ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಬಿಹಾರದ ಸೀತಾಬ್‌ ದಿಯಾರಾದಲ್ಲಿ ಭಾರತ ರತ್ನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದರು


ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಸರನ್ ಜಿಲ್ಲೆಯ ಪೂರ್ವಜರ ಮನೆ ಮತ್ತು ರಾಷ್ಟ್ರೀಯ ಸ್ಮಾರಕಕ್ಕೆ ಉಪರಾಷ್ಟ್ರಪತಿಯವರು ಭೇಟಿ ನೀಡಿದರು

ಶ್ರೀ ರಾಧಾಕೃಷ್ಣನ್ ಅವರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ನಿಜವಾದ ಜನನಾಯಕ ಮತ್ತು ಭಾರತೀಯ ಪ್ರಜಾಪ್ರಭುತ್ವದ ಅಂತಃಸಾಕ್ಷಿಯ ರಕ್ಷಕ  ಎಂದು ಬಣ್ಣಿಸಿದರು

ಶ್ರೀ ರಾಧಾಕೃಷ್ಣನ್ ಅವರು 'ಜನರು ರಾಜಕೀಯಕ್ಕಿಂತ ಮೇಲೆ' ಮತ್ತು 'ರಾಷ್ಟ್ರವು ಸ್ವಾರ್ಥಕ್ಕಿಂತ ಮೇಲೆ' ಎಂಬ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ದೃಷ್ಟಿಕೋನವನ್ನು ಎತ್ತಿ ತೋರಿಸಿದರು

ಲೋಕನಾಯಕ್ ಅವರು ಲೋಕಶಕ್ತಿಯನ್ನು (ಜನಶಕ್ತಿ) ರಾಜ್ಯಶಕ್ತಿ (ರಾಜ್ಯಶಕ್ತಿ) ಗಿಂತ ಮೇಲಿರುವಂತೆ ಮಾಡಿದ್ದಾರೆ ಎಂದು ಶ್ರೀ ರಾಧಾಕೃಷ್ಣನ್ ಹೇಳಿದರು

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಪತ್ನಿ ದಿವಂಗತ ಪ್ರಭಾವತಿ ದೇವಿ ಅವರ ತ್ಯಾಗವನ್ನು ಉಪರಾಷ್ಟ್ರಪತಿಯವರು ಸ್ಮರಿಸಿದರು

'ಸಂಪೂರ್ಣ ಕ್ರಾಂತಿ'ಯು ಶಸ್ತ್ರಾಸ್ತ್ರಗಳ ದಂಗೆಯಲ್ಲ, ವಿಚಾರಗಳ ಕ್ರಾಂತಿಯಾಗಿತ್ತು ಎಂದು ಶ್ರೀ ರಾಧಾಕೃಷ್ಣನ್ ಪುನರುಚ್ಚರಿಸಿದರು

ಕೊಯಮತ್ತೂರಿನಲ್ಲಿ ಯುವ ನಾಯಕರಾಗಿ ಸಂಪೂರ್ಣ ಕ್ರಾಂತಿ ಚಳವಳಿಯೊಂದಿಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಉಪರಾಷ್ಟ್ರಪತಿಯವರು ನೆನಪಿಸಿಕೊಂಡರು

2047ರಲ್ಲಿ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಲೋಕನಾಯಕರ ಸತ್ಯ, ನ್ಯಾಯ, ಅಹಿಂಸೆ ಮತ್ತು ಜನಶಕ್ತಿಯ ಆದರ್ಶಗಳಿಗೆ ನವೀಕೃತ ಬದ್ಧತೆಗಾಗಿ ಶ್ರೀ ರಾಧಾಕೃಷ್ಣನ್ ಕರೆ ನೀಡಿದರು

Posted On: 11 OCT 2025 3:39PM by PIB Bengaluru

 

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಭಾರತ ರತ್ನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವಾದ ಇಂದು ಅವರ ಪೂರ್ಜರ ಗ್ರಾಮವಾದ ಬಿಹಾರದ ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 123ನೇ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಉಪರಾಷ್ಟ್ರಪತಿಯವರು ಬಿಹಾರಕ್ಕೆ ಒಂದು ದಿನದ ಭೇಟಿ ನೀಡಿದರು. ಪಾಟ್ನಾದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀ ರಾಧಾಕೃಷ್ಣನ್ ಅವರನ್ನು ಬಿಹಾರದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಮತ್ತು ಬಿಹಾರ ಸರ್ಕಾರದ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.

ನಂತರ ಉಪರಾಷ್ಟ್ರಪತಿಯವರು ಸಿತಾಬ್ ದಿಯಾರಾದಲ್ಲಿರುವ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಪೂರ್ವಜರ ಮನೆಗೆ ಭೇಟಿ ನೀಡಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಗ್ರಾಮದಲ್ಲಿರುವ ಲೋಕನಾಯಕ್ ಸ್ಮೃತಿ ಭವನ ಮತ್ತು ಗ್ರಂಥಾಲಯಕ್ಕೂ ಭೇಟಿ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವಿಶ್ರಾಂತವಾಗಿ ಹೋರಾಡಿದ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬ ಮತ್ತು ನಿಜವಾದ ಜನ ನಾಯಕ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳವಾದ ಸೀತಾಬ್ ದಿಯಾರಾದ ಪವಿತ್ರ ನೆಲದಲ್ಲಿ ನಿಂತಿರುವುದು ತಮಗೆ ದೊರೆತ ಗೌರವ ಮತ್ತು ಸೌಭಾಗ್ಯ ಎಂದು ಹೇಳಿದರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 123ನೇ ಜನ್ಮ ದಿನಾಚರಣೆಯು ಒಬ್ಬ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ಸಂದರ್ಭ ಮಾತ್ರವಲ್ಲ, ಬದಲಾಗಿ ರಾಷ್ಟ್ರವನ್ನು ಸ್ವಾರ್ಥಕ್ಕಿಂತ ಮೇಲೆ, ಮೌಲ್ಯಗಳನ್ನು ಅಧಿಕಾರಕ್ಕಿಂತ ಮೇಲೆ ಮತ್ತು ಜನರನ್ನು ರಾಜಕೀಯಕ್ಕಿಂತ ಮೇಲಿರಿಸಿದ ಆದರ್ಶವನ್ನು ಆಚರಿಸುವ ಸಂದರ್ಭವಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅಥವಾ ಪ್ರೀತಿಯಿಂದ ಜೆಪಿ ಎಂದು ಕರೆಯಲಾಗುತ್ತಿದ್ದ ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ, ಭಾರತೀಯ ಪ್ರಜಾಪ್ರಭುತ್ವದ ಅಂತಃಸಾಕ್ಷಿಯ ರಕ್ಷಕರೂ ಪಾಲಕರೂ ಆಗಿದ್ದರು ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು 1970ರ ದಶಕದಲ್ಲಿ 'ಸಂಪೂರ್ಣ ಕ್ರಾಂತಿ'ಗೆ ಕರೆ ನೀಡಿದವರೆಗೆ, ಜಯಪ್ರಕಾಶ್ ನಾರಾಯಣ್ ಅವರ ಜೀವನವು ನೈತಿಕ ಧೈರ್ಯ, ಸರಳತೆ ಮತ್ತು ತ್ಯಾಗದ ಉಜ್ವಲ ಉದಾಹರಣೆಯಾಗಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.

ಲೋಕನಾಯಕ್ ಅವರಿಗೆ ಅಧಿಕಾರದ ಲಾಲಸೆ ಇರಲಿಲ್ಲ ಮತ್ತು ಅವರಿಗೆ ನೀಡಲಾದ ಅತ್ಯುನ್ನತ ಹುದ್ದೆಗಳನ್ನು ತಿರಸ್ಕರಿಸಿದ್ದರು. ಜಯಪ್ರಕಾಶ್ ನಾರಾಯಣ್ ಅವರು ರಾಜಕೀಯ ಮಹತ್ವಾಕಾಂಕ್ಷೆಗಿಂತ ನೈತಿಕ ಅಧಿಕಾರದಿಂದ ಶಕ್ತಿಯನ್ನು ಪಡೆದಿದ್ದರು ಎಂದು ಶ್ರೀ ರಾಧಾಕೃಷ್ಣನ್ ಹೇಳಿದರು.

ಅಧಿಕಾರವನ್ನು ಹಿಡಿಯುವುದರಲ್ಲಿ ಬದಲಾಗಿ ಜನರು ಅಧಿಕಾರವನ್ನು ನಿಯಂತ್ರಿಸುವ ಬಗ್ಗೆ ತಮ್ಮ ಆಸಕ್ತಿ ಇದೆ ಎಂಬ ಲೋಕನಾಯಕ್ ಅವರ ಮಾತುಗಳನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿಯವರು, ಈ ಮಾತುಗಳು ಜಯಪ್ರಕಾಶ್ ನಾರಾಯಣ್ ಅವರ ಮೌಲ್ಯಾಧಾರಿತ ಮತ್ತು ನೈತಿಕ ರಾಜಕೀಯದ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಭೂದಾನ ಚಳವಳಿಯಲ್ಲಿ ಲೋಕನಾಯಕರ ಪ್ರಮುಖ ಪಾತ್ರವನ್ನು ಅವರು ಎತ್ತಿ ತೋರಿಸಿದರು, ಅವರ ಭಾಗವಹಿಸುವಿಕೆಯು ಆಂದೋಲನಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ನೈತಿಕ ವಿಶ್ವಾಸಾರ್ಹತೆಯನ್ನು ನೀಡಿತು ಎಂದು ಅವರು ಹೇಳಿದರು. ಲೋಕನಾಯಕರು ಬಿಹಾರ ಮತ್ತು ಭಾರತದಾದ್ಯಂತ ಸಮುದಾಯಗಳು ಸ್ವಹಿತಾಸಕ್ತಿಯನ್ನು ಮೀರಿ ಸಾಮಾನ್ಯ ಒಳಿತಿಗಾಗಿ ಕೆಲಸ ಮಾಡಲು ಸ್ಫೂರ್ತಿ ನೀಡಿದರು ಎಂದು ಉಪರಾಷ್ಟ್ರಪತಿ ಹೇಳಿದರು.

ಭ್ರಷ್ಟಾಚಾರ ವ್ಯಾಪಕವಾಗಿದ್ದ ಸಮಯದಲ್ಲಿ, ಯುವಜನರಿಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಪುನರ್ನಿಮಿಸುವ ಶಕ್ತಿ ಇದೆ ಎಂದು ಲೋಕನಾಯಕರು ದೃಢವಾಗಿ ನಂಬಿದ್ದರು ಎಂದು ಉಪರಾಷ್ಟ್ರಪತಿ ಹೇಳಿದರು. ಜಯಪ್ರಕಾಶ್ ನಾರಾಯಣ್ ಅವರು ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಅಹಿಂಸಾತ್ಮಕ ಕ್ರಾಂತಿಯು ಒಂದು ಸಾಧನ ಎಂಬುದರ ಪ್ರಬಲ ಪ್ರತಿಪಾದಕರಾಗಿದ್ದರು ಎಂದು ಅವರು ಒತ್ತಿ ಹೇಳಿದರು.

ಲೋಕನಾಯಕ್ ಅವರ ಸಂಪೂರ್ಣ ಕ್ರಾಂತಿ ಕರೆಯು ಶಸ್ತ್ರಾಸ್ತ್ರಗಳ ದಂಗೆಯಲ್ಲ, ಬದಲಾಗಿ ವಿಚಾರಗಳ ಕ್ರಾಂತಿಯಾಗಿತ್ತು. ಸ್ವಚ್ಛ ಆಡಳಿತ, ಬಡವರ ಸಬಲೀಕರಣ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯ ಕ್ರಾಂತಿಯಾಗಿತ್ತು ಎಂದು ಅವರು ಹೇಳಿದರು.

ಸಂಪೂರ್ಣ ಕ್ರಾಂತಿ ಆಂದೋಲನದೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿದ ಉಪ ರಾಷ್ಟ್ರಪತಿಯವರು, ಲೋಕನಾಯಕ್ ಅವರ ಕರೆಯಿಂದ ಪ್ರೇರಿತರಾಗಿ ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಪೂರ್ಣ ಕ್ರಾಂತಿ ಆಂದೋಲನದ ಕೊಯಮತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ತಮಗೆ ದೊರೆತ ವೈಯಕ್ತಿಕ ಸೌಭಾಗ್ಯ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯ ಚಳವಳಿಗೆ ನಿಸ್ವಾರ್ಥವಾಗಿ ಕೊಡುಗೆ ನೀಡಲು ಬ್ರಹ್ಮಚರ್ಯದ ಪ್ರತಿಜ್ಞೆ ತೆಗೆದುಕೊಂಡ ಲೋಕನಾಯಕ್ ಅವರ ಪತ್ನಿ ಶ್ರೀಮತಿ ಪ್ರಭಾವತಿ ದೇವಿ ಅವರ ಅಚಲ ಬೆಂಬಲವನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು.

ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರನ್ನು ಜನ ಸಬಲೀಕರಣದ ಮಹಾನ್ ಪ್ರತಿಪಾದಕ ಎಂದು ಬಣ್ಣಿಸಿದ ಉಪರಾಷ್ಟ್ರಪತಿ, ಅವರು ಯಾವಾಗಲೂ ಲೋಕಶಕ್ತಿಯನ್ನು (ಜನರ ಶಕ್ತಿ) ರಾಜ್ಯಶಕ್ತಿ (ಸರ್ಕಾರದ ಶಕ್ತಿ) ಗಿಂತ ಮೇಲಿರಿಸಿದ್ದರು ಎಂದು ಅವರು ಹೇಳಿದರು.

ಇಂದಿಗೂ ಸಹ, ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ಬಲವು ಲೋಕನಾಯಕರು ಬಲವಾಗಿ ಎತ್ತಿಹಿಡಿದ ಮೌಲ್ಯಗಳಾದ ಪಾರದರ್ಶಕತೆ, ಉತ್ತರದಾಯಿತ್ವ, ಸಾರ್ವಜನಿಕ ಸೇವೆ ಮತ್ತು ನೈತಿಕ ಧೈರ್ಯವನ್ನು ಆಧರಿಸಿದೆ ಎಂದು ಅವರು ಹೇಳಿದರು.

ಭಾರತವು ವಿಕಸಿತ ಭಾರತ್@2047 ಕಡೆಗೆ ಸಾಗುತ್ತಿರುವಾಗ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಆದರ್ಶಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಉಪರಾಷ್ಟ್ರಪತಿಯವರು ಒತ್ತಿ ಹೇಳಿದರು.

ಭಾರತಕ್ಕೆ ತನ್ನ ಶ್ರೇಷ್ಠ ಪುತ್ರರಲ್ಲಿ ಒಬ್ಬರಾದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ನೀಡಿದ ಬಿಹಾರದ ಭೂಮಿಯ ಬಗ್ಗೆ ಉಪರಾಷ್ಟ್ರಪತಿಯವರು ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಲೋಕನಾಯಕರ ಮೌಲ್ಯಗಳಾದ ಸತ್ಯ, ನ್ಯಾಯ, ಅಹಿಂಸೆ ಮತ್ತು ಜನಶಕ್ತಿಗೆ ರಾಷ್ಟ್ರದ ಸಾಮೂಹಿಕ ಬದ್ಧತೆಯನ್ನು ನವೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಅವರ ಜೀವನ ಮತ್ತು ಆದರ್ಶಗಳು ಪ್ರಜಾಪ್ರಭುತ್ವದಲ್ಲಿ ಜನರು ಯಾವಾಗಲೂ ಮೊದಲು ಬರುತ್ತಾರೆ ಎಂಬುದನ್ನು ಎಲ್ಲರಿಗೂ ನೆನಪಿಸುತ್ತವೆ ಎಂದು ಹೇಳಿ ತಮ್ಮ ಮಾತು ಮುಕ್ತಾಯ ಮಾಡಿದರು.

 

*****


(Release ID: 2177927) Visitor Counter : 8