ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
7–15 ವರ್ಷ ವಯಸ್ಸಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಅಪ್ ಡೇಟ್ ಶುಲ್ಕ ಮನ್ನಾ ಮಾಡಿದ ಯು.ಐ.ಡಿ.ಎ.ಐ; ಸುಮಾರು 6 ಕೋಟಿ ಮಕ್ಕಳಿಗೆ ಪ್ರಯೋಜನ
MBU ಶುಲ್ಕ ಮನ್ನಾವು 2025ರ ಅಕ್ಟೋಬರ್ 1 ರಿಂದ ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ
ಆಧಾರ್‌ನಲ್ಲಿ ಉಚಿತ ಬಯೋಮೆಟ್ರಿಕ್ ಅಪ್ ಡೇಟ್ ಗಳು ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಡಿ.ಬಿ.ಟಿ ಯೋಜನೆಗಳ ಪ್ರವೇಶವನ್ನು ಸುಲಭಗೊಳಿಸಲಿವೆ
Posted On:
04 OCT 2025 7:03PM by PIB Bengaluru
ಜನಪರ ಕ್ರಮವೊಂದರಲ್ಲಿ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಕಡ್ಡಾಯ ಬಯೋಮೆಟ್ರಿಕ್ ಅಪ್ ಡೇಟ್ ಗಾಗಿ (MBU-1) ವಿಧಿಸುವ ಎಲ್ಲ ಶುಲ್ಕಗಳನ್ನು ಮನ್ನಾ ಮಾಡಿದೆ. ಈ ನಿರ್ಧಾರವು ಸುಮಾರು 6 ಕೋಟಿ ಮಕ್ಕಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ.
ಸದರಿ ವಯೋಮಾನದವರಿಗೆ ಎಂ.ಬಿ.ಯು (MBU) ಶುಲ್ಕಗಳ ಮನ್ನಾವು ಅಕ್ಟೋಬರ್ 1, 2025 ರಿಂದಲೇ ಜಾರಿಗೆ ಬಂದಿದ್ದು, ಒಂದು ವರ್ಷದ ಅವಧಿಗೆ ಜಾರಿಯಲ್ಲಿರುತ್ತದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವು ಆಧಾರ್ ಗೆ ದಾಖಲಾಗುವಾಗ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬೆರಳಚ್ಚು ಮತ್ತು ಐರಿಸ್ (ಕಣ್ಣಿನ ಪಾಪೆ) ಬಯೋಮೆಟ್ರಿಕ್ ಗಳನ್ನು ಆಧಾರ್ ನೋಂದಣಿಗೆ ಸೆರೆಹಿಡಿಯಲಾಗುವುದಿಲ್ಲ, ಏಕೆಂದರೆ ಆ ವಯಸ್ಸಿನಲ್ಲಿ ಅವು ಪಕ್ವವಾಗಿರುವುದಿಲ್ಲ.
ಆದ್ದರಿಂದ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಮಗುವಿಗೆ ಐದು ವರ್ಷ ತುಂಬಿದಾಗ ಬೆರಳಚ್ಚುಗಳು, ಐರಿಸ್ ಮತ್ತು ಭಾವಚಿತ್ರವನ್ನು ಕಡ್ಡಾಯವಾಗಿ ಅವರ ಆಧಾರ್ ನಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಇದನ್ನು ಮೊದಲ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (MBU) ಎಂದು ಕರೆಯಲಾಗುತ್ತದೆ. ಅದೇ ರೀತಿ, ಮಗುವು 15 ವರ್ಷ ತಲುಪಿದಾಗ ಮತ್ತೊಮ್ಮೆ ಬಯೋಮೆಟ್ರಿಕ್‌ಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ, ಇದನ್ನು ಎರಡನೇ MBU ಎಂದು ಕರೆಯಲಾಗುತ್ತದೆ.
ಮೊದಲ ಮತ್ತು ಎರಡನೇ MBU ಗಳನ್ನು ಕ್ರಮವಾಗಿ 5-7 ಮತ್ತು 15-17 ವರ್ಷ ವಯಸ್ಸಿನ ನಡುವೆ ಮಾಡಿದರೆ, ಅವುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಆ ನಂತರ, ಪ್ರತಿ MBUಗೆ ರೂ. 125/- ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ. ಈ ನಿರ್ಧಾರದಿಂದಾಗಿ, 5 ರಿಂದ 17 ವರ್ಷದೊಳಗಿನ ಎಲ್ಲ ಮಕ್ಕಳಿಗೂ MBU ಈಗ ಪರಿಣಾಮಕಾರಿಯಾಗಿ ಉಚಿತವಾಗಿದೆ.
ಅಪ್ ಡೇಟ್ ಮಾಡಿದ ಬಯೋಮೆಟ್ರಿಕ್ ಹೊಂದಿರುವ ಆಧಾರ್, ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆಗಳಿಗೆ ನೋಂದಣಿ, ವಿದ್ಯಾರ್ಥಿವೇತನದ ಪ್ರಯೋಜನಗಳು, ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಯೋಜನೆಗಳು ಇತ್ಯಾದಿ ಅನ್ವಯವಾಗುವ ಸೇವೆಗಳನ್ನು ಪಡೆಯುವಲ್ಲಿ ಆಧಾರ್ ನ ಸುಗಮ ಬಳಕೆಯನ್ನು ಖಚಿತಪಡಿಸುತ್ತದೆ. ಪೋಷಕರು/ಪಾಲಕರು ತಮ್ಮ ಮಕ್ಕಳ/ಕುಟುಂಬದ ಸದಸ್ಯರ ಬಯೋಮೆಟ್ರಿಕ್ಸ್ ಅನ್ನು ಆದ್ಯತೆಯ ಮೇರೆಗೆ ಆಧಾರ್ ನಲ್ಲಿ ಅಪ್‌ಡೇಟ್ ಮಾಡಲು ಸಲಹೆ ನೀಡಲಾಗಿದೆ.
*****
(Release ID: 2174895)
Visitor Counter : 34