ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ 'ಚಲೋ ಜೀತೆ ಹೈ' ದೇಶಾದ್ಯಂತ ವಿಶೇಷವಾಗಿ ಮರು ಬಿಡುಗಡೆಗೆ ಸಿದ್ಧ
ರಾಷ್ಟ್ರೀಯ ಪ್ರಶಸ್ತಿ ವಿಜೇತ 'ಚಲೋ ಜೀತೆ ಹೈ' ಚಿತ್ರದ ಪ್ರದರ್ಶನಗಳ ನಂತರ, ಪ್ರಧಾನಮಂತ್ರಿ ಮೋದಿ ಅವರ ಜನ್ಮದಿನದಂದು ಲಕ್ಷಾಂತರ 'ಮೌನ ವೀರರಿಗೆ' ಸನ್ಮಾನ
ಯುವ ಪೀಳಿಗೆಗೆ ಪ್ರೇರಣೆ ನೀಡಲು, ಪ್ರಧಾನಮಂತ್ರಿ ಮೋದಿ ಅವರ ಬದುಕು ಮತ್ತು ಸ್ವಾಮಿ ವಿವೇಕಾನಂದರ ತತ್ವಕ್ಕೆ ಸಲ್ಲಿಸುತ್ತಿರುವ ಒಂದು ವಿಶೇಷ ಗೌರವ ಇದಾಗಿದೆ
Posted On:
16 SEP 2025 5:09PM by PIB Bengaluru
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ "ಚಲೋ ಜೀತೆ ಹೈ" - ಸ್ವಾಮಿ ವಿವೇಕಾನಂದರ "ಯಾರು ಇನ್ನೊಬ್ಬರಿಗಾಗಿ ಬದುಕುತ್ತಾರೋ ಅವರೇ ನಿಜವಾಗಿ ಬದುಕಿದವರು" ಎಂಬ ತತ್ವಕ್ಕೆ ಭಾವನಾತ್ಮಕ ಗೌರವ ಸಲ್ಲಿಸುವ ಒಂದು ಅದ್ಭುತ ಚಲನಚಿತ್ರವಾಗಿದೆ. ಇದೀಗ ಈ ಚಿತ್ರ ಭಾರತದಾದ್ಯಂತ ವಿಶೇಷವಾಗಿ ಮತ್ತೆ ಬಿಡುಗಡೆಯಾಗಲಿದೆ. ಈ ಚಲನಚಿತ್ರವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2, 2025 ರವರೆಗೆ ಮರು ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. 2018ರಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಕಿರುಚಿತ್ರಗಳಲ್ಲಿ ಒಂದಾಗಿ, ವಿಮರ್ಶಕರ ಮೆಚ್ಚುಗೆ ಗಳಿಸಿರುವ ಈ ಚಿತ್ರವನ್ನು ದೇಶಾದ್ಯಂತ ಲಕ್ಷಾಂತರ ಶಾಲೆಗಳು ಮತ್ತು ಪಿ.ವಿ.ಆರ್ ಐನಾಕ್ಸ್, ಸಿನಿಪೊಲಿಸ್, ರಾಜ್ಹನ್ಸ್ ಮತ್ತು ಮಿರಾಜ್ ಸೇರಿದಂತೆ ಸುಮಾರು 500 ಸಿನಿಮಾ ಥಿಯೇಟರ್ ಗಳಲ್ಲಿ ಪ್ರದರ್ಶಿಸಲಾಗುವುದು.
ಯುವ ಮನಸ್ಸುಗಳಿಗೆ ಸ್ಪೂರ್ತಿ
ಚಿತ್ರದ ಮರು ಬಿಡುಗಡೆಯ ಸಂಭ್ರಮವನ್ನು ಗುರುತಿಸಲು, 'ಚಲೋ ಜೀತೆ ಹೈ: ಸೇವಾ ಕಾ ಸಮ್ಮಾನ್' ಎಂಬ ನೂತನ ಉಪಕ್ರಮವನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಸಮಾಜದಲ್ಲಿ ಸದ್ದಿಲ್ಲದೆ ತಮ್ಮ ಸೇವೆ ಸಲ್ಲಿಸುತ್ತಿರುವ 'ಮೌನ ವೀರರು' ಎಂದು ಪರಿಗಣಿಸಲ್ಪಟ್ಟಿರುವ ವಾಚ್ ಮನ್ ಗಳು, ಸ್ವಚ್ಛತಾ ಸಿಬ್ಬಂದಿ, ಚಾಲಕರು, ಮತ್ತು ಪಿಯೋನ್ ಗಳಂತಹವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ವಿದ್ಯಾರ್ಥಿಗಳು ಈ 'ಮೌನ ವೀರರ' ಜೊತೆಯಲ್ಲಿ ಚಿತ್ರ ವೀಕ್ಷಿಸಿದ ಬಳಿಕವೇ ಈ ಗೌರವ ಸಮಾರಂಭಗಳು ನಡೆಯಲಿವೆ. ಇದು ಯುವ ಪೀಳಿಗೆಯಲ್ಲಿ ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಾತ್ರವಲ್ಲದೆ, ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಮಹತ್ವವನ್ನು ಪ್ರೇರೇಪಿಸಲಿದೆ.
ಸ್ವಾಮಿ ವಿವೇಕಾನಂದರ ತತ್ವಕ್ಕೆ ಒಂದು ಗೌರವ
ಈ ಚಲನಚಿತ್ರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಾಲ್ಯದ ಒಂದು ಘಟನೆಯಿಂದ ಪ್ರೇರಿತವಾಗಿದೆ. ಇದು ಸಣ್ಣ ಹುಡುಗ 'ನರು' ಎಂಬುವವನ ಕಥೆಯನ್ನು ಹೇಳುತ್ತದೆ. ಸ್ವಾಮಿ ವಿವೇಕಾನಂದರ ತತ್ವದಿಂದ ಆಳವಾಗಿ ಪ್ರಭಾವಿತನಾದ 'ನರು', ಅದರ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ತನ್ನ ಸಣ್ಣ ಪ್ರಪಂಚದಲ್ಲಿ ಒಂದು ಬದಲಾವಣೆಯನ್ನು ತರಲು ಶ್ರಮಿಸುತ್ತಾನೆ. ಈ ಉಪಕ್ರಮದ ಮೂಲಕ, ನಿಸ್ವಾರ್ಥತೆ ಮತ್ತು ಸೇವೆಯ ಸನಾತನ ಸಂದೇಶವು ಹೊಸ ಪೀಳಿಗೆಯನ್ನು ಪ್ರಭಾವಶಾಲಿ ರೀತಿಯಲ್ಲಿ ತಲುಪಲಿದೆ.
ದೇಶವ್ಯಾಪಿ ಪ್ರಭಾವ
"ಈ ಚಲನಚಿತ್ರ ಒಂದು ಶಕ್ತಿಯುತ ಸಂದೇಶವನ್ನು ಹೊತ್ತು ಸಾಗಿದೆ. ಇದು ಲಕ್ಷಾಂತರ ಯುವ ಮನಸ್ಸುಗಳಿಗೆ ಪ್ರತಿಯೊಂದು ಕೆಲಸ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವ ಮತ್ತು ಮೌಲ್ಯಮಾಪನ ಮಾಡುವ ಬಗ್ಗೆ ಪ್ರೇರಣೆ ನೀಡಲಿದೆ. ಇದು ನಿಸ್ವಾರ್ಥತೆ, ಸಹಾನುಭೂತಿ ಮತ್ತು ದೇಶಕ್ಕಾಗಿ ನಮ್ಮ ಕರ್ತವ್ಯದಂತಹ ಸನಾತನ ಮೌಲ್ಯಗಳನ್ನು ಪುನರುಚ್ಚರಿಸುತ್ತದೆ. ಇದು ನಮ್ಮ ಪ್ರಧಾನಮಂತ್ರಿ ಅವರಿಗೆ ಸಲ್ಲಿಸುವ ಒಂದು ನಿಜವಾದ ಗೌರವವಾಗಿದೆ," ಎಂದು ನಿರ್ಮಾಪಕ ಮಹಾವೀರ್ ಜೈನ್ ಹೇಳಿದರು. "ಈ ಚಿತ್ರದ ಮೂಲಕ, ಯುವಕರ ಹೃದಯದಲ್ಲಿ ಒಂದು ಹೊಸ ಕಿಡಿಯನ್ನು ಹೊತ್ತಿಸುವ ಮತ್ತು ಉದ್ದೇಶಪೂರ್ವಕ ಬದುಕು ನಡೆಸಲು ಹಾಗೂ ಸಮಾಜಕ್ಕೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಅವರನ್ನು ಪ್ರೋತ್ಸಾಹಿಸುವ ಆಶಯ ನಮ್ಮದು," ಎಂದು ಅವರು ತಿಳಿಸಿದರು.
ಕುಟುಂಬ ಮೌಲ್ಯಗಳ ಕುರಿತ ಅತ್ಯುತ್ತಮ ನಾನ್-ಫೀಚರ್ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತ “ಚಲೋ ಜೀತೇ ಹೈ” ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ಮಂಗೇಶ್ ಹಡಾವಲೆ ನಿರ್ದೇಶಿಸಿದ ಮತ್ತು ಆನಂದ್ ಎಲ್. ರೈ ಹಾಗೂ ಮಹಾವೀರ್ ಜೈನ್ ಪ್ರಸ್ತುತಪಡಿಸಿದ ಈ ಚಿತ್ರದ 'ಇತರರಿಗಾಗಿ ಬದುಕುವ' ಸಂದೇಶವು ಮೊದಲಿಗೆ ಬಿಡುಗಡೆಯಾದಾಗ ಎಷ್ಟು ಪ್ರಸ್ತುತವಾಗಿತ್ತೋ, ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ. ಈ ವಿಶೇಷ ಮರು-ಬಿಡುಗಡೆಯು ಪ್ರಧಾನ ಮಂತ್ರಿಗಳ ಸ್ಫೂರ್ತಿದಾಯಕ ಜೀವನ ಮತ್ತು ತತ್ವಶಾಸ್ತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಆ ಸಂದೇಶವನ್ನು ಮತ್ತಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ.
ಈ ಉಪಕ್ರಮದ ಪ್ರಮುಖ ಭಾಗವಾಗಿ, ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಮೇಲೆ ಚಿತ್ರದ ಸಂದೇಶ ಪರಿಣಾಮ ಬೀರುವಂತೆ ಮಾಡುತ್ತದೆ ಮತ್ತು ಉದ್ದೇಶಪೂರ್ವಕ ಹಾಗೂ ಅರ್ಥಪೂರ್ಣ ಜೀವನವನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ.
****
(Release ID: 2167377)
Visitor Counter : 2