ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೋಮವಾರ ಹರಿಯಾಣದ ಫರಿದಾಬಾದ್‌ನಲ್ಲಿ ʻಉತ್ತರ ವಲಯ ಮಂಡಳಿʼಯ 32ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಟೀಮ್ ಭಾರತ್ʼ ದೃಷ್ಟಿಕೋನವನ್ನು ನೀಡಿದ್ದು, ವಲಯ ಮಂಡಳಿಗಳು ಈ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿವೆ

ಬಲಿಷ್ಠ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ರೂಪಿಸಬಲ್ಲವು ಎಂಬ ನಂಬಿಕೆಯೊಂದಿಗೆ  ʻವಲಯ ಮಂಡಳಿʼಗಳು ಕಾರ್ಯನಿರ್ವಹಿಸುತ್ತವೆ; ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರ-ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ, ಚರ್ಚೆಗೆ ಈ ಮಂಡಳಿಗಳು ರಚನಾತ್ಮಕ ಕಾರ್ಯವಿಧಾನ ಮತ್ತು ವೇದಿಕೆಯನ್ನು ಒದಗಿಸುತ್ತವೆ

Posted On: 16 NOV 2025 11:39AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ನವೆಂಬರ್ 17 ರಂದು ಸೋಮವಾರ ಹರಿಯಾಣದ ಫರಿದಾಬಾದ್‌ನಲ್ಲಿ ನಡೆಯಲಿರುವ ʻಉತ್ತರ ವಲಯ ಮಂಡಳಿʼಯ 32ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ʻಉತ್ತರ ವಲಯ ಮಂಡಳಿʼಯು ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಚಂಡೀಗಢ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯದ ಅಡಿಯ ʻಅಂತರ ರಾಜ್ಯ ಮಂಡಳಿ ಸಚಿವಾಲಯʼವು ಆಯೋಜಿಸಿದ್ದು, ಹರಿಯಾಣ ಸರ್ಕಾರ ಇದರ ಆತಿಥ್ಯ ವಹಿಸಿದೆ.

ʻರಾಜ್ಯಗಳ ಪುನರ್‌ರಚನೆ ಕಾಯ್ದೆ-1956ʼರ ಸೆಕ್ಷನ್ 15-22ರ ಅಡಿಯಲ್ಲಿ, ʻಉತ್ತರ ವಲಯ ಮಂಡಳಿʼ ಸೇರಿದಂತೆ ಐದು ವಲಯ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ʻಉತ್ತರ ವಲಯ ಮಂಡಳಿʼಯ ಅಧ್ಯಕ್ಷರಾಗಿದ್ದಾರೆ ಮತ್ತು ಹರಿಯಾಣದ ಮುಖ್ಯಮಂತ್ರಿ ಇದರ ಉಪಾಧ್ಯಕ್ಷರಾಗಿದ್ದಾರೆ. ಒಂದು ಸದಸ್ಯ ರಾಜ್ಯದ ಮುಖ್ಯಮಂತ್ರಿಯು (ಪ್ರತಿ ವರ್ಷ ಆವರ್ತನೆ) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಸದಸ್ಯ ರಾಷ್ಟ್ರದಿಂದ, ಇಬ್ಬರು ಮಂತ್ರಿಗಳನ್ನು ಪರಿಷತ್ತಿನ ಸದಸ್ಯರನ್ನಾಗಿ ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ. ಪ್ರತಿ ವಲಯ ಮಂಡಳಿಯು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಶಾಶ್ವತ ಸಮಿತಿಯನ್ನು ಸಹ ಹೊಂದಿದೆ. ರಾಜ್ಯಗಳು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಆರಂಭದಲ್ಲಿ ಸಂಬಂಧಪಟ್ಟ ವಲಯ ಮಂಡಳಿಯ ಶಾಶ್ವತ ಸಮಿತಿಯ ಮುಂದೆ ಚರ್ಚೆಗಾಗಿ ಪ್ರಸ್ತುತಪಡಿಸಲಾಗುತ್ತದೆ. ಶಾಶ್ವತ ಸಮಿತಿಯ ಪರಿಗಣನೆಯ ನಂತರ, ಉಳಿದ ವಿಷಯಗಳನ್ನು ಹೆಚ್ಚಿನ ಚರ್ಚೆಗಾಗಿ ವಲಯ ಮಂಡಳಿ ಸಭೆಗೆ ಶಿಫಾರಸು ಮಾಡಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಟೀಮ್ ಭಾರತ್ʼ ದೃಷ್ಟಿಕೋನವನ್ನು ನೀಡಿದ್ದಾರೆ ಮತ್ತು ವಲಯ ಮಂಡಳಿಗಳು ಈ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿವೆ. ಬಲಿಷ್ಠ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ರೂಪಿಸುತ್ತವೆ ಎಂಬ ನಂಬಿಕೆಯೊಂದಿಗೆ, ವಲಯ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಎರಡು ಅಥವಾ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ರಚನಾತ್ಮಕ ಕಾರ್ಯವಿಧಾನವನ್ನು ಈ ಮಂಡಳಿಗಳು ಒದಗಿಸುತ್ತವೆ.  ಆ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.

ʻವಲಯ ಮಂಡಳಿʼಗಳು ಸಲಹೆ ಸೂಚನೆ ನೀಡುವ ಪಾತ್ರವನ್ನು ವಹಿಸುತ್ತವೆ. ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ, ಈ ಮಂಡಳಿಗಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳಿವಳಿಕೆ ಮತ್ತು ಸಹಕಾರದ ಆರೋಗ್ಯಕರ ಬಂಧಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಸಾಬೀತಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ, ಕಳೆದ ಹನ್ನೊಂದು ವರ್ಷಗಳಲ್ಲಿ ವಿವಿಧ ವಲಯ ಮಂಡಳಿಗಳು ಮತ್ತು ಅವುಗಳ ಶಾಶ್ವತ ಸಮಿತಿಗಳ ಒಟ್ಟು 63 ಸಭೆಗಳನ್ನು ನಡೆಸಲಾಗಿದೆ.

ಕೇಂದ್ರ ಸರ್ಕಾರ ಮತ್ತು ಸದಸ್ಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ; ಸದಸ್ಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಮತ್ತು ವಲಯದ ವ್ಯಾಪ್ತಿಯ ಒಳಗಿನ ಸಮಸ್ಯೆಗಳು ಮತ್ತು ವಿವಾದಗಳನ್ನು ಪರಿಹರಿಸಲು ಹಾಗೂ ಪ್ರಗತಿ ಸಾಧಿಸಲು ವಲಯ ಮಂಡಳಿಗಳು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತವೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಪ್ರಕರಣಗಳ ತ್ವರಿತ ತನಿಖೆ ಮತ್ತು ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ʻತ್ವರಿತಗತಿ ವಿಶೇಷ ನ್ಯಾಯಾಲಯಗಳ (ಫಾಸ್ಟ್‌ ಟ್ರ್ಯಾಕ್‌ ಸ್ಪೆಷೆಲ್‌ ಕೋರ್ಟ್‌-ಎಫಟಿಎಸ್‌ಸಿ) ಸ್ಥಾಪನೆ; ಪ್ರತಿ ಹಳ್ಳಿಯ ಗೊತ್ತುಪಡಿಸಿದ ಪ್ರದೇಶದೊಳಗೆ ಶಾಶ್ವತ ಬ್ಯಾಂಕಿಂಗ್ ಶಾಖೆ ಸೌಲಭ್ಯಗಳನ್ನು ಒದಗಿಸುವುದು; ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ಇಆರ್‌ಎಸ್ಎಸ್-112) ಅನುಷ್ಠಾನ; ಜೊತೆಗೆ ಪೌಷ್ಠಿಕಾಂಶ, ಶಿಕ್ಷಣ, ಆರೋಗ್ಯ, ವಿದ್ಯುತ್, ನಗರ ಯೋಜನೆ ಮತ್ತು ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವಂತಹ ವಿವಿಧ ಪ್ರಾದೇಶಿಕ ಮಟ್ಟದ ಸಾಮಾನ್ಯ ಹಿತಾಸಕ್ತಿ ಸಮಸ್ಯೆಗಳು ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ವಿಸ್ತೃತ ವಿಷಯಗಳ ಬಗ್ಗೆ ಈ ವಲಯ ಮಂಡಳಿಗಳು ಚರ್ಚಿಸುತ್ತವೆ.


*****


(Release ID: 2190489) Visitor Counter : 7