iffi banner

ಐಎಫ್‌ಎಫ್‌ಐ ಯಲ್ಲಿ ಮೊಳಗಿದ ಜಾಗತಿಕ ದನಿಗಳು: ಎರಡು ಶಕ್ತಿಶಾಲಿ ಚಿತ್ರಗಳ ಮೂಲಕ ಮಾತೃತ್ವ, ಅಸ್ಮಿತೆ ಮತ್ತು ಇತಿಹಾಸದ ಅನ್ವೇಷಣೆ


ಅಕಿನೋಲಾ ಅವರ 'ಮೈ ಫಾದರ್ಸ್ ಶ್ಯಾಡೋ': ಬದುಕು ಮತ್ತು ರಾಜಕೀಯದ ನೈಜ ಬಡಿತದ ಅನಾವರಣ

ಭಾವನೆಗಳ ಮೂಲಕ ಮಾತನಾಡಿದ 'ಮದರ್ಸ್ ಬೇಬಿ': ಮಾತೃತ್ವದ ಹಲವು ಆಯಾಮಗಳ ಅನಾವರಣ

ಇಂದು ಐಎಫ್‌ಎಫ್‌ಐ  ವೇದಿಕೆಯಲ್ಲಿ ಎರಡು ತೀರಾ ಭಿನ್ನವಾದ, ಆದರೂ ಭಾವನಾತ್ಮಕವಾಗಿ ಬೆಸೆದಿರುವ ಜಗತ್ತುಗಳ ಸಂಗಮವಾಯಿತು. 'ಮದರ್ಸ್ ಬೇಬಿ' ಮತ್ತು 'ಮೈ ಫಾದರ್ಸ್ ಶ್ಯಾಡೋ' ಚಿತ್ರತಂಡಗಳು ಸಿನಿಮಾ ಕಲೆ, ನೆನಪುಗಳು ಮತ್ತು ಸಿನಿಮಾವು ಬದುಕಿನ ನೈಜತೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತು ಉತ್ಸಾಹಭರಿತ ಸಂವಾದ ನಡೆಸಿದವು. ಈ ಕಾರ್ಯಕ್ರಮದಲ್ಲಿ 'ಮದರ್ಸ್ ಬೇಬಿ' ಚಿತ್ರದ ಛಾಯಾಗ್ರಾಹಕ ರಾಬರ್ಟ್ ಒಬೆರೈನರ್ ಮತ್ತು ಪ್ರೊಡಕ್ಷನ್ ಡಿಸೈನರ್ ಜೋಹಾನ್ಸ್ ಸಲಾತ್ ಅವರೊಂದಿಗೆ, 'ಮೈ ಫಾದರ್ಸ್ ಶ್ಯಾಡೋ' ಚಿತ್ರದ ನಿರ್ದೇಶಕ ಅಕಿನೋಲಾ ಒಗುನ್ಮೇಡ್ ಡೇವಿಸ್ ಭಾಗವಹಿಸಿದ್ದರು. ಯುಕೆಯ ಅಧಿಕೃತ ಆಸ್ಕರ್ ಪ್ರವೇಶವನ್ನು ಪಡೆದಿರುವ ಮತ್ತು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ನೈಜೀರಿಯನ್ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಮೈ ಫಾದರ್ಸ್ ಶ್ಯಾಡೋ' ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ.

ಲಾಗೋಸ್ ನ ಆ ಒಂದು ದಿನದಲ್ಲಿ ಅಡಗಿದೆ ಇಡೀ ಜೀವನ: ಅಕಿನೋಲಾ ಅವರ ಸಹಜ ಸ್ಫೂರ್ತಿಯ ಸಿನಿಮಾ ಪಯಣ

ಸಂವಾದವನ್ನು ಆರಂಭಿಸುತ್ತಾ, ಅಕಿನೋಲಾ ಅವರು 'ಮೈ ಫಾದರ್ಸ್ ಶ್ಯಾಡೋ' ಚಿತ್ರದ ಮೂಲವು ತಮ್ಮ ಸಹೋದರ ಬರೆದಿದ್ದ ಹಳೆಯ ಕಿರುಚಿತ್ರವೊಂದರಲ್ಲಿದೆ ಎಂದು ಸ್ಮರಿಸಿದರು. 1993ರ ನೈಜೀರಿಯನ್ ಚುನಾವಣೆಗಳ ಹಿನ್ನೆಲೆಯಲ್ಲಿ ರೂಪಿತವಾಗಿರುವ ಈ ಚಿತ್ರವು, ಆ ಸಮಯದ ರಾಜಕೀಯ ಉದ್ವಿಗ್ನತೆಯ ಕುರಿತ ಅವರ ಸ್ವಂತ ಬಾಲ್ಯದ ನೆನಪುಗಳನ್ನು ಪ್ರತಿಬಿಂಬಿಸುತ್ತದೆ.

ತಮ್ಮ ಸೃಜನಶೀಲ ಪ್ರಕ್ರಿಯೆಯ ಬಹುಪಾಲು ತಮ್ಮ ಅಂತಃಪ್ರಜ್ಞೆಯಿಂದಲೇ ನಿರ್ದೇಶಿತವಾಗಿದೆ ಎಂದು ಅಕಿನೋಲಾ ವಿವರಿಸಿದರು. "ತಂದೆ ಮತ್ತು ಆತನ ಗಂಡು ಮಕ್ಕಳ ಬದುಕು ಇಲ್ಲಿನ ಸೂಕ್ಷ್ಮ ಕಥೆಯಾದರೆ, ಚುನಾವಣೆ ಎಂಬುದು ಬೃಹತ್ ಕಥೆಯಾಗಿದೆ. ಇವೆರಡೂ ಒಂದರಲ್ಲೊಂದು ಬೆರೆತುಹೋಗುತ್ತವೆ," ಎಂದು ಅವರು ಅಭಿಪ್ರಾಯಪಟ್ಟರು. ಇಡೀ ಚಿತ್ರದ ಕಥೆ ಒಂದೇ ದಿನದಲ್ಲಿ ನಡೆಯುತ್ತದೆ. ಈ ಆಯ್ಕೆಯು ತಮಗೆ ಒಂದು ರೀತಿಯ ಸ್ವಾತಂತ್ರ್ಯವನ್ನು ನೀಡಿತು ಎಂದು ಅಕಿನೋಲಾ ಬಣ್ಣಿಸುತ್ತಾರೆ. "ಉದ್ವಿಗ್ನತೆಯನ್ನು ಸಹಜವಾಗಿ ಬೆಳೆಸಲು ಇದು ನಮಗೆ ಅವಕಾಶ ಮಾಡಿಕೊಟ್ಟಿತು. ಎಲ್ಲವೂ ಒಂದೇ ದಿನದಲ್ಲಿ ನಡೆಯುವುದರಿಂದ, ನಾವು ಕಂಟಿನ್ಯೂಟಿ  ಎಂಬ ಚೌಕಟ್ಟಿಗೆ ಕಟ್ಟುಬೀಳಲಿಲ್ಲ. ಬದಲಿಗೆ, ನಾವು ಭಾವನೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು," ಎಂದು ಅವರು ಹೇಳಿದರು.

ಚಿತ್ರೀಕರಣದ ಸಮಯದಲ್ಲಿ ಎದುರಾದ ಭಾವನಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ, ನಿರ್ದೇಶಕರು ಮುಕ್ತವಾಗಿ ಮಾತನಾಡಿದರು. ವಿಶೇಷವಾಗಿ ಬೀಚ್ ದೃಶ್ಯಗಳ ಚಿತ್ರೀಕರಣದ ವೇಳೆ, ವಿಪರೀತ ಬಿಸಿಲು ಮತ್ತು ಶಬ್ದದ ಸಮಸ್ಯೆಗಳಿಂದಾಗಿ 16mm ಫಿಲ್ಮ್ ಬಳಸುವಲ್ಲಿ ಸಾಕಷ್ಟು ತೊಂದರೆಯಾಗಿತ್ತು ಎಂದರು. ಇನ್ನು ಅಂತ್ಯಕ್ರಿಯೆಯ ದೃಶ್ಯವೊಂದರ ಚಿತ್ರೀಕರಣವು ಅವರನ್ನು ಭಾವನಾತ್ಮಕವಾಗಿ ಹೈರಾಣಾಗಿಸಿತ್ತಂತೆ. 'ನಾನು ಎರಡು ದಿನಗಳ ಕಾಲ ಹಾಸಿಗೆಯಿಂದ ಏಳಲಾಗದೆ ಅತ್ತಿದ್ದೆ,' ಎಂದು ಒಪ್ಪಿಕೊಂಡ ಅವರು, ಇಂತಹ ಕ್ಷಣಗಳೇ 'ಶಕ್ತಿಶಾಲಿ ಸಿನಿಮಾ ನಿರ್ಮಾಣದ ಸಾಕ್ಷಿಗಳು' ಎಂದು ಬಣ್ಣಿಸಿದರು.

ತಮ್ಮ ಮಾತಿನುದ್ದಕ್ಕೂ ಅಕಿನೋಲಾ ಅವರು ಪ್ರೇಕ್ಷಕರಿಗೆ ನೈಜೀರಿಯಾದ ಆಳವಾದ ಒಳನೋಟವನ್ನೂ ನೀಡಿದರು. ನೈಜೀರಿಯಾದ ರಾಜಕೀಯ ಸನ್ನಿವೇಶ, ಅಲ್ಲಿನ ಭಾಷಾ ವೈವಿಧ್ಯತೆ ಮತ್ತು ಇತಿಹಾಸದ ಶಿಕ್ಷಣದಲ್ಲಿರುವ ಕೊರತೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅವರ ಚಿತ್ರದಲ್ಲಿ ಇಂಗ್ಲಿಷ್, ಕ್ರಿಯೋಲ್ ಮತ್ತು ಅಲ್ಲಿನ ಸ್ಥಳೀಯ ಆಡುಭಾಷೆಗಳಿಗೆ  ಜಾಗ ನೀಡಲಾಗಿದೆ. ಅಕಿನೋಲಾ ಅವರ ಪ್ರಕಾರ, ಈ ಭಾಷಾ ಹರಿವು ನೈಜೀರಿಯಾವನ್ನು ವ್ಯಾಖ್ಯಾನಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮ್ಮಿಲನವನ್ನು ಪ್ರತಿಬಿಂಬಿಸುತ್ತದೆ. ಸಮಕಾಲೀನ ಸಿನಿಮಾ ಇತಿಹಾಸದಲ್ಲಿ ಇಂದಿಗೂ ಅಷ್ಟಾಗಿ ಪ್ರಾತಿನಿಧ್ಯ ಕಾಣದ ದೇಶವೊಂದರ ಸ್ಪಷ್ಟ ಚಿತ್ರಣವನ್ನು ಅವರ ಮಾತುಗಳು ಕಟ್ಟಿಕೊಟ್ಟವು.

'ಮದರ್ಸ್ ಬೇಬಿ'ಯಲ್ಲಿನ ಮಾತೃತ್ವದ ಅವ್ಯಕ್ತ ಮತ್ತು ತಲ್ಲಣಗೊಳಿಸುವ ಆಯಾಮಗಳು

'ಮದರ್ಸ್ ಬೇಬಿ' ಚಿತ್ರತಂಡದ ಪ್ರಕಾರ, ಹೆರಿಗೆಯ ನಂತರದ ಗೊಂದಲಮಯ ಸನ್ನಿವೇಶಗಳನ್ನು ನಿಭಾಯಿಸುವ ಮಹಿಳೆಯೊಬ್ಬಳ ಪಯಣವೇ ಈ ಚಿತ್ರದ ಭಾವನಾತ್ಮಕ ಶಕ್ತಿಯಾಗಿದೆ. 'ಹೆರಿಗೆಯ ಸಮಯದಲ್ಲಿ ಮಹಿಳೆಯೊಬ್ಬಳು ಅನುಭವಿಸುವ ನೈಜ ಬದಲಾವಣೆಗಳನ್ನು ಚಿತ್ರಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿತ್ತು,' ಎಂದು ಚಿತ್ರದ ಛಾಯಾಗ್ರಾಹಕ ರಾಬರ್ಟ್ ಒಬೆರೈನರ್ ಹೇಳಿದರು.

ಪ್ರಾಯೋಗಿಕ ಫಲವತ್ತತೆ ಚಿಕಿತ್ಸೆಯ (experimental fertility procedure) ಮೂಲಕ ಮಗುವನ್ನು ಪಡೆದ ಪ್ರಸಿದ್ಧ ಆರ್ಕೆಸ್ಟ್ರಾ ಕಂಡಕ್ಟರ್ ಜೂಲಿಯಾಳ ಕಥೆಯನ್ನು ಈ ಚಿತ್ರ ಹೇಳುತ್ತದೆ. ವಿಚಿತ್ರವೆಂದರೆ, ತಾನು ಹಡೆದ ಮಗುವೇ ತನಗೆ ಯಾಕೋ ಅಪರಿಚಿತ ಎಂಬ ಭಾವನೆ ಅವಳನ್ನು ಕಾಡುತ್ತಿರುತ್ತದೆ. ಪ್ರೇಕ್ಷಕರು ಜೂಲಿಯಾಳ ಜೊತೆಯಲ್ಲೇ ಅವಳ ಆ 'ತಲ್ಲಣಗೊಳಿಸುವ ಮಾನಸಿಕ ಜಗತ್ತಿನಲ್ಲಿ' ಹೆಜ್ಜೆ ಹಾಕುವಂತೆ ಮಾಡುವುದೇ ನಮ್ಮ ಚಿತ್ರೀಕರಣದ ಉದ್ದೇಶವಾಗಿತ್ತು ಎಂದು ರಾಬರ್ಟ್ ವಿವರಿಸಿದರು.

ಕಥೆಯ ತಿರುಳಿನ ಮಹತ್ವವನ್ನು ಒತ್ತಿ ಹೇಳಿದ ಪ್ರೊಡಕ್ಷನ್ ಡಿಸೈನರ್ ಜೋಹಾನ್ಸ್ ಸಲಾತ್, 'ಇದು ಮಹಿಳೆಯರಿಗೆ ಅತ್ಯಂತ ಆಳವಾದ ಮತ್ತು ಮುಖ್ಯವಾದ ವಿಷಯ' ಎಂದರು. ಇದೊಂದು ಸಾರ್ವತ್ರಿಕ ಕಥೆಯಾಗಿದ್ದು, 'ವಿಶ್ವದ ಯಾವುದೇ ಮೂಲೆಯಲ್ಲಾದರೂ ಇದು ನಡೆಯಬಹುದು' ಎಂದು ಅವರು ಅಭಿಪ್ರಾಯಪಟ್ಟರು. ಸಿನಿಮಾದ ವಾತಾವರಣವನ್ನು ಸೃಷ್ಟಿಸುವುದು ತಮಗೆ ಸವಾಲಿನದ್ದಾದರೂ, ಅದು ಅಂತಃಪ್ರಜ್ಞೆಯಿಂದ ಕೂಡಿತ್ತು ಮತ್ತು ಅಂತಿಮವಾಗಿ ತಾವು ಆರಿಸಿದ ಲೊಕೇಶನ್  ಕಥೆಗೆ ಹೇಳಿ ಮಾಡಿಸಿದಂತಿತ್ತು ಎಂದು ಅವರು ಹೇಳಿದರು.

ಚಿತ್ರದಲ್ಲಿನ ಉದ್ವಿಗ್ನತೆ ನಿಧಾನವಾಗಿ ಮತ್ತು ಸದ್ದಿಲ್ಲದೆ ಬೆಳೆಯುತ್ತದೆ. ಮಗುವಿನ ಬಗ್ಗೆ ಬೇರೆಯವರು ತೋರುವ ಪ್ರತಿಕ್ರಿಯೆಗೂ, ತಾಯಿ ತೋರುವ ಪ್ರತಿಕ್ರಿಯೆಗೂ ಇರುವ ಸೂಕ್ಷ್ಮ ವ್ಯತ್ಯಾಸಗಳೇ ಇದಕ್ಕೆ ಕಾರಣ. 'ಅಲ್ಲಿಂದಲೇ ಸಸ್ಪೆನ್ಸ್  ಶುರುವಾಗುತ್ತದೆ' ಎಂದು ರಾಬರ್ಟ್ ಹೇಳಿದರು. ಇದೇ ವೇಳೆ ಚಿತ್ರದ ಮುಕ್ತ ಅಂತ್ಯದ ಬಗ್ಗೆಯೂ ಮಾತನಾಡಿದ ಅವರು, 'ಅದೊಂದು ಒಗಟಿನಂತಿದ್ದು, ಪ್ರೇಕ್ಷಕರೇ ಅದನ್ನು ಜೋಡಿಸಿಕೊಳ್ಳಬೇಕು' ಎಂದು ಹೇಳಿದರು.

ಪಥ ಬದಲಿಸುವ ಕಲೆ: ಸಿನಿಮಾ ನಿರ್ಮಾಣವೆಂಬ ಮರುಶೋಧ

ಸಿನಿಮಾ ನಿರ್ಮಾಣ ಎಂಬುದು ನಿರಂತರವಾಗಿ ವಿಕಸನಗೊಳ್ಳುವ ಪ್ರಕ್ರಿಯೆ ಎಂದು ಎರಡೂ ತಂಡಗಳು ಅಭಿಪ್ರಾಯಪಟ್ಟವು. 'ಮದರ್ಸ್ ಬೇಬಿ' ಚಿತ್ರೀಕರಣದ ಸಮಯದಲ್ಲಿ, ಸಿನಿಮಾದ ನಂತರದ ಭಾಗದಲ್ಲಿ ಬರಬೇಕಿದ್ದ ದೃಶ್ಯಗಳನ್ನು ಕೆಲವೊಮ್ಮೆ ಆರಂಭದಲ್ಲೇ ಬಳಸಿಕೊಳ್ಳಲಾಯಿತು ಎಂದು ರಾಬರ್ಟ್ ವಿವರಿಸಿದರು. ಒಬ್ಬ ಛಾಯಾಗ್ರಾಹಕನಾಗಿ, ಆರಂಭದಲ್ಲಿ ತಾನು ಇಂತಹ ನಿರ್ಧಾರಗಳನ್ನು ವಿರೋಧಿಸಿದ್ದೆ ಎಂದು ಅವರು ಹೇಳಿದರು. ಆದರೆ, 'ಸಿನಿಮಾದಲ್ಲಿ ದೃಶ್ಯಗಳ ಕಂಟಿನ್ಯೂಟಿಗಳಿಗಿಂತ ಭಾವನೆಗಳೇ  ಮುಖ್ಯ' ಎಂದು ನಿರ್ದೇಶಕರು ನೆನಪಿಸಿದಾಗ ತಾವು ಅದನ್ನು ಒಪ್ಪಿಕೊಂಡಿದ್ದಾಗಿ ಅವರು ತಿಳಿಸಿದರು.

ಜೋಹಾನ್ಸ್ ಅವರು ಈ ಮಾತನ್ನು ಅನುಮೋದಿಸುತ್ತಾ, ಸಿನಿಮಾ ನಿರ್ಮಾಣವು ನಮ್ಮನ್ನು ಅನೇಕ ಬಾರಿ ಅನಿರೀಕ್ಷಿತ ಗುರಿಗಳಿಗೆ ಕರೆದೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು. 'ಕೆಲವೊಮ್ಮೆ ನೀವು ಹೋಗಬೇಕೆಂದುಕೊಂಡಿದ್ದ ಜಾಗಕ್ಕಿಂತಲೂ ಉತ್ತಮವಾದ ಜಾಗವನ್ನು ತಲುಪುತ್ತೀರಿ,' ಎಂದು ಅವರು ಹೇಳಿದರು. ಅಕಿನೋಲಾ ಕೂಡ ಇದೇ ಅಭಿಪ್ರಾಯಕ್ಕೆ ದನಿಗೂಡಿಸಿದರು: 'ಒಂದು ಸಿನಿಮಾವನ್ನು ನೀವು ಮೂರು ಬಾರಿ ನಿರ್ಮಿಸುತ್ತೀರಿ— ಒಮ್ಮೆ ಕಥೆ ಬರೆಯುವಾಗ, ಮತ್ತೊಮ್ಮೆ ಚಿತ್ರೀಕರಣದ ವೇಳೆ ಮತ್ತು ಕೊನೆಯದಾಗಿ ಸಂಕಲನದ ಸಮಯದಲ್ಲಿ.' ಅವರ ಪ್ರಕಾರ, 'ಯೋಜನೆಯಲ್ಲಿನ ಬದಲಾವಣೆಗಳು ದಾರಿ ತಪ್ಪುವುದಲ್ಲ, ಬದಲಿಗೆ ಅವು ಹೊಸ ಅನ್ವೇಷಣೆಗಳು.'

ಸಂವಾದ ಮುಕ್ತಾಯಗೊಳ್ಳುವ ಹೊತ್ತಿಗೆ, ಅಲ್ಲಿ ಜೀವಂತಿಕೆ ತುಂಬಿದ ಅನುಭವಗಳ ವಿನಿಮಯ ಎದ್ದು ಕಾಣುತ್ತಿತ್ತು. ವಿಭಿನ್ನ ಹಿನ್ನೆಲೆಗಳಿಂದ ಬಂದ ಈ ಎರಡೂ ಚಿತ್ರಗಳು, ನೈಸರ್ಗಿಕ ಅಂತಃಪ್ರಜ್ಞೆ, ಕಲಾತ್ಮಕ ಸತ್ಯ ಮತ್ತು ಕಥೆ ಹೇಳುವ ಆ ಅನೂಹ್ಯ ಪಯಣದ  ಮೇಲಿನ ಸಾಮಾನ್ಯ ನಂಬಿಕೆಯ ಮೂಲಕ ಒಂದಾಗಿ ಬೆಸೆದುಕೊಂಡಿದ್ದವು.

ಪತ್ರಿಕಾಗೋಷ್ಠಿ ಲಿಂಕ್: 

ಐಎಫ್‌ಎಫ್‌ಐ ಬಗ್ಗೆ

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ಇಎಸ್‌ಜಿ) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುತ್ತವೆ; ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ ಗಳು, ಗೌರವಾರ್ಪಣೆಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಆಕರ್ಷಣೆಯಾಗಿದೆ. ಗೋವಾದ ಮನಮೋಹಕ ಕಡಲ ತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು ವಿವಿಧ ಭಾಷೆಗಳು, ಪ್ರಕಾರಗಳು, ಆವಿಷ್ಕಾರಗಳು ಮತ್ತು ಹೊಸ ದನಿಗಳ ಅದ್ಭುತ ಲೋಕವನ್ನೇ ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲತೆಯ ವೈಭವವನ್ನು ಸಾರುವ ಒಂದು ಮಹಾನ್ ಸಂಭ್ರಮವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji


*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2194376   |   Visitor Counter: 4