ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 27 ರಂದು ಒಡಿಶಾಗೆ ಪ್ರಧಾನಮಂತ್ರಿ ಭೇಟಿ


ಜಾರ್ಸುಗುಡದಲ್ಲಿ 60,000 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ

ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಗ್ರಾಮೀಣ ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳ ಯೋಜನೆಗಳು

ರಾಷ್ಟ್ರೀಯ ಸಂವಹನ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನವಾಗಿ, ಸ್ವದೇಶಿ ತಂತ್ರಜ್ಞಾನದೊಂದಿಗೆ ಸುಮಾರು 37,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 97,500 ಕ್ಕೂ ಹೆಚ್ಚು ಮೊಬೈಲ್ 4G ಟವರ್‌ಗಳನ್ನು ಲೋಕಾರ್ಪಣೆ ಮಾಡಲಿರುವ  ಪ್ರಧಾನಮಂತ್ರಿ

ದೂರದ, ಗಡಿ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳಲ್ಲಿ ಸಂಪರ್ಕವಿಲ್ಲದ 26,700ಕ್ಕೂ ಹೆಚ್ಚು ಹಳ್ಳಿಗಳು ಸಂಪರ್ಕವನ್ನು ಪಡೆಯಲಿವೆ

ಮುಂದಿನ ನಾಲ್ಕು ವರ್ಷಗಳಲ್ಲಿ 10,000 ಹೊಸ ವಿದ್ಯಾರ್ಥಿಗಳಿಗೆ ಸಾಮರ್ಥ್ಯವನ್ನು ಸೃಷ್ಟಿಸುವ ಎಂಟು ಐಐಟಿಗಳ ವಿಸ್ತರಣೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ

ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಬಲಪಡಿಸಲು ಒಡಿಶಾ ಸರ್ಕಾರದ ಬಹು ಉಪಕ್ರಮಗಳಿಗೆ ಪ್ರಧಾನಮಂತ್ರಿ ಚಾಲನೆ

Posted On: 26 SEP 2025 8:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸೆಪ್ಟೆಂಬರ್ 27 ರಂದು ಒಡಿಶಾಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:30ರ ಸುಮಾರಿಗೆ, ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಈ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.

ಟೆಲಿಕಾಂ ಸಂಪರ್ಕ ಕ್ಷೇತ್ರದಲ್ಲಿ, ಪ್ರಧಾನಿಯವರು ಸ್ವದೇಶಿ ತಂತ್ರಜ್ಞಾನದೊಂದಿಗೆ ಸುಮಾರು ರೂ.37,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 97,500ಕ್ಕೂ ಹೆಚ್ಚು ಮೊಬೈಲ್ 4G ಟವರ್‌ಗಳನ್ನು ಅನಾವರಣಗೊಳಿಸಲಿದ್ದಾರೆ. ಇವುಗಳನ್ನು ಬಿಎಸ್‌ಎನ್‌ಎಲ್ ನಿಯೋಜಿಸಿದ್ದು 92,600 ಕ್ಕೂ ಹೆಚ್ಚು 4G ತಂತ್ರಜ್ಞಾನ ತಾಣಗಳು ಇವೆ. ಡಿಜಿಟಲ್ ಭಾರತ್ ನಿಧಿಯಡಿಯಲ್ಲಿ 18,900 ಕ್ಕೂ ಹೆಚ್ಚು 4G ತಾಣಗಳಿಗೆ ಹಣಕಾಸು ಒದಗಿಸಲಾಗಿದೆ, ಇದು ದೂರದ, ಗಡಿ ಮತ್ತು ಹಿಂಸಾ ಪೀಡಿತ ಪ್ರದೇಶಗಳಲ್ಲಿ ಸುಮಾರು 26,700 ಸಂಪರ್ಕವಿಲ್ಲದ ಹಳ್ಳಿಗಳನ್ನು ಸಂಪರ್ಕಿಸುತ್ತದೆ ಮತ್ತು 20 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರಿಗೆ ಸೇವೆ ಸಲ್ಲಿಸುತ್ತದೆ. ಈ ಗೋಪುರಗಳು ಸೌರಶಕ್ತಿ ಚಾಲಿತವಾಗಿದ್ದು, ಅವುಗಳನ್ನು ಭಾರತದ ಅತಿದೊಡ್ಡ ಹಸಿರು ದೂರಸಂಪರ್ಕ ತಾಣಗಳ ಸಮೂಹ ಮತ್ತು ಸುಸ್ಥಿರ ಮೂಲಸೌಕರ್ಯದಲ್ಲಿ ಒಂದು ಹೆಜ್ಜೆ ಮುಂದೆ ಇಡುವಂತೆ ಮಾಡಿದೆ.

ಸಂಪರ್ಕ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಮುಖ ರೈಲ್ವೆ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಸಂಬಲ್ಪುರ-ಸರ್ಲಾದಲ್ಲಿ ರೈಲು ಮೇಲ್ಸೇತುವೆಗೆ ಶಿಲಾನ್ಯಾಸ, ಕೊರಾಪುಟ್-ಬೈಗುಡ ಮಾರ್ಗ ದೇಶಕ್ಕೆ ಸಮರ್ಪಣೆ ಮತ್ತು ಮನಬಾರ್-ಕೊರಾಪುಟ್-ಗೋರಾಪುರ ಮಾರ್ಗ ಸೇರಿವೆ. ಈ ಯೋಜನೆಗಳು ಒಡಿಶಾ ಮತ್ತು ನೆರೆಯ ರಾಜ್ಯಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಂಚಾರವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ಸ್ಥಳೀಯ ಕೈಗಾರಿಕೆಗಳು ಮತ್ತು ವ್ಯಾಪಾರವನ್ನು ಬಲಪಡಿಸುತ್ತದೆ. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಗಳು ಬೆರ್ಹಾಂಪುರ ಮತ್ತು ಉಧ್ನಾ (ಸೂರತ್) ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ, ಇದು ರಾಜ್ಯಗಳಾದ್ಯಂತ ಕೈಗೆಟುಕುವ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುತ್ತದೆ, ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರಮುಖ ಆರ್ಥಿಕ ಜಿಲ್ಲೆಗಳಿಗೆ  ಸಂಪರ್ಕ ಒದಗಿಸುತ್ತದೆ.

ತಿರುಪತಿ, ಪಾಲಕ್ಕಾಡ್, ಭಿಲಾಯಿ, ಜಮ್ಮು, ಧಾರವಾಡ, ಜೋಧ್‌ಪುರ, ಪಾಟ್ನಾ ಮತ್ತು ಇಂದೋರ್ - ಎಂಟು ಐಐಟಿಗಳ ವಿಸ್ತರಣೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳನ್ನು ಸುಮಾರು 11,000 ಕೋಟಿ ರೂ.ಗಳ ಹೂಡಿಕೆಯಲ್ಲಿ ಮಾಡಲಾಗುತ್ತಿದೆ. ಈ ವಿಸ್ತರಣೆಯು ಮುಂದಿನ ನಾಲ್ಕು ವರ್ಷಗಳಲ್ಲಿ 10,000 ಹೊಸ ವಿದ್ಯಾರ್ಥಿಗಳಿಗೆ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಮತ್ತು ಎಂಟು ಅತ್ಯಾಧುನಿಕ ಸಂಶೋಧನಾ ಉದ್ಯಾನವನಗಳನ್ನು ಸ್ಥಾಪಿಸುತ್ತದೆ, ಇದರಿಂದಾಗಿ ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಬಲವಾದ ಉತ್ತೇಜನವನ್ನು ನೀಡುತ್ತದೆ.

ದೇಶಾದ್ಯಂತ 275 ರಾಜ್ಯ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಗುಣಮಟ್ಟ, ಸಮಾನತೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಮೆರೈಟ್ ಯೋಜನೆಯನ್ನು ಪ್ರಧಾನಿ ಪ್ರಾರಂಭಿಸಲಿದ್ದಾರೆ.

ಒಡಿಶಾ ಕೌಶಲ್ಯ ಅಭಿವೃದ್ಧಿ ಯೋಜನೆಯ ಎರಡನೇ ಹಂತವನ್ನು ಪ್ರಧಾನಮಂತ್ರಿ ಪ್ರಾರಂಭಿಸಲಿದ್ದು, ಸಂಬಲ್ಪುರ ಮತ್ತು ಬೆರ್ಹಾಂಪುರದಲ್ಲಿ ವಿಶ್ವ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇದು ಕೃಷಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಚಿಲ್ಲರೆ ವ್ಯಾಪಾರ, ಸಾಗರ ಮತ್ತು ಆತಿಥ್ಯದಂತಹ ಉದಯೋನ್ಮುಖ ವಲಯಗಳನ್ನು ಒಳಗೊಂಡಿದೆ. ಇದಲ್ಲದೇ, ಐದು ಐಟಿಐಗಳನ್ನು ಉತ್ಕರ್ಷ್ ಐಟಿಐಗಳಾಗಿ ಮೇಲ್ದರ್ಜೆಗೇರಿಸಲಾಗುವುದು, 25 ಐಟಿಐಗಳನ್ನು ಶ್ರೇಷ್ಠತೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ಹೊಸ ನಿಖರ ಎಂಜಿನಿಯರಿಂಗ್ ಕಟ್ಟಡವು ಸುಧಾರಿತ ತಾಂತ್ರಿಕ ತರಬೇತಿಯನ್ನು ಒದಗಿಸುತ್ತದೆ.

ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣವನ್ನು ಹೆಚ್ಚಿಸಲು, ಪ್ರಧಾನಮಂತ್ರಿಯವರು 130 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈ-ಫೈ ಸೌಲಭ್ಯಗಳನ್ನು ಸಮರ್ಪಿಸಲಿದ್ದಾರೆ, ಇದು 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನ ಒದಗಿಸಲಿದೆ. ಉಚಿತ ದೈನಂದಿನ ಡೇಟಾ ಒದಗಿಸಲಾಗುತ್ತದೆ.

ಪ್ರಧಾನಮಂತ್ರಿ ಅವರ ಭೇಟಿಯ ಸಮಯದಲ್ಲಿ ಒಡಿಶಾದಲ್ಲಿ ಆರೋಗ್ಯ ರಕ್ಷಣಾ ಮೂಲಸೌಕರ್ಯವು ಗಮನಾರ್ಹ ಉತ್ತೇಜನವನ್ನು ಪಡೆಯಲಿದೆ. ಅವರು ಬೆರ್ಹಾಂಪುರದಲ್ಲಿರುವ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಸಂಭಾಲ್ಪುರದಲ್ಲಿರುವ ವಿಐಎಂಎಸ್ಎಆರ್ ಅನ್ನು ವಿಶ್ವ ದರ್ಜೆಯ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅಡಿಪಾಯ ಹಾಕಲಿದ್ದಾರೆ. ನವೀಕರಿಸಿದ ಸೌಲಭ್ಯಗಳಲ್ಲಿ ಹೆಚ್ಚಿದ ಹಾಸಿಗೆ ಸಾಮರ್ಥ್ಯ, ಆಘಾತ ಆರೈಕೆ ಘಟಕಗಳು, ದಂತ ಕಾಲೇಜುಗಳು, ತಾಯಿ ಮತ್ತು ಮಕ್ಕಳ ಆರೈಕೆ ಸೇವೆಗಳು ಮತ್ತು ವಿಸ್ತೃತ ಶೈಕ್ಷಣಿಕ ಮೂಲಸೌಕರ್ಯಗಳು ಸೇರಿವೆ, ಇದು ಒಡಿಶಾದ ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

ಇದರ ಜೊತೆಗೆ, ಪ್ರಧಾನಮಂತ್ರಿಗಳು ಅಂತ್ಯೋದಯ ಗೃಹ ಯೋಜನೆಯಡಿ 50,000 ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯು ಅಂಗವಿಕಲರು, ವಿಧವೆಯರು, ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂತ್ರಸ್ತರು ಸೇರಿದಂತೆ ದುರ್ಬಲ ವರ್ಗದ ಕುಟುಂಬಗಳಿಗೆ ಪಕ್ಕಾ ಮನೆಗಳು ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ ಉಪಕ್ರಮವು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಕಲ್ಯಾಣ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****
 


(Release ID: 2172021) Visitor Counter : 12