ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ಸೇವಾ ಪಾಕ್ಷಿಕ' ಅಡಿಯಲ್ಲಿ ದೆಹಲಿ ಸರ್ಕಾರದ ಸುಮಾರು ₹1,723 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದರು
ಇಂದು, ದೇಶದ ಪ್ರತಿಯೊಬ್ಬ ನಾಗರಿಕರು ಮತ್ತು ಪ್ರಪಂಚದಾದ್ಯಂತ ಇರುವ ಭಾರತೀಯರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಹಾರೈಸುತ್ತಿದ್ದಾರೆ
ದೇಶವನ್ನು ಸುರಕ್ಷಿತ ಮತ್ತು ಆರ್ಥಿಕವಾಗಿ ಅಭಿವೃದ್ಧಿಪಡಿಸುವುದರಿಂದ ಹಿಡಿದು ಬಡವರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸೌಲಭ್ಯಗಳನ್ನು ಒದಗಿಸುವವರೆಗೆ, ದೇಶವು ಮೋದಿಯವರ ಪ್ರಯತ್ನಗಳನ್ನು ದೀರ್ಘಕಾಲ ನೆನಪಿಸಿಕೊಳ್ಳುತ್ತದೆ
ಲಕ್ಷಾಂತರ ಜನರನ್ನು ಬಡತನದಿಂದ ಮುಕ್ತಗೊಳಿಸುವುದು ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಸಾಧ್ಯವಾಯಿತು
ದೆಹಲಿಯಲ್ಲಿ ಹಿಂದಿನ ಸರ್ಕಾರಗಳು ಯೋಜನೆಗಳ ಅನುಷ್ಠಾನದಲ್ಲಿ ತಾರತಮ್ಯ ಮಾಡಿದ್ದವು ಮತ್ತು ₹ 5 ಲಕ್ಷ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದು ಇದಕ್ಕೆ ಒಂದು ಉದಾಹರಣೆಯಾಗಿದೆ
ಭಾರತದ ಪ್ರತಿಯೊಬ್ಬ ನಾಗರಿಕನು ದೇಶೀಯ ಉತ್ಪನ್ನಗಳನ್ನು ಖರೀದಿಸುವುದಾಗಿ ಪ್ರತಿಜ್ಞೆ ಮಾಡುವ ಸಮಯ ಈಗ ಬಂದಿದೆ; ಆಗ ಮಾತ್ರ ಸಮೃದ್ಧ ಭಾರತ ಸಾಧ್ಯವಾಗುತ್ತದೆ
ದೆಹಲಿಯ ಜನರನ್ನು ಒಂದು ಕಾಲದಲ್ಲಿ ಮುಜುಗರಕ್ಕೀಡು ಮಾಡಿದ್ದ ಬೃಹತ್ ಕಸದ ರಾಶಿಗಳಿಂದ ಮೋದಿ ಸರ್ಕಾರ ವಿದ್ಯುತ್ ಉತ್ಪಾದನೆ ಆರಂಭಿಸುತ್ತಿದೆ
"ನುಸುಳುಕೋರರನ್ನು ರಕ್ಷಿಸಿ ಯಾತ್ರೆ"ಯನ್ನು ಮುನ್ನಡೆಸುತ್ತಿರುವ ಪ್ರಮುಖ ವಿರೋಧ ಪಕ್ಷದ ನಾಯಕ ನುಸುಳುಕೋರರ ಬಲದ ಮೇಲೆ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಿದ್ದಾರೆ
ಮತದಾರರ ಪಟ್ಟಿಗಳನ್ನು ಶುದ್ಧೀಕರಿಸುವ ಮತ್ತು ನುಸುಳುಕೋರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಮೋದಿ ಸರ್ಕಾರ ಬೆಂಬಲಿಸುತ್ತದೆ
Posted On:
17 SEP 2025 6:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂದು ನವದೆಹಲಿಯಲ್ಲಿ 'ಸೇವಾ ಪಾಕ್ಷಿಕ'ದ ಅಡಿಯಲ್ಲಿ ದೆಹಲಿ ಸರ್ಕಾರದ ಸುಮಾರು ₹1,723 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಕೇಂದ್ರ ಸಚಿವರಾದ ಶ್ರೀ ಹರ್ಷ ಮಲ್ಹೋತ್ರಾ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಇಂದು ದೇಶದ ಪ್ರತಿಯೊಬ್ಬ ನಾಗರಿಕರು ಮತ್ತು ಪ್ರಪಂಚದಾದ್ಯಂತ ಇರುವ ಭಾರತೀಯರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಹೃತ್ಪೂರ್ವಕವಾಗಿ ಹಾರೈಸುತ್ತಿದ್ದಾರೆ ಎಂದು ಹೇಳಿದರು. ಶ್ರೀ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿ ಯಾದಾಗ, ಅವರ ಜನ್ಮದಿನವನ್ನು 'ಸೇವಾ ಪಾಕ್ಷಿಕ' ಎಂದು ಆಚರಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು. ಕಳೆದ 11 ವರ್ಷಗಳಿಂದ, ಇಡೀ ದೇಶವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸೇವಾ ಪಾಕ್ಷಿಕವನ್ನು ಆಚರಿಸುತ್ತಿದೆ. ಸೇವಾ ಪಾಕ್ಷಿಕದ ಅಡಿಯಲ್ಲಿ, ಗ್ರಾಮ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು, ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರದ ವಿವಿಧ ಕಚೇರಿಗಳು ಸ್ವಚ್ಛತಾ ಅಭಿಯಾನಗಳನ್ನು ನಡೆಸುವುದಲ್ಲದೆ, ಬಡವರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸುತ್ತವೆ ಎಂದು ಶ್ರೀ ಶಾ ಹೇಳಿದರು. ಇಂದು, ಸೆಪ್ಟೆಂಬರ್ 17 ರಂದು, ದೆಹಲಿ ಸರ್ಕಾರವು ಸೇವಾ ಪಾಕ್ಷಿಕವನ್ನು ಪ್ರಾರಂಭಿಸಿದೆ ಮತ್ತು 17 ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಮೋದಿಯವರ ಜನ್ಮದಿನದಂದು, ಸೇವಾ ಪಾಕ್ಷಿಕ ಮೂಲಕ, ನಮ್ಮ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣವನ್ನು ಖಾತ್ರಿಪಡಿಸುವ ಸಂಪ್ರದಾಯವನ್ನು ಪ್ರಾರಂಭಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ 11 ವರ್ಷಗಳಲ್ಲಿ, ಪ್ರಧಾನಮಂತ್ರಿ ಮೋದಿಯವರು ದೇಶದ 60 ಕೋಟಿ ಬಡ ನಾಗರಿಕರಿಗೆ ಸೌಲಭ್ಯಗಳನ್ನು ಒದಗಿಸಿದ್ದಲ್ಲದೆ, 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು. 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ತರುವುದು ಮತ್ತು 60 ಕೋಟಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಬಹಳ ದೊಡ್ಡ ಪ್ರಯತ್ನ ಮತ್ತು ಸಂಕಲ್ಪ ಎಂದು ಶ್ರೀ ಶಾ ಹೇಳಿದರು. ಸೇವಾ ಪಾಕ್ಷಿಕ ಆರಂಭವು ದೇಶದ ಪ್ರತಿಯೊಬ್ಬ ಯುವಕರು ಪ್ರಧಾನಮಂತ್ರಿ ಮೋದಿಯವರ ಜೀವನದಿಂದ ಸ್ಫೂರ್ತಿ ಪಡೆಯಲು ಮತ್ತು ಇತರರ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಪ್ರಧಾನಮಂತ್ರಿ ಮೋದಿಯವರು ಯಾವುದೇ ತಾರತಮ್ಯವಿಲ್ಲದೆ ಜನರಿಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಒದಗಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಹಿಂದಿನ ಸರ್ಕಾರಗಳು ದೆಹಲಿಯ ವಿರುದ್ಧ ತಾರತಮ್ಯ ಮಾಡಿದವು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿಯವರು ಪ್ರಾರಂಭಿಸಿದ ₹5 ಲಕ್ಷದವರೆಗಿನ ಆರೋಗ್ಯ ವಿಮಾ ಯೋಜನೆಯನ್ನು ಹಿಂದಿನ ದೆಹಲಿ ಸರ್ಕಾರ ಜಾರಿಗೆ ತರಲಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿ ಭಾರತದ 1.4 ಶತಕೋಟಿ ಜನರನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾರೆ ಮತ್ತು ಅವರ ಇಡೀ ಜೀವನವನ್ನು ಅವರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಕಳೆದ 11 ವರ್ಷಗಳಲ್ಲಿ, ಮೋದಿಯವರು ದೇಶವನ್ನು ಸುರಕ್ಷಿತಗೊಳಿಸಲು, ಆರ್ಥಿಕವಾಗಿ ಅಭಿವೃದ್ಧಿಪಡಿಸಲು, ಪ್ರತಿ ಬಡ ಕುಟುಂಬಕ್ಕೆ ಹೊಸ ಉತ್ಸಾಹ, ಶಕ್ತಿ ತರುವ ಮತ್ತು ಸೌಲಭ್ಯಗಳನ್ನು ಒದಗಿಸುವ ಮತ್ತು ಪ್ರತಿ ಮಗುವಿನಲ್ಲಿ ಶ್ರೇಷ್ಠ ಭಾರತದ ಸಂಕಲ್ಪವನ್ನು ತುಂಬುವ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂಬ ದೇಶದ ಬಹುದಿನಗಳ ಆಸೆ ಪ್ರಧಾನಮಂತ್ರಿ ಮೋದಿಯವರ ಅವಧಿಯಲ್ಲಿ ಭವ್ಯ ದೇವಾಲಯ ನಿರ್ಮಾಣದೊಂದಿಗೆ ಈಡೇರಿತು ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣವಾಗಲಿ, ಸೋಮನಾಥ ದೇವಾಲಯವನ್ನು ಚಿನ್ನದಿಂದ ಪುನಃಸ್ಥಾಪಿಸುವುದಾಗಲಿ ಅಥವಾ ಕರ್ತಾರಪುರ್ ಸಾಹಿಬ್ ಕಾರಿಡಾರ್ ನಿರ್ಮಿಸುವುದಾಗಲಿ, ಮೋದಿ ಅವರು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿ ತಮ್ಮ ಎರಡನೇ ಅವಧಿಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದರು ಎಂದು ಗೃಹ ಸಚಿವರು ಹೇಳಿದರು. ತಮ್ಮ 24 ವರ್ಷಗಳ ಸಾರ್ವಜನಿಕ ಸೇವೆಯಲ್ಲಿ, ಮೋದಿ ಅವರು ಎಂದಿಗೂ ರಜೆ ತೆಗೆದುಕೊಂಡಿಲ್ಲ, ದೇಶದ ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಪ್ರತಿ ಕ್ಷಣವೂ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ಈ ಸಮರ್ಪಣೆ ಭಾರತವನ್ನು ಜಾಗತಿಕವಾಗಿ 11 ನೇ ಸ್ಥಾನದಿಂದ 4 ನೇ ಅತಿದೊಡ್ಡ ಆರ್ಥಿಕತೆಗೆ ಏರಿಸಿದೆ ಮತ್ತು 2027ರ ವೇಳೆಗೆ 3ನೇ ಸ್ಥಾನವನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ದೃಢಸಂಕಲ್ಪ ಮತ್ತು ನಿಸ್ವಾರ್ಥ ಕೆಲಸದ ಮೂಲಕ ಇಂತಹ ಅದ್ಭುತ ಸಾಧನೆಗಳು ಸಾಧ್ಯ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ಜಾಗತಿಕವಾಗಿ ಅಗ್ರ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆಗಸ್ಟ್ 15, 2047 ರ ವೇಳೆಗೆ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ನಾಯಕನನ್ನಾಗಿ ಮಾಡುವ ಗುರಿಯನ್ನು ಮೋದಿ ಹೊಂದಿದ್ದಾರೆ ಮತ್ತು ಈ ದೃಷ್ಟಿಕೋನದಿಂದ ಇಡೀ ದೇಶವನ್ನು ಒಂದುಗೂಡಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಅಭಿವೃದ್ಧಿ ಹೊಂದಿದ, ಸುರಕ್ಷಿತ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಮೋದಿಯವರು ಮುನ್ನಡೆಯುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. 3,000 ಟನ್ ತ್ಯಾಜ್ಯವನ್ನು ಸಂಸ್ಕರಿಸುವ ನರೇಲಾ-ಬವಾನಾ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸ್ಥಾವರ ಹಾಗೂ 2,000 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸುವ ಓಖ್ಲಾ ಸ್ಥಾವರವನ್ನು ಉದ್ಘಾಟನೆಯನ್ನು ಶ್ರೀ ಶಾ ಘೋಷಿಸಿದರು, ಇದು ವೃತ್ತಾಕಾರದ (ಮರುಬಳಕೆ) ಆರ್ಥಿಕತೆ ಮತ್ತು ಹಸಿರು ಶಕ್ತಿಯನ್ನು ಉತ್ತೇಜಿಸುತ್ತದೆ. ಒಂದು ಕಾಲದಲ್ಲಿ ದೆಹಲಿಯ ಜನರನ್ನು ಮುಜುಗರಕ್ಕೀಡು ಮಾಡಿದ್ದ ಬೃಹತ್ ಕಸದ ರಾಶಿಗಳಿಂದ ಮೋದಿಯವರ ಸರ್ಕಾರ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರ ಅಗತ್ಯ ವಸ್ತುಗಳ ಮೇಲಿನ ಜಿ ಎಸ್ ಟಿ ಯನ್ನು ಶೇ.28 ಮತ್ತು ಶೇ.18 ರಿಂದ ಶೇ.5 ಅಥವಾ ಶೂನ್ಯಕ್ಕೆ ಇಳಿಸಿದೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಶ್ರೀಸಾಮಾನ್ಯರು ಬಳಸುವ 395 ವಸ್ತುಗಳ ಮೇಲಿನ ತೆರಿಗೆಯನ್ನು ಶೂನ್ಯ ಅಥವಾ ಶೇ.5 ಕ್ಕೆ ಇಳಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ದೇಶೀಯವಾಗಿ ಉತ್ಪಾದಿಸುವ ಉತ್ಪನ್ನಗಳನ್ನು ಖರೀದಿಸುವಂತೆ ಅವರು ಜನರಿಗೆ ಕರೆ ನೀಡಿದರು ಮತ್ತು ಪ್ರತಿಯೊಬ್ಬ ಭಾರತೀಯರು ಭಾರತೀಯ ಉತ್ಪನ್ನಗಳನ್ನು ಖರೀದಿಸಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. ದೇಶೀಯ ವಸ್ತುಗಳನ್ನು ಉತ್ತೇಜಿಸುವುದು ಒಂದು ಅಭ್ಯಾಸವಾಗಬೇಕು ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವುದು ಸಾಮೂಹಿಕ ಸಂಕಲ್ಪವಾಗಬೇಕು ಎಂದು ಅವರು ಒತ್ತಿ ಹೇಳಿದರು.

ನುಸುಳುಕೋರರನ್ನು ನಮ್ಮ ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕೇ ಅಥವಾ ಬೇಡವೇ ಎಂದು ಕೇಂದ್ರ ಗೃಹ ಸಚಿವರು ಕೇಳಿದರು. "ನುಸುಳುಕೋರರನ್ನು ಉಳಿಸಿ ಯಾತ್ರೆ" ಆಯೋಜಿಸುವ ಮೂಲಕ ಅವರು ಯಾರನ್ನು ಉಳಿಸಲು ಬಯಸುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳನ್ನು ಪ್ರಶ್ನಿಸಿದರು. ಈ "ನುಸುಳುಕೋರರನ್ನು ಉಳಿಸಿ ಯಾತ್ರೆ"ಯನ್ನು ಆಯೋಜಿಸುತ್ತಿರುವ ಪ್ರಮುಖ ವಿರೋಧ ಪಕ್ಷದ ನಾಯಕರು ನುಸುಳುಕೋರರ ಬಲದ ಮೇಲೆ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ ಎಂದು ಶ್ರೀ ಶಾ ಹೇಳಿದರು. ವಿರೋಧ ಪಕ್ಷವು ನುಸುಳುಕೋರರು ನಮ್ಮ ಮತದಾರರ ಪಟ್ಟಿಯಲ್ಲಿ ಉಳಿಯಬೇಕೆಂದು ಬಯಸುತ್ತದೆ, ಏಕೆಂದರೆ ಅದು ಈ ದೇಶದ ಜನರನ್ನು ನಂಬುವುದಿಲ್ಲ ಮತ್ತು ನುಸುಳುಕೋರರ ಬಲದ ಮೇಲೆ ಚುನಾವಣೆಗಳನ್ನು ಗೆಲ್ಲಲು ಬಯಸುತ್ತದೆ ಎಂದು ಅವರು ಹೇಳಿದರು. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮತ್ತು ನುಸುಳುಕೋರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಮೋದಿ ಸರ್ಕಾರವು ಬೆಂಬಲಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(Release ID: 2167890)
Visitor Counter : 2