iffi banner

"ಪ್ರತಿಯೊಬ್ಬ ಫಿಲ್ಮ್‌ ಮೇಕರ್‌ ಗಳೂ 'ದೋಣಿಯಲ್ಲಿ ಚಿತ್ರೀಕರಣ ಮಾಡಬೇಡಿ' ಎನ್ನುತ್ತಾರೆ - ಆದರೆ ನಾನು ಕೇಳಲಿಲ್ಲ": 'ಪೆಸ್ಕಡಾರ್' ನಿರ್ದೇಶಕ ಹೆರಾಲ್ಡ್ ರೋಸ್ಸಿ


ಸಾಗರದ ಕನಸುಗಳಿಂದ ಹಿಡಿದು ಹಡಗಿನ ಮೇಲಿನ ಸವಾಲುಗಳವರೆಗೆ; ಐಎಫ್‌ಎಫ್‌ಐ ವೇದಿಕೆಯಲ್ಲಿ ಅಪ್ಪಟ ನೈಜತೆಯನ್ನು ಅನಾವರಣಗೊಳಿಸಿದ 'ಪೆಸ್ಕಡಾರ್'

ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಹರಾಲ್ಡ್ ಡೊಮೆನಿಕೊ ರೊಸ್ಸಿ ಅವರು ತಮ್ಮ 'ಪೆಸ್ಕಾಡರ್' (Pescador) ಚಿತ್ರದ ಹಿಂದಿನ ರೋಚಕ ಹಿನ್ನೆಲೆಯನ್ನು ಬಿಚ್ಚಿಟ್ಟರು. ತಾವು ಕೋಮಾದಲ್ಲಿದ್ದಾಗ ಆದ ವಿಶಿಷ್ಟ ಅನುಭವಗಳೇ ಈ ಯೋಜನೆಗೆ ಬುನಾದಿಯಾಗಿವೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಆ ಕಷ್ಟದ ಸಮಯದಲ್ಲಿ, ನನಗೆ ಪದೇ ಪದೇ ಸಾಗರಗಳು ಕಾಣಿಸುತ್ತಿದ್ದವು. ಆ ಸಂದರ್ಭದಲ್ಲಿನ ಒಂಟಿತನ ಅಥವಾ ಏಕಾಂತದ ಭಾವನೆ ಅತೀವವಾಗಿತ್ತು," ಎಂದು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಬಾರ್ಬರಾ ಅನ್ನಿ ರಾಸಿಯಲ್ ಮತ್ತು ಛಾಯಾಗ್ರಾಹಕ ಹಾಗೂ ನಿರ್ಮಾಪಕ ಐಸಾಕ್ ಜೋಸೆಫ್ ಬ್ಯಾಂಕ್ಸ್ ಅವರೊಂದಿಗೆ ಉಪಸ್ಥಿತರಿದ್ದರು.

ನಾನು ಅನುಭವಿಸಿದ ಭಾವನಾತ್ಮಕ ಅಂತರ ಮತ್ತು ಸಂಪರ್ಕಕ್ಕಾಗಿ ಹಂಬಲಿಸುವ ತುಡಿತವನ್ನು ತೆರೆಯ ಮೇಲೆ ತರಲು 'ಪೆಸ್ಕಾಡರ್'  ನನಗೆ ಒಂದು ಮಾಧ್ಯಮವಾಯಿತು," ಎಂದು ನಿರ್ದೇಶಕ ರೊಸ್ಸಿ ವಿವರಿಸಿದರು. ಸಮುದ್ರದ ಮೇಲಿನ ಚಿತ್ರೀಕರಣದ ಸವಾಲುಗಳನ್ನು ಹಾಸ್ಯಮಯವಾಗಿ ಮೆಲುಕು ಹಾಕಿದ ಅವರು, "ಚಲನಚಿತ್ರ ಇತಿಹಾಸದಲ್ಲಿ ಪ್ರತಿಯೊಬ್ಬರೂ ಎಚ್ಚರಿಸುವ ಒಂದು ಮಾತೆಂದರೆ, 'ದೋಣಿಯ ಮೇಲೆ ಸಿನಿಮಾ ಮಾಡಬೇಡಿ' ಎಂದು. ನಾನು ಅದನ್ನು ಕೇಳಲಿಲ್ಲ," ಎಂದು ನಗುತ್ತಾ ಹೇಳಿದರು. "ಆದರೆ ಅವರು ಹಾಗೇಕೆ ಹೇಳುತ್ತಾರೆಂಬುದು ನನಗೆ ಕೂಡಲೇ ಅರಿವಾಯಿತು. ನಡುಸಮುದ್ರದಲ್ಲಿ ನೈಜ ಮೀನುಗಾರರ ದೋಣಿಗಳ ಮೇಲೆ ಮತ್ತು ದಟ್ಟ ಕಾಡಿನಲ್ಲಿ ಚಿತ್ರೀಕರಣ ನಡೆಸುವುದು ಅತ್ಯಂತ ಕಷ್ಟಕರವಾಗಿತ್ತು. ಆದರೆ ಆ ಕಷ್ಟವು ಚಿತ್ರಕ್ಕೆ ತಂದುಕೊಟ್ಟ ನೈಜತೆ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿತು," ಎಂದರು.

ಚಿತ್ರದ ಪ್ರಮುಖ ಮೀನುಗಾರನ ಪಾತ್ರವನ್ನು ವೃತ್ತಿಪರ ನಟನಲ್ಲದ ವ್ಯಕ್ತಿಯೊಬ್ಬರು ನಿರ್ವಹಿಸಿದ್ದಾರೆ ಎಂಬ ಆಸಕ್ತಿದಾಯಕ ವಿಚಾರವನ್ನು ನಿರ್ದೇಶಕರು ಹಂಚಿಕೊಂಡರು. "ನಾವು ಒಂದು ರಿಸ್ಕ್ ತೆಗೆದುಕೊಂಡೆವು, ಅದು ಫಲ ನೀಡಿತು. ಅವರ ಸಹಜ ಅಭಿನಯವೇ ಚಿತ್ರಕ್ಕೆ ಜೀವ ತುಂಬಿದೆ," ಎಂದು ಶ್ಲಾಘಿಸಿದರು.

ನಿರ್ಮಾಪಕಿ ಬಾರ್ಬರಾ ಅನ್ನಿ ರಾಸಿಯಲ್ ಅವರು 'ಪೆಸ್ಕಾಡರ್' ಚಿತ್ರವನ್ನು "ನಿಜವಾದ ಅಂತಾರಾಷ್ಟ್ರೀಯ ಸಹಯೋಗ" ಎಂದು ಬಣ್ಣಿಸಿದರು. ಅಮೆರಿಕ ಮತ್ತು ಕೋಸ್ಟರಿಕಾದ ಕಲಾವಿದರು ಹಾಗೂ ತಂತ್ರಜ್ಞರ ಸಮಾನ ಮಿಶ್ರಣ ಇಲ್ಲಿದೆ ಎಂದು ಅವರು ಹೇಳಿದರು. "ನಾವು ಒಟ್ಟಿಗೆ ವಾಸಿಸಿದೆವು, ಕೆಲಸ ಮಾಡಿದೆವು, ಸಂಸ್ಕೃತಿಗಳನ್ನು ಹಂಚಿಕೊಂಡೆವು ಮತ್ತು ಪರಸ್ಪರರ ಭಾಷೆಗಳನ್ನು ಕಲಿತೆವು — ಇದು ನನ್ನ ಜೀವನದ ಅತ್ಯಂತ ವಿಶಿಷ್ಟ ಅನುಭವಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು.

ಚಿತ್ರದ ದೃಶ್ಯ ಭಾಷೆಯ ಕುರಿತು ಮಾತನಾಡಿದ ಛಾಯಾಗ್ರಾಹಕ ಹಾಗೂ ನಿರ್ಮಾಪಕ ಐಸಾಕ್ ಜೋಸೆಫ್ ಬ್ಯಾಂಕ್ಸ್, "ಹರಾಲ್ಡ್ ಮತ್ತು ನಾನು ಇಬ್ಬರು ಮುಖ್ಯ ಪಾತ್ರಗಳಿಗಾಗಿ ಎರಡು ವಿಭಿನ್ನ ದೃಶ್ಯ ಶೈಲಿಗಳನ್ನು ರೂಪಿಸಿದೆವು. ಆ ಪಾತ್ರಗಳ ನಡುವಿನ ದೃಶ್ಯ ವೈರುಧ್ಯವು ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಶಕ್ತಿಯುತವಾಗಿ ಕಟ್ಟಿಕೊಡಲು ನೆರವಾಯಿತು," ಎಂದು ವಿವರಿಸಿದರು.

ತನ್ನ ಅಪ್ಪಟ ಭಾವನಾತ್ಮಕ ಅಂತಃಸತ್ವ, ಅಂತಾರಾಷ್ಟ್ರೀಯ ಮನೋಭಾವ ಮತ್ತು ಸಮುದ್ರ ತೀರದ ದಿಟ್ಟ ನಿರ್ಮಾಣದೊಂದಿಗೆ, 'ಪೆಸ್ಕಡಾರ್' ಚಿತ್ರವು ಐಎಫ್‌ಎಫ್‌ಐ 2025ರ ಅತ್ಯಂತ ವೈಯಕ್ತಿಕ ಹಾಗೂ ದೃಶ್ಯ ವೈಭವದ ಕಲಾಕೃತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಚಲನಚಿತ್ರದ ಸಾರಾಂಶ

ಅಮೆರಿಕದ ಒಬ್ಬ ಯುವತಿ, ಆಕೆಯ ಸಹೋದರ ಮತ್ತು ಕೋಸ್ಟರಿಕಾ ದೇಶದ ಮೀನುಗಾರನೊಬ್ಬನ ಬದುಕುಗಳು, ಜೀವನ-ಮರಣದ ಕಡಲ ಸುಳಿಯಲ್ಲಿ ಹೇಗೆ ಸಂಧಿಸುತ್ತವೆ ಎಂಬುದೇ ಈ ಚಿತ್ರದ ತಿರುಳು. ಮೊದಲ ಭಾಗದಲ್ಲಿ, ಅಮೆರಿಕದ ಯುವ ವಿಜ್ಞಾನಿಯೊಬ್ಬಳು ಪೌರಾಣಿಕ ಮೀನೊಂದನ್ನು ಹುಡುಕುತ್ತಾ, ಕೋಸ್ಟರಿಕಾದ ಬೆರಗುಗೊಳಿಸುವ ಪ್ರಕೃತಿ ಮತ್ತು ದಟ್ಟವಾದ ಕಾಡುಗಳಲ್ಲಿ ಸಂಚರಿಸುತ್ತಾಳೆ. ಈ ಪಯಣದಲ್ಲಿ ಅವಳು ಮಾನವ ಸಂಬಂಧಗಳ ಮಿತಿಗಳನ್ನು ಪರೀಕ್ಷೆಗೆ ಒಡ್ಡುತ್ತಾಳೆ. ಒಂದು ಹತಾಶ ಕೃತ್ಯದ ನಂತರ, ಅವಳು ಬಸ್‌ ನಲ್ಲಿ ನಿದ್ರೆಗೆ ಜಾರುತ್ತಾಳೆ ಮತ್ತು ಅಲ್ಲಿಗೆ ಚಲನಚಿತ್ರವು ಮತ್ತೆ ಮೊದಲಿನಿಂದ ಪ್ರಾರಂಭವಾಗುತ್ತದೆ. ಎರಡನೇ ಭಾಗದಲ್ಲಿ, ಮಾಂತ್ರಿಕ ನಳ್ಳಿಯೊಂದು (Lobster) ಏಕಾಂಗಿ ಮೀನುಗಾರನೊಬ್ಬನ ದೊಡ್ಡ ಆಸೆಯಾದ 'ಪಿತೃತ್ವ'ವನ್ನು ಕರುಣಿಸುತ್ತದೆ. ಆ ಮೀನುಗಾರನಿಗೆ ಸಮುದ್ರದಲ್ಲಿ ದಿಕ್ಕು ತಪ್ಪಿ ತೇಲುತ್ತಿದ್ದ ಆ ವಿಜ್ಞಾನಿಯ ಸಹೋದರ ಸಿಗುತ್ತಾನೆ. ಮೀನುಗಾರನು ಅವನನ್ನು ರಕ್ಷಿಸಿ, ಆರೈಕೆ ಮಾಡಿ ಗುಣಪಡಿಸುತ್ತಾನೆ. ಆ ಸಹೋದರನು ಅಲ್ಲಿಂದ ತಪ್ಪಿಸಿಕೊಳ್ಳಲು ಹಾತೊರೆಯುತ್ತಿರುತ್ತಾನೆ, ಆದರೆ ನಿಧಾನವಾಗಿ ಸಹಾಯವನ್ನು ಸ್ವೀಕರಿಸುತ್ತಾ, ಮೀನು ಹಿಡಿಯುವುದನ್ನು ಕಲಿಯುತ್ತಾ, ಮೀನುಗಾರರ ಸಮುದಾಯದೊಂದಿಗೆ ಬೆರೆಯುತ್ತಾನೆ. ಆದರೆ ಅಷ್ಟರಲ್ಲೇ ಅವರ ಸೂಕ್ಷ್ಮ ಬಾಂಧವ್ಯವು ಅನಿರೀಕ್ಷಿತ ತಿರುವು ಪಡೆಯುತ್ತದೆ. 'ಪೆಸ್ಕಡಾರ್' ಚಿತ್ರವು ಈ ಪ್ರಶ್ನೆಗಳನ್ನು ಮುಂದಿಡುತ್ತದೆ: ಏಕಾಂತಕ್ಕಾಗಿ ನೀವು ಏನನ್ನು ತ್ಯಾಗ ಮಾಡುತ್ತೀರಿ? ಮತ್ತು ಬಾಂಧವ್ಯಕ್ಕಾಗಿ ನೀವು ಎಂತಹ ಅಪಾಯವನ್ನು ಎದುರಿಸುತ್ತೀರಿ?

ಐಎಫ್‌ಎಫ್‌ಐ ಬಗ್ಗೆ

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಮತ್ತು ಗೋವಾ ಸರ್ಕಾರದ ಎಂಟರ್‌ ಟೈನ್‌ ಮೆಂಟ್ ಸೊಸೈಟಿ ಆಫ್ ಗೋವಾ (ESG) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ.  ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುತ್ತವೆ; ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ ಕ್ಲಾಸ್‌ ಗಳು, ಗೌರವಾರ್ಪಣೆಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಮೆರುಗು. ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.

ಪತ್ರಿಕಾಗೋಷ್ಠಿಯನ್ನು ವೀಕ್ಷಿಸಲು ಲಿಂಕ್:

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:

IFFI Website: https://www.iffigoa.org/

 PIB’s IFFI Microsite: https://www.pib.gov.in/iffi/56new/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Post Link: https://x.com/PIB_Panaji/status/1991438887512850647?s=20

X Handles: @IFFIGoa, @PIB_India, @PIB_Panaji

 

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2193039   |   Visitor Counter: 3

इस विज्ञप्ति को इन भाषाओं में पढ़ें: English , Gujarati