ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

प्रविष्टि तिथि: 16 OCT 2025 7:16PM by PIB Bengaluru

ಪ್ರೀತಿಯ ಸಹೋದರ ಸಹೋದರಿಯರೆ, ನಿಮ್ಮೆಲ್ಲರಿಗೂ ಶುಭಾಶಯಗಳು!

ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಜಿ, ಜನಪ್ರಿಯ ಮತ್ತು ಶ್ರಮಶೀಲ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಜಿ, ಕೇಂದ್ರ ಸಚಿವರಾದ ಕೆ. ರಾಮಮೋಹನ್ ನಾಯ್ಡು ಜಿ, ಚಂದ್ರಶೇಖರ್ ಪೆಮ್ಮಸಾನಿ ಜಿ, ಭೂಪತಿರಾಜು ಶ್ರೀನಿವಾಸ ವರ್ಮಾ ಜಿ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜಿ, ರಾಜ್ಯ ಸರ್ಕಾರದ ಸಚಿವರಾದ ನಾರಾ ಲೋಕೇಶ್ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಸಚಿವರೆ, ಬಿ.ಜೆ.ಪಿ ರಾಜ್ಯಾಧ್ಯಕ್ಷ ಪಿ.ವಿ.ಎನ್. ಮಾಧವ್ ಜಿ, ಎಲ್ಲಾ ಸಂಸತ್ ಸದಸ್ಯರೆ, ಶಾಸಕರೆ ಮತ್ತು ನಮ್ಮನ್ನು ಆಶೀರ್ವದಿಸಲು ಇಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!

ಮೊದಲನೆಯದಾಗಿ, ನಾನು ಅಹೋಬಿಲಂನ ನರಸಿಂಹಸ್ವಾಮಿ ಮತ್ತು ಮಹಾನಂದಿಯ ಮಹಾನಂದೀಶ್ವರ ಸ್ವಾಮಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ನಮ್ಮೆಲ್ಲರಿಗೂ ಮಂತ್ರಾಲಯದ ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಬಯಸುತ್ತೇನೆ.

ಸ್ನೇಹಿತರೆ,

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ ಪಠಣದಲ್ಲಿ ಹೀಗೆ ಹೇಳಲಾಗಿದೆ: ಸೌರಾಷ್ಟ್ರೇ ಸೋಮನಾಥ ಚ ಶ್ರೀಶೈಲೇ ಮಲ್ಲಿಕಾರ್ಜುನಮ್. ಅಂದರೆ, 12 ಜ್ಯೋತಿರ್ಲಿಂಗಗಳಲ್ಲಿ, ಮೊದಲನೆಯದು ಭಗವಾನ್ ಸೋಮನಾಥ ಮತ್ತು ಎರಡನೆಯದು ಭಗವಾನ್ ಮಲ್ಲಿಕಾರ್ಜುನ. ನಾನು ಗುಜರಾತ್‌ನ ಸೋಮನಾಥ ಭೂಮಿಯಲ್ಲಿ ಜನಿಸಿದ ಅದೃಷ್ಟಶಾಲಿ, ಬಾಬಾ ವಿಶ್ವನಾಥರ ವಾಸಸ್ಥಾನವಾದ ಕಾಶಿಯ ಪವಿತ್ರ ಭೂಮಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ, ಇಂದು ನಾನು ಶ್ರೀಶೈಲದ ಆಶೀರ್ವಾದ ಪಡೆಯುತ್ತಿದ್ದೇನೆ.

ಸ್ನೇಹಿತರೆ,

ಶ್ರೀಶೈಲಂಗೆ ಭೇಟಿ ನೀಡಿದ ನಂತರ, ಶಿವಾಜಿ ಸ್ಫೂರ್ತಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಗೌರವ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ನಾನು ಈ ವೇದಿಕೆಯಿಂದ ಛತ್ರಪತಿ ಶಿವಾಜಿ ಮಹಾರಾಜರಿಗೂ ನಮಸ್ಕರಿಸುತ್ತೇನೆ. ಅಲ್ಲಮ ಪ್ರಭು ಮತ್ತು ಅಕ್ಕಮಹಾದೇವಿಯಂತಹ ಶಿವ ಭಕ್ತರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಶ್ರೀ ಉಯ್ಯಾಲವಾಡ ನರಸಿಂಹ ರೆಡ್ಡಿ ಗಾರು ಮತ್ತು ಹರಿ ಸರ್ವೋತ್ತಮ ರಾವ್ ಅವರಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೂ ನಾನು ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಆಂಧ್ರಪ್ರದೇಶವು ಹೆಮ್ಮೆ ಮತ್ತು ಸಂಸ್ಕೃತಿಯ ಪುಣ್ಯಭೂಮಿಯಾಗಿದೆ. ಅದೇ ಸಮಯದಲ್ಲಿ, ಇದು ವಿಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವೂ ಆಗಿದೆ. ಇದು ಅನಂತ ಸಾಮರ್ಥ್ಯ ಮತ್ತು ಅಪಾರ ಯುವ ಶಕ್ತಿಯ ಭೂಮಿ. ಆಂಧ್ರಕ್ಕೆ ಬೇಕಾಗಿರುವುದು ಸರಿಯಾದ ದೃಷ್ಟಿಕೋನ ಮತ್ತು ಸರಿಯಾದ ನಾಯಕತ್ವ. ಇಂದು ಆಂಧ್ರವು ಚಂದ್ರಬಾಬು ನಾಯ್ಡು ಗಾರು ಮತ್ತು ಪವನ್ ಕಲ್ಯಾಣ್ ಗಾರು ಅವರ ರೂಪದಲ್ಲಿ ಆ ದೂರದೃಷ್ಟಿಯ ನಾಯಕತ್ವವನ್ನು ಹೊಂದಿದೆ, ಜತೆಗೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಪಡೆಯುತ್ತಿದೆ.

ಸ್ನೇಹಿತರೆ,

ಕಳೆದ 16 ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಅಭಿವೃದ್ಧಿಯ ವೇಗವು ಗಮನಾರ್ಹವಾಗಿ ಹೆಚ್ಚಾಗಿದೆ. ಡಬಲ್-ಎಂಜಿನ್ ಸರ್ಕಾರದಲ್ಲಿ ಹಿಂದೆಂದೂ ಕಾಣದ ಪ್ರಗತಿ ನಡೆಯುತ್ತಿದೆ. ಇಂದು ದೆಹಲಿ ಮತ್ತು ಅಮರಾವತಿ ಒಟ್ಟಾಗಿ ತ್ವರಿತ ಅಭಿವೃದ್ಧಿಯತ್ತ ಮುನ್ನಡೆಯುತ್ತಿವೆ. ಚಂದ್ರಬಾಬು ನಾಯ್ಡು ಸರಿಯಾಗಿ ಹೇಳಿದಂತೆ, ಈ ವೇಗವನ್ನು ನೋಡಿದಾಗ, 2047ರ ಹೊತ್ತಿಗೆ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, "ವಿಕಸಿತ ಭಾರತ" (ಅಭಿವೃದ್ಧಿ ಹೊಂದಿದ ಭಾರತ) ಖಂಡಿತವಾಗಿಯೂ ವಾಸ್ತವವಾಗಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಇದೀಗ ಚಂದ್ರಬಾಬು ನಾಯ್ಡು ಬಹಳ ಭಾವುಕರಾಗಿ ಮಾತನಾಡಿದರು, 21ನೇ ಶತಮಾನವು ಭಾರತಕ್ಕೆ ಸೇರಿದೆ ಎಂದು ನಾನು ಪೂರ್ಣ ದೃಢನಿಶ್ಚಯದಿಂದ ಹೇಳಬಲ್ಲೆ. ಈ ಶತಮಾನವು ಭಾರತದ 140 ಕೋಟಿ ಜನರಿಗೆ ಸೇರಿದೆ.

ಸ್ನೇಹಿತರೆ,

ಇಂದಿಗೂ ರಸ್ತೆಗಳು, ವಿದ್ಯುತ್, ರೈಲ್ವೆಗಳು, ಹೆದ್ದಾರಿಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲಾ ಯೋಜನೆಗಳು ರಾಜ್ಯದಲ್ಲಿ ಸಂಪರ್ಕವನ್ನು ಬಲಪಡಿಸುತ್ತವೆ, ಉದ್ಯಮವನ್ನು ಉತ್ತೇಜಿಸುತ್ತವೆ ಮತ್ತು ಜನರ ಜೀವನವನ್ನು ಸುಲಭಗೊಳಿಸುತ್ತವೆ. ಕರ್ನೂಲ್ ಪ್ರದೇಶ ಮತ್ತು ಹತ್ತಿರದ ಪ್ರದೇಶಗಳು ಈ ಉಪಕ್ರಮಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಈ ಎಲ್ಲಾ ಯೋಜನೆಗಳಿಗಾಗಿ ನಾನು ರಾಜ್ಯದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಯಾವುದೇ ದೇಶ ಅಥವಾ ರಾಜ್ಯದ ಅಭಿವೃದ್ಧಿಗೆ ಇಂಧನ ಭದ್ರತೆ ನಿರ್ಣಾಯಕವಾಗಿದೆ. ಇಂದು ಇಂಧನ ವಲಯದಲ್ಲಿ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ ಪ್ರಸರಣ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದು ರಾಷ್ಟ್ರದ ಇಂಧನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸ್ನೇಹಿತರೆ,

ಕ್ಷಿಪ್ರ ಅಭಿವೃದ್ಧಿಯ ನಡುವೆ, ಹಿಂದಿನ ಪರಿಸ್ಥಿತಿಯನ್ನು ನಾವು ಮರೆಯಬಾರದು. ಸುಮಾರು 11 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ, ದೇಶದಲ್ಲಿ ತಲಾ ವಿದ್ಯುತ್ ಬಳಕೆ ಸರಾಸರಿ 1,000 ಯೂನಿಟ್‌ಗಳಿಗಿಂತ ಕಡಿಮೆಯಿತ್ತು. ದೇಶವು ಆಗಾಗ್ಗೆ ವಿದ್ಯುತ್ ಕಡಿತ ಎದುರಿಸುತ್ತಿತ್ತು, ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಸಹ ಇರಲಿಲ್ಲ. ಇಂದು ಭಾರತವು ಸ್ವಚ್ಛ ಇಂಧನದಿಂದ ಒಟ್ಟು ಇಂಧನ ಉತ್ಪಾದನೆಯವರೆಗೆ ಪ್ರತಿಯೊಂದು ವಲಯದಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ವಿದ್ಯುತ್ ಈಗ ದೇಶದ ಪ್ರತಿಯೊಂದು ಹಳ್ಳಿಯನ್ನು ತಲುಪುತ್ತಿದೆ. ತಲಾ ವಿದ್ಯುತ್ ಬಳಕೆ 1,400 ಯೂನಿಟ್‌ಗಳಿಗೆ ಏರಿದೆ. ಅಲ್ಲದೆ, ಕೈಗಾರಿಕೆಗಳು ಮತ್ತು ಮನೆಗಳಿಗೆ ಸಾಕಷ್ಟು ವಿದ್ಯುತ್ ಲಭ್ಯವಾಗುತ್ತಿದೆ.

ಸ್ನೇಹಿತರೆ,

ಆಂಧ್ರಪ್ರದೇಶ ಈ ಇಂಧನ ಕ್ರಾಂತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ, ಶ್ರೀಕಾಕುಳಂನಿಂದ ಅಂಗುಲ್ ವರೆಗಿನ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆ ಇಂದು ಪ್ರಾರಂಭವಾಗಿದೆ. ಈ ಪೈಪ್‌ಲೈನ್ ಸುಮಾರು 15 ಲಕ್ಷ ಮನೆಗಳಿಗೆ ಅನಿಲ ಪೂರೈಸಲಿದೆ. ಚಿತ್ತೂರಿನಲ್ಲಿ ಇಂದು 20,000 ಸಿಲಿಂಡರ್‌ಗಳನ್ನು ತುಂಬುವ ಸಾಮರ್ಥ್ಯವಿರುವ ಎಲ್‌.ಪಿ.ಜಿ ಬಾಟ್ಲಿಂಗ್ ಸ್ಥಾವರ ಉದ್ಘಾಟಿಸಲಾಗಿದೆ. ಇದು ಸ್ಥಳೀಯ ಸಾರಿಗೆ ಮತ್ತು ಸಂಗ್ರಹಣಾ ವಲಯಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಯುವಕರಿಗೆ ಹೊಸ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೆ,

ಇಂದು 'ವಿಕಸಿತ  ಭಾರತ'ದ ಗುರಿಯನ್ನು ತ್ವರಿತವಾಗಿ ಸಾಧಿಸಲು ದೇಶಾದ್ಯಂತ ಬಹು-ಮಾದರಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಾವು ಹಳ್ಳಿಗಳಿಂದ ನಗರಗಳಿಗೆ ಮತ್ತು ನಗರಗಳಿಂದ ಬಂದರುಗಳಿಗೆ ಸಂಪರ್ಕದತ್ತ ಗಮನ ಹರಿಸುತ್ತಿದ್ದೇವೆ. ಸಬ್ಬಾವರಂ ಮತ್ತು ಶೀಲಾನಗರ ನಡುವಿನ ಹೊಸ ಹೆದ್ದಾರಿಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ರೈಲ್ವೆ ವಲಯದಲ್ಲಿಯೂ ಹೊಸ ಯುಗ ಪ್ರಾರಂಭವಾಗಿದೆ. ಹೊಸ ರೈಲು ಮಾರ್ಗಗಳ ಉದ್ಘಾಟನೆ ಮತ್ತು ರೈಲು ಮೇಲ್ಸೇತುವೆಗಳ ನಿರ್ಮಾಣದೊಂದಿಗೆ, ಪ್ರಯಾಣ ಸುಲಭವಾಗುತ್ತದೆ, ಈ ಪ್ರದೇಶದ ಕೈಗಾರಿಕೆಗಳು ಹೊಸ ಆವೇಗ ಪಡೆಯುತ್ತವೆ.

ಸ್ನೇಹಿತರೆ,

ಇಂದು 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ಸಂಕಲ್ಪ ನಮಗಿದೆ. ಈ ರಾಷ್ಟ್ರೀಯ ಮಿಷನ್ "ಸ್ವರ್ಣ (ಸುವರ್ಣ) ಆಂಧ್ರ"ದ ದೃಷ್ಟಿಕೋನದಿಂದ ಹೊಸ ಶಕ್ತಿ ಪಡೆಯುತ್ತಿದೆ. ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಆಂಧ್ರಪ್ರದೇಶ ಮತ್ತು ಇಲ್ಲಿನ ಯುವಕರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಡಬಲ್-ಎಂಜಿನ್ ಸರ್ಕಾರದಲ್ಲಿ ಆಂಧ್ರದ ಅಗಾಧ ಸಾಮರ್ಥ್ಯವನ್ನು ನಾವು ಮತ್ತಷ್ಟು ವಿಸ್ತರಿಸುತ್ತಿದ್ದೇವೆ.

ಸ್ನೇಹಿತರೆ,

ಇಂದು ಭಾರತ ಮತ್ತು ಆಂಧ್ರಪ್ರದೇಶದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವನ್ನು ಇಡೀ ವಿಶ್ವವೇ ಗುರುತಿಸುತ್ತಿದೆ. ಕೇವಲ 2 ದಿನಗಳ ಹಿಂದೆ, ಗೂಗಲ್ ಆಂಧ್ರಪ್ರದೇಶದಲ್ಲಿ ಪ್ರಮುಖ ಹೂಡಿಕೆಯನ್ನು ಘೋಷಿಸಿತು. ಗೂಗಲ್ ಆಂಧ್ರಪ್ರದೇಶದಲ್ಲಿ ಭಾರತದ ಮೊದಲ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ಸ್ಥಾಪಿಸಲಿದೆ. ನಾನು ನಿನ್ನೆ ಗೂಗಲ್‌ ಸಿ.ಇ.ಒ ಜತೆ ಮಾತನಾಡಿದಾಗ, ಅವರು ನನಗೆ ಹೇಳಿದರು, "ನಾವು ಅಮೆರಿಕದ ಹೊರಗಿನ ಅನೇಕ ದೇಶಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದೇವೆ, ಆದರೆ ನಮ್ಮ ಮುಂಬರುವ ಅತಿದೊಡ್ಡ ಹೂಡಿಕೆ ಆಂಧ್ರಪ್ರದೇಶದಲ್ಲಿರುತ್ತದೆ." ಈ ಹೊಸ ಎ.ಐ. ಹಬ್ ಪ್ರಬಲ ಎ.ಐ. ಮೂಲಸೌಕರ್ಯ, ಡೇಟಾ ಸೆಂಟರ್ ಸಾಮರ್ಥ್ಯ, ದೊಡ್ಡ ಪ್ರಮಾಣದ ಇಂಧನ ಮೂಲಗಳು ಮತ್ತು ವಿಸ್ತೃತ ಫೈಬರ್-ಆಪ್ಟಿಕ್ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ.

ಸ್ನೇಹಿತರೆ,

ಗೂಗಲ್‌ನ ಎ.ಐ. ಹಬ್ ಹೂಡಿಕೆಯ ಭಾಗವಾಗಿ, ಹೊಸ ಅಂತಾರಾಷ್ಟ್ರೀಯ ಸಬ್‌ಸೀ ಗೇಟ್‌ವೇ ಅನ್ನು ಸಹ ನಿರ್ಮಿಸಲಾಗುವುದು. ಇದು ಭಾರತದ ಪೂರ್ವ ಕರಾವಳಿಯನ್ನು ವಿಶಾಖಪಟ್ಟಣಕ್ಕೆ ನೇರವಾಗಿ ಸಂಪರ್ಕಿಸುವ ಬಹು ಅಂತಾರಾಷ್ಟ್ರೀಯ ಜಲಾಂತರ್ಗಾಮಿ ಕೇಬಲ್‌ಗಳನ್ನು ಒಳಗೊಂಡಿರುತ್ತದೆ.

ಸ್ನೇಹಿತರೆ,

ಈ ಯೋಜನೆಯು ವಿಶಾಖಪಟ್ಟಣವನ್ನು ಕೃತಕ ಬುದ್ಧಿಮತ್ತೆ ಮತ್ತು ಸಂಪರ್ಕದ ಜಾಗತಿಕ ಕೇಂದ್ರವಾಗಿ ಸ್ಥಾಪಿಸುತ್ತದೆ. ಇದು ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಸೇವೆ ಸಲ್ಲಿಸುತ್ತದೆ. ಈ ಸಾಧನೆಗಾಗಿ ನಾನು ಆಂಧ್ರಪ್ರದೇಶದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಚಂದ್ರಬಾಬು ಅವರ ದೂರದೃಷ್ಟಿಯ ನಾಯಕತ್ವವನ್ನು ಆಳವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿಗೆ ಆಂಧ್ರಪ್ರದೇಶದ ಅಭಿವೃದ್ಧಿ ಅತ್ಯಗತ್ಯ. ರಾಯಲಸೀಮಾದ ಅಭಿವೃದ್ಧಿಯು ಆಂಧ್ರದ ಬೆಳವಣಿಗೆಗೆ ಅಷ್ಟೇ ಮುಖ್ಯ ಎಂದು ನಾನು ದೃಢವಾಗಿ ನಂಬುತ್ತೇನೆ. ಕರ್ನೂಲ್ ಭೂಮಿಯಲ್ಲಿ ಇಂದು ಪ್ರಾರಂಭವಾದ ಯೋಜನೆಗಳು ರಾಯಲಸೀಮಾದ ಪ್ರತಿಯೊಂದು ಜಿಲ್ಲೆಯಲ್ಲಿ ಉದ್ಯೋಗ ಮತ್ತು ಸಮೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯುತ್ತವೆ. ಈ ಯೋಜನೆಗಳು ಇಡೀ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುತ್ತವೆ.

ಸ್ನೇಹಿತರೆ,

ಆಂಧ್ರಪ್ರದೇಶದ ತ್ವರಿತ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಾವು ಹೊಸ ಕೈಗಾರಿಕಾ ಕಾರಿಡಾರ್‌ಗಳು ಮತ್ತು ಕೇಂದ್ರಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ, ಸರ್ಕಾರವು ಓರ್ವಕಲ್ ಮತ್ತು ಕೊಪ್ಪರ್ಥಿಯನ್ನು ಆಂಧ್ರಪ್ರದೇಶದ ಹೊಸ ಕೈಗಾರಿಕಾ ಗುರುತುಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಓರ್ವಕಲ್ ಮತ್ತು ಕೊಪ್ಪರ್ಥಿಯಲ್ಲಿ ಹೂಡಿಕೆಗಳು ಹೆಚ್ಚಾದಂತೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ನಿರಂತರವಾಗಿ ಸೃಷ್ಟಿಸಲಾಗುತ್ತಿದೆ.

ಸ್ನೇಹಿತರೆ,

ಇಂದು ಜಗತ್ತು ಭಾರತವನ್ನು 21ನೇ ಶತಮಾನದ ಹೊಸ ಉತ್ಪಾದನಾ ಕೇಂದ್ರವಾಗಿ ನೋಡುತ್ತಿದೆ. ಈ ಯಶಸ್ಸಿನ ದೊಡ್ಡ ಅಡಿಪಾಯವೆಂದರೆ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಎಂಬ ದೃಷ್ಟಿಕೋನ. ನಮ್ಮ ಆಂಧ್ರಪ್ರದೇಶವು ಆತ್ಮನಿರ್ಭರ ಭಾರತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗುತ್ತಿದೆ.

ಸ್ನೇಹಿತರೆ,

ಕಾಂಗ್ರೆಸ್ ಸರ್ಕಾರಗಳು ಆಂಧ್ರಪ್ರದೇಶದ ನಿಜವಾದ ಸಾಮರ್ಥ್ಯವನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಕ್ಕೆ ಮಾತ್ರವಲ್ಲದೆ, ಇಡೀ ರಾಷ್ಟ್ರಕ್ಕೆ ಹಾನಿ ಉಂಟುಮಾಡಿದವು. ರಾಷ್ಟ್ರದ ಬೆಳವಣಿಗೆಗೆ ಕಾರಣವಾಗಬಹುದಾಗಿದ್ದ ರಾಜ್ಯವನ್ನು ತನ್ನದೇ ಆದ ಅಭಿವೃದ್ಧಿಗಾಗಿ ಹೋರಾಡುವಂತೆ ಮಾಡಿದವು. ಆದರೆ ಎನ್‌.ಡಿ.ಎ ಸರ್ಕಾರದಲ್ಲಿ ಆಂಧ್ರಪ್ರದೇಶದ ಚಿತ್ರಣ ಬದಲಾಗುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಚಂದ್ರಬಾಬು ಜಿ ಅವರ ನೇತೃತ್ವದಲ್ಲಿ, ಆಂಧ್ರಪ್ರದೇಶವು 'ಆತ್ಮನಿರ್ಭರ ಭಾರತ'ದ ಹೊಸ ಶಕ್ತಿಕೇಂದ್ರವಾಗಿ ಹೊರಹೊಮ್ಮುತ್ತಿದೆ. ಆಂಧ್ರದಾದ್ಯಂತ ಉತ್ಪಾದನೆ ವೇಗವಾಗಿ ವಿಸ್ತರಿಸುತ್ತಿದೆ. ನಿಮ್ಮಲೂರಿನಲ್ಲಿ ಸುಧಾರಿತ ರಾತ್ರಿ ದೃಷ್ಟಿ ಕಾರ್ಖಾನೆಯ ಪ್ರಾರಂಭವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸುವತ್ತ ಮತ್ತೊಂದು ಹೆಜ್ಜೆಯಾಗಿದೆ. ಈ ಕಾರ್ಖಾನೆಯು ರಾತ್ರಿ ದೃಷ್ಟಿ ಉಪಕರಣಗಳು, ಕ್ಷಿಪಣಿ ಸಂವೇದಕಗಳು ಮತ್ತು ಡ್ರೋನ್ ಗಾರ್ಡ್ ವ್ಯವಸ್ಥೆಗಳನ್ನು ಉತ್ಪಾದಿಸುವ ಭಾರತದ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇಲ್ಲಿ ತಯಾರಾದ ಉಪಕರಣಗಳು ಭಾರತದ ರಕ್ಷಣಾ ರಫ್ತಿಗೆ ಪ್ರಮುಖ ಉತ್ತೇಜನ ನೀಡುತ್ತದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ನಿರ್ಮಿತ ತಂತ್ರಜ್ಞಾನಗಳ ಬಲವನ್ನು ನಾವು ಈಗಾಗಲೇ ನೋಡಿದ್ದೇವೆ.

ಸ್ನೇಹಿತರೆ,

ಕರ್ನೂಲ್ ಅನ್ನು ಭಾರತದ ಡ್ರೋನ್ ಹಬ್ ಮಾಡಲು ಆಂಧ್ರ ಸರ್ಕಾರ ನಿರ್ಧರಿಸಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಡ್ರೋನ್ ಉದ್ಯಮದ ಮೂಲಕ, ಕರ್ನೂಲ್ ಮತ್ತು ಆಂಧ್ರಪ್ರದೇಶದಾದ್ಯಂತ ಹಲವಾರು ಹೊಸ ಭವಿಷ್ಯದ ತಂತ್ರಜ್ಞಾನ ವಲಯಗಳು ಹೊರಹೊಮ್ಮಲಿವೆ. ನಾನು ಹೇಳಿದಂತೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಡ್ರೋನ್‌ಗಳ ಗಮನಾರ್ಹ ಕಾರ್ಯಕ್ಷಮತೆ ಜಗತ್ತನ್ನು ಬೆರಗುಗೊಳಿಸಿತು. ಮುಂಬರುವ ದಿನಗಳಲ್ಲಿ, ಡ್ರೋನ್ ವಲಯದಲ್ಲಿ ಕರ್ನೂಲ್ ಭಾರತಕ್ಕೆ ಪ್ರಮುಖ ಶಕ್ತಿಯಾಗಲಿದೆ.

ಸ್ನೇಹಿತರೆ,

ನಮ್ಮ ಸರ್ಕಾರದ ದೃಷ್ಟಿಕೋನ ನಾಗರಿಕ ಕೇಂದ್ರಿತ ಅಭಿವೃದ್ಧಿ! ಇದಕ್ಕಾಗಿ, ಜನರ ಜೀವನವನ್ನು ಸುಲಭಗೊಳಿಸಲು ನಾವು ನಿರಂತರವಾಗಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇಂದು ದೇಶದಲ್ಲಿ ವರ್ಷಕ್ಕೆ 12 ಲಕ್ಷ ರೂಪಾಯಿವರೆಗಿನ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಕೈಗೆಟುಕುವ ಔಷಧಿಗಳು, ಕಡಿಮೆ ವೆಚ್ಚದ ಆರೋಗ್ಯ ರಕ್ಷಣೆ, ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್‌ಗಳಂತಹ ಉಪಕ್ರಮಗಳು ಜೀವನದ ಸುಲಭತೆಯಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿವೆ.

ಸ್ನೇಹಿತರೆ,

ನವರಾತ್ರಿಯ ಮೊದಲ ದಿನದಿಂದಲೇ ಜಿ.ಎಸ್‌.ಟಿ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ನಾರಾ ಲೋಕೇಶ್ ಗಾರು ನೇತೃತ್ವದಲ್ಲಿ, ಇಲ್ಲಿನ ಜನರು ಜಿ.ಎಸ್‌.ಟಿ ಬಚತ್ ಉತ್ಸವ(ಉಳಿತಾಯ ಉತ್ಸವ) ಆಚರಿಸುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನೀವು "ಸೂಪರ್ ಜಿ.ಎಸ್‌.ಟಿ - ಸೂಪರ್ ಉಳಿತಾಯ" ಅಭಿಯಾನವನ್ನು ಸಹ ಯಶಸ್ವಿಯಾಗಿ ನಡೆಸುತ್ತಿದ್ದೀರಿ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಮೂಲಕ ಆಂಧ್ರಪ್ರದೇಶದ ಜನರು 8,000 ಕೋಟಿ ರೂಪಾಯಿ ಉಳಿಸುತ್ತಾರೆ ಎಂದು ನನಗೆ ತಿಳಿಸಲಾಗಿದೆ. ಈ ಉಳಿತಾಯವು ಈ ಋತುವಿನಲ್ಲಿ ಹಬ್ಬದ ಮೆರಗು ಹೆಚ್ಚಿಸಿದೆ. ಆದರೆ ನನ್ನ ಒಂದು ಮನವಿ ಏನೆಂದರೆ, ಈ ಜಿ.ಎಸ್‌.ಟಿ ಬಚತ್ ಉತ್ಸವವನ್ನು ವೋಕಲ್ ಫಾರ್ ಲೋಕಲ್ ಉತ್ಸಾಹದೊಂದಿಗೆ ಆಚರಿಸೋಣ!

ಸ್ನೇಹಿತರೆ,

‘ವಿಕಸಿತ ಆಂಧ್ರ’(ಅಭಿವೃದ್ಧಿ ಹೊಂದಿದ ಆಂಧ್ರ)ದ ಮೂಲಕ ಮಾತ್ರ ನಾವು ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ) ಕನಸನ್ನು ನನಸಾಗಿಸಬಹುದು. ಮತ್ತೊಮ್ಮೆ, ಆಂಧ್ರಪ್ರದೇಶದ ಎಲ್ಲಾ ಹೊಸ ಯೋಜನೆಗಳು ಮತ್ತು ಉಪಕ್ರಮಗಳಿಗಾಗಿ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನೊಂದಿಗೆ ಸೇರಿ ಹೇಳಿ:

ಭಾರತ್ ಮಾತಾ ಕಿ ಜೈ! ಆ ಇಬ್ಬರು ಮಕ್ಕಳು ಸ್ವಲ್ಪ ಸಮಯದಿಂದ ತಮ್ಮ ವರ್ಣಚಿತ್ರಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ನಮ್ಮ ಎಸ್‌.ಪಿ.ಜಿ ತಂಡ, ದಯವಿಟ್ಟು ಅವರಿಂದ ಅವುಗಳನ್ನು ಸಂಗ್ರಹಿಸಿ. ಹೌದು, ದಯವಿಟ್ಟು ಅವುಗಳನ್ನು ಸಂಗ್ರಹಿಸಿ. ಈಗ, ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ!

ತುಂಬು ಧನ್ಯವಾದಗಳು!

 

****

 

 

 

 

 


(रिलीज़ आईडी: 2180255) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam