ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಿಜೋರಾಂನಲ್ಲಿ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 13 SEP 2025 12:26PM by PIB Bengaluru

ಮಿಜೋರಾಂ ರಾಜ್ಯಪಾಲ ಶ್ರೀ ವಿ ಕೆ ಸಿಂಗ್ ಜಿ, ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ಅಶ್ವಿನಿ ವೈಷ್ಣವ್ ಜಿ, ಮಿಜೋರಾಂ ಸರ್ಕಾರದ ಸಚಿವರು, ಸಂಸದರು ಮತ್ತು ಇತರ ಚುನಾಯಿತ ಪ್ರತಿನಿಧಿಗಳು, ಮಿಜೋರಾಂನ ಆತ್ಮೀಯ ಜನತೆಗೆ ನನ್ನ ನಮಸ್ಕಾರಗಳು.

ನೀಲಿ ಪರ್ವತಗಳ ಈ ಸುಂದರ ಭೂಮಿಯನ್ನು ಕಾಯುವ ಸರ್ವೋಚ್ಚ ದೇವರು ಪಥಿಯಾನ್ ಅವರಿಗೆ ನಾನು ನಮಸ್ಕರಿಸುತ್ತೇನೆ. ನಾನು ಈಗ ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣ ಪ್ರದೇಶದಲ್ಲಿದ್ದೇನೆ. ದುರದೃಷ್ಟವಶಾತ್, ಕೆಟ್ಟ ಹವಾಮಾನದಿಂದಾಗಿ, ಐಜ್ವಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ನಿಮ್ಮೊಂದಿಗೆ ಸೇರಲು ಸಾಧ್ಯವಾಗದಿದ್ದಕ್ಕೆ ನನಗೆ ವಿಷಾದವಿದೆ. ಆದರೆ ಈ ಮಾಧ್ಯಮದಿಂದಲೂ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ಸ್ಪಷ್ಟವಾಗಿ ಅನುಭವಿಸಬಲ್ಲೆ.

ಸ್ನೇಹಿತರೇ,

ಸ್ವಾತಂತ್ರ್ಯ ಚಳವಳಿಯಾಗಲಿ ಅಥವಾ ರಾಷ್ಟ್ರ ನಿರ್ಮಾಣವಾಗಲಿ, ಮಿಜೋರಾಂನ ಜನರು ಯಾವಾಗಲೂ ಮಹತ್ತರ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ. ಲಾಲ್ನು ರೋಪುಲಿಯಾನಿ ಮತ್ತು ಪಸಲ್ತಾ ಖುವಾಂಗ್ಚೇರಾ ಅವರಂತಹ ಮಹಾನ್ ಜನನಾಯಕರ ಆದರ್ಶಗಳು ರಾಷ್ಟ್ರವನ್ನು ಸದಾ ಪ್ರೇರೇಪಿಸುತ್ತಲೇ ಇವೆ. ತ್ಯಾಗ ಮತ್ತು ಸೇವೆ, ಧೈರ್ಯ ಮತ್ತು ಸಹಾನುಭೂತಿ, ಈ ಮೌಲ್ಯಗಳು ಮಿಜೋ ಸಮಾಜದ ಕೇಂದ್ರದಲ್ಲಿವೆ. ಇಂದು, ಮಿಜೋರಾಂ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಸ್ನೇಹಿತರೇ,

ಇಂದು ರಾಷ್ಟ್ರಕ್ಕೆ, ವಿಶೇಷವಾಗಿ ಮಿಜೋರಾಂ ಜನತೆಗೆ ಐತಿಹಾಸಿಕ ದಿನ. ಇಂದಿನಿಂದ, ಐಜ್ವಾಲ್ ಭಾರತದ ರೈಲ್ವೆ ನಕ್ಷೆಯಲ್ಲಿರುತ್ತದೆ. ಕೆಲವು ವರ್ಷಗಳ ಹಿಂದೆ, ಐಜ್ವಾಲ್ ರೈಲ್ವೆ ಮಾರ್ಗಕ್ಕೆ ಅಡಿಪಾಯ ಹಾಕುವ ಅವಕಾಶ ನನಗೆ ಸಿಕ್ಕಿತು. ಮತ್ತು ಇಂದು, ನಾವು ಅದನ್ನು ಹೆಮ್ಮೆಯಿಂದ ದೇಶದ ಜನರಿಗೆ ಅರ್ಪಿಸುತ್ತೇವೆ. ಕಷ್ಟಕರವಾದ ಭೂಪ್ರದೇಶ ಸೇರಿದಂತೆ ಹಲವು ಸವಾಲುಗಳನ್ನು ನಿವಾರಿಸಿ, ಈ ಬೈರಬಿ ಸೈರಂಗ್ ರೈಲ್ವೆ ಮಾರ್ಗವು ಇಂದು ವಾಸ್ತವವಾಗಿದೆ. ನಮ್ಮ ಎಂಜಿನಿಯರ್ ಗಳ ಕೌಶಲ್ಯ ಮತ್ತು ನಮ್ಮ ಕಾರ್ಮಿಕರ ಚೈತನ್ಯ ಇದನ್ನು ಸಾಧ್ಯವಾಗಿಸಿದೆ.

ಸ್ನೇಹಿತರೇ,

ನಮ್ಮ ಹೃದಯಗಳು ಯಾವಾಗಲೂ ಹಾಗೂ ನೇರವಾಗಿ ಪರಸ್ಪರ ಸಂಪರ್ಕ ಹೊಂದಿವೆ. ಈಗ, ಮೊದಲ ಬಾರಿಗೆ, ಮಿಜೋರಾಂನ ಸೈರಂಗ್ ಅನ್ನು ರಾಜಧಾನಿ ಎಕ್ಸ್ಪ್ರೆಸ್ ಮೂಲಕ ದೆಹಲಿಯೊಂದಿಗೆ ನೇರವಾಗಿ ಸಂಪರ್ಕಿಸಲಾಗುವುದು. ಇದು ಕೇವಲ ರೈಲ್ವೆ ಸಂಪರ್ಕವಲ್ಲ, ಬದಲಾಗಿ, ಇದು ಪರಿವರ್ತನೆಯ ಜೀವನಾಡಿಯಾಗಿದೆ. ಇದು ಮಿಜೋರಾಂ ಜನರ ಜೀವನ ಮತ್ತು ಜೀವನೋಪಾಯದಲ್ಲಿ ಖಂಡಿತಾ ಮಹಾ ಕ್ರಾಂತಿಯನ್ನುಂಟು ಮಾಡುತ್ತದೆ. ಮಿಜೋರಾಂನ ರೈತರು ಮತ್ತು ವ್ಯವಹಾರಗಳು ರಾಷ್ಟ್ರದಾದ್ಯಂತ ಹೆಚ್ಚಿನ ಮಾರುಕಟ್ಟೆಗಳನ್ನು ತಲುಪಬಹುದು. ಜನರು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚಿನ ಆಯ್ಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಪ್ರವಾಸೋದ್ಯಮ, ಸಾರಿಗೆ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಅನೇಕಾನೇಕ ನೂತನ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ.

ಸ್ನೇಹಿತರೇ,

ದೀರ್ಘಕಾಲದವರೆಗೆ, ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಮತ-ಬ್ಯಾಂಕ್ ರಾಜಕೀಯವನ್ನು ಸೃಷ್ಟಿಸಿ ಬೆಳೆಸುವ ಅಭ್ಯಾಸ ಮಾಡಿದ್ದವು. ಅವರ ಗಮನ ಯಾವಾಗಲೂ ಹೆಚ್ಚಿನ ಮತಗಳು ಮತ್ತು ಸ್ಥಾನಗಳನ್ನು ಹೊಂದಿರುವ ಸ್ಥಳ-ಪ್ರದೇಶಗಳ ಮೇಲೆ ಇತ್ತು. ಮಿಜೋರಾಂನಂತಹ ರಾಜ್ಯಗಳು ಸೇರಿದಂತೆ ಇಡೀ ಈಶಾನ್ಯವು ಈ ಮನೋಭಾವದಿಂದಾಗಿ ಬಹಳವಾಗಿ ನರಳಿತು. ಆದರೆ ನಮ್ಮ ವಿಧಾನವು ತುಂಬಾ ವಿಭಿನ್ನವಾಗಿದೆ. ಹಿಂದೆ ನಿರ್ಲಕ್ಷಿಸಲ್ಪಟ್ಟವರು ಈಗ ಮುಂಚೂಣಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಅಂಚಿನಲ್ಲಿದ್ದವರು ಈಗ ಮುಖ್ಯವಾಹಿನಿಯಾಗಿದ್ದಾರೆ! ಕಳೆದ 11 ವರ್ಷಗಳಿಂದ, ನಾವು ಈಶಾನ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಈಗ ಈ ಪ್ರದೇಶವು ಭಾರತದ ಬೆಳವಣಿಗೆಯ ಎಂಜಿನ್ ಆಗುತ್ತಿದೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ, ಈಶಾನ್ಯದ ಹಲವು ರಾಜ್ಯಗಳು ಭಾರತದ ರೈಲು ನಕ್ಷೆಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿವೆ. ಗ್ರಾಮೀಣ ರಸ್ತೆಗಳು ಮತ್ತು ಹೆದ್ದಾರಿಗಳು, ಮೊಬೈಲ್ ಸಂಪರ್ಕ ಮತ್ತು ಇಂಟರ್ನೆಟ್ ಸಂಪರ್ಕಗಳು, ವಿದ್ಯುತ್, ಟ್ಯಾಪ್ ನೀರು ಮತ್ತು ಎಲ್.ಪಿ.ಜಿ ಸಂಪರ್ಕಗಳು, ಭಾರತ ಸರ್ಕಾರವು ಎಲ್ಲಾ ರೀತಿಯ ಸಂಪರ್ಕವನ್ನು ಬಲಪಡಿಸಲು ಶ್ರಮಿಸಿದೆ. ಮಿಜೋರಾಂ ವಾಯು ಪ್ರಯಾಣಕ್ಕಾಗಿ ಉಡಾನ್ ಯೋಜನೆಯಿಂದ ಪ್ರಯೋಜನ ಪಡೆಯಲಿದೆ. ಶೀಘ್ರದಲ್ಲೇ, ಹೆಲಿಕಾಪ್ಟರ್ ಸೇವೆಗಳು ಇಲ್ಲಿ ಪ್ರಾರಂಭವಾಗಲಿವೆ. ಇದು ಮಿಜೋರಾಂನ ದೂರದ ಪ್ರದೇಶಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ.

ಸ್ನೇಹಿತರೇ,

ನಮ್ಮ ಪೂರ್ವದೊಂದಿಗೆ ವಿಶೇಷ ಯೋಜನೆಗಳ ನೀತಿ (ಆಕ್ಟ್ ಈಸ್ಟ್ ಪಾಲಿಸಿ) ಮತ್ತು ಉದಯೋನ್ಮುಖ ಈಶಾನ್ಯ ಆರ್ಥಿಕ ಕಾರಿಡಾರ್ ಎರಡರಲ್ಲೂ ಮಿಜೋರಾಂ ಪ್ರಮುಖ ಪಾತ್ರ ವಹಿಸುತ್ತದೆ. ಕಲಾದನ್ ಮಲ್ಟಿಮೋಡಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ ಮತ್ತು ಸೈರಂಗ್ ಹ್ಮಾಂಗ್ ಬುಚುವಾ ರೈಲ್ವೆ ಮಾರ್ಗದೊಂದಿಗೆ, ಮಿಜೋರಾಂ ಆಗ್ನೇಯ ಏಷ್ಯಾದ ಮೂಲಕ ಬಂಗಾಳ ಕೊಲ್ಲಿಗೆ ಸಂಪರ್ಕ ಸಾಧಿಸುತ್ತದೆ. ಈ ಕಾರಣದಿಂದಾಗಿ, ಈಶಾನ್ಯ ಭಾರತ ಮತ್ತು ಆಗ್ನೇಯ ಏಷ್ಯಾದಾದ್ಯಂತ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತದೆ.

ಸ್ನೇಹಿತರೇ,

ಮಿಜೋರಾಂ ಪ್ರತಿಭಾನ್ವಿತ ಯುವಕರಿಂದ ಆಶೀರ್ವದಿಸಲ್ಪಟ್ಟಿದೆ. ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಕೆಲಸವಗಿದೆ. ನಮ್ಮ ಸರ್ಕಾರ ಈಗಾಗಲೇ ಇಲ್ಲಿ 11 ಏಕಲವ್ಯ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. ಇನ್ನೂ 6 ಶಾಲೆಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ನಮ್ಮ ಈಶಾನ್ಯ ರಾಜ್ಯವು ನವೋದ್ಯಮಗಳಿಗೆ ಪ್ರಮುಖ ಕೇಂದ್ರವಾಗುತ್ತಿದೆ. ಈ ಪ್ರದೇಶದಲ್ಲಿ ಸುಮಾರು 4,500 ನವೋದ್ಯಮಗಳು ಮತ್ತು 25 ಇನ್ಕ್ಯುಬೇಟರ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಮಿಜೋರಾಂನ ಯುವಕರು ಈ ಆಂದೋಲನಕ್ಕೆ ಸಕ್ರಿಯವಾಗಿ ಸೇರುತ್ತಿದ್ದಾರೆ ಮತ್ತು ತಮಗೂ ಮತ್ತು ಇತರರಿಗೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.

ಸ್ನೇಹಿತರೇ,

ಭಾರತವು ಜಾಗತಿಕ ಕ್ರೀಡೆಗಳಿಗೆ ತ್ವರಿತವಾಗಿ ಪ್ರಮುಖ ಕೇಂದ್ರವಾಗುತ್ತಿದೆ. ಇದು ದೇಶದಲ್ಲಿ ಕ್ರೀಡಾ ಆರ್ಥಿಕತೆಯನ್ನು ಸಹ ಸೃಷ್ಟಿಸುತ್ತಿದೆ. ಮಿಜೋರಾಂ ಕ್ರೀಡೆಗಳ ಅದ್ಭುತ ಸಂಪ್ರದಾಯವನ್ನು ಹೊಂದಿದ್ದು, ಫುಟ್ಬಾಲ್ ಮತ್ತು ಇತರ ಕ್ರೀಡೆಗಳಲ್ಲಿ ಅನೇಕ ಚಾಂಪಿಯನ್ಗಳನ್ನು ಉತ್ಪಾದಿಸುತ್ತಿದೆ. ನಮ್ಮ ಕ್ರೀಡಾ ನೀತಿಗಳು ಮಿಜೋರಾಂಗೂ ಪ್ರಯೋಜನವನ್ನು ನೀಡುತ್ತಿವೆ. ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ, ನಾವು ಆಧುನಿಕ ಕ್ರೀಡಾ ಮೂಲಸೌಕರ್ಯಗಳ ರಚನೆಯನ್ನು ಬೆಂಬಲಿಸುತ್ತಿದ್ದೇವೆ. ಇತ್ತೀಚೆಗೆ, ನಮ್ಮ ಸರ್ಕಾರವು ಖೇಲೋ ಇಂಡಿಯಾ ಖೇಲ್ ನೀತಿ ಎಂಬ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಸಹ ರೂಪಿಸಿ ಜಾರಿಗೆ ತಂದಿದೆ. ಇದು ಮಿಜೋರಾಂನ ಯುವಕರಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಈಶಾನ್ಯದ ಸುಂದರ ಸಂಸ್ಕೃತಿಯ ರಾಯಭಾರಿಯ ಪಾತ್ರವನ್ನು ನಿರ್ವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಈಶಾನ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಗಳನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಕೆಲವು ತಿಂಗಳ ಹಿಂದೆ, ನನಗೆ ಭಾಗವಹಿಸಲು ಅವಕಾಶ ಸಿಕ್ಕಿತು.

ದೆಹಲಿಯಲ್ಲಿ ನಡೆದ ಅಷ್ಟ ಲಕ್ಷ್ಮಿ ಉತ್ಸವದಲ್ಲಿ ಬಹಳಷ್ಟು ವಿಶೇಷತೆಗಳಿದ್ದವು. ಇದು ಈಶಾನ್ಯದ ಜವಳಿ, ಕರಕುಶಲ ವಸ್ತುಗಳು, ಜಿಐ-ಟ್ಯಾಗ್ ಮಾಡಲಾದ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸಿತು. ರೈಸಿಂಗ್ ಈಶಾನ್ಯ ಶೃಂಗಸಭೆಯಲ್ಲಿ, ಹೂಡಿಕೆದಾರರು ಈಶಾನ್ಯದ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ನಾನು ಪ್ರೋತ್ಸಾಹಿಸಿದೆ. ಶೃಂಗಸಭೆಯು ಬೃಹತ್ ಹೂಡಿಕೆಗಳು ಮತ್ತು ಯೋಜನೆಗಳಿಗೆ ಹಾದಿಯನ್ನು ತೆರೆಯುತ್ತಿದೆ. ನಾನು ಸ್ಥಳೀಯರಿಗೆ ಧ್ವನಿ ನೀಡುವ ಬಗ್ಗೆ ಮಾತನಾಡುವಾಗ, ಇದು ಈಶಾನ್ಯದ ಕುಶಲಕರ್ಮಿಗಳು ಮತ್ತು ರೈತರಿಗೆ ಸಹ ಬಹಳ ಪ್ರಯೋಜನವನ್ನು ನೀಡುತ್ತದೆ. ಮಿಜೋರಾಂನ ಬಿದಿರಿನ ಉತ್ಪನ್ನಗಳು, ಸಾವಯವ ಶುಂಠಿ, ಅರಿಶಿನ ಮತ್ತು ಬಾಳೆಹಣ್ಣುಗಳು ಲೋಕ ಪ್ರಸಿದ್ಧವಾಗಿವೆ.

ಸ್ನೇಹಿತರೇ,

ಜೀವನದ ಸುಲಭತೆ ಮತ್ತು ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸಲು ನಾವು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇತ್ತೀಚೆಗೆ, ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಘೋಷಿಸಲಾಗಿದೆ. ಇದರರ್ಥ ಅನೇಕ ಉತ್ಪನ್ನಗಳ ಮೇಲೆ ಕಡಿಮೆ ತೆರಿಗೆಗಳು, ಕುಟುಂಬಗಳಿಗೆ ಜೀವನವನ್ನು ಸುಲಭಗೊಳಿಸುತ್ತದೆ. 2014 ರ ಮೊದಲು ಟೂತ್ಪೇಸ್ಟ್, ಸೋಪ್ ಮತ್ತು ಎಣ್ಣೆಯಂತಹ ದೈನಂದಿನ ಅಗತ್ಯ ವಸ್ತುಗಳಿಗೆ ಸಹ 27% ತೆರಿಗೆ ವಿಧಿಸಲಾಗಿತ್ತು. ಇಂದು, ಕೇವಲ 5% ಜಿಎಸ್ಟಿ ಅನ್ವಯಿಸುತ್ತದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ, ಔಷಧಿಗಳು, ಪರೀಕ್ಷಾ ಕಿಟ್ಗಳು ಮತ್ತು ವಿಮಾ ಪಾಲಿಸಿಗಳಿಗೆ ಭಾರಿ ತೆರಿಗೆ ವಿಧಿಸಲಾಗಿತ್ತು. ಅದಕ್ಕಾಗಿಯೇ ಆರೋಗ್ಯ ರಕ್ಷಣೆ ದುಬಾರಿಯಾಗಿತ್ತು ಮತ್ತು ವಿಮೆ ಸಾಮಾನ್ಯ ಕುಟುಂಬಗಳಿಗೆ ತಲುಪಲು ಸಾಧ್ಯವಿಲ್ಲ. ಆದರೆ ಇಂದು, ಇವೆಲ್ಲವೂ ಕೈಗೆಟುಕುವ ದರದಲ್ಲಿವೆ. ಹೊಸ ಜಿಎಸ್ಟಿ ದರಗಳು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಅಗತ್ಯ ಔಷಧಿಗಳನ್ನು ಹೆಚ್ಚು ಅಗ್ಗವಾಗಿದೆ. ಸೆಪ್ಟೆಂಬರ್ 22 ರ ನಂತರ, ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳು ಸಹ ಅಗ್ಗವಾಗುತ್ತವೆ. ಸ್ಕೂಟರ್ಗಳು ಮತ್ತು ಕಾರುಗಳನ್ನು ತಯಾರಿಸುವ ಅನೇಕ ಕಂಪನಿಗಳು ಈಗಾಗಲೇ ಬೆಲೆಗಳನ್ನು ಕಡಿಮೆ ಮಾಡಿವೆ. ಈ ಬಾರಿಯ ಹಬ್ಬದ ಋತುವು ದೇಶಾದ್ಯಂತ ಇನ್ನಷ್ಟು ರೋಮಾಂಚಕವಾಗಿರುತ್ತದೆ ಎಂದು ನನಗೆ ಖಚಿತವಾಗಿದೆ.

ಸ್ನೇಹಿತರೇ,

ಸುಧಾರಣೆಗಳ ಭಾಗವಾಗಿ, ಹೆಚ್ಚಿನ ಹೋಟೆಲ್ ಳ ಮೇಲಿನ ಜಿ ಎಸ್ ಟಿಯನ್ನು ಕೇವಲ 5%ಕ್ಕೆ ಇಳಿಸಲಾಗಿದೆ. ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದು, ಹೋಟೆಲ್ಗಳಲ್ಲಿ ತಂಗುವುದು ಮತ್ತು ಹೊರಗೆ ಊಟ ಮಾಡುವುದು ಅಗ್ಗವಾಗುತ್ತದೆ. ಇದು ಹೆಚ್ಚಿನ ಜನರು ನಮ್ಮ ದೇಶದ ವಿವಿಧ ಭಾಗಗಳನ್ನು ಪ್ರಯಾಣಿಸಲು, ಅನ್ವೇಷಿಸಲು ಮತ್ತು ಆನಂದಿಸಲು ಸಹಾಯ ಮಾಡುತ್ತದೆ. ಈಶಾನ್ಯದಂತಹ ಪ್ರವಾಸಿ ಕೇಂದ್ರಗಳು ಇದರಿಂದ ವಿಶೇಷವಾಗಿ ಪ್ರಯೋಜನ ಪಡೆಯುತ್ತವೆ.

ಸ್ನೇಹಿತರೇ,

2025-26ರ ಮೊದಲ ತ್ರೈಮಾಸಿಕದಲ್ಲಿ ನಮ್ಮ ಆರ್ಥಿಕತೆಯು 7.8% ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದರರ್ಥ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ರಫ್ತುಗಳ ಬೆಳವಣಿಗೆಯನ್ನು ಸಹ ನಾವು ನೋಡುತ್ತಿದ್ದೇವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ, ನಮ್ಮ ಸೈನಿಕರು ಭಯೋತ್ಪಾದನೆಯನ್ನು ಪ್ರಾಯೋಜಿಸುವವರಿಗೆ ಹೇಗೆ ಪಾಠ ಕಲಿಸಿದರು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಯ ಭಾವನೆಯಿಂದ ತುಂಬಿತ್ತು. ಈ ಕಾರ್ಯಾಚರಣೆಯಲ್ಲಿ, ಭಾರತದಲ್ಲಿಯೇ ತಯಾರಿಸಿದ ಶಸ್ತ್ರಾಸ್ತ್ರಗಳು ನಮ್ಮ ದೇಶವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನಮ್ಮ ರಾಷ್ಟ್ರೀಯ ಭದ್ರತೆಗೆ ನಮ್ಮ ಆರ್ಥಿಕತೆ ಮತ್ತು ಉತ್ಪಾದನಾ ವಲಯದ ಬೆಳವಣಿಗೆ ಬಹಳ ಮುಖ್ಯವಾಗಿದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಕುಟುಂಬ ಮತ್ತು ಪ್ರತಿಯೊಂದು ಪ್ರದೇಶದ ಕಲ್ಯಾಣಕ್ಕೆ ಬದ್ಧವಾಗಿದೆ. ಜನರ ಸಮೂಲಾಗ್ರ ಸಬಲೀಕರಣದ ಮೂಲಕವೇ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಾಗುತ್ತದೆ. ಈ ಪ್ರಯಾಣದಲ್ಲಿ, ಮಿಜೋರಾಂನ ಜನರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಐಜ್ವಾಲ್ ಅನ್ನು ಈ ಮೂಲಕ ಭಾರತದ ರೈಲ್ವೆ ನಕ್ಷೆಗೆ ಸ್ವಾಗತಿಸುತ್ತೇನೆ. ಇಂದು, ಹವಾಮಾನ ವೈಪರೀತ್ಯದಿಂದಾಗಿ, ನಾನು ಐಜ್ವಾಲ್ ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ನಾವು ಶೀಘ್ರದಲ್ಲೇ ಭೇಟಿಯಾಗುತ್ತೇವೆ ಎಂದು ನನಗೆ ಖಚಿತವಾಗಿದೆ. ಧನ್ಯವಾದಗಳು!

 

*****


(Release ID: 2166375) Visitor Counter : 8