ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಜಪಾನ್ ಸಚಿವರಾದ ಗೌರವಾನ್ವಿತ ಹಿರೋಮಾಸ ನಕಾನೊ ಅವರಿಂದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆಯ ಸೂರತ್ ಮತ್ತು ಮುಂಬೈ ಸ್ಥಳಗಳಿಗೆ ಭೇಟಿ


ಸೂರತ್ ಎಚ್‌.ಎಸ್‌.ಆರ್ ಸ್ಥಳದಲ್ಲಿ ಜೆ-ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ಅಳವಡಿಕೆ ಕಾರ್ಯ ವೀಕ್ಷಿಸಿದ ಸಚಿವರು; ರೈಲು ಹಳಿಗಳ ಅಳವಡಿಕೆ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ

ಬಿಕೆಸಿ ಭೂಗತ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ, ಶೇ. 84ರಷ್ಟು ಅಗೆತದ ಕಾರ್ಯ ಮುಕ್ತಾಯ; ನಿಲ್ದಾಣವು ಮೂರು ಹಂತಗಳನ್ನು ಹಾಗೂ ಮೆಟ್ರೋ-ರಸ್ತೆ ಸಂಪರ್ಕವನ್ನು ಹೊಂದಲಿದೆ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಕಾಮಗಾರಿಯಲ್ಲಿ ಮಹತ್ವದ ಪ್ರಗತಿ: 323 ಕಿ.ಮೀ. ವಯಡಕ್ಟ್, 211 ಕಿ.ಮೀ. ಟ್ರ್ಯಾಕ್ ಬೆಡ್ ಮತ್ತು ಹಲವು ಸೇತುವೆಗಳ ನಿರ್ಮಾಣ ಪೂರ್ಣ

ಪಾಲ್ಘರ್‌ ನಲ್ಲಿ 7 ಪರ್ವತ ಸುರಂಗಗಳ ಅಗೆತದ ಕಾಮಗಾರಿ ಪ್ರಗತಿಯಲ್ಲಿ

ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಭಾರತ-ಜಪಾನ್ ನಡುವಿನ ಬಲವಾದ ಸಹಯೋಗವನ್ನು ಎತ್ತಿ ತೋರಿಸಿದ ಜಪಾನ್ ಸಚಿವರ ಭೇಟಿ

Posted On: 03 OCT 2025 8:46PM by PIB Bengaluru

ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಜಪಾನ್‌ ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವರಾದ ಗೌರವಾನ್ವಿತ ಹಿರೋಮಾಸಾ ನಕಾನೋ ಅವರೊಂದಿಗೆ ಇಂದು ಸೂರತ್ ಮತ್ತು ಮುಂಬೈನಲ್ಲಿರುವ ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಹೈ-ಸ್ಪೀಡ್ ರೈಲು (HSR) ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿದರು.

ಗೌರವಾನ್ವಿತ ನಕಾನೊ ಅವರನ್ನು ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಗರ್ಬಾ ನೃತ್ಯದೊಂದಿಗೆ ಸ್ವಾಗತಿಸಲಾಯಿತು. ಸೂರತ್ ಸಂಸದರಾದ ಶ್ರೀ ಮುಕೇಶ್ ದಲಾಲ್, ಮೇಯರ್ ಶ್ರೀ ದಕ್ಷೇಶ್ ಮಾವನಿ, ರೈಲ್ವೆ ಮಂಡಳಿಯ ಅಧ್ಯಕ್ಷರು, ರೈಲ್ವೆ, ಎನ್‌ ಎಚ್‌ ಎಸ್‌ ಆರ್‌ ಸಿ ಎಲ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಹ ಜಪಾನೀಸ್ ಸಚಿವರ ಸ್ವಾಗತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸೂರತ್‌ ನಲ್ಲಿ ಟ್ರ್ಯಾಕ್ ಸ್ಲ್ಯಾಬ್ ಹಾಕುವ ಸ್ಥಳಕ್ಕೆ ಭೇಟಿ: ಉಭಯ ಸಚಿವರು ಸೂರತ್ ಹೈ-ಸ್ಪೀಡ್ ರೈಲು ಸ್ಥಳದಲ್ಲಿರುವ ಟ್ರ್ಯಾಕ್ ನಿರ್ಮಾಣದ ಮೂಲ ಘಟಕಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ವಯಡಕ್ಟ್ (ಸೇತುವೆ) ಮೇಲೆ ಜೆ-ಸ್ಲ್ಯಾಬ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್ ವ್ಯವಸ್ಥೆಯನ್ನು ಅಳವಡಿಸುವುದನ್ನು ವೀಕ್ಷಿಸಿದರು. ಟ್ರ್ಯಾಕ್ ಸ್ಲ್ಯಾಬ್ ಅಳವಡಿಕೆ ಮತ್ತು ಶಾಶ್ವತ ರೈಲು ಹಳಿಗಳನ್ನು ಹಾಕುವ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ.

ಕೇಂದ್ರ ಸಚಿವರಾದ ಶ್ರೀ ವೈಷ್ಣವ್ ಅವರು ಇತ್ತೀಚೆಗೆ ಸೂರತ್ ಹೈ-ಸ್ಪೀಡ್ ರೈಲು (HSR) ನಿಲ್ದಾಣದ ಬಳಿ ನಡೆದ ಮೊದಲ ಟ್ರ್ಯಾಕ್ ಟರ್ನ್‌ಔಟ್‌ ನ ಅಳವಡಿಕೆಯನ್ನು ವೀಕ್ಷಿಸಿದರು.

ಮುಂಬೈನ ಬಿ.ಕೆ.ಸಿ ಎಚ್‌.ಎಸ್‌.ಆರ್ ನಿಲ್ದಾಣಕ್ಕೆ ಭೇಟ: ಸಚಿವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಸೂರತ್‌ ನಿಂದ ಮುಂಬೈಗೆ ಪ್ರಯಾಣಿಸಿದರು. ಅಲ್ಲಿ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಬುಲೆಟ್ ರೈಲು ನಿಲ್ದಾಣದ ಪ್ರಗತಿಯನ್ನು ಪರಿಶೀಲಿಸಿದರು. ಸಚಿವರಾದ ನಕಾನೋ ಮತ್ತು ಜಪಾನಿನ ತಂಡವು ವಂದೇ ಭಾರತ್ ರೈಲಿನ ಗುಣಮಟ್ಟದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಮುಂಬೈನ ಬಿ.ಕೆ.ಸಿ ಬುಲೆಟ್ ರೈಲು ನಿಲ್ದಾಣದ ಪ್ರಮುಖ ಲಕ್ಷಣಗಳು: ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಿಲ್ದಾಣವು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ ನಲ್ಲಿರುವ ಒಂದು ಭೂಗತ ನಿಲ್ದಾಣವಾಗಿರುತ್ತದೆ. ಅಗೆತದ ಕಾಮಗಾರಿಯು 30 ಮೀಟರ್‌ಗಿಂತಲೂ ಹೆಚ್ಚು ಆಳವನ್ನು ತಲುಪಿದ್ದು, ಇದು 10 ಅಂತಸ್ತಿನ ಕಟ್ಟಡಕ್ಕೆ ಸಮನಾಗಿದೆ. ಈಗಾಗಲೇ ಸುಮಾರು ಶೇ. 84ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ನಿಲ್ದಾಣವು ಪ್ಲಾಟ್‌ಫಾರ್ಮ್, ಕಾನ್‌ಕೋರ್ಸ್ (ಪ್ರಯಾಣಿಕರ ವಿಶ್ರಾಂತಿ ಸ್ಥಳ) ಮತ್ತು ಸೇವಾ ಮಹಡಿ (service floor) ಎಂಬ ಮೂರು ಹಂತಗಳನ್ನು ಹೊಂದಿರುತ್ತದೆ ಮತ್ತು ಇದು ರಸ್ತೆ ಹಾಗೂ ಮೆಟ್ರೋ ಸಂಪರ್ಕ ಎರಡನ್ನೂ ಒದಗಿಸುತ್ತದೆ. ಒಂದು ಮೆಟ್ರೋ ನಿಲ್ದಾಣದ ಬಳಿ ಮತ್ತು ಇನ್ನೊಂದು ಎಂ ಟಿ ಎನ್‌ ಎಲ್ (MTNL) ಕಟ್ಟಡದ ಬಳಿ - ಹೀಗೆ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಯೋಜಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಈ ನಿಲ್ದಾಣವು ವಿಶಾಲವಾದ ಸ್ಥಳಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸಲಿದೆ. ಜೊತೆಗೆ, ನೈಸರ್ಗಿಕ ಬೆಳಕಿಗಾಗಿ ಸ್ಕೈಲೈಟ್‌ ಗಳನ್ನು ಅಳವಡಿಸಲಾಗುವುದು.

ಬುಲೆಟ್ ರೈಲು ಯೋಜನೆಯ ಪ್ರಗತಿ (ಸೆಪ್ಟೆಂಬರ್, 2025): ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ 508 ಕಿ.ಮೀ. ಉದ್ದವಿದೆ. ಒಟ್ಟು ವಯಡಕ್ಟ್ (ಸೇತುವೆ) ಪೈಕಿ, 323 ಕಿ.ಮೀ. ಪೂರ್ಣಗೊಂಡಿದ್ದು, ಜೊತೆಗೆ 399 ಕಿ.ಮೀ. ಪಿಯರ್ (ಕಂಬ) ಕಾಮಗಾರಿಯೂ ಮುಗಿದಿದೆ. ಪ್ರಮುಖ ಸೇತುವೆ ನಿರ್ಮಾಣದ ಮೈಲಿಗಲ್ಲುಗಳಲ್ಲಿ 17 ನದಿ ಸೇತುವೆಗಳು, 5 ಪಿಎಸ್‌ಸಿ (PSC) ಸೇತುವೆಗಳು ಮತ್ತು 9 ಉಕ್ಕಿನ ಸೇತುವೆಗಳ ನಿರ್ಮಾಣ ಪೂರ್ಣಗೊಂಡಿದೆ. ಒಟ್ಟು 211 ಕಿ.ಮೀ. ಉದ್ದದ ಟ್ರ್ಯಾಕ್ ಬೆಡ್ (ಹಳಿಯ ತಳಪಾಯ) ಹಾಕಲಾಗಿದ್ದು, ಕಾರಿಡಾರ್‌ ನಾದ್ಯಂತ 4 ಲಕ್ಷಕ್ಕೂ ಹೆಚ್ಚು ಶಬ್ದ ತಡೆಗಳನ್ನು ಅಳವಡಿಸಲಾಗಿದೆ. ಪಾಲ್ಘರ್‌ ನಲ್ಲಿ ಏಳು ಪರ್ವತ ಸುರಂಗಗಳಿಗಾಗಿ ಅಗೆತದ ಕಾಮಗಾರಿ ನಡೆಯುತ್ತಿದ್ದು, ಬಿಕೆಸಿ ಮತ್ತು ಶಿಲ್ಪಾಟಾ ನಡುವಿನ 21 ಕಿ.ಮೀ. NATM ಸುರಂಗದ ಪೈಕಿ 5 ಕಿ.ಮೀ. ಸುರಂಗ ಕೊರೆಯುವಿಕೆ ಪೂರ್ಣಗೊಂಡಿದೆ. ಸೂರತ್ ಮತ್ತು ಅಹಮದಾಬಾದ್‌ ನಲ್ಲಿ ರೋಲಿಂಗ್ ಸ್ಟಾಕ್ ಡಿಪೋಗಳು (ರೈಲು ಬೋಗಿಗಳ ನಿರ್ವಹಣಾ ಘಟಕ) ನಿರ್ಮಾಣ ಹಂತದಲ್ಲಿವೆ. ಗುಜರಾತ್‌ ನ ಎಲ್ಲಾ ನಿಲ್ದಾಣಗಳ ಸೂಪರ್‌ಸ್ಟ್ರಕ್ಚರ್ (ಮೇಲ್ಕಟ್ಟಡ) ಕಾಮಗಾರಿಯು ಮುಂದುವರಿದ ಹಂತದಲ್ಲಿದೆ. ಮಹಾರಾಷ್ಟ್ರದ ಎಲ್ಲಾ ಮೂರು ಎಲಿವೇಟೆಡ್ (ಮೇಲ್ಸೇತುವೆ) ನಿಲ್ದಾಣಗಳ ಕಾಮಗಾರಿ ಆರಂಭವಾಗಿದೆ.

ಭಾರತದ ಮೊದಲ ಹೈಸ್ಪೀಡ್‌ ರೈಲು ಕಾರಿಡಾರ್ ಅನ್ನು ಅನುಷ್ಠಾನಗೊಳಿಸುವಲ್ಲಿ ಭಾರತ ಮತ್ತು ಜಪಾನ್ ನಡುವಿನ ಬಲವಾದ ಸಹಯೋಗವನ್ನು ಜಪಾನೀಸ್ ಸಚಿವರ ಈ ಭೇಟಿಯು ಪ್ರತಿಬಿಂಬಿಸುತ್ತದೆ.

****


(Release ID: 2174697) Visitor Counter : 23