ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಕಲಿಯುಗದಲ್ಲಿ,ದೇವರ ನಾಮವನ್ನು ಜಪಿಸುವುದರಿಂದ ಲೌಕಿಕ ದುಃಖದ ಸಾಗರದಿಂದ ಮುಕ್ತಿ ದೊರೆಯುತ್ತದೆ: ಪ್ರಧಾನಮಂತ್ರಿ
ಗೀತೆಯ ಮಾತುಗಳು ಜನರಿಗೆ ಮಾರ್ಗದರ್ಶನ ನೀಡುವುದಲ್ಲದೆ, ರಾಷ್ಟ್ರದ ನೀತಿಗಳ ದಿಕ್ಕನ್ನು ರೂಪಿಸುತ್ತವೆ: ಪ್ರಧಾನಮಂತ್ರಿ
ಶಾಂತಿ ಮತ್ತು ಸತ್ಯವನ್ನು ಎತ್ತಿಹಿಡಿಯಲು ಅನ್ಯಾಯದ ಶಕ್ತಿಗಳನ್ನು ಎದುರಿಸುವುದು ಮತ್ತು ನಿರ್ಮೂಲನೆ ಮಾಡುವುದು ಅಗತ್ಯ ಎಂದು ಭಗವದ್ಗೀತೆ ಕಲಿಸುತ್ತದೆ ಮತ್ತು ಈ ತತ್ವವು ನಮ್ಮ ರಾಷ್ಟ್ರೀಯ ಭದ್ರತಾ ಚಿಂತನೆಯ ಹೃದಯಭಾಗದಲ್ಲಿದೆ: ಪ್ರಧಾನಮಂತ್ರಿ
ನೀರನ್ನು ಉಳಿಸುವುದು, ಮರಗಳನ್ನು ನೆಡುವುದು, ಬಡವರಿಗೆ ಸೇವೆ ಸಲ್ಲಿಸುವುದು, ಸ್ವದೇಶಿ ಅಳವಡಿಸಿಕೊಳ್ಳುವುದು, ಸಹಜ ಕೃಷಿಯನ್ನು ಉತ್ತೇಜಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಯೋಗವನ್ನು ಅಭ್ಯಾಸ ಮಾಡುವುದು, ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ಕನಿಷ್ಠ 25 ಪಾರಂಪರಿಕ ತಾಣಗಳಿಗೆ ಭೇಟಿ ನೀಡುವ ʼನವಸಂಕಲ್ಪʼಗಳನ್ನು ನಾವು ಮಾಡೋಣ: ಪ್ರಧಾನಮಂತ್ರಿ
प्रविष्टि तिथि:
28 NOV 2025 2:05PM by PIB Bengaluru
ಕರ್ನಾಟಕದ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠದಲ್ಲಿ ಇಂದು ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಭಗವಾನ್ ಶ್ರೀ ಕೃಷ್ಣನ ದಿವ್ಯ ದರ್ಶನದ ತೃಪ್ತಿ, ಶ್ರೀಮದ್ ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವ ಮತ್ತು ಹಲವಾರು ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿಯು ತಮಗೆ ದೊರೆತ ಪರಮ ಭಾಗ್ಯ. ಇದು ಅಸಂಖ್ಯಾತ ಆಶೀರ್ವಾದಗಳನ್ನು ಪಡೆದಂತೆ ಎಂದು ಅವರು ಹೇಳಿದರು.
ಕೇವಲ ಮೂರು ದಿನಗಳ ಹಿಂದೆ ತಾನು ಗೀತೆಯ ನಾಡು ಕುರುಕ್ಷೇತ್ರದಲ್ಲಿದ್ದೆನು ಎಂದು ನೆನಪಿಸಿಕೊಂಡ ಶ್ರೀ ನರೇಂದ್ರ ಮೋದಿ ಅವರು, ಭಗವಾನ್ ಶ್ರೀ ಕೃಷ್ಣನ ಆಶೀರ್ವಾದ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರ ಮಹಿಮೆಯಿಂದ ಆಶೀರ್ವದಿಸಲ್ಪಟ್ಟ ಈ ಭೂಮಿಗೆ ಭೇಟಿ ನೀಡಿದ್ದು ತಮಗೆ ಅತ್ಯಂತ ಸಂತೃಪ್ತಿಯ ಕ್ಷಣ ಎಂದು ಹೇಳಿದರು. ಈ ಸಂದರ್ಭದಲ್ಲಿ, ಒಂದು ಲಕ್ಷ ಜನರು ಏಕಕಾಲದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದಾಗ, ಪ್ರಪಂಚದಾದ್ಯಂತದ ಜನರು ಭಾರತದ ಸಹಸ್ರಮಾನಗಳಷ್ಟು ಹಳೆಯದಾದ ಆಧ್ಯಾತ್ಮಿಕ ಪರಂಪರೆಯ ಜೀವಂತ ದೈವತ್ವವನ್ನು ವೀಕ್ಷಿಸಿದರು ಎಂದು ಹೇಳಿದರು.
ಕರ್ನಾಟಕದ ನೆಲಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಅಕ್ಕರೆಯ ಜನರ ನಡುವೆ ಇರುವುದು ಯಾವಾಗಲೂ ತಮಗೆ ಒಂದು ವಿಶಿಷ್ಟ ಅನುಭವ ಎಂದು ಪ್ರಧಾನಮಂತ್ರಿ ಹೇಳಿದರು. ಉಡುಪಿಯ ಪವಿತ್ರ ಭೂಮಿಗೆ ಭೇಟಿ ನೀಡುವುದು ಯಾವಾಗಲೂ ಅಸಾಧಾರಣವಾದುದು ಎಂದು ಅವರು ಒತ್ತಿ ಹೇಳಿದರು. ತಾವು ಗುಜರಾತಿನಲ್ಲಿ ಜನಿಸಿದರೂ, ಗುಜರಾತ್ ಮತ್ತು ಉಡುಪಿ ಯಾವಾಗಲೂ ಆಳವಾದ ಮತ್ತು ವಿಶೇಷ ಬಾಂಧವ್ಯವನ್ನು ಹೊಂದಿವೆ ಎಂದು ಹೇಳಿದರು. ಇಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಕೃಷ್ಣನ ವಿಗ್ರಹವನ್ನು ಮೊದಲು ಮಾತಾ ರುಕ್ಮಿಣಿ ದ್ವಾರಕಾದಲ್ಲಿ ಪೂಜಿಸಿದ್ದರು ಮತ್ತು ನಂತರ ಉಡುಪಿಯಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು ಎಂಬ ನಂಬಿಕೆಯನ್ನು ಶ್ರೀ ಮೋದಿ ಅವರು ನೆನಪಿಸಿಕೊಂಡರು. ಕಳೆದ ವರ್ಷವಷ್ಟೇ ಸಮುದ್ರದ ಒಳಗೆ ಶ್ರೀ ದ್ವಾರಕಾನಾಥನನ್ನು ನೋಡಿದ ದಿವ್ಯ ಅನುಭವವನ್ನು ಅವರು ಹಂಚಿಕೊಂಡರು. ಈ ವಿಗ್ರಹದ ದರ್ಶನ ಪಡೆದಾಗ ತಾವು ಅನುಭವಿಸಿದ ಆಳವಾದ ಭಾವನೆಯನ್ನು ಯಾರಾದರೂ ಊಹಿಸಬಹುದು ಮತ್ತು ಈ ದರ್ಶನವು ತಮಗೆ ಅಪಾರ ಆಧ್ಯಾತ್ಮಿಕ ಆನಂದವನ್ನು ನೀಡಿತು ಎಂದರು.
ಉಡುಪಿಗೆ ಬರುವುದು ತಮಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ ಎಂದು ಹೇಳಿದ ಶ್ರೀ ಮೋದಿ, ಉಡುಪಿಯು ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಆಡಳಿತ ಮಾದರಿಯ ಕರ್ಮಭೂಮಿಯಾಗಿದೆ ಎಂದರು. 1968ರಲ್ಲಿ ಉಡುಪಿಯ ಜನರು ಜನಸಂಘದ ವಿ.ಎಸ್. ಆಚಾರ್ಯ ಅವರನ್ನು ನಗರಸಭೆಗೆ ಆಯ್ಕೆ ಮಾಡಿ ಉಡುಪಿಯಲ್ಲಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿದರು ಎಂದು ಅವರು ನೆನಪಿಸಿಕೊಂಡರು. ಇಂದು ರಾಷ್ಟ್ರೀಯ ಮಟ್ಟದಲ್ಲಿ ಕಂಡುಬರುವ ಸ್ವಚ್ಛತಾ ಅಭಿಯಾನಗಳನ್ನು ಐದು ದಶಕಗಳ ಹಿಂದೆಯೇ ಉಡುಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಹೊಸ ಮಾದರಿಯಂತಹ ಕಾರ್ಯಕ್ರಮಗಳನ್ನು ಉಡುಪಿಯು 1970ರ ದಶಕದಲ್ಲಿಯೇ ಪ್ರಾರಂಭಿಸಿತ್ತು ಎಂದು ಅವರು ಒತ್ತಿ ಹೇಳಿದರು. ಇಂದು ಈ ಅಭಿಯಾನಗಳು ರಾಷ್ಟ್ರೀಯ ಅಭಿವೃದ್ಧಿ ಮತ್ತು ಆದ್ಯತೆಯ ಭಾಗವಾಗಿದ್ದು, ದೇಶವನ್ನು ಮುನ್ನಡೆಸಲು ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಹೇಳಿದರು.
ರಾಮಚರಿತಮಾನಸದ ಮಾತುಗಳನ್ನು ಸ್ಮರಿಸಿಕೊಂಡ ಶ್ರೀ ನರೇಂದ್ರ ಮೋದಿ ಅವರು, "ಕಲಿಯುಗದಲ್ಲಿ, ದೇವರ ನಾಮವನ್ನು ಜಪಿಸುವುದರಿಂದಲೇ ಲೌಕಿಕ ದುಃಖದ ಸಾಗರದಿಂದ ಮುಕ್ತಿ ದೊರೆಯುತ್ತದೆ" ಎಂದು ಹೇಳಿದರು. ಸಮಾಜದಲ್ಲಿ ಮಂತ್ರಗಳು ಮತ್ತು ಗೀತೆಯ ಶ್ಲೋಕಗಳ ಪಠಣವು ಶತಮಾನಗಳಿಂದ ನಡೆದು ಬಂದಿದೆ, ಆದರೆ ಒಂದು ಲಕ್ಷ ಧ್ವನಿಗಳು ಒಟ್ಟಾಗಿ ಈ ಶ್ಲೋಕಗಳನ್ನು ಒಟ್ಟಿಗೆ ಪಠಿಸಿದಾಗ, ಅದೊಂದು ವಿಶಿಷ್ಟ ಅನುಭವವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಗೀತೆಯಂತಹ ಪವಿತ್ರ ಗ್ರಂಥವನ್ನು ಹಲವಾರು ಜನರು ಪಠಿಸಿದಾಗ, ಅಂತಹ ದೈವಿಕ ಪದಗಳು ಒಂದೇ ಸ್ಥಳದಲ್ಲಿ ಪ್ರತಿಧ್ವನಿಸಿದಾಗ, ಮನಸ್ಸು ಮತ್ತು ಬುದ್ಧಿಶಕ್ತಿಗೆ ಹೊಸ ಕಂಪನ ಮತ್ತು ಹೊಸ ಬಲವನ್ನು ನೀಡುವ ವಿಶೇಷ ಶಕ್ತಿ ಉದ್ಭವಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಶಕ್ತಿಯು ಆಧ್ಯಾತ್ಮಿಕತೆಯ ಶಕ್ತಿ ಮತ್ತು ಸಾಮಾಜಿಕ ಏಕತೆಯ ಶಕ್ತಿಯಾಗಿದೆ ಎಂದು ಅವರು ಹೇಳಿದರು. ಇಂದಿನ ಒಂದು ಲಕ್ಷ ಧ್ವನಿಗಳ ಗೀತಾ ಪಠಣವು ವಿಶಾಲವಾದ ಶಕ್ತಿಯನ್ನು ಅನುಭವಿಸುವ ಅವಕಾಶವಾಗಿದೆ ಮತ್ತು ಸಾಮೂಹಿಕ ಪ್ರಜ್ಞೆಯ ಬಲವನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಹೇಳಿದರು.
ಈ ದಿನದಂದು, ಲಕ್ಷ ಕಂಠ ಗೀತಾ ಪಾರಾಯಣವನ್ನು ದೈವಿಕವಾಗಿ ಕಲ್ಪಿಸಿದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ವಿಶೇಷವಾಗಿ ನಮನ ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಪಂಚದಾದ್ಯಂತದ ಜನರು ಗೀತೆಯನ್ನು ಕೈಯಿಂದ ಬರೆಯಲು ಪ್ರೇರೇಪಿಸುವ ಮೂಲಕ, ಸ್ವಾಮೀಜಿಯವರು ಸನಾತನ ಸಂಪ್ರದಾಯದಲ್ಲಿ ಜಾಗತಿಕ ಸಾಮೂಹಿಕ ಚಳವಳಿಯಾಗಿ ಮಾರ್ಪಟ್ಟಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಪ್ರಾರಂಭಿಸಿದರು ಎಂದು ಅವರು ಒತ್ತಿ ಹೇಳಿದರು. ಭಾರತದ ಯುವಜನರು ಭಗವದ್ಗೀತೆಯ ಸ್ಫೂರ್ತಿ ಮತ್ತು ಬೋಧನೆಗಳೊಂದಿಗೆ ಸಂಪರ್ಕ ಸಾಧಿಸುತ್ತಿರುವ ರೀತಿ ಸ್ವತಃ ಒಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಶತಮಾನಗಳಿಂದ ಭಾರತದಲ್ಲಿ ವೇದಗಳು, ಉಪನಿಷತ್ತುಗಳು ಮತ್ತು ಶಾಸ್ತ್ರಗಳ ಜ್ಞಾನವನ್ನು ಮುಂದಿನ ಪೀಳಿಗೆಗೆ ರವಾನಿಸುವುದು ಸಂಪ್ರದಾಯವಾಗಿದೆ ಎಂದು ಅವರು ನೆನಪಿಸಿಕೊಂಡರು ಮತ್ತು ಈ ಕಾರ್ಯಕ್ರಮವು ಮುಂದಿನ ಪೀಳಿಗೆಯನ್ನು ಭಗವದ್ಗೀತೆಯೊಂದಿಗೆ ಸಂಪರ್ಕಿಸುವ ಅರ್ಥಪೂರ್ಣ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಇಲ್ಲಿಗೆ ಬರುವ ಮೂರು ದಿನಗಳ ಮೊದಲು, ತಾವು ಅಯೋಧ್ಯೆಗೆ ಭೇಟಿ ನೀಡಿದ್ದಾಗಿ ತಿಳಿಸಿದ ಶ್ರೀ ಮೋದಿ ಅವರು, ನವೆಂಬರ್ 25ರಂದು ವಿವಾಹ ಪಂಚಮಿಯ ಶುಭ ದಿನದಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಧರ್ಮ ಧ್ವಜವನ್ನು ಸ್ಥಾಪಿಸಲಾಯಿತು ಎಂದು ಹೇಳಿದರು. ಅಯೋಧ್ಯೆಯಿಂದ ಉಡುಪಿಯವರೆಗೆ, ಶ್ರೀ ರಾಮನ ಅಸಂಖ್ಯಾತ ಭಕ್ತರು ಈ ಅತ್ಯಂತ ದೈವಿಕ ಮತ್ತು ಭವ್ಯವಾದ ಆಚರಣೆಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಮ ಮಂದಿರ ಚಳುವಳಿಯಲ್ಲಿ ಉಡುಪಿ ವಹಿಸಿದ ಮಹತ್ವದ ಪಾತ್ರ ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ಅವರು ಹೇಳಿದರು. ದಶಕಗಳ ಹಿಂದೆ, ಪರಮ ಪೂಜ್ಯ ದಿವಂಗತ ವಿಶ್ವೇಶ ತೀರ್ಥ ಸ್ವಾಮೀಜಿಯವರು ಇಡೀ ಚಳುವಳಿಗೆ ನಿರ್ದೇಶನ ನೀಡಿದರು ಮತ್ತು ಧ್ವಜಾರೋಹಣ ಸಮಾರಂಭವು ಆ ಕೊಡುಗೆಯ ಫಲಪ್ರದತೆಯನ್ನು ಗುರುತಿಸುವ ಹಬ್ಬವಾಗಿದೆ ಎಂದು ಅವರು ನೆನಪಿಸಿಕೊಂಡರು. ಉಡುಪಿಗೆ, ರಾಮ ಮಂದಿರ ನಿರ್ಮಾಣವು ಮತ್ತೊಂದು ಕಾರಣಕ್ಕಾಗಿ ವಿಶೇಷವಾಗಿದೆ ಎಂದು ಅವರು ಹೇಳಿದರು. ಏಕೆಂದರೆ ಹೊಸ ಮಂದಿರದಲ್ಲಿ ಜಗದ್ಗುರು ಮಧ್ವಾಚಾರ್ಯ ಅವರ ಹೆಸರಿನಲ್ಲಿ ಭವ್ಯ ದ್ವಾರವನ್ನು ನಿರ್ಮಿಸಲಾಗಿದೆ. ಶ್ರೀ ರಾಮನ ಪರಮಭಕ್ತರಾದ ಜಗದ್ಗುರು ಮಧ್ವಾಚಾರ್ಯ ಅವರು ಭಗವಾನ್ ಶ್ರೀ ರಾಮನು ಆರು ದೈವಿಕ ಗುಣಗಳಿಂದ ಅಲಂಕರಿಸಲ್ಪಟ್ಟಿದ್ದಾನೆ, ಪರಮಾತ್ಮ ಮತ್ತು ಅಪಾರ ಶಕ್ತಿ ಮತ್ತು ಧೈರ್ಯದ ಸಾಗರ ಎಂಬ ಅರ್ಥವನ್ನು ನೀಡುವ ಶ್ಲೋಕವನ್ನು ಬರೆದಿದ್ದಾರೆ ಎಂದು ಅವರು ಹೇಳಿದರು. ಆದ್ದರಿಂದ, ರಾಮ ಮಂದಿರ ಸಂಕೀರ್ಣದಲ್ಲಿ ಅವರ ಹೆಸರಿನ ದ್ವಾರವನ್ನು ಹೊಂದುವುದು ಕರ್ನಾಟಕದ ಉಡುಪಿಯ ಜನರಿಗೆ ಮತ್ತು ಇಡೀ ರಾಷ್ಟ್ರಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ಜಗದ್ಗುರು ಶ್ರೀ ಮಧ್ವಾಚಾರ್ಯರನ್ನು ಭಾರತದ ದ್ವೈತ ಸಿದ್ಧಾಂತದ ಪ್ರವರ್ತಕ ಮತ್ತು ವೇದಾಂತದ ದಾರಿದೀಪ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಅವರು ಉಡುಪಿಯಲ್ಲಿರುವ ಎಂಟು ಮಠಗಳ ವ್ಯವಸ್ಥೆಯು ಅವರಿಂದ ರಚಿಸಲ್ಪಟ್ಟಿದೆ, ಇದು ಸಾಂಸ್ಥಿಕೀಕರಣ ಮತ್ತು ಹೊಸ ಸಂಪ್ರದಾಯಗಳ ಸೃಷ್ಟಿಗೆ ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದರು. ಇಲ್ಲಿ ಭಗವಾನ್ ಶ್ರೀ ಕೃಷ್ಣನ ಮೇಲಿನ ಭಕ್ತಿ, ವೇದಾಂತದ ಜ್ಞಾನ ಮತ್ತು ಸಾವಿರಾರು ಜನರಿಗೆ ಅನ್ನದಾನ ಮಾಡುವ ಸಂಕಲ್ಪವಿದೆ ಎಂದು ಅವರು ಹೇಳಿದರು. ಒಂದು ರೀತಿಯಲ್ಲಿ ಈ ಸ್ಥಳವು ಜ್ಞಾನ, ಭಕ್ತಿ ಮತ್ತು ಸೇವೆಯ ಪವಿತ್ರ ಸಂಗಮವಾಗಿದೆ ಎಂದು ಹೇಳಿದರು.
ಜಗದ್ಗುರು ಮಧ್ವಾಚಾರ್ಯರು ಜನಿಸಿದ ಸಮಯದಲ್ಲಿ ಭಾರತವು ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸುತ್ತಿತ್ತು ಮತ್ತು ಅವರು ಸಮಾಜದ ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ನಂಬಿಕೆಯನ್ನು ಒಂದುಗೂಡಿಸುವ ಭಕ್ತಿ ಮಾರ್ಗವನ್ನು ತೋರಿಸಿದರು ಎಂದು ಶ್ರೀ ಮೋದಿ ಅವರು ಸ್ಮರಿಸಿದರು. ಈ ಮಾರ್ಗದರ್ಶನದಿಂದಾಗಿ, ಶತಮಾನಗಳ ನಂತರವೂ, ಅವರು ಸ್ಥಾಪಿಸಿದ ಮಠಗಳು ಪ್ರತಿದಿನ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿವೆ ಎಂದು ಅವರು ಹೇಳಿದರು. ಅವರಿಂದ ಪ್ರೇರಿತರಾಗಿ, ಧರ್ಮ, ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಯಾವಾಗಲೂ ಪ್ರತಿಪಾದಿಸುವ ದ್ವೈತ ಸಂಪ್ರದಾಯದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಹೊರಹೊಮ್ಮಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಸಾರ್ವಜನಿಕ ಸೇವೆಯ ಈ ಶಾಶ್ವತ ಸಂಪ್ರದಾಯವು ಉಡುಪಿಯ ಶ್ರೇಷ್ಠ ಪರಂಪರೆಯಾಗಿದೆ ಎಂದು ತಿಳಿಸಿದರು.
ಜಗದ್ಗುರು ಮಧ್ವಾಚಾರ್ಯರ ಪರಂಪರೆಯು ಹರಿದಾಸ ಪರಂಪರೆಗೆ ಶಕ್ತಿ ತುಂಬಿದೆ ಎಂದು ಹೇಳಿದ ಪ್ರಧಾನಮಂತ್ರಿ,ಗಳು ಪುರಂದರದಾಸ ಮತ್ತು ಕನಕದಾಸರಂತಹ ಮಹಾನ್ ಸಂತರು ಸರಳ, ಸುಮಧುರ ಮತ್ತು ಸುಲಭವಾಗಿ ತಲುಪಬಹುದಾದ ಕನ್ನಡ ಭಾಷೆಯಲ್ಲಿ ಸಾಮಾನ್ಯ ಜನರಿಗೆ ಭಕ್ತಿಯನ್ನು ತಲುಪಿಸಿದರು ಎಂದು ಒತ್ತಿ ಹೇಳಿದರು. ಅವರ ರಚನೆಗಳು ಸಮಾಜದ ಬಡ ವರ್ಗಗಳನ್ನೂ ಒಳಗೊಂಡಂತೆ ಪ್ರತಿಯೊಬ್ಬರ ಹೃದಯವನ್ನು ತಲುಪಿದವು ಮತ್ತು ಅವರನ್ನು ಧರ್ಮ ಮತ್ತು ಸನಾತನ ಮೌಲ್ಯಗಳೊಂದಿಗೆ ಸಂಪರ್ಕಿಸಿದವು ಮತ್ತು ಈ ರಚನೆಗಳು ಇಂದಿನ ಪೀಳಿಗೆಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಈಗಲೂ ಸಹ, ಸಾಮಾಜಿಕ ಮಾಧ್ಯಮ ರೀಲ್ ಗಳಲ್ಲಿ ಪುರಂದರದಾಸರ ರಚನೆಯಾದ "ಚಂದ್ರಚೂಡ ಶಿವ ಶಂಕರ ಪಾರ್ವತಿ" ಗೀತೆಯನ್ನು ಕೇಳುವಾಗ, ಯುವಜನರು ವಿಭಿನ್ನವಾದ ಆಧ್ಯಾತ್ಮಿಕ ಭಾವನೆಗೆ ಸಾಗುತ್ತಾರೆ ಎಂದು ಅವರು ಹೇಳಿದರು. ಇಂದಿಗೂ ಉಡುಪಿಯಲ್ಲಿ ತಮ್ಮಂತಹ ಭಕ್ತನಿಗೆ ಸಣ್ಣ ಕಿಟಕಿಯ ಮೂಲಕ ಶ್ರೀ ಕೃಷ್ಣನ ದರ್ಶನವಾದಾಗ, ಅದು ಕನಕದಾಸರ ಭಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಒಂದು ಅವಕಾಶವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮತ್ತು ಇದಕ್ಕೂ ಮೊದಲು ಕನಕದಾಸರಿಗೆ ನಮಸ್ಕರಿಸುವ ಸೌಭಾಗ್ಯ ಸಿಕ್ಕಿದ್ದು ತಮ್ಮ ಅದೃಷ್ಟ ಎಂದರು.
ಶ್ರೀಕೃಷ್ಣನ ಬೋಧನೆಗಳು ಎಲ್ಲಾ ಯುಗಗಳಲ್ಲೂ ಪ್ರಸ್ತುತವಾಗಿವೆ ಮತ್ತು ಗೀತೆಯ ಮಾತುಗಳು ಜನರನ್ನು ಮಾತ್ರವಲ್ಲದೆ ದೇಶದ ನೀತಿಗಳಿಗೂ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದ ಶ್ರೀ ಮೋದಿ ಅವರು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಎಲ್ಲರ ಕಲ್ಯಾಣಕ್ಕಾಗಿ ನಾವು ಹೇಗೆ ಕೆಲಸ ಮಾಡಬೇಕೆಂದು ವಿವರಿಸಿದ್ದಾರೆ ಎಂದು ನೆನಪಿಸಿಕೊಂಡರು. ಜಗದ್ಗುರು ಮಧ್ವಾಚಾರ್ಯರು ಈ ಭಾವನೆಗಳನ್ನು ತಮ್ಮ ಜೀವನದುದ್ದಕ್ಕೂ ಮುಂದುವರೆಸಿಕೊಂಡು ಭಾರತದ ಏಕತೆಯನ್ನು ಬಲಪಡಿಸಿದರು ಎಂದು ಹೇಳಿದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸರ್ವಜನ ಹಿತಾಯ, ಸರ್ವಜನ ಸುಖಾಯ ನೀತಿಗಳು ಶ್ರೀ ಕೃಷ್ಣನ ಶ್ಲೋಕಗಳಿಂದ ಪ್ರೇರಿತವಾಗಿವೆ ಎಂದು ಹೇಳಿದ ಶ್ರೀ ಮೋದಿ ಅವರು, ಶ್ರೀ ಕೃಷ್ಣ ಬಡವರಿಗೆ ಸಹಾಯ ಮಾಡುವ ಮಂತ್ರವನ್ನು ನೀಡುತ್ತಾರೆ ಮತ್ತು ಈ ಸ್ಫೂರ್ತಿಯೇ ಆಯುಷ್ಮಾನ್ ಭಾರತ್ ಮತ್ತು ಪಿಎಂ ಆವಾಸ್ ನಂತಹ ಯೋಜನೆಗಳಿಗೆ ಆಧಾರವಾಗಿದೆ ಎಂದು ಒತ್ತಿ ಹೇಳಿದರು. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಜ್ಞಾನವನ್ನು ನೀಡುತ್ತಾರೆ ಮತ್ತು ಈ ಜ್ಞಾನವೇ ರಾಷ್ಟ್ರವು ನಾರಿ ಶಕ್ತಿ ವಂದನಾ ಅಧಿನಿಯಮದ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು ಎಂದು ಅವರು ಹೇಳಿದರು. ಭಗವಾನ್ ಶ್ರೀ ಕೃಷ್ಣ ಎಲ್ಲರಿಗೂ ಕಲ್ಯಾಣದ ತತ್ವವನ್ನು ಬೋಧಿಸುತ್ತಾರೆ ಮತ್ತು ಈ ತತ್ವವು ಲಸಿಕೆ ಮೈತ್ರಿ, ಸೌರ ಮೈತ್ರಿ ಮತ್ತು ವಸುಧೈವ ಕುಟುಂಬಕಂನಂತಹ ಭಾರತದ ನೀತಿಗಳಿಗೆ ಆಧಾರವಾಗಿದೆ ಎಂದು ಹೇಳಿದರು.
ಯುದ್ಧಭೂಮಿಯಲ್ಲಿ ಭಗವಾನ್ ಶ್ರೀ ಕೃಷ್ಣನು ಗೀತೆಯ ಸಂದೇಶವನ್ನು ಬೋಧಿಸಿದನು ಮತ್ತು ಶಾಂತಿ ಮತ್ತು ಸತ್ಯದ ಸ್ಥಾಪನೆಗೆ ನಿರಂಕುಶಾಧಿಕಾರಿಗಳ ಅಂತ್ಯ ಅತ್ಯಗತ್ಯ ಎಂದು ಭಗವದ್ಗೀತೆ ನಮಗೆ ಕಲಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೇಳಿದರು. ಇದು ದೇಶದ ಭದ್ರತಾ ನೀತಿಯ ಮೂಲ ಆಶಯವಾಗಿದೆ ಎಂದು ಅವರು ಹೇಳಿದರು. ಭಾರತವು ವಸುಧೈವ ಕುಟುಂಬಕಂ ಅನ್ನು ಬೋಧಿಸುತ್ತದೆ ಮತ್ತು "ಧರ್ಮೋ ರಕ್ಷತಿ ರಕ್ಷಿತಃ" ಎಂಬ ಮಂತ್ರವನ್ನು ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದರು. ಕೆಂಪು ಕೋಟೆಯಿಂದ ಶ್ರೀ ಕೃಷ್ಣನ ಕರುಣೆಯ ಸಂದೇಶವನ್ನು ತಿಳಿಸಲಾಗುತ್ತದೆ ಮತ್ತು ಅದೇ ಕೋಟೆಯಿಂದ ಮಿಷನ್ ಸುದರ್ಶನ ಚಕ್ರದ ಘೋಷಣೆಯನ್ನು ಸಹ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಮಿಷನ್ ಸುದರ್ಶನ ಚಕ್ರ ಎಂದರೆ ದೇಶದ ಪ್ರಮುಖ ಸ್ಥಳಗಳು, ಅದರ ಕೈಗಾರಿಕೆಗಳು ಮತ್ತು ಸಾರ್ವಜನಿಕ ವಲಯಗಳ ಸುತ್ತಲೂ ರಕ್ಷಣಾತ್ಮಕ ಗೋಡೆಯನ್ನು ನಿರ್ಮಿಸುವುದು, ಇದನ್ನು ಶತ್ರುಗಳು ಭೇದಿಸಲು ಸಾಧ್ಯವಿಲ್ಲ ಮತ್ತು ಶತ್ರುಗಳು ಧೈರ್ಯವನ್ನು ತೋರಿಸಲು ಮುಂದಾದರೆ, ಭಾರತದ ಸುದರ್ಶನ ಚಕ್ರವು ಅವರನ್ನು ನಾಶಪಡಿಸುತ್ತದೆ ಎಂದು ಶ್ರೀ ಮೋದಿ ಅವರು ವಿವರಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ, ದೇಶವು ಈ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಅವರು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಜನರು ಸೇರಿದಂತೆ ಅನೇಕ ದೇಶವಾಸಿಗಳು ತಮ್ಮ ಪ್ರಾಣ ಕಳೆದುಕೊಂಡರು ಎಂದು ಹೇಳಿದರು. ಈ ಹಿಂದೆ, ಇಂತಹ ಭಯೋತ್ಪಾದಕ ದಾಳಿಗಳು ನಡೆದಾಗ, ಸರ್ಕಾರಗಳು ಸುಮ್ಮನೆ ಕುಳಿತುಕೊಳ್ಳುತ್ತಿದ್ದವು, ಆದರೆ ಇದು ಯಾರ ಮುಂದೆಯೂ ತಲೆಬಾಗದ ಅಥವಾ ತನ್ನ ನಾಗರಿಕರನ್ನು ರಕ್ಷಿಸುವ ಕರ್ತವ್ಯದಿಂದ ಹಿಂದೆ ಸರಿಯದ ನವಭಾರತ ಎಂದು ಅವರು ಹೇಳಿದರು. "ಭಾರತಕ್ಕೆ ಶಾಂತಿಯನ್ನು ಹೇಗೆ ಸ್ಥಾಪಿಸಬೇಕು ಮತ್ತು ಶಾಂತಿಯನ್ನು ಹೇಗೆ ಕಾಪಾಡಬೇಕು ಎಂದು ತಿಳಿದಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಭಗವದ್ಗೀತೆಯು ನಮ್ಮ ಜೀವನದಲ್ಲಿ ನಮ್ಮ ಕರ್ತವ್ಯಗಳು ಮತ್ತು ಬದ್ಧತೆಗಳ ಬಗ್ಗೆ ಹೇಳುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು ಮತ್ತು ಇದರಿಂದ ಪ್ರೇರಿತರಾಗಿ, ಪ್ರತಿಯೊಬ್ಬರೂ ಕೆಲವು ಸಂಕಲ್ಪಗಳನ್ನು ಮಾಡುವಂತೆ ಮನವಿ ಮಾಡಿದರು. ಈ ಮನವಿಗಳು ನಮ್ಮ ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ʼನವಸಂಕಲ್ಪʼ ಗಳು ಎಂದು ಅವರು ಹೇಳಿದರು. ಸಂತರ ಸಮುದಾಯವು ಈ ಮನವಿಗಳನ್ನು ಒಮ್ಮೆ ಆಶೀರ್ವದಿಸಿದರೆ, ಅವುಗಳು ಪ್ರತಿಯೊಬ್ಬ ನಾಗರಿಕನನ್ನು ತಲುಪುವುದನ್ನು ಯಾವುದೂ ತಡೆಯಲಾಗುವುದಿಲ್ಲ ಎಂದು ತಿಳಿಸಿದರು.
ನಮ್ಮ ಮೊದಲ ಸಂಕಲ್ಪ ನೀರನ್ನು ಸಂರಕ್ಷಿಸುವುದು, ನೀರನ್ನು ಉಳಿಸುವುದು ಮತ್ತು ನದಿಗಳನ್ನು ರಕ್ಷಿಸುವುದು ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಎರಡನೇ ಸಂಕಲ್ಪ ಗಿಡಗಳನ್ನು ನೆಡುವುದು ಎಂದು ಅವರು ಒತ್ತಿ ಹೇಳಿದರು, ರಾಷ್ಟ್ರವ್ಯಾಪಿ ಅಭಿಯಾನ "ಏಕ್ ಪೇಡ್ ಮಾ ಕೆ ನಾಮ್" ವೇಗವನ್ನು ಪಡೆಯುತ್ತಿದೆ ಮತ್ತು ಎಲ್ಲಾ ಮಠಗಳು ಈ ಅಭಿಯಾನಕ್ಕೆ ಸೇರಿದರೆ, ಅದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಮೂರನೇ ಸಂಕಲ್ಪ ದೇಶದಲ್ಲಿ ಕನಿಷ್ಠ ಒಬ್ಬ ಬಡವನ ಜೀವನವನ್ನು ಸುಧಾರಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ನಾಲ್ಕನೇ ಸಂಕಲ್ಪವು ಸ್ವದೇಶಿಯ ಕಲ್ಪನೆಯಾಗಿರಬೇಕು ಮತ್ತು ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಸ್ವದೇಶಿಯನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. ಇಂದು ಭಾರತವು ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ, ನಮ್ಮ ಆರ್ಥಿಕತೆ, ನಮ್ಮ ಉದ್ಯಮ ಮತ್ತು ನಮ್ಮ ತಂತ್ರಜ್ಞಾನವು ತಮ್ಮ ಸ್ವಂತ ಕಾಲಿನ ಮೇಲೆ ದೃಢವಾಗಿ ನಿಂತಿವೆ. ಆದ್ದರಿಂದ ನಾವು ಪೂರ್ಣ ಬಲದಿಂದ "ವೋಕಲ್ ಫಾರ್ ಲೋಕಲ್" ಎಂದು ಹೇಳಬೇಕು ಎಂದರು.
ಐದನೇ ಸಂಕಲ್ಪ ಕುರಿತು ಮಾತನಾಡಿದ ಶ್ರೀ ಮೋದಿ, ನಾವು ಸಹಜ ಕೃಷಿಯನ್ನು ಉತ್ತೇಜಿಸಬೇಕು ಎಂದು ಹೇಳಿದರು. ಆರನೇ ಸಂಕಲ್ಪವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದಾಗಿದ್ದು, ನಮ್ಮ ಆಹಾರದಲ್ಲಿ ಸಿರಿಧಾನ್ಯವನ್ನು ಸೇರಿಸಿಕೊಳ್ಳುವುದು ಮತ್ತು ಅಡುಗೆ ಎಣ್ಣೆ ಸೇವನೆಯನ್ನು ಕಡಿಮೆ ಮಾಡುವುದು ಎಂದು ಅವರು ಒತ್ತಿ ಹೇಳಿದರು. ಏಳನೇ ಸಂಕಲ್ಪವು ಯೋಗವನ್ನು ಅಳವಡಿಸಿಕೊಳ್ಳುವುದು ಮತ್ತು ಅದನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುವುದು ಎಂದು ಅವರು ಹೇಳಿದರು. ಎಂಟನೇ ಸಂಕಲ್ಪವು ಹಸ್ತಪ್ರತಿಗಳ ಸಂರಕ್ಷಣೆಯನ್ನು ಬೆಂಬಲಿಸುವುದು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು, ಭಾರತದ ಪ್ರಾಚೀನ ಜ್ಞಾನದ ಬಹುಪಾಲು ಈ ಹಸ್ತಪ್ರತಿಗಳಲ್ಲಿ ಅಡಗಿದೆ ಎಂದು ಅವರು ಹೇಳಿದರು. ಈ ಜ್ಞಾನವನ್ನು ಸಂರಕ್ಷಿಸಲು ಭಾರತ ಸರ್ಕಾರವು ಜ್ಞಾನ ಭಾರತಂ ಮಿಷನ್ ನಲ್ಲಿ ಕೆಲಸ ಮಾಡುತ್ತಿದೆ ಮತ್ತು ಜನರ ಸಹಕಾರವು ಈ ಅಮೂಲ್ಯ ಪರಂಪರೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ನಮ್ಮ ಪರಂಪರೆಗೆ ಸಂಬಂಧಿಸಿದ ದೇಶದ ಕನಿಷ್ಠ 25 ಸ್ಥಳಗಳಿಗೆ ಭೇಟಿ ನೀಡುವ ಒಂಬತ್ತನೇ ಸಂಕಲ್ಪವನ್ನು ಮಾಡುವಂತೆ ಜನರನ್ನು ಒತ್ತಾಯಿಸಿದ ಶ್ರೀ ಮೋದಿ, ಮೂರು ನಾಲ್ಕು ದಿನಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಮಹಾಭಾರತ ಅನುಭವ ಕೇಂದ್ರವನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು. ಭಗವಾನ್ ಶ್ರೀ ಕೃಷ್ಣನ ಜೀವನ ತತ್ವವನ್ನು ವೀಕ್ಷಿಸಲು ಈ ಕೇಂದ್ರಕ್ಕೆ ಭೇಟಿ ನೀಡುವಂತೆ ಅವರು ಜನರಿಗೆ ಮನವಿ ಮಾಡಿದರು. ಗುಜರಾತಿನಲ್ಲಿ ಪ್ರತಿ ವರ್ಷ ಶ್ರೀ ಕೃಷ್ಣ ಮತ್ತು ಮಾತಾ ರುಕ್ಮಿಣಿಯವರ ವಿವಾಹಕ್ಕೆ ಮೀಸಲಾಗಿರುವ ಮಾಧವಪುರ ಮೇಳವನ್ನು ಆಯೋಜಿಸಲಾಗುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು. ಇದು ದೇಶಾದ್ಯಂತ, ವಿಶೇಷವಾಗಿ ಈಶಾನ್ಯದಿಂದ ಜನರನ್ನು ಆಕರ್ಷಿಸುತ್ತದೆ ಮತ್ತು ಮುಂದಿನ ವರ್ಷ ಎಲ್ಲರೂ ಇದರಲ್ಲಿ ಭಾಗವಹಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ಶ್ರೀ ಕೃಷ್ಣನ ಸಂಪೂರ್ಣ ಜೀವನ ಮತ್ತು ಗೀತೆಯ ಪ್ರತಿಯೊಂದು ಅಧ್ಯಾಯವು ಕರ್ಮ, ಕರ್ತವ್ಯ ಮತ್ತು ಕಲ್ಯಾಣದ ಸಂದೇಶವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಹೇಳಿದರು. 2047 ಭಾರತೀಯರಿಗೆ ಕೇವಲ ಅಮೃತ ಕಾಲವಲ್ಲ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕರ್ತವ್ಯ ಬದ್ಧ ಯುಗವಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಭಾರತೀಯನಿಗೆ ಜವಾಬ್ದಾರಿ ಇದೆ ಮತ್ತು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಗೆ ಕರ್ತವ್ಯವಿದೆ ಎಂದು ಶ್ರೀ ಮೋದಿ ಹೇಳಿದರು. ಕರ್ನಾಟಕದ ಶ್ರಮಶೀಲ ಜನರು ಈ ಕರ್ತವ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಂದು ಪ್ರಯತ್ನವನ್ನೂ ದೇಶಕ್ಕೆ ಸಮರ್ಪಿಸಬೇಕು ಮತ್ತು ಈ ಕರ್ತವ್ಯ ಪ್ರಜ್ಞೆಯನ್ನು ಅನುಸರಿಸುವ ಮೂಲಕ ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು. ಉಡುಪಿಯ ನೆಲದಿಂದ ಹೊರಹೊಮ್ಮುವ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಲಿ ಎಂದು ಹಾರೈಸುವ ಮೂಲಕ ಶ್ರೀ ಮೋದಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಈ ಪವಿತ್ರ ಸಂದರ್ಭದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅವರು ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು, ಸಂತರು, ವಿದ್ವಾಂಸರು ಮತ್ತು ಸಮಾಜದ ಎಲ್ಲಾ ವರ್ಗಗಳ ಜನರು ಸೇರಿದಂತೆ 100,000 ಜನರು ಭಾಗವಹಿಸಿದ ಕಾರ್ಯಕ್ರಮದಲ್ಲಿ, ಅವರು ಒಟ್ಟಾಗಿ ಭಗವದ್ಗೀತೆಯನ್ನು ಪಠಿಸುತ್ತಾರೆ.
ಪ್ರಧಾನಮಂತ್ರಿಯವರು ಶ್ರೀಕೃಷ್ಣ ಗರ್ಭಗುಡಿಯ ಮುಂಭಾಗದಲ್ಲಿರುವ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು ಮತ್ತು ಪವಿತ್ರ ಕನಕನ ಕಿಂಡಿಗೆ ಕನಕ ಕವಚವನ್ನು (ಚಿನ್ನದ ಹೊದಿಕೆ) ಸಮರ್ಪಿಸಿದರು, ಇದು ಸಂತ ಕನಕದಾಸರು ಭಗವಾನ್ ಕೃಷ್ಣನ ದೈವಿಕ ದರ್ಶನ ಪಡೆದ ಪವಿತ್ರ ಕಿಟಕಿ ಎಂಬ ನಂಬಿಕೆಯಿದೆ. ಉಡುಪಿಯ ಶ್ರೀ ಕೃಷ್ಣ ಮಠವನ್ನು 800 ವರ್ಷಗಳ ಹಿಂದೆ ವೇದಾಂತದ ದ್ವೈತ ಸಿದ್ಧಾಂತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
*****
(रिलीज़ आईडी: 2195966)
आगंतुक पटल : 13