ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ವಿಡಿಯೋ ಸಂದೇಶದ ಮೂಲಕ ಗುಜರಾತ್ ರೋಜ್‌ಗಾರ್ ಮೇಳವನ್ನು ಉದ್ದೇಶಿಸಿ ಮಾಡಿದ ಭಾಷಣದ ಕನ್ನಡ ಅನುವಾದ

ಪ್ರಕಟಣಾ ದಿನಾಂಕ: 06 MAR 2023 5:28PM by PIB Bengaluru

ಸ್ನೇಹಿತರೇ,

ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಕೇಳಿ ಬರುತ್ತಿದೆ. ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು! ಇಂದಿನ ಈ ಕಾರ್ಯಕ್ರಮವು ಹೋಳಿಯ ಈ ಮಹತ್ವದ ಹಬ್ಬದಂದು ಸಾವಿರಾರು ಕುಟುಂಬಗಳ ಸಂತೋಷವನ್ನು ಹೆಚ್ಚಿಸಿದೆ. ಗುಜರಾತಿನಲ್ಲಿ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಈ ರೋಜ್‌ಗಾರ್ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ನಮ್ಮ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಮತ್ತು ಅವರ ಸಂಪೂರ್ಣ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೇ,
ಇದು ಯುವಕರಿಗೆ ಅವಕಾಶಗಳನ್ನು ಒದಗಿಸುವ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರಗಳು ಮತ್ತು ನಮ್ಮೆಲ್ಲರ ಬದ್ಧತೆಗೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಎನ್‌ಡಿಎ ರಾಜ್ಯ ಸರ್ಕಾರಗಳು ಗರಿಷ್ಠ ಸಂಖ್ಯೆಯ ಉದ್ಯೋಗಗಳನ್ನು ಒದಗಿಸಲು ಅವಿರತವಾಗಿ ಶ್ರಮಿಸುತ್ತಿರುವುದು ನನಗೆ ಸಂತೋಷ ತಂದಿದೆ. ಕೇಂದ್ರ ಸರ್ಕಾರವು ಆಯೋಜಿಸಿರುವುದರ ಜೊತೆಗೆ, ಎನ್‌ಡಿಎ ಆಡಳಿತದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರಂತರವಾಗಿ ರೋಜ್‌ಗಾರ್ ಮೇಳಗಳನ್ನು ಆಯೋಜಿಸಲಾಗುತ್ತಿದೆ. ನೇಮಕಾತಿ ಪತ್ರಗಳನ್ನು ಪಡೆಯುತ್ತಿರುವ ಯುವಕರಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರ ಕುಟುಂಬಗಳಿಗೆ ಸಂತೋಷ ಮತ್ತು ಸಮೃದ್ಧಿಗಾಗಿ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವ ಯುವಕರು ‘ಅಮೃತಕಾಲ’ದ ಸಂಕಲ್ಪಗಳನ್ನು ಈಡೇರಿಸಲು ಸಂಪೂರ್ಣ ಸಮರ್ಪಣೆ ಮತ್ತು ಭಕ್ತಿಯಿಂದ ಕೊಡುಗೆ ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕಳೆದ 5 ವರ್ಷಗಳಲ್ಲಿ, ಗುಜರಾತಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಯುವಕರು ರಾಜ್ಯ ಸರ್ಕಾರದ ಉದ್ಯೋಗಗಳನ್ನು ಪಡೆದಿದ್ದಾರೆ. ಸರ್ಕಾರಿ ಉದ್ಯೋಗಗಳಲ್ಲದೆ, ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಕಳೆದ ವರ್ಷಗಳಲ್ಲಿ ಗುಜರಾತಿನ ವಿವಿಧ ಕ್ಷೇತ್ರಗಳಲ್ಲಿ ಸುಮಾರು 18 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲಾಗಿದೆ. ಗುಜರಾತ್ ಸರ್ಕಾರವು ನೇಮಕಾತಿ ಕ್ಯಾಲೆಂಡರ್ ಅನ್ನು ಸಿದ್ಧಪಡಿಸುವ ಮೂಲಕ ನಿಗದಿತ ಸಮಯದೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಈ ವರ್ಷ ರಾಜ್ಯ ಸರ್ಕಾರದಲ್ಲಿ 25,000 ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಗುಜರಾತ್ ಸರ್ಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸಿದೆ. ಇದಕ್ಕಾಗಿ ವಿಭಿನ್ನ ಡಿಜಿಟಲ್ ವೇದಿಕೆಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್ ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸ್ನೇಹಿತರೇ,

ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರವು ಕೈಗೊಂಡಿರುವ ಪ್ರಯತ್ನಗಳು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಕೇಂದ್ರ ಸರ್ಕಾರವು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಎರಡಕ್ಕೂ ಒಂದು ಕಾಂಕ್ರೀಟ್ ಕಾರ್ಯತಂತ್ರದ ಮೇಲೆ ಕೆಲಸ ಮಾಡಿದೆ. ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ಉದ್ಯೋಗಾವಕಾಶಗಳನ್ನು ಗರಿಷ್ಠವಾಗಿ ಹೆಚ್ಚಿಸುವುದು ನಮ್ಮ ಗಮನವಾಗಿದೆ. ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಗಮನವಾಗಿದೆ. ಸ್ವಯಂ ಉದ್ಯೋಗಕ್ಕಾಗಿ ದೇಶದಲ್ಲಿ ಸರಿಯಾದ ವಾತಾವರಣವನ್ನು ಸೃಷ್ಟಿಸುವುದು ಮತ್ತು ಯಾವುದೇ ಖಾತರಿ ಇಲ್ಲದೆ ಯುವಕರಿಗೆ ಆರ್ಥಿಕ ನೆರವು ನೀಡುವುದು ನಮ್ಮ ಗಮನವಾಗಿದೆ. ಉದ್ಯೋಗಗಳ ಬದಲಾಗುತ್ತಿರುವ ಸ್ವರೂಪಕ್ಕೆ ಅನುಗುಣವಾಗಿ ಯುವಕರ ಕೌಶಲ್ಯ ಅಭಿವೃದ್ಧಿಯ ಮೇಲೆ ನಮ್ಮ ಗಮನವಿದೆ.

ಸ್ನೇಹಿತರೇ,

ಅಭಿವೃದ್ಧಿಯ ಚಕ್ರವು ವೇಗವಾಗಿ ಚಲಿಸಿದಾಗ, ಪ್ರತಿ ವಲಯದಲ್ಲಿಯೂ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಪ್ರಾರಂಭಿಸುತ್ತವೆ. ಇಂದು ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ದೇಶದ ಇತರ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಗುಜರಾತ್ ಒಂದರಲ್ಲೇ 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೇಂದ್ರ ಸರ್ಕಾರದ ಯೋಜನೆಗಳು ನಡೆಯುತ್ತಿವೆ. ಈ ವರ್ಷದ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂಪಾಯಿಗಳ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಈ ಹೂಡಿಕೆಯು ಲಕ್ಷಾಂತರ ಉದ್ಯೋಗಗಳನ್ನು ಸಹ ಸೃಷ್ಟಿಸುತ್ತಿದೆ.

ಸ್ನೇಹಿತರೇ,

ಮುಂಬರುವ ವರ್ಷಗಳಲ್ಲಿ ಭಾರತವು ಅತಿದೊಡ್ಡ ಉತ್ಪಾದನಾ ಕೇಂದ್ರವಾಗಲಿದೆ ಎಂದು ಪ್ರಪಂಚದಾದ್ಯಂತದ ತಜ್ಞರು ನಂಬಿದ್ದಾರೆ. ಮತ್ತು ಇದರಲ್ಲಿ ಗುಜರಾತ್ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮಂತಹ ಯುವಕರು ಈ ಕ್ರಾಂತಿಗೆ ಭಾರತದಲ್ಲಿ ನಾಯಕತ್ವ ನೀಡಲಿದ್ದಾರೆ. ಉದಾಹರಣೆಗೆ, ಗುಜರಾತಿನ ದಾಹೋದ್‌ನಲ್ಲಿರುವ ನಮ್ಮ ಬುಡಕಟ್ಟು ಪ್ರದೇಶವು ಒಂದು ರೀತಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿದೆ. ಅಲ್ಲಿ 20,000 ಕೋಟಿ ರೂ.ಗಳ ಹೂಡಿಕೆಯಲ್ಲಿ ರೈಲು ಎಂಜಿನ್ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಗುಜರಾತ್ ಕೂಡ ಸೆಮಿಕಂಡಕ್ಟರ್‌ಗಳ ಪ್ರಮುಖ ಕೇಂದ್ರವಾಗಲಿದೆ. ಈ ಎಲ್ಲ ಪ್ರಯತ್ನಗಳು ಗುಜರಾತಿನಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ.

ಸ್ನೇಹಿತರೇ,

ಇಂದು ಸರ್ಕಾರವು ಕೆಲಸ ಮಾಡುತ್ತಿರುವ ಸಮಗ್ರ ಅಭಿವೃದ್ಧಿಯ ವಿಧಾನವು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯಕವಾಗಿದೆ. ನೀತಿ ಮಟ್ಟದಲ್ಲಿನ ಈ ಹೊಸ ನಿರ್ಣಾಯಕ ಬದಲಾವಣೆಗಳು ಸ್ಟಾರ್ಟ್‌ಅಪ್‌ಗಳಿಗೆ ಮುನ್ನಡೆಯಲು ಅವಕಾಶ ನೀಡುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿವೆ. ಇಂದು ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅದು ಕೂಡ ಟೈರ್ 2, ಟೈರ್ 3 ನಗರಗಳಲ್ಲಿ. ಇದರ ಪರಿಣಾಮವಾಗಿ, ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ, ಮತ್ತು ಲಕ್ಷಾಂತರ ಯುವಕರು ಸ್ವಯಂ ಉದ್ಯೋಗಕ್ಕಾಗಿ ಪ್ರೇರೇಪಿಸಲ್ಪಡುತ್ತಿದ್ದಾರೆ. ಸರ್ಕಾರವು ಅವರಿಗೆ ಯಾವುದೇ ಬ್ಯಾಂಕ್ ಖಾತರಿ ಇಲ್ಲದೆ ಆರ್ಥಿಕ ನೆರವು ನೀಡುತ್ತಿದೆ. ಮುದ್ರಾ ಯೋಜನೆ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಿಂದ ಸ್ವಯಂ ಉದ್ಯೋಗಕ್ಕೂ ಉತ್ತೇಜನ ಸಿಕ್ಕಿದೆ. ಕೋಟ್ಯಂತರ ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರುವ ಮೂಲಕ ತಮ್ಮ ಕಾಲುಗಳ ಮೇಲೆ ಗಟ್ಟಿಯಾಗಿ ನಿಂತಿದ್ದಾರೆ ಮತ್ತು ಇಡೀ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸರ್ಕಾರವು ಈ ಮಹಿಳೆಯರಿಗೆ ನೂರಾರು ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದೆ.

ಸ್ನೇಹಿತರೇ,

ದೇಶದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸಾಧ್ಯತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಯುವಕರ ಕೌಶಲ್ಯದ ಶಕ್ತಿಯಿಂದ ಮಾತ್ರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸಬಹುದು. ಸಮಾಜದ ಪ್ರತಿಯೊಂದು ವರ್ಗಕ್ಕೂ ಕೌಶಲ್ಯ ಅಭಿವೃದ್ಧಿಯ ಪ್ರಯೋಜನ ಸಿಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಅದು ನಮ್ಮ ದಲಿತ ಸಹೋದರ ಸಹೋದರಿಯರಾಗಿರಲಿ, ನಮ್ಮ ಬುಡಕಟ್ಟು ಸಹೋದರ ಸಹೋದರಿಯರಾಗಿರಲಿ, ನಮ್ಮ ವಂಚಿತ ವರ್ಗಗಳಾಗಿರಲಿ, ಅಥವಾ ನಮ್ಮ ತಾಯಂದಿರು ಮತ್ತು ಸಹೋದರಿಯರಾಗಿರಲಿ, ಪ್ರತಿಯೊಬ್ಬರಿಗೂ ಮುಂದೆ ಸಾಗಲು ಸಮಾನ ಅವಕಾಶ ಸಿಗಲಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಯುವಕರ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಪಿಎಂ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ದೇಶದಲ್ಲಿ 30 ಸ್ಕಿಲ್ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು. ಇಲ್ಲಿ ಯುವಕರಿಗೆ ಹೊಸ ಯುಗದ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗುತ್ತದೆ. ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಸಣ್ಣ ಕುಶಲಕರ್ಮಿಗಳಿಗೆ ತರಬೇತಿ ನೀಡುವುದರ ಜೊತೆಗೆ, ಅವರನ್ನು ಎಂಎಸ್‌ಎಂಇಗಳೊಂದಿಗೆ ಸಹ ಜೋಡಿಸಲಾಗುವುದು. ಈ ಯೋಜನೆಯ ಮೂಲಕ, ಸಣ್ಣ ವ್ಯವಹಾರಗಳೊಂದಿಗೆ ಸಂಬಂಧ ಹೊಂದಿರುವ ಜನರು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಸಹಾಯ ಮಾಡಲಾಗುತ್ತದೆ. ಉದ್ಯೋಗಗಳ ಬದಲಾಗುತ್ತಿರುವ ಸ್ವರೂಪಕ್ಕಾಗಿ ನಾವು ನಮ್ಮ ಯುವಕರನ್ನು ನಿರಂತರವಾಗಿ ಸಿದ್ಧಪಡಿಸುತ್ತಿದ್ದೇವೆ. ನಮ್ಮ ಐಟಿಐಗಳು ಈ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಗುಜರಾತಿನಲ್ಲಿ ಐಟಿಐಗಳ ಸಂಖ್ಯೆ ಮತ್ತು ಅವುಗಳ ಸೀಟುಗಳಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ. ಇಂದು, ಗುಜರಾತ್ ಒಂದರಲ್ಲೇ ಸುಮಾರು 600 ಐಟಿಐಗಳಲ್ಲಿ, 2 ಲಕ್ಷ ಸೀಟುಗಳಿಗಾಗಿ ವಿವಿಧ ಕೌಶಲ್ಯಗಳ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿ ಕಾರ್ಯಕ್ರಮವನ್ನು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಗುಜರಾತಿನಲ್ಲಿ ಐಟಿಐಗಳ ನಿಯೋಜನೆ (ಪ್ಲೇಸ್‌ಮೆಂಟ್) ಬಹಳ ತೃಪ್ತಿಕರವಾಗಿದೆ ಎಂಬುದು ನನಗೆ ಸಂತೋಷ ತಂದಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ ನಂತರ ದುರದೃಷ್ಟವಶಾತ್ ಗಮನ ಕೊಡದಿದ್ದರೂ ಸಹ, ಉದ್ಯೋಗ ಸೃಷ್ಟಿಗೆ ಇರುವ ಪ್ರತಿಯೊಂದು ಅವಕಾಶವನ್ನು ಅಭಿವೃದ್ಧಿಪಡಿಸುವತ್ತ ನಮ್ಮ ಗಮನವಿದೆ. 50 ಹೊಸ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೇವಾಡಿಯಾದಲ್ಲಿ, ಏಕ್ತಾ ನಗರದಲ್ಲಿ ನಮ್ಮಲ್ಲಿ ಯುನಿಟಿ ಮಾಲ್ ಇದ್ದಂತೆ. ಅದೇ ರೀತಿ, ಪ್ರತಿ ರಾಜ್ಯದಲ್ಲಿ ಯುನಿಟಿ ಮಾಲ್‌ಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಮಾಲ್‌ಗಳಲ್ಲಿ, ದೇಶದಾದ್ಯಂತದ ಅನನ್ಯ ಉತ್ಪನ್ನಗಳನ್ನು ಉತ್ತೇಜಿಸಲಾಗುತ್ತದೆ. ಈ ಪ್ರಯತ್ನಗಳಿಂದ ಲಕ್ಷಾಂತರ ಜನರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರ ಜೊತೆಗೆ, ಏಕಲವ್ಯ ಶಾಲೆಗಳಲ್ಲಿ ಸುಮಾರು 40,000 ಶಿಕ್ಷಕರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ನೇಹಿತರೇ,

ನೀವೆಲ್ಲರೂ ಗುಜರಾತ್ ಸರ್ಕಾರದೊಂದಿಗೆ ಸಂಬಂಧ ಹೊಂದುವ ಮೂಲಕ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುತ್ತಿದ್ದೀರಿ. ಇದು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷದ ಕ್ಷಣ ಎಂಬುದು ಸಹಜ. ಆದರೆ ಸ್ನೇಹಿತರೇ, ನೀವು ಒಂದು ವಿಷಯವನ್ನು ನೆನಪಿನಲ್ಲಿಡಬೇಕು; ಇದು ಕೇವಲ ಪ್ರಾರಂಭ. ಜೀವನದ ಹೊಸ ಪಯಣ ಪ್ರಾರಂಭವಾಗಲಿದೆ. ಸರ್ಕಾರಿ ಉದ್ಯೋಗವನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಂಡು ಅಲ್ಲಿಯೇ ನಿಂತರೆ, ನಿಮ್ಮ ಸ್ವಂತ ವೈಯಕ್ತಿಕ ಬೆಳವಣಿಗೆ ನಿಲ್ಲುತ್ತದೆ. ನಿಮ್ಮನ್ನು ಇಲ್ಲಿಯವರೆಗೆ ತಂದಿರುವ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಎಂದಿಗೂ ನಿಲ್ಲಿಸಬೇಡಿ; ಅದು ಇನ್ನೂ ಮುಂದುವರಿಯಬೇಕು. ಹೊಸದನ್ನು ಕಲಿಯುವ ಹಂಬಲವು ನಿಮ್ಮ ಜೀವನದುದ್ದಕ್ಕೂ ಮುಂದುವರಿಯಲು ಸಹಾಯ ಮಾಡುತ್ತದೆ. ನೀವು ಎಲ್ಲಿಯೇ ನಿಯೋಜಿಸಲ್ಪಟ್ಟರೂ, ನಿಮ್ಮ ಸಾಮರ್ಥ್ಯ, ಅರ್ಹತೆ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನೀವು ಹೆಚ್ಚು ಗಮನ ಹರಿಸಿದರೆ, ನಿಮಗೆ ಹೆಚ್ಚು ಪ್ರಯೋಜನವಾಗುತ್ತದೆ. ನೀವು ಕೆಲಸ ಮಾಡುತ್ತಿರುವ ಪ್ರದೇಶಕ್ಕೂ ಪ್ರಯೋಜನವಾಗುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರನು ಉತ್ತಮ ತರಬೇತಿಯನ್ನು ಪಡೆಯುವುದನ್ನು ಖಚಿತಪಡಿಸುವುದು ನಮ್ಮ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ನಾವು ಕರ್ಮಯೋಗಿ ಭಾರತ್ ಆನ್‌ಲೈನ್ ವೇದಿಕೆಯನ್ನು ಪ್ರಾರಂಭಿಸಿದ್ದೇವೆ. ಈ ಪೋರ್ಟಲ್‌ನಲ್ಲಿ ಲಭ್ಯವಿರುವ ವಿವಿಧ ಆನ್‌ಲೈನ್ ಕೋರ್ಸ್‌ಗಳ ಗರಿಷ್ಠ ಲಾಭವನ್ನು ಪಡೆದುಕೊಳ್ಳಿ ಮತ್ತು ನಿರಂತರ ಕಲಿಕೆಯು ನಿಮ್ಮ ಪ್ರಗತಿಗೆ ಒಂದು ದೊಡ್ಡ ಅಸ್ತ್ರವಾಗಬಹುದು ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಈ ಶುಭ ಪ್ರಾರಂಭಕ್ಕಾಗಿ ನಿಮ್ಮೆಲ್ಲರಿಗೂ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಗುಜರಾತಿನ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಹೋಳಿ ಹಬ್ಬದ ಶುಭಾಶಯಗಳು! ತುಂಬ ಧನ್ಯವಾದಗಳು.

 

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿತ್ತು.

 

*****


(ಪ್ರಕಟಣೆ ಐ.ಡಿ.: 2187190) ವಿಸಿಟರ್ ಕೌಂಟರ್ : 28