ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ದಿನಾಂಕ 28.09.2025 ರಂದು ಮಾಡಿದ ‘ಮನ್ ಕಿ ಬಾತ್’ – 126ನೇ ಸಂಚಿಕೆಯ ಕನ್ನಡ ಅವತರಣಿಕೆ 

Posted On: 28 SEP 2025 11:48AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ,

ನಿಮ್ಮೆಲ್ಲರೊಂದಿಗೆ "ಮನದ ಮಾತು" ನಲ್ಲಿ ಬೆರೆಯುವುದು, ನಿಮ್ಮಿಂದ ಕಲಿಯುವುದು ಮತ್ತು ನಮ್ಮ ದೇಶದ ಜನರ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವುದು ನಿಜಕ್ಕೂ ನನಗೆ ತುಂಬಾ ಆನಂದದಾಯಕ ಅನುಭವವನ್ನು ನೀಡುತ್ತದೆ. ನಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ನಮ್ಮ “ಮನದ ಮಾತನ್ನು” ಹಂಚಿಕೊಳ್ಳುತ್ತಾ, ಈ ಕಾರ್ಯಕ್ರಮ 125 ಸಂಚಿಕೆಗಳನ್ನು ಪೂರ್ಣಗೊಳಿಸಿದೆ ಎಂದು ನಮ್ಮ ಅರಿವಿಗೇ ಬರಲಿಲ್ಲ. ಇಂದು ಈ ಕಾರ್ಯಕ್ರಮದ 126 ನೇ ಸಂಚಿಕೆ ಮತ್ತು ಈ ದಿನ ಕೆಲವು ವಿಶೇಷತೆಗಳನ್ನು ಹೊಂದಿದೆ. ಇಂದು ಭಾರತದ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆ. ನಾನು ಹುತಾತ್ಮ ಭಗತ್ ಸಿಂಗ್ ಮತ್ತು ಲತಾ ದೀದಿ ಬಗ್ಗೆ ಮಾತನಾಡುತ್ತಿದ್ದೇನೆ.

ಸ್ನೇಹಿತರೇ,

ಅಮರರಾದ ಹುತಾತ್ಮ ಭಗತ್ ಸಿಂಗ್ ಪ್ರತಿಯೊಬ್ಬ ಭಾರತೀಯರಿಗೂ, ವಿಶೇಷವಾಗಿ ದೇಶದ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರ ಸ್ವಭಾವದಲ್ಲಿ ನಿರ್ಭಯತೆ ಆಳವಾಗಿ ಬೇರೂರಿತ್ತು. ದೇಶಕ್ಕಾಗಿ ನೇಣು ಗಂಬಕ್ಕೆ ಏರುವ ಮೊದಲು, ಭಗತ್ ಸಿಂಗ್ ಬ್ರಿಟಿಷರಿಗೆ ಒಂದು ಪತ್ರವನ್ನೂ ಬರೆದಿದ್ದರು. "ನನ್ನನ್ನು ಮತ್ತು ನನ್ನ ಸಹಚರರನ್ನು ಯುದ್ಧ ಖೈದಿಗಳಂತೆ ಪರಿಗಣಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಮ್ಮನ್ನು ಗಲ್ಲಿಗೇರಿಸುವ ಬದಲಾಗಿ, ಗುಂಡು ಹಾರಿಸುವ ಮೂಲಕ ಪ್ರಾಣ ಹರಣ ಮಾಡಬೇಕು" ಎಂದು ಅವರು ಕೋರಿದ್ದರು. ಇದು ಅವರ ಅದಮ್ಯ ಧೈರ್ಯಕ್ಕೆ ಸಾಕ್ಷಿಯಾಗಿದೆ. ಭಗತ್ ಸಿಂಗ್ ಜನರ ದುಃಖದ ಬಗ್ಗೆ ಅಪಾರ ಸಂವೇದನಾಶೀಲರಾಗಿದ್ದರು ಮತ್ತು ಅವರಿಗೆ ಸಹಾಯ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ಹುತಾತ್ಮ ಭಗತ್ ಸಿಂಗ್ ಅವರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ

ಸ್ನೇಹಿತರೇ,

ಇಂದು ಲತಾ ಮಂಗೇಶ್ಕರ್ ಜನ್ಮ ಜಯಂತಿಯೂ ಹೌದು. ಭಾರತೀಯ ಸಂಸ್ಕೃತಿ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿರುವ ಯಾರೇ ಆಗಲಿ ಅವರ ಹಾಡುಗಳಿಂದ ಭಾವುಕರಾಗದೆ ಇರಲು ಸಾಧ್ಯವೇ ಇಲ್ಲ. ಅವರ ಹಾಡುಗಳು ಮಾನವನ  ಭಾವನೆಗಳನ್ನು ಬಡಿದೆಬ್ಬಿಸುವಂತಿವೆ. ಅವರು ಹಾಡಿದ ದೇಶಭಕ್ತಿ ಗೀತೆಗಳು ಜನರಿಗೆ ಪ್ರೇರಣಾದಾಯಕವಾಗಿವೆ. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ನಾನು ಲತಾ ದೀದಿಗೆ ನನ್ನ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೇ,

ಲತಾ ದೀದಿಗೆ ಸ್ಫೂರ್ತಿ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ವೀರ್ ಸಾವರ್ಕರ್ ಕೂಡ ಒಬ್ಬರು, ಅವರನ್ನು ಅವರು ತಾತ್ಯಾ ಎಂದು ಕರೆಯುತ್ತಿದ್ದರು. ಅವರು ವೀರ್ ಸಾವರ್ಕರ್ ಅವರ ಅನೇಕ ಹಾಡುಗಳನ್ನು ಸಹ ಹಾಡಿದ್ದಾರೆ. ಲತಾ ದೀದಿಯೊಂದಿಗೆ ನಾನು ಹಂಚಿಕೊಂಡ ಪ್ರೀತಿಯ ಬಂಧ ಎಂದೆದಿಗೂ ಅಳಿಯಲಾರದ್ದು. ಅವರು ಪ್ರತಿ ವರ್ಷ ತಪ್ಪದೇ ನನಗೆ ರಾಖಿಯನ್ನು ಕಳುಹಿಸುತ್ತಿದ್ದರು. ಮರಾಠಿ ಲಘು ಸಂಗೀತದ ಮಹಾನ್ ವ್ಯಕ್ತಿ ಸುಧೀರ್ ಫಡ್ಕೆ ಅವರು ಮೊದಲು ನನಗೆ ಲತಾ ದೀದಿಯನ್ನು ಪರಿಚಯಿಸಿದರು ಎಂಬುದು ನನಗೆ ನೆನಪಿದೆ, ಮತ್ತು ಅವರು ಹಾಡಿದ ಮತ್ತು ಸುಧೀರ್ ಜಿ ಸಂಯೋಜಿಸಿದ "ಜ್ಯೋತಿ ಕಲಶ್ ಛಲ್ಕೆ" ಹಾಡು ನನಗೆ ತುಂಬಾ ಇಷ್ಟವಾಯಿತು ಎಂದು ನಾನು ಅವರಿಗೆ ಹೇಳಿದ್ದೆ.

ಸ್ನೇಹಿತರೇ, ನೀವು ನನ್ನೊಂದಿಗೆ ಇದನ್ನು ಆನಂದಿಸಿ.

(ಆಡಿಯೋ)

ನನ್ನ ಪ್ರಿಯ ದೇಶವಾಸಿಗಳೇ,

ನವರಾತ್ರಿಯ ಈ ಸಂದರ್ಭದಲ್ಲಿ, ನಾವು ಶಕ್ತಿಯನ್ನು ಪೂಜಿಸುತ್ತೇವೆ. ನಾವು ನಾರಿ ಶಕ್ತಿಯ ಉತ್ಸವವನ್ನು ಆಚರಿಸುತ್ತೇವೆ. ವ್ಯವಹಾರದಿಂದ ಕ್ರೀಡೆಯವರೆಗೆ, ಶಿಕ್ಷಣದಿಂದ ವಿಜ್ಞಾನದವರೆಗೆ, ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ - ನಮ್ಮ ದೇಶದ ಹೆಣ್ಣುಮಕ್ಕಳು ಎಲ್ಲೆಡೆ ತಮ್ಮ ಸಾಧನೆಯನ್ನು ಮೆರೆಯುತ್ತಿದ್ದಾರೆ. ಇಂದು, ಅವರು ಊಹಿಸಲು ಅಸಾಧ್ಯವಾದ ಸವಾಲುಗಳನ್ನು ಕೂಡಾ ಜಯಿಸುತ್ತಿದ್ದಾರೆ. ನಾನು ನಿಮಗೆ: ನೀವು ಎಂಟು ತಿಂಗಳು ಸಮುದ್ರದಲ್ಲಿ ನಿರಂತರವಾಗಿ ಇರಬಹುದೇ? ನೀವು ಹಾಯಿ ದೋಣಿಯಲ್ಲಿ, ಅಂದರೆ ಗಾಳಿಯ ವೇಗದಲ್ಲಿ ಮುಂದೆ ಸಾಗುವ ದೋಣಿಯಲ್ಲಿ ಅದು ಕೂಡಾ ಸಮುದ್ರದಲ್ಲಿನ ಹವಾಮಾನವು ಯಾವುದೇ ಸಮಯದಲ್ಲಿ ಉಲ್ಬಣಿಸಬಹುದಾದ ಸ್ಥಿತಿಯಲ್ಲಿ 50,000 ಕಿಲೋಮೀಟರ್ ಪ್ರಯಾಣಿಸಬಹುದೇ, ಎಂಬ ಪ್ರಶ್ನೆಯನ್ನು ಕೇಳಿದರೆ?  

ನೀವು ಇದನ್ನು ಮಾಡುವ ಮೊದಲು ಸಾವಿರ ಬಾರಿ ಯೋಚಿಸುತ್ತೀರಿ, ಆದರೆ ಭಾರತೀಯ ನೌಕಾಪಡೆಯ ಇಬ್ಬರು ಧೈರ್ಯಶಾಲಿ ಅಧಿಕಾರಿಗಳು ನಾವಿಕ ಸಾಗರ್ ಪರಿಭ್ರಮಣೆಯ ಸಂದರ್ಭದಲ್ಲಿ ಇದನ್ನು ಸಾಧಿಸಿದ್ದಾರೆ. ಅವರು ಧೈರ್ಯ ಮತ್ತು ದೃಢಸಂಕಲ್ಪ ಏನೆಂಬುದನ್ನು ಪ್ರದರ್ಶಿಸಿದ್ದಾರೆ. ಇಂದು, 'ಮನದ ಮಾತು' ಶ್ರೋತೃಗಳಿಗೆ ಈ ಇಬ್ಬರು ಧೈರ್ಯಶಾಲಿ ಅಧಿಕಾರಿಗಳನ್ನು ಪರಿಚಯಿಸಲು ಬಯಸುತ್ತೇನೆ. ಒಬ್ಬರು ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ಇನ್ನೊಬ್ಬರು ಲೆಫ್ಟಿನೆಂಟ್ ಕಮಾಂಡರ್ ರೂಪ. ಈ ಇಬ್ಬರು ಅಧಿಕಾರಿಗಳು ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ.

ಪ್ರಧಾನಮಂತ್ರಿ – ಹಲೋ.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಹಲೋ ಸರ್.

ಪ್ರಧಾನಮಂತ್ರಿ - ನಮಸ್ಕಾರ.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ನಮಸ್ಕಾರ ಸರ್.

ಪ್ರಧಾನಮಂತ್ರಿ - ಹಾಗಾದರೆ, ನನ್ನೊಂದಿಗೆ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪ ಇಬ್ಬರೂ ಇದ್ದಾರೆ. ನೀವು ನನ್ನೊಂದಿಗಿದ್ದೀರಾ?

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ರೂಪ - ಸರ್, ಇಬ್ಬರೂ ಇದ್ದೇವೆ.

ಪ್ರಧಾನಮಂತ್ರಿ - ನಿಮ್ಮಿಬ್ಬರಿಗೂ ನಮಸ್ಕಾರ ಮತ್ತು ವನಕ್ಕಂ.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ವನಕ್ಕಂ ಸರ್.

ಲೆಫ್ಟಿನೆಂಟ್ ಕಮಾಂಡರ್ ರೂಪ - ನಮಸ್ಕಾರ ಸರ್.

ಪ್ರಧಾನಮಂತ್ರಿ - ಸರಿ, ಎಲ್ಲಕ್ಕಿಂತ ಮೊದಲು, ದೇಶವಾಸಿಗಳು ನಿಮ್ಮಿಬ್ಬರ ಬಗ್ಗೆ ಕೇಳಲು ಬಯಸುತ್ತಾರೆ. ದಯವಿಟ್ಟು ತಿಳಿಸಿ.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಸರ್, ನಾನು ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ. ಮತ್ತು ನಾನು ಭಾರತೀಯ ನೌಕಾಪಡೆಯ ಲಾಜಿಸ್ಟಿಕ್ಸ್ ಕೇಡರ್‌ ಗೇ ಸೇರಿದ್ದೇನೆ. ಸರ್, ನಾನು 2014 ರಲ್ಲಿ ನೌಕಾಪಡೆಯಲ್ಲಿ ನಿಯೋಜನೆಗೊಂಡೆ, ಸರ್. ನಾನು ಕೇರಳದ ಕೋಝಿಕ್ಕೋಡ್‌ ಮೂಲದವಳು . ಸರ್, ನನ್ನ ತಂದೆ ಸೇನೆಯಲ್ಲಿದ್ದರು ಮತ್ತು ನನ್ನ ತಾಯಿ ಗೃಹಿಣಿ. ನನ್ನ ಪತಿ ಕೂಡ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿ ಸರ್, ಮತ್ತು ನನ್ನ ಸಹೋದರಿ NCC ಯಲ್ಲಿ ಉದ್ಯೋಗದಲ್ಲಿದ್ದಾಳೆ.

ಲೆಫ್ಟಿನೆಂಟ್ ಕಮಾಂಡರ್ ರೂಪ - ಜೈ ಹಿಂದ್ ಸರ್, ನಾನು ಲೆಫ್ಟಿನೆಂಟ್ ಕಮಾಂಡರ್ ರೂಪ ಮತ್ತು ನಾನು 2017 ರಲ್ಲಿ ನೌಕಾಪಡೆಯ Naval Armament Inspection cadre ಗೆ ಸೇರಿದ್ದೇನೆ ಮತ್ತು ನನ್ನ ತಂದೆ ತಮಿಳುನಾಡಿನವರು.  ನನ್ನ ತಾಯಿ ಪಾಂಡಿಚೇರಿ ಮೂಲದವರು. ನನ್ನ ತಂದೆ ವಾಯುಪಡೆಯಲ್ಲಿದ್ದವರು ಸರ್, ವಾಸ್ತವವಾಗಿ ಸೇನೆ ಸೇರಲು ಅವರಿಂದಲೇ ಸ್ಫೂರ್ತಿ ಪಡೆದಿದ್ದೇನೆ ಮತ್ತು ನನ್ನ ತಾಯಿ ಗೃಹಿಣಿ.

ಪ್ರಧಾನಮಂತ್ರಿ - ಸರಿ ದಿಲ್ನಾ ಮತ್ತು ರೂಪ ಸಾಗರವನ್ನು ಸುತ್ತುವ ನಿಮ್ಮ ಅನುಭವದ ಬಗ್ಗೆ ದೇಶವು ಕೇಳಬಯಸುತ್ತದೆ. ಇದು ಸುಲಭದ ಕೆಲಸವಲ್ಲ, ನೀವು ಅನೇಕ ತೊಂದರೆಗಳನ್ನು ಎದುರಿಸಿರಬೇಕು, ಅನೇಕ ಸಮಸ್ಯೆಗಳನ್ನು ನಿವಾರಿಸಬೇಕಾಗಿ ಬಂದಿರಬಹುದು ಎಂದು ಖಂಡಿತಾ ನನಗೆ ಗೊತ್ತು.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಹೌದು ಸರ್. ಜೀವನದಲ್ಲಿ ಒಮ್ಮೆಯಾದರೂ ನಮ್ಮ ಜೀವನವನ್ನೇ ಬದಲಾಯಿಸುವಂತಹ ಅವಕಾಶ ನಮಗೆ ಲಭಿಸುತ್ತದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಸರ್. ಈ circumnavigation ಎಂಬುದು ಭಾರತೀಯ ನೌಕಾಪಡೆ ಮತ್ತು ಭಾರತ ಸರ್ಕಾರವು ನಮಗೆ ನೀಡಿದ ಇಂತಹ ಒಂದು ಅವಕಾಶವಾಗಿತ್ತು. ಈ ಸಾಹಸ ಯಾತ್ರೆಯಲ್ಲಿ ನಾವು ಸುಮಾರು 47500 (47 ಸಾವಿರದ ಐದುನೂರು) ಕಿಲೋಮೀಟರ್ ಪ್ರಯಾಣಿಸಿದ್ದೇವೆ ಸರ್. ನಾವು ಅಕ್ಟೋಬರ್ 2, 2024 ರಂದು ಗೋವಾದಿಂದ ಹೊರಟು ಮೇ 29, 2025 ರಂದು ಹಿಂತಿರುಗಿದೆವು. ಈ ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಲು ನಮಗೆ 238 (ಇನ್ನೂರ ಮೂವತ್ತೆಂಟು) ದಿನಗಳು ಬೇಕಾಯಿತು ಸರ್. 238 (ಇನ್ನೂರ ಮೂವತ್ತೆಂಟು) ದಿನಗಳವರೆಗೆ ಈ ಬೋಟಿನಲ್ಲಿ ನಾವಿಬ್ಬರೇ ಇದ್ದೆವು ಸರ್

ಪ್ರಧಾನಮಂತ್ರಿ – ಹೂಂ, ಹೂಂ

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಸರ್, ನಾವು ಮೂರು ವರ್ಷಗಳ ಕಾಲ ದಂಡಯಾತ್ರೆಗೆ ಸಿದ್ಧತೆ ನಡೆಸಿದ್ದೆವು. Navigation ನಿಂದ ಹಿಡಿದು ಸಂವಹನ ತುರ್ತು ಸಾಧನಗಳನ್ನು ನಿರ್ವಹಣೆ, ಡೈವಿಂಗ್ ಮಾಡುವುದು ಮತ್ತು ದೋಣಿಯಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾಗಲಿ ಉದಾಹರಣೆಗೆ ವೈದ್ಯಕೀಯ ತುರ್ತುಸ್ಥಿತಿಯಾಗಿರಬಹುದು ಅದನ್ನು ಹೇಗೆ ನಿಭಾಯಿಸುವುದು ಎಂಬುದರವರೆಗೆ ಎಲ್ಲದರ ಬಗ್ಗೆ ಭಾರತೀಯ ನೌಕಾಪಡೆಯು ನಮಗೆ ತರಬೇತಿ ನೀಡಿತು ಸರ್. ಈ ಪ್ರವಾಸದ ಅತ್ಯಂತ ಸ್ಮರಣೀಯ ಕ್ಷಣದ ಬಗ್ಗೆ ನಾನು ಹೇಳಬಯಸುತ್ತೇನೆ ಸರ್, ನಾವು Point Nemo ದಲ್ಲಿ ಭಾರತೀಯ ಧ್ವಜವನ್ನು ಹಾರಿಸಿದೆವು, ಸರ್. Point Nemo ವಿಶ್ವದ ಅತ್ಯಂತ ದೂರದ ಸ್ಥಳವಾಗಿದೆ, ಸರ್. ಅದಕ್ಕೆ ಹತ್ತಿರದಲ್ಲಿ ಯಾರಾದರೂ ಮನುಷ್ಯರಿದ್ದಾರೆ ಎಂದರೆ ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಾತ್ರ. ನಾವು ಹಾಯಿದೋಣಿಯಲ್ಲಿ ಅಲ್ಲಿಗೆ ತಲುಪಿದ ಪ್ರಥಮ ಭಾರತೀಯ, ಮೊದಲ ಏಷ್ಯನ್ ಮತ್ತು ವಿಶ್ವದ ಮೊದಲ ವ್ಯಕ್ತಿ ನಾವಾಗಿದ್ದೇವೆ ಸರ್, ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯ, ಸರ್.

ಪ್ರಧಾನಮಂತ್ರಿ: ವಾಹ್, ನಿಮಗೆ ಅನಂತ ಅಭಿನಂದನೆಗಳು.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ: ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ನಿಮ್ಮ ಸ್ನೇಹಿತೆ ಕೂಡಾ ಏನನ್ನಾದರೂ ಹೇಳಬಯಸುತ್ತಾರಾ?

ಲೆಫ್ಟಿನೆಂಟ್ ಕಮಾಂಡರ್ ರೂಪಾ: ಸರ್, ಹಾಯಿದೋಣಿಯಲ್ಲಿ ಜಗತ್ತನ್ನು ಸುತ್ತಿದ ಜನರ ಸಂಖ್ಯೆ ಮೌಂಟ್ ಎವರೆಸ್ಟ್ ತಲುಪಿದ ಜನರ ಸಂಖ್ಯೆಗಿಂತ ಬಹಳ ಕಡಿಮೆ ಎಂದು ನಾನು ಹೇಳಬಯಸುತ್ತೇನೆ. ವಾಸ್ತವವಾಗಿ, ಹಾಯಿದೋಣಿಯಲ್ಲಿ ಏಕಾಂಗಿಯಾಗಿ ಜಗತ್ತನ್ನು ಸುತ್ತಿದ ಜನರ ಸಂಖ್ಯೆ ಬಾಹ್ಯಾಕಾಶಕ್ಕೆ ಹೋದ ಜನರ ಸಂಖ್ಯೆಗಿಂತಲೂ ಬಹಳ ಕಡಿಮೆ.

ಪ್ರಧಾನಮಂತ್ರಿ: ಸರಿ, ಇಂತಹ ಕ್ಲಿಷ್ಟವಾದ ಪ್ರಯಾಣಕ್ಕೆ ಬಹಳಷ್ಟು ಟೀಮ್ ವರ್ಕ್ ನ ಅವಶ್ಯಕತೆಯಿದೆ, ತಂಡದಲ್ಲಿ ನೀವು ಇಬ್ಬರು ಅಧಿಕಾರಿಗಳು ಮಾತ್ರ ಇದ್ದಿರಿ. ಸಿದ್ಧತೆಯೆಲ್ಲವನ್ನು ಹೇಗೆ ನಿಭಾಯಿಸಿದಿರಿ?

ಲೆಫ್ಟಿನೆಂಟ್ ಕಮಾಂಡರ್ ರೂಪಾ: ಹೌದು, ಸರ್, ಇಂತಹ ಪ್ರಯಾಣಕ್ಕಾಗಿ, ನಾವಿಬ್ಬರೂ ಒಟ್ಟಿಗೆ ಶ್ರಮಿಸಬೇಕಾಗಿತ್ತು. ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಹೇಳಿದಂತೆ, ಈ ಸಾಧನೆಯ ಹಾದಿಯಲ್ಲಿ, ದೋಣಿಯಲ್ಲಿ ನಾವಿಬ್ಬರು ಮಾತ್ರ ಇದ್ದೆವು, ಮತ್ತು ನಾನು ದೋಣಿ ರಿಪೇರಿ ಮಾಡುವವಳಾಗಿ, ಎಂಜಿನ್ ಮೆಕ್ಯಾನಿಕ್, Sail-maker, ವೈದ್ಯಕೀಯ ಸಹಾಯಕಿ, ಅಡುಗೆಯವಳು, ಕ್ಲೀನರ್, ಡೈವರ್, ನ್ಯಾವಿಗೇಟರ್, ಮತ್ತು ಎಲ್ಲ ಪಾತ್ರಗಳನ್ನು ಒಟ್ಟೊಟ್ಟಿಗೆ ನಿರ್ವಹಿಸಬೇಕಾಗುತ್ತಿತ್ತು. ಭಾರತೀಯ ನೌಕಾಪಡೆಯು ನಮ್ಮ ಈ ಸಾಧನೆಯಲ್ಲಿ ಬಹು ದೊಡ್ಡ ಕೊಡುಗೆ ನೀಡಿದೆ. ನಮಗೆ ಸರ್ವ ರೀತಿಯಲ್ಲೂ ತರಬೇತಿ ನೀಡಿದೆ. ಸರ್, ವಾಸ್ತವವಾಗಿ ನಾಲ್ಕು ವರ್ಷಗಳಿಂದ ನಾವು ಒಟ್ಟಿಗೆ ನೌಕಾಯಾನ ಮಾಡುತ್ತಿದ್ದೇವೆ, ಆದ್ದರಿಂದ ನಮಗೆ ಪರಸ್ಪರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ  ಚೆನ್ನಾಗಿ ಅರಿವಿದೆ. ಅದಕ್ಕಾಗಿಯೇ ನಾವು ಎಲ್ಲರಿಗೂ ಹೇಳುವುದೇನೆಂದರೆ ‘ನಮ್ಮ ದೋಣಿಯಲ್ಲಿ ಎಂದಿಗೂ ವಿಫಲವಾಗದ ಏಕೈಕ ಸಾಧನವೆಂದರೆ ಅದು ನಮ್ಮ ಟೀಮ್ ವರ್ಕ್ ಎಂದು.

ಪ್ರಧಾನಮಂತ್ರಿ: ಸರಿ, ಹವಾಮಾನ ವೈಪರೀತ್ಯದಲ್ಲಿ, ನೀವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಿರಿ? ಏಕೆಂದರೆ ಸಮುದ್ರದಲ್ಲಿ ಊಹಿಸಲಾಗದಷ್ಟು ಪ್ರಮಾಣದಲ್ಲಿ ಹವಾಮಾನ ಬದಲಾಗುತ್ತಾ ಇರುತ್ತದೆ?

ಲೆಫ್ಟಿನೆಂಟ್ ಕಮಾಂಡರ್ ರೂಪಾ: ಸರ್, ನಮ್ಮ ಪ್ರಯಾಣದಲ್ಲಿ ಬಹಳಷ್ಟು ಪ್ರತಿಕೂಲ ಸವಾಲುಗಳು ಇದ್ದವು, ಸರ್. ಈ ಯಾನದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ, ದಕ್ಷಿಣ ಸಾಗರದಲ್ಲಿ ಹವಾಮಾನ ಯಾವಾಗಲೂ ತೀವ್ರವಾಗಿರುತ್ತದೆ. ನಾವು ಮೂರು ಚಂಡಮಾರುತಗಳನ್ನು ಸಹ ಎದುರಿಸಬೇಕಾಗಿತ್ತು. ಸರ್, ನಮ್ಮ ದೋಣಿ ಕೇವಲ 17 ಮೀಟರ್ ಉದ್ದ ಮತ್ತು ಕೇವಲ 5 ಮೀಟರ್ ಅಗಲವಾಗಿತ್ತು. ಆದರೆ ಕೆಲವೊಮ್ಮೆ ಮೂರು ಅಂತಸ್ತಿನ ಕಟ್ಟಡಕ್ಕಿಂತ ದೊಡ್ಡದಾದ ಅಲೆಗಳು ಬರುತ್ತಿದ್ದವು, ಸರ್. ನಮ್ಮ ಪ್ರಯಾಣದಲ್ಲಿ ನಾವು ತೀವ್ರ ಉಷ್ಣ ಮತ್ತು ತೀವ್ರ ಶೀತ ಎರಡನ್ನೂ ಎದುರಿಸಿದ್ದೇವೆ. ಸರ್, ನಾವು ಅಂಟಾರ್ಕ್ಟಿಕಾದಲ್ಲಿ ನೌಕಾಯಾನ ಮಾಡುವಾಗ, 1 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಮತ್ತು ಗಾಳಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ಎರಡನ್ನೂ ನಾವು ಏಕಕಾಲದಲ್ಲಿ ಎದುರಿಸಬೇಕಾಯಿತು.  ಶೀತದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಏಕಕಾಲದಲ್ಲಿ 6 ರಿಂದ 7 ಪದರಗಳ ಬಟ್ಟೆಗಳನ್ನು ಧರಿಸುತ್ತಿದ್ದೆವು. ಅಂತಹ 7 ಪದರಗಳ ಬಟ್ಟೆಗಳೊಂದಿಗೆ ನಾವು ಇಡೀ ದಕ್ಷಿಣ ಸಾಗರವನ್ನು ದಾಟಿದೆವು, ಸರ್. ಕೆಲವೊಮ್ಮೆ ನಾವು ಗ್ಯಾಸ್ ಸ್ಟೌವ್‌ ಶಾಖದಿಂದ ನಮ್ಮ ಕೈಗಳನ್ನು ಬೆಚ್ಚಗಾಗಿಸಿಕೊಳ್ಳುತ್ತಿದ್ದೆವು, ಸರ್. ಕೆಲವೊಮ್ಮೆ ಗಾಳಿಯೇ ಇಲ್ಲದ ಸಂದರ್ಭಗಳು ಇರುತ್ತಿದ್ದವು ಮತ್ತು ನಾವು ಹಾಯಿಗಳನ್ನು ಸಂಪೂರ್ಣವಾಗಿ ಕೆಳಕ್ಕೆ ಇಳಿಸಿ ತೇಲುತ್ತಲೇ ಇರಬೇಕಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ, ವಾಸ್ತವವಾಗಿ ಸರ್, ನಮ್ಮ ತಾಳ್ಮೆಯನ್ನು ಪರೀಕ್ಷಿಸಿದಂತಿರುತ್ತಿತ್ತು.

ಪ್ರಧಾನಮಂತ್ರಿ - ನಮ್ಮ ದೇಶದ ಹೆಣ್ಣುಮಕ್ಕಳು ಇಂತಹ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಜನರು ಆಶ್ಚರ್ಯಗೊಳ್ಳಬಹುದು. ಈ ಯಾತ್ರೆಯ ಸಮಯದಲ್ಲಿ, ನೀವು ಬೇರೆ ಬೇರೆ ದೇಶಗಳಲ್ಲಿ ಉಳಿದುಕೊಳ್ಳುತ್ತಿದ್ದಿರಿ. ಅಲ್ಲಿ ನಿಮ್ಮ ಅನುಭವ ಹೇಗಿತ್ತು? ಭಾರತದ ಇಬ್ಬರು ಹೆಣ್ಣುಮಕ್ಕಳನ್ನು ನೋಡಿದಾಗ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದರು, ಅವರ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಇದ್ದಿರಬಹುದಲ್ಲವೇ.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಹೌದು, ಸರ್. ನಮಗೆ ಉತ್ತಮ ಅನುಭವವಾಯಿತು, ಸರ್. ನಾವು ಎಂಟು ತಿಂಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪೋರ್ಟ್ ಸ್ಟಾನ್ಲಿ ಮತ್ತು ದಕ್ಷಿಣ ಆಫ್ರಿಕಾ ಹೀಗೆ ನಾಲ್ಕು ಸ್ಥಳಗಳಲ್ಲಿ ತಂಗಿದ್ದೆವು, ಸರ್.

ಪ್ರಧಾನಮಂತ್ರಿ - ಪ್ರತಿ ಸ್ಥಳದಲ್ಲಿ ಸರಾಸರಿ ಎಷ್ಟು ದಿನ ತಂಗಬೇಕಾಗುತ್ತಿತ್ತು?

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ - ಸರ್, ನಾವು ಒಂದು ಸ್ಥಳದಲ್ಲಿ 14 ದಿನಗಳವರೆಗೆ  ತಂಗಿದ್ದೆವು.

ಪ್ರಧಾನಮಂತ್ರಿ - ಒಂದು ಸ್ಥಳದಲ್ಲಿ 14 ದಿನಗಳು?

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ – ಹೌದು, ಸರ್. ನಾವು ಪ್ರಪಂಚದ ಮೂಲೆ ಮೂಲೆಯಲ್ಲಿ ಭಾರತೀಯರನ್ನು ಕಂಡೆವು ಸರ್. ಅವರು ತುಂಬಾ ಸಕ್ರಿಯವಾಗಿ ಮತ್ತು ಆತ್ಮವಿಶ್ವಾಸದಿಂದ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ ಸರ್. ನಮ್ಮ ಯಶಸ್ಸನ್ನು ಅವರು ತಮ್ಮದೇ ಆದ ಯಶಸ್ಸೆಂದು ಪರಿಗಣಿಸುತ್ತಿದ್ದರು ಎಂದು ನಮಗೆ ಅನಿಸಿತು. ಪ್ರತಿಯೊಂದು ಸ್ಥಳದಲ್ಲೂ ನಮಗೆ ವಿಭಿನ್ನ ಅನುಭವಗಳಾದವು. ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿ, ಪಶ್ಚಿಮ ಆಸ್ಟ್ರೇಲಿಯಾದ ಸಂಸತ್ತಿನ ಸ್ಪೀಕರ್ ನಮ್ಮನ್ನು ಆಹ್ವಾನಿಸಿದ್ದರು; ಅವರು ನಮಗೆ ಬಹಳಷ್ಟು ಪ್ರೇರೇಪಿಸಿದರು, ಸರ್. ಇಂತಹ  ಘಟನೆಗಳು ನಮ್ಮಲ್ಲಿ ತುಂಬಾ ಹೆಮ್ಮೆ ಮೂಡಿಸುತ್ತಿದ್ದವು ಸರ್. ನಾವು ನ್ಯೂಜಿಲೆಂಡ್‌ಗೆ ಹೋದಾಗ, ಮಾವೋರಿ ಜನರು ನಮ್ಮನ್ನು ಸ್ವಾಗತಿಸಿದರು ಮತ್ತು ನಮ್ಮ ಭಾರತೀಯ ಸಂಸ್ಕೃತಿ ಕುರಿತು ಅಪಾರ ಗೌರವವನ್ನು ತೋರಿಸಿದರು ಸರ್. ಒಂದು ಪ್ರಮುಖ ವಿಷಯವೆಂದರೆ, ಸರ್, ಪೋರ್ಟ್ ಸ್ಟಾನ್ಲಿ ಒಂದು ದೂರದ ದ್ವೀಪ, ಸರ್. ಇದು ದಕ್ಷಿಣ ಅಮೆರಿಕದ ಬಳಿ ಇದೆ. ಅಲ್ಲಿನ ಒಟ್ಟು ಜನಸಂಖ್ಯೆ ಕೇವಲ 3,500, ಸರ್. ಆದರೆ ಅಲ್ಲಿ ನಾವು ಒಂದು ಮಿನಿ ಭಾರತವನ್ನು ಕಂಡೆವು.  ಅಲ್ಲಿ 45 ಜನ ಭಾರತೀಯರಿದ್ದರು. ಅವರು ನಮ್ಮನ್ನು ತಮ್ಮವರಂತೆ ಭಾವಿಸಿದರು ಮತ್ತು ಮನೆಯಲ್ಲಿರುವಂತಹ ಅನುಭವ ನೀಡಿದರು ಸರ್.

ಪ್ರಧಾನಮಂತ್ರಿ: ನಿಮ್ಮಂತೆಯೇ ವಿಭಿನ್ನವಾದದ್ದನ್ನು ಮಾಡಲು ಬಯಸುವ ದೇಶದ ಹೆಣ್ಣುಮಕ್ಕಳಿಗೆ ನೀವಿಬ್ಬರೂ ಏನು ಸಂದೇಶ ನೀಡ ಬಯಸುತ್ತೀರಿ?

ಲೆಫ್ಟಿನೆಂಟ್ ಕಮಾಂಡರ್ ರೂಪಾ: ಸರ್, “ನಾನು ಲೆಫ್ಟಿನೆಂಟ್ ಕಮಾಂಡರ್ ರೂಪಾ ಮಾತನಾಡುತ್ತಿದ್ದೇನೆ. ಯಾರಾದರೂ ಹೃದಯದಿಂದ ಮನಸ್ಸಿಟ್ಟು ಕಷ್ಟಪಟ್ಟು ಕೆಲಸ ಮಾಡಿದರೆ, ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ” ಎಂದು ನಾನು ಎಲ್ಲರಿಗೂ ನಿಮ್ಮ ಮೂಲಕ ಹೇಳ ಬಯಸುತ್ತೇನೆ. ನೀವು ಎಲ್ಲಿಂದ ಬಂದಿದ್ದೀರಿ, ಎಲ್ಲಿ ಜನಿಸಿದಿರಿ ಎಂಬುದು ಮುಖ್ಯವಲ್ಲ. ಸರ್, ಭಾರತದ ಯುವಕರು ಮತ್ತು ಮಹಿಳೆಯರು ಬೃಹತ್ ಕನಸು ಕಾಣಲಿ, ಮತ್ತು ಭವಿಷ್ಯದಲ್ಲಿ, ಎಲ್ಲಾ ಬಾಲಕಿಯರು ಮತ್ತು ಮಹಿಳೆಯರು ರಕ್ಷಣೆ, ಕ್ರೀಡೆ ಮತ್ತು ಸಾಹಸದಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಲಿ ಎಂಬುದು ನಮ್ಮ ಆಶಯ.

ಪ್ರಧಾನಮಂತ್ರಿ: ದಿಲ್ನಾ ಮತ್ತು ರೂಪಾ, ನಿಮ್ಮ ಮಾತುಗಳನ್ನು ಕೇಳಿ, ನೀವು ತೋರಿಸಿದ ಅಪಾರ ಧೈರ್ಯದ ಬಗ್ಗೆ ಕೇಳಿ ನಾನು ರೋಮಾಂಚನಗೊಂಡಿದ್ದೇನೆ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ನಿಮ್ಮ ಯಶಸ್ಸು ಮತ್ತು ನಿಮ್ಮ ಸಾಧನೆಗಳು ನಿಸ್ಸಂದೇಹವಾಗಿ ದೇಶದ ಯುವಕರು ಮತ್ತು ಯುವತಿಯರಿಗೆ ಸ್ಫೂರ್ತಿ ನೀಡುತ್ತವೆ. ಹೀಗೆಯೇ ತ್ರಿವರ್ಣ ಧ್ವಜವನ್ನು ಹಾರಿಸುತ್ತಲೇ ಇರಿ. ಭವಿಷ್ಯದ ನಿಮ್ಮ ಪ್ರಯತ್ನಗಳಿಗೆ ಅನಂತ  ಶುಭ ಹಾರೈಕೆಗಳು.

ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ: ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ಅನಂತ ಧನ್ಯವಾದಗಳು. ವಣಕ್ಕಂ. ನಮಸ್ಕಾರಂ.

ಲೆಫ್ಟಿನೆಂಟ್ ಕಮಾಂಡರ್ ರೂಪಾ: ನಮಸ್ಕಾರ ಸರ್.

ಸ್ನೇಹಿತರೇ,

ನಮ್ಮ ಉತ್ಸವಗಳು, ಹಬ್ಬಗಳು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿ ಇರಿಸುತ್ತವೆ. ಇಂತಹ ಒಂದು ಪವಿತ್ರ ಹಬ್ಬವೇ ದೀಪಾವಳಿಯ ನಂತರ ಬರುವ ಛಠ್ ಪೂಜೆ. ಸೂರ್ಯದೇವನಿಗೆ ಅರ್ಪಿಸುವ ಈ ದೊಡ್ಡ ಹಬ್ಬ ಬಹಳ ವಿಶೇಷವಾಗಿದೆ. ಈ ಹಬ್ಬದಂದು ನಾವು ಮುಳುಗುತ್ತಿರುವ ಸೂರ್ಯನಿಗೂ ಅರ್ಘ್ಯ ನೀಡುತ್ತೇವೆ, ಆತನನ್ನು ಆರಾಧಿಸುತ್ತೇವೆ. ಛಠ್ ಪೂಜೆಯನ್ನು ಕೇವಲ ದೇಶದ ವಿವಿಧ ಪ್ರದೇಶಗಳಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಕೂಡಾ ಈ ಹಬ್ಬದ ಆಚರಣೆ ಕಂಡುಬರುತ್ತದೆ. ಈಗ ಇದು ಒಂದು ಜಾಗತಿಕ ಹಬ್ಬವಾಗುತ್ತಿದೆ.

ಸ್ನೇಹಿತರೇ,

ಭಾರತ ಸರ್ಕಾರ ಕೂಡಾ ಛಠ್ ಪೂಜೆಗೆ ಸಂಬಂಧಿಸಿದಂತೆ ದೊಡ್ಡ ಪ್ರಯತ್ನವೊಂದರಲ್ಲಿ ತೊಡಗಿಕೊಂಡಿದೆ ಎಂದು ಹೇಳಲು ನನಗೆ ಬಹಳ ಸಂತೋಷವೆನಿಸುತ್ತದೆ. ಭಾರತ ಸರ್ಕಾರವು ಛಠ್ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಪ್ರಯತ್ನ ಮಾಡುತ್ತಿದೆ. ಛಠ್ ಪೂಜಾ ಯುನೆಸ್ಕೋದ ಪಟ್ಟಿಯಲ್ಲಿ ಸೇರ್ಪಡೆಯಾದಾಗ, ವಿಶ್ವದ ಮೂಲೆ ಮೂಲೆಯಲ್ಲಿನ ಜನರು ಇದರ ಭವ್ಯತೆ ಮತ್ತು ದಿವ್ಯತೆಯ ಅನುಭೂತಿ ಹೊಂದಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಸ್ವಲ್ಪ ಸಮಯಕ್ಕೆ ಮುನ್ನ ಭಾರತ ಸರ್ಕಾರದ ಇಂತಹದ್ದೇ ಪ್ರಯತ್ನಗಳಿಂದ ಕೊಲ್ಕತ್ತಾದ ದುರ್ಗಾ ಪೂಜೆ ಕೂಡಾ ಯುನೆಸ್ಕೋದ ಈ ಪಟ್ಟಿಯ ಒಂದು ಭಾಗವಾಗಿದೆ. ನಾವು ನಮ್ಮ ಸಾಂಸ್ಕೃತಿಕ ಆಯೋಜನೆಗಳಿಗೆ ಇಂತಹ ಜಾಗತಿಕ ಮಾನ್ಯತೆ ದೊರೆಯುವಂತೆ ಮಾಡಿದಲ್ಲಿ, ಇವುಗಳ ಬಗ್ಗೆ ವಿಶ್ವ ತಿಳಿದುಕೊಳ್ಳುತ್ತದೆ, ಅರ್ಥ ಮಾಡಿಕೊಳ್ಳುತ್ತದೆ, ಅವುಗಳಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುತ್ತದೆ.

ಸ್ನೇಹಿತರೇ,

ಅಕ್ಟೋಬರ್ 2 ಗಾಂಧಿ ಜಯಂತಿ. ಗಾಂಧೀಜೀಯವರು ಯಾವಾಗಲೂ ಸ್ವದೇಶೀಯತೆಯನ್ನು ಮೈಗೂಡಿಸುವ ಬಗ್ಗೆ ಒತ್ತು ನೀಡುತ್ತಿದ್ದರು ಮತ್ತು ಇವುಗಳ ಪೈಕಿ ಖಾದಿ ಬಹಳ ಮುಖ್ಯವಾದುದಾಗಿತ್ತು. ದುರದೃಷ್ಟವೆಂದರೆ ಸ್ವಾತಂತ್ರ್ಯಾನಂತರ ಖಾದಿಯ ಆಕರ್ಷಣೆ ಸ್ವಲ್ಪ ಮಸಕಾಗುತ್ತಾ ಬಂದಿತು, ಆದರೆ ಕಳೆದ 11 ವರ್ಷಗಳಲ್ಲಿ ಖಾದಿಯ ಬಗ್ಗೆ ಜನರ ಆಕರ್ಷಣೆ ಬಹಳಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಖಾದಿಯ ಮಾರಾಟದಲ್ಲಿ ಅತ್ಯಂತ ಹೆಚ್ಚಳ ಕಂಡುಬಂದಿದೆ. ಅಕ್ಟೋಬರ್ 2 ರಂದು ಯಾವುದಾದರೊಂದು ಖಾದಿ ಉತ್ಪನ್ನವನ್ನು ಖಂಡಿತವಾಗಿಯೂ ಖರೀದಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹೆಮ್ಮೆಯಿಂದ ಹೇಳಿ – ಇದು ಸ್ವದೇಶದ್ದೆಂದು. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ವೋಕಲ್ ಫಾರ್ ಲೋಕಲ್ ನೊಂದಿಗೆ ಹಂಚಿಕೊಳ್ಳಿ.

ಸ್ನೇಹಿತರೇ,

ಖಾದಿಯಂತೆಯೇ ನಮ್ಮ ಕೈಮಗ್ಗ ಮತ್ತು ಕರಕುಶಲ ವಲಯದಲ್ಲಿ ಕೂಡಾ ಸಾಕಷ್ಟು ಬದಲಾವಣೆಗಳಾಗಿರುವುದು ಕಂಡು ಬರುತ್ತಿದೆ. ಇಂದು ನಮ್ಮ ದೇಶದಲ್ಲಿ ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಬರುತ್ತಿವೆ, ಪರಂಪರೆ ಮತ್ತು ನಾವೀನ್ಯತೆಯನ್ನು ಒಟ್ಟಿಗೆ ಜೋಡಿಸಿದರೆ, ಅದ್ಭುತ ಪರಿಣಾಮ ದೊರೆಯಬಹುದೆಂದು ಎಂದು ಈ ಉದಾಹರಣೆಗಳು ನಮಗೆ ಹೇಳುತ್ತಿವೆ. ಇಂತಹದ್ದೇ ಒಂದು ಉದಾಹರಣೆ ತಮಿಳುನಾಡಿನ Yaazh Naturals ನದ್ದಾಗಿದೆ. ಇಲ್ಲಿ ಅಶೋಕ್ ಜಗದೀಶನ್ ಅವರು ಮತ್ತು ಪ್ರೇಮ್ ಸೆಲ್ವರಾಜ್ ಅವರು ಕಾರ್ಪೋರೇಟ್ ಉದ್ಯೋಗ ತ್ಯಜಿಸಿ, ಒಂದು ಹೊಸ ಉಪಕ್ರಮ ಕೈಗೊಂಡರು. ಅವರು ಹುಲ್ಲು ಮತ್ತು ಬಾಳೆಯ ನಾರಿನಿಂದ ಯೋಗಾ ಮ್ಯಾಟ್ ತಯಾರಿಸಿದರು, ಗಿಡಗಳ ಬಣ್ಣದಿಂದ ಬಟ್ಟೆಗಳಿಗೆ ಬಣ್ಣ ಹಾಕಿದರು ಮತ್ತು 200 ಕುಟುಂಬಗಳಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗ ಒದಗಿಸಿದರು.

ಜಾರ್ಖಂಡ್ ನ ಆಶೀಷ್ ಸತ್ಯವ್ರತ್ ಸಾಹು ಅವರು Johargram Brand  ಮೂಲಕ ಬುಡಕಟ್ಟು ನೇಯ್ಗೆ ಮತ್ತು ಉಡುಪುಗಳನ್ನು ಜಾಗತಿಕ ವೇದಿಕೆಗೆ ತಲುಪಿಸಿದರು. ಅವರ ಪ್ರಯತ್ನಗಳಿಂದ ಇಂದು ಜಾರ್ಖಂಡ್ ನ ಸಾಂಸ್ಕೃತಿಕ ಪರಂಪರೆಯನ್ನು ಇತರ ದೇಶಗಳ ಜನರು ಕೂಡಾ ತಿಳಿದುಕೊಳ್ಳುತ್ತಿದ್ದಾರೆ.

ಬಿಹಾರದ ಮಧುಬನಿ ಜಿಲ್ಲೆಯ ಸ್ವೀಟಿ ಕುಮಾರ್ ಅವರು ಸಂಕಲ್ಪ್ ಕ್ರಿಯೇಷನ್ ಆರಂಭಿಸಿದರು. ಮಿಥಿಲಾ painting ಅನ್ನು ಅವರು ಮಹಿಳೆಯರ ಜೀವನೋಪಾಯದ ಸಾಧನವಾಗಿಸಿದರು. ಇಂದು 500 ಕ್ಕೂ ಅಧಿಕ ಗ್ರಾಮೀಣ ಮಹಿಳೆಯರು ಅವರೊಂದಿಗೆ ಸೇರಿಕೊಂಡಿದ್ದಾರೆ ಮತ್ತು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ಎಲ್ಲಾ ಯಶೋಗಾಥೆಗಳು ನಮ್ಮ ಸಂಪ್ರದಾಯಗಳು ಅನೇಕ ಆದಾಯದ ಮೂಲಗಳನ್ನು ಅಡಗಿಸಿಕೊಂಡಿವೆ ಎಂಬುದನ್ನು ನಮಗೆ ಕಲಿಸುತ್ತವೆ. ನಮ್ಮ ಉದ್ದೇಶಗಳು ಬಲವಾದರೆ,  ಯಶಸ್ಸು  ಖಂಡಿತಾ ನಮ್ಮದಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇನ್ನು ಕೆಲವೇ ದಿನಗಳಲ್ಲಿ ನಾವು ವಿಜಯದಶಮಿ ಆಚರಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ಮತ್ತೊಂದು ಕಾರಣದಿಂದ ಬಹಳ ವಿಶೇಷವೆನಿಸುತ್ತದೆ. ಇದೇ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನೆಯ ನೂರನೇ ವರ್ಷವೂ ಆಗಿದೆ. ಒಂದು ಶತಮಾನದ ಈ ಪ್ರಯಾಣವು ಎಷ್ಟು ಅದ್ಭುತವಾಗಿದೆ, ಅಭೂತಪೂರ್ವವಾಗಿದೆ ಮತ್ತು ಅಷ್ಟೇ ಸ್ಫೂರ್ತಿದಾಯಕವಾಗಿದೆ. 100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯಾದಾಗ, ದೇಶ ಶತಮಾನಗಳ ಗುಲಾಮಗಿರಿಯ ಸರಪಣಿಯಲ್ಲಿ ಬಂಧಿಸಲ್ಪಟ್ಟಿತ್ತು. ಶತಮಾನಗಳ ಈ ಗುಲಾಮಗಿರಿಯು ನಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಆಳವಾದ ಗಾಯವುಂಟು ಮಾಡಿತ್ತು. ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಯ ಮುಂದೆ ಸ್ವಯಂ ಗುರುತು ಇಲ್ಲದಂತಹ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು. ದೇಶವಾಸಿಗಳು ಕೀಳರಿಮೆಯ ಬಲಿಪಶುಗಳಾಗುತ್ತಿದ್ದರು. ಆದ್ದರಿಂದಲೇ ದೇಶದ ಸ್ವಾತಂತ್ರ್ಯದೊಂದಿಗೆ ಸೈದ್ಧಾಂತಿಕ ಗುಲಾಮಗಿರಿಯಿಂದಲೂ ಮುಕ್ತವಾಗುವುದು ಅಗತ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪರಮ ಪೂಜ್ಯ ಡಾ. ಹೆಗ್ಡೇವಾರ್ ಅವರು ಈ ವಿಷಯ ಕುರಿತು ಚಿಂತಿಸಲಾರಂಭಿಸಿದರು ಮತ್ತು ಈ ಭಗೀರಥ ಕಾರ್ಯಕ್ಕಾಗಿ ಅವರು 1925 ರಲ್ಲಿ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ್ ಸಂಘ’ ಸ್ಥಾಪಿಸಿದರು. ಡಾಕ್ಟರ್ ಹೆಗ್ಡೇವಾರ್ ಅವರ ನಿಧನಾನಂತರ, ಪರಮ ಪೂಜ್ಯ ಗುರೂಜಿ ಅವರು ರಾಷ್ಟ್ರ ಸೇವೆಯ ಈ ಮಹಾಯಜ್ಞವನ್ನು ಮುನ್ನಡೆಸಿದರು. ಪರಮ ಪೂಜ್ಯ ಗುರೂಜಿಯವರು ಹೀಗೆನ್ನುತ್ತಿದ್ದರು - “ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ ಇದಂ ನ ಮಮ” ಅಂದರೆ, ಇದು ನನ್ನದಲ್ಲ, ಇದು ರಾಷ್ಟ್ರದ್ದು ಎಂದರ್ಥ. ಇದರಲ್ಲಿ ಸ್ವಾರ್ಥವನ್ನು ತೊರೆದು ರಾಷ್ಟ್ರಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುವಂತಹ ಪ್ರೇರಣೆ ಅಡಗಿದೆ. ಗುರೂಜಿ ಗೋಲ್ವರ್ ಕರ್ ಅವರ ಈ ವಾಕ್ಯವು ಲಕ್ಷಾಂತರ ಸ್ವಯಂ ಸೇವಕರಿಗೆ ತ್ಯಾಗ ಮತ್ತು ಸೇವೆಯ ಹಾದಿ ತೋರಿಸಿತು. ತ್ಯಾಗ ಮತ್ತು ಸೇವಾ ಭಾವನೆ ಹಾಗೂ ಶಿಸ್ತಿನ ಬೋಧನೆಯ ಸಂಘದ ನಿಜವಾದ ಶಕ್ತಿಯಾಗಿದೆ. ಇಂದು RSS ನೂರು ವರ್ಷಗಳಿಂದ ಅವಿಶ್ರಾಂತವಾಗಿ, ಅವಿರತವಾಗಿ ರಾಷ್ಟ್ರದ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದ್ದರಿಂದಲೇ ದೇಶದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಎಲ್ಲಿಯೇ ಎದುರಾಗಲಿ, RSS ನ ಸ್ವಯಂ ಸೇವಕರು ಎಲ್ಲರಿಗಿಂತ ಮೊದಲು ಅಲ್ಲಿಗೆ ತಲುಪುತ್ತಾರೆ ಎಂಬುದನ್ನು ನಾವು ನೋಡುತ್ತೇವೆ.  ಲಕ್ಷಾಂತರ ಸ್ವಯಂ ಸೇವಕರ ಪ್ರತಿಯೊಂದು ಕೆಲಸ, ಪ್ರತಿಯೊಂದು ಪ್ರಯತ್ನವೂ ದೇಶ ಮೊದಲು - nation first ಎಂಬ ಭಾವನೆಯನ್ನು ಸದಾಕಾಲ ಅತ್ಯುತ್ತಮವಾಗಿರಿಸುತ್ತದೆ. ರಾಷ್ಟ್ರಸೇವೆಯ ಮಹಾಯಜ್ಞದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ಪ್ರತಿಯೊಬ್ಬ ಸ್ವಯಂ ಸೇವಕರಿಗೂ ನನ್ನ ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಮುಂದಿನ ತಿಂಗಳು ಅಂದರೆ ಅಕ್ಟೋಬರ್ 7 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಇದೆ. ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿಯ ಅತಿ ದೊಡ್ಡ ಆಧಾರವೆಂದು ನಮಗೆಲ್ಲಾ ತಿಳಿದೇ ಇದೆ. ಭಗವಾನ್ ರಾಮನ ಅವತಾರದ ಕತೆಗಳನ್ನು ಎಷ್ಟೊಂದು ವಿವರವಾಗಿ ನಮ್ಮೆಲ್ಲರಿಗೂ ತಿಳಿಸಿಹೇಳಿದ್ದು ಇದೇ ಮಹರ್ಷಿ ವಾಲ್ಮೀಕಿ ಅವರು. ಇವರು ಮಾನವ ಕುಲಕ್ಕೆ ರಾಮಾಯಣದಂತಹ ಅದ್ಭುತ ಗ್ರಂಥವನ್ನು ನೀಡಿದರು.

ಸ್ನೇಹಿತರೇ,

ರಾಮಾಯಣದ ಈ ಪ್ರಭಾವವು ಅದರಲ್ಲಿರುವ ಶ್ರೀರಾಮನ ಆದರ್ಶಗಳು ಮತ್ತು ಮೌಲ್ಯಗಳಲ್ಲಿ ಅಡಗಿದೆ. ಶ್ರೀರಾಮನು ಎಲ್ಲರನ್ನೂ ಸೇವೆ, ಸಾಮರಸ್ಯ ಮತ್ತು ಕರುಣೆಯಿಂದ ಅಪ್ಪಿಕೊಂಡನು. ಅದಕ್ಕಾಗಿಯೇ ಮಹರ್ಷಿ ವಾಲ್ಮೀಕಿಯ ರಾಮಾಯಣದ ರಾಮನು ತಾಯಿ ಶಬರಿ ಮತ್ತು ನಿಷಾದರಾಜನೊಂದಿಗೆ ಮಾತ್ರ ಪೂರ್ಣವಾಗಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ಸ್ನೇಹಿತರೇ, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದಾಗ, ನಿಷಾದರಾಜ ಮತ್ತು ಮಹರ್ಷಿ ವಾಲ್ಮೀಕಿಯ ಮಂದಿರವನ್ನು ಸಹ ಅದರೊಂದಿಗೇ ನಿರ್ಮಾಣ ಮಾಡಲಾಯಿತು. ನೀವು ರಾಮಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಹೋದಾಗಲೆಲ್ಲಾ ಮಹರ್ಷಿ ವಾಲ್ಮೀಕಿ ಮತ್ತು ನಿಷಾದರಾಜ ಮಂದಿರಕ್ಕೆ ಭೇಟಿ ನೀಡಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅತ್ಯಂತ ವಿಶೇಷವಾದ ಮಾತೆಂದರೆ, ಅವು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಇದರ ಪರಿಮಳ ಎಲ್ಲಾ ಮಿತಿಗಳನ್ನೂ ದಾಟಿ, ಜನರ ಹೃದಯಗಳನ್ನು ಸ್ಪರ್ಶಿಸುತ್ತದೆ. ಇತ್ತೀಚೆಗೆ ಪ್ಯಾರಿನ್ ನ ಒಂದು ಸಾಂಸ್ಕೃತಿಕ ಸಂಸ್ಥೆ “ಸೌಂತಖ್ ಮಂಟಪಾ” ತನ್ನ 50 ವರ್ಷಗಳನ್ನು ಪೂರ್ಣಗೊಳಿಸಿತು. ಈ ಕೇಂದ್ರವು ಭಾರತೀಯ ನೃತ್ಯವನ್ನು ಜನಪ್ರಿಯಗೊಳಿಸುವಲ್ಲಿ ತನ್ನ ವಿಸ್ತೃತ ಕೊಡುಗೆ ನೀಡಿದೆ. ಇದನ್ನು ಮಿಲೇನಾ ಸಾಲ್ವಿನಿ ಅವರು ಸ್ಥಾಪಿಸಿದರು. ಅವರನ್ನು ಕೆಲ ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾನು “ಸೌಂತಖ್ ಮಂಟಪಾ” ದೊಂದಿಗೆ ಕೈಜೋಡಿಸಿರುವ ಎಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಭವಿಷ್ಯದ ಅವರ ಪ್ರಯತ್ನಗಳಿಗಾಗಿ ಶುಭ ಹಾರೈಸುತ್ತೇನೆ.

ಸ್ನೇಹಿತರೇ, ನಾನು ಈಗ ನಿಮಗೆ ಎರಡು ಚಿಕ್ಕ ಆಡಿಯೋ ಕ್ಲಿಪ್ ಕೇಳಿಸುತ್ತೇನೆ, ದಯವಿಟ್ಟು ಗಮನ ಕೊಟ್ಟು ಆಲಿಸಿ -

#ಆಡಿಯೋ ಕ್ಲಿಪ್ 1#

ಈಗ ಎರಡನೇ ಕ್ಲಿಪ್ ಕೂಡಾ ಆಲಿಸಿ –

#ಆಡಿಯೋ ಕ್ಲಿಪ್ 2#

ಸ್ನೇಹಿತರೇ,

ಭೂಪೇನ್ ಹಜಾರಿಕಾ ಅವರ ಹಾಡುಗಳು ಪ್ರಪಂಚದಾದ್ಯಂತದ ವಿವಿಧ ದೇಶಗಳನ್ನು ಯಾವರೀತಿ ಒಂದಾಗುತ್ತವೆ ಎಂಬುದಕ್ಕೆ ಈ ಧ್ವನಿಯು ಸಾಕ್ಷಿಯಾಗಿದೆ. ವಾಸ್ತವದಲ್ಲಿ, ಶ್ರೀಲಂಕಾದಲ್ಲಿ ಬಹಳ ಶ್ಲಾಘನೀಯ ಪ್ರಯತ್ನವನ್ನು ಮಾಡಲಾಗಿದೆ. ಇದರಲ್ಲಿ, ಶ್ರೀಲಂಕಾದ ಕಲಾವಿದರು ಭೂಪೇನ್ ದಾ ಅವರ 'ಮನುಹೆ-ಮನುಹರ್ ಬಾಬಾ' ಪ್ರತಿಷ್ಠಿತ ಗೀತೆಯನ್ನು ಸಿಂಹಳ ಮತ್ತು ತಮಿಳಿಗೆ ಅನುವಾದಿಸಿದ್ದಾರೆ. ನಾನು ನಿಮಗಾಗಿ ಅದರ ಆಡಿಯೊವನ್ನು ಕೇಳಿಸಿದ್ದೇನೆ. ಕೆಲವು ದಿನಗಳ ಹಿಂದೆಯಷ್ಟೇ ಅಸ್ಸಾಂನಲ್ಲಿ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರೆತಿತ್ತು. ಇದು ನಿಜಕ್ಕೂ ಬಹಳ ಸ್ಮರಣೀಯ ಘಟನೆಯಾಗಿತ್ತು.

ಸ್ನೇಹಿತರೇ, ಅಸ್ಸಾಂ ಇಂದು ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿಯೇ, ಅಲ್ಲಿಯೇ ಕೆಲವು ದಿನಗಳ ಹಿಂದೆ ಒಂದು ದುಃಖದ ಸಂಗತಿಯೂ ನಡೆಯಿತು. ಜುಬೀನ್ ಗಾರ್ಗ್ ಅವರ ಅಕಾಲಿಕ ನಿಧನದಿಂದಾಗಿ ಜನರು ಶೋಕದಲ್ಲಿದ್ದಾರೆ.

ಜುಬೀನ್ ಗರ್ಗ್ ಅವರು ಪ್ರಸಿದ್ಧ ಜನಪ್ರಿಯ ಗಾಯಕರಾಗಿದ್ದು, ದೇಶಾದ್ಯಂತ ಹೆಸರು ಮಾಡಿದ್ದರು. ಅವರು ಅಸ್ಸಾಂ ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಜುಬೀನ್ ಗರ್ಗ್ ನಮ್ಮ ನೆನಪುಗಳಲ್ಲಿ ಸದಾ ಉಳಿಯುತ್ತಾರೆ ಮತ್ತು ಅವರ ಸಂಗೀತವು ಮುಂದಿನ ಪೀಳಿಗೆಯನ್ನು ಮೋಡಿ ಮಾಡುತ್ತಲೇ ಇರುತ್ತದೆ.

ಜುಬೀನ್ ಗರ್ಗ್ // ಆಸಿಲ್

ಅಹೋಮಾರ್ ಹಮೋಸಕ್ರತಿರ್ //  ಉಜ್ಜಾಲ್ ರತ್ನೋ..

ಜನೋತಾರ್ ಹೃದಯಾತ್ // ತೇಯೋ ಹೃದಾಯ್ ಜಿಯಾಯ್ // ಥಾಕೀಬೋ.

[ಅಂದರೆ: ಜುಬೀನ್ ಅವರು ಅಸ್ಸಾಂ ಸಂಸ್ಕೃತಿಯ ಕೊಹಿನೂರ್ ವಜ್ರ (ಉಜ್ವಲ ರತ್ನ). ನಮ್ಮ ನಡುವಿನಿಂದ ಅವರು ದೈಹಿಕವಾಗಿ ದೂರವಾದರೂ, ನಮ್ಮ ಹೃದಯಗಳಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯುತ್ತಾರೆ.]

ಸ್ನೇಹಿತರೇ, 

ನಮ್ಮ ದೇಶವು ಕೆಲವೇ ದಿನಗಳ ಹಿಂದೆ ಮಹಾನ್ ವಿಚಾರವಾದಿ, ಮತ್ತು ಚಿಂತಕ ಡಾ. ಎಸ್. ಎಲ್. ಭೈರಪ್ಪ ಅವರನ್ನು ಕೂಡಾ ಕಳೆದುಕೊಂಡಿತು. ನಾನು ಭೈರಪ್ಪ ಅವರೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದೆ,  ಮತ್ತು ನಾವು ಹಲವಾರು ಸಂದರ್ಭಗಳಲ್ಲಿ ವಿವಿಧ ವಿಷಯಗಳ ಕುರಿತು ಗಂಭೀರ ಮಾತುಕತೆಗಳನ್ನು ಕೂಡಾ ನಡೆಸಿದ್ದೇವೆ. ಅವರ ಕೃತಿಗಳು ಯುವ ಪೀಳಿಗೆಯ ಚಿಂತನೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರ ಅನೇಕ ಕನ್ನಡ ಕೃತಿಗಳ ಅನುವಾದ ಕೂಡಾ ಲಭ್ಯವಿದೆ. ನಮ್ಮ ಬೇರುಗಳು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದು ಎಷ್ಟು ಮುಖ್ಯ ಎಂಬುದನ್ನು ಅವರು ನಮಗೆ ಕಲಿಸಿದರು. ನಾನು ಎಸ್.ಎಲ್. ಭೈರಪ್ಪ ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಯುವಜನತೆ ಅವರ ಕೃತಿಗಳನ್ನು ಓದಬೇಕೆಂದು ಮನವಿ ಮಾಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಮುಂಬರುವ ದಿನಗಳಲ್ಲಿ ಒಂದಾದ ನಂತರರ ಒಂದರಂತೆ ಹಬ್ಬಗಳು ಮತ್ತು ಸಂತಸದ ಆಚರಣೆಗಳು ಬರಲಿವೆ. ಪ್ರತಿಯೊಂದು ಹಬ್ಬದಲ್ಲೂ ನಾವು ಸಾಕಷ್ಟು ಖರೀದಿಯೂ ಮಾಡುತ್ತೇವೆ. ಈ ಬಾರಿಯಂತೂ, ‘GST ಉಳಿತಾಯ ಹಬ್ಬ’ ಕೂಡಾ ನಡೆಯುತ್ತಿದೆ.

ಸ್ನೇಹಿತರೇ,

ಒಂದು ಸಂಕಲ್ಪದೊಂದಿಗೆ ನೀವು ನಿಮ್ಮ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಬಹುದು. ಈ ಬಾರಿ ಕೇವಲ ದೇಶೀಯ ತಯಾರಿಕೆಯ ಉತ್ಪನ್ನಗಳಿಂದ ಹಬ್ಬ ಆಚರಿಸುತ್ತೇವೆಂದು ನಾವು ಸಂಕಲ್ಪ ಮಾಡಿದಲ್ಲಿ, ನಮ್ಮ ಹಬ್ಬದ ಆಚರಣೆ ದುಪ್ಪಟ್ಟಾಗುವುದನ್ನು, ಅದರ ಮೆರುಗು ಅಧಿಕವಾಗುದನ್ನು ನೀವೇ ಕಾಣುತ್ತೀರಿ. ‘ವೋಕಲ್ ಫಾರ್ ಲೋಕಲ್’ ಅನ್ನು ಖರೀದಿಯ ಮಂತ್ರವಾಗಿಸಿಕೊಳ್ಳಿ. ದೇಶದಲ್ಲಿಯೇ ತಯಾರಾಗುವುದನ್ನೇ ಯಾವಾಗಲೂ ಖರೀದಿಸುತ್ತೇನೆ, ದೇಶದ ಜನರು ತಯಾರಿಸಿದ ವಸ್ತುಗಳನ್ನೇ ಮನೆಗೆ ತೆಗೆದುಕೊಂಡು ಬರುತ್ತೇನೆ. ದೇಶದ ನಾಗರಿಕನ ಕಠಿಣ ಪರಿಶ್ರಮದಿಂದ ತಯಾರಾದ ವಸ್ತುಗಳನ್ನೇ ಉಪಯೋಗಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಿ. ನಾವು ಈ ರೀತಿ ಮಾಡಿದಾಗ, ನಾವು ಕೇವಲ ಯಾವುದೇ ವಸ್ತುವನ್ನು ಖರೀದಿಸುದಿಲ್ಲ, ಯಾವುದೋ ಒಂದು ಕುಟುಂಬದ ಭರವಸೆಯನ್ನು ಮನೆಗೆ ತರುತ್ತೇವೆ, ಕುಶಲಕರ್ಮಿಗಳ ಪರಿಶ್ರಮಕ್ಕೆ ಗೌರವ ನೀಡುತ್ತೇವೆ, ಯುವ ಉದ್ಯಮಿಯ ಕನಸಿಗೆ ರೆಕ್ಕೆಗಳನ್ನು ನೀಡುತ್ತೇವೆ.

ಸ್ನೇಹಿತರೇ,

ಹಬ್ಬಗಳ ಸಂದರ್ಭದಲ್ಲಿ ನಾವು ನಮ್ಮ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ಸ್ವಚ್ಛತೆ ಎನ್ನುವುದನ್ನು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು. ಬೀದಿಗಳು, ನೆರೆಹೊರೆಯ ಸ್ಥಳಗಳು, ಮಾರುಕಟ್ಟೆ, ಗ್ರಾಮ, ಪ್ರತಿಯೊಂದು ಪ್ರದೇಶದಲ್ಲೂ ಸ್ವಚ್ಛತೆ ನಿರ್ವಹಣೆ ನಮ್ಮ ಜವಾಬ್ದಾರಿಯಾಗಬೇಕು.

ಸ್ನೇಹಿತರೇ,

ನಮ್ಮ ದೇಶದಲ್ಲಿ ಸದಾಕಾಲ ಹಬ್ಬ, ಉತ್ಸವಗಳ ಆಚರಣೆಯಿರುತ್ತದೆ ಮತ್ತು ದೀಪಾವಳಿ ಒಂದು ರೀತಿಯಲ್ಲಿ ಅತಿ ದೊಡ್ಡ ಹಬ್ಬ ಎನಿಸುತ್ತದೆ. ನಿಮ್ಮೆಲ್ಲರಿಗೂ ಮುಂಬರಲಿರುವ ದೀಪಾವಳಿ ಹಬ್ಬಕ್ಕಾಗಿ ಶುಭ ಹಾರೈಸುತ್ತೇನೆ. ನಾವು ಸ್ವಾವಲಂಬಿಗಳಾಗಬೇಕು, ದೇಶವನ್ನು ಸ್ವಾವಲಂಬಿಯಾಗಿಸಬೇಕು ಮತ್ತು ಅದಕ್ಕಿರುವ ದಾರಿ ಸ್ವದೇಶಿಯತೆಯ ಮೂಲಕ ಮಾತ್ರ ಮುನ್ನಡೆಯುವುದು ಎಂಬುದನ್ನು ನಾನು ಪುನರುಚ್ಛರಿಸಲು ಬಯಸುತ್ತೇನೆ.

ಸ್ನೇಹಿತರೇ,

ಇವು ಈ ಬಾರಿಯ ‘ಮನದ ಮಾತು’, ಇದನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ತಿಂಗಳು ಹೊಸ ಗಾಥೆಗಳೊಂದಿಗೆ, ಹೊಸ ಪ್ರೇರಣಾದಾಯಕ ವಿಷಯಗಳೊಂದಿಗೆ ಭೇಟಿ ಮಾಡುತ್ತೇನೆ. ಅಲ್ಲಿಯವರೆಗೆ, ನಿಮ್ಮೆಲ್ಲರಿಗೂ ಶುಭಾಶಯಗಳು. ಅನೇಕಾನೇಕ ಧನ್ಯವಾದ.

 

*****


(Release ID: 2172382) Visitor Counter : 16