ಪ್ರಧಾನ ಮಂತ್ರಿಯವರ ಕಛೇರಿ
ಓಮನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಸಮುದಾಯ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
प्रविष्टि तिथि:
18 DEC 2025 2:45PM by PIB Bengaluru
ನಮಸ್ಕಾರ!
ಅಲ್ಲಾ ವಾ ಸಹಲಾನ್ !!!
ನಿಮ್ಮೆಲ್ಲರ ಯೌವನದ ಉತ್ಸಾಹ ಮತ್ತು ಚೈತನ್ಯವು ಇಲ್ಲಿನ ವಾತಾವರಣವನ್ನು ನಿಜವಾಗಿಯೂ ಚೈತನ್ಯಗೊಳಿಸಿದೆ. ಈ ಸಭಾಂಗಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ಹತ್ತಿರದ ಸಭಾಂಗಣದಲ್ಲಿ ಕುಳಿತು ಪರದೆಗಳಲ್ಲಿ ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಲ್ಲಿಯವರೆಗೆ ಬಂದಿದ್ದರೂ ಸಭಾಂಗಣಕ್ಕೆ ಪ್ರವೇಶಿಸಲು ಸಾಧ್ಯವಾಗದ ಅವರಿಗೆ ಹೇಗೆ ಅನಿಸುತ್ತಿರಬಹುದು ಎಂಬುದನ್ನು ನೀವೇ ಊಹಿಸಬಹುದು.
ಸ್ನೇಹಿತರೆ,
ನನ್ನ ಮುಂದೆ ಒಂದು ಮಿನಿ ಭಾರತವೇ ಕಾಣುತ್ತಿದೆ; ಇಲ್ಲಿಯೂ ಬಹಳಷ್ಟು ಮಲಯಾಳಿಗಳು ಇದ್ದಾರೆ ಅಂತ ನನಗನ್ನಿಸುತ್ತೆ.
ಸುಖಮ್ ಆಣೋ?
ಕೇವಲ ಮಲಯಾಳಂ ಮಾತನಾಡುವವರಲ್ಲದೆ, ಇಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಗುಜರಾತಿ ಮಾತನಾಡುವ ಅನೇಕ ಜನರಿದ್ದಾರೆ.
ನಲಮಾ?
ಬಾಗುನ್ನಾರಾ?
ಚೆನ್ನಾಗಿದ್ದೀರಾ?
ಕೆಮ ಛೋ?
ಸ್ನೇಹಿತರೆ,
ಇಂದು ನಾವು ಒಂದು ಕುಟುಂಬದಂತೆ ಒಟ್ಟುಗೂಡಿದ್ದೇವೆ. ಇಂದು ನಾವು ನಮ್ಮ ದೇಶ, ನಮ್ಮ ಟೀಮ್ ಇಂಡಿಯಾ ಚೈತನ್ಯವನ್ನು ಆಚರಿಸುತ್ತಿದ್ದೇವೆ.
ಸ್ನೇಹಿತರೆ,
ಭಾರತದಲ್ಲಿ ನಮ್ಮ ವೈವಿಧ್ಯತೆಯು ನಮ್ಮ ಸಂಸ್ಕೃತಿಯ ಬಲಿಷ್ಠ ಅಡಿಪಾಯವಾಗಿದೆ. ಪ್ರತಿದಿನ ಜೀವನಕ್ಕೆ ಹೊಸ ಚಿತ್ತಾರ ಮೂಡಿಸುಸುತ್ತದೆ, ಪ್ರತಿ ಋತುವು ಆಚರಣೆಯಾಗಿ ಬದಲಾಗುತ್ತದೆ ಮತ್ತು ಪ್ರತಿಯೊಂದು ಸಂಪ್ರದಾಯವು ಹೊಸ ದೃಷ್ಟಿಕೋನವನ್ನು ತರುತ್ತದೆ.
ಅದಕ್ಕಾಗಿಯೇ, ಭಾರತೀಯರು ಎಲ್ಲಿಗೆ ಹೋದರೂ ಮತ್ತು ನಾವು ವಾಸಿಸುವಲ್ಲೆಲ್ಲಾ, ನಾವು ವೈವಿಧ್ಯತೆಯನ್ನು ಗೌರವಿಸುತ್ತೇವೆ. ನಾವು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೊಂದಿಕೊಳ್ಳುತ್ತೇವೆ. ಇಂದು ಓಮನ್‌ನಲ್ಲಿ ನಾನು ಅದೇ ಮನೋಭಾವ ನೋಡುತ್ತಿದ್ದೇನೆ
ಈ ಎಲ್ಲಾ ಅನಿವಾಸಿ ಭಾರತೀಯರು ಸಹಬಾಳ್ವೆ ಮತ್ತು ಸಹಕಾರದ ಜೀವಂತ ಉದಾಹರಣೆಯಾಗಿದ್ದಾರೆ.
ಸ್ನೇಹಿತರೆ,
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇತ್ತೀಚೆಗೆ ಮತ್ತೊಂದು ಅದ್ಭುತ ಮನ್ನಣೆಯನ್ನು ಪಡೆದಿದೆ. ನಿಮಗೆ ತಿಳಿದಿರುವಂತೆ, ಯುನೆಸ್ಕೊ ದೀಪಾವಳಿಯನ್ನು ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ.
ಈಗ ದೀಪಾವಳಿ ದೀಪವು ನಮ್ಮ ಮನೆಗಳನ್ನು ಮಾತ್ರವಲ್ಲದೆ, ಇಡೀ ಜಗತ್ತನ್ನು ಬೆಳಗಿಸುತ್ತದೆ. ಇದು ಜಗತ್ತಿನಾದ್ಯಂತ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ. ದೀಪಾವಳಿಯ ಜಾಗತಿಕ ಮನ್ನಣೆಯು ನಾವು ಹಂಚಿಕೊಳ್ಳುವ ಬೆಳಕನ್ನು ಗೌರವಿಸುತ್ತದೆ. ಭರವಸೆ, ಸಾಮರಸ್ಯ ಮತ್ತು ಮಾನವತೆಯನ್ನು ಹರಡುವ ಬೆಳಕು.
ಸ್ನೇಹಿತರೆ,
ಇಂದು ನಾವೆಲ್ಲರೂ ಭಾರತ-ಓಮನ್ "ಸ್ನೇಹ ಉತ್ಸವ(ಮೈತ್ರಿ ಪರ್ವ್)" ಆಚರಿಸಲು ಇಲ್ಲಿದ್ದೇವೆ.
ಮೈತ್ರಿ ಎಂದರೆ:
ಎಂ ಅಂದರೆ ಕಡಲ ಪರಂಪರೆ
ಎ ಅಂದರೆ ಆಕಾಂಕ್ಷೆಗಳು
ಐ ಅಂದರೆ ನಾವೀನ್ಯತೆ
ಟಿ ಅಂದರೆ ನಂಬಿಕೆ ಮತ್ತು ತಂತ್ರಜ್ಞಾನ
ಆರ್ ಅಂದರೆ ಗೌರವ
ಐ ಎಂದರೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಅಥವಾ ಬೆಳವಣಿಗೆ
ಬೇರೆ ರೀತಿಯಲ್ಲಿ ಹೇಳುವುದಾದರೆ, ಈ "ಮೈತ್ರಿ ಪರ್ವ್" ನಮ್ಮ 2 ದೇಶಗಳ ನಡುವಿನ ಬಾಂಧವ್ಯ, ನಮ್ಮ ಹಂಚಿಕೆಯ ಇತಿಹಾಸ ಮತ್ತು ನಮ್ಮ ಸಮೃದ್ಧ ಭವಿಷ್ಯವನ್ನು ಆಚರಿಸುತ್ತದೆ. ಭಾರತ ಮತ್ತು ಓಮನ್ ಶತಮಾನಗಳಿಂದ ಬೆಚ್ಚಗಿನ ಮತ್ತು ರೋಮಾಂಚಕ ಸಂಬಂಧವನ್ನು ಅನುಭವಿಸಿವೆ.
ಹಿಂದೂ ಮಹಾಸಾಗರದ ಮುಂಗಾರು ಮಾರುತಗಳು 2 ದೇಶಗಳ ನಡುವಿನ ವ್ಯಾಪಾರಕ್ಕೆ ಮಾರ್ಗದರ್ಶನ ನೀಡಿವೆ. ನಮ್ಮ ಪೂರ್ವಜರು ಲೋಥಾಲ್, ಮಾಂಡ್ವಿ ಮತ್ತು ತಾಮ್ರಲಿಪ್ಟಿಯಂತಹ ಬಂದರುಗಳಿಂದ ಮಸ್ಕತ್, ಸುರ್ ಮತ್ತು ಸಲಾಲಾಗೆ ಮರದ ದೋಣಿಗಳಲ್ಲಿ ಪ್ರಯಾಣ ಬೆಳೆಸಿದರು.
ಸ್ನೇಹಿತರೆ,
ನಮ್ಮ ರಾಯಭಾರ ಕಚೇರಿಯು ಮಾಂಡ್ವಿ ಮತ್ತು ಮಸ್ಕತ್ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುಸ್ತಕದಲ್ಲಿ ದಾಖಲಿಸಿದೆ ಎಂಬುದರಿಂದ ನನಗೆ ಸಂತೋಷ ತಂದಿದೆ. ಇಲ್ಲಿರುವ ಪ್ರತಿಯೊಬ್ಬ ನಿವಾಸಿ, ವಿಶೇಷವಾಗಿ ಯುವಕರು ಇದನ್ನು ಓದಲು ಮತ್ತು ಅವರ ಓಮನ್ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತೆ ನಾನು ಪ್ರೋತ್ಸಾಹಿಸುತ್ತೇನೆ.
ಈಗ, ಶಿಕ್ಷಕರು ಶಾಲೆಯಲ್ಲಿ ಮನೆ ಕೆಲಸ ನೀಡುತ್ತಾರೆ ಎಂದು ನೀವು ಭಾವಿಸಬಹುದು, ಮತ್ತು ಇಲ್ಲಿ, ಮೋದಿ ಅವರು ಸಹ ಮನೆ ಕೆಲಸ ನೀಡಿದ್ದಾರೆ!
ಸ್ನೇಹಿತರೆ,
ಈ ಪುಸ್ತಕವು ಭಾರತ ಮತ್ತು ಓಮನ್ ಭೌಗೋಳಿಕತೆಯಿಂದ ಮಾತ್ರವಲ್ಲದೆ ತಲೆಮಾರುಗಳಿಂದಲೂ ಸಂಪರ್ಕ ಹೊಂದಿದೆ ಎಂಬುದನ್ನು ತೋರಿಸುತ್ತದೆ. ನೀವೆಲ್ಲರೂ ಈ ಶತಮಾನಗಳಷ್ಟು ಹಳೆಯ ಸಂಬಂಧಗಳ ಶ್ರೇಷ್ಠ ಪಾಲಕರಾಗಿದ್ದೀರಿ.
ಸ್ನೇಹಿತರೆ,
"ಭಾರತವನ್ನು ತಿಳಿಯಿರಿ (Know India)" ರಸಪ್ರಶ್ನೆಯಲ್ಲಿ ಓಮನ್ ಭಾಗವಹಿಸುತ್ತಿರುವ ಬಗ್ಗೆಯೂ ನಾನು ತಿಳಿದುಕೊಂಡೆ. ಈ ರಸಪ್ರಶ್ನೆಯಲ್ಲಿ ಓಮನ್‌ನಿಂದ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಓಮನ್ ಜಾಗತಿಕವಾಗಿ 4ನೇ ಸ್ಥಾನ ಪಡೆದುಕೊಂಡಿತು.
ಆದರೆ ನಾನು ಈಗಲೇ ಚಪ್ಪಾಳೆ ತಟ್ಟುವುದಿಲ್ಲ. ಓಮನ್ ನಂಬರ್ 1 ಆಗಬೇಕು! ಸಾಧ್ಯವಾದಷ್ಟು ಜನರು ಸೇರುವ ಮೂಲಕ ಇನ್ನೂ ಹೆಚ್ಚಿನ ಭಾಗವಹಿಸುವಿಕೆಯನ್ನು ನಾನು ನೋಡಬೇಕೆಂದು ಭಾವಿಸುತ್ತೇನೆ. ಭಾರತೀಯ ಮಕ್ಕಳು ಖಂಡಿತವಾಗಿಯೂ ಭಾಗವಹಿಸಬೇಕು, ಆದರೆ ನೀವು ನಿಮ್ಮ ಓಮನ್ ಸ್ನೇಹಿತರನ್ನು ಸಹ ರಸಪ್ರಶ್ನೆಯಲ್ಲಿ ಸೇರಲು ಪ್ರೋತ್ಸಾಹಿಸಬೇಕು.
ಸ್ನೇಹಿತರೆ,
ವ್ಯಾಪಾರದಿಂದ ಪ್ರಾರಂಭವಾದ ಭಾರತ-ಓಮನ್ ಸಂಬಂಧವನ್ನು ಈಗ ಶಿಕ್ಷಣದ ಮೂಲಕ ಬಲಪಡಿಸಲಾಗುತ್ತಿದೆ. ಓಮನ್‌ನಲ್ಲಿ ವಾಸಿಸುವ ಇತರ ಸಮುದಾಯಗಳ ಸಾವಿರಾರು ಮಕ್ಕಳು ಸೇರಿದಂತೆ ಸುಮಾರು 46,000 ವಿದ್ಯಾರ್ಥಿಗಳು ಇಲ್ಲಿನ ಭಾರತೀಯ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದುಬಂದಿದೆ.
ಓಮನ್‌ನಲ್ಲಿ ಭಾರತೀಯ ಶಿಕ್ಷಣವು 50 ವರ್ಷಗಳನ್ನು ಪೂರೈಸುತ್ತಿದೆ. ಇದು ನಮ್ಮ ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.
ಸ್ನೇಹಿತರೆ,
ಭಾರತೀಯ ಶಾಲೆಗಳ ಯಶಸ್ಸು ದಿವಂಗತ ಸುಲ್ತಾನ್ ಖಾಬೂಸ್ ಅವರ ಪ್ರಯತ್ನಗಳಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಅವರು ಭಾರತೀಯ ಶಾಲೆ, ಮಸ್ಕತ್ ಸೇರಿದಂತೆ ಭಾರತೀಯ ಶಾಲೆಗಳಿಗೆ ಭೂಮಿ ಮತ್ತು ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸಿದರು. ಮಹಾರಾಜ ಸುಲ್ತಾನ್ ಹೈಥಮ್ ಈ ಸಂಪ್ರದಾಯವನ್ನು ಮುಂದುವರೆಸಿದ್ದಾರೆ.
ಇಲ್ಲಿನ ಭಾರತೀಯ ಸಮುದಾಯವನ್ನು ಅವರು ಬೆಂಬಲಿಸುವ ಮತ್ತು ರಕ್ಷಿಸುವ ರೀತಿಗೆ ನಾನು ನನ್ನ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.
ಸ್ನೇಹಿತರೆ,
ನೀವೆಲ್ಲರೂ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದ ಬಗ್ಗೆ ತಿಳಿದಿದ್ದೀರಿ. ಓಮನ್ ನ ಅನೇಕ ವಿದ್ಯಾರ್ಥಿಗಳು ಸಹ ಇದರಲ್ಲಿ ಭಾಗವಹಿಸುತ್ತಾರೆ. ಒತ್ತಡರಹಿತ ರೀತಿಯಲ್ಲಿ ಪರೀಕ್ಷೆಗಳನ್ನು ಎದುರಿಸಲು ನಮಗೆ ಮಾರ್ಗದರ್ಶನ ನೀಡುವುದರಿಂದ ಈ ಚರ್ಚೆಗಳು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯಕವಾಗಿವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಓಮನ್ ನಲ್ಲಿ ವಾಸಿಸುವ ಭಾರತೀಯರು ಆಗಾಗ್ಗೆ ಭಾರತಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸುತ್ತಾರೆ, ಅವರು ದೇಶದ ಪ್ರತಿ ಬೆಳವಣಿಗೆಯ ಬಗ್ಗೆ ನವೀಕೃತವಾಗಿರುತ್ತಾರೆ. ಭಾರತವು ಪ್ರಗತಿಯ ಹೊಸ ಆವೇಗದೊಂದಿಗೆ ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ನೀವೆಲ್ಲರೂ ನೋಡುತ್ತಿದ್ದೀರಿ. ಈ ವೇಗವು ನಮ್ಮ ಉದ್ದೇಶಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಕಾರ್ಯಕ್ಷಮತೆಯಲ್ಲಿ ಸ್ಪಷ್ಟವಾಗಿದೆ.
ಕೆಲವೇ ದಿನಗಳ ಹಿಂದೆ, ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಯಿತು. ನಿಮಗೆ ತಿಳಿದಿರುವಂತೆ, ಭಾರತದ ಬೆಳವಣಿಗೆ 8% ಮೀರಿದೆ. ಇದರರ್ಥ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆದಿದೆ. ಇಡೀ ಜಗತ್ತು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಇದು ಸಂಭವಿಸಿದೆ. ಅತಿದೊಡ್ಡ ಆರ್ಥಿಕತೆಗಳು ಆರ್ಥಿಕ ಬೆಳವಣಿಗೆ ಸಾಧಿಸಲು ಹೆಣಗಾಡುತ್ತಿವೆ, ಆದರೂ ಭಾರತವು ಹೆಚ್ಚಿನ ಬೆಳವಣಿಗೆಯ ಹಾದಿಯಲ್ಲಿ ಮುಂದುವರೆದಿದೆ. ಇದು ಇಂದು ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಸ್ನೇಹಿತರೆ,
ಇಂದು ಭಾರತವು ಪ್ರತಿಯೊಂದು ವಲಯ ಮತ್ತು ರಂಗದಲ್ಲಿ ಅಭೂತಪೂರ್ವ ವೇಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ 11 ವರ್ಷಗಳ ಕೆಲವು ಅಂಕಿಅಂಶಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಅದು ನಿಮಗೆ ಹೆಮ್ಮೆ ತರುತ್ತದೆ ಎಂಬುದು ನನಗೆ ಖಚಿತವಾಗಿದೆ.
ಇಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಇರುವುದರಿಂದ, ಶಿಕ್ಷಣ ಮತ್ತು ಕೌಶಲ್ಯ ವಲಯದ ಬಗ್ಗೆ ನಾನು ಚರ್ಚೆ ಪ್ರಾರಂಭಿಸುತ್ತೇನೆ. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ಸಾವಿರಾರು ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ಐಐಟಿಗಳ ಸಂಖ್ಯೆ 16ರಿಂದ 23ಕ್ಕೆ ಏರಿದೆ. 11 ವರ್ಷಗಳ ಹಿಂದೆ ಭಾರತದಲ್ಲಿ 13 ಐಐಎಂಗಳು ಇದ್ದವು. ಇಂದು 21 ಇವೆ. ಅದೇ ರೀತಿ, ಏಮ್ಸ್‌ಗೆ ಸಂಬಂಧಿಸಿದಂತೆ 2014ಕ್ಕಿಂತ ಮೊದಲು, ಕೇವಲ 7 ಇದ್ದವು, ಇಂದು ಭಾರತದಲ್ಲಿ 22 ಏಮ್ಸ್‌ಗಳಿವೆ.
ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 400ಕ್ಕಿಂತ ಕಡಿಮೆಯಿತ್ತು, ಇಂದು ದೇಶಾದ್ಯಂತ ಸುಮಾರು 800 ವೈದ್ಯಕೀಯ ಕಾಲೇಜುಗಳಿವೆ.
ಸ್ನೇಹಿತರೆ,
ಇಂದು ನಾವು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಮ್ಮ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದ್ದೇವೆ. ಹೊಸ ಶಿಕ್ಷಣ ನೀತಿ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ನೀತಿ ಮಾದರಿಯ ಭಾಗವಾಗಿ, 14 ಸಾವಿರಕ್ಕೂ ಹೆಚ್ಚು ಪಿಎಂ ಶ್ರೀ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.
ಸ್ನೇಹಿತರೆ,
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿಸ್ತರಿಸಿದಾಗ, ಕಟ್ಟಡಗಳು ಮಾತ್ರ ನಿರ್ಮಾಣವಾಗದೆ, ರಾಷ್ಟ್ರದ ಭವಿಷ್ಯವು ಬಲಗೊಳ್ಳುತ್ತದೆ.
ಸ್ನೇಹಿತರೆ,
ಭಾರತದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವು ಶಿಕ್ಷಣದಲ್ಲಿ ಮಾತ್ರವಲ್ಲದೆ, ಇತರೆ ವಲಯಗಳಲ್ಲಿಯೂ ಸ್ಪಷ್ಟವಾಗಿದೆ. ಕಳೆದ 11 ವರ್ಷಗಳಲ್ಲಿ ಭಾರತದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು 30 ಪಟ್ಟು ಹೆಚ್ಚಾಗಿದೆ, ಸೌರ ಮಾಡ್ಯೂಲ್ ಉತ್ಪಾದನೆಯು 10 ಪಟ್ಟು ಹೆಚ್ಚಾಗಿದೆ. ಹೀಗಾಗಿ ಭಾರತವು ಹಸಿರು ಬೆಳವಣಿಗೆಯತ್ತ ವೇಗವಾಗಿ ಮುನ್ನಡೆಯುತ್ತಿದೆ.
ಇಂದು ಭಾರತವು ವಿಶ್ವದ ಅತಿದೊಡ್ಡ ಹಣಕಾಸು ತಂತ್ರಜ್ಞಾನ ಪರಿಸರ ವ್ಯವಸ್ಥೆಯ ನೆಲೆಯಾಗಿದೆ, 2ನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು 2ನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವಾಗಿದೆ.
ಸ್ನೇಹಿತರೆ,
ಇಂದು ಭಾರತಕ್ಕೆ ಭೇಟಿ ನೀಡುವ ಯಾರಾದರೂ ನಮ್ಮ ಆಧುನಿಕ ಮೂಲಸೌಕರ್ಯವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಕಳೆದ 11 ವರ್ಷಗಳಲ್ಲಿ ನಾವು ಮೂಲಸೌಕರ್ಯದಲ್ಲಿ 5 ಪಟ್ಟು ಹೆಚ್ಚು ಹೂಡಿಕೆ ಮಾಡಿರುವುದರಿಂದ ಇದು ಸಾಧ್ಯವಾಗಿದೆ.
ವಿಮಾನ ನಿಲ್ದಾಣಗಳ ಸಂಖ್ಯೆ2 ಪಟ್ಟು ಹೆಚ್ಚಾಗಿದೆ. ಇಂದು ಹೆದ್ದಾರಿಗಳನ್ನು ಹಿಂದಿನದಕ್ಕಿಂತ 2 ಪಟ್ಟು ವೇಗವಾಗಿ ನಿರ್ಮಿಸಲಾಗುತ್ತಿದೆ, ರೈಲ್ವೆ ಮಾರ್ಗಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲಾಗುಗುತ್ತಿದೆ, ರೈಲ್ವೆ ವಿದ್ಯುದೀಕರಣ ಕಾರ್ಯವೂ ನಡೆಯುತ್ತಿದೆ.
ಸ್ನೇಹಿತರೆ,
ಈ ಅಂಕಿಅಂಶಗಳು ಕೇವಲ ಸಾಧನೆಗಳಲ್ಲ, ಅವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಭಾರತದ ದೃಷ್ಟಿಕೋನಕ್ಕೆ ಕಾರಣವಾಗುವ ಹೆಜ್ಜೆಗಳಾಗಿವೆ. 21ನೇ ಶತಮಾನದ ಭಾರತವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ, ತ್ವರಿತವಾಗಿ ಕಾರ್ಯ ನಿರ್ವಹಿಸುತ್ತದೆ, ಮಹತ್ವಾಕಾಂಕ್ಷೆಯ ಗುರಿಗಳನ್ನು ಅನುಸರಿಸುತ್ತದೆ ಮತ್ತು ನಿಗದಿತ ಸಮಯದೊಳಗೆ ಫಲಿತಾಂಶಗಳನ್ನು ನೀಡುತ್ತಿದೆ.
ಸ್ನೇಹಿತರೆ,
ನಾನು ಹೆಮ್ಮೆಯ ಇನ್ನೊಂದು ವಿಷಯ ಹಂಚಿಕೊಳ್ಳುತ್ತೇನೆ. ಇಂದು ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸುತ್ತಿದೆ.
ಭಾರತದ ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್ಫೇಸ್ ವ್ಯವಸ್ಥೆಯು ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಈ ಪಾವತಿ ವ್ಯವಸ್ಥೆಯ ಪ್ರಮಾಣದ ಕಲ್ಪನೆ ನೀಡಲು, ನಾನು ಒಂದು ಸಣ್ಣ ಉದಾಹರಣೆ ಹಂಚಿಕೊಳ್ಳುತ್ತೇನೆ.
ನಾನು ಇಲ್ಲಿ ಸುಮಾರು 30 ನಿಮಿಷಗಳ ಕಾಲ ಇದ್ದೇನೆ. ಈ 30 ನಿಮಿಷಗಳಲ್ಲಿಯೇ ಭಾರತವು ಯುಪಿಐ ಮೂಲಕ ಸುಮಾರು 14 ದಶಲಕ್ಷ ನೈಜ-ಸಮಯದ ಡಿಜಿಟಲ್ ಪಾವತಿಗಳನ್ನು ಪ್ರಕ್ರಿಯೆಗೊಳಿಸಿದೆ. ಈ ವಹಿವಾಟುಗಳ ಒಟ್ಟು ಮೌಲ್ಯ 20 ಶತಕೋಟಿ ರೂಪಾಯಿಗಳನ್ನು ದಾಟಿದೆ. ದೊಡ್ಡ ಶೋ ರೂಂಗಳಿಂದ ಹಿಡಿದು ಸಣ್ಣ ಮಾರಾಟಗಾರರ ತನಕ, ಭಾರತದ ಪ್ರತಿಯೊಬ್ಬರೂ ಈ ಪಾವತಿ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ.
ಸ್ನೇಹಿತರೆ,
ಇಲ್ಲಿ ಅನೇಕ ವಿದ್ಯಾರ್ಥಿಗಳಿದ್ದಾರೆ, ನಾನು ಇನ್ನೊಂದು ಆಸಕ್ತಿದಾಯಕ ಉದಾಹರಣೆ ಹಂಚಿಕೊಳ್ಳಲು ಬಯಸುತ್ತೇನೆ. ಭಾರತವು ಆಧುನಿಕ ಡಿಜಿಲಾಕರ್ ವ್ಯವಸ್ಥೆ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಿದಾಗ, ಅಂಕಪಟ್ಟಿಗಳನ್ನು ನೇರವಾಗಿ ವಿದ್ಯಾರ್ಥಿಗಳ ಡಿಜಿಲಾಕರ್ ಖಾತೆಗಳಿಗೆ ಅಪ್‌ಲೋಡ್ ಮಾಡಲಾಗುತ್ತದೆ. ಹುಟ್ಟಿನಿಂದ ವೃದ್ಧಾಪ್ಯದವರೆಗೆ, ಸರ್ಕಾರವು ನೀಡುವ ಯಾವುದೇ ದಾಖಲೆಯನ್ನು ಡಿಜಿಲಾಕರ್‌ನಲ್ಲಿ ಸಂಗ್ರಹಿಸಬಹುದು. ಇಂದು ಅಂತಹ ಅನೇಕ ಡಿಜಿಟಲ್ ವ್ಯವಸ್ಥೆಗಳು ಭಾರತದಾದ್ಯಂತ ಜೀವನ ಸುಲಭತೆಯನ್ನು ಖಚಿತಪಡಿಸುತ್ತಿವೆ.
ಸ್ನೇಹಿತರೆ,
ನೀವೆಲ್ಲರೂ ಭಾರತದ ಚಂದ್ರಯಾನ ಕಾರ್ಯಾಚರಣೆಯ ಅದ್ಭುತವನ್ನು ನೋಡಿದ್ದೀರಿ. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ದೇಶ. ಅಷ್ಟೇ ಅಲ್ಲ, ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡುವ ಮೂಲಕ ನಾವು ದಾಖಲೆ ನಿರ್ಮಿಸಿದ್ದೇವೆ.
ಗಗನಯಾನ ಕಾರ್ಯಕ್ರಮದಡಿ ಭಾರತವು ಈಗ ತನ್ನ ಮೊದಲ ಮಾನವ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಉಡಾವಣೆ ಮಾಡಲು ತಯಾರಿ ನಡೆಸುತ್ತಿದೆ. ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಕಕ್ಷೆಯಲ್ಲಿ ಹೊಂದುವ ಸಮಯ ದೂರವಿಲ್ಲ.
ಸ್ನೇಹಿತರೆ,
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ತನ್ನದೇ ಆದ ಗಡಿಗಳಿಗೆ ಸೀಮಿತವಾಗಿಲ್ಲ, ನಾವು ಓಮನ್‌ನ ಬಾಹ್ಯಾಕಾಶ ಆಕಾಂಕ್ಷೆಗಳನ್ನು ಸಹ ಬೆಂಬಲಿಸುತ್ತಿದ್ದೇವೆ. 6ರಿಂದ 7 ವರ್ಷಗಳ ಹಿಂದೆ, ನಾವು ಬಾಹ್ಯಾಕಾಶ ಸಹಕಾರಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇಸ್ರೋ ಸಂಸ್ಥೆಯು ಭಾರತ-ಓಮನ್ ಬಾಹ್ಯಾಕಾಶ ಪೋರ್ಟಲ್ ಅಭಿವೃದ್ಧಿಪಡಿಸಿದೆ ಎಂಬುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಬಾಹ್ಯಾಕಾಶ ಪಾಲುದಾರಿಕೆಯಿಂದ ಓಮನ್ ಯುವಕರು ಸಹ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ನಿರಂತರ ಪ್ರಯತ್ನವಾಗಿದೆ.
ಇಲ್ಲಿ ಹಾಜರಿರುವ ವಿದ್ಯಾರ್ಥಿಗಳೊಂದಿಗೆ ನಾನು ಇನ್ನೊಂದು ಮಾಹಿತಿ ಹಂಚಿಕೊಳ್ಳಲು ಬಯಸುತ್ತೇನೆ. ಇಸ್ರೋ ಸಂಸ್ಥೆಯು 'ಯುವಿಕಾ' ಎಂಬ ವಿಶೇಷ ಕಾರ್ಯಕ್ರಮ ನಡೆಸುತ್ತಿದೆ, ಇದು ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಬಾಹ್ಯಾಕಾಶ ವಿಜ್ಞಾನದಲ್ಲಿ ತೊಡಗಿಸುತ್ತದೆ. ನಮ್ಮ ಪ್ರಸ್ತುತ ಪ್ರಯತ್ನವೆಂದರೆ ಓಮನ್ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಒದಗಿಸುವುದಾಗಿದೆ.
ಓಮನ್‌ನ ಕೆಲವು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಸ್ವಲ್ಪ ಸಮಯ ಕಳೆಯಬೇಕೆಂದು ನಾನು ಬಯಸುತ್ತೇನೆ. ಓಮನ್ ಯುವಕರ ಬಾಹ್ಯಾಕಾಶ ಆಕಾಂಕ್ಷೆಗಳನ್ನು ಹೊಸ ಎತ್ತರಕ್ಕೆ ಏರಿಸಲು ಇದು ಅತ್ಯುತ್ತಮ ಆರಂಭವಾಗಬಹುದು.
ಸ್ನೇಹಿತರೆ,
ಇಂದು ಭಾರತವು ತನ್ನದೇ ಆದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ ಮಾತ್ರವಲ್ಲದೆ, ಈ ಪರಿಹಾರಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ಕೆಲಸ ಮಾಡುತ್ತಿದೆ.
ಸಾಫ್ಟ್‌ವೇರ್ ಅಭಿವೃದ್ಧಿಯಿಂದ ವೇತನ ನಿರ್ವಹಣೆಯವರೆಗೆ, ಡೇಟಾ ವಿಶ್ಲೇಷಣೆಯಿಂದ ಗ್ರಾಹಕ ಬೆಂಬಲದವರೆಗೆ, ಹಲವಾರು ಜಾಗತಿಕ ಬ್ರ್ಯಾಂಡ್‌ಗಳು ಭಾರತದ ಪ್ರತಿಭೆಯ ಬಲದಿಂದ ಮುನ್ನಡೆಯುತ್ತಿವೆ.
ದಶಕಗಳಿಂದ, ಭಾರತವು ಐಟಿ ಮತ್ತು ಐಟಿ-ಸಕ್ರಿಯಗೊಳಿಸಿದ ಸೇವೆಗಳಲ್ಲಿ ಜಾಗತಿಕ ಶಕ್ತಿ ಕೇಂದ್ರವಾಗಿದೆ. ಈಗ ನಾವು ಐಟಿ ಶಕ್ತಿಯೊಂದಿಗೆ ಉತ್ಪಾದನೆಯನ್ನು ಸಂಯೋಜಿಸುತ್ತಿದ್ದೇವೆ. ಇದರ ಹಿಂದಿನ ತತ್ವಶಾಸ್ತ್ರವು 'ವಸುಧೈವ ಕುಟುಂಬಕಂ' ನಿಂದ ಪ್ರೇರಿತವಾಗಿದೆ, ಜಗತ್ತು ಒಂದೇ ಕುಟುಂಬ ಎಂಬ ಕಲ್ಪನೆಯಲ್ಲಿ ಸಾಕಾರಗೊಂಡಿದೆ: ಭಾರತದಲ್ಲಿ ತಯಾರಿಸಿ, ಇಡೀ ಜಗತ್ತಿಗಾಗಿ ತಯಾರಿಸಿ(ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್) ಎಂಬುದೇ ಆ ಪರಿಕಲ್ಪನೆಯಾಗಿದೆ.
ಸ್ನೇಹಿತರೆ,
ಲಸಿಕೆಗಳಾಗಿರಲಿ ಅಥವಾ ಜೆನೆರಿಕ್ ಔಷಧಿಗಳಾಗಿರಲಿ, ಇಡೀ ಜಗತ್ತೇ ನಮ್ಮನ್ನು 'ವಿಶ್ವದ ಔಷಧಾಲಯ' ಎಂದು ಕರೆಯುತ್ತದೆ. ಭಾರತದ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣಾ ಪರಿಹಾರಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವಗಳನ್ನು ಉಳಿಸುತ್ತಿವೆ.
ಕೋವಿಡ್ ಸಮಯದಲ್ಲಿ ಭಾರತವು ಸುಮಾರು 300 ದಶಲಕ್ಷ ಲಸಿಕೆಗಳನ್ನು ಜಗತ್ತಿಗೆ ಕಳುಹಿಸಿತು. ಸರಿಸುಮಾರು 1 ಲಕ್ಷ 'ಮೇಡ್ ಇನ್ ಇಂಡಿಯಾ' ಕೋವಿಡ್ ಲಸಿಕೆಗಳು ಓಮನ್ ಜನರಿಗೆ ಸೇವೆ ಒದಗಿಸಿವೆ ಎಂಬುದರಿಂದ ನನಗೆ ಸಂತೋಷವಾಗಿದೆ.
ಸ್ನೇಹಿತರೆ,
ನೆನಪಿಡಿ, ಉಳಿದ ಎಲ್ಲಾ ದೇಶಗಳು ತಮ್ಮ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ್ದ ಸಮಯದಲ್ಲಿ ಭಾರತವು ಈ ಲಸಿಕೆ ಪೂರೈಸುವ ಕೆಲಸ ಕೈಗೊಂಡಿತು. ನಾವು ಇಡೀ ವಿಶ್ವದ ಬಗ್ಗೆ ಕಾಳಜಿ ವಹಿಸಿದ್ದೇವೆ. ಭಾರತವು ತನ್ನ 1.4 ಶತಕೋಟಿ ನಾಗರಿಕರಿಗೆ ದಾಖಲೆಯ ಸಮಯದಲ್ಲಿ ಲಸಿಕೆಗಳನ್ನು ನೀಡಿತು, ಜತೆಗೆ ಜಾಗತಿಕ ಅಗತ್ಯಗಳನ್ನು ಸಹ ಪೂರೈಸಿತು.
ಇದು ಭಾರತದ ಮಾದರಿ, 21ನೇ ಶತಮಾನದಲ್ಲಿ ಜಗತ್ತಿಗೆ ಹೊಸ ಭರವಸೆ ನೀಡುವ ಮಾದರಿ. ಆದ್ದರಿಂದ, ಇಂದು ಭಾರತವು 'ಮೇಕ್ ಇನ್ ಇಂಡಿಯಾ' ಚಿಪ್‌ಗಳನ್ನು ತಯಾರಿಸುತ್ತಿದೆ. ಎಐ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಹಸಿರು ಹೈಡ್ರೋಜನ್ ಅಭಿವೃದ್ಧಿಗಾಗಿ ಕಾರ್ಯಾಚರಣೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಭಾರತದ ಯಶಸ್ಸು ಅವರಿಗೆ ಸಹಭಾಗಿತ್ವ ಮತ್ತು ಬೆಂಬಲವನ್ನು ನೀಡುತ್ತದೆ ಎಂಬ ಭರವಸೆಯನ್ನು ಇತರೆ ದೇಶಗಳಿಗೂ ಪ್ರೇರೇಪಿಸುತ್ತದೆ.
ಸ್ನೇಹಿತರೆ,
ನೀವು ಇಲ್ಲಿ ಓಮನ್‌ನಲ್ಲಿ ಅಧ್ಯಯನ ಮಾಡುತ್ತಿದ್ದೀರಿ ಮತ್ತು ಕೆಲಸ ಮಾಡುತ್ತಿದ್ದೀರಿ. ಮುಂಬರುವ ವರ್ಷಗಳಲ್ಲಿ, ಓಮನ್ ಮತ್ತು ಭಾರತದ ಅಭಿವೃದ್ಧಿಯಲ್ಲಿ ನೀವು ಮಹತ್ವದ ಪಾತ್ರ ವಹಿಸುತ್ತೀರಿ. ಜಗತ್ತಿಗೆ ನಾಯಕತ್ವ ನೀಡುವ ಪೀಳಿಗೆ ನೀವಾಗಿದ್ದೀರಿ.
ಓಮನ್‌ನಲ್ಲಿ ವಾಸಿಸುವ ಭಾರತೀಯರು ಯಾವುದೇ ಅನನುಕೂಲತೆ ಎದುರಿಸದಂತೆ ನೋಡಿಕೊಳ್ಳಲು, ಓಮನ್ ಸರ್ಕಾರವು ಸಾಧ್ಯವಿರುವ ಎಲ್ಲ ಬೆಂಬಲ ನೀಡುತ್ತಿದೆ. ಭಾರತ ಸರ್ಕಾರವು ನಿಮ್ಮ ಅನುಕೂಲಕ್ಕಾಗಿ ಸಂಪೂರ್ಣವಾಗಿ ಗಮನ ಹರಿಸುತ್ತಿದೆ. ಓಮನ್‌ನಾದ್ಯಂತ 11 ಧೂತವಾಸ(ಕಾನ್ಸುಲರ್) ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ ಪ್ರತಿಯೊಂದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ನಮ್ಮ ಸರ್ಕಾರವು ಭಾರತೀಯರಿಗೆ ಸಹಾಯ ಮಾಡಲು ತ್ವರಿತವಾಗಿ ಕಾರ್ಯ ನಿರ್ವಹಿಸಿದೆ. ವಿಶ್ವದ ಎಲ್ಲೆಲ್ಲಿ ಭಾರತೀಯರು ವಾಸಿಸುತ್ತಿದ್ದರೂ, ನಮ್ಮ ಸರ್ಕಾರವು ಅವರ ಪ್ರತಿ ಹೆಜ್ಜೆಯಲ್ಲೂ ಅವರ ಬೆಂಬಲಕ್ಕೆ ನಿಂತಿದೆ. ಅವರನ್ನು ಬೆಂಬಲಿಸಲು ಭಾರತೀಯ ಸಮುದಾಯ ಕಲ್ಯಾಣ ನಿಧಿ, ಮೀಸಲಾದ ಸಹಾಯ ಪೋರ್ಟಲ್‌ಗಳು ಮತ್ತು ಪ್ರವಾಸಿ ಭಾರತೀಯ ಬಿಮಾ ಯೋಜನೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಸ್ನೇಹಿತರೆ,
ಈ ಇಡೀ ಪ್ರದೇಶವು ಭಾರತದ ಜತೆ ವಿಶೇಷ ಸ್ಥಾನ ಹೊಂದಿದೆ, ಓಮನ್ ನಮಗೆ ಇನ್ನಷ್ಟು ಮಹತ್ವದ್ದಾಗಿದೆ. ಭಾರತ-ಓಮನ್ ಸಂಬಂಧವು ಈಗ ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ಕಲಿಕೆ, ವಿದ್ಯಾರ್ಥಿ ವಿನಿಮಯ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ ಎಂಬ ವಿಷಯದಿಂದ ನನಗೆ ಮತ್ತಷ್ಟು ಸಂತೋಷವಾಗಿದೆ.
ನಿಮ್ಮಲ್ಲಿ ಯುವ ನಾವೀನ್ಯಕಾರರು ಹೊರಹೊಮ್ಮುತ್ತಾರೆ ಎಂಬ ವಿಶ್ವಾಸ ನನಗಿದೆ, ಅವರು ಮುಂಬರುವ ವರ್ಷಗಳಲ್ಲಿ ಭಾರತ-ಓಮನ್ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಇಲ್ಲಿನ ಭಾರತೀಯ ಶಾಲೆಗಳು ತಮ್ಮ 50ನೇ ವಾರ್ಷಿಕೋತ್ಸವ ಆಚರಿಸಿವೆ. ಈಗ ಮುಂದಿನ 50 ವರ್ಷಗಳ ಕಾಲ ನಾವು ಸ್ಪಷ್ಟ ಗುರಿಗಳೊಂದಿಗೆ ಮುಂದುವರಿಯಬೇಕು. ಆದ್ದರಿಂದ, ಪ್ರತಿಯೊಬ್ಬ ಯುವಕರಿಗೂ ನಾನು ಹೇಳಲು ಬಯಸುತ್ತೇನೆ:
ದೊಡ್ಡ ಕನಸು ಕಾಣಿರಿ.
ಆಳವಾಗಿ ಕಲಿಯಿರಿ.
ಧೈರ್ಯದಿಂದ ನಾವೀನ್ಯತೆಯನ್ನು ಕಂಡುಕೊಳ್ಳಿ.
ಏಕೆಂದರೆ ನಿಮ್ಮ ಭವಿಷ್ಯವು ನಿಮ್ಮದಲ್ಲ, ಅದು ಎಲ್ಲಾ ಮಾನವತೆಯ ಭವಿಷ್ಯವಾಗಿದೆ.
ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಉಜ್ವಲ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ರೂಪಾಂತರ ಇದಾಗಿದೆ. ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(रिलीज़ आईडी: 2206442)
आगंतुक पटल : 5