ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ವಿಸಿ ಮೂಲಕ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

प्रविष्टि तिथि: 27 NOV 2025 1:30PM by PIB Bengaluru

ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜಿ. ಕಿಶನ್ ರೆಡ್ಡಿ ಜೀ; ಆಂಧ್ರಪ್ರದೇಶದ ಕೈಗಾರಿಕಾ ಸಚಿವರಾದ ಶ್ರೀ ಟಿ. ಜಿ. ಭರತ್ ಜೀ; ಇನ್ ಸ್ಪೇಸ್  ಅಧ್ಯಕ್ಷರಾದ ಶ್ರೀ ಪವನ್ ಗೋಯೆಂಕಾ ಜೀ; ಸ್ಕೈರೂಟ್ ತಂಡ; ಇತರ ಗಣ್ಯರು; ಮಹಿಳೆಯರೇ ಮತ್ತು ಮಹನೀಯರೇ!

ಸ್ನೇಹಿತರೇ,

ಇಂದು, ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ. ಇಂದು, ಖಾಸಗಿ ವಲಯವು ಭಾರತದ ಬಾಹ್ಯಾಕಾಶ ಪರಿಸರ ವ್ಯವಸ್ಥೆಯಲ್ಲಿ ದೈತ್ಯ ಜಿಗಿತವನ್ನು ಸಾಧಿಸುತ್ತಿದೆ. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಭಾರತದ ಹೊಸ ಚಿಂತನೆ, ನಾವೀನ್ಯತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಯುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಯುವ ಜನರ ನಾವೀನ್ಯತೆ, ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಮತ್ತು ಇಂದಿನ ಕಾರ್ಯಕ್ರಮವು ಮುಂಬರುವ ದಿನಗಳಲ್ಲಿ ಜಾಗತಿಕ ಉಪಗ್ರಹ ಉಡಾವಣಾ ಪರಿಸರ ವ್ಯವಸ್ಥೆಯಲ್ಲಿ ಭಾರತವು ನಾಯಕನಾಗಿ ಹೊರಹೊಮ್ಮುತ್ತದೆ ಎಂಬ ಸಂಗತಿಯ ಪ್ರತಿಬಿಂಬವಾಗಿದೆ. ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಕಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀವಿಬ್ಬರೂ ಅನೇಕ ಯುವ ಬಾಹ್ಯಾಕಾಶ ಉದ್ಯಮಿಗಳಿಗೆ ಮತ್ತು ದೇಶದ ಪ್ರತಿಯೊಬ್ಬ ಯುವಜನರಿಗೆ ಉತ್ತಮ ಸ್ಫೂರ್ತಿ. ನೀವು ನಿಮ್ಮನ್ನು ನಂಬಿದ್ದೀರಿ, ನೀವು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯಲಿಲ್ಲ. ಮತ್ತು ಇಂದು ಇಡೀ ರಾಷ್ಟ್ರವು ಅದರ ಫಲಿತಾಂಶವನ್ನು ನೋಡುತ್ತಿದೆ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ.

ಸ್ನೇಹಿತರೇ,

ಭಾರತದ ಬಾಹ್ಯಾಕಾಶ ಪ್ರಯಾಣವು ಬಹಳ ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಾರಂಭವಾಯಿತು. ಆದರೆ ನಮ್ಮ ಮಹತ್ವಾಕಾಂಕ್ಷೆಗಳು ಎಂದಿಗೂ ಸೀಮಿತವಾಗಿರಲಿಲ್ಲ. ನಾವು ಸೈಕಲ್‌ನಲ್ಲಿ ರಾಕೆಟ್ ಭಾಗಗಳನ್ನು ಸಾಗಿಸುತ್ತಿದ್ದ ಕಾಲವಿತ್ತು, ಮತ್ತು ಇಂದು ಭಾರತವು ಕನಸುಗಳ ಎತ್ತರವನ್ನು ಸಂಪನ್ಮೂಲಗಳಿಂದಲ್ಲ, ಸಂಕಲ್ಪದಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಇಸ್ರೋ ದಶಕಗಳಿಂದ ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಹೊಸ ರೆಕ್ಕೆಗಳನ್ನು ನೀಡಿದೆ. ಭಾರತವು ವಿಶ್ವಾಸಾರ್ಹತೆ, ಸಾಮರ್ಥ್ಯ ಮತ್ತು ಮೌಲ್ಯದಲ್ಲಿ ತನಗಾಗಿ ಒಂದು ವಿಶಿಷ್ಟ ಗುರುತಿಸುವಿಕೆಯನ್ನು ಸೃಷ್ಟಿಸಿಕೊಂಡಿದೆ.

ಸ್ನೇಹಿತರೇ,

ಬದಲಾಗುತ್ತಿರುವ ಕಾಲದಲ್ಲಿ ಬಾಹ್ಯಾಕಾಶ ವಲಯ ಎಷ್ಟು ವೇಗವಾಗಿ ವಿಸ್ತರಿಸುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ಸಂವಹನ, ಕೃಷಿ, ಸಾಗರ ಮೇಲ್ವಿಚಾರಣೆ, ನಗರ ಯೋಜನೆ, ಹವಾಮಾನ ಮುನ್ಸೂಚನೆ ಮತ್ತು ರಾಷ್ಟ್ರೀಯ ಭದ್ರತೆಯ ಅಡಿಪಾಯವಾಗಿದೆ. ಅದಕ್ಕಾಗಿಯೇ ನಾವು ಭಾರತದ ಬಾಹ್ಯಾಕಾಶ ವಲಯದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಸರ್ಕಾರ ಬಾಹ್ಯಾಕಾಶ ವಲಯವನ್ನು ಖಾಸಗಿ ಅನ್ವೇಷಣೆ/ನಾವೀನ್ಯತೆಗಾಗಿ ಮುಕ್ತಗೊಳಿಸಿತು ಮತ್ತು ಹೊಸ ಬಾಹ್ಯಾಕಾಶ ನೀತಿಯನ್ನು ರೂಪಿಸಿತು. ನಾವು ನವೋದ್ಯಮಗಳು ಮತ್ತು ಕೈಗಾರಿಕೋದ್ಯಮವನ್ನು ನಾವೀನ್ಯತೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ನಾವು ಇನ್ ಸ್ಪೇಸ್  ಅನ್ನು ಸ್ಥಾಪಿಸಿದ್ದೇವೆ ಮತ್ತು ನಮ್ಮ ನವೋದ್ಯಮಗಳಿಗೆ ಇಸ್ರೋನ ಸೌಲಭ್ಯಗಳು ಮತ್ತು ತಂತ್ರಜ್ಞಾನವನ್ನು ಒದಗಿಸಿದ್ದೇವೆ. ಕಳೆದ 6-7 ವರ್ಷಗಳಲ್ಲಿ, ಭಾರತವು ತನ್ನ ಬಾಹ್ಯಾಕಾಶ ವಲಯವನ್ನು ಮುಕ್ತ, ಸಹಕಾರಿ ಮತ್ತು ನಾವೀನ್ಯತೆ-ಚಾಲಿತ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಿದೆ. ಇಂದಿನ ಕಾರ್ಯಕ್ರಮವು ನಮಗೆ ಇದರ ಒಂದು ನೋಟವನ್ನು ನೀಡುತ್ತದೆ ಮತ್ತು ನಮಗೆ ಹೆಮ್ಮೆಯನ್ನು ತುಂಬುತ್ತದೆ.

ಸ್ನೇಹಿತರೇ,

ಭಾರತದ ಯುವಜನರು ಸದಾ ರಾಷ್ಟ್ರೀಯ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮೇಲೆ ಉತ್ತುಂಗದಲ್ಲಿಡುತ್ತಾರೆ. ಅವರು ಪ್ರತಿಯೊಂದು ಅವಕಾಶವನ್ನೂ ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಸರ್ಕಾರ ಬಾಹ್ಯಾಕಾಶ ವಲಯವನ್ನು ತೆರೆದಾಗ, ನಮ್ಮ ಯುವಜನರು, ವಿಶೇಷವಾಗಿ ನಮ್ಮ ಜೆನ್ ಝಡ್ ಯುವಜನರು, ಅದರ ಸಂಪೂರ್ಣ ಲಾಭವನ್ನು ಪಡೆಯಲು ಮುಂದೆ ಬಂದರು. ಇಂದು, ಭಾರತದಲ್ಲಿ 300 ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳು ಭಾರತದ ಬಾಹ್ಯಾಕಾಶ ಪ್ರಯಾಣದ ಭವಿಷ್ಯಕ್ಕೆ ಹೊಸ ಭರವಸೆ ನೀಡುತ್ತಿವೆ. ಮತ್ತು ವಿಶೇಷವೆಂದರೆ ನಮ್ಮ ಹೆಚ್ಚಿನ ಬಾಹ್ಯಾಕಾಶ ನವೋದ್ಯಮಗಳು ಬಹಳ ಸಣ್ಣ ತಂಡಗಳೊಂದಿಗೆ ಪ್ರಾರಂಭವಾದವು. ಮತ್ತು ಕಳೆದ 5-6 ವರ್ಷಗಳಲ್ಲಿ ನನಗೆ ಅವರಲ್ಲಿ ಹಲವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಕೆಲವೊಮ್ಮೆ ಕೇವಲ ಇಬ್ಬರು, ಕೆಲವೊಮ್ಮೆ ಐದು ಸಹೋದ್ಯೋಗಿಗಳು, ಸಣ್ಣ ಬಾಡಿಗೆ ಕೊಠಡಿಯನ್ನು ಹಂಚಿಕೊಳ್ಳುತ್ತಿದ್ದರು. ತಂಡಗಳು ಚಿಕ್ಕದಾಗಿದ್ದವು, ಸಂಪನ್ಮೂಲಗಳು ಸೀಮಿತವಾಗಿದ್ದವು, ಆದರೆ ಅವರ ಮಹತ್ವಾಕಾಂಕ್ಷೆಗಳು ಹೆಚ್ಚಾಗಿವೆ. ಭಾರತದ ಖಾಸಗಿ ಬಾಹ್ಯಾಕಾಶ ಕ್ರಾಂತಿಗೆ ಜನ್ಮ ನೀಡಿದ ಉತ್ಸಾಹ ಇದು. ಇಂದು, ಜೆನ್ ಝಡ್  ಎಂಜಿನಿಯರ್‌ಗಳು, ಜೆನ್ ಝಡ್  ವಿನ್ಯಾಸಕರು, ಜೆನ್ ಝಡ್  ಕೋಡರ್‌ಗಳು ಮತ್ತು ಜೆನ್ ಝಡ್  ವಿಜ್ಞಾನಿಗಳು ಹೊಸ ತಂತ್ರಜ್ಞಾನಗಳನ್ನು ರಚಿಸುತ್ತಿದ್ದಾರೆ. ಅದು ಪ್ರೊಪಲ್ಷನ್ ಸಿಸ್ಟಮ್‌ಗಳಿರಲಿ,  ಸಂಯೋಜಿತ ವಸ್ತುಗಳಾಗಿರಲಿ, ರಾಕೆಟ್ ಹಂತಗಳು ಅಥವಾ ಉಪಗ್ರಹ ವೇದಿಕೆಗಳಾಗಿರಲಿ, ಭಾರತದ ಯುವಜನರು ಕೆಲವು ವರ್ಷಗಳ ಹಿಂದೆ ಊಹಿಸಲಾಗದಂತಿದ್ದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಖಾಸಗಿ ಬಾಹ್ಯಾಕಾಶ ಪ್ರತಿಭೆ ಪ್ರಪಂಚದಾದ್ಯಂತ ವಿಶಿಷ್ಟ ಗುರುತನ್ನು  ಸ್ಥಾಪಿಸುತ್ತಿದೆ. ಇಂದು, ಭಾರತದ ಬಾಹ್ಯಾಕಾಶ ವಲಯವು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ತಾಣವಾಗುತ್ತಿದೆ.

ಸ್ನೇಹಿತರೇ,

ಇಂದು, ಪ್ರಪಂಚದಾದ್ಯಂತ ಸಣ್ಣ ಉಪಗ್ರಹಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಉಡಾವಣಾ ಆವರ್ತನಗಳು ಹೆಚ್ಚುತ್ತಿವೆ ಮತ್ತು ಹೊಸ ಕಂಪನಿಗಳು ಉಪಗ್ರಹ ಸೇವೆಗಳ ಕ್ಷೇತ್ರಕ್ಕೆ ಪ್ರವೇಶಿಸುತ್ತಿವೆ. ಮತ್ತು ಬಾಹ್ಯಾಕಾಶವು ಈಗ ತನ್ನನ್ನು ತಾನು ಕಾರ್ಯತಂತ್ರದ ಆಸ್ತಿಯಾಗಿ ಸ್ಥಾಪಿಸಿಕೊಂಡಿದೆ. ಆದ್ದರಿಂದ, ಮುಂಬರುವ ವರ್ಷಗಳಲ್ಲಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯು ಹೆಚ್ಚಾಗಲಿದೆ/ಗುಣಿಸಲಿದೆ. ಇದು ಭಾರತದ ಯುವಜನರಿಗೆ ಒಂದು ದೊಡ್ಡ ಅವಕಾಶವಾಗಿದೆ.

ಸ್ನೇಹಿತರೇ,

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಂದಿರುವಂತಹ ಸಾಮರ್ಥ್ಯವನ್ನು ಹೊಂದುವುದು ವಿಶ್ವದ ಕೆಲವೇ ದೇಶಗಳಿಗೆ ಮಾತ್ರ ಸಾಧ್ಯವಾಗಿದೆ. ನಮ್ಮಲ್ಲಿ ಪರಿಣಿತ ಎಂಜಿನಿಯರ್‌ಗಳು, ಉತ್ತಮ ಗುಣಮಟ್ಟದ ಉತ್ಪಾದನಾ ಪರಿಸರ ವ್ಯವಸ್ಥೆ, ವಿಶ್ವ ದರ್ಜೆಯ ಉಡಾವಣಾ ತಾಣಗಳು ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮನಸ್ಥಿತಿ ಇದೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯವು ವೆಚ್ಚ-ಪರಿಣಾಮಕಾರಿ ಮತ್ತು ವಿಶ್ವಾಸಾರ್ಹವಾಗಿದೆ. ಅದಕ್ಕಾಗಿಯೇ ಜಗತ್ತು ಭಾರತದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಜಾಗತಿಕ ಕಂಪನಿಗಳು ಭಾರತದಲ್ಲಿ ಉಪಗ್ರಹಗಳನ್ನು ತಯಾರಿಸಲು ಬಯಸುತ್ತವೆ, ಭಾರತದಿಂದ ಉಡಾವಣಾ ಸೇವೆಗಳನ್ನು ಪಡೆಯಲು ಬಯಸುತ್ತವೆ ಮತ್ತು ಭಾರತದೊಂದಿಗೆ ತಂತ್ರಜ್ಞಾನ ಪಾಲುದಾರಿಕೆಯನ್ನು ಬಯಸುತ್ತವೆ. ಆದ್ದರಿಂದ, ನಾವು ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಸ್ನೇಹಿತರೇ,

ಇಂದು ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ನೋಡುತ್ತಿರುವ ಬದಲಾವಣೆಗಳು ಭಾರತದಲ್ಲಿ ನಡೆಯುತ್ತಿರುವ ನವೋದ್ಯಮ ಕ್ರಾಂತಿಯ ಭಾಗವಾಗಿವೆ. ಕಳೆದ ದಶಕದಲ್ಲಿ, ವಿವಿಧ ವಲಯಗಳಲ್ಲಿ ನವೋದ್ಯಮಗಳ ಹೊಸ ಅಲೆ ಹೊರಹೊಮ್ಮಿದೆ. ಅದು ಫಿನ್‌ಟೆಕ್, ಅಗ್ರಿಟೆಕ್, ಹೆಲ್ತ್‌ಟೆಕ್, ಕ್ಲೈಮೇಟ್‌ಟೆಕ್, ಎಜುಟೆಕ್ ಅಥವಾ ಡಿಫೆನ್ಸ್‌ಟೆಕ್ ಆಗಿರಲಿ, ಭಾರತದ ಯುವಜನರು, ನಮ್ಮ ಜನರೇಷನ್-ಝಡ್, ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಪರಿಹಾರಗಳನ್ನು ಒದಗಿಸುತ್ತಿದ್ದಾರೆ. ಮತ್ತು ಇಂದು, ನಾನು ವಿಶ್ವದ ಜನರೇಷನ್-ಝಡ್‌ಗೆ ವಿಶ್ವಾಸದಿಂದ ಹೇಳಬಲ್ಲೆ, ಅವರು ನಿಜವಾದ ಸ್ಫೂರ್ತಿ ಬಯಸುವುದಾದರೆ, ಅವರು ಅದನ್ನು ಭಾರತದ ಜನರೇಷನ್-ಝಡ್‌ನಿಂದ ಕಂಡುಕೊಳ್ಳಬಹುದು. ಭಾರತದ ಜನರೇಷನ್-ಝಡ್‌ನ ಸೃಜನಶೀಲತೆ, ಅವರ ಸಕಾರಾತ್ಮಕ ಮನಸ್ಥಿತಿ ಮತ್ತು ಅವರ ಸಾಮರ್ಥ್ಯ ವೃದ್ಧಿಯು ಪ್ರಪಂಚದಾದ್ಯಂತ ಜನರೇಷನ್-ಝಡ್‌ಗೆ ಮಾದರಿಯಾಗಬಹುದು. ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ. ನವೋದ್ಯಮಗಳು ಕೆಲವು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವಿತ್ತು. ಆದರೆ ಇಂದು, ಭಾರತದ ಚಿಕ್ಕ ಪಟ್ಟಣಗಳು ​​ಮತ್ತು ಹಳ್ಳಿಗಳಿಂದಲೂ ನವೋದ್ಯಮಗಳು ಉದಯಿಸುತ್ತಿವೆ. ಇಂದು, ದೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿವೆ ಮತ್ತು ಅನೇಕವು ಯುನಿಕಾರ್ನ್‌ಗಳಾಗಿ ಮಾರ್ಪಟ್ಟಿವೆ.

ಸ್ನೇಹಿತರೇ,

ಇಂದು ಭಾರತ ಕೇವಲ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಡೀಪ್-ಟೆಕ್, ಉತ್ಪಾದನೆ ಮತ್ತು ಹಾರ್ಡ್‌ವೇರ್ ನಾವೀನ್ಯತೆಯತ್ತ ವೇಗವಾಗಿ ಸಾಗುತ್ತಿದ್ದೇವೆ – ಜೆನ್ –ಝಡ್ ಗೆ ಧನ್ಯವಾದಗಳು. ಉದಾಹರಣೆಗೆ, ಸೆಮಿಕಂಡಕ್ಟರ್ ವಲಯವನ್ನು ತೆಗೆದುಕೊಳ್ಳಿ. ಸರ್ಕಾರ ತೆಗೆದುಕೊಂಡ ಐತಿಹಾಸಿಕ ಕ್ರಮಗಳು ಭಾರತದ ತಾಂತ್ರಿಕ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತಿವೆ. ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳು, ಚಿಪ್ ತಯಾರಿಕೆ ಮತ್ತು ವಿನ್ಯಾಸ ಕೇಂದ್ರಗಳು ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಚಿಪ್‌ಗಳಿಂದ ಸಂಪೂರ್ಣ ವ್ಯವಸ್ಥೆಗಳವರೆಗೆ, ಭಾರತವು ಬಲವಾದ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯನ್ನು ನಿರ್ಮಿಸುತ್ತಿದೆ. ಇದು ಸ್ವಾವಲಂಬನೆಗಾಗಿ ನಮ್ಮ ಸಂಕಲ್ಪದ ಭಾಗವಾಗಿದೆ ಮತ್ತು ಇದು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಬಲವಾದ ಮತ್ತು ವಿಶ್ವಾಸಾರ್ಹ ಸ್ತಂಭವನ್ನಾಗಿ ಮಾಡುತ್ತದೆ.

ಸ್ನೇಹಿತರೇ,

ನಮ್ಮ ಸುಧಾರಣೆಗಳ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ. ನಾವು ಖಾಸಗಿ ವಲಯಕ್ಕೆ ಬಾಹ್ಯಾಕಾಶ ನಾವೀನ್ಯತೆಯನ್ನು ತೆರೆದಂತೆಯೇ, ನಾವು ಈಗ ಮತ್ತೊಂದು ಪ್ರಮುಖ ವಲಯದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ನಾವು ಪರಮಾಣು ವಲಯವನ್ನು ತೆರೆಯುವತ್ತ ಸಾಗುತ್ತಿದ್ದೇವೆ. ಈ ಕ್ಷೇತ್ರದಲ್ಲಿಯೂ ಖಾಸಗಿ ವಲಯಕ್ಕೆ ಬಲವಾದ ಪಾತ್ರಕ್ಕಾಗಿ ನಾವು ಅಡಿಪಾಯ ಹಾಕುತ್ತಿದ್ದೇವೆ. ಇದು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು, ಸುಧಾರಿತ ರಿಯಾಕ್ಟರ್‌ಗಳು ಮತ್ತು ಪರಮಾಣು ನಾವೀನ್ಯತೆಯಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸುಧಾರಣೆಯು ನಮ್ಮ ಇಂಧನ ಭದ್ರತೆ ಮತ್ತು ತಾಂತ್ರಿಕ ನಾಯಕತ್ವಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ.

ಸ್ನೇಹಿತರೇ,

ಭವಿಷ್ಯ ಹೇಗಿರುತ್ತದೆ ಎಂಬುದು ಇಂದು ನಡೆಯುತ್ತಿರುವ ಸಂಶೋಧನೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರವು ಯುವಜನರಿಗೆ ಗರಿಷ್ಠ ಸಂಶೋಧನಾ ಅವಕಾಶಗಳನ್ನು ನೀಡುವತ್ತ ದೃಢವಾದ ಗಮನ ಹರಿಸಿದೆ. ಆಧುನಿಕ ಸಂಶೋಧನೆಯಲ್ಲಿ ಯುವಜನರನ್ನು ಬೆಂಬಲಿಸುವ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ನಾವು ಸ್ಥಾಪಿಸಿದ್ದೇವೆ. "ಒಂದು ರಾಷ್ಟ್ರ, ಒಂದು ಚಂದಾದಾರಿಕೆ" ಎಲ್ಲಾ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಜರ್ನಲ್‌ಗಳಿಗೆ ಪ್ರವೇಶವನ್ನು ಸುಲಭಗೊಳಿಸಿದೆ. 1 ಲಕ್ಷ ಕೋಟಿ ರೂಪಾಯಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿಯು ದೇಶಾದ್ಯಂತ ಯುವಜನರಿಗೆ ಹೆಚ್ಚು ಸಹಾಯ ಮಾಡುತ್ತದೆ. ನಾವು 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸಹ ಪ್ರಾರಂಭಿಸಿದ್ದೇವೆ, ಇದು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಮನೋಭಾವವನ್ನು ಪ್ರೇರೇಪಿಸುತ್ತಿದೆ. ಮುಂದಿನ ದಿನಗಳಲ್ಲಿ 50,000 ಹೊಸ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಪ್ರಯತ್ನಗಳು ಭಾರತದಲ್ಲಿ ಹೊಸ ಆವಿಷ್ಕಾರಗಳಿಗೆ ಅಡಿಪಾಯವನ್ನು ನಿರ್ಮಿಸುತ್ತಿವೆ.

ಸ್ನೇಹಿತರೇ,

ಮುಂಬರುವ ಯುಗವು ಭಾರತಕ್ಕೆ, ಭಾರತದ ಯುವಜನರಿಗೆ ಮತ್ತು ಭಾರತದ ನಾವೀನ್ಯತೆಗಳಿಗೆ ಸೇರಿದ್ದು. ಕೆಲವು ತಿಂಗಳುಗಳ ಹಿಂದೆ, ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ನಾನು ನಮ್ಮ ಬಾಹ್ಯಾಕಾಶ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ತನ್ನ ಉಡಾವಣಾ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನಾವು ನಿರ್ಧರಿಸಿದ್ದೆವು. ಭಾರತದ ಬಾಹ್ಯಾಕಾಶ ವಲಯದಿಂದ ಐದು ಹೊಸ ಯುನಿಕಾರ್ನ್‌ಗಳು ಹೊರಹೊಮ್ಮುತ್ತವೆ ಎಂದು ನಾವು ನಿರ್ಧರಿಸಿದ್ದೆವು. ಸ್ಕೈರೂಟ್‌ನ ತಂಡವು ಪ್ರಗತಿ ಸಾಧಿಸುತ್ತಿರುವ ರೀತಿಯನ್ನು ನೋಡಿದರೆ, ಭಾರತವು ತನ್ನ ಎಲ್ಲಾ ಗುರಿಗಳನ್ನು ಸಾಧಿಸುತ್ತದೆ ಎಂಬುದು ಖಚಿತ.

ಸ್ನೇಹಿತರೇ,

ಪ್ರತಿಯೊಬ್ಬ ಯುವ ಭಾರತೀಯ, ಪ್ರತಿಯೊಬ್ಬ ನವೋದ್ಯಮ, ವಿಜ್ಞಾನಿ, ಎಂಜಿನಿಯರ್ ಮತ್ತು ಉದ್ಯಮಿ ಮತ್ತು ನನ್ನ ಯುವ ಸ್ನೇಹಿತರಿಗೆ ನಾನು ಭರವಸೆ ನೀಡುತ್ತೇನೆ ಮತ್ತು ಇದು ನನ್ನ ಭರವಸೆ: ಸರ್ಕಾರವು ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ನಿಂತಿದೆ. ಮತ್ತೊಮ್ಮೆ, ಇಡೀ ಸ್ಕೈರೂಟ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಹೊಸ ವೇಗವನ್ನು ನೀಡುತ್ತಿರುವ ಎಲ್ಲರಿಗೂ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಬನ್ನಿ, 21 ನೇ ಶತಮಾನವನ್ನು ಭೂಮಿಯ ಮೇಲೆ ಮತ್ತು ಬಾಹ್ಯಾಕಾಶದಲ್ಲಿ ಭಾರತದ ಶತಮಾನವನ್ನಾಗಿ ಮಾಡೋಣ. ಎಲ್ಲರಿಗೂ ತುಂಬಾ ಧನ್ಯವಾದಗಳು. ನಿಮಗೆ ಹೃತ್ಪೂರ್ವಕ ಶುಭಾಶಯಗಳು!

 

*****


(रिलीज़ आईडी: 2195812) आगंतुक पटल : 34
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Assamese , Manipuri , Punjabi , Gujarati , Odia , Telugu , Malayalam