ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಐಟಿ ನಿಯಮಗಳು, 2021ರ ನಿಯಮ 3(1)(d) ಗೆ ತಿದ್ದುಪಡಿಗಳನ್ನು ಸರ್ಕಾರ ಅಧಿಸೂಚಿಸಿದೆ
ಅನುಪಾತದ ಮತ್ತು ಕಾನೂನುಬದ್ಧ ಕ್ರಮಕ್ಕಾಗಿ ಈ ಹೊಸ ಚೌಕಟ್ಟು, ಹಿರಿಯ ಮಟ್ಟದ ದೃಢೀಕರಣ, ಕಾರಣ ಸಹಿತ ಸೂಚನೆಗಳು, ಮತ್ತು ಆವರ್ತಕ ಪರಿಶೀಲನೆಯನ್ನು ಖಚಿತಪಡಿಸುತ್ತದೆ
ಮಧ್ಯವರ್ತಿಗಳಿಂದ ಕಾನೂನುಬಾಹಿರ ಆನ್‌ಲೈನ್ ವಿಷಯವನ್ನು ತೆಗೆದುಹಾಕುವುದರಲ್ಲಿ ಈ ತಿದ್ದುಪಡಿಗಳು ಪಾರದರ್ಶಕತೆ, ಅನುಪಾತ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುತ್ತವೆ
Posted On:
23 OCT 2025 11:36AM by PIB Bengaluru
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳಿಗೆ ("ಐಟಿ ನಿಯಮಗಳು, 2021") ತಿದ್ದುಪಡಿ ಮಾಡಲು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ತಿದ್ದುಪಡಿ ನಿಯಮಗಳು, 2025 ನ್ನು ಅಧಿಸೂಚಿಸಿದೆ. ಈ ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ("ಐಟಿ ಕಾಯ್ದೆ") ಅಡಿಯಲ್ಲಿ ಮಧ್ಯವರ್ತಿಗಳ 'ಸೂಕ್ತ ಪರಿಶ್ರಮದ ಬಾಧ್ಯತೆಗಳ' (due diligence obligations) ಚೌಕಟ್ಟನ್ನು ಮತ್ತಷ್ಟು ಬಲಪಡಿಸುತ್ತವೆ. ನಿರ್ದಿಷ್ಟವಾಗಿ, ನಿಯಮ 3(1)(d) ಗೆ ಮಾಡಲಾದ ತಿದ್ದುಪಡಿಗಳು, ಮಧ್ಯವರ್ತಿಗಳಿಂದ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವ ಪ್ರಕ್ರಿಯೆಯು ಪಾರದರ್ಶಕ, ಅನುಪಾತದಲ್ಲಿ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪರಿಚಯಿಸುತ್ತವೆ. ಈ ತಿದ್ದುಪಡಿ ಮಾಡಲಾದ ನಿಯಮಗಳು ನವೆಂಬರ್ 15, 2025 ರಿಂದ ಜಾರಿಗೆ ಬರುತ್ತವೆ.
ಹಿನ್ನೆಲೆ
ಐಟಿ ನಿಯಮಗಳು, 2021 ಅನ್ನು ಮೂಲತಃ ಫೆಬ್ರವರಿ 25, 2021 ರಂದು ಅಧಿಸೂಚಿಸಲಾಯಿತು ಮತ್ತು ತರುವಾಯ ಅಕ್ಟೋಬರ್ 28, 2022 ಮತ್ತು ಏಪ್ರಿಲ್ 6, 2023 ರಂದು ತಿದ್ದುಪಡಿ ಮಾಡಲಾಯಿತು. ಆನ್ ಲೈನ್ ಸುರಕ್ಷತೆ, ಭದ್ರತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಇತರ ಮಧ್ಯವರ್ತಿಗಳು ಪಾಲಿಸಬೇಕಾದ 'ಸೂಕ್ತ ಪರಿಶ್ರಮದ ಬಾಧ್ಯತೆಗಳನ್ನು' ಈ ನಿಯಮಗಳು ಸೂಚಿಸುತ್ತವೆ.
ನಿಯಮ 3(1)(d) ಅಡಿಯಲ್ಲಿ, ನ್ಯಾಯಾಲಯದ ಆದೇಶದ ಮೂಲಕ ಅಥವಾ ಸೂಕ್ತ ಸರ್ಕಾರದಿಂದ ಅಧಿಸೂಚನೆಯ ಮೂಲಕ 'ವಾಸ್ತವಿಕ ಜ್ಞಾನ' ಬಂದಾಗ, ಮಧ್ಯವರ್ತಿಗಳು ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕುವುದು ಕಡ್ಡಾಯವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನಡೆಸಿದ ಪರಿಶೀಲನೆಯು, ಹಿರಿಯ ಮಟ್ಟದ ಹೊಣೆಗಾರಿಕೆ, ಕಾನೂನುಬಾಹಿರ ವಿಷಯದ ನಿಖರವಾದ ನಿರ್ದಿಷ್ಟತೆ, ಮತ್ತು ಉನ್ನತ ಮಟ್ಟದಲ್ಲಿ ಸರ್ಕಾರದ ನಿರ್ದೇಶನಗಳ ಆವರ್ತಕ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಎತ್ತಿ ತೋರಿಸಿದೆ.
ತಿದ್ದುಪಡಿಗಳ ಪ್ರಮುಖ ಲಕ್ಷಣಗಳು
1. ಹಿರಿಯ ಮಟ್ಟದ ದೃಢೀಕರಣ :
- ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕಲು ಮಧ್ಯವರ್ತಿಗಳಿಗೆ ನೀಡುವ ಯಾವುದೇ ಸೂಚನೆಯನ್ನು ಈಗ ಜಂಟಿ ಕಾರ್ಯದರ್ಶಿ ಅಥವಾ ಸಮಾನ ಶ್ರೇಣಿಗಿಂತ ಕಡಿಮೆಯಿಲ್ಲದ ಹಿರಿಯ ಅಧಿಕಾರಿ ಮಾತ್ರ ನೀಡಬಹುದು. ಒಂದು ವೇಳೆ ಅಂತಹ ಶ್ರೇಣಿಯನ್ನು ನೇಮಿಸದಿದ್ದರೆ, ನಿರ್ದೇಶಕರು ಅಥವಾ ಸಮಾನ ಶ್ರೇಣಿಯ ಅಧಿಕಾರಿ ನೀಡಬಹುದು. ಹಾಗೆ ಅಧಿಕಾರ ಪಡೆದಿದ್ದಲ್ಲಿ, ನೇಮಕಗೊಂಡ ಅಧಿಕೃತ ಏಜೆನ್ಸಿಯ ಮೂಲಕ ಏಕೈಕ ಸಂಬಂಧಿತ ಅಧಿಕಾರಿಯ ಮೂಲಕ ಕಾರ್ಯನಿರ್ವಹಿಸಬಹುದು.
- ಪೊಲೀಸ್ ಅಧಿಕಾರಿಗಳ ವಿಷಯದಲ್ಲಿ, ವಿಶೇಷವಾಗಿ ಅಧಿಕಾರ ಪಡೆದ, ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ಮಾತ್ರ ಅಂತಹ ಸೂಚನೆಯನ್ನು ನೀಡಬಹುದು.
2. ನಿರ್ದಿಷ್ಟ ವಿವರಗಳೊಂದಿಗೆ ತಾರ್ಕಿಕ ಸೂಚನೆ:
- ಈ ಸೂಚನೆಯು, ತೆಗೆದುಹಾಕಬೇಕಾದ ಮಾಹಿತಿ, ಡೇಟಾ ಅಥವಾ ಸಂವಹನ ಕೊಂಡಿ ("ವಿಷಯ") ಇರುವ ನಿರ್ದಿಷ್ಟ URL/ಗುರುತಿಸುವಿಕೆ ಅಥವಾ ಇತರ ಎಲೆಕ್ಟ್ರಾನಿಕ್ ಸ್ಥಳ, ಅದರ ಕಾನೂನು ಆಧಾರ (legal basis) ಮತ್ತು ಶಾಸನಬದ್ಧ ನಿಬಂಧನೆ, ಹಾಗೂ ಕಾನೂನುಬಾಹಿರ ಕೃತ್ಯದ ಸ್ವರೂಪವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಬೇಕು.
- ಐಟಿ ಕಾಯ್ದೆಯ ಸೆಕ್ಷನ್ 79(3)(b) ಅಡಿಯಲ್ಲಿ ಕಡ್ಡಾಯಗೊಳಿಸಲಾದ 'ವಾಸ್ತವಿಕ ಜ್ಞಾನ' ದ ಅವಶ್ಯಕತೆಗೆ ನಿಯಮಗಳನ್ನು ಹೊಂದಾಣಿಕೆ ಮಾಡುವ ಸಲುವಾಗಿ, ಈ ತಿದ್ದುಪಡಿಯು ಈ ಹಿಂದೆ ಇದ್ದ 'ಅಧಿಸೂಚನೆಗಳು' ಎಂಬ ವಿಶಾಲ ಉಲ್ಲೇಖದ ಬದಲು 'ಕಾರಣ ಸಹಿತ ಸೂಚನೆ' ಎಂಬ ಪದವನ್ನು ಬಳಸುತ್ತದೆ. ಇದು ಸ್ಪಷ್ಟತೆ ಮತ್ತು ನಿಖರತೆಯನ್ನು ತರುತ್ತದೆ.
3. ಆವರ್ತಕ ಪರಿಶೀಲನಾ ಕಾರ್ಯವಿಧಾನ:
- ನಿಯಮ 3(1)(d) ಅಡಿಯಲ್ಲಿ ನೀಡಲಾಗುವ ಎಲ್ಲಾ ಸೂಚನೆಗಳು, ಸೂಕ್ತ ಸರ್ಕಾರದ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ಮಾಸಿಕ ಒಳಪಡುತ್ತವೆ.
- ಇಂತಹ ಕ್ರಮಗಳು ಅಗತ್ಯ, ಅನುಪಾತದಲ್ಲಿವೆ ಮತ್ತು ಕಾನೂನಿಗೆ ಅನುಗುಣವಾಗಿವೆ ಎಂಬುದನ್ನು ಇದು ಖಚಿತಪಡಿಸುತ್ತದೆ.
4. ಹಕ್ಕುಗಳು ಮತ್ತು ಜವಾಬ್ದಾರಿಗಳ ಸಮತೋಲನ:
- ಈ ತಿದ್ದುಪಡಿಗಳು ನಾಗರಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ರಾಜ್ಯದ ಕಾನೂನುಬದ್ಧ ನಿಯಂತ್ರಣ ಅಧಿಕಾರಗಳ ನಡುವೆ ಸಮತೋಲನವನ್ನು ಸಾಧಿಸುತ್ತವೆ. ಜಾರಿ ಕ್ರಮಗಳು ಪಾರದರ್ಶಕವಾಗಿರುವುದನ್ನು ಮತ್ತು ಸ್ವೇಚ್ಛೆಯ ನಿರ್ಬಂಧಗಳಿಗೆ ಕಾರಣವಾಗದಿರುವುದನ್ನು ಇವು ಖಚಿತಪಡಿಸುತ್ತವೆ.
ನಿರೀಕ್ಷಿತ ಪರಿಣಾಮ
- ಪಾರದರ್ಶಕತೆ ಮತ್ತು ಹೊಣೆಗಾರಿಕೆ: ಯಾರು ನಿರ್ದೇಶನಗಳನ್ನು ನೀಡಬಹುದು ಮತ್ತು ಹೇಗೆ ನೀಡಬಹುದು ಎಂಬುದರ ಕುರಿತು ಸ್ಪಷ್ಟವಾದ ಮಾರ್ಗಸೂಚಿಗಳು, ಹಾಗೂ ಆವರ್ತಕ ಪರಿಶೀಲನಾ ವ್ಯವಸ್ಥೆಯು, ನಿಯಂತ್ರಣ ಮತ್ತು ಸಮತೋಲನವನ್ನು ಖಚಿತಪಡಿಸುತ್ತದೆ.
- ಮಧ್ಯವರ್ತಿಗಳಿಗೆ ಸ್ಪಷ್ಟತೆ: ವಿವರವಾದ ಮತ್ತು ಕಾರಣ ಸಹಿತ ಸೂಚನೆಗಳನ್ನು ಕಡ್ಡಾಯಗೊಳಿಸುವ ಮೂಲಕ, ಮಧ್ಯವರ್ತಿಗಳು ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ಉತ್ತಮ ಮಾರ್ಗದರ್ಶನವನ್ನು ಹೊಂದಿರುತ್ತಾರೆ.
- ಸುರಕ್ಷತಾ ಕ್ರಮಗಳು ಮತ್ತು ಅನುಪಾತ: ಈ ಸುಧಾರಣೆಗಳು, ಐಟಿ ಕಾಯ್ದೆ, 2000 ರ ಅಡಿಯಲ್ಲಿ ಕಾನೂನುಬದ್ಧ ನಿರ್ಬಂಧಗಳನ್ನು ಬಲಪಡಿಸುತ್ತಲೇ, ಅನುಪಾತವನ್ನು ಖಚಿತಪಡಿಸುತ್ತವೆ ಮತ್ತು ನೈಸರ್ಗಿಕ ನ್ಯಾಯದ ತತ್ವಗಳನ್ನು ಎತ್ತಿಹಿಡಿಯುತ್ತವೆ.
ವಿವರಗಳಿಗಾಗಿ, ದಯವಿಟ್ಟು ಗೆಜೆಟ್ ಅಧಿಸೂಚನೆ ಮತ್ತು ಅಕ್ಟೋಬರ್ 2025 ರವರೆಗೆ ತಿದ್ದುಪಡಿ ಮಾಡಲಾದ ಏಕೀಕೃತ ಐಟಿ ನಿಯಮಗಳು, 2021 ಅನ್ನು ನೋಡಿ. ಇವು https://egazette.gov.in : / ಅಥವಾ MeitY ವೆಬ್‌ಸೈಟ್: https://www.meity.gov.in/ ನಲ್ಲಿ ಲಭ್ಯವಿವೆ.
*****
(Release ID: 2181833)
Visitor Counter : 5