ಐ.ಎಫ್.ಎಫ್.ಐ 2025: ಉತ್ಸವದ ಜಾಗತಿಕ ಮಟ್ಟದ ವ್ಯಾಪ್ತಿ ಮತ್ತು ಸಾಂಸ್ಕೃತಿಕ ಮಹತ್ವವನ್ನು ವಿವರಿಸಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್
56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಇನ್ನು ಕೇವಲ ಐದು ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ, ಈ ಪ್ರತಿಷ್ಠಿತ ಉತ್ಸವದ ಕುರಿತಾದ ಪತ್ರಿಕಾಗೋಷ್ಠಿಯನ್ನು ಇಂದು ಪಣಜಿಯಲ್ಲಿ ಆಯೋಜಿಸಲಾಗಿತ್ತು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಕೇಂದ್ರ ಮಾಹಿತಿ, ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, "ಚಲನಚಿತ್ರೋತ್ಸವದ ಅಂಗವಾಗಿ ಪಣಜಿಯ ಐನಾಕ್ಸ್, ಪೋರ್ವೊರಿಮ್‌ನ ಐನಾಕ್ಸ್, ಪಣಜಿಯ ಮಕ್ವಿನೆಝ್ ಪ್ಯಾಲೇಸ್, ಮಡಗಾಂವ್ ನ ರವೀಂದ್ರ ಭವನ, ಪೋಂಡಾದ ಮ್ಯಾಜಿಕ್ ಮೂವೀಸ್, ಹಾಗೂ ಪಣಜಿಯ ಅಶೋಕ ಮತ್ತು ಸಾಮ್ರಾಟ್ ಸ್ಕ್ರೀನ್ ಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು" ಎಂದು ಹೇಳಿದರು. "ಈ ವರ್ಷ, ಉತ್ಸವದ ಉದ್ಘಾಟನೆಯ ಅಂಗವಾಗಿ ಭವ್ಯವಾದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯು ನವೆಂಬರ್ 20 ರಂದು ಮಧ್ಯಾಹ್ನ 03:30 ಕ್ಕೆ ಗೋವಾ ಎಂಟರ್ ಟೈನ್ ಮೆಂಟ್ ಸೊಸೈಟಿ ಕಚೇರಿಯಿಂದ ಕಲಾ ಅಕಾಡೆಮಿಯವರೆಗೆ ನಡೆಯಲಿದೆ. ಪ್ರತಿನಿಧಿಗಳ ಅನುಕೂಲಕ್ಕಾಗಿ, ನಾವು ಎಲ್ಲಾ ಸ್ಥಳಗಳಿಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದೇವೆ. ಇದಲ್ಲದೆ, ಮಿರಮಾರ್ ಬೀಚ್, ಮಡಗಾಂವ್ ನ ರವೀಂದ್ರ ಭವನದ ಮುಕ್ತ ಸ್ಥಳ (ಓಪನ್ ಸ್ಪೇಸ್) ಮತ್ತು ವಾಗಟರ್ ಬೀಚ್ ನಲ್ಲಿ ಬಯಲು ಪ್ರದರ್ಶನಗಳನ್ನು (ಓಪನ್ ಏರ್ ಸ್ಕ್ರೀನಿಂಗ್) ಆಯೋಜಿಸಲಾಗುವುದು" ಎಂದು ಅವರು ತಿಳಿಸಿದರು.
ನವೆಂಬರ್ 20 ರಿಂದ 28, 2025 ರವರೆಗೆ ಗೋವಾದಲ್ಲಿ ನಡೆಯಲಿರುವ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (ಐ.ಎಫ್.ಎಫ್.ಐ) ಹಲವಾರು 'ಪ್ರಥಮ'ಗಳಿಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಹೇಳಿದ್ದಾರೆ. ಈ ಹೊಸ ಉಪಕ್ರಮಗಳು, ಉತ್ಸವದ ಬೆಳೆಯುತ್ತಿರುವ ಜಾಗತಿಕ ಪ್ರತಿಷ್ಠೆಯನ್ನು, ಅದರ ಪರಿವರ್ತನಾಶೀಲ ಹೆಜ್ಜೆಗಳನ್ನು, ಹಾಗೂ ಭಾರತೀಯ ಸಿನಿಮಾವನ್ನು ಉತ್ತೇಜಿಸುವ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯವನ್ನು ಪೋಷಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಮತ್ತಷ್ಟು ಹೆಚ್ಚಿಸಲಿವೆ. ಇಂದು (ನವೆಂಬರ್ 15, 2025) ಪಣಜಿಯಲ್ಲಿ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ಉತ್ಸವದ ಪೂರ್ವಭಾವಿಯಾಗಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಐ.ಎಫ್.ಎಫ್.ಐ 2025ಕ್ಕೆ ಈ ಬಾರಿ 127 ದೇಶಗಳಿಂದ ಅಭೂತಪೂರ್ವವಾಗಿ 3,400 ಚಲನಚಿತ್ರಗಳು ಸಲ್ಲಿಕೆಯಾಗಿವೆ. ಇದು ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿದೆ ಎಂದು ಡಾ. ಮುರುಗನ್ ಹೇಳಿದರು. "84 ದೇಶಗಳ 270ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ 26 'ವರ್ಲ್ಡ್ ಪ್ರೀಮಿಯರ್‌ಗಳು', 48 'ಏಷ್ಯಾ ಪ್ರೀಮಿಯರ್‌ಗಳು' ಮತ್ತು ಭಾರತದ 99 ಪ್ರಥಮ ಪ್ರದರ್ಶನಗಳು ಸೇರಿವೆ. ಈ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಕೇವಲ ಉತ್ಸವದ ಪ್ರತಿಷ್ಠೆಯನ್ನು ಮಾತ್ರವಲ್ಲ, ವಿಶ್ವ ಸಿನಿಮಾದಲ್ಲಿ ಭಾರತದ ಏರುತ್ತಿರುವ ಸ್ಥಾನಮಾನವನ್ನೂ ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು.
"ಈ ವರ್ಷ, ಐ.ಎಫ್.ಎಫ್.ಐ ನ 'ಕಂಟ್ರಿ ಫೋಕಸ್' ಜಪಾನ್ ಆಗಿದೆ. ಅಲ್ಲದೆ, ಸ್ಪೇನ್ ಮತ್ತು ಆಸ್ಟ್ರೇಲಿಯಾದಿಂದ ವಿಶೇಷವಾಗಿ ಆಯ್ಕೆಮಾಡಿದ ಚಲನಚಿತ್ರಗಳ ಪ್ರದರ್ಶನವೂ ಇರಲಿದೆ. ಗುರು ದತ್, ರಾಜ್ ಖೋಸ್ಲಾ, ಹೃತ್ವಿಕ್ ಘಟಕ್, ಪಿ. ಭಾನುಮತಿ, ಭೂಪೇನ್ ಹಜಾರಿಕಾ ಮತ್ತು ಸಲಿಲ್ ಚೌಧರಿ ಅವರಂತಹ ಭಾರತೀಯ ಚಿತ್ರರಂಗದ ದಂತಕಥೆಗಳಿಗೆ ಶತಮಾನೋತ್ಸವದ ಗೌರವವನ್ನೂ ಈ ಉತ್ಸವದಲ್ಲಿ ಸಲ್ಲಿಸಲಾಗುವುದು" ಎಂದು ಕೇಂದ್ರ ಸಚಿವರು ತಿಳಿಸಿದರು. ನಟ ರಜನಿಕಾಂತ್ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅವರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಡಾ. ಮುರುಗನ್ ತಿಳಿಸಿದರು. ಅವರ 'ಲಾಲಾ ಸಲಾಂ' ಚಲನಚಿತ್ರವೂ ಸಹ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಗೋವಾದ ಖ್ಯಾತ ಛಾಯಾಗ್ರಾಹಕ ಶ್ರೀ ಕೆ. ವೈಕುಂಠ್ ಅವರನ್ನೂ ಸಹ ಈ ಉತ್ಸವದಲ್ಲಿ ಸನ್ಮಾನಿಸಲಾಗುವುದು" ಎಂದು ಅವರು ಹೇಳಿದರು.
“ನಾಳಿ ಸೃಜನಶೀಲ ಮನಸ್ಸುಗಳು” ಉಪಕ್ರಮದ ಕುರಿತು ಮಾತನಾಡಿದ ಸಚಿವರು, ಈ ವರ್ಷ 799 ಅರ್ಜಿಗಳಿಂದ 124 ಯುವ ಕಂಟೆಂಟ್ ಕ್ರಿಯೇಟರ್ ಗಳನ್ನು ಅತ್ಯಂತ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 'WAVES ಫಿಲ್ಮ್ ಬಜಾರ್‌ನ' 19ನೇ ಆವೃತ್ತಿಯು ಭಾರತ ಮತ್ತು ವಿದೇಶಗಳ ನೂರಾರು ಯೋಜನೆಗಳಿಗೆ ಸಹ-ನಿರ್ಮಾಣ ಮತ್ತು ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಿದೆ. ಅಲ್ಲದೆ, AI, VFX, ಮತ್ತು CGI ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅನ್ವೇಷಿಸಲು ಮೀಸಲಾದ 'ಟೆಕ್ ಪೆವಿಲಿಯನ್' ಕೂಡ ಇರಲಿದೆ ಎಂದು ಡಾ. ಮುರುಗನ್ ಹೇಳಿದರು.
ಭಾರತದ ಅಭಿವೃದ್ಧಿ ಪಯಣದ ಕೇಂದ್ರಬಿಂದುವಾಗಿ 'ನಾರಿ ಶಕ್ತಿ'ಯನ್ನು ಕಾಣುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದ ಕುರಿತು ಮಾತನಾಡಿದ ಕೇಂದ್ರ ಸಚಿವರು, ಐ.ಎಫ್.ಎಫ್.ಐ 2025ರಲ್ಲಿ 50ಕ್ಕೂ ಹೆಚ್ಚು ಮಹಿಳಾ ನಿರ್ದೇಶಕರ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು. 'ಈ ಉತ್ಸವದಲ್ಲಿ 21 ಆಸ್ಕರ್ ಪ್ರವೇಶ ಪಡೆದ ಚಿತ್ರಗಳು ಮತ್ತು 50ಕ್ಕೂ ಹೆಚ್ಚು ಚೊಚ್ಚಲ ನಿರ್ದೇಶಕರ ಕೃತಿಗಳು ಪ್ರದರ್ಶನಗೊಳ್ಳಲಿವೆ. ವಿಶ್ವದ ಅಗ್ರಗಣ್ಯ ಚಲನಚಿತ್ರೋತ್ಸವಗಳಲ್ಲಿ ಉನ್ನತ ಪ್ರಶಸ್ತಿಗಳನ್ನು ಗೆದ್ದ ಚಲನಚಿತ್ರಗಳನ್ನೂ 56ನೇ ಐ.ಎಫ್.ಎಫ್.ಐ ನಲ್ಲಿ ಪ್ರದರ್ಶಿಸಲಾಗುವುದು.
ಸಿನಿಮಾದಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪೋಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು, 'CinemAI ಹ್ಯಾಕಥಾನ್ ಮತ್ತು ಚಿತ್ರಮಂದಿರಗಳಲ್ಲಿನ ಪ್ರವೇಶಸಾಧ್ಯತೆಯ ವೈಶಿಷ್ಟ್ಯಗಳಂತಹ ಉಪಕ್ರಮಗಳು, ಸಿನಿಮಾವನ್ನು ಹೆಚ್ಚು ಒಳಗೊಳ್ಳುವ, ತಂತ್ರಜ್ಞಾನ-ಚಾಲಿತ ಮತ್ತು ಜಾಗತಿಕವಾಗಿ ಸಹಯೋಗಿಯನ್ನಾಗಿ ಮಾಡುವ ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ' ಎಂದು ಹೇಳಿದರು.
ಈ ವರ್ಷ ಐ.ಎಫ್.ಎಫ್.ಐ, ಹಳೆಯ ಜಿಎಂಸಿ ಕಟ್ಟಡದ ಎದುರಿನ ರಸ್ತೆಯಲ್ಲಿ ವರ್ಣರಂಜಿತ ಮೆರವಣಿಗೆಯೊಂದಿಗೆ ಪ್ರಾರಂಭಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ನಿರ್ಮಾಣ ಸಂಸ್ಥೆಗಳು, ವಿವಿಧ ರಾಜ್ಯಗಳು ಮತ್ತು ಸಾಂಸ್ಕೃತಿಕ ತಂಡಗಳ ಸ್ತಬ್ಧಚಿತ್ರಗಳು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರದರ್ಶಿಸಲಿವೆ ಹಾಗೂ ಎತ್ತಿಹಿಡಿಯಲಿವೆ. ಈ ಮೆರವಣಿಗೆಯಲ್ಲಿ ಒಟ್ಟು 34 ಫ್ಲೋಟ್ ಗಳು ಇರಲಿದ್ದು, ಅವುಗಳಲ್ಲಿ 12 ನ್ನು ಗೋವಾ ಸರ್ಕಾರವೇ ಆಯೋಜಿಸಿದೆ.

****
Release ID:
2190422
| Visitor Counter:
10