ರಾಷ್ಟ್ರಪತಿಗಳ ಕಾರ್ಯಾಲಯ
ಪ್ರಾಜೆಕ್ಟ್ ಚೀತಾದ ಮುಂದಿನ ಹಂತಕ್ಕಾಗಿ ಬೋಟ್ಸ್ ವಾನಾದಿಂದ ಭಾರತಕ್ಕೆ ಎಂಟು ಚೀತಾ ಉಡುಗೊರೆ; ಮೊಕೊಲೋಡಿ ಪ್ರಕೃತಿ ಮೀಸಲು ಪ್ರದೇಶದಲ್ಲಿ ಸಾಂಕೇತಿಕ ಕೊಡುಗೆಗೆ ಸಾಕ್ಷಿಯಾದ ರಾಷ್ಟ್ರಪತಿ
ಬೋಟ್ಸ್ ವಾನಾದ ಉಪಾಧ್ಯಕ್ಷರು ಮತ್ತು ಅಂತಾರಾಷ್ಟ್ರೀಯ ಬಾಂಧವ್ಯ ಸಚಿವರಿಂದ ರಾಷ್ಟ್ರಪತಿಗಳ ಭೇಟಿ
ಬೋಟ್ಸ್ ವಾನಾದಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಭಾರತದ ರಾಷ್ಟ್ರಪತಿ ಅವರ ಭಾಷಣ
ಭಾರತದೊಂದಿಗಿನ ಬಾಂಧವ್ಯ ಬಲವರ್ಧನೆ ಜೊತೆಗೆ ಬೋಟ್ಸ್ ವಾನಾದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುವಂತೆ ಭಾರತೀಯ ಸಮುದಾಯದವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ
Posted On:
13 NOV 2025 5:34PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬೋಟ್ಸ್ ವಾನಾದ ಅಧ್ಯಕ್ಷರಾದ ವಕೀಲ ಡುಮಾ ಗಿಡಿಯಾನ್ ಬಬೊಕ ಅವರೊಂದಿಗೆ ಇಂದು ಬೆಳಗ್ಗೆ (ನವೆಂಬರ್ 13, 2025) ಬೋಟ್ಸ್ ವಾನಾದ ಮೊಕೊಲೋಡಿ ನೇಚರ್ ರಿಸರ್ವ್ ಗೆ (ಪ್ರಕೃತಿ ಮೀಸಲು ಕ್ಷೇತ್ರ) ಭೇಟಿ ನೀಡಿದರು.
ಭಾರತ ಮತ್ತು ಬೋಟ್ಸ್ ವಾನಾದ ತಜ್ಞರು ಘಾಂಜಿ ಪ್ರದೇಶ ಮೂಲದ ಚಿರತೆಗಳನ್ನು ಕ್ವಾರಂಟೈನ್ (ಪ್ರತ್ಯೇಕ ದಿಗ್ಬಂಧಿತ) ವ್ಯವಸ್ಥೆಯ ಪ್ರದೇಶಕ್ಕೆ ಬಿಡುಗಡೆ ಮಾಡುವುದನ್ನು ಉಭಯ ನಾಯಕರು ವೀಕ್ಷಿಸಿದರು. ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಭಾರತಕ್ಕೆ ಎಂಟು ಚಿರತೆಗಳನ್ನು ಬೋಟ್ಸ್ ವಾನಾ ಸಾಂಕೇತಿಕವಾಗಿ ನೀಡುವುದನ್ನು ಈ ಕಾರ್ಯಕ್ರಮ ಗುರುತಿಸಿದೆ. ಈ ಕಾರ್ಯಕ್ರಮವು ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತ-ಬೋಟ್ಸ್ ವಾನಾ ಸಹಕಾರದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ.
ನಂತರ, ಬೋಟ್ಸ್ವಾನಾದ ಉಪಾಧ್ಯಕ್ಷರಾದ ಮಾನ್ಯ ನದ್ದಾಬಾ ನ್ಕೋಸಿನಾತಿ ಗವೋಲಾತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಸಚಿವರಾದ ಮಾನ್ಯ ಡಾ. ಫೆನ್ಯೊ ಬುಟಾಲೆ ಅವರು ರಾಷ್ಟ್ರಪತಿ ಅವರನ್ನು ಪ್ರತ್ಯೇಕ ಸಭೆಗಳಲ್ಲಿ ಭೇಟಿ ಮಾಡಿದರು.
ನವದೆಹಲಿಗೆ ಹೊರಡುವ ಮುನ್ನ, ಗ್ಯಾಬೊರೋನ್ ನಲ್ಲಿ ಬೋಟ್ಸ್‌ವಾನಾಕ್ಕೆ ಭಾರತದ ಹೈಕಮಿಷನರ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡ ರಾಷ್ಟ್ರಪತಿಗಳು, ಭಾರತೀಯ ಸಮುದಾಯವರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಮತ್ತು ಸಂಸದರಾದ ಶ್ರೀ ಪರಭುಭಾಯಿ ನಗರ್ ಭಾಯಿ ವಾಸವ ಮತ್ತು ಶ್ರೀಮತಿ ಡಿ.ಕೆ.ಅರುಣಾ ಉಪಸ್ಥಿತರಿದ್ದರು.
ಉತ್ಸಾಹಿ ಭಾರತೀಯ ಸಮುದಾಯದರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರು, ಅನಿವಾಸಿಯರ ಕೊಡುಗೆಗಳ ಬಗ್ಗೆ ಭಾರತದ ಜನರಿಗೆ ಹೆಮ್ಮೆ ಇದೆ ಎಂದು ಹೇಳಿದರು. ಅನಿವಾಸಿಯರು ಭಾರತ ಮತ್ತು ಬೋಟ್ಸ್ವಾನ ಎರಡೂ ರಾಷ್ಟ್ರಗಳ ವಿಶಿಷ್ಟ ಲಕ್ಷಣಗಳಾದ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪ್ರತಿನಿಧಿಸುವ ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು. ಭಾರತದೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ಜೊತೆಜೊತೆಗೆ ಬೋಟ್ಸ್ವಾನಾದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುವಂತೆ ರಾಷ್ಟ್ರಪತಿ ಅವರು ಮನವಿ ಮಾಡಿದರು. ಒ.ಸಿ.ಐ ಯೋಜನೆ, ಪ್ರವಾಸಿ ಭಾರತೀಯ ದಿನ ಮೊದಲಾದ ಉಪಕ್ರಮಗಳ ಲಾಭ ಪಡೆದುಕೊಳ್ಳುವಂತೆ ಮತ್ತು ಭಾರತದ ಅಭಿವೃದ್ಧಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ರಾಷ್ಟ್ರಪತಿ ಅವರು ಅನಿವಾಸಿಯರನ್ನು ಹುರಿದುಂಬಿಸಿದರು.
ಭಾರತ ಮತ್ತು ಬೋಟ್ಸ್ ವಾನಾ ನಡುವಿನ ಬಾಂಧವ್ಯವು ನಂಬಿಕೆ, ಗೌರವ ಮತ್ತು ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಧರಿಸಿದೆ ಎಂದು ರಾಷ್ಟ್ರಪತಿ ಅವರು ಹೇಳಿದರು. ವ್ಯಾಪಾರ, ಶಿಕ್ಷಣ, ಆರೋಗ್ಯ, ಡಿಜಿಟಲ್ ತಂತ್ರಜ್ಞಾನಗಳು, ಕೃಷಿ ಮತ್ತು ನವೀಕರಿಸಬಹುದಾದ ಇಂಧನ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಮತ್ತು ಬೋಟ್ಸ್ವಾನ ನಡುವೆ ಮತ್ತಷ್ಟು ಸಹಕಾರಕ್ಕೆ ಬೋಟ್ಸ್ವಾನ ಅಧ್ಯಕ್ಷ ಬೊಕೊ ಅವರೊಂದಿಗಿನ ಚರ್ಚೆಯ ಸಮಯದಲ್ಲಿ ನಿರ್ಧರಿಸಲಾಗಿದೆ ಎಂದು ರಾಷ್ಟ್ರಪತಿಗಳು ಸಭಿಕರಿಗೆ ತಿಳಿಸಿದರು.
ಎರಡು ಆಫ್ರಿಕನ್ ರಾಷ್ಟ್ರಗಳಾದ ಅಂಗೋಲಾ ಮತ್ತು ಬೋಟ್ಸ್ವಾನಾಗಳಿಗೆ ಯಶಸ್ವಿ ಭೇಟಿ ನಂತರ ರಾಷ್ಟ್ರಪತಿಗಳು ನವೆಂಬರ್ 14ರ ಬೆಳಗ್ಗೆ ನವದೆಹಲಿಗೆ ಹಿಂದಿರುಗುವ ನಿರೀಕ್ಷೆಯಿದೆ.
0CVO.JPG)
4RP9.JPG)
Y0DA.JPG)
F8AF.JPG)
H61H.JPG)
WS4H.JPG)
ಭಾಷಣ ಓದಲು ಇಲ್ಲಿ ಕ್ಲಿಕ್ ಮಾಡಿ
****
(Release ID: 2189830)
Visitor Counter : 5