ಪ್ರಧಾನ ಮಂತ್ರಿಯವರ ಕಛೇರಿ
ನವೆಂಬರ್ 8 ರಂದು ಪ್ರಧಾನಮಂತ್ರಿ ವಾರಾಣಸಿಗೆ ಭೇಟಿ, 4 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
ಪ್ರಯಾಣ ಸಮಯವನ್ನು ಕಡಿಮೆ ಮಾಡಲು, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ಹಲವಾರು ರಾಜ್ಯಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಹೊಸ ವಂದೇ ಭಾರತ್ ರೈಲುಗಳು
Posted On:
06 NOV 2025 2:48PM by PIB Bengaluru
ಭಾರತದ ಆಧುನಿಕ ರೈಲು ಮೂಲಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 8 ರಂದು ಬೆಳಿಗ್ಗೆ ಸುಮಾರು 8:15ಕ್ಕೆ ವಾರಾಣಸಿಗೆ ಭೇಟಿ ನೀಡಿ, ನಾಲ್ಕು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ವಿಶ್ವದರ್ಜೆಯ ರೈಲ್ವೆ ಸೇವೆಗಳ ಮೂಲಕ ನಾಗರಿಕರಿಗೆ ಸುಲಭ, ವೇಗವಾದ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಧಾನಮಂತ್ರಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮೈಲಿಗಲ್ಲಾಗಿದೆ. ಈ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಬನಾರಸ್–ಖಜುರಾಹೊ, ಲಕ್ನೋ–ಸಹಾರನ್ ಪುರ, ಫಿರೋಜ್ ಪುರ–ದೆಹಲಿ ಮತ್ತು ಎರ್ನಾಕುಲಂ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಪ್ರಮುಖ ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ, ಈ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿವೆ, ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ ಮತ್ತು ದೇಶಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ.
ಬನಾರಸ್–ಖಜುರಾಹೊ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ನೇರ ಸಂಪರ್ಕವನ್ನು ಸ್ಥಾಪಿಸಲಿದೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶೇಷ ರೈಲುಗಳಿಗೆ ಹೋಲಿಸಿದರೆ ಸುಮಾರು 2 ಗಂಟೆ 40 ನಿಮಿಷಗಳ ಪ್ರಯಾಣ ಸಮಯವನ್ನು ಉಳಿಸುತ್ತದೆ. ಬನಾರಸ್–ಖಜುರಾಹೊ ವಂದೇ ಭಾರತ್ ಎಕ್ಸ್ ಪ್ರೆಸ್, ಭಾರತದ ಅತ್ಯಂತ ಪೂಜ್ಯನೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಾದ ವಾರಾಣಸಿ, ಪ್ರಯಾಗ್ ರಾಜ್, ಚಿತ್ರಕೂಟ ಮತ್ತು ಖಜುರಾಹೊಗಳನ್ನು ಸಂಪರ್ಕಿಸುತ್ತದೆ. ಈ ಸಂಪರ್ಕವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಬಲಪಡಿಸುವುದಲ್ಲದೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊಗೆ ಯಾತ್ರಿಕರು ಮತ್ತು ಪ್ರವಾಸಿಗರಿಗೆ ವೇಗವಾದ, ಆಧುನಿಕ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಲಕ್ನೋ–ಸಹಾರನ್ ಪುರ ವಂದೇ ಭಾರತ್ ರೈಲು ಅಂದಾಜು 7 ಗಂಟೆ 45 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲಿದ್ದು, ಸುಮಾರು 1 ಗಂಟೆ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಲಕ್ನೋ–ಸಹಾರನ್ಪುರ ವಂದೇ ಭಾರತ್ ಎಕ್ಸ್ ಪ್ರೆಸ್, ಲಕ್ನೋ, ಸೀತಾಪುರ, ಶಹಜಹಾನ್ಪುರ, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹಾರನ್ಪುರದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ರೂರ್ಕಿ ಮೂಲಕ ಪವಿತ್ರ ನಗರವಾದ ಹರಿದ್ವಾರಕ್ಕೆ ಪ್ರವೇಶವನ್ನು ಸುಧಾರಿಸುತ್ತದೆ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದಾದ್ಯಂತ ಸುಗಮ ಮತ್ತು ವೇಗದ ಇಂಟರ್ ಸಿಟಿ ಪ್ರಯಾಣವನ್ನು ಖಾತ್ರಿಪಡಿಸುವ ಮೂಲಕ, ಈ ಸೇವೆಯು ಸಂಪರ್ಕ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಫಿರೋಜ್ ಪುರ–ದೆಹಲಿ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಅತ್ಯಂತ ವೇಗದ ರೈಲು ಆಗಲಿದ್ದು, ಕೇವಲ 6 ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಫಿರೋಜ್ಪುರ–ದೆಹಲಿ ವಂದೇ ಭಾರತ್ ಎಕ್ಸ್ ಪ್ರೆಸ್, ರಾಷ್ಟ್ರೀಯ ರಾಜಧಾನಿ ಮತ್ತು ಪಂಜಾಬ್ ನ ಪ್ರಮುಖ ನಗರಗಳಾದ ಫಿರೋಜ್ ಪುರ, ಭಟಿಂಡಾ ಮತ್ತು ಪಟಿಯಾಲ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ರೈಲು ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಮತ್ತು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಹೆಚ್ಚಿನ ಏಕೀಕರಣವನ್ನು ಉತ್ತೇಜಿಸುತ್ತದೆ.
ದಕ್ಷಿಣ ಭಾರತದಲ್ಲಿ, ಎರ್ನಾಕುಲಂ–ಬೆಂಗಳೂರು ವಂದೇ ಭಾರತ್ ರೈಲು ಪ್ರಯಾಣದ ಸಮಯವನ್ನು 2 ಗಂಟೆಗಳಿಗಿಂತ ಹೆಚ್ಚು ಕಡಿಮೆ ಮಾಡುತ್ತದೆ, 8 ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಎರ್ನಾಕುಲಂ–ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ಪ್ರಮುಖ ಐ.ಟಿ. ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವೇಗವಾದ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ. ಈ ಮಾರ್ಗವು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹೆಚ್ಚಿನ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಪ್ರಾದೇಶಿಕ ಬೆಳವಣಿಗೆ ಮತ್ತು ಸಹಯೋಗವನ್ನು ಬೆಂಬಲಿಸುತ್ತದೆ.
*****
(Release ID: 2186988)
Visitor Counter : 27