ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ-20 ಶೃಂಗಸಭೆ ವೇಳೆ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ: ಅಧಿವೇಶನ -3

Posted On: 23 NOV 2025 3:58PM by PIB Bengaluru

ಗೌರವಾನ್ವಿತರೇ,

ತಂತ್ರಜ್ಞಾನ ಮುಂದುವರಿದಂತೆ, ಅವಕಾಶಗಳು ಮತ್ತು ಸಂಪನ್ಮೂಲಗಳು ಎರಡೂ ಕೆಲವೇ ಜನರ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿವೆ. ವಿಶ್ವದಾದ್ಯಂತ ನಿರ್ಣಾಯಕ ತಂತ್ರಜ್ಞಾನಗಳ ಮೇಲಿನ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಇದು ಮನುಕುಲಕ್ಕೆ ಕಳವಳಕಾರಿ ವಿಷಯವಾಗಿದೆ ಮತ್ತು ಇದು ನಾವೀನ್ಯತೆಗೆ ದೊಡ್ಡ ಅಡ್ಡಿಯಾಗಿದೆ. ಇದನ್ನು ಪರಿಹರಿಸಲು ನಾವು ನಮ್ಮ ಕಾರ್ಯ ವಿಧಾನದಲ್ಲಿ ಮೂಲಭೂತ ಬದಲಾವಣೆಯನ್ನು ತಂದುಕೊಳ್ಳಬೇಕಾಗಿದೆ.

’ಹಣಕಾಸು ಕೇಂದ್ರಿತ’ ಬದಲು 'ಮಾನವ ಕೇಂದ್ರಿತ', ಕೇವಲ 'ರಾಷ್ಟ್ರೀಯ' ಬದಲು 'ಜಾಗತಿಕ' ಮತ್ತು 'ವಿಶೇಷ' ಬದಲು ‘ಓಪನ್ ಸೋರ್ಸ್' ಮಾದರಿಗಳನ್ನು ಅನುಸರಿಸುವ ತಂತ್ರಜ್ಞಾನ ಅಪ್ಲಿಕೇಷನ್ ಗಳನ್ನು ನಾವು ಉತ್ತೇಜಿಸಬೇಕು. ಭಾರತವು ತನ್ನ ಎಲ್ಲಾ ತಂತ್ರಜ್ಞಾನ ಯೋಜನೆಗಳಲ್ಲಿ ಈ ದೂರದೃಷ್ಟಿಯನ್ನು ಸಂಯೋಜಿಸಲು ಪ್ರಯತ್ನಿಸುತ್ತಿದೆ.

ಇದೇ ಕಾರಣಕ್ಕಾಗಿಯೇ, ಭಾರತವು ಇಂದು ವಿಶ್ವದಲ್ಲೇ ಅತಿ ಹೆಚ್ಚು ಡಿಜಿಟಲ್ ಪಾವತಿಗಳನ್ನು ದಾಖಲಿಸಿದೆ. ಬಾಹ್ಯಾಕಾಶ ತಂತ್ರಜ್ಞಾನದಿಂದ ಕೃತಕ ಬುದ್ಧಿಮತ್ತೆಯವರೆಗೆ, ಪ್ರತಿಯೊಂದು ವಲಯದಲ್ಲೂ ನಾವು ಸಕಾರಾತ್ಮಕತೆ ಮತ್ತು ವಿಶಾಲ ಆಧಾರಿತ ಭಾಗವಹಿಸುವಿಕೆಯನ್ನು ಕಾಣುತ್ತಿದ್ದೇವೆ.

ಸ್ನೇಹಿತರೇ,

ಭಾರತದ ಕೃತಕ ಬುದ್ಧಿಮತ್ತೆ ಕಾರ್ಯವಿಧಾನವು ಮೂರು ಸ್ತಂಭಗಳನ್ನು ಆಧರಿಸಿದೆ, ಅವುಗಳೆಂದರೆ- ಸಮಾನ ಲಭ್ಯತೆ, ಜನಸಂಖ್ಯಾ, ಕೌಶಲ್ಯದ ಪ್ರಮಾಣ ಮತ್ತು ಜವಾಬ್ದಾರಿಯುತ ನಿಯೋಜನೆ. ಭಾರತ-ಎಐ ಮಿಷನ್ ಅಡಿಯಲ್ಲಿ, ನಾವು ಸುಲಭವಾಗಿ ಪಡೆಯಬಹುದಾದ ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಇದರಿಂದ ಎಐನ ಪ್ರಯೋಜನಗಳು ಪ್ರತಿ ಜಿಲ್ಲೆ ಮತ್ತು ಪ್ರತಿಯೊಂದು ಭಾಷೆಯನ್ನು ತಲುಪುತ್ತವೆ. ಇದು ಮಾನವ ಅಭಿವೃದ್ಧಿಯತ್ತ ನಮ್ಮ ಪ್ರಯತ್ನಗಳಿಗೆ ಪ್ರಮಾಣ ಮತ್ತು ವೇಗವನ್ನು ಒದಗಿಸುತ್ತದೆ.

ಇದೇ ವೇಳೆ, ಎ.ಐ. ಅನ್ನು ಜಾಗತಿಕ ಒಳಿತಿಗಾಗಿ ಬಳಸಲಾಗುತ್ತಿದೆ ಮತ್ತು ಅದರ ದುರುಪಯೋಗವನ್ನು ತಡೆಯಲಾಗಿದೆ ಎಂದು ನಾವೆಲ್ಲರೂ ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ, ನಮಗೆ ಕೆಲವು ಮೂಲಭೂತ ತತ್ವಗಳ ಮೇಲೆ ನಿರ್ಮಿಸಲಾದ ಕೃತಕ ಬುದ್ಧಿಮತ್ತೆಯ ಕುರಿತು ಜಾಗತಿಕ ಒಪ್ಪಂದದ ಅಗತ್ಯವಿದೆ. ಅವುಗಳಲ್ಲಿ ಪರಿಣಾಮಕಾರಿ ಮಾನವ ಮೇಲ್ವಿಚಾರಣೆ, ವಿನ್ಯಾಸದಲ್ಲಿ ಸುರಕ್ಷತೆ, ಪಾರದರ್ಶಕತೆ ಮತ್ತು ಡೀಪ್‌ಫೇಕ್‌ಗಳು, ಅಪರಾಧ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಎಐ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿಷೇಧಗಳು ಸೇರಿವೆ.

ಮಾನವ ಜೀವನ, ಭದ್ರತೆ ಅಥವಾ ಸಾರ್ವಜನಿಕ ನಂಬಿಕೆಯ ಮೇಲೆ ಪರಿಣಾಮ ಬೀರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಜವಾಬ್ದಾರಿಯುತ ಮತ್ತು ಲೆಕ್ಕಪರಿಶೋಧನೆಗೆ ಒಳಪಡಬೇಕು. ಮತ್ತು ಮುಖ್ಯವಾಗಿ, ಕೃತಕ ಬುದ್ಧಿಮತ್ತೆ ಮಾನವ ಸಾಮರ್ಥ್ಯಗಳನ್ನು ಹೆಚ್ಚಿಸಬಹುದಾದರೂ, ನಿರ್ಧಾರ ತೆಗೆದುಕೊಳ್ಳುವ ಅಂತಿಮ ಜವಾಬ್ದಾರಿ ಸದಾ  ಮಾನವರೊಂದಿಗೆ ಇರಬೇಕು.

2026ರ ಫೆಬ್ರವರಿಯಲ್ಲಿ ಭಾರತವು ಸರ್ವಜನ ಹಿತಾಯ, ಸರ್ವಜನ ಸುಖಾಯ - ಎಲ್ಲರಿಗೂ ಕಲ್ಯಾಣ, ಸರ್ವರಿಗೂ ಸಂತೋಷ ಎಂಬ ಧೇಯದೊಂದಿಗೆ ಕೃತಕ ಬುದ್ಧಿಮತ್ತೆಯ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಲಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸಲು ನಾವು ಎಲ್ಲಾ ಜಿ-20 ರಾಷ್ಟ್ರಗಳಿಗೆ ಆಹ್ವಾನವನ್ನು ನೀಡುತ್ತೇವೆ.

ಸ್ನೇಹಿತರೇ,

ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ನಾವು ನಮ್ಮ ಕಾರ್ಯವಿಧಾನವನ್ನು 'ಇಂದಿನ ಕೆಲಸಗಳು' ನಿಂದ 'ನಾಳಿನ ಸಾಮರ್ಥ್ಯಗಳು' ಗೆ ತ್ವರಿತವಾಗಿ ಬದಲಾಯಿಸಬೇಕು. ಕ್ಷಿಪ್ರ ನಾವೀನ್ಯತೆಗೆ ಪ್ರತಿಭೆಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದು ಅತ್ಯಗತ್ಯ. ನವದೆಹಲಿಯ ಜಿ-20 ಶೃಂಗಸಭೆಯಲ್ಲಿ ನಾವು ಈ ವಿಷಯದ ಬಗ್ಗೆ ಪ್ರಗತಿ ಸಾಧಿಸಿದ್ದೇವೆ. ಮುಂಬರುವ ವರ್ಷಗಳಲ್ಲಿ ಜಿ-20 ಪ್ರತಿಭೆಗಳ ಸಂಚಾರಕ್ಕೆ ಜಾಗತಿಕ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತದೆ ಎಂದು ನಾವು ಭಾವಿಸುತ್ತೇವೆ.

ಸ್ನೇಹಿತರೇ,

ಕೋವಿಡ್ ಯುಗವು ಜಾಗತಿಕ ಪೂರೈಕೆ ಸರಣಿಗಳ ದುರ್ಬಲತೆಗಳನ್ನು ಬಹಿರಂಗಪಡಿಸಿತು. ಆ ಸವಾಲಿನ ಸಮಯದಲ್ಲಿಯೂ ಸಹ ಭಾರತವು 150 ಕ್ಕೂ ಅಧಿಕ ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ಒದಗಿಸಿತು. ರಾಷ್ಟ್ರಗಳನ್ನು ಕೇವಲ ಮಾರುಕಟ್ಟೆಗಳಾಗಿ ನೋಡಲಾಗುವುದಿಲ್ಲ; ನಾವು ಸೂಕ್ಷ್ಮ ಮತ್ತು ದೀರ್ಘಕಾಲೀನ ವಿಧಾನವನ್ನು ಅಳವಡಿಸಿಕೊಳ್ಳಬೇಕು.

ಭಾರತದ ಸಂದೇಶ ಅತ್ಯಂತ ಸ್ಪಷ್ಟವಾಗಿದೆ:

· ಅಭಿವೃದ್ಧಿ ಸುಸ್ಥಿರವಾಗಿರಬೇಕು,
· ವ್ಯಾಪಾರವು ವಿಶ್ವಾಸದಿಂದ ಕೂಡಿರಬೇಕು,
· ಹಣಕಾಸು ನ್ಯಾಯಯುತವಾಗಿರಬೇಕು,
· ಮತ್ತು ಪ್ರಗತಿ ಎಲ್ಲಾ ಸಮೃದ್ಧಿಯನ್ನು ಒಳಗೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು

ಆಗ ಮಾತ್ರ ನಾವು ಎಲ್ಲರಿಗೂ ನ್ಯಾಯಯುತ ಭವಿಷ್ಯವನ್ನು ನಿರ್ಮಿಸಬಹುದು.

ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾತನಾಡಿದರು.

 

****


(Release ID: 2193210) Visitor Counter : 9