ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ವಿಷಯದ ವಿರುದ್ಧ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು ನಾಗರಿಕರನ್ನು ಸಬಲೀಕರಣಗೊಳಿಸುತ್ತವೆ
ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಕಾಶಕರು ಐಟಿ ನಿಯಮಗಳ ಅಡಿಯಲ್ಲಿ ನೀತಿ ಸಂಹಿತೆಯನ್ನು ಪಾಲಿಸುವುದು ಕಡ್ಡಾಯ
प्रविष्टि तिथि:
12 DEC 2025 2:13PM by PIB Bengaluru
ಸಂವಿಧಾನದ 19(1) ನೇ ವಿಧಿಯ ಅಡಿಯಲ್ಲಿ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ. ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ನಕಲಿ, ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯು ಹೆಚ್ಚುತ್ತಿರುವ ಬಗ್ಗೆ ಭಾರತ ಸರ್ಕಾರಕ್ಕೂ ತಿಳಿದಿದೆ.
ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (ಫೆಬ್ರವರಿ 25, 2021 ರಂದು ದಿನಾಂಕ) ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಅನ್ನು ಅಧಿಸೂಚಿಸಿದೆ.
ಈ ನಿಯಮಗಳ ಭಾಗ III, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಕಾಶಕರಿಗೆ ನೀತಿ ಸಂಹಿತೆಯನ್ನು ನಿಗದಿಪಡಿಸುತ್ತದೆ. ಇದರಲ್ಲಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಗಳ ಕಾಯ್ದೆ, 1995 ರ ಅಡಿಯಲ್ಲಿ ಕಾರ್ಯಕ್ರಮ ಸಂಹಿತೆ ಮತ್ತು ಪ್ರೆಸ್ ಕೌನ್ಸಿಲ್ ಕಾಯ್ದೆ, 1978 ರ ಅಡಿಯಲ್ಲಿ ಪತ್ರಿಕೋದ್ಯಮ ನಡವಳಿಕೆಯ ನಿಯಮಗಳ ಅನುಸರಣೆ ಸೇರಿದೆ.
ನೀತಿ ಸಂಹಿತೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಐಟಿ ನಿಯಮಗಳು ಮೂರು ಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸಹ ಒದಗಿಸುತ್ತವೆ.
ಇದಲ್ಲದೆ, ಐಟಿ ನಿಯಮಗಳ ಭಾಗ II, ಇತರ ವಿಷಯಗಳ ಜೊತೆಗೆ, ಯೂಟ್ಯೂಬ್ ಮತ್ತು ಫೇಸ್ ಬುಕ್ ನಂತಹ ಮಧ್ಯವರ್ತಿಗಳ ಮೇಲೆ ಸುಳ್ಳು, ತಪ್ಪಾದ ಅಥವಾ ದಾರಿತಪ್ಪಿಸುವ ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಬಾಧ್ಯತೆಯನ್ನು ವಿಧಿಸುತ್ತದೆ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪರಿಶೀಲಿಸಲು, 2019 ರ ನವೆಂಬರ್ ನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಅಡಿಯಲ್ಲಿ ಸತ್ಯ ಪರಿಶೀಲನಾ ಘಟಕ (ಎಫ್ ಸಿ ಯು) ಅನ್ನು ಸ್ಥಾಪಿಸಲಾಗಿದೆ.
ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳ ಅಧಿಕೃತ ಮೂಲಗಳಿಂದ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಎಫ್ ಸಿ ಯು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸರಿಯಾದ ಮಾಹಿತಿಯನ್ನು ಪೋಸ್ಟ್ ಮಾಡುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69ಎ ಅಡಿಯಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ವೆಬ್ ಸೈಟ್ ಗಳು, ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಮತ್ತು ಪೋಸ್ಟ್ ಗಳನ್ನು ನಿರ್ಬಂಧಿಸಲು ಸರ್ಕಾರ ಅಗತ್ಯ ಆದೇಶಗಳನ್ನು ಹೊರಡಿಸುತ್ತದೆ.
ರಾಜ್ಯಸಭೆಯಲ್ಲಿ ಇಂದು ಡಾ. ಲಕ್ಷ್ಮಿಕಾಂತ್ ಬಾಜಪೈ ಅವರ ಪ್ರಶ್ನೆಗೆ ಉತ್ತರವಾಗಿ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2203180)
आगंतुक पटल : 6