ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 21 SEP 2025 6:09PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೆ, ನಮಸ್ಕಾರ!

ಶಕ್ತಿಯನ್ನು ಆರಾಧಿಸುವ ಹಬ್ಬವಾದ ನವರಾತ್ರಿ ಇಂದಿನಿಂದ ಪ್ರಾರಂಭವಾಗುತ್ತಿದೆ. ನಿಮ್ಮೆಲ್ಲರಿಗೂ ಶುಭಾಶಯಗಳು! ನವರಾತ್ರಿಯ ಮೊದಲ ದಿನದಿಂದ, ದೇಶವು ಸ್ವಾವಲಂಬಿ ಭಾರತ ಅಭಿಯಾನದತ್ತ ಮತ್ತೊಂದು ಪ್ರಮುಖ ಮತ್ತು ದಿಟ್ಟ ಹೆಜ್ಜೆ ಇಡುತ್ತಿದೆ. ಇಂದು, ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ ಸೂರ್ಯೋದಯದೊಂದಿಗೆ, ಹೊಸ ಅಥವಾ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬರುತ್ತಿವೆ. ಒಂದು ರೀತಿಯಲ್ಲಿ, ಇಂದಿನಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಹಬ್ಬ ಆರಂಭವಾಗುತ್ತಿದೆ. ಈ ಜಿಎಸ್ಟಿ ಉಳಿತಾಯ ಹಬ್ಬವು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ, ನೀವು ಬಯಸುವ ವಸ್ತುಗಳನ್ನು ಹೆಚ್ಚು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಬಡವರು, ಮಧ್ಯಮ ವರ್ಗದ ಜನರು, ನವ ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವರ್ತಕರು, ಉದ್ಯಮಶೀಲರು, ನಮ್ಮ ದೇಶದ ಉದ್ಯಮಿಗಳು, ಪ್ರತಿಯೊಬ್ಬರೂ ಈ ಉಳಿತಾಯ ಹಬ್ಬದಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ಇದರರ್ಥ ಈ ಹಬ್ಬದ ಸಮಯದಲ್ಲಿ ಎಲ್ಲರಿಗೂ ತಿನ್ನಲು ಸಿಹಿ ಇರುತ್ತದೆ, ದೇಶದ ಪ್ರತಿಯೊಂದು ಕುಟುಂಬವೂ ಆಶೀರ್ವದಿಸಲ್ಪಡುತ್ತದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ಈ ಉಳಿತಾಯ ಹಬ್ಬಕ್ಕಾಗಿ ದೇಶದ ಕೋಟ್ಯಂತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ವೇಗಗೊಳಿಸುತ್ತವೆ, ವ್ಯವಹಾರ ಮಾಡುವುದನ್ನು ಸುಲಭಗೊಳಿಸುತ್ತವೆ, ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ.

ಸ್ನೇಹಿತರೆ,

2017ರಲ್ಲಿ ಭಾರತವು ಜಿಎಸ್‌ಟಿ ಸುಧಾರಣೆಯತ್ತ ಹೆಜ್ಜೆ ಇಟ್ಟಾಗ, ಅದು ಇತಿಹಾಸದಲ್ಲಿ ಒಂದು ಬದಲಾವಣೆ ತರುವ ಮತ್ತು ಹೊಸದನ್ನು ಸೃಷ್ಟಿಸುವ ಆರಂಭವನ್ನು ಗುರುತಿಸಿತು. ದಶಕಗಳಿಂದ ನಮ್ಮ ದೇಶದ ಜನರು, ನೀವೆಲ್ಲರೂ, ದೇಶದ ಉದ್ಯಮಿಗಳು, ವಿವಿಧ ತೆರಿಗೆಗಳ ಜಟಿಲತೆಯಲ್ಲಿ ಸಿಲುಕಿಕೊಂಡಿದ್ದರು. ಆಕ್ಟ್ರಾಯ್, ಪ್ರವೇಶ ತೆರಿಗೆ, ಮಾರಾಟ ತೆರಿಗೆ, ಅಬಕಾರಿ, ವ್ಯಾಟ್, ಸೇವಾ ತೆರಿಗೆ, ನಮ್ಮ ದೇಶದಲ್ಲಿ ಅಂತಹ ಡಜನ್ ಗಟ್ಟಲೆ ತೆರಿಗೆಗಳು ಇದ್ದವು. ಒಂದು ನಗರದಿಂದ ಇನ್ನೊಂದು ನಗರಕ್ಕೆ ಸರಕುಗಳನ್ನು ಕಳುಹಿಸಬೇಕಾದರೆ, ಒಬ್ಬರು ಹಲವಾರು ಚೆಕ್‌ಪೋಸ್ಟ್‌ಗಳನ್ನು ದಾಟಬೇಕಾಗಿತ್ತು, ಹಲವಾರು ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿತ್ತು, ಹಲವಾರು ಅಡೆತಡೆಗಳು ಇದ್ದವು ಮತ್ತು ಎಲ್ಲೆಡೆ ವಿಭಿನ್ನ ತೆರಿಗೆ ನಿಯಮಗಳಿದ್ದವು. 2014ರಲ್ಲಿ ದೇಶವು ನನಗೆ ಪ್ರಧಾನ ಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿದಾಗ, ಆ ಆರಂಭಿಕ ಹಂತದಲ್ಲಿ ವಿದೇಶಿ ಪತ್ರಿಕೆಯಲ್ಲಿ ಒಂದು ಆಸಕ್ತಿದಾಯಕ ಉದಾಹರಣೆ ಪ್ರಕಟವಾಯಿತು, ಅದರಲ್ಲಿ ಕಂಪನಿಯ ತೊಂದರೆಗಳನ್ನು ಉಲ್ಲೇಖಿಸಲಾಗಿತ್ತು. ಆ ಕಂಪನಿಯು ಬೆಂಗಳೂರಿನಿಂದ ಹೈದರಾಬಾದ್‌ಗೆ ತನ್ನ ಸರಕುಗಳನ್ನು ಕಳುಹಿಸಬೇಕಾದರೆ, ಅದು 570 ಕಿಲೋಮೀಟರ್ ದೂರ ಸಾಗುವುದು ಆಗ ತುಂಬಾ ಕಷ್ಟಕರವಾಗಿತ್ತು. ಕಂಪನಿಯು ಮೊದಲು ಬೆಂಗಳೂರಿನಿಂದ ಯುರೋಪಿಗೆ ತನ್ನ ಸರಕುಗಳನ್ನು ಕಳುಹಿಸಿ ನಂತರ ಅದೇ ಸರಕುಗಳನ್ನು ಯುರೋಪಿನಿಂದ ಹೈದರಾಬಾದ್‌ಗೆ ಕಳುಹಿಸಬೇಕಿತ್ತು.

ಸ್ನೇಹಿತರೆ,

ತೆರಿಗೆಗಳು ಮತ್ತು ಸುಂಕಗಳ ಸಂಕೀರ್ಣತೆಯಿಂದಾಗಿ ಆಗಿನ ಪರಿಸ್ಥಿತಿ ಆಗಿತ್ತು. ನಾನು ನಿಮಗೆ ಹಳೆಯ ಉದಾಹರಣೆಯನ್ನು ನೆನಪಿಸುತ್ತಿದ್ದೇನೆ, ಅಂತಹ ಲಕ್ಷಾಂತರ ಕಂಪನಿಗಳು, ಲಕ್ಷಾಂತರ ದೇಶವಾಸಿಗಳು, ವಿವಿಧ ರೀತಿಯ ತೆರಿಗೆಗಳ ಜಟಿಲತೆಯಿಂದಾಗಿ ಪ್ರತಿದಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಒಂದು ನಗರದಿಂದ ಮತ್ತೊಂದು ನಗರಕ್ಕೆ ಸರಕುಗಳ ಸಾಗಣೆ ಸಮಯದಲ್ಲಿ ಉಂಟಾಗುವ ವೆಚ್ಚವನ್ನು ಬಡವರು ಭರಿಸುತ್ತಿದ್ದರು, ನಿಮ್ಮಂತಹ ಸಾಮಾನ್ಯ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿತ್ತು.

ಸ್ನೇಹಿತರೆ,

ದೇಶವನ್ನು ಈ ಪರಿಸ್ಥಿತಿಯಿಂದ ಹೊರತರುವುದು ಬಹಳ ಮುಖ್ಯವಾಗಿತ್ತು. ಆದ್ದರಿಂದ, ನೀವು 2014ರಲ್ಲಿ ನಮಗೆ ಅವಕಾಶ ನೀಡಿದಾಗ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಾವು ಜಿಎಸ್‌ಟಿಯನ್ನು ನಮ್ಮ ಆದ್ಯತೆಯನ್ನಾಗಿ ಮಾಡಿದ್ದೇವೆ. ನಾವು ಪ್ರತಿಯೊಬ್ಬ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ, ಪ್ರತಿಯೊಂದು ರಾಜ್ಯದ ಪ್ರತಿಯೊಂದು ಸಂದೇಹವನ್ನು ಪರಿಹರಿಸಿದ್ದೇವೆ, ಪ್ರತಿಯೊಂದು ಪ್ರಶ್ನೆಗೆ ಪರಿಹಾರ ಕಂಡುಕೊಂಡಿದ್ದೇವೆ. ಎಲ್ಲಾ ರಾಜ್ಯಗಳನ್ನು ಕೊಂಡೊಯ್ಯುವ ಮೂಲಕ, ಸ್ವತಂತ್ರ ಭಾರತದ ಇಷ್ಟೊಂದು ದೊಡ್ಡ ತೆರಿಗೆ ಸುಧಾರಣೆ ಸಾಧ್ಯವಾಯಿತು. ಕೇಂದ್ರ ಮತ್ತು ರಾಜ್ಯಗಳ ಪ್ರಯತ್ನಗಳ ಫಲವಾಗಿ ದೇಶವು ಡಜನ್ ಗಟ್ಟಲೆ ತೆರಿಗೆಗಳ ಜಾಲದಿಂದ ಮುಕ್ತವಾಯಿತು, ಇಡೀ ದೇಶಕ್ಕೆ ಏಕರೂಪದ ತೆರಿಗೆ ವ್ಯವಸ್ಥೆ ರೂಪಿಸಲಾಯಿತು. ಒಂದು ರಾಷ್ಟ್ರ-ಒಂದು ತೆರಿಗೆಯ ಕನಸು ನನಸಾಯಿತು.

ಸ್ನೇಹಿತರೆ,

ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಕಾಲ ಬದಲಾದಂತೆ ಮತ್ತು ದೇಶದ ಅಗತ್ಯಗಳು ವಿಕಸನಗೊಂಡಂತೆ, ಮುಂದಿನ ಪೀಳಿಗೆಯ ಸುಧಾರಣೆಗಳು ಸಮಾನವಾಗಿ ಅಗತ್ಯವಾಗುತ್ತವೆ. ಆದ್ದರಿಂದ, ದೇಶದ ಪ್ರಸ್ತುತ ಅಗತ್ಯಗಳು ಮತ್ತು ಭವಿಷ್ಯದ ಕನಸುಗಳನ್ನು ಗಮನದಲ್ಲಿಟ್ಟುಕೊಂಡು, ಈ ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ.

ಹೊಸ ಸ್ವರೂಪದಲ್ಲಿ, ಈಗ ಕೇವಲ 5 ಪ್ರತಿಶತ ಮತ್ತು 18 ಪ್ರತಿಶತ ತೆರಿಗೆ ಶ್ರೇಣಿ(ಸ್ಲ್ಯಾಬ್‌)ಗಳು ಇರುತ್ತವೆ. ಇದರರ್ಥ ಹೆಚ್ಚಿನ ದಿನನಿತ್ಯದ ವಸ್ತುಗಳು ಹೆಚ್ಚು ಕೈಗೆಟುಕುತ್ತವೆ. ಆಹಾರ ವಸ್ತುಗಳು, ಔಷಧಿಗಳು, ಸೋಪ್, ಬ್ರಷ್‌ಗಳು, ಟೂತ್‌ಪೇಸ್ಟ್, ಆರೋಗ್ಯ ಮತ್ತು ಜೀವ ವಿಮೆ - ಅಂತಹ ಹಲವು ಸರಕುಗಳು ಮತ್ತು ಸೇವೆಗಳು ತೆರಿಗೆ ಮುಕ್ತವಾಗಿರುತ್ತವೆ ಅಥವಾ ಕೇವಲ 5 ಪ್ರತಿಶತ ತೆರಿಗೆ ಆಕರ್ಷಿಸುತ್ತವೆ. ಈ ಹಿಂದೆ 12 ಪ್ರತಿಶತದಷ್ಟು ತೆರಿಗೆ ವಿಧಿಸಲಾಗಿದ್ದ ಸರಕುಗಳಲ್ಲಿ, 99 ಪ್ರತಿಶತ, ಅಂದರೆ, ಸುಮಾರು 100 ಪ್ರತಿಶತ, ಈಗ 5 ಪ್ರತಿಶತ ತೆರಿಗೆಯ ವ್ಯಾಪ್ತಿಗೆ ಬಂದಿವೆ.

ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ, ದೇಶದಲ್ಲಿ 25 ಕೋಟಿ ಜನರು ಬಡತನವನ್ನು ಹಿಮ್ಮೆಟ್ಟಿದ್ದಾರೆ, ಅದನ್ನು ಜಯಿಸಿದ್ದಾರೆ. ಬಡತನದಿಂದ ಹೊರಬರುವ ಮೂಲಕ, 25 ಕೋಟಿ ಜನರ ಒಂದು ದೊಡ್ಡ ಗುಂಪು ಇಂದು ದೇಶದಲ್ಲಿ ನವಮಧ್ಯಮ ವರ್ಗವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ನವಮಧ್ಯಮ ವರ್ಗಕ್ಕೆ ತನ್ನದೇ ಆದ ಆಕಾಂಕ್ಷೆಗಳಿವೆ, ತನ್ನದೇ ಆದ ಕನಸುಗಳಿವೆ. ಈ ವರ್ಷ, ಸರ್ಕಾರವು 12 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಅವರಿಗೆ ಉಡುಗೊರೆ ನೀಡಿದೆ.

12 ಲಕ್ಷ ರೂ.ಗಳ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದಾಗ, ಅದು ಮಧ್ಯಮ ವರ್ಗದವರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಇದು ತುಂಬಾ ಸುಲಭ ಮತ್ತು ಅನುಕೂಲಕರವಾಗುತ್ತದೆ. ಈಗ ಬಡವರ ಸರದಿ, ನವಮಧ್ಯಮ ವರ್ಗದ ಸರದಿ. ಈಗ, ಬಡವರು, ನವಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದವರು 2 ಪಟ್ಟು ಲಾಭ   ಪಡೆಯುತ್ತಿದ್ದಾರೆ. ಜಿಎಸ್‌ಟಿ ಕಡಿತದಿಂದಾಗಿ, ದೇಶದ ನಾಗರಿಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದು ಈಗ ಸುಲಭವಾಗುತ್ತದೆ. ಅದು ಮನೆ ನಿರ್ಮಿಸುವುದು, ಟಿವಿ, ರೆಫ್ರಿಜರೇಟರ್ ಖರೀದಿಸುವುದು ಅಥವಾ ಸ್ಕೂಟರ್, ಬೈಕ್ ಅಥವಾ ಕಾರು ಖರೀದಿಸುವುದು, ನೀವು ಇವೆಲ್ಲವುಗಳ ಮೇಲೆ ಕಡಿಮೆ ಖರ್ಚು ಮಾಡಬೇಕಾಗುತ್ತದೆ. ಹೆಚ್ಚಿನ ಹೋಟೆಲ್‌ಗಳಲ್ಲಿನ ಕೊಠಡಿಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ಪ್ರಯಾಣವು ನಿಮಗೆ ಅಗ್ಗವಾಗುತ್ತದೆ.

ಅಂದ ಹಾಗೆ, ಸ್ನೇಹಿತರೆ,

ಜಿಎಸ್‌ಟಿ ಸುಧಾರಣೆಯ ಬಗ್ಗೆ ಅಂಗಡಿಯ ಸಹೋದರ-ಸಹೋದರಿಯರು ಸಹ ತುಂಬಾ ಉತ್ಸಾಹದಿಂದಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ. ಅವರು ಜಿಎಸ್‌ಟಿ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸುವಲ್ಲಿ ಬಹಳ ಕಾರ್ಯೋನ್ಮುಖರಾಗಿದ್ದಾರೆ. ಹಿಂದಿನ ಮತ್ತು ಈಗಿನ ಬೆಲೆಗಳನ್ನು ಪ್ರದರ್ಶಿಸುವ ಫಲಕಗಳನ್ನು ಅನೇಕ ಸ್ಥಳಗಳಲ್ಲಿ ಹಾಕಲಾಗುತ್ತಿದೆ.

ಸ್ನೇಹಿತರೆ,

ನಾವು ಮುಂದುವರಿಯುತ್ತಿರುವ 'ನಾಗರಿಕ ದೇವೋ ಭವ:' ಎಂಬ ಮಂತ್ರವು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ನಾವು ಆದಾಯ ತೆರಿಗೆಯಲ್ಲಿ ವಿನಾಯಿತಿ ಮತ್ತು ಜಿಎಸ್‌ಟಿಯಲ್ಲಿ ವಿನಾಯಿತಿ ಸೇರಿಸಿದರೆ, ಒಂದು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರಗಳು ದೇಶದ ಜನರಿಗೆ 2.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಉಳಿತಾಯ ಮಾಡುತ್ತವೆ. ಅದಕ್ಕಾಗಿಯೇ ನಾನು ಹೇಳುತ್ತಿದ್ದೇನೆ, ಇದು ಉಳಿತಾಯ ಹಬ್ಬ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು, ನಾವು ಸ್ವಾವಲಂಬನೆಯ ಹಾದಿಯನ್ನು ಅನುಸರಿಸಬೇಕಾಗುತ್ತದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ಎಂ.ಎಸ್.ಎಂ.ಇಗಳ ಮೇಲಿದೆ, ಅಂದರೆ ನಮ್ಮ ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆಗಳ ಮೇಲೆ ಇದೆ. ದೇಶದ ಜನರಿಗೆ ಏನು ಬೇಕೋ, ನಾವು ದೇಶದಲ್ಲಿಯೇ ಏನು ಮಾಡಬಹುದು, ಅದನ್ನು ನಾವು ದೇಶದಲ್ಲಿಯೇ ಮಾಡಬೇಕು.

ಸ್ನೇಹಿತರೆ,

ಜಿಎಸ್‌ಟಿ ದರಗಳಲ್ಲಿನ ಕಡಿತ ಮತ್ತು ನಿಯಮಗಳು ಮತ್ತು ಕಾರ್ಯವಿಧಾನಗಳ ಸರಳೀಕರಣದೊಂದಿಗೆ, ನಮ್ಮ ಎಂ.ಎಸ್.ಎಂ.ಇಗಳು, ನಮ್ಮ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಗುಡಿ ಕೈಗಾರಿಕೆಗಳು ಬಹಳಷ್ಟು ಪ್ರಯೋಜನ ಪಡೆಯುತ್ತವೆ. ಅವುಗಳ ಮಾರಾಟ ಹೆಚ್ಚಾಗುತ್ತದೆ, ಅವರು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ, ಅಂದರೆ ಅವರು 2 ಪಟ್ಟು ಪ್ರಯೋಜನ ಪಡೆಯುತ್ತಾರೆ. ಆದ್ದರಿಂದ, ಇಂದು ನಾನು ನಿಮ್ಮೆಲ್ಲರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ, ಅದು ಎಂ.ಎಸ್.ಎಂ.ಇಗಳು, ಸಣ್ಣ ಕೈಗಾರಿಕೆಗಳು, ಅತಿಸಣ್ಣ ಕೈಗಾರಿಕೆಗಳು ಅಥವಾ ಗುಡಿ ಕೈಗಾರಿಕೆಗಳು ಆಗಿರಬಹುದು. ಭಾರತವು ಸಮೃದ್ಧಿಯ ಉತ್ತುಂಗದಲ್ಲಿರಬೇಕಾದರೆ, ಭಾರತದ ಆರ್ಥಿಕತೆಯ ಮುಖ್ಯ ಆಧಾರವೆಂದರೆ ನಮ್ಮ ಎಂಎಸ್ಎಂಇಗಳಾಗಿವೆ. ನಮ್ಮ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಎಂದು ನಿಮಗೆ ತಿಳಿದಿದೆ. ಭಾರತದ ಉತ್ಪಾದನೆ, ಭಾರತದಲ್ಲಿ ಉತ್ಪಾದಿಸುವ ಸರಕುಗಳ ಗುಣಮಟ್ಟವು ಉತ್ತಮವಾಗಿತ್ತು. ನಾವು ಆ ಹೆಮ್ಮೆಯನ್ನು ಮರಳಿ ಪಡೆಯಬೇಕು. ನಮ್ಮ ಸಣ್ಣ ಕೈಗಾರಿಕೆಗಳು ಉತ್ಪಾದಿಸುವ ಯಾವುದೇ ವಸ್ತುವು ಪ್ರತಿ ಮಾನದಂಡದಿಂದಲೂ ವಿಶ್ವದಲ್ಲೇ ಅತ್ಯುತ್ತಮವಾಗಿರಬೇಕು, ಅತ್ಯುತ್ತಮವಾದದ್ದಾಗಿರಬೇಕು. ನಾವು ತಯಾರಿಸುವ ಯಾವುದೇ ವಸ್ತುವು ಹೆಮ್ಮೆ ಮತ್ತು ಪ್ರತಿಷ್ಠೆಯೊಂದಿಗೆ ವಿಶ್ವದಲ್ಲೇ ಅತ್ಯುತ್ತಮ ಎಂಬ ಎಲ್ಲಾ ನಿಯತಾಂಕಗಳನ್ನು ಮೀರಬೇಕು. ನಮ್ಮ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಲು, ಜಗತ್ತಿನಲ್ಲಿ ಭಾರತದ ಮನ್ನಣೆಯನ್ನು ಹೆಚ್ಚಿಸಲು ಮತ್ತು ಭಾರತದ ಹೆಮ್ಮೆಯನ್ನು ಹೆಚ್ಚಿಸಲು ನಾವು ಕೆಲಸ ಮಾಡಬೇಕು.

ಸ್ನೇಹಿತರೆ,

ದೇಶದ ಸ್ವಾತಂತ್ರ್ಯವು ಸ್ವದೇಶಿ ಮಂತ್ರದಿಂದ ಬಲಗೊಂಡಂತೆ, ದೇಶದ ಸಮೃದ್ಧಿಯೂ ಸಹ ಸ್ವದೇಶಿ ಮಂತ್ರದಿಂದ ಬಲಗೊಳ್ಳುತ್ತದೆ. ಇಂದು ತಿಳಿದೋ ತಿಳಿಯದೆಯೋ, ಅನೇಕ ವಿದೇಶಿ ವಸ್ತುಗಳು ನಮ್ಮ ದೈನಂದಿನ ಜೀವನದ ಭಾಗವಾಗಿವೆ, ನಮಗೆ ಅದರ ಅರಿವೂ ಇಲ್ಲ. ನಮ್ಮ ಜೇಬಿನಲ್ಲಿರುವ ಬಾಚಣಿಗೆ ವಿದೇಶಿಯೋ ಅಥವಾ ಭಾರತೀಯವೋ ಎಂಬುದು ನಮಗೆ ತಿಳಿದಿಲ್ಲ. ಇವುಗಳನ್ನು ಸಹ ನಾವು ತೊಡೆದುಹಾಕಬೇಕಾಗುತ್ತದೆ. ನಾವು ಮೇಡ್ ಇನ್ ಇಂಡಿಯಾ ಸರಕುಗಳನ್ನು ಖರೀದಿಸಬೇಕು, ಇದರಲ್ಲಿ ನಮ್ಮ ಯುವಕರ ಕಠಿಣ ಪರಿಶ್ರಮ, ನಮ್ಮ ಪುತ್ರರು ಮತ್ತು ಪುತ್ರಿಯರ ಬೆವರು ಸೇರಿರುತ್ತದೆ. ನಾವು ಪ್ರತಿಯೊಂದು ಮನೆಯನ್ನು ಸ್ವದೇಶಿಯ ಸಂಕೇತವನ್ನಾಗಿ ಮಾಡಬೇಕು. ಪ್ರತಿಯೊಂದು ಅಂಗಡಿಯನ್ನು ಸ್ವದೇಶಿಯಿಂದ ಅಲಂಕರಿಸಬೇಕು. ಇದು ಸ್ವದೇಶಿ ಎಂದು ನೀವೆಲ್ಲರೂ ಹೆಮ್ಮೆಯಿಂದ ಹೇಳಿ, ಹೆಮ್ಮೆಯಿಂದ ಹೇಳಿ, ನಾನು ಸ್ವದೇಶಿ ಖರೀದಿಸುತ್ತೇನೆ, ನಾನು ಸ್ವದೇಶಿ ವಸ್ತುಗಳನ್ನು ಸಹ ಮಾರಾಟ ಮಾಡುತ್ತೇನೆ, ಇದು ಪ್ರತಿಯೊಬ್ಬ ಭಾರತೀಯನ ಮನೋಭಾವವಾಗಬೇಕು. ಇದು ಸಂಭವಿಸಿದಾಗ, ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಇಂದು, ಎಲ್ಲಾ ರಾಜ್ಯ ಸರ್ಕಾರಗಳು ಈ ಸ್ವಾವಲಂಬಿ ಭಾರತದ ಅಭಿಯಾನ, ಈ ಸ್ವದೇಶಿ ಅಭಿಯಾನದೊಂದಿಗೆ ತಮ್ಮ ರಾಜ್ಯಗಳಲ್ಲಿ ಉತ್ಪಾದನೆ ವೇಗಗೊಳಿಸಲು ಮತ್ತು ಪೂರ್ಣಶಕ್ತಿ ಮತ್ತು ಉತ್ಸಾಹದಿಂದ ಸೇರುವಂತೆ ನಾನು ಒತ್ತಾಯಿಸುತ್ತೇನೆ. ಹೂಡಿಕೆಗೆ ವಾತಾವರಣ ಹೆಚ್ಚಿಸಿ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಮುಂದುವರೆದಾಗ, ಸ್ವಾವಲಂಬಿ ಭಾರತದ ಕನಸು ನನಸಾಗುತ್ತದೆ. ಭಾರತದ ಪ್ರತಿಯೊಂದು ರಾಜ್ಯವು ಅಭಿವೃದ್ಧಿ ಹೊಂದುತ್ತದೆ, ಭಾರತವು ಅಭಿವೃದ್ಧಿ ಹೊಂದುತ್ತದೆ. ಈ ಮನೋಭಾವನೆಯೊಂದಿಗೆ, ಈ ಉಳಿತಾಯ ಹಬ್ಬಕ್ಕೆ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ತಿಳಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನವರಾತ್ರಿ ಮತ್ತು ಜಿಎಸ್‌ಟಿ ಉಳಿತಾಯ ಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತೇನೆ. ತುಂಬು ಧನ್ಯವಾದಗಳು!

 

*****


(Release ID: 2169541)