ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಗಾಂಧಿನಗರದಲ್ಲಿ "ಆಪ್ ಕಿ ಪುಂಜಿ, ಆಪ್ಕಾ ಅಧಿಕಾರ್" ಎಂಬ ರಾಷ್ಟ್ರವ್ಯಾಪಿ ಹಣಕಾಸು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು 


"ಕ್ಲೇಮ್ ಮಾಡದ ಠೇವಣಿಗಳು ಕೇವಲ ಕಾಗದದ ಮೇಲಿನ ನಮೂದುಗಳಲ್ಲ; ಅವು ಸಾಮಾನ್ಯ ಕುಟುಂಬಗಳು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವಾಗಿವೆ" - ಕೇಂದ್ರ ಹಣಕಾಸು ಸಚಿವರು

"ಜಾಗೃತಿ, ಲಭ್ಯತೆ ಮತ್ತು ಕ್ರಿಯೆ ಎಂಬ 3A ತಂತ್ರವು ಅಭಿಯಾನದ ಮಾರ್ಗದರ್ಶಿ ತತ್ವಗಳಾಗಿರುತ್ತದೆ" -ಶ್ರೀಮತಿ ನಿರ್ಮಲಾ ಸೀತಾರಾಮನ್

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸಂದೇಶದಲ್ಲಿ ಇದು ಸಾರ್ವಜನಿಕ ನಂಬಿಕೆ, ಗೌರವ ಮತ್ತು ಸಬಲೀಕರಣವನ್ನು ಬಲಪಡಿಸುವ ಸಾಮೂಹಿಕ ಪ್ರಯತ್ನವಾಗಿದೆ ಎಂದು ಈ ಉಪಕ್ರಮವನ್ನು ಶ್ಲಾಘಿಸಿದ್ದಾರೆ

"ಕ್ಲೇಮ್ ಮಾಡದ ಠೇವಣಿಗಳು ಫಲಾನುಭವಿಗಳ ಶಿಕ್ಷಣ, ಸಬಲೀಕರಣ ಮತ್ತು ಇತರ ಆರ್ಥಿಕ ಅಗತ್ಯಗಳಿಗೆ ಉಪಯುಕ್ತವಾಗಿವೆ" - ರಾಜ್ಯ ಹಣಕಾಸು ಸಚಿವರಾದ ಶ್ರೀ ಕನುಭಾಯಿ ದೇಸಾಯಿ

"ನಾಗರಿಕರು ಸ್ಪಷ್ಟತೆ ಮತ್ತು ವಿಶ್ವಾಸದಿಂದ ಮುಂದುವರಿಯಲು ಕ್ಲೈಮುಗಳನ್ನು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಇತ್ಯರ್ಥಪಡಿಸಬೇಕು" - ಹಣಕಾಸು ಸೇವೆಗಳ ಕಾರ್ಯದರ್ಶಿ

2025ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನವನ್ನು ನಡೆಸಲಾಗುವುದು

ಡಿಜಿಟಲ್ ಪ್ರದರ್ಶನ ಮತ್ತು ಸಹಾಯವಾಣಿ ಕ್ಲೇಮ್ ಮಾಡದ ಹಣಕಾಸು ಸ್ವತ್ತುಗಳನ್ನು ಪತ್ತೆಹಚ್ಚಲು ಮತ್ತು ಕ್ಲೇಮ್ ಪಡೆಯಲು ನಾಗರಿಕರಿಗೆ ಸಹಾಯ ಮಾಡುತ್ತವೆ

Posted On: 04 OCT 2025 5:13PM by PIB Bengaluru

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿ "ಆಪ್ ಕಿ ಪುಂಜಿ, ಆಪ್ಕಾ ಅಧಿಕಾರ್" ಎಂಬ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ರಾಜ್ಯ ಹಣಕಾಸು ಸಚಿವರಾದ ಶ್ರೀ ಕನುಭಾಯಿ ದೇಸಾಯಿ ಅವರ ಸಮ್ಮುಖದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಶ್ರೀ ಎಂ. ನಾಗರಾಜು, ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರು, ಐ ಆರ್‌ ಡಿ ಎ ಐ, ಸೆಬಿ, ಪಿ ಎಫ್‌ ಆರ್‌ ಡಿ ಎ ಯ ಪೂರ್ಣಾವಧಿ ಸದಸ್ಯರು, ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ನಾಗರಿಕರು ಉಳಿಸುವ ಪ್ರತಿಯೊಂದು ರೂಪಾಯಿಯೂ ಅವರಿಗೆ ಅಥವಾ ಅವರ ಕುಟುಂಬಗಳಿಗೆ ಹಿಂತಿರುಗಬೇಕು ಎಂಬ ಸರಳ ಆದರೆ ಶಕ್ತಿಶಾಲಿ ಸಂದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಒತ್ತಿ ಹೇಳಿದರು.

"ಕ್ಲೇಮ್ ಮಾಡದ ಠೇವಣಿಗಳು, ವಿಮಾ ಆದಾಯಗಳು, ಲಾಭಾಂಶಗಳು, ಮ್ಯೂಚುವಲ್ ಫಂಡ್ ಬ್ಯಾಲೆನ್ಸ್‌ ಗಳು ಮತ್ತು ಪಿಂಚಣಿಗಳು ಕೇವಲ ಕಾಗದದ ಮೇಲಿನ ನಮೂದುಗಳಲ್ಲ; ಅವು ಸಾಮಾನ್ಯ ಕುಟುಂಬಗಳು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವಾಗಿರುತ್ತವೆ - ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಭದ್ರತೆಯನ್ನು ಬೆಂಬಲಿಸುವ ಉಳಿತಾಯವಾಗಿರುತ್ತವೆ" ಎಂದು ಹಣಕಾಸು ಸಚಿವರು ಹೇಳಿದರು.

ಇದಲ್ಲದೆ, ಕೇಂದ್ರ ಹಣಕಾಸು ಸಚಿವರು ಈ ಅಭಿಯಾನದ ಮಾರ್ಗದರ್ಶಿ ತತ್ವಗಳಾದ "3A” – ಜಾಗೃತಿ, ಲಭ್ಯತೆ ಮತ್ತು ಕ್ರಿಯೆ - ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕ ಮತ್ತು ಸಮುದಾಯವು ಕ್ಲೇಮ್‌ ಮಾಡದ ಸ್ವತ್ತುಗಳನ್ನು ಹೇಗೆ ಪತ್ತೆಹಚ್ಚುವುದು ಎಂಬುದರ ಕುರಿತು ತಿಳಿಸುವುದನ್ನು ಖಚಿತಪಡಿಸಿಕೊಳ್ಳುವುದು ಜಾಗೃತಿಯ ಗುರಿಯಾಗಿದೆ. ಲಭ್ಯತೆಯು ಸರಳೀಕೃತ ಡಿಜಿಟಲ್ ಪರಿಕರಗಳು ಮತ್ತು ಜಿಲ್ಲಾ ಮಟ್ಟದ ಸಂಪರ್ಕವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಕ್ರಿಯೆಯು ಸಕಾಲಿಕ ಮತ್ತು ಪಾರದರ್ಶಕ ಕ್ಲೇಮ್ ಇತ್ಯರ್ಥಗಳಿಗೆ ಒತ್ತು ನೀಡುತ್ತದೆ.

"ಈ ಮೂರು ಸ್ತಂಭಗಳು ಒಟ್ಟಾಗಿ ನಾಗರಿಕರು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಸಮುದಾಯ ಜಾಗೃತಿಯನ್ನು ಉತ್ತೇಜಿಸುತ್ತವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ನ್ಯಾಯಯುತ ಉಳಿತಾಯವನ್ನು ಘನತೆಯಿಂದ ಮತ್ತು ಸುಲಭವಾಗಿ ಮರಳಿ ಪಡೆಯಬಹುದು ಎಂಬುದನ್ನು ಖಚಿತಪಡಿಸುತ್ತವೆ" ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ಇತ್ತೀಚಿನ ಕವೈಸಿ ಮತ್ತು ಮರು-ಕೆವೈಸಿ ಅಭಿಯಾನಗಳಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ವಿಶೇಷವಾಗಿ ಗುಜರಾತ್ ಗ್ರಾಮೀಣ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಸಕ್ರಿಯ ಪಾತ್ರವನ್ನು ಹಣಕಾಸು ಸಚಿವರು ಶ್ಲಾಘಿಸಿದರು, ಈ ಪ್ರಯತ್ನಗಳು ನಾಗರಿಕರು ಮತ್ತು ಔಪಚಾರಿಕ ಹಣಕಾಸು ವ್ಯವಸ್ಥೆಯ ನಡುವಿನ ಸಂಪರ್ಕವನ್ನು ಬಲಪಡಿಸಿವೆ ಎಂದು ಹೇಳಿದರು. "ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕೈಗೊಂಡಿರುವ ಇಂತಹ ಉಪಕ್ರಮಗಳು ಫಲಾನುಭವಿಗಳು ತಮ್ಮ ಉಳಿತಾಯ ಮತ್ತು ಹಕ್ಕುಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಿವೆ, ಇದು ಪ್ರಸ್ತುತ ಅಭಿಯಾನದ ಯಶಸ್ಸಿಗೆ ಬಲವಾದ ಅಡಿಪಾಯವನ್ನು ಹಾಕಿದೆ" ಎಂದು ಕೇಂದ್ರ ಸಚಿವರು ಹೇಳಿದರು.

ಯಾವುದೇ ನಾಗರಿಕನು ತನ್ನ ಕಾನೂನುಬದ್ಧ ಸಂಪತ್ತಿನಿಂದ ವಂಚಿತನಾಗದಂತೆ, ಕ್ಲೇಮ್‌ ಮಾಡದ ಹಣಕಾಸು ಆಸ್ತಿಗಳನ್ನು ಮರುಪಡೆಯುವ ಈ ರಾಷ್ಟ್ರವ್ಯಾಪಿ ಉಪಕ್ರಮದಲ್ಲಿ ಎಲ್ಲಾ ಸಂಸ್ಥೆಗಳು ಸಮಾನ ಸಮರ್ಪಣೆ ಮತ್ತು ಸಂಪರ್ಕವನ್ನು ಕಾಯ್ದುಕೊಳ್ಳಬೇಕೆಂದು ಶ್ರೀಮತಿ ಸೀತಾರಾಮನ್ ಒತ್ತಾಯಿಸಿದರು.

ವಿವಿಧ ಸಂಸ್ಥೆಗಳಿಂದ ತಮ್ಮ ಕ್ಲೇಮ್ ಮಾಡದ ಠೇವಣಿಗಳನ್ನು ಯಶಸ್ವಿಯಾಗಿ ಮರಳಿ ಪಡೆದ ಫಲಾನುಭವಿಗಳಿಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.‌

ಈ ಸಂದರ್ಭದಲ್ಲಿ ಮಾತನಾಡಿದ ಗುಜರಾತ್ ರಾಜ್ಯ ಹಣಕಾಸು ಸಚಿವರಾದ ಶ್ರೀ ಕನುಭಾಯಿ ದೇಸಾಯಿ, ಗುಜರಾತಿನಿಂದ ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಮತ್ತು ಸಕ್ರಿಯ ಭಾಗವಹಿಸುವಿಕೆ ಮತ್ತು ಸಂಪರ್ಕದ ಮೂಲಕ ಅದರ ಯಶಸ್ವಿ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು. "ಕ್ಲೇಮ್‌ ಮಾಡದ ಠೇವಣಿಗಳು ಫಲಾನುಭವಿಗಳ ಶಿಕ್ಷಣ, ಸಬಲೀಕರಣ ಮತ್ತು ಇತರ ಆರ್ಥಿಕ ಅಗತ್ಯಗಳಿಗೆ ಬಹಳ ಉಪಯುಕ್ತವಾಗಿವೆ" ಎಂದು ಶ್ರೀ ಕನುಭಾಯಿ ದೇಸಾಯಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಗಾಂಧಿನಗರದ ಲೋಕಸಭಾ ಸದಸ್ಯರಾದ ಶ್ರೀ ಅಮಿತ್ ಶಾ ಅವರ ಸಂದೇಶವೂ ಇತ್ತು. ಕೇಂದ್ರ ಗೃಹ ಸಚಿವರು ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ನಾಗರಿಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು. ಈ ಉಪಕ್ರಮವು ಕ್ಲೇಮ್‌ ಮಾಡದ ಹಣಕಾಸು ಸ್ವತ್ತುಗಳನ್ನು ಹಿಂದಿರುಗಿಸುವುದನ್ನು ಮೀರಿ ಸಾರ್ವಜನಿಕ ನಂಬಿಕೆ, ಘನತೆ ಮತ್ತು ಸಬಲೀಕರಣವನ್ನು ಬಲಪಡಿಸುವ ಸಾಮೂಹಿಕ ಪ್ರಯತ್ನವನ್ನು ಸಾಕಾರಗೊಳಿಸುತ್ತದೆ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಶ್ರೀ ಎಂ. ನಾಗರಾಜು, ಆಗಸ್ಟ್ 2025ರ ಹೊತ್ತಿಗೆ, ₹75,000 ಕೋಟಿಗೂ ಹೆಚ್ಚು ಕ್ಲೇಮ್ ಮಾಡದ ಠೇವಣಿಗಳನ್ನು ಆರ್‌ ಬಿ ಐ ನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಇದಲ್ಲದೆ, ಕ್ಲೇಮ್ ಮಾಡದ ವಿಮಾ ಆದಾಯವು ₹13,800 ಕೋಟಿಗೂ ಹೆಚ್ಚು, ಮ್ಯೂಚುವಲ್ ಫಂಡ್‌ ಗಳಲ್ಲಿ ಕ್ಲೇಮ್ ಮಾಡದ ಬಾಕಿಗಳು ಸುಮಾರು ₹3,000 ಕೋಟಿ ಮತ್ತು ₹9,000 ಕೋಟಿಗೂ ಹೆಚ್ಚು ಮೌಲ್ಯದ ಪಾವತಿಸದ ಲಾಭಾಂಶಗಳಾಗಿವೆ ಎಂದು ಶ್ರೀ ನಾಗರಾಜು ಹೇಳಿದರು.

"ಕ್ಲೇಮ್‌ ಗಳನ್ನು ತ್ವರಿತವಾಗಿ, ನ್ಯಾಯಯುತವಾಗಿ ಮತ್ತು ನಾಗರಿಕರಿಗೆ ಅನಗತ್ಯ ತೊಂದರೆಗಳಿಲ್ಲದೆ ಇತ್ಯರ್ಥಪಡಿಸಬೇಕು, ಇದರಿಂದ ಅವರು ಸ್ಪಷ್ಟತೆ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಬಹುದು" ಎಂದು ಡಿ ಎಫ್‌ ಎಸ್ ಕಾರ್ಯದರ್ಶಿ ಹೇಳಿದರು. ಪ್ರತಿಯೊಬ್ಬ ನಾಗರಿಕರ ಆರ್ಥಿಕ ಸಬಲೀಕರಣದ ಇಲಾಖೆಯ ದೀರ್ಘಕಾಲೀನ ಗುರಿಯನ್ನು ಸಾಧಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ಶ್ರೀ ನಾಗರಾಜು ಹೇಳಿದರು.

ಇಲ್ಲಿಯವರೆಗೆ ಸುಮಾರು 172 ಕೋಟಿ ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲಾಗಿದೆ. ಈ ಯೋಜನೆಯು ಜನಧನ ಮತ್ತು ಯುಪಿಐನಿಂದ ನೇರ ಲಾಭ ವರ್ಗಾವಣೆಯವರೆಗೆ ಆರ್ಥಿಕ ಸೇರ್ಪಡೆಯಲ್ಲಿ ಭಾರತದ ವ್ಯಾಪಕ ಸಾಧನೆಗಳನ್ನು ಆಧರಿಸಿದೆ. ಇದು ನಾಗರಿಕರಿಗೆ ಹಣಕಾಸು ಸೇವೆಗಳಿಗೆ ಪ್ರವೇಶವನ್ನು ನೀಡುವುದಲ್ಲದೆ, ಅವರಿಗೆ ನ್ಯಾಯಯುತವಾಗಿ ಸೇರಬೇಕಾದ್ದನ್ನು ಮರಳಿ ಪಡೆಯುವುದನ್ನು ಖಚಿತಪಡಿಸುತ್ತದೆ.

ಗುಜರಾತಿನಿಂದ "ಆಪ್ ಕಿ ಪುಂಜಿ, ಆಪ್ಕಾ ಅಧಿಕಾರ್" ಅಭಿಯಾನವನ್ನು ಪ್ರಾರಂಭಿಸುವುದರೊಂದಿಗೆ, ಸರ್ಕಾರವು ಆರ್ಥಿಕ ಸೇರ್ಪಡೆಯನ್ನು ಅರ್ಥಪೂರ್ಣ, ಪಾರದರ್ಶಕ ಮತ್ತು ಪ್ರತಿ ಮನೆಗೂ ಲಭ್ಯವಾಗುವಂತೆ ಮಾಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, 2025ರ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುವುದು. ಡಿಜಿಟಲ್ ಪ್ರದರ್ಶನಗಳು ಮತ್ತು ಸಹಾಯವಾಣಿಗಳು ನಾಗರಿಕರು ತಮ್ಮ ಕ್ಲೇಮ್‌ ಮಾಡದ ಹಣಕಾಸು ಸ್ವತ್ತುಗಳನ್ನು ಸುಲಭವಾಗಿ ಪತ್ತೆಹಚ್ಚಲು ಮತ್ತು ಕ್ಲೇಮ್‌ ಮಾಡಲು ಸಹಾಯ ಮಾಡುತ್ತವೆ, ಇದು ನಾಗರಿಕ ಕೇಂದ್ರಿತ ಆಡಳಿತಕ್ಕೆ ಸರ್ಕಾರದ ಬದ್ಧತೆ ಮತ್ತು ಜೀವನ ಸುಲಭತೆಯನ್ನು ಹೆಚ್ಚಿಸುವ ಅದರ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (ಡಿ ಎಫ್‌ ಎಸ್‌) ಸಂಯೋಜಿಸಿರುವ ಈ ಅಭಿಯಾನವು ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ (ಸೆಬಿ), ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್‌ ಡಿ ಎ ಐ), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್‌ ಆರ್‌ ಡಿ ಎ) ಮತ್ತು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (ಐ ಇ ಪಿ ಎಫ್‌ ಎ) ಗಳನ್ನು ಬ್ಯಾಂಕುಗಳು, ವಿಮಾ ಕಂಪನಿಗಳು, ಮ್ಯೂಚುವಲ್ ಫಂಡ್‌ ಗಳು ಮತ್ತು ಪಿಂಚಣಿ ಸಂಸ್ಥೆಗಳೊಂದಿಗೆ ಒಂದೇ ವೇದಿಕೆಯಲ್ಲಿ ತರುತ್ತದೆ.


(Release ID: 2174886) Visitor Counter : 10