ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಂಬೈನಲ್ಲಿ 'ಭಾರತ ಸಾಗರ ಸಪ್ತಾಹ - 2025' (ಇಂಡಿಯಾ ಮ್ಯಾರಿಟೈಮ್ ವೀಕ್) ಅನ್ನು ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಾಗರ ದೃಷ್ಟಿಕೋನವು ಭದ್ರತೆ, ಸುಸ್ಥಿರತೆ ಮತ್ತು ಸ್ವಾವಲಂಬನೆ ಎಂಬ ಮೂರು ಸ್ತಂಭಗಳನ್ನು ಆಧರಿಸಿದೆ
ಇದು ಭಾರತದ ಕಡಲ ಕ್ಷಣವಾಗಿದ್ದು, ಗೇಟ್ ವೇ ಆಫ್ ಇಂಡಿಯಾವನ್ನು ವಿಶ್ವದ ಗೇಟ್ ವೇ ಆಗಿ ಪರಿವರ್ತಿಸುತ್ತಿದೆ
ಮೋದಿ ಸರ್ಕಾರವು ಸಮುದ್ರ ವಲಯದಲ್ಲಿ ಕೈಗೊಂಡ ಸುಧಾರಣೆಗಳಿಂದಾಗಿ, ಭಾರತವು ಇಂದು ಜಾಗತಿಕ ಕಡಲ ನಕ್ಷೆಯಲ್ಲಿ ಉದಯೋನ್ಮುಖ ಶಕ್ತಿಯಾಗಿದೆ
ತನ್ನ ಕಡಲ ಸ್ಥಾನ, ಸ್ಥಿರ ಪ್ರಜಾಪ್ರಭುತ್ವ ಮತ್ತು ನೌಕಾ ಸಾಮರ್ಥ್ಯಗಳನ್ನು ಬಳಸಿಕೊಂಡು, ಭಾರತವು ಇಂಡೋ-ಪೆಸಿಫಿಕ್ ಮತ್ತು ಜಾಗತಿಕ ದಕ್ಷಿಣದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ, ಅಭಿವೃದ್ಧಿ, ಭದ್ರತೆ ಮತ್ತು ಪರಿಸರ ಪ್ರಗತಿಯನ್ನು ಉತ್ತೇಜಿಸುತ್ತಿದೆ
ಭಾರತ ಕಡಲ ಉದ್ಯಮದಲ್ಲಿ 2047 ರ ವೇಳೆಗೆ ಭಾರತವನ್ನು ಅಗ್ರಸ್ಥಾನದಲ್ಲಿ ಇರಿಸುವ ಗುರಿಯನ್ನು ಸಾಧಿಸುವಲ್ಲಿ 'ಭಾರತ ಸಾಗರ ಸಪ್ತಾಹ - 2025' ಶೃಂಗಸಭೆಯು ಪ್ರಮುಖ ಪಾತ್ರ ವಹಿಸುತ್ತದೆ
ಪ್ರಕೃತಿಯೊಂದಿಗೆ ಸಮತೋಲನವನ್ನು ಕಾಯ್ದುಕೊಳ್ಳುವುದರೊಂದಿಗೆ ಅಭಿವೃದ್ಧಿಯನ್ನು ವೇಗಗೊಳಿಸುವ ಹಸಿರು ಕಡಲ ಭವಿಷ್ಯವನ್ನು ನಿರ್ಮಿಸುವುದು ಭಾರತದ ಗುರಿಯಾಗಿದೆ
ಜೀವನೋಪಾಯಕ್ಕಾಗಿ ಸಮುದ್ರವನ್ನು ಅವಲಂಬಿಸಿರುವ ಸಣ್ಣ ದ್ವೀಪ ರಾಜ್ಯಗಳು ಮತ್ತು ಜಾಗತಿಕ ದಕ್ಷಿಣ ದೇಶಗಳನ್ನು ಗಮನದಲ್ಲಿಟ್ಟುಕೊಂಡು, ಭಾರತವು ಹಸಿರು, ಸಮೃದ್ಧ ಮತ್ತು ಹಂಚಿಕೆಯ ಸಾಗರವನ್ನು ಸೃಷ್ಟಿಸುವ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ
ಕಳೆದ 11 ವರ್ಷಗಳಲ್ಲಿ, ಮೋದಿ ಅವರು ಭಾರತದ ಸಮುದ್ರ ವಲಯವನ್ನು ರಾಷ್ಟ್ರೀಯ ಶಕ್ತಿ, ಪ್ರಾದೇಶಿಕ ಸ್ಥಿರತೆ ಮತ್ತು ಜಾಗತಿಕ ಸಮೃದ್ಧಿಯ ಮೂಲವಾಗಿ ವ್ಯಾಖ್ಯಾನಿಸಿದ್ದಾರೆ
ಪ್ರಧಾನಮಂತ್ರಿ ಮೋದಿಯವರ ಕಡಲ ನೀತಿಯು ಮಹಾಸಾಗರ - MAHASAGAR (ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ) ಆಗಿ ವಿಕಸನಗೊಂಡಿದೆ, ಇದು ಭಾರತದ ವಿಸ್ತರಿಸುತ್ತಿರುವ ಜಾಗತಿಕ ಹೆಜ್ಜೆಗುರುತಿನ ಸಂಕೇತವಾಗಿದೆ
"ಸಾಗರ್" ಅನ್ನು "ಮಹಾಸಾಗರ್" ಆಗಿ ಪರಿವರ್ತಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವು ಭಾರತವನ್ನು ಸಮುದ್ರ ವಲಯದಲ್ಲಿ ಜಾಗತಿಕ ನಾಯಕನಾಗುವ ಗುರಿಯನ್ನು ಸಾಧಿಸಲು ಪ್ರೇರೇಪಿಸುತ್ತದೆ
ಭಾರತದ ಸಮುದ್ರ ವಲಯದಲ್ಲಿನ 23.7 ಲಕ್ಷ ಚದರ ಕಿಲೋಮೀಟರ್ ವಿಶೇಷ ಆರ್ಥಿಕ ವಲಯ (ಇಇಝಡ್) ವಿಶ್ವಾದ್ಯಂತ ಹೂಡಿಕೆದಾರರು ಮತ್ತು ತಯಾರಕರನ್ನು ಆಕರ್ಷಿಸುತ್ತಿದೆ
Posted On:
27 OCT 2025 4:37PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಹಾರಾಷ್ಟ್ರದ ಮುಂಬೈನಲ್ಲಿ 'ಭಾರತ ಸಾಗರ ಸಪ್ತಾಹ - 2025' (ಇಂಡಿಯಾ ಮ್ಯಾರಿಟೈಮ್ ವೀಕ್) ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ಏಕನಾಥ್ ಶಿಂಧೆ ಮತ್ತು ಶ್ರೀ ಅಜಿತ್ ಪವಾರ್, ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಮುಂಬೈ ವಿಶ್ವವಿಖ್ಯಾತ ಗೇಟ್‌ವೇ ಆಫ್ ಇಂಡಿಯಾದ ನೆಲೆಯಾಗಿದೆ ಎಂದು ಹೇಳಿದರು. ಈ ಕ್ಷಣವು ಭಾರತದ ಕಡಲ ಕ್ಷಣವಾಗಿದ್ದು, ಗೇಟ್‌ವೇ ಆಫ್ ಇಂಡಿಯಾವನ್ನು ವಿಶ್ವದ ಗೇಟ್‌ವೇ ಆಗಿ ಪರಿವರ್ತಿಸುತ್ತಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ, ಕಡಲ ಆರ್ಥಿಕತೆಯಲ್ಲಿ ಜಾರಿಗೆ ತಂದ ರಚನಾತ್ಮಕ ಸುಧಾರಣೆಗಳಿಂದಾಗಿ ಭಾರತವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಜಾಗತಿಕ ಕಡಲ ನಕ್ಷೆಯಲ್ಲಿ ದೃಢವಾಗಿ ನಿಂತಿದೆ ಎಂದು ಕಡಲ ಶೃಂಗಸಭೆಗಳು ಸಾಬೀತುಪಡಿಸಿವೆ ಎಂದು ಅವರು ಹೇಳಿದರು.
ನಮ್ಮ ಕರಾವಳಿ 11,000 ಕಿಲೋಮೀಟರ್ ಗಳಿಗೂ ಹೆಚ್ಚುುದ್ದವಾಗಿದೆ ಎಂಬ ಅಂಶದಿಂದಲೇ ಭಾರತದ ಕಡಲ ಶಕ್ತಿ ಮತ್ತು ಕಾರ್ಯತಂತ್ರದ ಸ್ಥಳವು ಸ್ಪಷ್ಟವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 13 ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಿಡಿಪಿಗೆ ಸರಿಸುಮಾರು 60 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ. 23.7 ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ವಿಶೇಷ ಆರ್ಥಿಕ ವಲಯ (ಇಇಝಡ್) ವಿಶ್ವಾದ್ಯಂತ ಹೂಡಿಕೆದಾರರು ಮತ್ತು ತಯಾರಕರನ್ನು ಆಕರ್ಷಿಸುತ್ತಿದೆ ಮತ್ತು ಈ ಕಡಲ ರಾಜ್ಯಗಳಲ್ಲಿ ಸುಮಾರು 800 ಮಿಲಿಯನ್ ಜನರು ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು. ಹಿಂದೂ ಮಹಾಸಾಗರ ಪ್ರದೇಶದ (ಐಒಆರ್) 38 ದೇಶಗಳು ಜಾಗತಿಕ ರಫ್ತಿಗೆ ಸರಿಸುಮಾರು 12 ಪ್ರತಿಶತದಷ್ಟು ಕೊಡುಗೆ ನೀಡುತ್ತಿವೆ ಎಂದು ಶ್ರೀ ಶಾ ಹೇಳಿದರು. ಈ ಶೃಂಗಸಭೆಯ ಮೂಲಕ, ಜಾಗತಿಕ ಹೂಡಿಕೆದಾರರು ಮತ್ತು ಕಡಲ ಉದ್ಯಮದ ಚಾಂಪಿಯನ್ ಗಳಿಗೆ ನಾವು ಈ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದೇವೆ ಎಂದು ಅವರು ಹೇಳಿದರು.

ತನ್ನ ಕಡಲ ಸ್ಥಾನ, ಸ್ಥಿರ ಪ್ರಜಾಪ್ರಭುತ್ವ ಮತ್ತು ನೌಕಾ ಸಾಮರ್ಥ್ಯಗಳನ್ನು ಬಳಸಿಕೊಂಡು, ಭಾರತವು ಇಂಡೋ-ಪೆಸಿಫಿಕ್ ಮತ್ತು ಜಾಗತಿಕ ದಕ್ಷಿಣದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ, ಅಭಿವೃದ್ಧಿ, ಭದ್ರತೆ ಮತ್ತು ಪರಿಸರ ಪ್ರಗತಿಯನ್ನು ಉತ್ತೇಜಿಸುತ್ತಿದೆ ಎಂದು ಶ್ರೀ ಶಾ ಹೇಳಿದರು. ಭಾರತದ ಕಡಲ ಇತಿಹಾಸವು ಸುಮಾರು 5,000 ವರ್ಷಗಳಷ್ಟು ಹಳೆಯದು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಹೊಸ ಕಡಲ ಇತಿಹಾಸವನ್ನು ರಚಿಸಲು ಸಜ್ಜಾಗಿದೆ ಎಂದು ಅವರು ಹೇಳಿದರು. ಈ ಸಮ್ಮೇಳನದಲ್ಲಿ 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ಉಪಸ್ಥಿತಿಯು ಭಾರತದ ಕಡಲ ಪರಂಪರೆಯು ಜಾಗತಿಕ ಪಾಲುದಾರಿಕೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೇಂದ್ರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ಸಾಗರ ಸಪ್ತಾಹವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ಪ್ರತಿಷ್ಠಿತ ಸಾಗರ ಸಂವಾದ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ 2025 ರ ಶೃಂಗಸಭೆಯು 2047 ರ ವೇಳೆಗೆ ಸಾಗರ ಉದ್ಯಮದಲ್ಲಿ ಭಾರತದ ಪ್ರಮುಖ ಸ್ಥಾನವನ್ನು ಭದ್ರಪಡಿಸುವ ಗುರಿಯನ್ನು ಸಾಧಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ. ಈ ವರ್ಷದ ಆವೃತ್ತಿಯಲ್ಲಿ 100 ಕ್ಕೂ ಹೆಚ್ಚು ದೇಶಗಳಿಂದ 350 ಕ್ಕೂ ಹೆಚ್ಚು ಭಾಷಣಕಾರರು, 500 ಕ್ಕೂ ಹೆಚ್ಚು ಕಂಪನಿಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, ಇದು 10 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತವು ಸ್ಪರ್ಧೆಯ ಬದಲಿಗೆ ಪರಸ್ಪರ ಸಹಕಾರದಲ್ಲಿ ನಂಬಿಕೆ ಇಡುತ್ತದೆ ಎಂದು ಗೃಹ ಸಚಿವರು ಒತ್ತಿ ಹೇಳಿದರು. ಪರಸ್ಪರ ಸಹಕಾರದ ಮೂಲಕ, ಇಡೀ ದೇಶದ ಕಡಲ ಉದ್ಯಮವನ್ನು ಜಾಗತಿಕ ಕಡಲ ಉದ್ಯಮದೊಂದಿಗೆ ಸಂಪರ್ಕಿಸಲು ನಾವು ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಡಲ ದೃಷ್ಟಿಕೋನವು ಭದ್ರತೆ, ಸ್ಥಿರತೆ ಮತ್ತು ಸ್ವಾವಲಂಬನೆ ಎಂಬ ಮೂರು ಸ್ತಂಭಗಳನ್ನು ಆಧರಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಾಗರಮಾಲಾ, ನೀಲಿ ಆರ್ಥಿಕತೆ ಮತ್ತು ಹಸಿರು ಕಡಲು ದೃಷ್ಟಿಕೋನದಂತಹ ಉಪಕ್ರಮಗಳ ಮೂಲಕ, ಜಾಗತಿಕ ಹಡಗು ನಿರ್ಮಾಣ ಉದ್ಯಮದಲ್ಲಿ ಭಾರತವನ್ನು ಅಗ್ರ ಐದು ದೇಶಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಹೊಸ ಮೆಗಾ ಮತ್ತು ಡೀಪ್-ಡ್ರಾಫ್ಟ್ ಬಂದರುಗಳನ್ನು ಸಹ ನಿರ್ಮಿಸುತ್ತಿದ್ದೇವೆ. ಬಂದರು ನಿರ್ವಹಣೆಗಾಗಿ ವರ್ಷಕ್ಕೆ 10,000 ಮಿಲಿಯನ್ ಮೆಟ್ರಿಕ್ ಟನ್ ಗುರಿಯನ್ನು ನಿಗದಿಪಡಿಸಲಾಗಿದೆ ಮತ್ತು ಬಂದರು ಸಾರಿಗೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್, ಪೂರ್ವ ಸಾಗರ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನಂತಹ ಸಂಪರ್ಕ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.
ಕಳೆದ 11 ವರ್ಷಗಳಲ್ಲಿ, ಪ್ರಧಾನಮಂತ್ರಿ ಮೋದಿ ಅವರು ಭಾರತದ ಕಡಲ ವಲಯವನ್ನು ರಾಷ್ಟ್ರೀಯ ಶಕ್ತಿ, ಪ್ರಾದೇಶಿಕ ಸ್ಥಿರತೆ ಮತ್ತು ಜಾಗತಿಕ ಸಮೃದ್ಧಿಯ ಮೂಲವಾಗಿ ವ್ಯಾಖ್ಯಾನಿಸಿದ್ದಾರೆ ಮತ್ತು ಈ ಮೂರು ಉದ್ದೇಶಗಳನ್ನು ಸಾಧಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು, ಜಾಗತಿಕ ವ್ಯಾಪಾರದ ಮೂರನೇ ಎರಡರಷ್ಟು ಭಾಗ ಇಂಡೋ-ಪೆಸಿಫಿಕ್ ಕಡಲ ಮಾರ್ಗದ ಮೂಲಕ ಹಾದುಹೋಗುತ್ತದೆ ಮತ್ತು ಭಾರತದ 90 ಪ್ರತಿಶತ ವ್ಯಾಪಾರವು ಕಡಲ ಮಾರ್ಗಗಳ ಮೂಲಕ ನಡೆಯುತ್ತದೆ. ಪ್ರಧಾನಿ ಮೋದಿಯವರ ಕಡಲ ನೀತಿಯು ಮಹಾಸಾಗರ್ – MAHASAGAR (ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ) ಆಗಿ ವಿಕಸನಗೊಂಡಿದೆ, ಇದು ಭಾರತದ ಬೆಳೆಯುತ್ತಿರುವ ಜಾಗತಿಕ ಹೆಜ್ಜೆಗುರುತಿನ ಸಂಕೇತವಾಗಿದೆ ಎಂದು ಅವರು ಹೇಳಿದರು. "ಸಾಗರ್" ಅನ್ನು "ಮಹಾಸಾಗರ್" ಆಗಿ ಪರಿವರ್ತಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವು 2047 ರ ವೇಳೆಗೆ ಈ ವಲಯದಲ್ಲಿ ಜಾಗತಿಕ ನಾಯಕನಾಗಲು ಭಾರತವನ್ನು ಮುನ್ನಡೆಸುತ್ತದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಇದನ್ನು ಸಾಧಿಸಲು, ಮೋದಿ ಸರ್ಕಾರ ಬಜೆಟ್ ಅನ್ನು ಆರು ಪಟ್ಟು ಹೆಚ್ಚಿಸಿದೆ, 40 ಮಿಲಿಯನ್ ಡಾಲರ್ ಗಳಿಂದ ಇಂದು 230 ಮಿಲಿಯನ್ ಡಾಲರ್ ಗಳಿಗೆ ಏರಿಸಿದೆ ಎಂದು ಅವರು ಹೇಳಿದರು.

ಸಾಗರಮಾಲಾ ಯೋಜನೆಯಡಿಯಲ್ಲಿ, ಮಾರ್ಚ್ 2025 ರೊಳಗೆ 70 ಶತಕೋಟಿ ಡಾಲರ್ ಮೌಲ್ಯದ 839 ಯೋಜನೆಗಳನ್ನು ಪೂರ್ಣಗೊಳಿಸಲು ಗುರುತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅವುಗಳಲ್ಲಿ 17 ಶತಕೋಟಿ ಡಾಲರ್ ಮೌಲ್ಯದ 272 ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. 5 ಶತಕೋಟಿ ಡಾಲರ್ ಮೌಲ್ಯದ ಗ್ರೇಟ್ ನಿಕೋಬಾರ್ ಯೋಜನೆಯು ನಿರ್ಮಾಣ ಹಂತದಲ್ಲಿದೆ, ಇದು ಭಾರತದ ಕಡಲ ಜಾಗತಿಕ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, 200 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ, ಕೊಚ್ಚಿನ್ ಶಿಪ್‌ಯಾರ್ಡ್ ನಲ್ಲಿ ಭಾರತದ ಅತಿದೊಡ್ಡ ಡಾಕ್ ಅನ್ನು ನಿರ್ಮಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ಇದಲ್ಲದೆ, ಗುಜರಾತಿನಲ್ಲಿ ಕಡಲ ಪರಂಪರೆಯ ಸಂಕೀರ್ಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಗತ್ಯ ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ, ಹಳೆಯ ಭಾರತೀಯ ಕಾನೂನುಗಳನ್ನು ಸಹ ಸುಧಾರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. 2025 ರಲ್ಲಿ, ನಮ್ಮ ಸಂಸತ್ತು 117 ವರ್ಷಗಳಷ್ಟು ಹಳೆಯದಾದ ಭಾರತೀಯ ಬಂದರುಗಳ ಮಸೂದೆಯನ್ನು ಸಮಕಾಲೀನ ಅಗತ್ಯಗಳು ಮತ್ತು ಜಾಗತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸಲು ನವೀಕರಿಸಿತು. ಪ್ರಮುಖ ಬಂದರು ಪ್ರಾಧಿಕಾರಗಳ ಕಾಯ್ದೆ, 2021 ಮೂಲಕ, ಬಂದರುಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಮತ್ತು ಅವುಗಳ ಸಾಂಸ್ಥಿಕ ಚೌಕಟ್ಟನ್ನು ಆಧುನೀಕರಿಸಲು ನಾವು ದಾರಿ ಮಾಡಿಕೊಟ್ಟಿದ್ದೇವೆ. ರಾಷ್ಟ್ರೀಯ ಜಲಮಾರ್ಗ ಕಾಯ್ದೆ, 2016 ರ ಅಡಿಯಲ್ಲಿ 106 ಹೊಸ ಜಲಮಾರ್ಗಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಭದ್ರತೆ, ಕರಾವಳಿ ರಕ್ಷಣೆ ಮತ್ತು ಮೀನುಗಾರರ ಸುರಕ್ಷತೆಯನ್ನು ಹೆಚ್ಚಿಸಲು ಮೋದಿ ಸರ್ಕಾರವು ನೀಲಿ ಆರ್ಥಿಕತೆಯ ಅಭಿವೃದ್ಧಿಯನ್ನು ಖಚಿತಪಡಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ ದಶಕದಲ್ಲಿ, ಕರಾವಳಿ ಸಾಗಣೆ ಶೇಕಡಾ 118 ರಷ್ಟು ಬೆಳೆದಿದೆ ಮತ್ತು ಸರಕು ನಿರ್ವಹಣೆ ಶೇಕಡಾ 150 ರಷ್ಟು ಹೆಚ್ಚಾಗಿದೆ. ನಾವು ಟರ್ನ್-ಅರೌಂಡ್-ಟೈಮ್ (ಟಿಎಟಿ) ಅನ್ನು ಕಡಿಮೆ ಮಾಡಿದ್ದೇವೆ, ಅದು ಜಾಗತಿಕ ಮಾನದಂಡಗಳಿಗೆ ಹತ್ತಿರವಾಗಿದೆ ಎಂದು ಅವರು ಹೇಳಿದರು. ಕಡಲ ವಲಯದಲ್ಲಿ ವೃತ್ತಾಕಾರದ (ಮರುಬಳಕೆ) ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಹಡಗು ನಿರ್ಮಾಣವನ್ನು ಮುನ್ನಡೆಸಲು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಕೃತಿಯೊಂದಿಗೆ ಸಮತೋಲನವನ್ನು ಕಾಯ್ದುಕೊಂಡು ಅಭಿವೃದ್ಧಿಯನ್ನು ವೇಗಗೊಳಿಸುವ ಹಸಿರು ಕಡಲ ಭವಿಷ್ಯವನ್ನು ಸೃಷ್ಟಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಗೃಹ ಸಚಿವರು ಹೇಳಿದರು. ಸಣ್ಣ ದ್ವೀಪ ರಾಜ್ಯಗಳು ಮತ್ತು ಜಾಗತಿಕ ದಕ್ಷಿಣದ ಅನೇಕ ದೇಶಗಳು ತಮ್ಮ ಜೀವನೋಪಾಯ ಮತ್ತು ಉಳಿವಿಗಾಗಿ ಸಾಗರವನ್ನು ಅವಲಂಬಿಸಿವೆ ಎಂಬುದನ್ನು ಭಾರತ ಮರೆಯುವುದಿಲ್ಲ ಎಂದು ಅವರು ಹೇಳಿದರು. ಈ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯು ಅಸ್ತಿತ್ವದ ಸಮಸ್ಯೆಯಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಹಸಿರು, ಸಮೃದ್ಧ ಮತ್ತು ಹಂಚಿಕೆಯ ಸಾಗರವನ್ನು ಸೃಷ್ಟಿಸುವ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ ಎಂದು ಶ್ರೀ ಶಾ ಹೇಳಿದರು.
*****
(Release ID: 2183014)
Visitor Counter : 7
Read this release in:
Odia
,
हिन्दी
,
Malayalam
,
English
,
Urdu
,
Marathi
,
Bengali
,
Assamese
,
Punjabi
,
Gujarati
,
Tamil
,
Telugu