ಲೋಕಸಭಾ ಸಚಿವಾಲಯ
ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಇತರ ಗಣ್ಯರು ಸಂಸತ್ ಭವನದ ಸಂಕೀರ್ಣದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದರು
ರಾಷ್ಟ್ರದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ನಮ್ಮ ಸಾಮೂಹಿಕ ಬದ್ಧತೆಯು ಕೇವಲ ಔಪಚಾರಿಕ ಘೋಷಣೆಯಲ್ಲ, ಬದಲಾಗಿ ಯಾವುದೇ ಭಯೋತ್ಪಾದಕ ಪಿತೂರಿಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ ಎಂಬ ಬಲವಾದ ಸಂದೇಶವಾಗಿದೆ: ಲೋಕಸಭಾಧ್ಯಕ್ಷರು
प्रविष्टि तिथि:
13 DEC 2025 2:03PM by PIB Bengaluru
2001ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಇಂದು ಭಾರತವು ಹುತಾತ್ಮರಿಗೆ ಗೌರವ ಸಲ್ಲಿಸಿತು. ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಮತ್ತು ಉದ್ಯೋಗಿಗಳನ್ನು ಈ ಸಂದರ್ಭ ಸ್ಮರಿಸಲಾಗುತ್ತಿದೆ.
ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಉಪಸಭಾಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್; ಪ್ರಧಾನಿ ಶ್ರೀ ನರೇಂದ್ರ ಮೋದಿ; ಕೇಂದ್ರ ಸಚಿವರು; ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ; ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್, ಸಂಸತ್ ಸದಸ್ಯರು, ಮಾಜಿ ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಹುತಾತ್ಮರಿಗೆ ಗೌರವ ಸಲ್ಲಿಸಿದರು. ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್; ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಮತ್ತು ಹುತಾತ್ಮರ ಕುಟುಂಬ ಸದಸ್ಯರು ಸಹ ಗೌರವ ಸಲ್ಲಿಸಿದರು.




ಇದಕ್ಕೂ ಮುನ್ನ, ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು 'ಎಕ್ಸ್' ನಲ್ಲಿ ಸಂದೇಶವನ್ನು ಹಂಚಿಕೊಂಡರು:
"2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನಮ್ಮ ಧೈರ್ಯಶಾಲಿ ಭದ್ರತಾ ಸಿಬ್ಬಂದಿ ಮತ್ತು ಶ್ರಮಶೀಲ ಸಿಬ್ಬಂದಿಯ ಅತ್ಯುನ್ನತ ತ್ಯಾಗಕ್ಕೆ ನಮನಗಳು.
ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ನಮ್ಮ ಸಂಸತ್ತನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರರಿಗೆ ನಾನು ಕೃತಜ್ಞರಾಗಿದ್ದೇವೆ. ರಾಷ್ಟ್ರಕ್ಕಾಗಿ ಅವರ ಅಪ್ರತಿಮ ಸಮರ್ಪಣೆ ನಿರಂತರ ಸ್ಫೂರ್ತಿಯ ಮೂಲವಾಗಿದೆ.
ಆ ಅಮರ ವೀರರು ಭಯೋತ್ಪಾದಕರನ್ನು ಎದುರಿಸಿದ ಶೌರ್ಯವು ಕರ್ತವ್ಯದ ಸಂಕೇತವಾಗಿದೆ, ಜೊತೆಗೆ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರೀಯ ರಕ್ಷಣೆಯ ಕಡೆಗೆ ಭಾರತದ ಅದಮ್ಯ ಇಚ್ಛಾಶಕ್ತಿಯಾಗಿದೆ. ಭಾರತ ಯಾವಾಗಲೂ ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಂತಿದೆ. ರಾಷ್ಟ್ರದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ನಮ್ಮ ಸಾಮೂಹಿಕ ಬದ್ಧತೆಯು ಕೇವಲ ಔಪಚಾರಿಕ ಘೋಷಣೆಯಲ್ಲ, ಬದಲಾಗಿ ಯಾವುದೇ ರೀತಿಯ ಭಯೋತ್ಪಾದಕ ಪಿತೂರಿಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ ಎಂಬ ಬಲವಾದ ಸಂದೇಶವಾಗಿದೆ.
ಈ ಅಪ್ರತಿಮ ತ್ಯಾಗವು ನಮ್ಮ ಭವಿಷ್ಯದ ಪೀಳಿಗೆಗೆ ಧೈರ್ಯ, ನಿಸ್ವಾರ್ಥತೆ ಮತ್ತು ಕರ್ತವ್ಯ ನಿಷ್ಠೆಗೆ ಸ್ಫೂರ್ತಿಯ ಮೂಲವಾಗಿರುತ್ತದೆ.” ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 13, 2001 ರಂದು, ರಾಜ್ಯಸಭಾ ಸಚಿವಾಲಯದ ಭದ್ರತಾ ಸಹಾಯಕರಾದ ಶ್ರೀ ಜಗದೀಶ್ ಪ್ರಸಾದ್ ಯಾದವ್ ಮತ್ತು ಶ್ರೀ ಮತ್ಬರ್ ಸಿಂಗ್ ನೇಗಿ; ಕೇಂದ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಶ್ರೀಮತಿ ಕಮಲೇಶ್ ಕುಮಾರಿ; ದೆಹಲಿ ಪೊಲೀಸ್ ನ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಗಳಾದ ಶ್ರೀ ನಾನಕ್ ಚಂದ್ ಮತ್ತು ಶ್ರೀ ರಾಮಪಾಲ್; ದೆಹಲಿ ಪೊಲೀಸ್ ನ ಹೆಡ್ ಕಾನ್‌ಸ್ಟೆಬಲ್ ಗಳಾದ ಶ್ರೀ ಓಂ ಪ್ರಕಾಶ್, ಶ್ರೀ ಬಿಜೇಂದ್ರ ಸಿಂಗ್ ಮತ್ತು ಶ್ರೀ ಘನಶ್ಯಾಮ್; ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಯ ತೋಟಗಾರ ಶ್ರೀ ದೇಶರಾಜ್ ಅವರು ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯನ್ನು ತಡೆಯುವಾಗ ಹುತಾತ್ಮರಾದರು ಎಂಬುದನ್ನು ರಾಷ್ಟ್ರವು ಸ್ಮರಿಸುತ್ತದೆ.
ಅವರ ಆದರ್ಶಪ್ರಾಯ ಶೌರ್ಯವನ್ನು ಗುರುತಿಸಿ, ಸರ್ವಶ್ರೀ ಜಗದೀಶ್ ಪ್ರಸಾದ್ ಯಾದವ್, ಮತ್ಬರ್ ಸಿಂಗ್ ನೇಗಿ ಮತ್ತು ಶ್ರೀಮತಿ ಕಮಲೇಶ್ ಕುಮಾರಿ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ, ಸರ್ವಶ್ರೀ ನಾನಕ್ ಚಂದ್, ರಾಮಪಾಲ್, ಓಂ ಪ್ರಕಾಶ್, ಬಿಜೇಂದರ್ ಸಿಂಗ್ ಮತ್ತು ಘನಶ್ಯಾಮ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಲಾಯಿತು.
*****
(रिलीज़ आईडी: 2203645)
आगंतुक पटल : 2