದರೆ ಭಾರತದಲ್ಲಿ ಬಡ ಕುಟುಂಬಗಳ ಜೀವನ ಮಟ್ಟವು ವರ್ಷಗಳಲ್ಲಿ ನಿರಂತರವಾಗಿ ಸುಧಾರಿಸಿದೆ. ಇತ್ತೀಚಿನ ಕೆಲವು ಅಂಕಿಅಂಶಗಳು ಬೆಳಕಿಗೆ ಬಂದಿವೆ, ಇದು ಭಾರತದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಚಿಸುತ್ತದೆ.
ಸ್ನೇಹಿತರೆ,
ಈ ಎಲ್ಲಾ ವಿಷಯಗಳು ಮಾಧ್ಯಮಗಳಲ್ಲಿ ಬಹಳ ಉಪಯುಕ್ತವಾಗಿವೆ, ಆದ್ದರಿಂದ ನಾನು ನಿಮಗೆ ಹೇಳುತ್ತಿರುವುದನ್ನು ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೆ,
ಹಿಂದೆ ಹಳ್ಳಿಗಳ ಅತ್ಯಂತ ಬಡ ಕುಟುಂಬಗಳ ಪೈಕಿ 10 ಕುಟುಂಬಗಳಲ್ಲಿ ಒಂದರಲ್ಲೂ ಮೋಟಾರ್ ಸೈಕಲ್ ಇರಲಿಲ್ಲ. 10ರಲ್ಲಿ 1 ಕುಟುಂಬಕ್ಕೂ ಅದು ಇರಲಿಲ್ಲ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಹಳ್ಳಿಯಲ್ಲಿ ವಾಸಿಸುವ ಸುಮಾರು ಅರ್ಧದಷ್ಟು ಕುಟುಂಬಗಳು ಈಗ ಬೈಕ್ ಅಥವಾ ಕಾರ್ ಹೊಂದಿವೆ. ಇದಲ್ಲದ, ಮೊಬೈಲ್ ಫೋನ್‌ಗಳು ಬಹುತೇಕ ಎಲ್ಲಾ ಮನೆಗಳನ್ನು ತಲುಪಿವೆ. ಒಂದು ಕಾಲದಲ್ಲಿ "ಐಷಾರಾಮಿ" ಎಂದು ಪರಿಗಣಿಸಲಾಗಿದ್ದ ರೆಫ್ರಿಜರೇಟರ್‌ಗಳಂತಹ ವಸ್ತುಗಳು ಈಗ ನಮ್ಮ ನವ-ಮಧ್ಯಮ ವರ್ಗದ ಮನೆಗಳಲ್ಲಿಯೂ ಕಂಡುಬರುತ್ತಿವೆ. ಇಂದು ಇದು ಹಳ್ಳಿಗಳ ಅಡುಗೆ ಮನೆಗಳಲ್ಲಿ ಸ್ಥಾನ ಪಡೆದಿದೆ. ಸ್ಮಾರ್ಟ್‌ಫೋನ್‌ಗಳ ಹೊರತಾಗಿಯೂ, ಹಳ್ಳಿಗಳಲ್ಲಿ ಟಿವಿಗಳನ್ನು ಹೊಂದುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೊಸ ದತ್ತಾಂಶ ತೋರಿಸುತ್ತದೆ. ಈ ಬದಲಾವಣೆಯು ತಾನಾಗಿಯೇ ಸಂಭವಿಸಲಿಲ್ಲ. ಈ ರೂಪಾಂತರವು ದೇಶದ ಬಡವರ ಸಬಲೀಕರಣದ ಪರಿಣಾಮವಾಗಿದೆ. ಅಭಿವೃದ್ಧಿಯ ಪ್ರಯೋಜನಗಳು ಈಗ ದೂರದ ಪ್ರದೇಶಗಳಲ್ಲಿ ವಾಸಿಸುವ ಬಡ ಜನರನ್ನು ಸಹ ತಲುಪುತ್ತಿವೆ.
ಸ್ನೇಹಿತರೆ,
ಬಿಜೆಪಿಯ ಡಬಲ್-ಎಂಜಿನ್ ಸರ್ಕಾರವು ಬಡವರು, ಬುಡಕಟ್ಟು ಜನಾಂಗದವರು, ಯುವಕರು ಮತ್ತು ಮಹಿಳೆಯರಿಗಾಗಿ ಇರುವ ಸರ್ಕಾರ. ಅದಕ್ಕಾಗಿಯೇ, ನಮ್ಮ ಸರ್ಕಾರವು ಅಸ್ಸಾಂ ಮತ್ತು ಈಶಾನ್ಯದಲ್ಲಿ ದಶಕಗಳಿಂದ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಲು ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರವು ಯಾವಾಗಲೂ ಅಸ್ಸಾಂನ ಗುರುತು ಮತ್ತು ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬಿಜೆಪಿ ಸರ್ಕಾರವು ಪ್ರತಿ ವೇದಿಕೆಯಲ್ಲೂ ಅಸ್ಸಾಮಿ ಹೆಮ್ಮೆಯ ಸಂಕೇತಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ, ನಾವು ಹೆಮ್ಮೆಯಿಂದ ಮಹಾವೀರ್ ಲಚಿತ್ ಬೋರ್ಫುಕನ್ ಅವರ 125 ಅಡಿ ಪ್ರತಿಮೆ ನಿರ್ಮಿಸುತ್ತೇವೆ, ಅಸ್ಸಾಂನ ಹೆಮ್ಮೆಯಾದ ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ವರ್ಷ ಆಚರಿಸುತ್ತೇವೆ. ನಾವು ಅಸ್ಸಾಂನ ಕಲೆ ಮತ್ತು ಕರಕುಶಲ ವಸ್ತುಗಳಿಗೆ ಮತ್ತು ಅಸ್ಸಾಂನ ಗ್ಯಾಮೋಸಾ(ಸಾಂಪ್ರದಾಯಿಕ ಸ್ಕಾರ್ಫ್)ಗೆ ಜಾಗತಿಕ ಮನ್ನಣೆ ನೀಡುತ್ತಿದ್ದೇವೆ. ಕೆಲವೇ ದಿನಗಳ ಹಿಂದೆ, ರಷ್ಯಾದ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡಿದರು, ಅವರು ದೆಹಲಿಯಲ್ಲಿದ್ದಾಗ ನಾನು ಹೆಮ್ಮೆಯಿಂದ ಅವರಿಗೆ ಅಸ್ಸಾಮಿ ಕಪ್ಪು ಚಹಾವನ್ನು ಉಡುಗೊರೆಯಾಗಿ ನೀಡಿದ್ದೇನೆ. ಅಸ್ಸಾಂನ ಗೌರವ ಮತ್ತು ಘನತೆಯನ್ನು ಹೆಚ್ಚಿಸುವ ಪ್ರತಿಯೊಂದು ಕೆಲಸಕ್ಕೂ ನಾವು ಆದ್ಯತೆ ನೀಡುತ್ತೇವೆ.
ಸಹೋದರ ಸಹೋದರಿಯರೆ,
ಬಿಜೆಪಿ ಈ ಕೆಲಸಗಳನ್ನು ಮಾಡಿದಾಗ, ಕಾಂಗ್ರೆಸ್ ಪಕ್ಷವು ಹೆಚ್ಚು ಬಳಲುತ್ತಿದೆ. ನಮ್ಮ ಸರ್ಕಾರ ಭೂಪೇನ್ ದಾ ಅವರಿಗೆ ಭಾರತ ರತ್ನ ನೀಡಿದಾಗ, ಕಾಂಗ್ರೆಸ್ ಅದನ್ನು ಬಹಿರಂಗವಾಗಿ ವಿರೋಧಿಸಿತ್ತು ಎಂಬುದು ನಿಮಗೆ ನೆನಪಿರಬಹುದು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಮೋದಿ ನೃತ್ಯಗಾರರು ಮತ್ತು ಗಾಯಕರಿಗೆ ಭಾರತ ರತ್ನ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಹೇಳಿ, ಇದು ಭೂಪೇನ್ ದಾ ಅವರಿಗೆ ಮಾಡಿದ ಅವಮಾನವೇ ಅಥವಾ ಅಲ್ಲವೇ? ಇದು ಕಲೆ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನವೇ ಅಥವಾ ಅಲ್ಲವೇ? ಇದು ಅಸ್ಸಾಂಗೆ ಮಾಡಿದ ಅವಮಾನವೇ ಅಥವಾ ಅಲ್ಲವೇ? ಕಾಂಗ್ರೆಸ್ ಹಗಲು ರಾತ್ರಿ ಅವಮಾನಿಸುತ್ತಾ ಇದನ್ನೇ ಮಾಡುತ್ತದೆ. ನಾವು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಿದಾಗ, ಕಾಂಗ್ರೆಸ್ ಅದನ್ನೂ ವಿರೋಧಿಸಿತು. ಮರೆಯಬೇಡಿ, ಕಾಂಗ್ರೆಸ್ ಸರ್ಕಾರವು ಹಲವು ದಶಕಗಳಿಂದ ಚಹಾ ಬೆಳೆಯುವ ನಮ್ಮ ಸಹೋದರ ಸಹೋದರಿಯರಿಗೆ ಭೂಮಿ ಹಕ್ಕುಗಳನ್ನು ನಿರಾಕರಿಸಿತು! ಬಿಜೆಪಿ ಸರ್ಕಾರ ಅವರಿಗೆ ಭೂ ಹಕ್ಕು ಮತ್ತು ಘನತೆಯ ಜೀವನ ನೀಡಿತು. ನಾನು ಸ್ವತಃ ಚಹಾ ಮಾರಾಟಗಾರ, ನಾನು ಅದನ್ನು ಮಾಡದಿದ್ದರೆ, ಯಾರು ಮಾಡುತ್ತಾರೆ? ಈ ಕಾಂಗ್ರೆಸ್ ಇನ್ನೂ ರಾಷ್ಟ್ರವಿರೋಧಿ ಚಿಂತನೆಯನ್ನು ಉತ್ತೇಜಿಸುತ್ತಿದೆ. ಈ ಜನರು ಆ ಬಾಂಗ್ಲಾದೇಶಿ ನುಸುಳುಕೋರರನ್ನು ಅಸ್ಸಾಂನ ಅರಣ್ಯ ಭೂಮಿಯಲ್ಲಿ ನೆಲೆಗೊಳಿಸಲು ಬಯಸುತ್ತಾರೆ. ಇದರಿಂದಾಗಿ ಅವರ ಮತಬ್ಯಾಂಕ್ ಬಲಗೊಳ್ಳುತ್ತದೆ, ನೀವು ಹಾಳಾದರೂ ಅವರು ಚಿಂತಿಸುವುದಿಲ್ಲ, ಆದರೆ ಅವರು ತಮ್ಮ ಮತಬ್ಯಾಂಕ್ ಬಲಪಡಿಸಬೇಕು ಅಷ್ಟೆ.
ಸಹೋದರ ಸಹೋದರಿಯರೆ,
ಕಾಂಗ್ರೆಸ್ ಪಕ್ಷಕ್ಕೆ ಅಸ್ಸಾಂ ಅಥವಾ ಅಸ್ಸಾಂನ ಜನರು ಅಥವಾ ನಿಮ್ಮ ಗುರುತಿನ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅವರು ಅಧಿಕಾರ, ಸರ್ಕಾರ ಮತ್ತು ಅವರು ಹಿಂದೆ ತೊಡಗಿಸಿಕೊಂಡಿದ್ದ ಪದ್ಧತಿಗಳನ್ನು ಮುಂದುವರಿಸುವುದರಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಹೆಚ್ಚು ಇಷ್ಟಪಡುತ್ತಾರೆ. ಅಕ್ರಮ ನುಸುಳುಕೋರರನ್ನು ನೆಲೆಗೊಳಿಸಿದ್ದು ಕಾಂಗ್ರೆಸ್ ಮತ್ತು ಅವರನ್ನು ರಕ್ಷಿಸುತ್ತಿರುವುದು ಕಾಂಗ್ರೆಸ್. ಅದಕ್ಕಾಗಿಯೇ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ. ಕಾಂಗ್ರೆಸ್ ಅನುಸರಿಸುತ್ತಿರುವ ಈ ವಿಷಕಾರಿ ತುಷ್ಟೀಕರಣ(ಓಲೈಕೆ) ಮತ್ತು ಮತಬ್ಯಾಂಕ್ ರಾಜಕೀಯದಿಂದ ನಾವು ಅಸ್ಸಾಂ ಅನ್ನು ರಕ್ಷಿಸಬೇಕು. ಇಂದು ನಾನು ನಿಮಗೆ ಒಂದು ಭರವಸೆ ನೀಡುತ್ತೇನೆ, ಅಸ್ಸಾಂನ ಗುರುತು ಮತ್ತು ಅಸ್ಸಾಂನ ಗೌರವ ರಕ್ಷಿಸಲು, ಬಿಜೆಪಿ ನಿಮ್ಮೊಂದಿಗೆ ಉಕ್ಕಿನಂತೆ ನಿಂತಿದೆ.
ಸ್ನೇಹಿತರೆ,
ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ನಿಮ್ಮ ಆಶೀರ್ವಾದಗಳೇ ನನಗೆ ಶಕ್ತಿ. ನಿಮ್ಮ ಪ್ರೀತಿಯೇ ನನ್ನ ದೊಡ್ಡ ಆಸ್ತಿ. ಅದಕ್ಕಾಗಿಯೇ ನಾನು ನಿಮಗಾಗಿ ಪ್ರತಿ ಕ್ಷಣವೂ ಬದುಕುವುದರಲ್ಲಿ ಸಂತೋಷ ಕಾಣುತ್ತೇನೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಪೂರ್ವ ಭಾರತದ, ನಮ್ಮ ಈಶಾನ್ಯದ ಪಾತ್ರ ನಿರಂತರವಾಗಿ ಹೆಚ್ಚುತ್ತಿದೆ. ಪೂರ್ವ ಭಾರತವು ಭಾರತದ ಅಭಿವೃದ್ಧಿಯ ಬೆಳವಣಿಗೆಯ ಎಂಜಿನ್ ಆಗುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ. ನಮ್ರಪ್‌ನಲ್ಲಿರುವ ಈ ಹೊಸ ಘಟಕವು ಈ ರೂಪಾಂತರಕ್ಕೆ ಉದಾಹರಣೆಯಾಗಿದೆ. ಇಲ್ಲಿ ಉತ್ಪಾದಿಸುವ ರಸಗೊಬ್ಬರವು ಅಸ್ಸಾಂನ ಹೊಲಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಪೂರ್ವ ಉತ್ತರ ಪ್ರದೇಶವನ್ನು ತಲುಪುತ್ತದೆ. ಇದು ಸಣ್ಣ ವಿಷಯವಲ್ಲ, ದೇಶದ ರಸಗೊಬ್ಬರ ಅಗತ್ಯಗಳಲ್ಲಿ ಈಶಾನ್ಯದ ಕೊಡುಗೆ ಇದು. ನಮೃಪ್ ನಂತಹ ಯೋಜನೆಗಳು ಮುಂಬರುವ ದಿನಗಳಲ್ಲಿ, ಈಶಾನ್ಯವು ಸ್ವಾವಲಂಬಿ ಭಾರತದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂಬುದನ್ನು ತೋರಿಸುತ್ತದೆ. ಇದು ನಿಜವಾಗಿಯೂ "ಅಷ್ಟಲಕ್ಷ್ಮಿ"(ಲಕ್ಷ್ಮಿ ದೇವಿಯ 8 ರೂಪಗಳು) ಆಗುತ್ತದೆ. ಈ ಹೊಸ ರಸಗೊಬ್ಬರ ಸ್ಥಾವರಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನನ್ನೊಂದಿಗೆ ಹೇಳಿ:
ಭಾರತ್ ಮಾತಾ ಕಿ ಜೈ.
ಭಾರತ್ ಮಾತಾ ಕಿ ಜೈ.
ಈ ವರ್ಷ ವಂದೇ ಮಾತರಂನ 150 ವರ್ಷಗಳನ್ನು ಸೂಚಿಸುತ್ತದೆ, ಇದು ನಮಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. ನಾವೆಲ್ಲರೂ ಹೀಗೆ ಹೇಳೋಣ:
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
ವಂದೇ ಮಾತರಂ.
*****
(रिलीज़ आईडी: 2207362)
आगंतुक पटल : 4