iffi banner

ದೃಶ್ಯಯಾನ: ಫ್ರೇಮ್‌ ಗಳ ಮೂಲಕ ಕಥೆ ಹೇಳುವ ಕಲೆಯ ಅನಾವರಣ


ಪ್ರತಿ ಫ್ರೇಮ್‌ ನಲ್ಲೂ 'ಭಾವ' ಮಿಡಿಯಬೇಕು: ಛಾಯಾಗ್ರಾಹಕ ರವಿವರ್ಮನ್ ಕಳಕಳಿ

ರವಿವರ್ಮನ್ ಜೊತೆಗಿನ ಆಪ್ತ ಸಂವಾದ: ಫ್ರೇಮ್‌ ಗಳ ಅಂತರಾಳದಲ್ಲಿರುವ ದೃಷ್ಟಿಕೋನದ ಅನಾವರಣ

"ಥ್ರೂ ದ ಲೆನ್ಸ್: ಕ್ರಾಫ್ಟಿಂಗ್ ಎಮೋಷನ್ ಇನ್ ಎವ್ರಿ ಫ್ರೇಮ್" ಎನ್ನುವ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮವು, ಛಾಯಾಗ್ರಾಹಕ ರವಿವರ್ಮನ್ ಮತ್ತು ನಿರ್ದೇಶಕ ಸಂಜೀವ್ ಶಿವನ್ ಅವರ ನಡುವಿನ ಒಂದು ಆಪ್ತ ಸಂವಾದವಾಗಿ ಮೂಡಿಬಂತು. ಕುತೂಹಲದಿಂದ ಕೂಡಿದ್ದ ಸಭಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಕೇವಲ ಸಿನಿಮಾ ತಂತ್ರಗಾರಿಕೆಯ ಪಾಠವಾಗದೆ, ರವಿವರ್ಮನ್ ಅವರ ದೃಶ್ಯ ಪ್ರಪಂಚವನ್ನು ರೂಪಿಸಿದ ಅಂತಃಪ್ರಜ್ಞೆ, ನೆನಪುಗಳು ಮತ್ತು ಮೌನ ಹೋರಾಟಗಳ ಪಯಣವಾಗಿ ಅನಾವರಣಗೊಂಡಿತು. ಅತ್ಯಂತ ಸರಳ ಮತ್ತು ಪ್ರಾಮಾಣಿಕತೆಯಿಂದ ಮಾತನಾಡಿದ ಅವರು, ತಮ್ಮ ಆರಂಭಿಕ ಸಂಘರ್ಷದ ದಿನಗಳಿಂದ ಹಿಡಿದು, ಇಂದು ಅವರ ಫ್ರೇಮ್‌ಗಳನ್ನು ವ್ಯಾಖ್ಯಾನಿಸುವ ಕಲಾತ್ಮಕತೆಯವರೆಗಿನ ಹಾದಿಯನ್ನು ಬಿಚ್ಚಿಟ್ಟರು. "ಪ್ರತಿ ದೃಶ್ಯದ ಹಿಂದೆಯೂ ಒಂದು ಕಲೆ ಮತ್ತು ಒಂದು ಜೀವನ ಅಡಗಿರುತ್ತದೆ" ಎಂಬುದನ್ನು ಅವರು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಿಳಿಸಿದರು.

ರವಿವರ್ಮನ್ ಅವರು ತಮ್ಮ ಅಸ್ಮಿತೆಗೆ ಸಂಬಂಧಿಸಿದ ಒಂದು ಆಸಕ್ತಿದಾಯಕ ವಿಚಾರದೊಂದಿಗೆ ಮಾತು ಆರಂಭಿಸಿದರು. ತಮ್ಮ ಸುದೀರ್ಘವಾದ ಹೆಸರನ್ನು ಕಿರಿದುಗೊಳಿಸಿ, ಕೇವಲ ‘ವರ್ಮನ್’ ಎಂದು ಉಳಿಸಿಕೊಂಡಿದ್ದರ ಹಿಂದಿನ ಮರ್ಮವನ್ನು ಅವರು ಬಿಚ್ಚಿಟ್ಟರು. ಅವರ ಪಾಲಿಗೆ ‘ವರ್ಮನ್’ ಎಂಬುದು ಕೇವಲ ಹೆಸರಲ್ಲ, ಅದೊಬ್ಬ ‘ಹೋರಾಟಗಾರ’ನ ಸಂಕೇತ. ಬಾಲ್ಯದಲ್ಲಿ, ಮಹಾನ್ ಚಿತ್ರಕಲಾವಿದ ರಾಜಾ ರವಿವರ್ಮ ಅವರ ಹೆಸರನ್ನೇ ಇವರು ಹೊಂದಿರುವುದನ್ನು ಕಂಡು ಜನ ಲೇವಡಿ ಮಾಡುತ್ತಿದ್ದರು. ಆದರೆ, ಕಾಲ ಉರುಳಿದಂತೆ ವಿಚಿತ್ರವೆಂಬಂತೆ ಮಗುವೊಂದು ಇವರು ಸೆರೆಹಿಡಿದ ಫ್ರೇಮ್ ಒಂದನ್ನು ನೋಡಿ, "ಇದು ಸಾಕ್ಷಾತ್ ರವಿವರ್ಮರ ಕುಂಚದಿಂದ ಅರಳಿದ ಚಿತ್ರದಂತಿದೆ" ಎಂದು ಉದ್ಗರಿಸಿತಂತೆ! ಅಂದು ಸಿಕ್ಕ ಆ ಅನಿರೀಕ್ಷಿತ ಮನ್ನಣೆ ಇಂದಿಗೂ ಅವರ ಮನದಾಳದಲ್ಲಿ ಹಚ್ಚಹಸಿರಾಗಿದೆ. "ಟೀಕೆಗಳು ಎಂದಿಗೂ ನನ್ನನ್ನು ಕುಗ್ಗಿಸಲಿಲ್ಲ; ಬದಲಿಗೆ, ಉತ್ಕೃಷ್ಟವಾದುದನ್ನು ಸೃಷ್ಟಿಸುವ ನನ್ನ ಛಲವನ್ನು ಅವು ಮತ್ತಷ್ಟು ಗಟ್ಟಿಗೊಳಿಸಿದವು," ಎಂದು ಅವರು ಹೇಳಿದರು.

ಅವರ ಆರಂಭಿಕ ದಿನಗಳು ಸಂಕಷ್ಟಗಳಿಂದ ಕೂಡಿದ್ದವು. ಏಳನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಅವರು, ಚೆನ್ನೈಗೆ ಬಂದಿಳಿದಾಗ ‘ಅನಿಶ್ಚಿತತೆ’ಯೇ ಅವರ ಏಕೈಕ ಸಂಗಾತಿಯಾಗಿತ್ತು. ಬದುಕುಳಿಯುವ ಅನಿವಾರ್ಯತೆಗಾಗಿ, ಕೇವಲ 130 ರೂಪಾಯಿ ಕೊಟ್ಟು ತಮ್ಮ ಮೊದಲ ಕ್ಯಾಮೆರಾವನ್ನು ಖರೀದಿಸಿದ್ದರು. ಅದರಲ್ಲಿ ಕಲಾತ್ಮಕ ಮಹತ್ವಾಕಾಂಕ್ಷೆಗಿಂತ ಹೆಚ್ಚಾಗಿ, ಜೀವನ ನಡೆಸುವ ಹಂಬಲವಿತ್ತು. ಛಾಯಾಗ್ರಹಣದ ಕನಸು ನಿಧಾನವಾಗಿ ಚಿಗುರೊಡೆಯಿತು ಮತ್ತು ಸಂದರ್ಭಗಳು ಅದಕ್ಕೆ ರೂಪ ನೀಡಿದವು. ತಮ್ಮ ಕಸುಬಿನಲ್ಲಿ ಪಕ್ವತೆ ಸಾಧಿಸುತ್ತಿದ್ದಂತೆ, ‘ಅಮೆರಿಕನ್ ಸೊಸೈಟಿ ಆಫ್ ಸಿನಿಮಾಟೋಗ್ರಾಫರ್ಸ್’ (ASC) ಸೇರಬೇಕೆಂಬ ಆಸೆ ಅವರಲ್ಲಿ ಮೂಡಿತು. 2022ರಲ್ಲಿ ಅವರು ಈ ಮೈಲಿಗಲ್ಲನ್ನು ಸಾಧಿಸಿದರು. ಇದು ಅವರ ಸತತ ಪರಿಶ್ರಮ, ಶಿಸ್ತು ಮತ್ತು ಕೆಲಸದ ಮೇಲಿನ ಬದ್ಧತೆಗೆ ಸಾಕ್ಷಿಯಾಗಿ ನಿಂತಿತು.

ಸಿನಿಮಾ ಲೋಕಕ್ಕೆ ರವಿವರ್ಮನ್ ಅವರ ಪ್ರವೇಶವು, ಮೊದಲೇ ಬರೆದಿಟ್ಟ ಚಿತ್ರಕಥೆಯಂತೆ ಸುಗಮವಾಗಿರಲಿಲ್ಲ. ಅವರು ಚೆನ್ನೈಗೆ ಕಾಲಿಟ್ಟಾಗ, ಸಿನಿಮಾ ಮಾಡಬೇಕೆಂಬುದು ಅವರ ಕನಸಾಗಿರಲಿಲ್ಲ; ಬದಲಿಗೆ ಬದುಕುಳಿಯುವುದಷ್ಟೇ ಅವರ ಮುಂದಿದ್ದ ಏಕೈಕ ಸವಾಲಾಗಿತ್ತು. ರೈಲ್ವೆ ನಿಲ್ದಾಣಗಳ ಅಂಚಿನಲ್ಲಿ ಕಳೆದ ಎಷ್ಟೋ ರಾತ್ರಿಗಳು ಮತ್ತು ಯಾವುದೇ ತರಬೇತಿಯ ಹಂಗಿಲ್ಲದೆ, ಕೇವಲ ಅನಿವಾರ್ಯತೆಯಿಂದಲೇ ಜಗತ್ತನ್ನು ಗ್ರಹಿಸುವ ಅವರ ನೋಟ... ಇವೆಲ್ಲವೂ ಅವರ ಪಾಲಿಗೆ ಪಾಠಶಾಲೆಗಳಾದವು. ಶಾಲೆಗೆ ಸಾಗುತ್ತಿದ್ದ ದೀರ್ಘ ನಡಿಗೆ, ಮುಂಜಾವಿನ ಮಬ್ಬನ್ನು ಸೀಳಿಕೊಂಡು ನುಗ್ಗುವ ರೈಲುಗಳ ಬೆಳಕಿನ ಚಿತ್ತಾರ, ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮುಳುಗಿದ ಜನಸಾಮಾನ್ಯರು... ಇವೆಲ್ಲವೂ ಮುಂದೆ ಅವರ ದೃಶ್ಯ ಸಂವೇದನೆಗೆ ಬುನಾದಿ ಹಾಕಿದವು. ಟಾಲ್‌ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಕಾದಂಬರಿ ಅವರ ಕಲ್ಪನೆಯನ್ನು ಎಷ್ಟರಮಟ್ಟಿಗೆ ಪ್ರಚೋದಿಸಿತೆಂದರೆ, ಅದು ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಯುದ್ಧ ದೃಶ್ಯಗಳಿಗೆ ಸ್ಫೂರ್ತಿಯಾಯಿತು. ಮಧುರೈ ಹೋಳಿಯ ಬಣ್ಣಗಳು ‘ರಾಮ್‌ ಲೀಲಾ’ದಲ್ಲಿ ಮರುಸೃಷ್ಟಿಯಾದರೆ, ಅವರಿಗೆ ಅತ್ಯಂತ ಪ್ರಿಯವಾದ ಮುಂಜಾವಿನ ಮೃದು ಬೆಳಕು ‘ಬರ್ಫಿ’ ಚಿತ್ರದ ದೃಶ್ಯಗಳಿಗೆ ಹಿತವಾದ ಲೇಪನ ನೀಡಿತು.

ಸಂವಾದ ಮುಂದುವರಿದಂತೆ, ರವಿವರ್ಮನ್ ಬೆಳಕನ್ನು ಕೇವಲ ಒಂದು ತಾಂತ್ರಿಕ ಸಲಕರಣೆಯಾಗಿ ನೋಡದೆ, ಅದನ್ನೊಂದು ‘ಭಾವನಾತ್ಮಕ ದಿಕ್ಸೂಚಿ’ಯಾಗಿ  ವಿವರಿಸಿದರು. "ಜಗತ್ತಿನಲ್ಲಿ ಕೆಟ್ಟ ಬೆಳಕು ಅಂತ ಯಾವುದೂ ಇಲ್ಲ; ನಮ್ಮ ಮನಸ್ಸು ಅದನ್ನು ಹೇಗೆ ನಿರ್ಧರಿಸುತ್ತದೆ ಎಂಬುದಷ್ಟೇ ಮುಖ್ಯ," ಎಂಬುದು ಅವರ ಖಚಿತ ನುಡಿ. ಅವರ ಪ್ರಕಾರ, ಲೈಟಿಂಗ್‌ ನಲ್ಲಿನ ಏಕರೂಪತೆ ತಾಂತ್ರಿಕ ಕಸರತ್ತಿನಿಂದ ಬರುವುದಿಲ್ಲ; ಬದಲಿಗೆ, ಕಥೆಯ ಅಂತರಾಳದ ತಾಪಮಾನ ಅಥವಾ 'ಭಾವದ ತೀವ್ರತೆ'ಯನ್ನು ಗ್ರಹಿಸುವವರೆಗೆ ಸ್ಕ್ರಿಪ್ಟ್ ಅನ್ನು ಮರುಮನನ ಮಾಡಿಕೊಳ್ಳುವುದರಿಂದ ಸಿದ್ಧಿಸುತ್ತದೆ. "ನೆರಳು ಎಂಬುದು ಬೆಳಕಿನ ಅಭಾವವಲ್ಲ, ಅದೊಂದು ಮನಸ್ಥಿತಿ," ಎಂದು ವಿವರಿಸಿದ ಅವರು, ತಮ್ಮ ಅರ್ಧದಷ್ಟು ಫ್ರೇಮ್‌ ಗಳು ಈ ನೆರಳಿನ ಗರ್ಭದಲ್ಲೇ ಅಡಗಿರುತ್ತವೆ ಎಂದರು. ತಾಂತ್ರಿಕ ನಿರ್ಧಾರಗಳು ಅತಿಯಾದ ಆಲೋಚನೆಯಿಂದಲ್ಲ, ಬದಲಿಗೆ ಸಹಜ ಪ್ರವೃತ್ತಿಯಿಂದ ಅವರಲ್ಲಿ ತಾನಾಗಿಯೇ ಸ್ಫುರಿಸುತ್ತವೆ. ಎಷ್ಟೇ ಒತ್ತಡದ ಚಿತ್ರೀಕರಣವಿದ್ದರೂ, ಆ ಒತ್ತಡಕ್ಕೆ ಬಾಗಿ ತಮ್ಮ ಫ್ರೇಮ್‌ ನ ಚೌಕಟ್ಟು ಅಥವಾ ಶಿಸ್ತು ಕದಡಲು ಅವರು ಎಂದಿಗೂ ಆಸ್ಪದ ನೀಡುವುದಿಲ್ಲ.

ನಿರ್ದೇಶಕರು ಮತ್ತು ಕಲಾ ವಿಭಾಗದೊಂದಿಗಿನ ಸಹಯೋಗವನ್ನು ಅವರು ಸಂಘರ್ಷದ ತಾಣವನ್ನಾಗಿ ನೋಡದೆ, ಅದೊಂದು ‘ಪ್ರಾಮಾಣಿಕತೆಯ ವೇದಿಕೆ’ ಎಂದು ಬಣ್ಣಿಸಿದರು. ಅವರ ಪ್ರಕಾರ, ಈ ಚರ್ಚೆಗಳ ಮೂಲ ಉದ್ದೇಶವೇ ಫ್ರೇಮ್‌ನ ಪಾವಿತ್ರ್ಯತೆಯನ್ನು ಕಾಪಾಡುವುದಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಏಳುವ ಯಾವುದೇ ಭಿನ್ನಾಭಿಪ್ರಾಯಗಳು ಅಥವಾ ಒತ್ತಡಗಳು ಅಂತಿಮ ದೃಶ್ಯದ ಮೇಲೆ ಕಲೆಯನ್ನು ಉಳಿಸಬಾರದು. "ನಾನೊಂದು ದಿನ ಮರೆಯಾಗಬಹುದು, ಆದರೆ ನಾನು ಸೃಷ್ಟಿಸಿದ ಫ್ರೇಮ್‌ ಗಳು ಶಾಶ್ವತವಾಗಿ ಉಳಿಯುತ್ತವೆ" ಎಂಬ ಅವರ ಮಾತು ಕಲೆಯ ಅಜರಾಮರತೆಯನ್ನು ಸಾರಿ ಹೇಳಿತು.

ಬೆಳಕು  ಎಂಬುದು ಅವರ ಪಾಲಿಗೆ ಕೇವಲ ತಾಂತ್ರಿಕತೆಯಲ್ಲ, ಅದೊಂದು 'ಅಂತಃಪ್ರಜ್ಞೆಯ ಸಂವಾದ'. ಅವರು ಕೃತಕ ಬೆಳಕಿಗಿಂತ ಹೆಚ್ಚಾಗಿ ನೈಸರ್ಗಿಕ ಬೆಳಕಿನ ಪ್ರಾಮಾಣಿಕತೆ ಮತ್ತು ಅದರ ಅನಿರೀಕ್ಷಿತ ಗುಣವನ್ನು ಹೆಚ್ಚು ಮೆಚ್ಚುತ್ತಾರೆ. ಎಷ್ಟೇ ದೊಡ್ಡ ಬಜೆಟ್‌ ನ ಸಿನಿಮಾವಾಗಿದ್ದರೂ, ಸೂರ್ಯ, ಮುಂಜಾನೆ ಅಥವಾ ಕಿಟಕಿಯಿಂದ ತೂರಿ ಬರುವ ಬೆಳಕು ನೀಡುವ ಸಾಧ್ಯತೆಗಳನ್ನು ಬಳಸಿಕೊಂಡ ನಂತರವೇ ಅವರು ಇತರ ಕೃತಕ ಸಾಧನಗಳತ್ತ ಮುಖಮಾಡುತ್ತಾರೆ. ಹಗಲು ಬೆಳಕಿರಲಿ, ಮೇಣದ ಬತ್ತಿಯ ಮಿನುಗಿರಲಿ ಅಥವಾ ಸೃಷ್ಟಿಸಿದ ಮುಂಜಾವಿನ ದೃಶ್ಯವಿರಲಿ; ಅವರ ಆಯ್ಕೆಗಳು ತಾಂತ್ರಿಕ ಪ್ರದರ್ಶನಕ್ಕಲ್ಲದೆ, ದೃಶ್ಯದ ಉದ್ದೇಶಕ್ಕಾಗಿ ಮಾತ್ರ ಮೀಸಲಾಗಿರುತ್ತವೆ. ಇನ್ನು ಕೃತಕ ಬುದ್ಧಿಮತ್ತೆಯ (AI) ವಿಷಯದಲ್ಲಿ ಅವರ ನಿಲುವು ಸ್ಪಷ್ಟವಾಗಿತ್ತು: "ಮನುಷ್ಯನ ಮನಸ್ಸು ಉಪಕರಣವನ್ನು ಮುನ್ನಡೆಸಬೇಕೇ ಹೊರತು, ಉಪಕರಣ ಮನುಷ್ಯನನ್ನಲ್ಲ." AI ಎಂಬುದು ಸಹಾಯಕ ವ್ಯವಸ್ಥೆಗಳನ್ನು ರೂಪಿಸಬಹುದೇ ಹೊರತು, ಸೃಜನಶೀಲತೆಯನ್ನು ಆಳಲಾರದು. ಆಲೋಚನೆ ಮತ್ತು ಅಂತಃಪ್ರಜ್ಞೆಗಳೇ ಮೊದಲು; ಅಂತಿಮವಾಗಿ ಪ್ರತಿ ದೃಶ್ಯವೂ ಛಾಯಾಗ್ರಾಹಕನ ಕಲ್ಪನೆ ಮತ್ತು ಅವನು ಜಗತ್ತನ್ನು ನೋಡುವ ರೀತಿಯಿಂದಲೇ ರೂಪುಗೊಳ್ಳುತ್ತದೆ.

ಕಾರ್ಯಕ್ರಮವು ಅತ್ಯಂತ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದು ಅವರು ಸ್ತ್ರೀಯರ ಬಗ್ಗೆ, ವಿಶೇಷವಾಗಿ ತಮ್ಮ ತಾಯಿಯ ಬಗ್ಗೆ ಮಾತನಾಡಿದಾಗ. ತಮ್ಮ ತಾಯಿಯಲ್ಲಿದ್ದ ಸರಳತೆ ಮತ್ತು ಅಚಲವಾದ ಸ್ಥೈರ್ಯವೇ, ಇಂದು ಅವರು ಪರದೆಯ ಮೇಲೆ ಸ್ತ್ರೀಯರನ್ನು ಚಿತ್ರಿಸುವ ರೀತಿಗೆ ದಾರಿದೀಪವಾಗಿದೆ. ತಮ್ಮ ಈ ಪಯಣದಲ್ಲಿ ಆಧಾರಸ್ತಂಭಗಳಾಗಿ ನಿಂತ ತಾಯಿ ಮತ್ತು ಪತ್ನಿಯನ್ನು ಸ್ಮರಿಸುತ್ತಾ, "ಪ್ರತಿ ಸುಂದರ ದೃಶ್ಯದ ಹಿಂದೆಯೂ ಪ್ರೀತಿ ಮತ್ತು ಸಹನೆಯಿಂದ ಹದಗೊಂಡ ಒಂದು ಬದುಕಿರುತ್ತದೆ," ಎಂದು ಅವರು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.ಕಾರ್ಯಕ್ರಮ ಮುಕ್ತಾಯವಾಗುವ ಹೊತ್ತಿಗೆ, ಅದೊಂದು ಸಾಮಾನ್ಯ ಸಂವಾದವಾಗಿ ಉಳಿಯದೆ, ಕಲೆಯು ಹೇಗೆ ಮನುಷ್ಯನ ಸ್ಥೈರ್ಯ, ಸ್ಮೃತಿ ಮತ್ತು ಕಠಿಣ ಬೆಳಕಿನಲ್ಲೂ ಸೌಂದರ್ಯವನ್ನು ಕಾಣುವ ಧೈರ್ಯದಿಂದ ಅರಳುತ್ತದೆ ಎನ್ನುವ ಆಳವಾದ ಚಿಂತನೆಯಾಗಿ ಮಾರ್ಪಟ್ಟಿತು.

ಐಎಫ್‌ಎಫ್‌ಐ ಬಗ್ಗೆ

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ಇಎಸ್‌ಜಿ) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇದು ಕೇವಲ ಉತ್ಸವವಲ್ಲ; ಮರುಜೀವ ಪಡೆದ ಅಂದಿನ ಶ್ರೇಷ್ಠ 'ಕ್ಲಾಸಿಕ್' ಚಿತ್ರಗಳು ಇಂದಿನ ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುವ ತಾಣ. ಸಿನಿಮಾದ ಮೇರು ದಿಗ್ಗಜರು ಮತ್ತು ನಿರ್ಭೀತಿಯಿಂದ ಹೊಸ ಕನಸು ಕಾಣುವ ನವ ಪ್ರತಿಭೆಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಅಪರೂಪದ ಸಂಗಮವಿದು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಸಿನಿಮಾ ಪಾಠ ಹೇಳುವ 'ಮಾಸ್ಟರ್‌ ಕ್ಲಾಸ್‌'ಗಳು, ದಿಗ್ಗಜರಿಗೆ ಸಲ್ಲುವ ಗೌರವಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಆಕರ್ಷಣೆಯಾಗಿದೆ. ಗೋವಾದ ಮನಮೋಹಕ ಕಡಲ ತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು ವಿವಿಧ ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಹೊಸ ದನಿಗಳ ಅದ್ಭುತ ಲೋಕವನ್ನೇ ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲತೆಯ ವೈಭವವನ್ನು ಸಾರುವ ಒಂದು ಮಹಾನ್ ಸಂಭ್ರಮವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji


 
*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2194410   |   Visitor Counter: 3

इस विज्ञप्ति को इन भाषाओं में पढ़ें: English , Konkani , Gujarati , Tamil