ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣ ವಿಕಾಸದ ಹೊಸ ಸಂಕಲ್ಪ: ಉದ್ಯೋಗದ ಹೊಸ ಖಾತರಿ
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಲೋಕಸಭೆಯಲ್ಲಿ ʻವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ಗ್ರಾಮೀಣ) ಮಸೂದೆ-2025ʼ (ವಿಬಿ ಜಿ ರಾಮ್ ಜಿ ಮಸೂದೆ)ಮಂಡಿಸಿದರು
ಮಸೂದೆಯು ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಸಹಿತ ಉದ್ಯೋಗವನ್ನು ಖಾತರಿಪಡಿಸುತ್ತದೆ ಮತ್ತು ಸಬಲೀಕರಣ, ಬೆಳವಣಿಗೆ, ಒಮ್ಮುಖತೆ ಮತ್ತು ಪರಿಪೂರ್ಣತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ
ʻಪ್ರಧಾನಮಂತ್ರಿ ಗತಿ ಶಕ್ತಿʼ ಉಪಕ್ರಮವನ್ನು ಬಳಸಿಕೊಂಡು ಯೋಜನೆಗಳ ಸಂಯೋಜನೆಯೊಂದಿಗೆ ಗ್ರಾಮ ಪಂಚಾಯಿತಿಗಳು ಸಂತೃಪ್ತಿಯ ಆಧಾರದ ಮೇಲೆ 'ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳನ್ನು' ಸಿದ್ಧಪಡಿಸಲಿವೆ
ಗ್ರಾಮೀಣ ಸಾರ್ವಜನಿಕ ಕಾಮಗಾರಿಗಳಿಗಾಗಿ ಸಮಗ್ರ 'ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ'ಯನ್ನು ರೂಪಿಸಲಾಗಿದೆ
ಜಲ ಭದ್ರತೆ ಕಾಮಗಾರಿಗಳು, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸಂಬಂಧಿತ ಮೂಲಸೌಕರ್ಯ ಮತ್ತು ಹವಾಮಾನ ವೈಪರೀತ್ಯವನ್ನು ತಗ್ಗಿಸಲು ವಿಶೇಷ ಕಾರ್ಯಗಳ ಮೇಲೆ ಗಮನ ಹರಿಸಲಾಗುವುದು
ಕೃಷಿ ಋತುವಿನ ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯತೆಗೆ ಅನುಕೂಲವಾಗುವಂತೆ ನಿಬಂಧನೆಗಳು ಇದರಲ್ಲಿವೆ
ವಾರಂಪ್ರತಿ ಸಾರ್ವಜನಿಕ ಬಹಿರಂಗಪಡಿಸುವಿಕೆ ವ್ಯವಸ್ಥೆಗಳು ಮತ್ತು ಸುಧಾರಿತ ಸಾಮಾಜಿಕ ಲೆಕ್ಕಪರಿಶೋಧನೆ ಸೇರಿದಂತೆ ದೃಢವಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾರ್ಯವಿಧಾನಗಳನ್ನು ಇದು ಒಳಗೊಂಡಿದೆ
ದಕ್ಷ ಮತ್ತು ಪ್ರಾಮಾಣಿಕ ಅನುಷ್ಠಾನಕ್ಕಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೇಲೆ ಇದರ ಸಮಗ್ರ ಆಡಳಿತ ಪರಿಸರ ವ್ಯವಸ್ಥೆಯನ್ನು ರೂಪಿಸಲಾಗಿದೆ
प्रविष्टि तिथि:
16 DEC 2025 1:14PM by PIB Bengaluru
ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಲೋಕಸಭೆಯಲ್ಲಿ ʻವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ(ಗ್ರಾಮೀಣ): ವಿಬಿ ಜಿ ರಾಮ್ ಜಿ ಮಸೂದೆ-2025ʼ ಅನ್ನು ಮಂಡಿಸಿದರು. ಈ ಮಸೂದೆಯು ʻವಿಕಸಿತ ಭಾರತ@2047ʼರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ. ಕುಟುಂಬದ ವಯಸ್ಕ ಸದಸ್ಯರಿಗೆ ಕೌಶಲ್ಯರಹಿತ ಕೆಲಸವನ್ನು ಮಾಡಲು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ. ಆ ಮೂಲಕ ಸಮೃದ್ಧ ಮತ್ತು ಸದೃಢ ಗ್ರಾಮೀಣ ಭಾರತಕ್ಕಾಗಿ ಸಬಲೀಕರಣ, ಬೆಳವಣಿಗೆ, ಒಮ್ಮುಖತೆಯನ್ನು ಉತ್ತೇಜಿಸುತ್ತದೆ..
ಈ ಮಹತ್ವಾಕಾಂಕ್ಷೆಯ ಶಾಸನವು ಭವಿಷ್ಯ ಸನ್ನದ್ಧವಾದ, ಒಮ್ಮುಖ ಚಾಲಿತ, ಪರಿಣಪೂರ್ಣತೆ-ಆಧಾರಿತ ಗ್ರಾಮೀಣಾಭಿವೃದ್ಧಿ ವಾಸ್ತುಶಿಲ್ಪವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ವಿಕಸಿತ ಭಾರತ್@2047 ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣಾಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಆ ಮೂಲಕ ಗ್ರಾಮೀಣ ಕುಟುಂಬಗಳನ್ನು ಹೆಚ್ಚಿನ ಉದ್ಯೋಗಾವಕಾಶಗಳ ಮೂಲಕ ಸಬಲೀಕರಣಗೊಳಿಸುತ್ತದೆ.
ʻವಿಕಸಿತ ಗ್ರಾಮ ಪಂಚಾಯತ್ ಯೋಜನೆʼಗಳನ್ನು ಆಧರಿಸಿದ ಸಂಬಂಧಿತ ಎಲ್ಲಾ ಯೋಜನೆಗಳ ಸಾಂಸ್ಥಿಕೀಕರಣ ಮತ್ತು ಏಕೀಕರಣವನ್ನು ಈ ಮಸೂದೆಯು ಒದಗಿಸುತ್ತದೆ. ಆ ಮೂಲಕ ಇವೆಲ್ಲವುಗಳನ್ನೂ ʻವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆʼಯಲ್ಲಿ ಒಟ್ಟುಗೂಡಿಸುತ್ತದೆ. ಈ ಮಸೂದೆಯು ತಂತ್ರಜ್ಞಾನ ಆಧಾರಿತ ವಾಸ್ತುಶಿಲ್ಪ, ಕಾನೂನು ಮತ್ತು ಆಡಳಿತಾತ್ಮಕ ನಿಬಂಧನೆಗಳ ಮೂಲಕ ದೃಢವಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕಾರ್ಯವಿಧಾನಗಳನ್ನು ಒದಗಿಸುತ್ತದೆ.
ʻವಿಕಸಿತ ಭಾರತ್ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆʼ ಮಸೂದೆ-2025ʼ ಸ್ವಯಂಪ್ರೇರಿತರಾಗಿ ಕೌಶಲ್ಯರಹಿತ ಕೆಲಸವನ್ನು ಮಾಡಲು ಬಯಸುವ ಪ್ರತಿ ಗ್ರಾಮೀಣ ಕುಟುಂಬದ ವಯಸ್ಕರಿಗೆ ಪ್ರತಿ ಹಣಕಾಸು ವರ್ಷದಲ್ಲಿ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸುತ್ತದೆ.
ಈ ಮಸೂದೆಯಡಿಯಲ್ಲಿ ಕೈಗೊಳ್ಳಲಾದ ಎಲ್ಲಾ ಕೆಲಸಗಳನ್ನು ʻವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆʼಯಲ್ಲಿ ಒಟ್ಟುಗೂಡಿಸುವ ಮೂಲಕ ಗ್ರಾಮೀಣ ಸಾರ್ವಜನಿಕ ಕಾಮಗಾರಿಗಳಿಗೆ ಏಕೀಕೃತ ರಾಷ್ಟ್ರೀಯ ಚೌಕಟ್ಟನ್ನು ರಚಿಸಲಾಗುವುದು. ಜಲ ಸಂಬಂಧಿತ ಕಾಮಗಾರಿಗಳು, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಮೂಲಕ ವಿಷಯಾಧಾರಿತ ಆದ್ಯತೆಯನ್ನು ನೀಡಲಾಗುವುದು. ಹವಾಮಾನ ವೈಪರೀತ್ಯದ ಪರಿಣಾಮವನ್ನು ತಗ್ಗಿಸುವ ಮತ್ತು ವಿಪತ್ತು ಸನ್ನದ್ಧತೆಯ ಗುರಿಯನ್ನು ಹೊಂದಿರುವ ವಿಶೇಷ ಕಾರ್ಯಗಳನ್ನೂ ಈ ಯೋಜನೆ ಒಳಗೊಂಡಿದೆ. ಈ ಕಾರ್ಯವಿಧಾನವು ದೇಶಾದ್ಯಂತ ಉತ್ಪಾದಕ, ದೀರ್ಘ ಬಾಳಿಕೆಯ, ಸದೃಢ ಮತ್ತು ಪರಿವರ್ತಕ ಗ್ರಾಮೀಣ ಸ್ವತ್ತುಗಳ ಸೃಷ್ಟಿಯನ್ನು ಖಚಿತಪಡಿಸುತ್ತದೆ.
ಈ ಮಸೂದೆಯಡಿಯಲ್ಲಿನ ಎಲ್ಲಾ ಕೆಲಸಗಳನ್ನುವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ (ವಿಜಿಪಿಪಿ) ಮೂಲಕ ಗುರುತಿಸಲಾಗುವುದು, ಅವು ತಳಮಟ್ಟದ, ಒಮ್ಮುಖ ಆಧಾರಿತ ಮತ್ತು ಪರಿಪೂರ್ಣ ಗುರಿ ಸಾಧನೆ -ಆಧಾರಿತವಾಗಿರಲಿವೆ. ವಿಶಾಲವಾದ ವಲಯ ಆದ್ಯತೆಗಳೊಂದಿಗೆ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳನ್ನು ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ. ಆ ಮೂಲಕ ಏಕೀಕೃತ, ಇಡೀ ಸರ್ಕಾರದ ಗ್ರಾಮೀಣಾಭಿವೃದ್ಧಿ ಚೌಕಟ್ಟನ್ನು ರಚಿಸಲಾಗುತ್ತದೆ. ʻವಿಜಿಪಿಪಿʼಗಳನ್ನು ಪ್ರಾದೇಶಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಿದ್ಧಪಡಿಸಲಾಗುತ್ತದೆ ಮತ್ತು ಸಂಘಟಿತ ಮತ್ತು ಪರಿಣಾಮಕಾರಿ ಯೋಜನೆಯನ್ನು ಸಕ್ರಿಯಗೊಳಿಸಲು ʻಪಿಎಂ ಗತಿ ಶಕ್ತಿʼ ಯೋಜನೆಯೊಂದಿಗೆ ಸಂಯೋಜಿಸಲಾಗುತ್ತದೆ.
ಗರಿಷ್ಠ ಬಿತ್ತನೆ ಮತ್ತು ಕೊಯ್ಲು ಋತುವಿನಲ್ಲಿ ಕೃಷಿ ಕಾರ್ಮಿಕರ ಲಭ್ಯತೆಗೆ ಅನುಕೂಲವಾಗುವಂತೆ, ಮಸೂದೆಯಡಿ ಕಾಮಗಾರಿಗಳನ್ನು ಕೈಗೊಳ್ಳದ ಹಣಕಾಸು ವರ್ಷದಲ್ಲಿ ಒಟ್ಟು 60 ದಿನಗಳ ಮುಂಚಿತವಾಗಿ ತಿಳಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
ಪ್ರತಿ ರಾಜ್ಯ ಸರ್ಕಾರವು ಕಾಯ್ದೆ ಜಾರಿಗೆ ಬಂದ ಆರು ತಿಂಗಳೊಳಗೆ ಈ ವಿಧೇಯಕದಡಿಯಲ್ಲಿ ಪ್ರಸ್ತಾಪಿಸಲಾದ ಖಾತ್ರಿಯನ್ನು ಜಾರಿಗೆ ತರಲು ಯೋಜನೆಯನ್ನು ಸಿದ್ಧಪಡಿಸುವ ಅಗತ್ಯವಿದೆ. ಇದು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಆಗಿ ಕಾರ್ಯ ನಿರ್ವಹಿಸಲಿದ್ದು, ಈಶಾನ್ಯ ಮತ್ತು ಹಿಮಾಲಯ ತಪ್ಪಲಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 90:10 ಅನುಪಾತದಲ್ಲಿ ನಿಧಿ ಹಂಚಿಕೆ ಮತ್ತು ಇತರ ಎಲ್ಲ ರಾಜ್ಯಗಳಿಗೆ 60:40 ಅನುಪಾತದಲ್ಲಿ ನಿಧಿ ಹಂಚಿಕೆ ಒಳಗೊಂಡಿರಲಿದೆ.
ಸಮಗ್ರ ಬೆಳವಣಿಗೆ ಮತ್ತು ನ್ಯಾಯಯುತ ರೀತಿಯಲ್ಲಿ ಹಣಕಾಸು ಸಂಪನ್ಮೂಲಗಳ ಸಮಾನ ವಿತರಣೆಯನ್ನು ಉತ್ತೇಜಿಸಲು, ಮಸೂದೆಯು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಪ್ರಮಾಣಕ ನಿಧಿ ಹಂಚಿಕೆಯನ್ನು ಒದಗಿಸುತ್ತದೆ. ರಾಜ್ಯಗಳು ಜಿಲ್ಲೆಗಳು ಮತ್ತು ಗ್ರಾಮ ಪಂಚಾಯಿತಿಗಳ ವರ್ಗ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ಪಾರದರ್ಶಕ ಮತ್ತು ಅಗತ್ಯ-ಆಧಾರಿತ ಅಂತರ್-ರಾಜ್ಯ ನಿಧಿಯ ವಿತರಣೆಯನ್ನು ಖಚಿತಪಡಿಸುತ್ತವೆ. ಆ ಮೂಲಕ ಸಮಾನತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುತ್ತವೆ.
ಬಯೋಮೆಟ್ರಿಕ್ ದೃಢೀಕರಣ, ಸ್ಥಳೀಯ-ತಂತ್ರಜ್ಞಾನ-ಸಕ್ರಿಯಗೊಳಿಸಿದ ಯೋಜನೆ ಮತ್ತು ಮೇಲ್ವಿಚಾರಣೆ, ನೈಜ-ಸಮಯದ ಡ್ಯಾಶ್‌ಬೋರ್ಡ್‌ಗಳೊಂದಿಗೆ ಮೊಬೈಲ್ ಆಧಾರಿತ ವರದಿ, ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯವಿಧಾನಗಳ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೇಲೆ ನಿರ್ಮಿಸಲಾದ ಸಮಗ್ರ ಆಡಳಿತ ಪರಿಸರ ವ್ಯವಸ್ಥೆಯನ್ನು ಮಸೂದೆಯು ಕಡ್ಡಾಯಗೊಳಿಸುತ್ತದೆ. ಆ ಮೂಲಕ ಪಾರದರ್ಶಕತೆ, ದಕ್ಷತೆ ಮತ್ತು ಪ್ರಾಮಾಣಿಕ ಅನುಷ್ಠಾನವನ್ನು ಖಾತ್ರಿಪಡಿಸುತ್ತದೆ.
ಕಾಮಗಾರಿಗಳ ಸ್ಥಿತಿ, ಪಾವತಿಗಳು, ಕುಂದುಕೊರತೆಗಳು, ಕಾಮಗಾರಿಗಳ ಪ್ರಗತಿ, ಮಸ್ಟರ್ ರೋಲ್‌ಗಳು ಇತ್ಯಾದಿಗಳನ್ನು ಪ್ರಸ್ತುತಪಡಿಸಲು ಗ್ರಾಮ ಪಂಚಾಯಿತಿಯು ಗ್ರಾಮ ಪಂಚಾಯಿತಿ ಭವನಗಳಲ್ಲಿ ಸಾಪ್ತಾಹಿಕ ಪ್ರಕಟಣೆ ಸಭೆಗಳನ್ನು ಕರೆಯಬೇಕು. ಇದಲ್ಲದೆ, ವಾರಂಪ್ರತಿ ಬಹಿರಂಗಪಡಿಸುವಿಕೆಗಳನ್ನು ಸ್ವಯಂಚಾಲಿತವಾಗಿ ಮತ್ತು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಭೌತಿಕ ಮತ್ತು ಡಿಜಿಟಲ್ ಸ್ವರೂಪಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಮಸೂದೆಯಡಿಯಲ್ಲಿ, ವೇತನ ದರಗಳನ್ನು ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ನಿರ್ಧರಿಸುತ್ತದೆ ಮತ್ತು ಅಂತಹ ಅಧಿಸೂಚನೆಯವರೆಗೆ, ಅಸ್ತಿತ್ವದಲ್ಲಿರುವ ಎಂಜಿಎನ್ಆರ್‌ಜಿಎʼ ವೇತನ ದರಗಳು ಅನ್ವಯವಾಗುತ್ತವೆ. ಮಸೂದೆಯು 15 ದಿನಗಳ ಒಳಗೆ ಉದ್ಯೋಗ ಒದಗಿಸದಿದ್ದರೆ, ನಿಗದಿತ ದರದಲ್ಲಿ ನಿರುದ್ಯೋಗ ಭತ್ಯೆಯನ್ನು ರಾಜ್ಯ ಸರ್ಕಾರಗಳು ಪಾವತಿಸಲು ಅವಕಾಶ ನೀಡುತ್ತದೆ.
ಹಿನ್ನೆಲೆ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ
ಕಳೆದ ಎರಡು ದಶಕಗಳಲ್ಲಿ, ಗ್ರಾಮೀಣ ಭಾರತವು ಪರಿವರ್ತನಾತ್ಮಕ ಬದಲಾವಣೆಗಳಿಗೆ ಒಳಗಾಗಿದೆ. ಪ್ರಮುಖ ಸರ್ಕಾರಿ ಯೋಜನೆಗಳನ್ನು ಪರಿಪೂರ್ಣತೆಯ-ಆಧಾರಿತವಾಗಿ ತಲುಪಿಸುವುದು; ಗ್ರಾಮೀಣ ಸಂಪರ್ಕ, ವಸತಿ, ಕುಡಿಯುವ ನೀರು, ನೈರ್ಮಲ್ಯ ಮತ್ತು ವಿದ್ಯುದೀಕರಣ ವಿಸ್ತರಣೆ; ಸುಧಾರಿತ ಡಿಜಿಟಲ್ ಪ್ರವೇಶದೊಂದಿಗೆ ಆಳವಾದ ಆರ್ಥಿಕ ಸೇರ್ಪಡೆ; ಗ್ರಾಮೀಣ ಉದ್ಯೋಗಿಗಳ ವೈವಿಧ್ಯೀಕರಣ; ಮತ್ತು ಉತ್ತಮ ಆದಾಯ, ಉತ್ಪಾದಕ ಮೂಲಸೌಕರ್ಯ ಮತ್ತು ಹೆಚ್ಚಿನ ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ ಹೆಚ್ಚುತ್ತಿರುವ ಆಕಾಂಕ್ಷೆಗಳ ಮೂಲಕ ಇದು ಗುರುತಿಸಲ್ಪಟ್ಟಿದೆ. ಈ ಬೆಳವಣಿಗೆಗಳು ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸುವ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮತ್ತು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಯೋಜನೆಗಳಲ್ಲಿ ಒಮ್ಮುಖವನ್ನು ಖಚಿತಪಡಿಸಿಕೊಳ್ಳುವ ಮರು ಮಾಪನಾಂಕ ವಿಧಾನಕ್ಕೆ ಕರೆ ನೀಡುತ್ತವೆ.
ಬದಲಾಗುತ್ತಿರುವ ಆಕಾಂಕ್ಷೆಗಳನ್ನು ಪೂರೈಸಲು, ಹಲವಾರು ಪೂರಕ ಸರ್ಕಾರಿ ಯೋಜನೆಗಳನ್ನು ಒಳಗೊಂಡ ಸಮಗ್ರ ಗ್ರಾಮೀಣಾಭಿವೃದ್ಧಿ ನೀತಿಯನ್ನು ಜಾರಿಗೊಳಿಸಲು ಬಲವಾದ ಸಂಯೋಜನೆಯ ಅಗತ್ಯವಿದೆ. ಗ್ರಾಮೀಣ ಮೂಲಸೌಕರ್ಯ ಸೃಷ್ಟಿಯು ವಿಭಜಿತ ನಿಬಂಧನೆಯಿಂದ ಸುಸಂಬದ್ಧ ಮತ್ತು ಭವಿಷ್ಯ-ಸನ್ನದ್ಧ ಕಾರ್ಯವಿಧಾನಕ್ಕೆ ಬದಲಾಗುವುದು ಅತ್ಯಗತ್ಯ. ಜೊತೆಗೆ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ವಸ್ತುನಿಷ್ಠ ನಿಯತಾಂಕಗಳ ಆಧಾರದ ಮೇಲೆ ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಸಂಪನ್ಮೂಲಗಳನ್ನು ನ್ಯಾಯಯುತ ರೀತಿಯಲ್ಲಿ ವಿತರಿಸುವುದು ಸಹ ಅತ್ಯಗತ್ಯ.
ರಾಷ್ಟ್ರೀಯ ಅಭಿವೃದ್ಧಿ ಮುಂದುವರೆದಂತೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ ಉದಯೋನ್ಮುಖ ಅಗತ್ಯಗಳು ಮತ್ತು ಮುಂದಿನ ಆಕಾಂಕ್ಷೆಗಳೊಂದಿಗೆ ಹೊಂದಿಕೆಯಾಗಲು ಕಾಲಕಾಲಕ್ಕೆ ಪರಿಷ್ಕರಣೆಯ ಅಗತ್ಯವಿರುತ್ತದೆ. ವ್ಯಾಪಕವಾಗಿ ಬದಲಾದ ಇಂದಿನ ಸಂದರ್ಭಗಳಲ್ಲಿ, ʻವಿಕಸಿತ ಭಾರತ@2047ʼರ ಉದ್ದೇಶಗಳನ್ನು ಸಾಧಿಸಲು ಗ್ರಾಮೀಣಾಭಿವೃದ್ಧಿಗೆ ಕ್ರಾಂತಿಕಾರಿ ಕಾರ್ಯವಿಧಾನವು ಅತ್ಯಗತ್ಯ. ಅಭಿವೃದ್ಧಿ ಮಧ್ಯಸ್ಥಿಕೆಗಳ ಪ್ರಮಾಣವು ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಜೀವನೋಪಾಯದ ಬೆಂಬಲದ ಮೂಲಕ ಅವರನ್ನು ಸಬಲೀಕರಣಗೊಳಿಸುವುದರ ಜೊತೆಗೆ ʻವಿಕಸಿತ ಭಾರತʼದ ದೃಷ್ಟಿಕೋನವನ್ನು ಬೆಂಬಲಿಸಲು ಗ್ರಾಮೀಣ ಉದ್ಯೋಗಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ, ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ಆಸ್ತಿ ಸೃಷ್ಟಿಗೆ ಆಧಾರ ನೀಡಲು ಗ್ರಾಮೀಣ ಕುಟುಂಬಗಳಿಗೆ ವೇತನ-ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಹಿನ್ನೆಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
*****
(रिलीज़ आईडी: 2204601)
आगंतुक पटल : 36