ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಪ್ರದೇಶದ ಧಾರ್‌ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ ಮತ್ತುಅಭಿವೃದ್ಧಿ ಕಾರ್ಯಗಳಿಗೆ ಚಾಲನೆ


ಈ ದಿನವೇ, ಸರ್ದಾರ್ ಪಟೇಲ್ ಅವರ ಉಕ್ಕಿನ ಇಚ್ಛಾಶಕ್ತಿಯ ಉಜ್ವಲ ಉದಾಹರಣೆಯನ್ನು ರಾಷ್ಟ್ರವು ನೋಡಿತು, ಭಾರತೀಯ ಸೇನೆಯು ಹೈದರಾಬಾದನ್ನು ಅಸಂಖ್ಯಾತ ದೌರ್ಜನ್ಯಗಳಿಂದ ಮುಕ್ತಗೊಳಿಸಿತು, ಮತ್ತೊಮ್ಮೆ ಭಾರತದ ಹೆಮ್ಮೆ ಮತ್ತು ಘನತೆಯನ್ನು ಪುನಃಸ್ಥಾಪಿಸಿತು: ಪ್ರಧಾನಮಂತ್ರಿ

'ಮಾತೆ ಭಾರತಿ'ಯ ಗೌರವ, ಹೆಮ್ಮೆ ಮತ್ತು ವೈಭವವನ್ನು ಮೀರಿದುದು ಯಾವುದೂ ಇಲ್ಲ: ಪ್ರಧಾನಮಂತ್ರಿ

'ಸ್ವಸ್ಥ ನಾರಿ ಸಶಕ್ತ ಪರಿವಾರ್' ಅಭಿಯಾನವು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸಮರ್ಪಿತವಾಗಿದೆ: ಪ್ರಧಾನಮಂತ್ರಿ

ಬಡವರಿಗೆ ಸೇವೆ ಸಲ್ಲಿಸುವುದು ನನ್ನ ಜೀವನದ ಅತ್ಯುನ್ನತ ಉದ್ದೇಶ: ಪ್ರಧಾನಮಂತ್ರಿ

ಜವಳಿ ಉದ್ಯಮಕ್ಕಾಗಿ 5 ಎಫ್ ದೃಷ್ಟಿಕೋನದ ಬದ್ಧತೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ - ಕೃಷಿಯಿಂದ ನಾರಿಗೆ, ನಾರಿನಿಂದ ಕಾರ್ಖಾನೆಗೆ, ಕಾರ್ಖಾನೆಯಿಂದ ಫ್ಯಾಷನ್‌ಗೆ ಮತ್ತು ಫ್ಯಾಷನ್‌ನಿಂದ ವಿದೇಶಕ್ಕೆ: ಪ್ರಧಾನಮಂತ್ರಿ

ವಿಶ್ವಕರ್ಮ ಸಹೋದರ ಸಹೋದರಿಯರು ಮೇಕ್ ಇನ್ ಇಂಡಿಯಾದ ಹಿಂದಿನ ಪ್ರಮುಖ ಶಕ್ತಿ: ಪ್ರಧಾನಮಂತ್ರಿ

ಹಿಂದೆ ಉಳಿದಿರುವವರು ನಮ್ಮ ಪ್ರಮುಖ ಆದ್ಯತೆ: ಪ್ರಧಾನಮಂತ್ರಿ

Posted On: 17 SEP 2025 2:17PM by PIB Bengaluru

ಮಧ್ಯಪ್ರದೇಶದ ಧಾರ್‌ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಧಾರ್ ಭೋಜಶಾಲಾದ ಪೂಜ್ಯ ಮಾತೆ ಜ್ಞಾನ ದೇವತೆ ವಾಗ್ದೇವಿಯ ಪಾದಗಳಿಗೆ ನಮಸ್ಕರಿಸಿದರು. ಇಂದು ದೈವಿಕ ವಾಸ್ತುಶಿಲ್ಪಿ ಮತ್ತು ಕೌಶಲ್ಯ ಹಾಗು ಸೃಷ್ಟಿಯ ದೇವತೆಯಾದ ಭಗವಾನ್ ವಿಶ್ವಕರ್ಮರ ಜನ್ಮ ದಿನವಾಗಿದೆ ಎಂದು ಹೇಳಿದ ಶ್ರೀ ಮೋದಿ, ಭಗವಾನ್ ವಿಶ್ವಕರ್ಮರಿಗೆ ನಮನ ಸಲ್ಲಿಸಿದರು. ತಮ್ಮ ಕರಕುಶಲತೆ ಮತ್ತು ಸಮರ್ಪಣೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಕೋಟ್ಯಂತರ ಸಹೋದರ ಸಹೋದರಿಯರಿಗೆ ಅವರು ಗೌರವ ಸಲ್ಲಿಸಿದರು.

ಧಾರ್ ಭೂಮಿ ಸದಾ ಶೌರ್ಯವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ ಶ್ರೀ ಮೋದಿ, "ಮಹಾರಾಜ ಭೋಜರ ಶೌರ್ಯವು ರಾಷ್ಟ್ರೀಯ ಹೆಮ್ಮೆಯ ರಕ್ಷಣೆಯಲ್ಲಿ ದೃಢವಾಗಿ ನಿಲ್ಲುವುದನ್ನು ನಮಗೆ ಕಲಿಸುತ್ತದೆ" ಎಂದು ಒತ್ತಿ ಹೇಳಿದರು. ಮಹರ್ಷಿ ದಧೀಚಿಯ ತ್ಯಾಗವು ಮಾನವೀಯತೆಗೆ ಸೇವೆ ಸಲ್ಲಿಸುವ ಸಂಕಲ್ಪವನ್ನು ನಮಗೆ ನೀಡುತ್ತದೆ ಎಂದು ಅವರು ಮುಂದುವರೆದು ಹೇಳಿದರು. ಈ ಪರಂಪರೆಯಿಂದ ಸ್ಫೂರ್ತಿ ಪಡೆದ ಪ್ರಧಾನಮಂತ್ರಿ, ಇಂದು ರಾಷ್ಟ್ರವು ಭಾರತ ಮಾತೆಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದೂ ಹೇಳಿದರು. ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಛಿದ್ರಗೊಳಿಸಿದ್ದನ್ನು ಅವರು ನೆನಪಿಸಿಕೊಂಡರು ಮತ್ತು ಆಪರೇಷನ್ ಸಿಂಧೂರ್ ಮೂಲಕ ನಾವು ಅವರ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದೇವೆ ಎಂದು ದೃಢಪಡಿಸಿದರು. ನಮ್ಮ ಧೈರ್ಯಶಾಲಿ ಸೈನಿಕರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನವನ್ನು ಮಂಡಿಯೂರಿಸಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇತ್ತೀಚಿನ ಘಟನೆಯೊಂದನ್ನು ಉಲ್ಲೇಖಿಸಿ, ನಿನ್ನೆಯಷ್ಟೇ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಅಳುತ್ತಾ ತನ್ನ ಕಠಿಣ ಪರಿಸ್ಥಿತಿಯನ್ನು ಹೇಳುತ್ತಿದ್ದನೆಂಬುದರತ್ತ ಅವರು ಗಮನ ಸೆಳೆದರು. .

"ಇದು ನವ ಭಾರತ, ಯಾರ ಪರಮಾಣು ಬೆದರಿಕೆಗಳಿಗೂ ಹೆದರುವುದಿಲ್ಲ ಮತ್ತು ಮೂಲದ ಮೇಲೆ ನೇರವಾಗಿ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ" ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ಸೆಪ್ಟೆಂಬರ್ 17 ರಂದು ರಾಷ್ಟ್ರವು ಸರ್ದಾರ್ ಪಟೇಲ್ ಅವರ ಉಕ್ಕಿನ ಸಂಕಲ್ಪಕ್ಕೆ ಸಾಕ್ಷಿಯಾದ ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಎತ್ತಿ ತೋರಿಸಿದರು. ಈ ದಿನ, ಭಾರತೀಯ ಸೇನೆಯು ಹೈದರಾಬಾದನ್ನು ಹಲವಾರು ದೌರ್ಜನ್ಯಗಳಿಂದ ಮುಕ್ತಗೊಳಿಸಿತು ಮತ್ತು ಅದನ್ನು ಭಾರತದೊಂದಿಗೆ ಸಂಯೋಜಿಸಿತು. ಈ ಸ್ಮರಣೀಯ ಸಾಧನೆ ಮತ್ತು ಸಶಸ್ತ್ರ ಪಡೆಗಳ ಶೌರ್ಯವನ್ನು ಈಗ ಸರ್ಕಾರ ಔಪಚಾರಿಕವಾಗಿ ಗೌರವಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ದಿನವನ್ನು ಈಗ ಹೈದರಾಬಾದ್ ವಿಮೋಚನಾ ದಿನವೆಂದು ಆಚರಿಸಲಾಗುತ್ತದೆ, ಇದು ಭಾರತದ ಏಕತೆಯನ್ನು ಸಂಕೇತಿಸುತ್ತದೆ. ಹೈದರಾಬಾದ್ ವಿಮೋಚನಾ ದಿನವು ಭಾರತ ಮಾತೆಯ ಗೌರವ, ಹೆಮ್ಮೆ ಮತ್ತು ವೈಭವಕ್ಕಿಂತ ಬೇರಾವುದೂ ದೊಡ್ಡದಲ್ಲ ಎಂಬುದನ್ನು ನೆನಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಜೀವನದ ಪ್ರತಿ ಕ್ಷಣವನ್ನು ರಾಷ್ಟ್ರಕ್ಕೆ ಸಮರ್ಪಿಸಬೇಕು ಎಂದು ಅವರು ದೃಢವಾಗಿ ನುಡಿದರು.

ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವುದಾಗಿ ಪ್ರತಿಜ್ಞೆ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡರು ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, ವಸಾಹತುಶಾಹಿ ಆಳ್ವಿಕೆಯ ಸರಪಳಿಗಳಿಂದ ಮುಕ್ತರಾಗಿ ವೇಗವಾಗಿ ಮುನ್ನಡೆಯುವ ಅಭಿವೃದ್ಧಿ ಹೊಂದಿದ ಭಾರತ ಅವರ ಕನಸಾಗಿತ್ತು ಎಂದೂ ಪ್ರತಿಪಾದಿಸಿದರು. ಈ ಪರಂಪರೆಯಿಂದ ಸ್ಫೂರ್ತಿ ಪಡೆದು, ಇಂದು 140 ಕೋಟಿ ಭಾರತೀಯರು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು. ಈ ಪ್ರಯಾಣದ ನಾಲ್ಕು ಪ್ರಮುಖ ಸ್ತಂಭಗಳಾದ ಭಾರತದ ಮಹಿಳಾ ಶಕ್ತಿ, ಯುವ ಶಕ್ತಿ, ಬಡವರು ಮತ್ತು ರೈತ ಶಕ್ತಿಯನ್ನು ವಿವರಿಸಿದ ಪ್ರಧಾನಮಂತ್ರಿ, ಇಂದಿನ ಕಾರ್ಯಕ್ರಮವು ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಸ್ತಂಭಗಳನ್ನು ಬಲಪಡಿಸಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹೆಚ್ಚಿನ ಉಪಸ್ಥಿತಿಯನ್ನು ಅವರು ಗುರುತಿಸಿದರು ಮತ್ತು ಮಹಿಳಾ ಸಬಲೀಕರಣಕ್ಕೆ ನೀಡಲಾದ ವಿಶೇಷ ಗಮನವನ್ನು ಒತ್ತಿ ಹೇಳಿದರು ಮತ್ತು "ಈ ವೇದಿಕೆಯಿಂದ, 'ಸ್ವಸ್ಥ ನಾರಿ, ಸಶಕ್ತ ಪರಿವಾರ್' ಅಭಿಯಾನವನ್ನು ಪ್ರಾರಂಭಿಸಲಾಗಿದೆ" ಎಂದು ಹೇಳಿದರು.

'ಆದಿ ಸೇವಾ ಪರ್ವ್' ನ ಪ್ರತಿಧ್ವನಿ ಈಗಾಗಲೇ ದೇಶಾದ್ಯಂತ ವಿವಿಧ ಹಂತಗಳಲ್ಲಿ ಕೇಳಿಬರುತ್ತಿದೆ ಎಂಬುದರತ್ತ ಗಮನ ಸೆಳೆದ ಶ್ರೀ ಮೋದಿ, ಇಂದಿನಿಂದ ಅದರ ಮಧ್ಯಪ್ರದೇಶ ಆವೃತ್ತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಅಭಿಯಾನವು ಧಾರ್‌ನಲ್ಲಿರುವವರು ಸೇರಿದಂತೆ ಮಧ್ಯಪ್ರದೇಶದ ಬುಡಕಟ್ಟು ಸಮುದಾಯಗಳನ್ನು ವಿವಿಧ ಸರ್ಕಾರಿ ಯೋಜನೆಗಳೊಂದಿಗೆ ನೇರವಾಗಿ ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದೂ ಪ್ರಧಾನಮಂತ್ರಿ ಒತ್ತಿ ಹೇಳಿದರು.

ವಿಶ್ವಕರ್ಮ ಜಯಂತಿಯಂದು ಭಾರತದ ಅತಿದೊಡ್ಡ ಸಮಗ್ರ ಜವಳಿ ಉದ್ಯಾನವನಕ್ಕೆ ಧಾರ್ ನಲ್ಲಿ ಅಡಿಪಾಯ ಹಾಕುವ ಮೂಲಕ ಪ್ರಮುಖ ಕೈಗಾರಿಕಾ ಉಪಕ್ರಮವನ್ನು ಘೋಷಿಸಿದ ಪ್ರಧಾನಮಂತ್ರಿ, ಈ ಉದ್ಯಾನವನವು ದೇಶದ ಜವಳಿ ಉದ್ಯಮಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದರು. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಮೌಲ್ಯವನ್ನು ಪಡೆಯುತ್ತಾರೆ ಮತ್ತು ಹೆಚ್ಚಿನ ಸಂಖ್ಯೆಯ ಯುವಜನರು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಗಳು ಮತ್ತು ಅಭಿಯಾನಗಳಿಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತದ ನಾರಿ ಶಕ್ತಿಯಾದ ತಾಯಂದಿರು ಮತ್ತು ಸಹೋದರಿಯರು ದೇಶದ ಪ್ರಗತಿಯ ಅಡಿಪಾಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ತಾಯಿ ಆರೋಗ್ಯವಾಗಿದ್ದಾಗ, ಇಡೀ ಮನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಅವಳು ಅನಾರೋಗ್ಯಕ್ಕೆ ಒಳಗಾದರೆ, ಇಡೀ ಕುಟುಂಬ ವ್ಯವಸ್ಥೆಯು ಅಸ್ತವ್ಯಸ್ತಗೊಳ್ಳುತ್ತದೆ ಎಂದು ಹೇಳಿದರು. 'ಸ್ವಸ್ತ್ ನಾರಿ, ಸಶಕ್ತ ಪರಿವಾರ್' ಅಭಿಯಾನದ ನಿರ್ಣಾಯಕ ಮಹತ್ವವನ್ನು ಅವರು ಒತ್ತಿ ಹೇಳಿದರು, ಯಾವುದೇ ಮಹಿಳೆ ಅರಿವು/ಜಾಗೃತಿ ಅಥವಾ ಸಂಪನ್ಮೂಲಗಳ ಕೊರತೆಯಿಂದ ಬಳಲಬಾರದು ಎಂದು ಹೇಳಿದರು. ತಡವಾಗಿ ಪತ್ತೆಹಚ್ಚುವುದರಿಂದ ಅನೇಕ ರೋಗಗಳು ಮೌನವಾಗಿ ಬೆಳೆಯುತ್ತವೆ ಮತ್ತು ತೀವ್ರವಾಗುತ್ತವೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಅಪಾಯವನ್ನುಂಟುಮಾಡುವ ರೋಗಗಳಿಗೆ ತಪಾಸಣೆಗಳನ್ನು ನಡೆಸಲಾಗುವುದು ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಈ ಅಭಿಯಾನದಡಿಯಲ್ಲಿ, ರಕ್ತದೊತ್ತಡ ಮತ್ತು ಮಧುಮೇಹದಿಂದ ರಕ್ತಹೀನತೆ, ಕ್ಷಯ ಮತ್ತು ಕ್ಯಾನ್ಸರ್‌ವರೆಗಿನ ರೋಗ ಪರಿಸ್ಥಿತಿಗಳಿಗೆ ತಪಾಸಣೆಗಳನ್ನು ನಡೆಸಲಾಗುವುದು. ಎಲ್ಲಾ ಪರೀಕ್ಷೆಗಳು ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು, ಸರ್ಕಾರವು ವೆಚ್ಚವನ್ನು ಭರಿಸುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ, ಆಯುಷ್ಮಾನ್ ಕಾರ್ಡ್ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅಭಿಯಾನವು ಇಂದಿನಿಂದ ಅಕ್ಟೋಬರ್ 2 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು. ದೇಶಾದ್ಯಂತ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಮ್ಮ ಆರೋಗ್ಯಕ್ಕಾಗಿ ಸಮಯ ತೆಗೆದುಕೊಳ್ಳಬೇಕು, ಈ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ತಮ್ಮ ಸಮುದಾಯಗಳ ಇತರ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಮಂತ್ರಿ ಒತ್ತಾಯಿಸಿದರು. ಯಾವುದೇ ತಾಯಿ ಹಿಂದೆ ಬೀಳಬಾರದು, ಯಾವುದೇ ಮಗಳು ಹಿಂದೆ ಬೀಳಬಾರದು ಎಂದು ಅವರು ಸಾಮೂಹಿಕ ಸಂಕಲ್ಪ ಕೈಗೊಳ್ಳುವಂತೆ ಕರೆ ನೀಡಿದರು.

ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯವು ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು. ಗರ್ಭಿಣಿಯರು ಮತ್ತು ಹೆಣ್ಣುಮಕ್ಕಳಿಗೆ ಸರಿಯಾದ ಪೋಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಇಂದಿನಿಂದ ಎಂಟನೇ ರಾಷ್ಟ್ರೀಯ ಪೌಷ್ಟಿಕಾಂಶ ಮಾಸದ ಆರಂಭವನ್ನು ಅವರು ಘೋಷಿಸಿದರು. ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ಶ್ರೀ ಮೋದಿ ಮತ್ತಷ್ಟು ಒತ್ತಿ ಹೇಳಿದರು. ಇದನ್ನು ಸಾಧಿಸಲು, ಸರ್ಕಾರವು 2017 ರಲ್ಲಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ಮೊದಲ ಮಗುವಿನ ಜನನದ ನಂತರ ₹5,000 ವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಮತ್ತು ಎರಡನೇ ಹೆಣ್ಣುಮಗುವಿನ ಜನನದ ನಂತರ ₹6,000 ವನ್ನು ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ, 4.5 ಕೋಟಿ ಗರ್ಭಿಣಿ ತಾಯಂದಿರು ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ, ₹19,000 ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಈ ದಿನವೇ, 15 ಲಕ್ಷಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಒಂದೇ ಕ್ಲಿಕ್‌ನಲ್ಲಿ ಸಹಾಯವನ್ನು ಕಳುಹಿಸಲಾಗಿದೆ, ₹450 ಕೋಟಿಗೂ ಹೆಚ್ಚು ಮೊತ್ತವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು.

ಬುಡಕಟ್ಟು ಪ್ರದೇಶಗಳಲ್ಲಿ ಕುಡಗೋಲು (ಸಿಕಲ್) ಕಣ ಅನೀಮಿಯಾ (ರಕ್ತಕಣಗಳು ಕುಡಗೋಲು ಆಕಾರ ತಳೆಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆ)ಗಂಭೀರ ಸವಾಲನ್ನು ಎದುರಿಸಲು ಮಧ್ಯಪ್ರದೇಶದ ಮಣ್ಣಿನಿಂದ ಜಾರಿಯಾದ ಮತ್ತೊಂದು ಪ್ರಮುಖ ಆರೋಗ್ಯ ಉಪಕ್ರಮವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ, ಬುಡಕಟ್ಟು ಸಮುದಾಯಗಳನ್ನು ಕಾಯಿಲೆಯಿಂದ ರಕ್ಷಿಸಲು ಸರ್ಕಾರವು ರಾಷ್ಟ್ರೀಯ ಮಿಷನ್ ನಡೆಸುತ್ತಿದೆ ಎಂದು ಹೇಳಿದರು. ಈ ಮಿಷನ್ ಅನ್ನು 2023 ರಲ್ಲಿ ಮಧ್ಯಪ್ರದೇಶದ ಶಹದೋಲ್‌ನಿಂದ ಪ್ರಾರಂಭಿಸಲಾಯಿತು, ಅಲ್ಲಿ ಮೊದಲ ಕುಡಗೋಲು ಕಣ ಸ್ಕ್ರೀನಿಂಗ್ ಕಾರ್ಡ್ ನೀಡಲಾಯಿತು. "ಇಂದು, ಮಧ್ಯಪ್ರದೇಶದಲ್ಲಿ ಒಂದು ಕೋಟಿಯ ಸ್ಕ್ರೀನಿಂಗ್ ಕಾರ್ಡ್ ವಿತರಿಸಲಾಗಿದೆ ಮತ್ತು ಅಭಿಯಾನದ ಅಡಿಯಲ್ಲಿ, ದೇಶಾದ್ಯಂತ ಐದು ಕೋಟಿಗೂ ಹೆಚ್ಚು ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಕುಡಗೋಲು ಕಣ ಸ್ಕ್ರೀನಿಂಗ್ ಬುಡಕಟ್ಟು ಸಮುದಾಯಗಳ ಲಕ್ಷಾಂತರ ಜನರ ಜೀವಗಳನ್ನು ರಕ್ಷಿಸಲು ಸಹಾಯ ಮಾಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕುಡಗೋಲು ಕಣ ರಕ್ತಹೀನತೆಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಬುಡಕಟ್ಟು ತಾಯಂದಿರು ಮತ್ತು ಸಹೋದರಿಯರಿಗೆ ಅವರು ವಿಶೇಷ ಮನವಿ ಮಾಡಿದರು.

ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಕಷ್ಟಗಳನ್ನು ಕಡಿಮೆ ಮಾಡುವುದು ತಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕೋಟ್ಯಂತರ ಶೌಚಾಲಯಗಳ ನಿರ್ಮಾಣ, ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವುದು ಮತ್ತು ಮನೆಗಳಿಗೆ ನೀರು ಸರಬರಾಜು ಖಚಿತಪಡಿಸಿಕೊಳ್ಳುವ ಜಲ ಜೀವನ್ ಮಿಷನ್‌ನಂತಹ ಉಪಕ್ರಮಗಳು ಮಹಿಳೆಯರಿಗೆ ದೈನಂದಿನ ಸವಾಲುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ಎತ್ತಿ ತೋರಿಸಿದರು. ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ನೀಡುವ ಆಯುಷ್ಮಾನ್ ಭಾರತ್ ಯೋಜನೆಯು ಮಹಿಳೆಯರ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಉಲ್ಲೇಖಿಸಿ, ಉಚಿತ ಪಡಿತರ ಯೋಜನೆಯು ಕೋವಿಡ್-19 ಸಾಂಕ್ರಾಮಿಕ ರೋಗದ ಕಷ್ಟದ ಸಮಯದಲ್ಲಿಯೂ ಸಹ ಬಡ ತಾಯಂದಿರ ಅಡುಗೆಮನೆಯ ಬೆಂಕಿಯನ್ನು ನಂದಿಸಲಿಲ್ಲ ಎಂಬುದರತ್ತ ಅವರು ಬೆಟ್ಟು ಮಾಡಿದರು. ಯೋಜನೆಯಡಿಯಲ್ಲಿ ಉಚಿತ ಧಾನ್ಯ ವಿತರಣೆ ಮುಂದುವರೆದಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಒದಗಿಸಲಾದ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ ಎಂದೂ ಪ್ರಧಾನಮಂತ್ರಿ ಹೇಳಿದರು.

ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವತ್ತ ದೃಢವಾದ ಹೆಜ್ಜೆಗಳನ್ನಿಟ್ಟಿದೆ ಮತ್ತು ಆ ನಿಟ್ಟಿನಲ್ಲಿ ಗಮನಹರಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಮುದ್ರಾ ಯೋಜನೆಯ ಮೂಲಕ ಕೋಟ್ಯಂತರ ಮಹಿಳೆಯರು ಸಾಲ ಪಡೆಯುತ್ತಿದ್ದಾರೆ ಎಂದು ಹೇಳಿದರು. ಮೂರು ಕೋಟಿ ಮಹಿಳೆಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಪರಿವರ್ತಿಸಲು ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು, ಸುಮಾರು ಎರಡು ಕೋಟಿ ಜನರು ಈಗಾಗಲೇ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಬ್ಯಾಂಕ್ ಸಖಿಗಳು ಮತ್ತು ಡ್ರೋನ್ ದೀದಿಗಳಾಗಿ ತರಬೇತಿ ಪಡೆಯುವ ಮೂಲಕ ಮಹಿಳೆಯರನ್ನು ಗ್ರಾಮೀಣ ಆರ್ಥಿಕತೆಯ ಹೃದಯಭಾಗದಲ್ಲಿ ಇರಿಸಲಾಗುತ್ತಿದೆ. ಸ್ವಸಹಾಯ ಗುಂಪುಗಳ ಮೂಲಕ, ಮಹಿಳೆಯರು ಪರಿವರ್ತನೆಯ ಹೊಸ ಅಲೆಯನ್ನು ಹರಡುತ್ತಿದ್ದಾರೆ ಎಂದೂ ಪ್ರಧಾನಮಂತ್ರಿ ಹೇಳಿದರು.

ಕಳೆದ 11 ವರ್ಷಗಳಲ್ಲಿ, ಬಡವರ ಕಲ್ಯಾಣ ಮತ್ತು ಅವರ ಜೀವನವನ್ನು ಸುಧಾರಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬಡವರು ಪ್ರಗತಿ ಹೊಂದಿದಾಗ ಮಾತ್ರ ರಾಷ್ಟ್ರವು ಪ್ರಗತಿ ಹೊಂದುತ್ತದೆ ಎಂಬ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. ಬಡವರಿಗೆ ಮಾಡಿದ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದರತ್ತ ಅವರು ಗಮನ ಸೆಳೆದರು; ಸ್ವಲ್ಪ ಬೆಂಬಲವಿದ್ದರೂ ಸಹ, ಅವರು ಅಪಾರ ಸವಾಲುಗಳನ್ನು ಜಯಿಸುವ ಧೈರ್ಯವನ್ನು ಪ್ರದರ್ಶಿಸುತ್ತಾರೆ. ಬಡವರ ಭಾವನೆಗಳು ಮತ್ತು ಹೋರಾಟಗಳ ಮೂಲಕ ತಾನು ವೈಯಕ್ತಿಕವಾಗಿ ಬದುಕಿದ್ದೇನೆ, ಅವರ ನೋವನ್ನು ತಮ್ಮದಾಗಿಸಿಕೊಂಡಿದ್ದೇನೆ ಎಂದು ಶ್ರೀ ಮೋದಿ ಹಂಚಿಕೊಂಡರು. ಬಡವರಿಗೆ ಸೇವೆಯೇ ತಮ್ಮ ಜೀವನದ ಶ್ರೇಷ್ಠ ಉದ್ದೇಶ ಎಂದು ಅವರು ಪುನರುಚ್ಚರಿಸಿದರು. ಅದರಂತೆ, ಸರ್ಕಾರವು ಬಡವರನ್ನು ಕೇಂದ್ರದಲ್ಲಿಟ್ಟುಕೊಂಡು ಯೋಜನೆಗಳನ್ನು ವಿನ್ಯಾಸಗೊಳಿಸುವುದನ್ನು ಮತ್ತು ಕಾರ್ಯಗತಗೊಳಿಸುವುದನ್ನು ಮುಂದುವರೆಸಿದೆ ಎಂದರು.

ಸರ್ಕಾರದ ನೀತಿಗಳ ಪರಿಣಾಮವು ಈಗ ಜಗತ್ತಿಗೆ ಗೋಚರಿಸುತ್ತಿದೆ, ಭಾರತದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಈ ಪರಿವರ್ತನೆಯು ಸಮಾಜದಾದ್ಯಂತ ಹೊಸ ಆತ್ಮವಿಶ್ವಾಸವನ್ನು ತುಂಬಿದೆ ಎಂದೂ ಹೇಳಿದರು. ಈ ಪ್ರಯತ್ನಗಳು ಕೇವಲ ಯೋಜನೆಗಳಲ್ಲ - ಅವು ಬಡ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಜೀವನದಲ್ಲಿ ಬದಲಾವಣೆಯ ಖಾತರಿಗಳಾಗಿವೆ ಎಂದು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. ಬಡವರ ಮುಖದಲ್ಲಿ ನಗು ತರುವುದು ಮತ್ತು ಮಹಿಳೆಯರ ಘನತೆಯನ್ನು ಕಾಪಾಡುವುದು ತಮ್ಮ ಅತ್ಯುನ್ನತ ಆದ್ಯತೆ ಮತ್ತು ಅಚಲ ಬದ್ಧತೆ ಎಂದು ಅವರು ದೃಢಪಡಿಸಿದರು.

ಮಧ್ಯಪ್ರದೇಶದಲ್ಲಿ ಮಹೇಶ್ವರಿ ಜವಳಿಗಳ ಶ್ರೀಮಂತ ಸಂಪ್ರದಾಯವನ್ನು ಎತ್ತಿ ತೋರಿಸುತ್ತಾ, ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರು ಮಹೇಶ್ವರಿ ಸೀರೆಗೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಗಮನಿಸಿದ ಪ್ರಧಾನಮಂತ್ರಿ, ಇತ್ತೀಚೆಗೆ ನಡೆದ ಅವರ 300 ನೇ ಜನ್ಮ ದಿನಾಚರಣೆಯನ್ನು ನೆನಪಿಸಿಕೊಂಡರು ಮತ್ತು ಅವರ ಪರಂಪರೆಯನ್ನು ಈಗ ಧಾರ್‌ನಲ್ಲಿರುವ ಪಿಎಂ ಮಿತ್ರ ಪಾರ್ಕ್ ಮೂಲಕ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು. ಈ ಉದ್ಯಾನವನವು ಹತ್ತಿ ಮತ್ತು ರೇಷ್ಮೆಯಂತಹ ಅಗತ್ಯ ನೇಯ್ಗೆ ವಸ್ತುಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ, ಗುಣಮಟ್ಟದ ಪರಿಶೀಲನೆಗಳನ್ನು ಸರಳಗೊಳಿಸುತ್ತದೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಮೋದಿ ವಿವರಿಸಿದರು. ನೂಲುವ, ವಿನ್ಯಾಸ, ಸಂಸ್ಕರಣೆ ಮತ್ತು ರಫ್ತು ಎಲ್ಲವೂ ಒಂದೇ ಸೌಲಭ್ಯದೊಳಗೆ ನಡೆಯುವುದರಿಂದ ಇಡೀ ಜವಳಿ ಮೌಲ್ಯ ಸರಪಳಿಯು ಒಂದೇ ಸ್ಥಳದಲ್ಲಿ ಲಭ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಉತ್ಪಾದನೆಯಿಂದ ಜಾಗತಿಕ ಮಾರುಕಟ್ಟೆಗಳಿಗೆ ವೇಗವಾದ ಮತ್ತು ಹೆಚ್ಚು ಸುಗಮ ಪ್ರಯಾಣವನ್ನು ಖಾತ್ರಿಪಡಿಸುವ ಜವಳಿ ಉದ್ಯಮಕ್ಕಾಗಿ - ಫಾರ್ಮ್ ಟು ಫೈಬರ್, ಫೈಬರ್ ಟು ಫ್ಯಾಕ್ಟರಿ, ಫ್ಯಾಕ್ಟರಿ ಟು ಫ್ಯಾಷನ್ ಮತ್ತು ಫ್ಯಾಷನ್ ಟು ಫಾರಿನ್ – 5ಎಫ್(F) ಚಿಂತನೆಯ ದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಧಾರ್‌ನಲ್ಲಿರುವ ಪಿಎಂ ಮಿತ್ರ ಪಾರ್ಕ್‌ಗಾಗಿ ಸುಮಾರು 1,300 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿದ್ದು, ಈಗಾಗಲೇ 80 ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾರ್ಖಾನೆ ನಿರ್ಮಾಣ ಏಕಕಾಲದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು. ಈ ಪಾರ್ಕ್ ಮೂರು ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಪಾರ್ಕ್ ಲಾಜಿಸ್ಟಿಕ್ಸ್ ಮತ್ತು ಉತ್ಪಾದನಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಭಾರತೀಯ ಉತ್ಪನ್ನಗಳನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಉಪಕ್ರಮಕ್ಕಾಗಿ ಅವರು ಮಧ್ಯಪ್ರದೇಶದ ಜನರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ದೇಶಾದ್ಯಂತ ಆರು ಪಿಎಂ ಮಿತ್ರ ಪಾರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ ಎಂದು ತಿಳಿಸಿದರು.

ವಿಶ್ವಕರ್ಮ ಪೂಜೆಯ ರಾಷ್ಟ್ರವ್ಯಾಪಿ ಆಚರಣೆಯನ್ನು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಸಂಭ್ರಮಿಸಲು/ಆಚರಿಸಲು ಇದು ಒಂದು ಸಂದರ್ಭ ಎಂದು ಬಣ್ಣಿಸಿದರು. ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಕಲ್ಲುಕುಟಿಗರು, ಹಿತ್ತಾಳೆ, ತಾಮ್ರ ಮತ್ತು ಇತರ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಕುಶಲಕರ್ಮಿಗಳು ಸೇರಿದಂತೆ ದೇಶಾದ್ಯಂತದ ವಿಶ್ವಕರ್ಮ ಸಹೋದರ ಸಹೋದರಿಯರಿಗೆ ಅವರು ವಿಶೇಷ ಶುಭಾಶಯಗಳನ್ನು ಸಲ್ಲಿಸಿದರು. ಮೇಕ್ ಇನ್ ಇಂಡಿಯಾ ಉಪಕ್ರಮದ ಹಿಂದಿನ ಪ್ರೇರಕ ಶಕ್ತಿಯಾಗಿ ಅವರ ಪ್ರಮುಖ ಪಾತ್ರವನ್ನು ಪ್ರಧಾನಮಂತ್ರಿ ಗುರುತಿಸಿದರು, ಅವರ ಉತ್ಪನ್ನಗಳು ಮತ್ತು ಕೌಶಲ್ಯಗಳು ಹಳ್ಳಿಗಳು ಮತ್ತು ನಗರಗಳ ದೈನಂದಿನ ಅಗತ್ಯಗಳನ್ನು ಪೂರೈಸುತ್ತವೆ ಎಂದು ಗಮನಿಸಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಅಲ್ಪಾವಧಿಯಲ್ಲಿಯೇ 30 ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಕರ ಕುಶಲಕರ್ಮಿಗಳಿಗೆ ಬೆಂಬಲ ನೀಡಿದೆ ಎಂದು ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಈ ಯೋಜನೆಯ ಮೂಲಕ ಫಲಾನುಭವಿಗಳು ಕೌಶಲ್ಯ ತರಬೇತಿ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಆಧುನಿಕ ಪರಿಕರಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಆರು ಲಕ್ಷಕ್ಕೂ ಹೆಚ್ಚು ವಿಶ್ವಕರ್ಮ ಪಾಲುದಾರರಿಗೆ ಹೊಸ ಉಪಕರಣಗಳನ್ನು ಒದಗಿಸಲಾಗಿದೆ ಮತ್ತು ಅವರ ಕೆಲಸವನ್ನು ಬೆಂಬಲಿಸಲು ₹4,000 ಕೋಟಿಗೂ ಹೆಚ್ಚಿನ ಸಾಲಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಸಮಾಜದ ವರ್ಗಗಳಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಬಡ ವಿಶ್ವಕರ್ಮ ಸಹೋದರ ಸಹೋದರಿಯರು ಕೌಶಲ್ಯಗಳನ್ನು ಹೊಂದಿದ್ದರು, ಆದರೆ ಹಿಂದಿನ ಸರ್ಕಾರಗಳು ಅವರ ಪ್ರತಿಭೆಯನ್ನು ಮುಂದುವರಿಸಲು ಅಥವಾ ಅವರ ಜೀವನವನ್ನು ಸುಧಾರಿಸಲು ಯಾವುದೇ ಯೋಜನೆಗಳನ್ನು ಹೊಂದಿರಲಿಲ್ಲ ಎಂದು ಅವರು ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರವು ಅವರ ಕರಕುಶಲತೆಯನ್ನು ಪ್ರಗತಿಯಾಗಿ ಪರಿವರ್ತಿಸಲು ಮಾರ್ಗಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀ ಮೋದಿ, ಹಿಂದುಳಿದವರು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದಾರೆ ಎಂದು ದೃಢಪಡಿಸಿದರು.

"ರಾಷ್ಟ್ರ ಮೊದಲು" ಎಂಬ ಮನೋಭಾವದೊಂದಿಗೆ ತಮ್ಮ ಇಡೀ ಜೀವನವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪೂಜ್ಯ ಕುಶಭಾವು ಠಾಕ್ರೆ ಅವರ ಜನ್ಮಸ್ಥಳ ಧಾರ್ ಎಂದು ಪ್ರಧಾನಮಂತ್ರಿ ಗುರುತಿಸಿದರು. ಕುಶಭಾವು ಠಾಕ್ರೆ ಅವರಿಗೆ ಗೌರವಯುತ ನಮನ ಸಲ್ಲಿಸಿದರು ಮತ್ತು ರಾಷ್ಟ್ರವನ್ನು ಮೊದಲು ಎಂದು ಪರಿಗಣಿಸುವ ಮನೋಭಾವವು ಭಾರತವನ್ನು ಹೊಸ ಎತ್ತರಕ್ಕೆ ಏರಲು ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಹಬ್ಬದ ಋತುವು ಸ್ವದೇಶಿಯ ಮಂತ್ರವನ್ನು ಪುನರುಚ್ಚರಿಸುವ ಸಮಯ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ನಾಗರಿಕರು ತಾವು ಖರೀದಿಸುವ ಅಥವಾ ಮಾರಾಟ ಮಾಡುವ ಯಾವುದೇ ವಸ್ತುವನ್ನು ಭಾರತದಲ್ಲಿಯೇ ತಯಾರಿಸಬೇಕೆಂದು ಅವರು ಒತ್ತಾಯಿಸಿದರು. ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿಯವರು ಸ್ವದೇಶಿಯನ್ನು ಒಂದು ಸಾಧನವಾಗಿ ಬಳಸಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಅದು ಈಗ ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಬೇಕು ಎಂದು ಹೇಳಿದರು. ಜನರು ಸ್ವದೇಶಿ ಉತ್ಪನ್ನಗಳ ಬಗ್ಗೆ ಹೆಮ್ಮೆ ಪಡುವಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು. ಸಣ್ಣ ವಸ್ತುಗಳು, ಮಕ್ಕಳ ಆಟಿಕೆಗಳು, ದೀಪಾವಳಿ ವಿಗ್ರಹಗಳು, ಗೃಹಾಲಂಕಾರ ಅಥವಾ ಮೊಬೈಲ್‌ಗಳು, ಟಿವಿಗಳು ಮತ್ತು ರೆಫ್ರಿಜರೇಟರ್‌ಗಳಂತಹ ದೊಡ್ಡ ಖರೀದಿಗಳಲ್ಲಿ ಭಾರತೀಯ ನಿರ್ಮಿತ ವಸ್ತುಗಳನ್ನು ಆಯ್ಕೆ ಮಾಡಲು ಶ್ರೀ ಮೋದಿ ನಾಗರಿಕರನ್ನು ಪ್ರೋತ್ಸಾಹಿಸಿದರು. ಸ್ವದೇಶಿ ಖರೀದಿಸುವುದರಿಂದ ದೇಶದೊಳಗೆ ಹಣ ಉಳಿಯುತ್ತದೆ, ಬಂಡವಾಳದ ಹೊರಹರಿವನ್ನು ತಡೆಯುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಹಣವು ರಸ್ತೆಗಳು, ಹಳ್ಳಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಬಡವರನ್ನು ತಲುಪುವ ಕಲ್ಯಾಣ ಯೋಜನೆಗಳನ್ನು ಬೆಂಬಲಿಸುತ್ತದೆ ಎಂದು ಅವರು ಗಮನಿಸಿದರು.

ದೇಶೀಯವಾಗಿ ಅಗತ್ಯ ವಸ್ತುಗಳನ್ನು ತಯಾರಿಸಿದಾಗ, ಅವು ನಾಗರಿಕರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ನವರಾತ್ರಿಯ ಆರಂಭದೊಂದಿಗೆ ಸೆಪ್ಟೆಂಬರ್ 22 ರಿಂದ ಇಳಿಕೆಯಾದ ಜಿಎಸ್‌ಟಿ ದರಗಳು ಜಾರಿಗೆ ಬರಲಿದ್ದು, ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳನ್ನು ಖರೀದಿಸಬೇಕು ಮತ್ತು ಪರಿಷ್ಕೃತ ದರಗಳಿಂದ ಪ್ರಯೋಜನ ಪಡೆಯಬೇಕು ಎಂದು ಅವರು ಒತ್ತಾಯಿಸಿದರು. "ಹೆಮ್ಮೆಯಿಂದ ಹೇಳಿ: ಇದು ಸ್ವದೇಶಿ" ಎಂಬ ಮಂತ್ರವನ್ನು ನೆನಪಿಸಿಕೊಳ್ಳಲು ಮತ್ತು ಪುನರಾವರ್ತಿಸಲು ಅವರು ಕರೆ ನೀಡಿ ತಮ್ಮ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್, ಕೇಂದ್ರ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಆರೋಗ್ಯ, ಪೋಷಣೆ, ಫಿಟ್ನೆಸ್ ಮತ್ತು ಸ್ವಸ್ಥ ಹಾಗು ಸಶಕ್ತ ಭಾರತಕ್ಕೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಿಯವರು 'ಸ್ವಸ್ಥ ನಾರಿ ಸಶಕ್ತ ಪರಿವಾರ್' ಮತ್ತು '8ನೇ ರಾಷ್ಟ್ರೀಯ ಪೋಷಣೆ ಮಾಹ್' ಅಭಿಯಾನಗಳನ್ನು ಪ್ರಾರಂಭಿಸಿದರು. ಈ ಅಭಿಯಾನವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಆಯುಷ್ಮಾನ್ ಆರೋಗ್ಯ ಮಂದಿರಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHC ಗಳು), ಜಿಲ್ಲಾ ಆಸ್ಪತ್ರೆಗಳು ಮತ್ತು ಇತರ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು, ಇದು ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಇದುವರೆಗಿನ ಅತಿದೊಡ್ಡ ಆರೋಗ್ಯ ಸೌಲಭ್ಯವಾಗಿದೆ. ದೇಶಾದ್ಯಂತ ಎಲ್ಲಾ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ದೈನಂದಿನ ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು.

ರಾಷ್ಟ್ರವ್ಯಾಪಿ ತೀವ್ರತೆರನಾದ ಅಭಿಯಾನವು ಸಮುದಾಯ ಮಟ್ಟದಲ್ಲಿ ಮಹಿಳಾ ಕೇಂದ್ರಿತ ರೋಗ ತಡೆಗಟ್ಟುವಿಕೆ, ಪ್ರಚಾರ ಮತ್ತು ಗುಣಪಡಿಸುವ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ. ಇದು ಸಾಂಕ್ರಾಮಿಕವಲ್ಲದ ರೋಗಗಳು, ರಕ್ತಹೀನತೆ, ಕ್ಷಯ ಮತ್ತು ಕುಡಗೋಲು (ಕಾಂಡ) ಕೋಶ ಕಾಯಿಲೆಗಳ ತಪಾಸಣೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಸಂಪರ್ಕಗಳನ್ನು ಬಲಪಡಿಸುತ್ತದೆ, ಜೊತೆಗೆ ಪ್ರಸವಪೂರ್ವ ಆರೈಕೆ, ರೋಗನಿರೋಧಕ ಶಕ್ತಿ, ಪೋಷಣೆ, ಮುಟ್ಟಿನ ನೈರ್ಮಲ್ಯ, ಜೀವನಶೈಲಿ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಚಟುವಟಿಕೆಗಳ ಮೂಲಕ ತಾಯಿ, ಮಗು ಮತ್ತು ಹದಿಹರೆಯದವರ ಆರೋಗ್ಯವನ್ನು ಉತ್ತೇಜಿಸುತ್ತದೆ. ಸ್ತ್ರೀರೋಗ ಚಿಕಿತ್ಸಾ ಶಾಸ್ತ್ರ, ಮಕ್ಕಳ ಚಿಕಿತ್ಸಾಲಯ, ಕಣ್ಣು, ಇಎನ್‌ಟಿ, ದಂತ, ಚರ್ಮರೋಗ ಮತ್ತು ಮನೋವೈದ್ಯಶಾಸ್ತ್ರ ಸೇರಿದಂತೆ ತಜ್ಞ ಸೇವೆಗಳನ್ನು ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ಕೇಂದ್ರ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ವ್ಯವಸ್ಥೆಗೊಳಿಸಲಾಗುವುದು.

ಅಭಿಯಾನದಡಿಯಲ್ಲಿ ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಸಹ ಆಯೋಜಿಸಲಾಗುವುದು. ದಾನಿಗಳ ನೋಂದಣಿಯನ್ನು ಇ-ರಕ್ತಕೋಶ ಪೋರ್ಟಲ್‌ನಲ್ಲಿ ಮಾಡಲಾಗುತ್ತದೆ ಮತ್ತು ಪ್ರತಿಜ್ಞೆ ಅಭಿಯಾನಗಳನ್ನು MyGov ಮೂಲಕ ನಡೆಸಲಾಗುತ್ತದೆ. ಫಲಾನುಭವಿಗಳನ್ನು PM-JAY, ಆಯುಷ್ಮಾನ್ ವಯ ವಂದನ ಮತ್ತು ಅಭಾ (ABHA) ಅಡಿಯಲ್ಲಿ ನೋಂದಾಯಿಸಲಾಗುತ್ತದೆ. ಕಾರ್ಡ್ ಪರಿಶೀಲನೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಆರೋಗ್ಯ ಶಿಬಿರಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗುತ್ತದೆ. ಮಹಿಳೆಯರು ಮತ್ತು ಕುಟುಂಬಗಳಿಗೆ ಸಮಗ್ರ ಆರೋಗ್ಯ ಮತ್ತು ಕ್ಷೇಮ ಪದ್ಧತಿಗಳನ್ನು ಉತ್ತೇಜಿಸಲು ಯೋಗ ಅವಧಿಗಳು, ಆಯುರ್ವೇದ ಸಮಾಲೋಚನೆಗಳು ಮತ್ತು ಇತರ ಆಯುಷ್ ಸೇವೆಗಳನ್ನು ಆಯೋಜಿಸಲಾಗುತ್ತದೆ. ಬೊಜ್ಜು ತಡೆಗಟ್ಟುವಿಕೆ, ಸುಧಾರಿತ ಪೋಷಣೆ ಮತ್ತು ಸ್ವಯಂಪ್ರೇರಿತ ರಕ್ತದಾನದ ಮೇಲೆ ವಿಶೇಷ ಒತ್ತು ನೀಡುವ ಮೂಲಕ ಆರೋಗ್ಯಕರ ಜೀವನಶೈಲಿ ಪದ್ಧತಿಗಳ ಕಡೆಗೆ ಸಮುದಾಯಗಳನ್ನು ಸಜ್ಜುಗೊಳಿಸುವ ಅಭಿಯಾನವೂ ಸಹ ಇರುತ್ತದೆ. ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ, ಸಮಾಲೋಚನೆ ಮತ್ತು ಆರೈಕೆಯನ್ನು ಇಡೀ ಸಮಾಜದ ವಿಧಾನದಲ್ಲಿ ಬೆಂಬಲಿಸಲು ಮೀಸಲಾದ ವೇದಿಕೆಯಲ್ಲಿ (www.nikshay.in) ನಿಕ್ಷಯ್ ಮಿತ್ರರಾಗಿ ನೋಂದಾಯಿಸಿಕೊಳ್ಳಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.

ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಡಿಯಲ್ಲಿ ಹಣವನ್ನು ಒಂದೇ ಕ್ಲಿಕ್‌ನಲ್ಲಿ ದೇಶಾದ್ಯಂತ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದರು. ದೇಶದ ಸುಮಾರು ಹತ್ತು ಲಕ್ಷ ಮಹಿಳೆಯರು ಇದರಿಂದ ಪ್ರಯೋಜನ ಪಡೆಯುತ್ತಾರೆ.

ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಮಂತ್ರಿ ಸುಮನ್ ಸಖಿ ಚಾಟ್‌ಬಾಟ್ ಅನ್ನು ಉದ್ಘಾಟಿಸಿದರು. ಈ ಚಾಟ್‌ಬಾಟ್ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಗರ್ಭಿಣಿಯರಿಗೆ ಸಮಯೋಚಿತ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ, ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಕುಡಗೋಲು ಕೋಶ ರಕ್ತಹೀನತೆಯ ವಿರುದ್ಧ ದೇಶದ ಸಾಮೂಹಿಕ ಹೋರಾಟವನ್ನು ಮುಂದುವರೆಸುತ್ತಾ, ಪ್ರಧಾನಮಂತ್ರಿ ರಾಜ್ಯಕ್ಕಾಗಿ ಒಂದು ಕೋಟಿಯ ಕುಡಗೋಲು ಕೋಶ ತಪಾಸಣೆ ಮತ್ತು ಸಮಾಲೋಚನೆ ಕಾರ್ಡ್ ಅನ್ನು ವಿತರಿಸಿದರು.

ಆದಿ ಕರ್ಮಯೋಗಿ ಅಭಿಯಾನದ ಭಾಗವಾಗಿ, ಪ್ರಧಾನಮಂತ್ರಿ ಮಧ್ಯಪ್ರದೇಶಕ್ಕಾಗಿ 'ಆದಿ ಸೇವಾ ಪರ್ವ್' ಅನ್ನು ಪ್ರಾರಂಭಿಸಿದರು, ಇದು ಬುಡಕಟ್ಟು ಹೆಮ್ಮೆ ಮತ್ತು ರಾಷ್ಟ್ರ ನಿರ್ಮಾಣದ ಮನೋಭಾವದ ಸಂಗಮವನ್ನು ಸಂಕೇತಿಸುತ್ತದೆ. ಈ ಉಪಕ್ರಮವು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಪೋಷಣೆ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ವರ್ಧನೆ, ನೈರ್ಮಲ್ಯ, ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುವ ಸೇವಾ-ಆಧಾರಿತ ಚಟುವಟಿಕೆಗಳ ಸರಣಿಯನ್ನು ಒಳಗೊಂಡಿರುತ್ತದೆ. ಪ್ರತಿ ಹಳ್ಳಿಗೆ ದೀರ್ಘಾವಧಿಯ ಅಭಿವೃದ್ಧಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಬುಡಕಟ್ಟು ಗ್ರಾಮ ಕ್ರಿಯಾ ಯೋಜನೆ ಮತ್ತು ಬುಡಕಟ್ಟು ಗ್ರಾಮ ಮುನ್ನೋಟ/ ದೃಷ್ಟಿ 2030 ರ ಮೇಲೆ ವಿಶೇಷ ಒತ್ತು ನೀಡಲಾಗುವುದು.

ತಮ್ಮ 5 ಎಫ್(F) ಚಿಂತನಾ ದೃಷ್ಟಿಕೋನ - ​​ಫಾರ್ಮ್ ಟು ಫೈಬರ್, ಫೈಬರ್ ಟು ಫ್ಯಾಕ್ಟರಿ, ಫ್ಯಾಕ್ಟರಿ ಟು ಫ್ಯಾಷನ್ ಮತ್ತು ಫ್ಯಾಷನ್ ಟು ಫಾರಿನ್ - ಗೆ ಅನುಗುಣವಾಗಿ, ಪ್ರಧಾನಿಯವರು ಧಾರ್‌ನಲ್ಲಿ ಪಿಎಂ ಮಿತ್ರ ಪಾರ್ಕ್ ಉದ್ಘಾಟಿಸಿದರು. 2,150 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಉದ್ಯಾನವನವು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ, ಆಧುನಿಕ ರಸ್ತೆಗಳು ಸೇರಿದಂತೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಇದು ಆದರ್ಶ ಕೈಗಾರಿಕಾ ಪಟ್ಟಣವಾಗಿದೆ. ಇದು ರೈತರ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ಒದಗಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಪ್ರದೇಶದ ಹತ್ತಿ ಬೆಳೆಗಾರರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ.

ವಿವಿಧ ಜವಳಿ ಕಂಪನಿಗಳು 23,140 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಸಲ್ಲಿಸಿವೆ, ಇದು ಹೊಸ ಕೈಗಾರಿಕೆಗಳು ಮತ್ತು ದೊಡ್ಡ ಪ್ರಮಾಣದ ಉದ್ಯೋಗಗಳಿಗೆ ದಾರಿ ಮಾಡಿಕೊಡುತ್ತದೆ. ಇದು ಸುಮಾರು 3 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಹಾಗು ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಪರಿಸರ ಸಂರಕ್ಷಣೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಿಯವರು ರಾಜ್ಯದ ಏಕ್ ಬಾಗಿಯಾ ಮಾ ಕೆ ನಾಮ್ ಉಪಕ್ರಮದಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪಿನ ಫಲಾನುಭವಿಗೆ ಸಸಿಯನ್ನು ಉಡುಗೊರೆಯಾಗಿ ನೀಡಿದರು. ಮಧ್ಯಪ್ರದೇಶದಲ್ಲಿ 10,000 ಕ್ಕೂ ಹೆಚ್ಚು ಮಹಿಳೆಯರು 'ಮಾ ಕಿ ಬಾಗಿಯಾ'ವನ್ನು ಅಭಿವೃದ್ಧಿಪಡಿಸಲಿದ್ದಾರೆ. ಸಸ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಗುಂಪುಗಳಿಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ.

 

 

****


(Release ID: 2167778) Visitor Counter : 2