ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 30-31 ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ನಡೆಯುವ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ
‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಪರಿಕಲ್ಪನೆಯನ್ನು ಚಿತ್ರಿಸುವ ಸ್ತಬ್ದಚಿತ್ರ ಪ್ರದರ್ಶನಗಳನ್ನು ಒಳಗೊಂಡ ಏಕತಾ ದಿವಸ್ ಮೆರವಣಿಗೆ ನಡೆಯಲಿದೆ
ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ: ರಾಂಪುರ್ ಹೌಂಡ್ಸ್ ಮತ್ತು ಮುಧೋಲ್ ಹೌಂಡ್ಸ್ ನಂತಹ ಭಾರತೀಯ ತಳಿಯ ನಾಯಿಗಳನ್ನು ಒಳಗೊಂಡಿರುವ ಬಿ.ಎಸ್.ಎಫ್ ಪಥಸಂಚಲನ ನಡೆಯಲಿದೆ
ಏಕತಾ ನಗರದಲ್ಲಿ 1,140 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಯೋಜನೆಗಳ ಗಮನ: ಪ್ರವಾಸಿ ಅನುಭವವನ್ನು ಹೆಚ್ಚಿಸುವುದು, ಪ್ರವೇಶಸಾಧ್ಯತೆಯನ್ನು ಸುಧಾರಿಸುವುದು ಮತ್ತು ಸುಸ್ಥಿರತೆಯ ಉಪಕ್ರಮಗಳನ್ನು ಬೆಂಬಲಿಸುವುದು
ಆರಂಬ್ 7.0ರ ಸಮಾರೋಪದಲ್ಲಿ ಪ್ರಧಾನಮಂತ್ರಿ 100ನೇ ಫೌಂಡೇಶನ್ ಕೋರ್ಸ್ನ ಅಧಿಕಾರಿ ತರಬೇತಿದಾರರೊಂದಿಗೆ ಸಂವಹನ ನಡೆಸಲಿದ್ದಾರೆ
Posted On:
29 OCT 2025 10:58AM by PIB Bengaluru
ಅಕ್ಟೋಬರ್ 30-31 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್ 30 ರಂದು ಪ್ರಧಾನಮಂತ್ರಿ ಅವರು ಕೆವಾಡಿಯಾದ ಏಕ್ತಾ ನಗರಕ್ಕೆ ಪ್ರಯಾಣಿಸಲಿದ್ದು, ಅದೇ ದಿನ ಸಂಜೆ 5:15ರ ಸುಮಾರಿಗೆ ಅಲ್ಲಿ ಇ-ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 6:30ರ ಸುಮಾರಿಗೆ, ಅವರು ಏಕ್ತಾ ನಗರದಲ್ಲಿ 1,140 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದಾರೆ.
ಅಕ್ಟೋಬರ್ 31 ರಂದು ಬೆಳಿಗ್ಗೆ 8 ಗಂಟೆಗೆ ಪ್ರಧಾನಮಂತ್ರಿ ಅವರು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ, ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯನ್ನು ಗುರುತಿಸುವ ರಾಷ್ಟ್ರೀಯ ಏಕತಾ ದಿವಸ್ ಆಚರಣೆಗಳು ನಡೆಯಲಿವೆ. ನಂತರ, ಬೆಳಿಗ್ಗೆ 10:45ರ ಸುಮಾರಿಗೆ, ಅವರು ಆರಂಭ್ 7.0 ರಲ್ಲಿ 100ನೇ ಸಾಮಾನ್ಯ ಫೌಂಡೇಶನ್ ಕೋರ್ಸ್ ನ ಅಧಿಕಾರಿ ತರಬೇತಿದಾರರೊಂದಿಗೆ ಸಂವಾದ ನಡೆಸಲಿದ್ದಾರೆ.
1ನೇ ದಿನ (30, ಅಕ್ಟೋಬರ್): ಕಾರ್ಯಕ್ರಮಗಳು
ಪ್ರಧಾನಮಂತ್ರಿ ಅವರು ಏಕ್ತಾ ನಗರದಲ್ಲಿ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ಮಾಡಲಿದ್ದಾರೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಪ್ರವಾಸಿ ಅನುಭವವನ್ನು ಹೆಚ್ಚಿಸುವುದು, ಪ್ರವೇಶಸಾಧ್ಯತೆಯನ್ನು ಸುಧಾರಿಸುವುದು ಮತ್ತು ಸುಸ್ಥಿರತೆಯ ಉಪಕ್ರಮಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ. ಒಟ್ಟು 1,140 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯೊಂದಿಗೆ, ವಿಶ್ವದ ಅತಿ ಎತ್ತರದ ಪ್ರತಿಮೆಯ ಸುತ್ತಲಿನ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ, ಹಸಿರು ಚಲನಶೀಲತೆ, ಸ್ಮಾರ್ಟ್ ಮೂಲಸೌಕರ್ಯ ಮತ್ತು ಬುಡಕಟ್ಟು ಅಭಿವೃದ್ಧಿಯನ್ನು ಉತ್ತೇಜಿಸುವ ಸರ್ಕಾರದ ದೃಷ್ಟಿಕೋನವನ್ನು ಈ ಯೋಜನೆಗಳು ಪ್ರತಿಬಿಂಬಿಸುತ್ತವೆ.
ರಾಜ್ ಪಿಪ್ಲಾದ ಬಿರ್ಸಾ ಮುಂಡಾ ಬುಡಕಟ್ಟು ವಿಶ್ವವಿದ್ಯಾಲಯ; ಗರುಡೇಶ್ವರದಲ್ಲಿ ಆತಿಥ್ಯ ಜಿಲ್ಲೆ (ಹಂತ -1); ವಾಮನ್ ವೃಕ್ಷ ವಾಟಿಕ; ಸತ್ಪುಡಾ ರಕ್ಷಣಾ ಗೋಡೆ; ಇ-ಬಸ್ ಚಾರ್ಜಿಂಗ್ ಡಿಪೋ ಮತ್ತು 25 ಎಲೆಕ್ಟ್ರಿಕ್ ಬಸ್ ಗಳು; ನರ್ಮದಾ ಘಾಟ್ ವಿಸ್ತರಣೆ; ಕೌಶಲ್ಯ ಮಾರ್ಗ; ಏಕತಾ ದ್ವಾರದಿಂದ ಶ್ರೇಷ್ಠ ಭಾರತ ಭವನದವರೆಗಿನ ನಡಿಗೆ ಮಾರ್ಗ (ಹಂತ -2), ಸ್ಮಾರ್ಟ್ ಬಸ್ ನಿಲ್ದಾಣಗಳು (ಹಂತ -2), ಅಣೆಕಟ್ಟು ಪ್ರತಿಕೃತಿ ಕಾರಂಜಿ, ಜಿ.ಎಸ್.ಇ.ಸಿ. ಕ್ವಾರ್ಟರ್ಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೆ, ಪ್ರಧಾನಮಂತ್ರಿ ಅವರು ಭಾರತದ ರಾಯಲ್ ಕಿಂಗ್‌ಡಮ್ಸ್ ಮ್ಯೂಸಿಯಂ; ವೀರ್ ಬಾಲಕ ಉದ್ಯಾನ; ಕ್ರೀಡಾ ಸಂಕೀರ್ಣ; ಮಳೆಕಾಡು ಯೋಜನೆ; ಶೂಲ್ಪನೇಶ್ವರ ಘಾಟ್ ಬಳಿ ನದಿ ಕಿನಾರೆ(ಜೆಟ್ಟಿ) ಅಭಿವೃದ್ಧಿ; ಏಕತಾ ಪ್ರತಿಮೆಯಲ್ಲಿ ಪ್ರಯಾಣಿಕರಿಗೆ ನಡೆದಾಡಲು/ ಸುತ್ತಾಡಲು ಚಲಿಸುವ ಏರು ಮೆಟ್ಟಿಲುಗಳು ಸೇರಿದಂತೆ ನಾನಾ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ 150 ರೂ. ಮುಖಬೆಲೆಯ ವಿಶೇಷ ನಾಣ್ಯ ಮತ್ತು ಅಂಚೆಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
2ನೇ ದಿನ (ಅಕ್ಟೋಬರ್ 31): ಕಾರ್ಯಕ್ರಮಗಳು
ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಅವರು ಏಕತಾ ದಿವಸ್ ಪ್ರತಿಜ್ಞೆಯನ್ನು ಬೋಧಿಸಲಿದ್ದಾರೆ ಮತ್ತು ಏಕತಾ ದಿವಸ್ ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.
ಮೆರವಣಿಗೆಯಲ್ಲಿ ವಿವಿಧ ರಾಜ್ಯ ಪೊಲೀಸ್ ಪಡೆಗಳೊಂದಿಗೆ ಬಿ.ಎಸ್.ಎಫ್, ಸಿ.ಆರ್.ಪಿ.ಎಫ್, ಸಿ.ಐ.ಎಸ್.ಎಫ್, ಐ.ಟಿ.ಬಿ.ಪಿ ಮತ್ತು ಎಸ್.ಎಸ್.ಬಿಯ ತುಕಡಿಗಳು ಸೇರಿವೆ. ಈ ವರ್ಷದ ಪ್ರಮುಖ ಆಕರ್ಷಣೆಗಳಲ್ಲಿ ರಾಂಪುರ ಹೌಂಡ್ಸ್ ಮತ್ತು ಮುಧೋಳ ಹೌಂಡ್ಸ್ನಂತಹ ಭಾರತೀಯ ತಳಿಯ ನಾಯಿಗಳು, ಗುಜರಾತ್ ಪೊಲೀಸರ ಕುದುರೆ ತುಕಡಿ, ಅಸ್ಸಾಂ ಪೊಲೀಸರ ಮೋಟಾರ್ ಸೈಕಲ್ ಡೇರ್ ಡೆವಿಲ್ ಶೋ ಮತ್ತು ಬಿ.ಎಸ್.ಎಫ್ ನ ಒಂಟೆ ತುಕಡಿ ಮತ್ತು ಒಂಟೆ ಆರೋಹಿತವಾದ ಬ್ಯಾಂಡ್ ತಂಡಗಳು ಸೇರಿದಂತೆ ಬಿ.ಎಸ್.ಎಫ್ ಮೆರವಣಿಗೆಯ ತುಕಡಿ ಸೇರಿದೆ.
ಮೆರವಣಿಗೆಯಲ್ಲಿ ಸಿ.ಆರ್.ಪಿ.ಎಫ್ ನ ಐದು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರು ಮತ್ತು ಜಾರ್ಖಂಡ್ ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಬಿ.ಎಸ್.ಎಫ್ ನ ಹದಿನಾರು ಶೌರ್ಯ ಪದಕ ವಿಜೇತರನ್ನು ಗೌರವಿಸಲಾಗುವುದು. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಿ.ಎಸ್.ಎಫ್ ಸಿಬ್ಬಂದಿಯ ಶೌರ್ಯಕ್ಕಾಗಿ ಅವರನ್ನು ಸಹ ಗುರುತಿಸಲಾಗುತ್ತದೆ.
ಈ ವರ್ಷದ ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯಲ್ಲಿ ಎನ್.ಎಸ್.ಜಿ, ಎನ್.ಡಿ.ಆರ್.ಫಿ., ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ, ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರಾಖಂಡ ಮತ್ತು ಪುದುಚೇರಿಯಿಂದ ಹತ್ತು ಸ್ತಬ್ದಚಿತ್ರ ಪ್ರದರ್ಶನಗಳನ್ನು ಪ್ರದರ್ಶಿಸಲಾಗುವುದು, ಇವು 'ವೈವಿಧ್ಯತೆಯಲ್ಲಿ ಏಕತೆ' ಎಂಬ ಪರಿಕಲ್ಪನೆಯನ್ನು ಚಿತ್ರಿಸುತ್ತವೆ. 900 ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುವ ಭಾರತದ ಶಾಸ್ತ್ರೀಯ ನೃತ್ಯಗಳನ್ನು ಪ್ರದರ್ಶಿಸುತ್ತದೆ. ಈ ವರ್ಷದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಗಳು ರಾಷ್ಟ್ರವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿವೆ.
ಆರಂಭ 7.0ರ ಮುಕ್ತಾಯದಲ್ಲಿ ಪ್ರಧಾನಮಂತ್ರಿ ಅವರು 100ನೇ ಫೌಂಡೇಶನ್ ಕೋರ್ಸ್ನ ಅಧಿಕಾರಿ ವರ್ಗದ ತರಬೇತಿದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಆರಂಭದ 7ನೇ ಆವೃತ್ತಿಯು "ಆಡಳಿತವನ್ನು ಮರುಕಲ್ಪಿಸುವುದು" ಎಂಬ ವಿಷಯದ ಮೇಲೆ ನಡೆಯುತ್ತಿದೆ. 100ನೇ ಫೌಂಡೇಶನ್ ಕೋರ್ಸ್ ಭಾರತದ 16 ನಾಗರಿಕ ಸೇವೆಗಳು ಮತ್ತು ಭೂತಾನ್ ನ 3 ನಾಗರಿಕ ಸೇವೆಗಳಿಂದ 660 ಅಧಿಕಾರಿ ತರಬೇತಿದಾರರನ್ನು ಒಳಗೊಂಡಿದೆ.
****
(Release ID: 2183651)
Visitor Counter : 12
Read this release in:
Bengali
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam