ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು


ಆಧುನಿಕ ವಿಮಾನ ನಿಲ್ದಾಣಗಳು ಮತ್ತು ಸುಧಾರಿತ ಸಂಪರ್ಕ ಮೂಲಸೌಕರ್ಯಗಳು ಯಾವುದೇ ರಾಜ್ಯಕ್ಕೆ ಹೊಸ ಸಾಧ್ಯತೆಗಳು ಮತ್ತು ಹೊಸ ಅವಕಾಶಗಳಿಗೆ ಮಹಾದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ: ಪ್ರಧಾನಮಂತ್ರಿ

ಇಂದು, ಅಸ್ಸಾಂ ಮತ್ತು ಇಡೀ ಈಶಾನ್ಯವು ಭಾರತದ ಅಭಿವೃದ್ಧಿಯ ಹೊಸ ಮಹಾದ್ವಾರವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ

ಈಶಾನ್ಯವು ಭಾರತದ ಭವಿಷ್ಯದ ಬೆಳವಣಿಗೆಯ ನಾಯಕತ್ವ ವಹಿಸಲಿದೆ: ಪ್ರಧಾನಮಂತ್ರಿ

प्रविष्टि तिथि: 20 DEC 2025 5:50PM by PIB Bengaluru

ಅಸ್ಸಾಂನ ಸಂಪರ್ಕ, ಆರ್ಥಿಕ ವಿಸ್ತರಣೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯಲ್ಲಿ ಪರಿವರ್ತನಾತ್ಮಕ ಹೆಜ್ಜೆ ಗುರುತನ್ನು ಮೂಡಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುವಾಹಟಿಯಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇಂದಿನ ದಿನ ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಹಾಗು ಪ್ರಗತಿಯ ಹಬ್ಬವಾಗಿದೆ ಎಂದು ಹೇಳಿದರು. ಪ್ರಗತಿಯ ಬೆಳಕು ಜನರನ್ನು ತಲುಪಿದಾಗ, ಜೀವನದ ಪ್ರತಿಯೊಂದು ಹಾದಿಯೂ ಹೊಸ ಎತ್ತರವನ್ನು ಮುಟ್ಟಲು ಪ್ರಾರಂಭಿಸುತ್ತದೆ ಎಂದು ಅವರು ತಿಳಿಸಿದರು. ಅಸ್ಸಾಂ ನೆಲದೊಂದಿಗಿನ ತಮ್ಮ ಆಳವಾದ ಬಾಂಧವ್ಯ, ಅದರ ಜನರ ಪ್ರೀತಿ ಮತ್ತು ವಾತ್ಸಲ್ಯ, ಮತ್ತು ವಿಶೇಷವಾಗಿ ಅಸ್ಸಾಂ ಮತ್ತು ಈಶಾನ್ಯದ ತಾಯಂದಿರು ಮತ್ತು ಸಹೋದರಿಯರ ಹೃದಯಸ್ಪರ್ಶಿ ಭಾವನೆ ಮತ್ತು ಆತ್ಮೀಯತೆ ನಿರಂತರವಾಗಿ ತಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಪ್ರದೇಶದ ಅಭಿವೃದ್ಧಿಗಾಗಿ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮತ್ತೊಮ್ಮೆ ಅಸ್ಸಾಂನ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು ದರು. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಸಾಲುಗಳನ್ನು ಉಲ್ಲೇಖಿಸಿದ, ಶ್ರೀ ಮೋದಿ ಅವರು ಇದರರ್ಥ ಪ್ರಬಲ ಬ್ರಹ್ಮಪುತ್ರ ನದಿಯ ದಡಗಳು ಬೆಳಗುತ್ತವೆ, ಕತ್ತಲೆಯ ಪ್ರತಿಯೊಂದು ಗೋಡೆ ಮುರಿಯುತ್ತದೆ ಮತ್ತು ಖಂಡಿತವಾಗಿಯೂ ಇದು ಸಂಭವಿಸುತ್ತದೆ ಯಾಕೆಂದರೆ ಇದು ರಾಷ್ಟ್ರದ ದೃಢ ನಿರ್ಧಾರವಾಗಿದೆ ಮತ್ತು ಕೈಗೊಂಡ ಪ್ರತಿಜ್ಞೆಯಾಗಿದೆ.

ಭೂಪೇನ್ ಹಜಾರಿಕಾ ಅವರ ಸಾಲುಗಳು ಕೇವಲ ಹಾಡಲ್ಲ, ಬದಲಾಗಿ ಅಸ್ಸಾಂನ್ನು ಪ್ರೀತಿಸುವ ಪ್ರತಿಯೊಂದು ಮಹಾನ್ ಆತ್ಮದ ಪ್ರಾಮಾಣಿಕ ಸಂಕಲ್ಪವಾಗಿದೆ ಮತ್ತು ಇಂದು ಸಂಕಲ್ಪವು ಈಡೇರುತ್ತಿದೆ ಎಂದು ತಿಳಿಸಿದ ಶ್ರೀ ಮೋದಿ, ಬ್ರಹ್ಮಪುತ್ರದ ಶಕ್ತಿಶಾಲಿ ಪ್ರವಾಹಗಳು ಎಂದಿಗೂ ನಿಲ್ಲುವುದಿಲ್ಲ ಹೇಗೋ ಹಾಗೆಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ, ಅಸ್ಸಾಂನಲ್ಲಿ ಅಭಿವೃದ್ಧಿಯ ಹರಿವು ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು. ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆಯು ಬದ್ಧತೆಗೆ ಪುರಾವೆಯಾಗಿದೆ ಎಂದು ಅವರು ಹೇಳಿದರು ಮತ್ತು ಹೊಸ ಟರ್ಮಿನಲ್ ಕಟ್ಟಡಕ್ಕಾಗಿ ಅಸ್ಸಾಂನ ಜನರು ಮತ್ತು ರಾಷ್ಟ್ರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಸ್ವಲ್ಪ ಸಮಯದ ಹಿಂದೆ ಅಸ್ಸಾಂನ ಮೊದಲ ಮುಖ್ಯಮಂತ್ರಿ ಮತ್ತು ರಾಜ್ಯದ ಹೆಮ್ಮೆಯ ಮೂಲವಾದ ಗೋಪಿನಾಥ್ ಬಾರ್ಡೋಲೋಯ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಬಾರ್ಡೋಲೋಯ್ ಅಸ್ಸಾಂನ ಗುರುತು, ಭವಿಷ್ಯ ಮತ್ತು ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಮತ್ತು ಅವರ ಪ್ರತಿಮೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ, ಅವರಲ್ಲಿ ಅಸ್ಸಾಂ ಬಗ್ಗೆ ಆಳವಾದ ಹೆಮ್ಮೆಯನ್ನು ತುಂಬುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

"ಆಧುನಿಕ ವಿಮಾನ ನಿಲ್ದಾಣ ಸೌಲಭ್ಯಗಳು ಮತ್ತು ಮುಂದುವರಿದ ಸಂಪರ್ಕ ಮೂಲಸೌಕರ್ಯಗಳು ಯಾವುದೇ ರಾಜ್ಯಕ್ಕೆ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳಿಗೆ ಹೆಬ್ಬಾಗಿಲುಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಜನರಲ್ಲಿ ಬೆಳೆಯುತ್ತಿರುವ ವಿಶ್ವಾಸ ಮತ್ತು ನಂಬಿಕೆಯ ಆಧಾರಸ್ತಂಭಗಳಾಗಿ ನಿಲ್ಲುತ್ತವೆ" ಎಂದು ಪ್ರಧಾನಮಂತ್ರಿ ನುಡಿದರು. ಅಸ್ಸಾಂನಲ್ಲಿ ಭವ್ಯವಾದ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣವನ್ನು ಜನರು ನೋಡಿದಾಗ, ಅಸ್ಸಾಂಗೆ ನಿಜವಾದ ನ್ಯಾಯವು ಅಂತಿಮವಾಗಿ ಲಭಿಸಲು ಪ್ರಾರಂಭವಾಗಿದೆ ಎಂದು ಸ್ವತಃ ಒಪ್ಪಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಇದನ್ನು ಹಿಂದಿನ ಸರಕಾರಗಳ ಅವಧಿಗೆ ಹೋಲಿಸಿದ ಅವರು ಹಿಂದಿನ ಸರ್ಕಾರಗಳಿಗೆ, ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಎಂದೂ ಕಾರ್ಯಸೂಚಿಯಲ್ಲಿ ಸೇರಿರಲಿಲ್ಲ ಎಂದೂ ನುಡಿದರು.   ಸರ್ಕಾರಗಳ ನಾಯಕರು "ಅಸ್ಸಾಂ ಮತ್ತು ಈಶಾನ್ಯಕ್ಕೆ ಯಾರು ಹೋಗುತ್ತಾರೆ?" ಎಂದು ಹೇಳುತ್ತಿದ್ದರು ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು ಮತ್ತು ಆ ಸರಕಾರಗಳ ನಾಯಕರು ಈ ಪ್ರದೇಶದಲ್ಲಿ ಆಧುನಿಕ ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಹಾಗು ಉತ್ತಮ ರೈಲ್ವೆಗಳ ಅಗತ್ಯವನ್ನು ಪ್ರಶ್ನಿಸಿದ್ದರು. ಈ ಮನಸ್ಥಿತಿಯು ವಿರೋಧ ಪಕ್ಷವು ದಶಕಗಳ ಕಾಲ ಇಡೀ ಪ್ರದೇಶವನ್ನು ನಿರ್ಲಕ್ಷಿಸಲು ಕಾರಣವಾಯಿತು ಎಂದೂ ಪ್ರಧಾನಮಂತ್ರಿ ತಿಳಿಸಿದರು.

ಆರು- ಏಳು ದಶಕಗಳಿಂದ ವಿರೋಧ ಪಕ್ಷಗಳು ಮಾಡಿದ ತಪ್ಪುಗಳನ್ನು ತಮ್ಮ ನಾಯಕತ್ವದಲ್ಲಿ ಒಂದೊಂದಾಗಿ ಸರಿಪಡಿಸಲಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ವಿರೋಧ ಪಕ್ಷದ ನಾಯಕರು ಈಶಾನ್ಯಕ್ಕೆ ಭೇಟಿ ನೀಡಲಿ ಅಥವಾ ಭೇಟಿ ನೀಡದಿರಲಿ, ಅಸ್ಸಾಂ ಮತ್ತು ಈ ಪ್ರದೇಶಕ್ಕೆ ಬಂದಾಗಲೆಲ್ಲಾ ತಮ್ಮ ಸ್ವಂತ ಜನರ ನಡುವೆ ನಾವು ಇದ್ದೇವೆ ಎಂಬ ಭಾವನೆ ಮೂಡುತ್ತದೆ ಎಂದು ಹೇಳಿದರು. ಅಸ್ಸಾಂನ ಅಭಿವೃದ್ಧಿಯು ತಮಗೆ ಕೇವಲ ಅಗತ್ಯವಷ್ಟೇ ಅಲ್ಲ, ಜವಾಬ್ದಾರಿ ಮತ್ತು ಹೊಣೆಗಾರಿಕೆಯೂ ಆಗಿದೆ ಎಂದು ಅವರು ತಿಳಿಸಿದರು. ಕಳೆದ ಹನ್ನೊಂದು ವರ್ಷಗಳಲ್ಲಿ, ಅಸ್ಸಾಂ ಮತ್ತು ಈಶಾನ್ಯಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಅಸ್ಸಾಂ ಮತ್ತಷ್ಟು ಪ್ರಗತಿ ಸಾಧಿಸುತ್ತಿದೆ ಮತ್ತು ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು, ಭಾರತೀಯ ನ್ಯಾಯ ಸಂಹಿತವನ್ನು ಜಾರಿಗೆ ತರುವಲ್ಲಿ ಅಸ್ಸಾಂ ದೇಶದಲ್ಲಿಯೇ ನಂಬರ್ ಒನ್ ರಾಜ್ಯವಾಗಿದೆ ಎಂದು ತೃಪ್ತಿಯಿಂದ ಉಲ್ಲೇಖಿಸಿದರು. 50 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಪ್ರಿಪೇಯ್ಡ್ ಮೀಟರ್‌ಗಳನ್ನು ಸ್ಥಾಪಿಸುವ ಮೂಲಕ ಅಸ್ಸಾಂ ದಾಖಲೆಯನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಲಂಚ ಅಥವಾ ಶಿಫಾರಸುಗಳಿಲ್ಲದೆ ಸರ್ಕಾರಿ ಉದ್ಯೋಗ ಪಡೆಯುವುದು ಅಸಾಧ್ಯವಾಗಿದ್ದ ಹಿಂದಿನ ಹಂಚುವ ಯುಗದೊಂದಿಗೆ ಹೋಲಿಸಿದ ಅವರು ಇಂದು ಸಾವಿರಾರು ಯುವಜನರು ಅಂತಹ ಪದ್ಧತಿಗಳಿಲ್ಲದೆ ನ್ಯಾಯೋಚಿತವಾಗಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ತಮ್ಮ ಸರ್ಕಾರದ ಅಡಿಯಲ್ಲಿ, ಅಸ್ಸಾಂನ ಸಂಸ್ಕೃತಿಯನ್ನು ಪ್ರತಿಯೊಂದು ವೇದಿಕೆಯಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ ಎಂದು ಶ್ರೀ ಮೋದಿ ಮತ್ತಷ್ಟು ವಿವರಿಸಿದರು. 2023 ರ ಏಪ್ರಿಲ್ 13 ರಂದು ಗುವಾಹಟಿ ಕ್ರೀಡಾಂಗಣದಲ್ಲಿ 11,000 ಕ್ಕೂ ಹೆಚ್ಚು ಕಲಾವಿದರು ಒಟ್ಟಾಗಿ ಬಿಹು ನೃತ್ಯ ಪ್ರದರ್ಶಿಸಿದ ಐತಿಹಾಸಿಕ ಘಟನೆಯನ್ನು ಅವರು ನೆನಪಿಸಿಕೊಂಡರು, ಈ ಸಾಧನೆ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ. ಇಂತಹ ಹೊಸ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಸ್ಸಾಂ ವೇಗವಾಗಿ ಮುನ್ನಡೆಯುತ್ತಿದೆ ಎಂದೂ ಅವರು ಹೇಳಿದರು.

ಹೊಸ ಟರ್ಮಿನಲ್ ಕಟ್ಟಡದಿಂದಾಗಿ, ಗುವಾಹಟಿ ಮತ್ತು ಅಸ್ಸಾಂನ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗಲಿದ್ದು, ವಾರ್ಷಿಕವಾಗಿ 1.25 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ ಶ್ರೀ ಮೋದಿ, ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಸ್ಸಾಂಗೆ ಭೇಟಿ ನೀಡಲು ಅವಕಾಶ ನೀಡುತ್ತದೆ ಮತ್ತು ಭಕ್ತರು ಮಾ ಕಾಮಾಖ್ಯ ದರ್ಶನ ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದರು. ಈ ಹೊಸ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಕಾಲಿಡುವಾಗ ಅದು ಪರಂಪರೆಯ ಜೊತೆಗೆ ಅಭಿವೃದ್ಧಿಯ ಮಂತ್ರದ ನಿಜವಾದ ಅರ್ಥವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ವಿಮಾನ ನಿಲ್ದಾಣವನ್ನು ಅಸ್ಸಾಂನ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಒಳಗೆ ಹಸಿರು ಮತ್ತು ಒಳಾಂಗಣ ಅರಣ್ಯವನ್ನು ಹೋಲುವಂತಹ ವ್ಯವಸ್ಥೆಗಳಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಪ್ರತಿಯೊಬ್ಬ ಪ್ರಯಾಣಿಕರು ಶಾಂತಿ ಮತ್ತು ಸೌಕರ್ಯವನ್ನು ಅನುಭವಿಸುವಂತೆ ಅದರ ವಿನ್ಯಾಸವು ಸುತ್ತಲಿನ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ ಎಂದು ಅವರು ಹೇಳಿದರು. ನಿರ್ಮಾಣದಲ್ಲಿ ಬಿದಿರಿನ ವಿಶೇಷ ಬಳಕೆಯನ್ನು ಅವರು ಮತ್ತಷ್ಟು ಉಲ್ಲೇಖಿಸಿದರು, ಬಿದಿರು ಅಸ್ಸಾಂನಲ್ಲಿ ಜೀವನದ ಅವಿಭಾಜ್ಯ ಅಂಗವಾಗಿದೆ, ಇದು ಶಕ್ತಿ ಮತ್ತು ಸೌಂದರ್ಯ ಎರಡನ್ನೂ ಸಂಕೇತಿಸುತ್ತದೆ ಎಂದು ತಿಳಿಸಿದರು. 2017 ರಲ್ಲಿ ತಮ್ಮ ಸರ್ಕಾರವು ಒಂದು ಮಹತ್ವದ ಕ್ರಮದಲ್ಲಿ 1927 ರ ಭಾರತೀಯ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಿ ಅರಣ್ಯೇತರ ಪ್ರದೇಶಗಳಲ್ಲಿ ಬೆಳೆದ ಬಿದಿರನ್ನು "ಮರ" ಬದಲಿಗೆ "ಹುಲ್ಲು" ಎಂದು ಕಾನೂನುಬದ್ಧವಾಗಿ ಮರುವರ್ಗೀಕರಿಸಿತು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಈ ಕ್ರಮವು ಇಂದು ಹೊಸ ಟರ್ಮಿನಲ್ ರೂಪದಲ್ಲಿ ಅದ್ಭುತ ರಚನೆಯನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯು ಬಹಳ ಮಹತ್ವದ ಸಂದೇಶವನ್ನು ಹೊಂದಿದೆ ಎಂಬುದನ್ನು ತಿಳಿಸಿದ ಪ್ರಧಾನಮಂತ್ರಿ, ಇದು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ, ಹೂಡಿಕೆದಾರರಿಗೆ ಸಂಪರ್ಕದಲ್ಲಿ ವಿಶ್ವಾಸವನ್ನು ನೀಡುತ್ತದೆ ಮತ್ತು ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ದಾರಿಗಳನ್ನು ತೆರೆಯುತ್ತದೆ ಎಂದೂ ಹೇಳಿದರು. ಹೊಸ ಅವಕಾಶಗಳನ್ನು ಸೃಷ್ಟಿಸುವ ಯುವಜನರಿಗೆ ಹೆಚ್ಚಿನ ಭರವಸೆ ನೀಡಲಾಗಿದೆ ಎಂದು ಅವರು ತಿಳಿಸಿದರು. "ಇಂದು, ಅಸ್ಸಾಂ ಅಪರಿಮಿತ ಸಾಧ್ಯತೆಗಳಿಗೆ ಸಂಬಂಧಿಸಿ ವಾಯುವೇಗದಲ್ಲಿ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನ ಬದಲಾಗಿದೆ ಮತ್ತು ಭಾರತದ ಪಾತ್ರವೂ ಬದಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಅವರು ತಿಳಿಸಿದರು. ಕೇವಲ 11 ವರ್ಷಗಳಲ್ಲಿ ಇದನ್ನು ಹೇಗೆ ಸಾಧಿಸಲಾಯಿತು ಎಂದು ಪ್ರಶ್ನಿಸಿದ ಅವರು ಇದರಲ್ಲಿ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಂಕಲ್ಪವನ್ನು ಪೂರೈಸಲು ಭಾರತ 2047 ಕ್ಕೆ ತಯಾರಿ ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಭವ್ಯ ಅಭಿವೃದ್ಧಿ ಅಭಿಯಾನದ ಪ್ರಮುಖ ಅಂಶವೆಂದರೆ ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಪ್ರದೇಶದ ಭಾಗವಹಿಸುವಿಕೆ ಎಂದು ಅವರು ತಿಳಿಸಿದರು. ಸರ್ಕಾರವು ಹಿಂದುಳಿದವರಿಗೆ ಆದ್ಯತೆ ನೀಡುತ್ತಿದೆ, ಪ್ರತಿ ರಾಜ್ಯವು ಒಟ್ಟಾಗಿ ಪ್ರಗತಿ ಸಾಧಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಧ್ಯೇಯಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಗಮನಿಸಿದರು. ಅಸ್ಸಾಂ ಮತ್ತು ಈಶಾನ್ಯವು ಧ್ಯೇಯವನ್ನು ಮುನ್ನಡೆಸುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಆಕ್ಟ್ ಈಸ್ಟ್ ನೀತಿಯ ಮೂಲಕ, ಈಶಾನ್ಯಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಇಂದು ಅಸ್ಸಾಂ ಭಾರತದ ಪೂರ್ವದ ಮಹಾದ್ವಾರವಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಅಸ್ಸಾಂ ಆಸಿಯಾನ್ ದೇಶಗಳೊಂದಿಗೆ ಭಾರತವನ್ನು ಸಂಪರ್ಕಿಸುವ ಸೇತುವೆಯ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಹೇಳಿದರು. ಈ ಆರಂಭ ಇನ್ನೂ ಹೆಚ್ಚಿನದಕ್ಕೆ ಮುಂದುವರಿಯುತ್ತದೆ ಮತ್ತು ಅಸ್ಸಾಂ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಎಂಜಿನ್ ಆಗಲಿದೆ ಎಂದು ಅವರು ದೃಢಪಡಿಸಿದರು.

"ಅಸ್ಸಾಂ ಮತ್ತು ಇಡೀ ಈಶಾನ್ಯವು ಭಾರತದ ಅಭಿವೃದ್ಧಿಯ ಹೊಸ ಮಹಾದ್ವಾರವಾಗುತ್ತಿದೆ" ಎಂದು ಶ್ರೀ ಮೋದಿ ತಿಳಿಸಿದರು, ಬಹು-ಮಾದರಿ ಸಂಪರ್ಕದ ಚಿಂತನೆ/ದೃಷ್ಟಿಕೋನವು ಪ್ರದೇಶದ ಸ್ಥಿತಿ ಮತ್ತು ದಿಕ್ಕನ್ನು ಪರಿವರ್ತಿಸಿದೆ ಎಂದು ಅವರು ಹೇಳಿದರು. ಅಸ್ಸಾಂನಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸುವ ವೇಗ, ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ವೇಗ ಮತ್ತು ಪ್ರತಿಯೊಂದು ಅಭಿವೃದ್ಧಿ ಯೋಜನೆಯ ಅನುಷ್ಠಾನದ ವೇಗವು ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತಿದೆ ಎಂದು ಅವರು ಹೇಳಿದರು. ಬ್ರಹ್ಮಪುತ್ರದ ಮೇಲೆ ನಿರ್ಮಿಸಲಾದ ಸೇತುವೆಗಳು ಅಸ್ಸಾಂಗೆ ಸಂಪರ್ಕದಲ್ಲಿ ಹೊಸ ಶಕ್ತಿ ಮತ್ತು ವಿಶ್ವಾಸವನ್ನು ನೀಡಿವೆ ಎಂದು ಅವರು ತಿಳಿಸಿದರು. ಸ್ವಾತಂತ್ರ್ಯದ ನಂತರ ಆರರಿಂದ ಏಳು ದಶಕಗಳಲ್ಲಿ, ಇಲ್ಲಿ ಕೇವಲ ಮೂರು ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ, ಆದರೆ ಕಳೆದ ದಶಕದಲ್ಲಿ ನಾಲ್ಕು ಹೊಸ ಮೆಗಾ ಸೇತುವೆಗಳು ಪೂರ್ಣಗೊಂಡಿವೆ, ಜೊತೆಗೆ ಹಲವಾರು ಐತಿಹಾಸಿಕ ಯೋಜನೆಗಳು ರೂಪುಗೊಳ್ಳುತ್ತಿವೆ ಎಂದು ಪ್ರಧಾನಮಂತ್ರಿ ಗಮನಸೆಳೆದರು. ಬೋಗಿಬೀಲ್ ಮತ್ತು ಧೋಲಾ-ಸಾಡಿಯಾದಂತಹ ಅತಿ ಉದ್ದದ ಸೇತುವೆಗಳು ಅಸ್ಸಾಂನ್ನು ವ್ಯೂಹಾತ್ಮಕವಾಗಿ ಬಲಪಡಿಸಿವೆ ಎಂದು ಅವರು ನುಡಿದರು. ಬೋಗಿಬೀಲ್ ಸೇತುವೆಯು ಮೇಲಿನ ಅಸ್ಸಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರೊಂದಿಗೆ ರೈಲ್ವೆ ಸಂಪರ್ಕವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ ಎಂದು ಅವರು ತಿಳಿಸಿದರು. ಗುವಾಹಟಿಯಿಂದ ಹೊಸ ಜಲಪೈಗುರಿಗೆ ಸಾಗುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಜಲಮಾರ್ಗಗಳ ಅಭಿವೃದ್ಧಿಯಿಂದ ಅಸ್ಸಾಂ ಕೂಡ ಪ್ರಯೋಜನ ಪಡೆಯುತ್ತಿದೆ ಎಂದು ಶ್ರೀ ಮೋದಿ ಹೇಳಿದರು, ಸರಕು ಸಾಗಣೆ ಶೇ. 140 ರಷ್ಟು ಹೆಚ್ಚುತ್ತಿದೆ, ಇದು ಬ್ರಹ್ಮಪುತ್ರ ಕೇವಲ ನದಿಯಲ್ಲ, ಆರ್ಥಿಕ ಶಕ್ತಿಯ ಹರಿವು ಎಂಬುದನ್ನು ಸಾಬೀತುಪಡಿಸುತ್ತದೆ. ಪಾಂಡುವಿನಲ್ಲಿ ಮೊದಲ ಹಡಗು ದುರಸ್ತಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ವಾರಣಾಸಿಯಿಂದ ದಿಬ್ರುಗಢವರೆಗಿನ ಗಂಗಾ ವಿಲಾಸ್ ಕ್ರೂಸ್ ಕುರಿತಾದ ಉತ್ಸಾಹವು ಈಶಾನ್ಯವನ್ನು ಜಾಗತಿಕ ಕ್ರೂಸ್ ಪ್ರವಾಸೋದ್ಯಮ ನಕ್ಷೆಯಲ್ಲಿ ದೃಢವಾಗಿ ಇರಿಸಿದೆ ಎಂದು ಅವರು ಹೇಳಿದರು.

ಅಸ್ಸಾಂ ಮತ್ತು ಈಶಾನ್ಯವನ್ನು ಅಭಿವೃದ್ಧಿಯಿಂದ ದೂರವಿಟ್ಟಿದ್ದಕ್ಕಾಗಿ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಶ್ರೀ ಮೋದಿ, ಭದ್ರತೆ, ಏಕತೆ ಮತ್ತು ಸಮಗ್ರತೆಯ ವಿಷಯದಲ್ಲಿ ರಾಷ್ಟ್ರವು ಭಾರಿ ಬೆಲೆ ತೆರಬೇಕಾಯಿತು ಎಂದು ಹೇಳಿದರು. ವಿರೋಧ ಪಕ್ಷದ ಆಳ್ವಿಕೆಯಲ್ಲಿ ದಶಕಗಳಿಂದ ಹಿಂಸಾಚಾರವು ಅಭಿವೃದ್ಧಿ ಹೊಂದಿತ್ತು, ಆದರೆ ಕಳೆದ 10-11 ವರ್ಷಗಳಲ್ಲಿ ಅದನ್ನು ಕೊನೆಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಉಲ್ಲೇಖಿಸಿದರು. ಈಶಾನ್ಯದಲ್ಲಿ ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ರಕ್ತಪಾತವು ಮೇಲುಗೈ ಸಾಧಿಸಿದ ಪ್ರದೇಶಗಳಲ್ಲಿ, ಇಂದು 4 ಜಿ ಮತ್ತು 5ಜಿ ತಂತ್ರಜ್ಞಾನದ ಡಿಜಿಟಲ್ ಸಂಪರ್ಕವು ಪ್ರದೇಶಗಳನ್ನು ತಲುಪುತ್ತಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಹಿಂಸಾಚಾರ ಪೀಡಿತ ಎಂದು ಪರಿಗಣಿಸಲಾಗಿದ್ದ ಜಿಲ್ಲೆಗಳು ಈಗ ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಅಭಿವೃದ್ಧಿ ಹೊಂದುತ್ತಿವೆ ಮತ್ತು ಮುಂಬರುವ ದಿನಗಳಲ್ಲಿ ಪ್ರದೇಶಗಳು ಕೈಗಾರಿಕಾ ಕಾರಿಡಾರ್‌ಗಳಾಗುತ್ತವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈಶಾನ್ಯದ ಬಗ್ಗೆ ಹೊಸ ವಿಶ್ವಾಸ ಹುಟ್ಟಿಕೊಂಡಿದೆ ಮತ್ತು ಅದನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಅವರು ತಿಳಿಸಿದರು.

ಸರ್ಕಾರವು ಪ್ರದೇಶದ ಗುರುತು ಮತ್ತು ಸಂಸ್ಕೃತಿಯನ್ನು ಕಾಪಾಡುತ್ತಿರುವುದರಿಂದ ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿಯಲ್ಲಿಯೂ ಯಶಸ್ಸು ಸಾಧಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಗುರುತನ್ನು ಅಳಿಸಿಹಾಕಲು ಪಿತೂರಿ ನಡೆಸಿದ ವಿರೋಧ ಪಕ್ಷಗಳು ಅದನ್ನು ಕೆಲವೇ ವರ್ಷಗಳಿಗಷ್ಟೇ ಸೀಮಿತಗೊಳಿಸಿಲ್ಲ ಎಂದು ಅವರು ಉಲ್ಲೇಖಿಸಿದರು. ಈ ತಪ್ಪಿನ ಬೇರುಗಳು ಸ್ವಾತಂತ್ರ್ಯ ಪೂರ್ವದ ಯುಗಕ್ಕೆ ಹೋಗುತ್ತವೆ, ಆಗ ಮುಸ್ಲಿಂ ಲೀಗ್ ಮತ್ತು ಬ್ರಿಟಿಷ್ ಸರ್ಕಾರ ಭಾರತದ ವಿಭಜನೆಗೆ ನೆಲವನ್ನು ಸಿದ್ಧಪಡಿಸುತ್ತಿತ್ತು ಮತ್ತು ಸಮಯದಲ್ಲಿ ಅಸ್ಸಾಂ ಅನ್ನು ಅವಿಭಜಿತ ಬಂಗಾಳದ ಭಾಗವಾಗಿ, ಅಂದರೆ ಪೂರ್ವ ಪಾಕಿಸ್ತಾನದ ಭಾಗವಾಗಿ ಮಾಡುವ ಯೋಜನೆಯೂ ಇತ್ತು ಎಂದು ಅವರು ಹೇಳಿದರು. ಕಾಂಗ್ರೆಸ್ ಪಿತೂರಿಯ ಭಾಗವಾಗುವುದಿತ್ತು ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು, ಆದರೆ ಶ್ರೀ ಬಾರ್ಡೋಲೋಯ್ ಜೀ ಅವರು ತಮ್ಮದೇ ಪಕ್ಷದ ವಿರುದ್ಧ ನಿಂತರು, ಅಸ್ಸಾಂನ ಗುರುತನ್ನು ನಾಶಮಾಡುವ ಸಂಚನ್ನು ವಿರೋಧಿಸಿದರು ಮತ್ತು ಅಸ್ಸಾಂ ನ್ನು ದೇಶದಿಂದ ಬೇರ್ಪಡಿಸದಂತೆ ಉಳಿಸಿದರು. ತಮ್ಮ ಪಕ್ಷವು ಪಕ್ಷದ ರೇಖೆಗಳನ್ನು ಮೀರಿ ಪ್ರತಿಯೊಬ್ಬ ದೇಶಭಕ್ತರನ್ನು ಗೌರವಿಸುತ್ತದೆ ಮತ್ತು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಾರ್ಡೋಲೋಯ್ ಅವರಿಗೆ ಭಾರತ ರತ್ನವನ್ನು ನೀಡಲಾಯಿತು ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ಬಾರ್ಡೋಲೋಯ್ ಜೀ ಅವರು ಅಸ್ಸಾಂನ್ನು ಉಳಿಸಿದ್ದರು, ಆದರೆ ಸ್ವಾತಂತ್ರ್ಯಾನಂತರದ ಮೊದಲ ಆಡಳಿತ ಪಕ್ಷವು ನಂತರ ಮತ್ತೊಮ್ಮೆ ಅಸ್ಸಾಂ ವಿರೋಧಿ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಪ್ರಾರಂಭಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಧಾರ್ಮಿಕ ಓಲೈಕೆಯ ಮೂಲಕ ತಮ್ಮ ಮತಬ್ಯಾಂಕ್ ವಿಸ್ತರಿಸಲು, ಬಂಗಾಳ ಮತ್ತು ಅಸ್ಸಾಂನಲ್ಲಿ ನುಸುಳುಕೋರರಿಗೆ ಮುಕ್ತ ಅವಕಾಶವನ್ನು ನೀಡಲು ಸಂಚು ರೂಪಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಪ್ರದೇಶದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲಾಯಿತು ಮತ್ತು ನುಸುಳುಕೋರರು ಅರಣ್ಯ ಮತ್ತು ಭೂಮಿಯನ್ನು ಅತಿಕ್ರಮಿಸಿದರು ಎಂದು ಅವರು ಹೇಳಿದರು. ಇದರ ಪರಿಣಾಮವಾಗಿ, ಇಡೀ ಅಸ್ಸಾಂ ರಾಜ್ಯದ ಭದ್ರತೆ ಮತ್ತು ಗುರುತನ್ನು ಅಪಾಯಕ್ಕೆ ಸಿಲುಕಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದ ಸರ್ಕಾರವು ಅಸ್ಸಾಂನ ಸಂಪನ್ಮೂಲಗಳನ್ನು ಅಕ್ರಮ ಮತ್ತು ರಾಷ್ಟ್ರವಿರೋಧಿ ಅತಿಕ್ರಮಣಗಳಿಂದ ಮುಕ್ತಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಅಸ್ಸಾಂನ ಸಂಪನ್ಮೂಲಗಳಿಂದ ಅಸ್ಸಾಂನ ಜನರಿಗೆ ಪ್ರಯೋಜನ ಲಭಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಹಂತದಲ್ಲೂ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರವು ಒಳನುಸುಳುವಿಕೆಯನ್ನು ನಿಲ್ಲಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಅಕ್ರಮ ನುಸುಳುಕೋರರನ್ನು ನಿವಾರಿಸಲು ಗುರುತಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ನುಸುಳುಕೋರರನ್ನು ನಿವಾರಿಸುವ ಬಗ್ಗೆ ಮಾತನಾಡಿದ್ದರೂ, ವಿರೋಧ ಪಕ್ಷಗಳು ಮತ್ತು ಅವರ ಮೈತ್ರಿಕೂಟವು ಬಹಿರಂಗವಾಗಿ ರಾಷ್ಟ್ರವಿರೋಧಿ ಕಾರ್ಯಸೂಚಿಗಳನ್ನು ಅಳವಡಿಸಿಕೊಂಡಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ಪಕ್ಷಗಳು ನುಸುಳುಕೋರರ ಪರವಾಗಿ ಹೇಳಿಕೆಗಳನ್ನು ನೀಡುತ್ತಿವೆ ಮತ್ತು ಅವರ ವಕೀಲರು ನ್ಯಾಯಾಲಯದಲ್ಲಿ ಅದನ್ನು ಇತ್ಯರ್ಥಪಡಿಸಲು ವಾದಿಸುತ್ತಿದ್ದಾರೆ ಎಂಬುದರತ್ತ ಅವರು ಗಮನ ಸೆಳೆದರು. ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಎಸ್.ಐ.ಆರ್.(SIR) ಪ್ರಕ್ರಿಯೆಯನ್ನು ನಡೆಸುತ್ತಿರುವಾಗ, ಈ ಗುಂಪುಗಳು ಅದನ್ನು ವಿರೋಧಿಸುತ್ತಿವೆ ಎಂಬುದರತ್ತಲೂ ಅವರು ಬೆಟ್ಟು ಮಾಡಿದರು. ಅಂತಹ ಜನರು ಅಸ್ಸಾಮಿ ಸಹೋದರ ಸಹೋದರಿಯರ ಹಿತಾಸಕ್ತಿಗಳನ್ನು ರಕ್ಷಿಸುವುದಿಲ್ಲ ಮತ್ತು ಇತರರು ತಮ್ಮ ಭೂಮಿ ಮತ್ತು ಕಾಡುಗಳನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುತ್ತಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಅವರ ರಾಷ್ಟ್ರವಿರೋಧಿ ಮನಸ್ಥಿತಿಯು ಹಿಂದಿನ ಕಾಲದ ಹಿಂಸಾಚಾರ ಮತ್ತು ಅಶಾಂತಿಯನ್ನು ಮರುಸೃಷ್ಟಿಸಬಹುದು ಎಂದು ಅವರು ಎಚ್ಚರಿಸಿದರು. ಆದ್ದರಿಂದ ಅಸ್ಸಾಂನ ಜನರು ಒಗ್ಗಟ್ಟಿನಿಂದ ಇರಲು ಮತ್ತು ಅಸ್ಸಾಂನ ಅಭಿವೃದ್ಧಿ ಹಳಿತಪ್ಪದಂತೆ ತಡೆಯಲು ವಿರೋಧ ಪಕ್ಷದ ಪಿತೂರಿಗಳನ್ನು ಸೋಲಿಸುವುದನ್ನು ಮುಂದುವರಿಸಲು ಜಾಗರೂಕರಾಗಿರುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

"ಇಂದು ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ, ಮತ್ತು ಭಾರತದ ಭವಿಷ್ಯದ ಹೊಸ ಸೂರ್ಯೋದಯವು ಈಶಾನ್ಯದಿಂದ ಪ್ರಾರಂಭವಾಗಲಿದೆ" ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು. ಇದಕ್ಕಾಗಿ, ಅಸ್ಸಾಂನ ಅಭಿವೃದ್ಧಿಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಹಂಚಿಕೆಯ ಕನಸುಗಳತ್ತ ಕೆಲಸ ಮಾಡಲು ಸಾಮೂಹಿಕ ಪ್ರಯತ್ನಗಳು ಅಗತ್ಯವಿದೆ ಎಂದು ಅವರು ತಿಳಿಸಿದರು. ಈ ಜಂಟಿ ಪ್ರಯತ್ನಗಳು ಅಸ್ಸಾಂನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಪೂರೈಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿ ಮತ್ತೊಮ್ಮೆ ಹೊಸ ಟರ್ಮಿನಲ್ ಉದ್ಘಾಟನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಅಸ್ಸಾಂ ರಾಜ್ಯಪಾಲ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ, ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ಕೆ ರಾಮಮೋಹನ್ ನಾಯ್ಡು, ಶ್ರೀ ಮುರಳೀಧರ್ ಮೊಹೋಲ್, ಶ್ರೀ ಪಬಿತ್ರ ಮಾರ್ಗರಿಟಾ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬಾರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸದಾಗಿ ಪೂರ್ಣಗೊಂಡ ಸುಮಾರು 1.4 ಲಕ್ಷ ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರುವ ಸಮಗ್ರ ಟರ್ಮಿನಲ್ ಕಟ್ಟಡವನ್ನು ವಾರ್ಷಿಕವಾಗಿ 1.3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದು ರನ್‌ವೇ, ಏರ್‌ಫೀಲ್ಡ್ ವ್ಯವಸ್ಥೆಗಳು, ಏಪ್ರನ್‌ಗಳು ಮತ್ತು ಟ್ಯಾಕ್ಸಿವೇಗಳಿಗೆ ಸಂಬಂಧಿಸಿದ ಪ್ರಮುಖ ನವೀಕರಣಗಳಿಂದ ಬೆಂಬಲಿತವಾಗಿದೆ.

ಭಾರತದ ಮೊದಲ ಪ್ರಕೃತಿ-ವಿಷಯ ಶೀರ್ಷಿಕೆಯ ವಿಮಾನ ನಿಲ್ದಾಣ ಟರ್ಮಿನಲ್, ವಿಮಾನ ನಿಲ್ದಾಣದ ವಿನ್ಯಾಸವು "ಬಿದಿರು ಆರ್ಕಿಡ್‌ಗಳು" ಎಂಬ ವಿಷಯ ಶೀರ್ಷಿಕೆಯ ಅಡಿಯಲ್ಲಿ ಅಸ್ಸಾಂನ ಜೀವವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ. ಟರ್ಮಿನಲ್ ಸುಮಾರು 140 ಮೆಟ್ರಿಕ್ ಟನ್‌ಗಳಷ್ಟು ಸ್ಥಳೀಯ ಮೂಲದ ಈಶಾನ್ಯ ಬಿದಿರಿನ ಪ್ರವರ್ತಕ ಬಳಕೆಯನ್ನು ಮಾಡಿದೆ, ಇದು ಕಾಜಿರಂಗದಿಂದ ಪ್ರೇರಿತ ಹಸಿರು ಭೂದೃಶ್ಯಗಳು, ಜಪಿ ಲಕ್ಷಣಗಳು, ಐಕಾನಿಕ್ ಖಡ್ಗಮೃಗದ ಚಿಹ್ನೆ ಮತ್ತು ಕೊಪೌ ಹೂವನ್ನು ಪ್ರತಿಬಿಂಬಿಸುವ 57 ಆರ್ಕಿಡ್-ಪ್ರೇರಿತ ಸ್ತಂಭಗಳನ್ನು ಪೂರಕವಾಗಿ ಹೊಂದಿದೆ. ಸುಮಾರು ಒಂದು ಲಕ್ಷ ಸ್ಥಳೀಯ ಜಾತಿಯ ಸಸ್ಯಗಳನ್ನು ಒಳಗೊಂಡ ವಿಶಿಷ್ಟವಾದ "ಸ್ಕೈ ಫಾರೆಸ್ಟ್", ಆಗಮಿಸುವ ಪ್ರಯಾಣಿಕರಿಗೆ ಮಂತ್ರಮುಗ್ಧಗೊಳಿಸುವ ಅರಣ್ಯದಂತಹ ಅನುಭವವನ್ನು ನೀಡುತ್ತದೆ.

ಪ್ರಯಾಣಿಕರ ಅನುಕೂಲತೆ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ಟರ್ಮಿನಲ್ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ. ವೇಗದ, ಭದ್ರತಾ ತಪಾಸಣೆಗಾಗಿ ಪೂರ್ಣ-ದೇಹದ ಸ್ಕ್ಯಾನರ್‌ಗಳು, ಡಿಜಿಯಾತ್ರ-ಸಕ್ರಿಯಗೊಳಿಸಿದ ಸಂಪರ್ಕರಹಿತ ಪ್ರಯಾಣ, ಸ್ವಯಂಚಾಲಿತ ಸಾಮಾನು ನಿರ್ವಹಣೆ, ವಲಸೆ ವಿಭಾಗದಲ್ಲಿ ತ್ವರಿತ ಕಾರ್ಯಾಚರಣೆ ಮತ್ತು ಕೃತಕ ಬುದ್ಧಿಮತ್ತೆ-ಚಾಲಿತ ವಿಮಾನ ನಿಲ್ದಾಣ ಕಾರ್ಯಾಚರಣೆಗಳಂತಹ ವೈಶಿಷ್ಟ್ಯಗಳು ಅಡೆ-ತಡೆರಹಿತ, ಸುರಕ್ಷಿತ ಮತ್ತು ಪರಿಣಾಮಕಾರಿ ಪ್ರಯಾಣಗಳನ್ನು ಖಚಿತಪಡಿಸುತ್ತವೆ.

 

****


(रिलीज़ आईडी: 2207127) आगंतुक पटल : 8
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Gujarati , Odia , Tamil , Telugu , Malayalam