ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಷ್ಟ್ರೀಯ ಬೀಜ ನಿಗಮದ (NSC) ಅತ್ಯಾಧುನಿಕ ಬೀಜ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು
ಬರೇಲಿ, ಧಾರವಾಡ, ಹಾಸನ, ಸೂರತಗಢ್ ಮತ್ತು ರಾಯಚೂರಿನಲ್ಲಿರುವ ಐದು ಎನ್.ಎಸ್.ಸಿ ಬೀಜ ಸಂಸ್ಕರಣಾ ಘಟಕಗಳನ್ನು ಶ್ರೀ ಶಿವರಾಜ್ ಸಿಂಗ್ ಅವರು ಆನ್‌ಲೈನ್ ಮೂಲಕ ಉದ್ಘಾಟಿಸಿದರು
ರೈತರಿಗಾಗಿ ಬೀಜ ನಿರ್ವಹಣೆ 2.0 ವ್ಯವಸ್ಥೆ ಮತ್ತು ಆನ್‌ಲೈನ್ ಬೀಜ ಖರೀದಿ ವೇದಿಕೆ ಆರಂಭ: ಶ್ರೀ ಚೌಹಾಣ್
ಸುಧಾರಿತ ತಂತ್ರಜ್ಞಾನ-ಸುಸಜ್ಜಿತ ಘಟಕವು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ ಮತ್ತು ಬೀಜ ಉತ್ಪಾದನಾ ಗುಣಮಟ್ಟ ಹೆಚ್ಚಿಸುತ್ತದೆ: ಶ್ರೀ ಶಿವರಾಜ್ ಸಿಂಗ್
ಕೃಷಿಯಲ್ಲಿ ಬೀಜಗಳು ಅತ್ಯಂತ ಪ್ರಮುಖ ಮೂಲ ಸಾಮಗ್ರಿಯಾಗಿದೆ; ಉತ್ಪಾದನೆ ಹೆಚ್ಚಿಸಲು ಗುಣಮಟ್ಟದ ಬೀಜಗಳು ಅತ್ಯಗತ್ಯ: ಶ್ರೀ ಚೌಹಾಣ್
ರಾಷ್ಟ್ರೀಯ ಬೀಜ ನಿಗಮದ ಪಾತ್ರ ಕೇವಲ ಜೀವನೋಪಾಯ ಗಳಿಸುವುದಲ್ಲ, ರಾಷ್ಟ್ರದ ಧಾನ್ಯ ಭಂಡಾರಗಳನ್ನು ತುಂಬುವುದಾಗಿದೆ: ಕೇಂದ್ರ ಕೃಷಿ ಸಚಿವರು
ಉತ್ತಮ ಗುಣಮಟ್ಟದ ಬೀಜಗಳು ಸಣ್ಣ ರೈತರಿಗೆ ತಲುಪಬೇಕು; ಎನ್.ಎಸ್.ಸಿ ಸ್ಪಷ್ಟವಾದ ಮಾರ್ಗಸೂಚಿಯೊಂದಿಗೆ ಕೆಲಸ ಮಾಡಬೇಕು: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್
Posted On:
27 OCT 2025 4:06PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಪೂಸಾ ಸಂಕೀರ್ಣದಲ್ಲಿ ರಾಷ್ಟ್ರೀಯ ಬೀಜ ನಿಗಮದ (NSC) ನೂತನವಾಗಿ ಸ್ಥಾಪಿಸಲಾದ ಅತ್ಯಾಧುನಿಕ ತರಕಾರಿ ಮತ್ತು ಹೂವಿನ ಬೀಜ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಅವರು ಬರೇಲಿ, ಧಾರವಾಡ, ಹಾಸನ, ಸೂರತಗಢ ಮತ್ತು ರಾಯಚೂರಿನಲ್ಲಿರುವ ಐದು ಎನ್.ಎಸ್.ಸಿ ಬೀಜ ಸಂಸ್ಕರಣಾ ಘಟಕಗಳನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿದರು.

ನವದೆಹಲಿಯ ಪೂಸಾದಲ್ಲಿರುವ ಬೀಜ್ ಭವನದ ತರಕಾರಿ ಬೀಜ ಸಂಸ್ಕರಣಾ ಘಟಕವು ಗಂಟೆಗೆ 1 ಟನ್ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ, ಆದರೆ ಇತರ ಐದು ಎನ್.ಎಸ್.ಸಿ ಘಟಕಗಳು ತಲಾ ಗಂಟೆಗೆ 4 ಟನ್ ಸಾಮರ್ಥ್ಯ ಹೊಂದಿವೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಮತ್ತು ದೇಶಾದ್ಯಂತ ಬೀಜ ಉತ್ಪಾದನೆಯ ಗುಣಮಟ್ಟ ಹೆಚ್ಚಿಸಲು ಈ ಸೌಲಭ್ಯಗಳು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿವೆ.

ಕಾರ್ಯಕ್ರಮದ ವೇಳೆ ಶ್ರೀ ಚೌಹಾಣ್ ಅವರು 'ಬೀಜ ನಿರ್ವಹಣೆ 2.0' (ಸೀಡ್ ಮ್ಯಾನೇಜ್ಮೆಂಟ್ 2.0) ವ್ಯವಸ್ಥೆ ಮತ್ತು ರೈತರಿಗಾಗಿ ಆನ್‌ಲೈನ್ ಬೀಜ ಖರೀದಿ ವೇದಿಕೆಯನ್ನು ಸಹ ಉದ್ಘಾಟಿಸಿದರು. ಈ ವೇದಿಕೆಯ ಮೂಲಕ, ರೈತರು ಇನ್ನು ಮುಂದೆ ತಮಗೆ ಬೇಕಾದ ಬೀಜಗಳನ್ನು ಆನ್‌ಲೈನ್ ನಲ್ಲಿ ಖರೀದಿ ಮಾಡಬಹುದಾಗಿದ್ದು, ಇದು ಹೆಚ್ಚಿನ ಪಾರದರ್ಶಕತೆ ಮತ್ತು ಲಭ್ಯತೆಯನ್ನು ಖಚಿತಪಡಿಸುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗುಣಮಟ್ಟದ ಬೀಜಗಳು ತಲುಪುವುದು ಬಹಳ ಮುಖ್ಯ ಎಂದು ಅವರು ಉಲ್ಲೇಖಿಸಿದರು.

ಈ ಹೊಸ ಸೌಲಭ್ಯಗಳು ಉತ್ತಮ ಗುಣಮಟ್ಟದ ಬೀಜಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ, ಇದು ಕೃಷಿ ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಶ್ರೀ ಚೌಹಾಣ್ ಅವರು ತಿಳಿಸಿದರು. "ಈ ಹೊಸ ಘಟಕಗಳು ರೈತರ ಅಗತ್ಯತೆಗಳನ್ನು ಪೂರೈಸುತ್ತವೆ, ಇದು ಅತ್ಯಂತ ಮುಖ್ಯವಾಗಿದೆ. ಇತ್ತೀಚೆಗೆ ನಡೆಸಲಾದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಸಂದರ್ಭದಲ್ಲಿ, ಸ್ವೀಕರಿಸಿದ ಗರಿಷ್ಠ ದೂರುಗಳು ನಕಲಿ ಮತ್ತು ಕಳಪೆ ಗುಣಮಟ್ಟದ ಬೀಜಗಳಿಗೆ ಸಂಬಂಧಿಸಿದ್ದವು. ಆದ್ದರಿಂದ, ಗುಣಮಟ್ಟದ ಬೀಜಗಳ ಪೂರೈಕೆ ಖಚಿತಪಡಿಸುವುದು ಅತ್ಯಗತ್ಯ, ಮತ್ತು ಇದರಲ್ಲಿ ಎನ್.ಎಸ್.ಸಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಕೇಂದ್ರ ಸಚಿವರು ತಿಳಿಸಿದರು.

ಎನ್.ಎಸ್.ಸಿ ತಂಡವನ್ನು ಶ್ಲಾಘಿಸಿದ ಕೇಂದ್ರ ಸಚಿವರು, ಈ ಉಪಕ್ರಮವನ್ನು ಸ್ವಾವಲಂಬಿ ಕೃಷಿ ವ್ಯವಸ್ಥೆಯತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದರು. ಕೇವಲ ಜೀವನೋಪಾಯ ಗಳಿಸುವುದಷ್ಟೇ ಅಲ್ಲ, ರಾಷ್ಟ್ರದ ಧಾನ್ಯ ಭಂಡಾರಗಳನ್ನು ತುಂಬುವುದು ಕೂಡ ಎನ್.ಎಸ್.ಸಿ ಯ ಪಾತ್ರವಾಗಿದೆ ಎಂದು ಅವರು ಹೇಳಿದರು.
ರೈತರಿಗೆ ತಮ್ಮ ಸೇವೆಗಳನ್ನು ಹೆಚ್ಚು ಸುಲಭವಾಗಿ ತಲುಪಿಸಲು ಪ್ರಾದೇಶಿಕ ಭಾಷೆಗಳಲ್ಲಿ ನಾವೀನ್ಯತೆಗಳನ್ನು ಕೈಗೊಳ್ಳಬೇಕು ಮತ್ತು ಖಾಸಗಿ ಕಂಪನಿಗಳ ಸ್ವೇಚ್ಛಾಚಾರದ ಪದ್ಧತಿಗಳಿಗೆ ಕಡಿವಾಣ ಹಾಕಬೇಕು ಎಂದು ಶ್ರೀ ಚೌಹಾಣ್ ಅವರು ನಿಗಮಕ್ಕೆ ಒತ್ತಾಯಿಸಿದರು. "ಖಾಸಗಿ ವಲಯದ ಪಾತ್ರವೇ ಬೇರೆ, ಆದರೆ ಸಾರ್ವಜನಿಕ ನಿಗಮಗಳ ಪ್ರಾಮುಖ್ಯತೆಯೇ ಬೇರೆ. ರಾಜ್ಯ ಬೀಜ ಅಭಿವೃದ್ಧಿ ನಿಗಮಗಳ ಕಾರ್ಯನಿರ್ವಹಣೆಯೂ ಸುಧಾರಿಸಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಎನ್.ಎಸ್.ಸಿ ಸ್ಪಷ್ಟವಾದ ಮಾರ್ಗಸೂಚಿಯೊಂದಿಗೆ ಕೆಲಸ ಮಾಡಬೇಕು" ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್ ಚತುರ್ವೇದಿ, ಎನ್.ಎಸ್.ಸಿ ಸಿಎಂಡಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಮನೀಂದರ್ ಕೌರ್ ದ್ವಿವೇದಿ, ಜಂಟಿ ಕಾರ್ಯದರ್ಶಿ ಶ್ರೀ ಅಜಿತ್ ಕುಮಾರ್ ಸಾಹು ಮತ್ತು ಎನ್.ಎಸ್.ಸಿ ಹಾಗೂ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಭಾರತ ಸರ್ಕಾರದ ಸಂಪೂರ್ಣ ಮಾಲೀಕತ್ವದಲ್ಲಿರುವ 'ಶೆಡ್ಯೂಲ್ 'ಬಿ' - ಮಿನಿ ರತ್ನ ವರ್ಗ-I' ಕಂಪನಿಯಾಗಿದೆ. 1963ರಲ್ಲಿ ಸ್ಥಾಪನೆಯಾದಾಗಿನಿಂದ, ಎನ್.ಎಸ್.ಸಿ ದೇಶಾದ್ಯಂತ ರೈತರಿಗೆ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುವಲ್ಲಿ ಮತ್ತು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
*****
(Release ID: 2183005)
Visitor Counter : 23