ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ದಕ್ಷಿಣ ಕೊರಿಯಾಕ್ಕೆ ತಮ್ಮ ಯಶಸ್ವಿ ಭೇಟಿಯನ್ನು ಮುಕ್ತಾಯಗೊಳಿಸಿದರು; ಈ ಭೇಟಿಯು ಮಾಧ್ಯಮ, ಮನರಂಜನೆ, ಗೇಮಿಂಗ್ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿದೆ
30ನೇ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಏಷ್ಯಾ ಕಂಟೆಂಟ್ ಮಾರುಕಟ್ಟೆಯಲ್ಲಿ ಭಾರತವು ಬಲವಾದ ಸೃಜನಶೀಲ ಉಪಸ್ಥಿತಿಯನ್ನು ಪ್ರದರ್ಶಿಸುತ್ತಿದೆ: 'ಭಾರತ್ ಪರ್ವ' ಮತ್ತು ವೇವ್ಸ್ ಬಜಾರ್ ಭಾರತೀಯ ಸಂಸ್ಕೃತಿ ಮತ್ತು ಸೃಜನಶೀಲ ಆರ್ಥಿಕತೆಯನ್ನು ಪ್ರದರ್ಶಿಸುತ್ತಿದೆ
ಡಾ. ಎಲ್. ಮುರುಗನ್ ಅವರು ಮಾಧ್ಯಮ, ಎಐ, ಬ್ಲಾಕ್ ಚೈನ್ ಮತ್ತು ಕಂಟೆಂಟ್ ಸಂರಕ್ಷಣೆಯಲ್ಲಿ ಸಹಕಾರವನ್ನು ಗಾಢವಾಗಿಸಲು ಕೊರಿಯಾದ ಸಂಸದರು ಮತ್ತು ಉದ್ಯಮ ನಾಯಕರೊಂದಿಗೆ ಮಾತುಕತೆ ನಡೆಸಿದರು
ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಕೊರಿಯಾದಲ್ಲಿರುವ ಭಾರತೀಯ ವಲಸಿಗರು ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಡಾ. ಮುರುಗನ್ ಶ್ಲಾಘಿಸಿದರು; ಗೋವಾದಲ್ಲಿ ನಡೆಯಲಿರುವ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಸಚಿವರು ಕೊರಿಯನ್ ನಿಯೋಗವನ್ನು ಆಹ್ವಾನಿಸಿದರು
Posted On:
25 SEP 2025 9:22PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಸೆಪ್ಟೆಂಬರ್ 2025ರ 22-24ರ ವರೆಗೆ ಕೊರಿಯಾ ಗಣರಾಜ್ಯದ ಹಲವು ನಗರಗಳಿಗೆ ನೀಡಿದ ಭೇಟಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು, ಇದು ಮಾಧ್ಯಮ, ಮನರಂಜನೆ, ಸಂಸ್ಕೃತಿ, ಗೇಮಿಂಗ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಭಾರತ-ಕೊರಿಯಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
30ನೇ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿ.ಐ.ಎಫ್.ಎಫ್.) ಮತ್ತು ಏಷ್ಯಾ ಕಂಟೆಂಟ್ ಮತ್ತು ಚಲನಚಿತ್ರ ಮಾರುಕಟ್ಟೆಯಲ್ಲಿ (ಎ.ಸಿ.ಎಫ್.ಎಂ) ಭಾರತದ ಬಲವಾದ ಭಾಗವಹಿಸುವಿಕೆ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಭೇಟಿಯಲ್ಲಿ ಹಲವು ಉನ್ನತ ಮಟ್ಟದ ಸಭೆಗಳು, ಉದ್ಯಮ ದುಂಡುಮೇಜಿನ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮುದಾಯ ಸಂವಾದ ನಡೆದವು.
ಭೇಟಿಯ ಮುಖ್ಯಾಂಶಗಳು
1. ಭಾರತದ ಸೃಜನಶೀಲ ಆರ್ಥಿಕತೆ ಮತ್ತು ಸಹ-ನಿರ್ಮಾಣ ಸಹಯೋಗದ ಕುರಿತು ದುಂಡುಮೇಜಿನ ಸಭೆ (ಸೆಪ್ಟೆಂಬರ್ 22, ಬುಸಾನ್)
ಡಾ. ಮುರುಗನ್ ಅವರು ಬಿ.ಐ.ಎಫ್.ಎಫ್. ಸಂದರ್ಭದಲ್ಲಿ ಬುಸಾನ್ ಚಲನಚಿತ್ರ ಆಯೋಗದ (ಬಿ.ಎಫ್.ಸಿ.) ಸಹಭಾಗಿತ್ವದಲ್ಲಿ ಆಯೋಜಿಸಲಾದ ಉನ್ನತ ಮಟ್ಟದ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರತಿನಿಧಿಗಳು ಮತ್ತು ಜಾಗತಿಕ ಉದ್ಯಮದ ನಾಯಕರು ನೀತಿ ಚೌಕಟ್ಟುಗಳು, ಸಹ-ನಿರ್ಮಾಣ ಒಪ್ಪಂದಗಳು, ಹಣಕಾಸು ಕಾರ್ಯವಿಧಾನಗಳು ಮತ್ತು ವಿತರಣಾ ಪಾಲುದಾರಿಕೆಗಳ ಕುರಿತು ಚರ್ಚಿಸಿದರು. ದುಂಡುಮೇಜಿನ ಸಭೆಯಲ್ಲಿ ಸಹ-ನಿರ್ಮಾಣ ಕೇಂದ್ರವಾಗಿ ಭಾರತ ಬೆಳೆಯುತ್ತಿರುವ ಪಾತ್ರ ಹಾಗೂ ಕೊರಿಯಾ ಮತ್ತು ಜಾಗತಿಕ ಪಾಲುದಾರರೊಂದಿಗೆ ಸೃಜನಾತ್ಮಕ ವಿನಿಮಯ ಗಾಢವಾಗಿಸುವ ಮಹತ್ವಾಕಾಂಕ್ಷೆಯ ಕುರಿತು ಉಲ್ಲೇಖಿಸಲಾಯಿತು.
2. ಭಾರತ್ ಪರ್ವ ಮತ್ತು ನೆಟ್ವರ್ಕಿಂಗ್ ಡಿನ್ನರ್: ವೇವ್ಸ್ ಬಜಾರ್ ಪ್ರದರ್ಶನ (ಸೆಪ್ಟೆಂಬರ್ 22, ಬುಸಾನ್)
ವಾರ್ತಾ ಮತ್ತು ಪ್ರಸಾರ ಸಚಿವಾಲಯ ತನ್ನ ವೇವ್ಸ್ ಮತ್ತು ವೇವ್ಸ್ ಬಜಾರ್ ವೇದಿಕೆಗಳ ಮೂಲಕ, "ಭಾರತೀಯ ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪರ್ಕದಿಂದ ಪಯಣ" ಎಂಬ ಪರಿಕಲ್ಪನೆ ಮೇಲೆ ಸಾಂಸ್ಕೃತಿಕ ಪ್ರದರ್ಶನ ಮತ್ತು ನೆಟ್ವರ್ಕಿಂಗ್ ಸಂಜೆಯಾದ ಭಾರತ್ ಪರ್ವವನ್ನು ಆಯೋಜಿಸಿತು.
ಈ ಕಾರ್ಯಕ್ರಮದಲ್ಲಿ ಬಿ.ಐ.ಎಫ್.ಎಫ್. ಅಧ್ಯಕ್ಷರಾದ ಶ್ರೀ ಪಾರ್ಕ್ ಕ್ವಾಂಗ್-ಸೂ; ಎ.ಸಿ.ಎಫ್.ಎಂ. ನಿರ್ದೇಶಕರಾದ ಶ್ರೀಮತಿ ಎಲೆನ್ ವೈ.ಡಿ. ಕಿಮ್; ಮತ್ತು ಬಿ.ಎಫ್.ಸಿ ನಿರ್ದೇಶಕರಾದ ಶ್ರೀ ಕಾಂಗ್ ಸಂಗ್-ಕ್ಯೂ ಸೇರಿದಂತೆ 250ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು.
ಡಾ. ಮುರುಗನ್ ಅವರು ಮಾತನಾಡಿ, ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಭಾರತದ ಬದ್ಧತೆಯನ್ನು ವಿವರಿಸಿದರು ಮತ್ತು ಬಿ.ಐ.ಎಫ್.ಎಫ್. 2025ರಲ್ಲಿ ಬಲವಾದ ಭಾರತೀಯ ಪ್ರಾತಿನಿಧ್ಯವನ್ನು ಉಲ್ಲೇಖಿಸಿದರು, 10 ಭಾರತೀಯ ಯೋಜನೆಗಳನ್ನು ಪ್ರದರ್ಶಿಸಲಾಯಿತು ಮತ್ತು ಎ.ಸಿ.ಎಫ್.ಎಂ. ನಲ್ಲಿ ಸಹ-ನಿರ್ಮಾಣ ಮಾರುಕಟ್ಟೆಗೆ 5 ಯೋಜನೆಗಳನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿದರು.
3. ಸಂಸದೀಯ ಮತ್ತು ಸರ್ಕಾರಿ ಕಾರ್ಯಕ್ರಮಗಳು (ಸೆಪ್ಟೆಂಬರ್ 24, ಸಿಯೋಲ್)
• ರಾಷ್ಟ್ರೀಯ ಅಸೆಂಬ್ಲಿಯ ಸಂಸ್ಕೃತಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸಮಿತಿಯ ಸದಸ್ಯರೊಂದಿಗೆ ಸಭೆ.
ಶ್ರೀಮತಿ ಕಿಮ್ ಜೇ-ವಾನ್ ಮತ್ತು ಶ್ರೀ ಜಿನ್ ಜೊಂಗ್-ಓಹ್ ಅವರೊಂದಿಗಿನ ಚರ್ಚೆಗಳು ಭಾರತ-ಕೊರಿಯಾ ಸಹ-ನಿರ್ಮಾಣ ಒಪ್ಪಂದ ಬಲಪಡಿಸುವುದು, ಸ್ವಾಮ್ಯಚೌರ್ಯ ಮತ್ತು ಕಂಟೆಂಟ್ ಸಂರಕ್ಷಣೆಯ ಸಮಸ್ಯೆ ಪರಿಹರಿಸುವುದು ಹಾಗೂ ಕೃತಕ ಬುದ್ಧಿಮತ್ತೆ, ಬ್ಲಾಕ್ ಚೈನ್ ಮತ್ತು ಕಂಟೆಂಟ್ ನಿರ್ವಹಣೆಯಲ್ಲಿ ಸಂಭಾವ್ಯ ಸಹಕಾರದ ಮೇಲೆ ಕೇಂದ್ರೀಕರಿಸಿದವು. ಮಾಧ್ಯಮ ಮತ್ತು ಮನರಂಜನಾ ಸಹಕಾರದ ಕುರಿತು ಚರ್ಚೆಗಳನ್ನು ಮುನ್ನಡೆಸಲು ಜಂಟಿ ಕಾರ್ಯಕಾರಿ ಗುಂಪಿನ ರಚನೆಯನ್ನು ಪ್ರಸ್ತಾಪಿಸಲಾಯಿತು.
• ಕೊರಿಯಾ-ಭಾರತ ಸಂಸದೀಯ ಸ್ನೇಹ ಗುಂಪಿನ ಸದಸ್ಯರೊಂದಿಗೆ ಸಭೆ
ಉಪಾಧ್ಯಕ್ಷರಾದ ಶ್ರೀಮತಿ ಮೂನ್ ಜಿಯೋಂಗ್-ಬಾಗ್ ಮತ್ತು ಶ್ರೀ ಯೂನ್ ಯಂಗ್-ಸಿಯೋಕ್ ಸೇರಿದಂತೆ ಸದಸ್ಯರೊಂದಿಗೆ ಡಾ. ಮುರುಗನ್ ವ್ಯಾಪಕ ಚರ್ಚೆ ನಡೆಸಿದರು. ಈ ಚರ್ಚೆಗಳು ಎರಡೂ ದೇಶಗಳ ನಡುವಿನ ನಾಗರಿಕ ಸಂಬಂಧಗಳನ್ನು ಪುನರುಚ್ಚರಿಸಿದವು ಹಾಗೂ ಹೆಚ್ಚಿನ ಸಂಸದೀಯ, ಸಾಂಸ್ಕೃತಿಕ ಮತ್ತು ಜನರ ನಡುವಿನ ವಿನಿಮಯದ ಸಾಮರ್ಥ್ಯವನ್ನು ವಿವರಿಸಿದವು.
4. ಉದ್ಯಮದ ತೊಡಗಿಸಿಕೊಳ್ಳುವಿಕೆ: ಕ್ರಾಫ್ಟನ್ ಸಿಇಒ ಜೊತೆ ಸಭೆ (ಸೆಪ್ಟೆಂಬರ್ 24, ಸಿಯೋಲ್)
ಡಾ. ಎಲ್. ಮುರುಗನ್ ಅವರು ವಿಶ್ವದ ಪ್ರಮುಖ ಗೇಮಿಂಗ್ ಕಂಪನಿಗಳಲ್ಲಿ ಒಂದಾದ ಕ್ರಾಫ್ಟನ್ ಇಂಕ್ ನ ಜಾಗತಿಕ ಸಿಇಒ ಶ್ರೀ ಚಾಂಗನ್ ಕಿಮ್ ಅವರನ್ನು ಭೇಟಿಯಾದರು. ಆನ್ಲೈನ್ ಗೇಮಿಂಗ್, ಇ-ಸ್ಪೋರ್ಟ್ ಗಳ ಪ್ರಚಾರ ಮತ್ತು ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಯ ಮೂಲಕ ಪ್ರತಿಭಾ ಅಭಿವೃದ್ಧಿ, ಭಾರತದ ಇತ್ತೀಚಿನ ಕಾಯ್ದೆ ಕುರಿತು ಚರ್ಚೆಗಳು ನಡೆದವು. ಭಾರತದಲ್ಲಿ ಹೂಡಿಕೆ ಹೆಚ್ಚಿಸುವಲ್ಲಿ ಮತ್ತು ಗೇಮಿಂಗ್ ಅಭಿವೃದ್ಧಿ, ಸಂಶೋಧನೆ ಮತ್ತು ಕೌಶಲ್ಯ ತರಬೇತಿಯಲ್ಲಿ ಅದರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವಲ್ಲಿ, ಭಾರತದ ಯುವ ಜನಸಂಖ್ಯೆ ಮತ್ತು ರೋಮಾಂಚಕ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಗುರುತಿಸುವಲ್ಲಿ ಕ್ರಾಫ್ಟನ್ ತೀವ್ರ ಆಸಕ್ತಿ ವ್ಯಕ್ತಪಡಿಸಿತು.
5. ಮಾಧ್ಯಮ ಪಾಲುದಾರಿಕೆ: ದಿ ಕೊರಿಯಾ ಹೆರಾಲ್ಡ್ ಜೊತೆ ಸಭೆ (ಸೆಪ್ಟೆಂಬರ್ 24, ಸಿಯೋಲ್)
ಮಾಧ್ಯಮ ಸಹಕಾರ, ಸಾಂಸ್ಕೃತಿಕ ಅರಿವು ಮತ್ತು ಕಂಟೆಂಟ್ ಸಹ-ಸೃಷ್ಟಿ ಹೆಚ್ಚಿಸುವತ್ತ ಗಮನಹರಿಸಿ, ಹೆರಾಲ್ಡ್ ಮೀಡಿಯಾ ಗ್ರೂಪ್ (ದಿ ಕೊರಿಯಾ ಹೆರಾಲ್ಡ್/ಹೆರಾಲ್ಡ್ ಬಿಸಿನೆಸ್) ನ ಅಧ್ಯಕ್ಷರು ಮತ್ತು ಪ್ರಕಾಶಕರಾದ ಶ್ರೀ ಜಿನ್-ಯಂಗ್ ಚೋಯ್ ಅವರೊಂದಿಗೆ ಸಚಿವರು ಚರ್ಚೆ ನಡೆಸಿದರು.
6. ಭಾರತೀಯ ಸಮುದಾಯದೊಂದಿಗೆ ಸಂವಾದ (ಸೆಪ್ಟೆಂಬರ್ 24, ಸಿಯೋಲ್)
ಭಾರತೀಯ ರಾಯಭಾರ ಕಚೇರಿಯಲ್ಲಿ ಆಯೋಜಿಸಲಾದ ವಿಶೇಷ ವಲಸಿಗ ಕಾರ್ಯಕ್ರಮದಲ್ಲಿ, ಡಾ. ಮುರುಗನ್ ಅವರು ಕೊರಿಯಾದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದರು. ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್" ಎಂಬ ದೃಷ್ಟಿಕೋನ ಮತ್ತು ವಿಕಸಿತ ಭಾರತವಾಗುವತ್ತ ಭಾರತದ ಪ್ರಗತಿಯನ್ನು ವಿವರಿಸಿದರು.
ಯುಪಿಐ ಆಧಾರಿತ ಡಿಜಿಟಲ್ ಪಾವತಿಗಳಂತಹ ನಾವೀನ್ಯತೆಗಳ ಮೂಲಕ ಭಾರತದ ಜಾಗತಿಕ ಡಿಜಿಟಲ್ ನಾಯಕತ್ವವನ್ನು ಅವರು ವಿವರಿಸಿದರು ಮತ್ತು ಭಾರತದ ಬೆಳವಣಿಗೆಯ ಕಥೆಯಲ್ಲಿ ಪಾಲುದಾರರಾಗಿ ವಲಸಿಗರ ಮಹತ್ವವನ್ನು ಉಲ್ಲೇಖಿಸಿದರು.
ಭಾರತ-ಕೊರಿಯಾ ಸೃಜನಾತ್ಮಕ ಸಮನ್ವಯ
ಭಾರತವನ್ನು ಜಾಗತಿಕ ಕಂಟೆಂಟ್ ಕೇಂದ್ರವಾಗಿ ಸ್ಥಾಪಿಸುವ ಭಾರತ ಸರ್ಕಾರದ ಸಕ್ರಿಯ ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ದೃಷ್ಟಿಕೋನವನ್ನು ಈ ಭೇಟಿ ತಿಳಿಸಿದೆ. ವೇವ್ಸ್ ಮತ್ತು ವೇವ್ಸ್ ಬಜಾರ್ ನಂತಹ ಉಪಕ್ರಮಗಳು, ಭಾರತ ಪರ್ವನಂತಹ ಪ್ರಮುಖ ಕಾರ್ಯಕ್ರಮಗಳೊಂದಿಗೆ, ಭಾರತದ ಸೃಜನಶೀಲ ಉಪಸ್ಥಿತಿಯನ್ನು ವಿಸ್ತರಿಸುತ್ತಿವೆ, ಗಡಿಯಾಚೆಗಿನ ಸಹಯೋಗವನ್ನು ಪ್ರೋತ್ಸಾಹಿಸುತ್ತಿವೆ ಮತ್ತು ಸಹ-ನಿರ್ಮಾಣ, ಗೇಮಿಂಗ್ ಮತ್ತು ಡಿಜಿಟಲ್ ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತಿವೆ.
2025ರ ನವೆಂಬರ್ 20 ರಿಂದ 28ರ ವರೆಗೆ ಗೋವಾದಲ್ಲಿ ನಡೆಯಲಿರುವ 56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ) ಭಾಗವಹಿಸಲು ಕೊರಿಯಾದ ಸಂಸದರು, ಮಾಧ್ಯಮ ಮುಖ್ಯಸ್ಥರು ಮತ್ತು ಉದ್ಯಮ ಪ್ರತಿನಿಧಿಗಳಿಗೆ ಡಾ. ಮುರುಗನ್ ಆಹ್ವಾನ ನೀಡಿದರು, ಇದು ಭಾರತ-ಕೊರಿಯಾ ಜನರ ನಡುವಿನ ಮತ್ತು ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ.
*****
(Release ID: 2171520)
Visitor Counter : 3