ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಎಲ್ಲಾ ರಾಜಕೀಯ ಪಕ್ಷಗಳ ಸದನದ ನಾಯಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯ ವಹಿಸಿದ್ದರು


ಸಂವಾದ,  ಮಾತುಕತೆ, ವಿಚಾರ ವಿಮರ್ಶೆ  ಮತ್ತು ಚರ್ಚೆ ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಾಗಿವೆ - ಶ್ರೀ ಸಿ.ಪಿ. ರಾಧಾಕೃಷ್ಣನ್

ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಪ್ರಶ್ನೆಗಳನ್ನು ಎತ್ತಲು ಶೂನ್ಯ ವೇಳೆ, ವಿಶೇಷ ಉಲ್ಲೇಖ ಮತ್ತು ಪ್ರಶ್ನೋತ್ತರ ಅವಧಿಯಂತಹ ಲಭ್ಯವಿರುವ ಸಾಧನಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸದಸ್ಯರನ್ನು ಒತ್ತಾಯಿಸಿದರು.

ರಾಜ್ಯಸಭೆಯ ನಿಯಮಗಳ ಪುಸ್ತಕದೊಂದಿಗೆ ಭಾರತದ ಸಂವಿಧಾನವು ಸಂಸತ್ತಿನ  ಕಾರ್ಯನಿರ್ವಹಣೆಗೆ ಮಾರ್ಗದರ್ಶಿ ಚೌಕಟ್ಟು, ಲಕ್ಷ್ಮಣ ರೇಖೆಯಾಗಿದೆ - ಶ್ರೀ ಸಿ.ಪಿ. ರಾಧಾಕೃಷ್ಣನ್

ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರು, ರಾಜ್ಯಸಭೆಯು ಲಕ್ಷ್ಮಣ ರೇಖೆಯೊಳಗೆ ಎಲ್ಲಾ ಸದಸ್ಯರ ಹಕ್ಕುಗಳನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು

ಸದನದಲ್ಲಿ ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಸಮಯವನ್ನು ಪ್ರಜಾಪ್ರಭುತ್ವವನ್ನು ಬಲಪಡಿಸಲು ಬಳಸಬೇಕು

Posted On: 07 OCT 2025 8:22PM by PIB Bengaluru

ಗೌರವಾನ್ವಿತ ಉಪ ರಾಷ್ಟ್ರಪತಿ ಹಾಗು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ರಾಜ್ಯಸಭೆಯ ಎಲ್ಲಾ ರಾಜಕೀಯ ಪಕ್ಷಗಳ ಸದನದ ನಾಯಕರೊಂದಿಗೆ ತಮ್ಮ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಚಿವರು ಸೇರಿದಂತೆ ಸದನದ 29 ನಾಯಕರನ್ನು ಸ್ವಾಗತಿಸಿದ ಅಧ್ಯಕ್ಷರು, ಅಧಿಕಾರ ವಹಿಸಿಕೊಂಡಾಗ ತಮಗೆ ದೊರೆತ ಅಗಾಧ ಬೆಂಬಲ ಮತ್ತು ಅಭಿನಂದನಾ ಸಂದೇಶಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಇಷ್ಟು ಕಡಿಮೆ ಅವಧಿಯಲ್ಲಿ ಒಟ್ಟಿಗೆ ಸೇರುವುದನ್ನು ನೋಡುವುದು ಸಂತೋಷವಾಗಿದೆ ಎಂದು ಅವರು ಹೇಳಿದರು.

ರಾಜ್ಯಸಭೆಯ ಅಧ್ಯಕ್ಷರು ತಮ್ಮ ಆರಂಭಿಕ ಭಾಷಣದಲ್ಲಿ, ರಾಜ್ಯಸಭೆಯ ಕಾರ್ಯನಿರ್ವಹಣೆಯನ್ನು ಘನತೆ, ಶಿಸ್ತು ಮತ್ತು ಸುವ್ಯವಸ್ಥೆಯಿಂದ ನಡೆಸುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಸಂವಾದ, ಚರ್ಚೆ ಮತ್ತು ಅಭಿಪ್ರಾಯ ವಿನಿಮಯವು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಾಗಿವೆ ಎಂದು ಅವರು ಹೇಳಿದರು.

ಸಾರ್ವಜನಿಕ ಕಾಳಜಿಯ ಸಮಸ್ಯೆಗಳನ್ನು ಎತ್ತಲು ಸದಸ್ಯರಿಗೆ ಲಭ್ಯವಿರುವ ಅವಕಾಶಗಳನ್ನು ಉಲ್ಲೇಖಿಸಿದ ಅಧ್ಯಕ್ಷರು, ಶೂನ್ಯ ವೇಳೆ, ವಿಶೇಷ ಉಲ್ಲೇಖ ಮತ್ತು ಪ್ರಶ್ನೋತ್ತರ ಸಮಯವನ್ನು ಸದಸ್ಯರು ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಮುಂದಿಡಲು ಅನುವು ಮಾಡಿಕೊಡುವ ಪ್ರಮುಖ ಸಾಧನಗಳಾಗಿ ಎಂದು ಹೇಳಿದರು.

ಭಾರತದ ಸಂವಿಧಾನ ಮತ್ತು ರಾಜ್ಯಸಭೆಯ ನಿಯಮಗಳ ಪುಸ್ತಕವು ಸಂಸದೀಯ ಭಾಷಣಕ್ಕೆ ಮಾರ್ಗದರ್ಶಿ ಚೌಕಟ್ಟಾಗಿ - ಲಕ್ಷ್ಮಣ ರೇಖೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಸದಸ್ಯರಿಗೆ ನೆನಪಿಸಿದರು. ಈ ಚೌಕಟ್ಟಿನೊಳಗೆ ಎಲ್ಲಾ ಸದಸ್ಯರ ಹಕ್ಕುಗಳನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಅಧ್ಯಕ್ಷರು ಪುನರುಚ್ಚರಿಸಿದರು, ಅದೇ ಸಮಯದಲ್ಲಿ ಸದನದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಎಲ್ಲರ ಜವಾಬ್ದಾರಿಯ ಬಗ್ಗೆ ಒತ್ತಿ ಹೇಳಿದರು.

ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸಲು ಸದನದ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಮತ್ತು ಪ್ರತಿ ಸೆಕೆಂಡ್ ಸಮಯವನ್ನು ಬಳಸಿಕೊಳ್ಳುವಂತೆ ಅವರು ಎಲ್ಲಾ ಸದಸ್ಯರನ್ನು ಒತ್ತಾಯಿಸಿದರು.

ಸದನದ ಗೌರವಾನ್ವಿತ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ನಂತರ ಇತರ ನಾಯಕರು ಸಹ ಮಾತನಾಡಿದರು. ಸದನದ ಕಲಾಪಗಳನ್ನು ನಡೆಸುವಾಗ ಸಂಸದೀಯ ಕಾರ್ಯವಿಧಾನದ ಅತ್ಯುನ್ನತ ಸಂಪ್ರದಾಯಗಳನ್ನು ಪಾಲಿಸುವ ಅಗತ್ಯವನ್ನು ಅಧ್ಯಕ್ಷರು ಒತ್ತಿ ಹೇಳಿದರು ಮತ್ತು ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಸಹಕಾರದ ಭರವಸೆ ನೀಡಿದರು. ರಾಜಕೀಯ ಪಕ್ಷಗಳ ನಾಯಕರು, ಸದನದ ಕಾರ್ಯನಿರ್ವಹಣೆಯಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಾ, ವಿರೋಧ ಪಕ್ಷಗಳು ಶೂನ್ಯ ವೇಳೆ, ಪ್ರಶ್ನೋತ್ತರ ಅವಧಿ, ಖಾಸಗಿ ಸದಸ್ಯರ ವ್ಯವಹಾರ, ಅಲ್ಪಾವಧಿಯ ಚರ್ಚೆ, ಗಮನ ಸೆಳೆಯುವ ಸೂಚನೆಗಳು ಮುಂತಾದ ವಿವಿಧ ಸಂಸದೀಯ ಕ್ರಮಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಕಷ್ಟು ಅವಕಾಶವನ್ನು ಒದಗಿಸುವಂತೆ ಗೌರವಾನ್ವಿತ ಅಧ್ಯಕ್ಷರನ್ನು ಕೇಳಿಕೊಂಡರು. ಸಣ್ಣ ಪಕ್ಷಗಳು ತಮ್ಮ ಸೀಮಿತ ಸಂಖ್ಯೆಯ ಕಾರಣದಿಂದಾಗಿ ಹಿಂದೆ ಉಳಿಯದಂತೆ ಪ್ರತಿ ಪಕ್ಷಕ್ಕೂ ಸಾಕಷ್ಟು ಸಮಯವನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಸೂಚಿಸಲಾಯಿತು, ಇದನ್ನು ಅವರು ಪರಿಗಣಿಸುವುದಾಗಿ ಗೌರವಾನ್ವಿತ ಅಧ್ಯಕ್ಷರು ಭರವಸೆ ನೀಡಿದರು.

ಸಭೆಯು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು, ಎಲ್ಲಾ ಸದನಗಳ ನಾಯಕರು ಭಾಗವಹಿಸಿದ್ದರು. ತಮ್ಮ ಮುಕ್ತಾಯದ ಹೇಳಿಕೆಯಲ್ಲಿ, ಮುಂಬರುವ ಚಳಿಗಾಲದ ಅಧಿವೇಶನವನ್ನು ಸಾಮೂಹಿಕ ಪ್ರಯತ್ನ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ಒಂದು ಅವಕಾಶ ಎಂದು ಅಧ್ಯಕ್ಷರು ಬಣ್ಣಿಸಿದರು. ಸದಸ್ಯರು ನೀಡಿದ ಎಲ್ಲಾ ಅಮೂಲ್ಯ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಭಾಗವಹಿಸಿದ್ದಕ್ಕಾಗಿ ಅವರು ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

 

*****
 


(Release ID: 2176079) Visitor Counter : 4