ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್ 17ರಂದು 'ಸ್ವಸ್ಥ ನಾರಿ, ಸಶಕ್ತ ಕುಟುಂಬ ಅಭಿಯಾನ' ಮತ್ತು 8ನೇ ʻಪೋಷಣ್ʼ ಮಾಸಕ್ಕೆ ಚಾಲನೆ ನೀಡಲಿದ್ದಾರೆ


ಭಾರತದ ಅತಿದೊಡ್ಡ ಮಹಿಳಾ ಮತ್ತು ಮಕ್ಕಳ ಆರೋಗ್ಯ ಅಭಿಯಾನವನ್ನು ಮುನ್ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೈಜೋಡಿಸಿವೆ

ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಯೋಜಿಸಲಾಗಿದೆ; ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ದೈನಂದಿನ ಆರೋಗ್ಯ ಶಿಬಿರಗಳು ನಡೆಯಲಿವೆ

ಆರಂಭಿಕ ರೋಗ ಪತ್ತೆ, ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯ ಉತ್ತೇಜನದ ಮೇಲೆ ಗಮನ ಕೇಂದ್ರೀಕರಿಸಿ, ಮಹಿಳೆಯರಿಗೆ ಆರೋಗ್ಯ ಸೇವೆಗಳನ್ನು ಖಚಿತಪಡಿಸಲು ರಾಷ್ಟ್ರವ್ಯಾಪಿ ತೀವ್ರ ಅಭಿಯಾನ ನಡೆಯಲಿದೆ

ಸಾಂಕ್ರಾಮಿಕವಲ್ಲದ ಕಾಯಿಲೆಗಳು, ಕ್ಯಾನ್ಸರ್, ರಕ್ತಹೀನತೆ, ಕ್ಷಯರೋಗ, ಕುಡಗೋಲು ಕೋಶ ಕಾಯಿಲೆ ಮತ್ತು ತಾಯ್ತನ ಆರೋಗ್ಯ ತಪಾಸಣೆ ನಡೆಸಲಾಗುವುದು; ಜೊತೆಗೆ ಜಾಗೃತಿ ಮತ್ತು ಸಮಾಲೋಚನೆ ಅಧಿವೇಶನಗಳೂ ನಡೆಯಲಿವೆ

ಅಗಾಧತೆ, ವ್ಯಾಪ್ತಿ ಮತ್ತು ಸಮುದಾಯ ಭಾಗಿತ್ವವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವಾಲಯಗಳೊಂದಿಗೆ ಇಡೀ ಸರ್ಕಾರ ಮತ್ತು ಇಡೀ ಸಮಾಜ ಒಟ್ಟುಗೂಡಲಿವೆ

Posted On: 14 SEP 2025 4:50PM by PIB Bengaluru

17ನೇ ಸೆಪ್ಟೆಂಬರ್ 2025ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 8ನೇ ʻಪೋಷಣ್ ಮಾಸʼ ಹಾಗೂ 'ಸ್ವಸ್ಥ ನಾರಿ, ಸಶಕ್ತ ಕುಟುಂಬ ಅಭಿಯಾನ'ಕ್ಕೆ ಚಾಲನೆ ನೀಡಲಿದ್ದಾರೆ. ಇದು ಭಾರತದಾದ್ಯಂತ ಮಹಿಳೆಯರು, ಹದಿಹರೆಯದ ಹುಡುಗಿಯರು ಮತ್ತು ಮಕ್ಕಳಿಗೆ ಆರೋಗ್ಯ ಹಾಗೂ ಪೌಷ್ಠಿಕಾಂಶ ಸೇವೆಗಳನ್ನು ಬಲಪಡಿಸುವ ಐತಿಹಾಸಿಕ ಹೆಜ್ಜೆಯಾಗಿದೆ.

ಈ ಉಪಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಂಟಿಯಾಗಿ ಮುನ್ನಡೆಸಲಿವೆ. ಇದು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಪೋಷಣೆಯ ಬಗ್ಗೆ ಸಚಿವಾಲಯಗಳ ಪರಸ್ಪರ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರವ್ಯಾಪಿ ಆರೋಗ್ಯ ಶಿಬಿರಗಳು ಮತ್ತು ಆರೋಗ್ಯ ಕೇಂಧ್ರಗಳ ಮೂಲಕ ರೋಗ ತಡೆ, ರೋಗ ಉಪಶಮನ ಮತ್ತು ಆರೋಗ್ಯ ಉತ್ತೇಜನ ಸೇವೆಗಳ ವಿತರಣೆಗೆ ಗಮನ ಕೇಂದ್ರೀಕರಿಸಲಿದೆ. ಈ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ʻಪೋಷಣ್ ಮಾಸʼ ಚಟುವಟಿಕೆಗಳನ್ನು ಅಭಿಯಾನದೊಂದಿಗೆ ಸಂಯೋಜಿಸಲಿದೆ. ಇದರ ಭಾಗವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರನ್ನು ಸಂಪರ್ಕಿಸಿ ದೊಡ್ಡ ಪ್ರಮಾಣದ ಪೌಷ್ಠಿಕಾಂಶ ಸಮಾಲೋಚನೆ ಮತ್ತು ಪಾಕವಿಧಾನ ಪ್ರದರ್ಶನಗಳನ್ನು ನಡೆಸಲಿದೆ. ಒಟ್ಟಾರೆಯಾಗಿ, ಎರಡು ಸಚಿವಾಲಯಗಳು ರಕ್ತಹೀನತೆ ತಡೆಗಟ್ಟುವಿಕೆ, ಸಮತೋಲಿತ ಆಹಾರ ಮತ್ತು ಋತುಚಕ್ರದ ನೈರ್ಮಲ್ಯದ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಲಿವೆ. ಜೊತೆಗೆ, ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಗತ್ಯಗಳನ್ನು ಸಮಗ್ರ ಮತ್ತು ಒಮ್ಮುಖ ರೀತಿಯಲ್ಲಿ ಪರಿಹರಿಸುವುದನ್ನು ಖಚಿತಪಡಿಸುತ್ತವೆ.

ʻಸ್ವಸ್ಥ ನಾರಿ, ಸಶಕ್ತ ಕುಟುಂಬʼ ಅಭಿಯಾನವು ಗೌರವಾನ್ವಿತ ಪ್ರಧಾನ ಮಂತ್ರಿಯವರ ʻಆರೋಗ್ಯ, ʻಪೋಷಣೆʼ, ʻಫಿಟ್‌ನೆಸ್‌ʼ ಮತ್ತು ʻ2047ರ ವೇಳೆಗೆ ವಿಕಸಿತ ಭಾರತʼ ಸಾಧನೆಯ ಆಶಯವನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಈ ರಾಷ್ಟ್ರವ್ಯಾಪಿ ಅಭಿಯಾನವು ಸಮುದಾಯ ಮಟ್ಟದಲ್ಲಿ ಮಹಿಳಾ ಕೇಂದ್ರಿತ ರೋಗ ತಡೆಗಟ್ಟುವಿಕೆ, ಆರೋಗ್ಯ ಉತ್ತೇಜನ ಮತ್ತು ರೋಗನಿರೋಧಕ ಆರೋಗ್ಯ ಸೇವೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ. ಇದು ಸಾಂಕ್ರಾಮಿಕವಲ್ಲದ ಕಾಯಿಲೆಗಳು, ರಕ್ತಹೀನತೆ, ಕ್ಷಯರೋಗ ಮತ್ತು ಕುಡಗೋಲು ಕೋಶ ಕಾಯಿಲೆಗಳ ತಪಾಸಣೆ, ಆರಂಭಿಕ ಪತ್ತೆ ಹಾಗೂ ಚಿಕಿತ್ಸೆಯ ಸಂಪರ್ಕಗಳನ್ನು ಬಲಪಡಿಸುತ್ತದೆ. ಹಾಗೆಯೇ ಪ್ರಸವಪೂರ್ವ ಆರೈಕೆ, ರೋಗನಿರೋಧಕತೆ, ಪೋಷಣೆ, ಋತುಚಕ್ರ ನೈರ್ಮಲ್ಯ, ಜೀವನಶೈಲಿ ಹಾಗೂ ಮಾನಸಿಕ ಆರೋಗ್ಯ ಜಾಗೃತಿ ಚಟುವಟಿಕೆಗಳ ಮೂಲಕ ತಾಯಿ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದೇ ವೇಳೆ, ಈ ಅಭಿಯಾನವು ಬೊಜ್ಜು ತಡೆಗಟ್ಟುವಿಕೆ, ಸುಧಾರಿತ ಪೋಷಣೆ ಮತ್ತು ಸ್ವಯಂಪ್ರೇರಿತ ರಕ್ತದಾನಕ್ಕೆ ವಿಶೇಷ ಒತ್ತು ನೀಡುವ ಮೂಲಕ ಆರೋಗ್ಯಕರ ಜೀವನಶೈಲಿ ಅಭ್ಯಾಸಗಳತ್ತ ಸಮುದಾಯಗಳನ್ನು ಉತ್ತೇಜಿಸುತ್ತದೆ.

ಭಾರತದಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ಸೇವೆಗಳನ್ನು ಬಲಪಡಿಸುವುದು, ಆರೋಗ್ಯ ಸೇವೆಗಳ ಉತ್ತಮ ಲಭ್ಯತೆ, ಗುಣಮಟ್ಟದ ಆರೈಕೆ ಮತ್ತು ಜಾಗೃತಿಯನ್ನು ಖಾತ್ರಿಪಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜೆ.ಪಿ.ನಡ್ಡಾ ಅವರು ʻಎಕ್ಸ್‌ʼ ವೇದಿಕೆಯಲ್ಲಿ ನೀಡಿದ ಸಂದೇಶದಲ್ಲಿ ಒತ್ತಿಹೇಳಿದ್ದಾರೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಪಾಲುದಾರರು ಮುಂದೆ ಬಂದು ಈ ಜನ ಭಾಗೀದಾರಿ ಅಭಿಯಾನದ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ರಾಷ್ಟ್ರವ್ಯಾಪಿ ಚಾಲನೆ ಮತ್ತು ಆರೋಗ್ಯ ಶಿಬಿರಗಳು

2025ರ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಆಯುಷ್ಮಾನ್ ಆರೋಗ್ಯ ಮಂದಿರಗಳು, ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ), ಜಿಲ್ಲಾ ಆಸ್ಪತ್ರೆಗಳು ಮತ್ತು ಇತರ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗುವುದು.

ಒಂದು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದು ದೇಶದ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಇದುವರೆಗಿನ ಅತಿದೊಡ್ಡ ಆರೋಗ್ಯ ಸಂಪರ್ಕ ಅಭಿಯಾನವಾಗಲಿದೆ.

ದೇಶಾದ್ಯಂತ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ದೈನಂದಿನ ಆರೋಗ್ಯ ಶಿಬಿರಗಳು ನಡೆಯಲಿವೆ.

ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು ಮತ್ತು ಇತರ ಜನಪ್ರತಿನಿಧಿಗಳು ಸೇರಿದಂತೆ ಜನನಾಯಕರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳು, ಪಂಚಾಯರ್‌ ರಾಜ್‌ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ʻಮೈ ಭಾರತ್ʼ ಸ್ವಯಂಸೇವಕರು ಹಾಗೂ ಯುವ ಗುಂಪುಗಳು ತಳಮಟ್ಟದಲ್ಲಿ ಸಮುದಾಯ ಸಂಪರ್ಕವನ್ನು ಮುನ್ನಡೆಸುವ ನಿರೀಕ್ಷೆಯಿದೆ.

 

ಪ್ರಮುಖ ಆರೋಗ್ಯ ಸೇವೆಗಳು

ಸ್ತ್ರೀರೋಗ, ಮಕ್ಕಳ ವೈದ್ಯಶಾಸ್ತ್ರ, ಕಣ್ಣು, ಇಎನ್‌ಟಿ, ದಂತವೈದ್ಯಕೀಯ, ಚರ್ಮರೋಗ ಮತ್ತು ಮನೋವೈದ್ಯಶಾಸ್ತ್ರ ಸೇರಿದಂತೆ ವಿಶೇಷ ಆರೋಗ್ಯ ಸೇವೆಗಳನ್ನು ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ಕೇಂದ್ರ ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಒದಗಿಸಲಾಗುವುದು.

ಕೇಂದ್ರ ಸರ್ಕಾರಿ ಸಂಸ್ಥೆಗಳಾದ ʻಏಮ್ಸ್ʼ, ರಕ್ಷಣಾ ಮತ್ತು ರೈಲ್ವೆ ಆಸ್ಪತ್ರೆಗಳು, ʻಇಎಸ್ಐಸಿʼ ಆಸ್ಪತ್ರೆಗಳು, ʻಸಿಜಿಎಚ್ಎಸ್ʼ ಕೇಂದ್ರಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು (ಐಎನ್ಐಗಳು) ಈ ಪ್ರಯತ್ನಗಳಿಗೆ ಪೂರಕವಾಗಿ ಕಾರ್ಯನಿರರ್ವಹಿಸಲಿವೆ. ತಜ್ಞ ಸೇವೆಗಳು ಮತ್ತು ಆರೈಕೆಯ ನಿರಂತರತೆಯನ್ನು ಕೊನೆಯ ಮೈಲಿಯವರೆಗೂ ತಲುಪುವುದನ್ನು ಇವು ಖಚಿತಪಡಿಸುತ್ತವೆ. ಹಲವಾರು ಖಾಸಗಿ ವಲಯದ ಆರೋಗ್ಯ ಕೇಂದ್ರಗಳು ಸಹ ಈ ಉಪಕ್ರಮವನ್ನು ಬೆಂಬಲಿಸಲು ಮುಂದಾಗಿವೆ. ಇದು ಅಗಾಧತೆ, ಗುಣಮಟ್ಟ ಮತ್ತು ಉಪಕ್ರಮವನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಹದಿನೈದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ, ಒದಗಿಸಲಾಗುವ ಸೇವೆಗಳು ಈ ಕೆಳಗಿನಂತಿವೆ:

ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಸ್ವಾಸ್ಥ್ಯ: ಶಿಬಿರಗಳು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ʻಬಿಎಂಐʼ ತಪಾಸಣೆಯ ಮೂಲಕ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಬೊಜ್ಜು ತಪಾಸಣೆಯನ್ನು ಒದಗಿಸುತ್ತವೆ. ಅಪಾಯ ಪರಿಶೀಲನೆ ಮತ್ತು ಮುಂದಿನ ಕ್ರಮಕ್ಕಾಗಿ ಶಿಫಾರಸಿನ ಜೊತೆಗೆ ಜೀವನಶೈಲಿ ಬದಲಾವಣೆಗಳು, ಪೌಷ್ಠಿಕಾಂಶ, ದೈಹಿಕ ಚಟುವಟಿಕೆ ಮತ್ತು ತಂಬಾಕು ತ್ಯಜಿಸುವ ಬಗ್ಗೆ ಸಮಾಲೋಚನೆಯು ದೀರ್ಘಕಾಲದ ಕಾಯಿಲೆಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಪಾಸಣೆ: ಬಾಯಿಯ ಹುಣ್ಣು ತಪಾಸಣೆ, ಕ್ಲಿನಿಕಲ್ ಸ್ತನ ಪರೀಕ್ಷೆಗಳು, ಸ್ತನ ಸ್ವಯಂ ಪರೀಕ್ಷೆಯ ಪ್ರದರ್ಶನಗಳು ಮತ್ತು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯಿಂದ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ. ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಬಗ್ಗೆ ಜಾಗೃತಿ ಅಧಿವೇಶನಗಳ ಜೊತೆಗೆ ʻಮ್ಯಾಮೊಗ್ರಫಿʼ ಮತ್ತು ʻಆಂಕೊಲಾಜಿʼ ಆರೈಕೆಗಾಗಿ ಶಿಫಾರಸು ಸೇವೆಗಳು ಸಹ ಲಭ್ಯವಿರುತ್ತವೆ.

ರಕ್ತಹೀನತೆ ಮತ್ತು ಪೋಷಣೆ: ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಿಗೆ ದೊಡ್ಡ ಪ್ರಮಾಣದ ಎಚ್‌ಬಿ ಪರೀಕ್ಷೆ ಮತ್ತು ರಕ್ತಹೀನತೆ ತಪಾಸಣೆಯನ್ನು ನಡೆಸಲಾಗುವುದು. ಜೊತೆಗೆ ʻಐಎಫ್‌ಎʼ ಪೂರಕಗಳು ಮತ್ತು ಜಂತುಹುಳು ನಿರೋಧಕ ಮಾತ್ರೆಗಳನ್ನು ಒದಗಿಸಲಾಗುವುದು. ಪೌಷ್ಠಿಕಾಂಶ ಸಮಾಲೋಚನೆ, ಸಮತೋಲಿತ ಆಹಾರ ಪ್ರದರ್ಶನಗಳು, ʻಅನ್ನಪ್ರಾಶನʼ ಸಮಾರಂಭಗಳು ಹಾಗೂ ಆರೋಗ್ಯಕರ ಪಾಕವಿಧಾನ ಪ್ರದರ್ಶನಗಳು ʻಪೋಷಣ್ʼ ಜಾಗೃತಿಯನ್ನು ಬಲಪಡಿಸಲಿವೆ. ಜೊತೆಗೆ, ಋತುಚಕ್ರದ ನೈರ್ಮಲ್ಯ ಪ್ರಚಾರವು ಹದಿಹರೆಯದ ಹುಡುಗಿಯರನ್ನು ಸಬಲೀಕರಣಗೊಳಿಸುತ್ತದೆ. ಈ ಪ್ರಯತ್ನಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆಯ (ಎಫ್ಎಸ್ಎಸ್ಎಐ)ನ ʻಈಟ್‌ ರೈಟ್‌ʼ ಉಪಕ್ರಮವು ಮತ್ತಷ್ಟು ಬೆಂಬಲ ಒದಗಿಸಲಿದೆ. ಇದು ಸಮುದಾಯಗಳಾದ್ಯಂತ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರ ಪದ್ಧತಿಗಳನ್ನು ಉತ್ತೇಜಿಸುತ್ತದೆ.

ಕ್ಷಯರೋಗ (ಟಿಬಿ): ದುರ್ಬಲ ಮಹಿಳೆಯರ ಕ್ಷಯರೋಗ ತಪಾಸಣೆ, ಕಫ ಸಂಗ್ರಹಣೆ ಮತ್ತು ಸಂಚಾರಿ ಎಕ್ಸ್-ರೇ ಘಟಕಗಳು ಆರಂಭಿಕ ರೋಗನಿರ್ಣಯವನ್ನು ಬೆಂಬಲಿಸುತ್ತವೆ. ರೋಗಿಗಳನ್ನು ಚಿಕಿತ್ಸೆಗಾಗಿ ʻಡಾಟ್ಸ್ʼ ಕೇಂದ್ರಗಳಿಗೆ ಸಂಪರ್ಕಿಸಲಾಗುವುದು. ಜೊತೆಗೆ, ಪೌಷ್ಠಿಕಾಂಶ ಮತ್ತು ಮಾನಸಿಕ ಬೆಂಬಲವನ್ನು ಒದಗಿಸಲು ಸ್ವಯಂಸೇವಕರನ್ನು ʻನಿಕ್ಷಯ್ ಮಿತ್ರʼರಾಗಿ ಸಜ್ಜುಗೊಳಿಸಲಾಗುತ್ತದೆ.

ಕುಡಗೋಲು ಕೋಶ ರೋಗ: ಕುಡಗೋಲು ಕೋಶ ತಪಾಸಣೆ, ಕುಡಗೋಲು ಕೋಶ ಕಾರ್ಡ್‌ಗಳ ವಿತರಣೆ ಮತ್ತು ಸಮಾಲೋಚನೆ ಸೇವೆಗಳ ಮೂಲಕ ಬುಡಕಟ್ಟು ಜನರಿಗೆ ವಿಶೇಷ ಗಮನ ನೀಡಲಾಗುವುದು. ಆನುವಂಶಿಕ ಸಮಾಲೋಚನೆ ಮತ್ತು ಶಿಫಾರಸುಗಳು ದೀರ್ಘಕಾಲೀನ ಆರೈಕೆ ಮತ್ತು ರೋಗ ನಿರ್ವಹಣೆಯನ್ನು ಖಚಿತಪಡಿಸುತ್ತವೆ.

ತಾಯಿ ಮತ್ತು ಮಕ್ಕಳ ಆರೋಗ್ಯ: ಹಿಮೋಗ್ಲೋಬಿನ್ ಪರೀಕ್ಷೆ, ರಕ್ತದೊತ್ತಡ ಮೇಲ್ವಿಚಾರಣೆ, ತೂಕ ತಪಾಸಣೆ ಮತ್ತು ಭ್ರೂಣದ ಬೆಳವಣಿಗೆಯ ನಿಗಾ ಸೇರಿದಂತೆ ಸಮಗ್ರ ಪ್ರಸವಪೂರ್ವ ಆರೈಕೆಯನ್ನು ಒದಗಿಸಲಾಗುವುದು. ತಾಯಿ ಮತ್ತು ಮಕ್ಕಳ ರಕ್ಷಣೆ (ಎಂಸಿಪಿ) ಕಾರ್ಡ್ ವಿತರಣೆ; ಸುರಕ್ಷಿತ ಗರ್ಭಧಾರಣೆ ಮತ್ತು ಸಾಂಸ್ಥಿಕ ಹೆರಿಗೆಗಳ ಬಗ್ಗೆ ಸಮಾಲೋಚನೆ; ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆ; ಶಿಶು ಮತ್ತು ಚಿಕ್ಕಮಕ್ಕಳ ಆಹಾರ ಸಮಾಲೋಚನೆ ಹಾಗೂ ರೋಗನಿರೋಧಕ ಸೇವೆಗಳು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಮತ್ತಷ್ಟು ಬಲಪಡಿಸುತ್ತವೆ.

ರೋಗನಿರೋಧಕತೆ: ಗರ್ಭಿಣಿಯರಿಗೆ ʻಟಿಡಿʼ ಲಸಿಕೆಯ ಜೊತೆಗೆ ಮಕ್ಕಳು ಮತ್ತು ಹದಿಹರೆಯದವರಿಗೆ ವಂಚಿತವಾದ ಲಸಿಕೆ ಡೋಸ್‌ಗಳನ್ನು ನೀಡಲು ಆದ್ಯತೆ ನೀಡಲಾಗುವುದು.

ಜಾಗೃತಿ ಮತ್ತು ಸಮಾಲೋಚನೆ: ಉದ್ದೇಶಿತ ಶಿಬಿರಗಳಲ್ಲಿ ಋತುಚಕ್ರದ ನೈರ್ಮಲ್ಯವನ್ನು ಉತ್ತೇಜಿಸಲಾಗುವುದು, ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು ಮತ್ತು ಮಾನಸಿಕ ಆರೋಗ್ಯ ಸಮಾಲೋಚನೆ ಅಧಿವೇಶನಗಳನ್ನು ನಡೆಸಲಾಗುವುದು. ಸ್ವಸಹಾಯ ಗುಂಪುಗಳು, ಪಂಜಾಯತ್‌ ರಾಜ್‌ ಸಂಸ್ಥೆಗಳು ಇತ್ಯಾದಿಗಳ ನೇತೃತ್ವದಲ್ಲಿ ನಡೆಯುವ ಅಭಿಯಾನಗಳು ತೈಲ ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಲು ಉತ್ತೇಜಿಸುತ್ತವೆ, ಆರೋಗ್ಯಕರ ಆಹಾರವನ್ನು ಪ್ರೋತ್ಸಾಹಿಸಲಿವೆ.

ರಕ್ತದಾನ: ಆಘಾತ ಆರೈಕೆ, ಶಸ್ತ್ರಚಿಕಿತ್ಸೆ ಮತ್ತು ರಕ್ತದ ಅಸ್ವಸ್ಥತೆಗಳ ಚಿಕಿತ್ಸೆಯನ್ನು ಬಲಪಡಿಸಲು ರಾಷ್ಟ್ರವ್ಯಾಪಿ ರಕ್ತದಾನ ಅಭಿಯಾನಗಳನ್ನು ಆಯೋಜಿಸಲಾಗುವುದು. ದಾನಿಗಳನ್ನು ಇ-ರಕ್ತಕೋಶ್ ಪೋರ್ಟಲ್ (https://eraktkosh.mohfw.gov.in) ನಲ್ಲಿ ನೋಂದಾಯಿಸಲಾಗುವುದು ಮತ್ತು ʻಮೈಗೌʼ (www.mygov.in) ಮೂಲಕ ಪ್ರತಿಜ್ಞೆ ಅಭಿಯಾನಗಳನ್ನು ನಡೆಸಲಾಗುವುದು.

ಡಿಜಿಟಲ್ ಆರೋಗ್ಯ ಸೇವೆಗಳು: ಪಿಎಂ-ಜೆಎವೈ, ಆಯುಷ್ಮಾನ್ ವಯ ವಂದನಾ ಮತ್ತು ಎಬಿಎಚ್ಎ ಅಡಿಯಲ್ಲಿ ಫಲಾನುಭವಿಗಳನ್ನು ನೋಂದಾಯಿಸಲಾಗುತ್ತದೆ. ಕಾರ್ಡ್ ಪರಿಶೀಲನೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಆರೋಗ್ಯ ಶಿಬಿರಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗುವುದು.

ಆಯುಷ್ ಸೇವೆಗಳು: ಮಹಿಳೆಯರು ಮತ್ತು ಕುಟುಂಬಗಳಿಗೆ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮ ಅಭ್ಯಾಸಗಳನ್ನು ಉತ್ತೇಜಿಸಲು ಯೋಗ ಅಧಿವೇಶನಗಳು, ಆಯುರ್ವೇದ ಸಮಾಲೋಚನೆಗಳು ಮತ್ತು ಇತರ ಆಯುಷ್ ಸೇವೆಗಳನ್ನು ಆಯೋಜಿಸಲಾಗುವುದು.

ಯುವಕರು ಮತ್ತು ನಾಗರಿಕರ ಸಜ್ಜುಗೊಳಿಸುವಿಕೆ: ಜನ ಭಾಗೀದಾರಿ ಪ್ರಯತ್ನದಲ್ಲಿ ಭಾರತದ ಯುವಕರು ಮತ್ತು ಸಮುದಾಯಗಳನ್ನು ತೊಡಗಿಸಿಕೊಳ್ಳಲು ಅಭಿಯಾನವು ವಿಶೇಷ ಒತ್ತು ನೀಡುತ್ತದೆ. ʻಮೈ ಭಾರತ್ʼ ಸ್ವಯಂಸೇವಕರು ಜಾಗೃತಿ ಅಭಿಯಾನಗಳು, ಆರೋಗ್ಯ ಪ್ರತಿಜ್ಞೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಮುದಾಯ ಸಜ್ಜುಗೊಳಿಸುವ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ʻಮೈಗವ್‌ ಪೋರ್ಟಲ್ʼ (www.mygov.in) ಮೂಲಕ ಸ್ವಯಂಪ್ರೇರಿತ ರಕ್ತ ಮತ್ತು ಅಂಗಾಂಗ ದಾನದ ಪ್ರತಿಜ್ಞೆಗಳಲ್ಲಿ ಭಾಗವಹಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುವುದು   ಮತ್ತು ಟಿಬಿ ರೋಗಿಗಳಿಗೆ ಪೌಷ್ಠಿಕಾಂಶ, ಸಮಾಲೋಚನೆ ಮತ್ತು ಆರೈಕೆಯೊಂದಿಗೆ ಬೆಂಬಲ ನೀಡಲು ವಿಶೇಷ ವೇದಿಕೆಯಲ್ಲಿ (www.nikshay.in) ʻನಿಕ್ಷಯ್ ಮಿತ್ರʼರಾಗಿ ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ʻಇಡೀ ಸಮಾಜʼ ಪರಿಕಲ್ಪನೆಯ ಕಾರ್ಯವಿಧಾನವು ಅಭಿಯಾನದ ವ್ಯಾಪ್ತಿ ಮತ್ತು ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇಡೀ ಸರ್ಕಾರದ ಒಂದುಗೂಡಲಿದೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜೊತೆಗೆ, ಇತರ ಹಲವಾರು ಸಚಿವಾಲಯಗಳು ಅಭಿಯಾನಕ್ಕೆ ಬಲವಾದ ಬೆಂಬಲವನ್ನು ನೀಡುತ್ತವೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಸ್ವಸಹಾಯ ಗುಂಪುಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲಕ ಮಹಿಳೆಯರನ್ನು ಒಟ್ಟುಗೂಡಿಸುತ್ತವೆ. ಶಿಕ್ಷಣ ಸಚಿವಾಲಯವು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿದರೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಆರೋಗ್ಯ ಜಾಗೃತಿ ಮತ್ತು ವ್ಯಾಪ್ತಿಯನ್ನು ಬಲಪಡಿಸಲು ʻಮೈ ಭಾರತ್ʼ ಸ್ವಯಂಸೇವಕರೊಂದಿಗೆ ಸಮನ್ವಯ ಸಾಧಿಸುತ್ತದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಬುಡಕಟ್ಟು ಸಮುದಾಯಗಳನ್ನು ತಲುಪಲು ಸಹಾಯ ಮಾಡುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಕಲಚೇತನರ ಸಬಲೀಕರಣ ಇಲಾಖೆ ಸಹ ದಿವ್ಯಾಂಗರಿಗೆ ಸಂಬಂಧಿಸಿದಂತೆ ಬೆಂಬಲವನ್ನು ನೀಡುತ್ತದೆ. ಇದಲ್ಲದೆ, ರಕ್ಷಣಾ ಸಚಿವಾಲಯ, ರೈಲ್ವೆ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಆಯುಷ್ ಸಚಿವಾಲಯ, ಭಾರೀ ಕೈಗಾರಿಕೆಗಳ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಇತ್ಯಾದಿಗಳು ಆಯಾ ವೈದ್ಯಕೀಯ ಸಂಸ್ಥೆಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಿವೆ.

 

*****


(Release ID: 2166641) Visitor Counter : 2