ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಸಾಮಾಜಿಕ ಭದ್ರತೆಯನ್ನು ಮುನ್ನಡೆಸುವಲ್ಲಿ ಮೋದಿ ಸರ್ಕಾರದ ಪ್ರಯತ್ನಗಳನ್ನು ಗುರುತಿಸಿ 'ಸಾಮಾಜಿಕ ಭದ್ರತೆಯಲ್ಲಿ ಅತ್ಯುತ್ತಮ ಸಾಧನೆ'ಗಾಗಿ ಭಾರತಕ್ಕೆ ಪ್ರತಿಷ್ಠಿತ ʻಐಎಸ್ಎಸ್ಎ ಪ್ರಶಸ್ತಿ-2025ʼ ನೀಡಿ ಗೌರವಿಸಲಾಯಿತು
ಮಲೇಷ್ಯಾದಲ್ಲಿ ನಡೆದ ʻಐಎಸ್ಎಸ್ಎʼ ವಿಶ್ವ ಸಾಮಾಜಿಕ ಭದ್ರತಾ ವೇದಿಕೆ ಶೃಂಗಸಭೆಯಲ್ಲಿ ಕೇಂದ್ರ ಕಾರ್ಮಿಕ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಪ್ರಶಸ್ತಿಯನ್ನು ಸ್ವೀಕರಿಸಿದರು
ಪ್ರಧಾನಮಂತ್ರಿ ಮೋದಿಯವರ ʻಅಂತ್ಯೋದಯದʼ ದೃಷ್ಟಿಕೋನದ ಮಾರ್ಗದರ್ಶನದಲ್ಲಿ ಭಾರತವು ಎಲ್ಲರನ್ನೂ ಒಳಗೊಂಡ ಹಾಗೂ ಸಾರ್ವತ್ರಿಕ ಸಾಮಾಜಿಕ ಭದ್ರತೆಯತ್ತ ಮುನ್ನಡೆಯುತ್ತಿದೆ: ಡಾ. ಮಾಂಡವಿಯಾ
ಸಮಗ್ರ ವಿಧಾನದ ಮೂಲಕ ಹೊಸ ಆದಾಯ ಗಳಿಕೆ ಅವಕಾಶಗಳು ಮತ್ತು ಸಾಮಾಜಿಕ ಭದ್ರತಾ ಜಾಲವನ್ನು ಸೃಷ್ಟಿಸಲು ಭಾರತವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ: ಡಾ. ಮನ್ಸುಖ್ ಮಾಂಡವಿಯಾ
2015ರಲ್ಲಿ ಶೇ.19ರಷ್ಟಿದ್ದ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು 2025ರ ವೇಳೆಗೆ ಶೇ.64.3ಕ್ಕೆ ವಿಸ್ತರಿಸಲಾಗಿದ್ದು, ಇದು 940 ದಶಲಕ್ಷಕ್ಕೂ ಹೆಚ್ಚು ನಾಗರಿಕರನ್ನು ತಲುಪಿದೆ. ಈ ಮೈಲುಗಲ್ಲನ್ನು ʻಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆʼ(ಐಎಲ್ಒ) ಸಹ ಗುರುತಿಸಿದೆ. ಈ ಸಾಧನೆಯನ್ನು ಪರಿಗಣಿಸಿ ಭಾರತವನ್ನು 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ
ಕೇವಲ ನಾಲ್ಕು ವರ್ಷಗಳಲ್ಲಿ 300 ದಶಲಕ್ಷಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರ ನೋಂದಾವಣಿಗೆ ಸಾಕ್ಷಿಯಾಗಿರುವ ಸರ್ಕಾರದ ಕ್ರಾಂತಿಕಾರಿ ʻಇ-ಶ್ರಮ್ʼ ಪೋರ್ಟಲ್ ಬಗ್ಗೆ ʻಐಎಸ್ಎಸ್ಎʼ ಮೆಚ್ಚುಗೆ ವ್ಯಕ್ತಪಡಿಸಿದೆ
ʻಐಎಸ್ಎಸ್ಎʼ ಸಾಮಾನ್ಯ ಸಭೆಯಲ್ಲಿ 30 ಸ್ಥಾನಗಳೊಂದಿಗೆ ಭಾರತವು ಅತಿ ಹೆಚ್ಚು ಮತಪ್ರಮಾಣವನ್ನು ಸಾಧಿಸಿದೆ
Posted On:
03 OCT 2025 10:50AM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿ ಭಾರತದ ಐತಿಹಾಸಿಕ ವಿಸ್ತರಣೆಯನ್ನು ಎತ್ತಿ ತೋರಿದರು. 2015ರಲ್ಲಿ ಶೇ.19ರಷ್ಟಿದ್ದ ಸಾಮಾಜಿಕ ಭದ್ರತಾ ವ್ಯಾಪ್ತಿಯು 2025ರಲ್ಲಿ ಶೇ.64.3ಕ್ಕೆ ಹೆಚ್ಚಳಕಂಡಿದ್ದು, 940 ದಶಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಒಳಗೊಂಡಿರುವ ಈ ಮೈಲುಗಲನ್ನು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಗುರುತಿಸಿದೆ. ಡಾ. ಮನ್ಸುಖ್ ಮಾಂಡವಿಯಾ ಅವರು ಮಲೇಷ್ಯಾದ ಕೌಲಾಲಂಪುರದಲ್ಲಿ ಇಂದು 2025ನೇ ಸಾಲಿನ ʻವಿಶ್ವ ಸಾಮಾಜಿಕ ಭದ್ರತಾ ವೇದಿಕೆ ಶೃಂಗಸಭೆʼಯನ್ನು (ಡಬ್ಲ್ಯುಎಸ್ಎಸ್ಎಫ್-2025) ಉದ್ದೇಶಿಸಿ ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಭಾರತಕ್ಕೆ 'ಸಾಮಾಜಿಕ ಭದ್ರತೆಯಲ್ಲಿ ಅತ್ಯುತ್ತಮ ಸಾಧನೆ'ಗಾಗಿ ಪ್ರತಿಷ್ಠಿತ ʻಅಂತಾರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಘ ಪ್ರಶಸ್ತಿ-2025ʼ (ಐಎಸ್ಎಸ್ಎ-2025) ನೀಡಿ ಗೌರವಿಸಲಾಯಿತು.


ಅಷ್ಟೇ ಅಲ್ಲದೆ, ಸಾಮಾಜಿಕ ಸುರಕ್ಷಾ ವ್ಯಾಪ್ತಿಯ ಹೆಚ್ಚಳದ ಬಳಿಕ, ʻಐಎಸ್‌ಎಸ್‌ಎʼ ಸಾಮಾನ್ಯ ಸಭೆಯಲ್ಲಿ ಭಾರತದ ಪಾಲು ಮೂವತ್ತಕ್ಕೆ(30) ತಲುಪಿದೆ, ಇದು ಯಾವುದೇ ದೇಶವೊಂದಕ್ಕೆ ದೊರೆತ ಅತ್ಯಧಿಕ ಮತ ಪ್ರಮಾಣವೆನಿಸಿದೆ.
ಭಾರತ ಸರ್ಕಾರದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ ಡಾ. ಮನ್ಸುಖ್ ಮಾಂಡವಿಯಾ ಅವರು, "ಈ ಪ್ರಶಸ್ತಿಯು ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಹಾಗೂ ನಮ್ಮ ʻಅಂತ್ಯೋದಯʼ ಮಾರ್ಗದರ್ಶಿ ತತ್ವಕ್ಕೆ ಪುರಾವೆಯಾಗಿದೆ. ʻಅಂತ್ಯೋದಯʼ ತತ್ವವು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆಯತ್ತ ನಮ್ಮ ಪ್ರಯಾಣವನ್ನು ರೂಪಿಸಿದೆ," ಎಂದು ಹೇಳಿದರು.

ಈ ತ್ರೈವಾರ್ಷಿಕ ಪ್ರಶಸ್ತಿಯು ಜಾಗತಿಕವಾಗಿ ಸಾಮಾಜಿಕ ಸುರಕ್ಷಾ ವ್ಯವಸ್ಥೆಗಳಲ್ಲಿ ಭಾರತದ ಅಸಾಧಾರಣ ಪ್ರಗತಿಯನ್ನು ಗುರುತಿಸುತ್ತದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು 163 ದೇಶಗಳ 1,200ಕ್ಕೂ ಹೆಚ್ಚು ಸಾಮಾಜಿಕ ಭದ್ರತಾ ನೀತಿ ನಿರೂಪಕರು ಮತ್ತು ವೃತ್ತಿಪರರ ಪ್ರಮುಖ ಜಾಗತಿಕ ಸಭೆಯಾದ ʻಡಬ್ಲ್ಯುಎಸ್ಎಸ್ಎಫ್ʼನ ಪ್ರಮುಖ ಅಂಶವಾಗಿತ್ತು. ಪ್ರಾರಂಭವಾದಾಗಿನಿಂದ ಈ ಪ್ರಶಸ್ತಿಯನ್ನು ಪಡೆದ ಐದನೇ ದೇಶವಾಗಿರುವ ಭಾರತವು, ಸಾಮಾಜಿಕ ಸುರಕ್ಷತಾ ವ್ಯಾಪ್ತಿಯ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ದೇಶಗಳ ಪಟ್ಟಿಗೆ ಸೇರಿದೆ.

ಕೇಂದ್ರ ಸಚಿವರು ತಮ್ಮ ಭಾಷಣದಲ್ಲಿ, ʻಇ-ಶ್ರಮ್ʼ ಪೋರ್ಟಲ್ ಕುರಿತು ವಿಶೇಷ ಉಲ್ಲೇಖ ಮಾಡುವ ಮೂಲಕ ಸಾಮಾಜಿಕ ಭದ್ರತಾ ಪ್ರಯೋಜನಗಳ ಪರಿಣಾಮಕಾರಿ ವಿತರಣೆಗಾಗಿ ಭಾರತದಲ್ಲಿ ವ್ಯಾಪಕವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಸ್ಥಾಪಿಸಿರುವ ಬಗ್ಗೆ ವಿವರಿಸಿದರು. "ಇ-ಶ್ರಮ್ ಪೋರ್ಟಲ್ ರಾಷ್ಟ್ರೀಯ ಡಿಜಿಟಲ್ ದತ್ತಾಂಶ ಭಂಡರಾರವಾಗಿದ್ದು, ಇದು 310 ದಶಲಕ್ಷಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರನ್ನು ಬಹುಭಾಷಾ, ತಡೆರಹಿತ ಸಂಪರ್ಕದ ಮೂಲಕ ಸಾಮಾಜಿಕ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕಿಸುವ "ಸಮಗ್ರ ಪರಿಹಾರ" ವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.

ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಒಂದೇ ವೇದಿಕೆಯಲ್ಲಿ ತರಲು ದೃಢವಾದ ಡಿಜಿಟಲ್ ಪರಿಕರಗಳನ್ನು ಹೊಂದಿರುವ ರಾಷ್ಟ್ರೀಯ ವೃತ್ತಿ ಸೇವೆ (ಎನ್‌ಸಿಎಸ್) ಪೋರ್ಟಲ್ ಬಗ್ಗೆಯೂ ಡಾ. ಮಾಂಡವಿಯಾ ಗಮನ ಸೆಳೆದರು. "ಇಂದು, ʻಎನ್‌ಸಿಎಸ್ʼ ನುರಿತ ಉದ್ಯೋಗಿಗಳ ದೃಢೀಕೃತ ದತ್ತಾಂಶವನ್ನು ಹೊಂದಿದೆ. ʻಇ-ಶ್ರಮ್ʼ ಜೊತೆ ಸಂಯೋಜಿಸಲಾಗಿರುವ ಈ ವೇದಿಕೆಯನ್ನು ವಿಶ್ವಾದ್ಯಂತ ಉದ್ಯೋಗದಾತರು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಇದು ನಮ್ಮ ನುರಿತ ಯುವಕರು ತಮ್ಮ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕಳೆದುಕೊಳ್ಳದೆ ಜಾಗತಿಕ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ," ಎಂದು ಅವರು ಹೇಳಿದರು.

ಇದಕ್ಕೂ ಮುನ್ನ, ʻವಿಶ್ವ ಸಾಮಾಜಿಕ ಭದ್ರತಾ ವೇದಿಕೆ ಶೃಂಗಸಭೆʼಯ ಸರ್ವಸದಸ್ಯರ ಅಧಿವೇಶನದಲ್ಲಿ ಡಾ. ಮನ್ಸುಖ್ ಮಾಂಡವಿಯಾ ರಾಷ್ಟ್ರದ ಉದ್ಯೋಗಿಗಳಿಗೆ ವ್ಯಾಪಕ ಶ್ರೇಣಿಯ ಆರೋಗ್ಯ ರಕ್ಷಣೆ, ವಿಮೆ, ಪಿಂಚಣಿ ಯೋಜನೆಗಳನ್ನು ಒದಗಿಸುವಲ್ಲಿ ಭಾರತದ ಎರಡು ಪ್ರಮುಖ ಸಾಮಾಜಿಕ ಭದ್ರತಾ ಸಂಸ್ಥೆಗಳಾದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ವಹಿಸಿದ ಪಾತ್ರವನ್ನು ಒತ್ತಿ ಹೇಳಿದರು.

ತಾಂತ್ರಿಕ ಮತ್ತು ಕಾರ್ಮಿಕ ಮಾರುಕಟ್ಟೆ ಬದಲಾವಣೆಗಳೊಂದಿಗೆ ವಿಕಸನಗೊಳ್ಳುತ್ತಿರುವ ಸಾಮಾಜಿಕ ಭದ್ರತೆಯ ಪಾತ್ರದ ಬಗ್ಗೆಯೂ ಸಚಿವರು ಮಾತನಾಡಿದರು. "ಸಮಗ್ರ ನೀತಿ, ಪ್ರಕ್ರಿಯೆ ಮತ್ತು ಡಿಜಿಟಲ್ ಸುಧಾರಣೆಗಳ ಮೂಲಕ ನಾವು ನಮ್ಮ ಸಾಮಾಜಿಕ ಭದ್ರತೆಯನ್ನು ಬಲಪಡಿಸುತ್ತಿದ್ದೇವೆ. ಹಣಕಾಸು ವ್ಯವಸ್ಥೆಗೆ ಪ್ರವೇಶ, ಕೌಶಲ್ಯ, ಸ್ವಯಂ ಉದ್ಯೋಗ ಮತ್ತು ಡಿಜಿಟಲ್ ನಾವೀನ್ಯತೆಯನ್ನು ಸಂಯೋಜಿಸುವ ಸಮಗ್ರ ವಿಧಾನದ ಮೂಲಕ ಹೊಸ ಆದಾಯ ಅವಕಾಶಗಳು ಮತ್ತು ಸಾಮಾಜಿಕ ಭದ್ರತಾ ಜಾಲವನ್ನು ಸೃಷ್ಟಿಸಲು ಭಾರತವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. "ಭಾರತವು ಮುಂಚೂಣಿಯಲ್ಲಿ ನಿಂತಿದೆ - ಭವಿಷ್ಯವನ್ನು ರೂಪಿಸಲು ಮತ್ತು ವಿಶ್ವದ ಯುವಕರನ್ನು ಪ್ರೇರೇಪಿಸಲು ಸಿದ್ಧವಾಗಿದೆ" ಎಂದು ಅವರು ಒತ್ತಿ ಹೇಳಿದರು.
*****
(Release ID: 2174435)
Visitor Counter : 10