ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
ಜ್ಞಾನ ಭಾರತಂ ಪೋರ್ಟಲ್ ಉದ್ಘಾಟಿಸಿದ ಪ್ರಧಾನಮಂತ್ರಿ - ಹಸ್ತಪ್ರತಿಗಳ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಸಾರ್ವಜನಿಕ ಲಭ್ಯತೆ/ಪ್ರವೇಶವನ್ನು ವೇಗಗೊಳಿಸಲು ಮೀಸಲಾದ ಡಿಜಿಟಲ್ ವೇದಿಕೆ ಜ್ಞಾನ ಭಾರತಂ
ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಧ್ವನಿಯಾಗಲು ಸಜ್ಜಾಗಿದೆ: ಪ್ರಧಾನಮಂತ್ರಿ
ಇಂದು, ಭಾರತವು ಸುಮಾರು ಒಂದು ಕೋಟಿ ಹಸ್ತಪ್ರತಿಗಳ ವಿಶ್ವದ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ: ಪ್ರಧಾನಮಂತ್ರಿ
ಇತಿಹಾಸದುದ್ದಕ್ಕೂ, ಕೋಟ್ಯಂತರ ಹಸ್ತಪ್ರತಿಗಳು ನಾಶವಾದವು, ಆದರೆ ಉಳಿದಿರುವ ಹಸ್ತಪ್ರತಿಗಳು ನಮ್ಮ ಪೂರ್ವಜರು ಜ್ಞಾನ, ವಿಜ್ಞಾನ ಮತ್ತು ಕಲಿಕೆಗೆ ಎಷ್ಟು ಸಮರ್ಪಿತರಾಗಿದ್ದರು ಎಂಬುದನ್ನು ತೋರಿಸುತ್ತವೆ: ಪ್ರಧಾನಮಂತ್ರಿ
ಭಾರತದ ಜ್ಞಾನ ಸಂಪ್ರದಾಯವು ಸಂರಕ್ಷಣೆ, ನಾವೀನ್ಯತೆ, ಸೇರ್ಪಡೆ ಮತ್ತು ರೂಪಾಂತರ ಎಂಬ ನಾಲ್ಕು ಸ್ತಂಭಗಳ ಮೇಲೆ ನಿರ್ಮಿಸಲ್ಪಟ್ಟಿದೆ: ಪ್ರಧಾನಮಂತ್ರಿ
ಭಾರತದ ಇತಿಹಾಸ ಎಂದರೆ ಅದು ಕೇವಲ ರಾಜವಂಶಗಳ ಉದಯ ಮತ್ತು ಪತನದ ಬಗ್ಗೆ ಮಾತ್ರವಲ್ಲ: ಪ್ರಧಾನಮಂತ್ರಿ
ಭಾರತವು ಸ್ವತಃ ಒಂದು ಜೀವಂತ ಪ್ರವಾಹವಾಗಿದ್ದು, ಅದರ ಆಲೋಚನೆಗಳು, ಆದರ್ಶಗಳು ಮತ್ತು ಮೌಲ್ಯಗಳಿಂದ ರೂಪುಗೊಂಡಿದೆ: ಪ್ರಧಾನಮಂತ್ರಿ
ಭಾರತದ ಹಸ್ತಪ್ರತಿಗಳು ಇಡೀ ಮಾನವಕುಲದ ಅಭಿವೃದ್ಧಿ ಪ್ರಯಾಣದ ಹೆಜ್ಜೆಗುರುತುಗಳನ್ನು ಹೊಂದಿವೆ: ಪ್ರಧಾನಮಂತ್ರಿ
Posted On:
12 SEP 2025 8:11PM by PIB Bengaluru
ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಭವನ ಇಂದು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ಜ್ಞಾನ ಭಾರತಂ ಮಿಷನ್ ಘೋಷಿಸಿದ್ದನ್ನು ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದನ್ನು ಅವರು ಒತ್ತಿ ಹೇಳಿದರು. ಈ ಮಿಷನ್‌ಗೆ ಸಂಬಂಧಿಸಿದ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಸರ್ಕಾರಿ ಅಥವಾ ಶೈಕ್ಷಣಿಕ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ ಎಂದೂ ಹೇಳಿದರು. ಸಾವಿರಾರು ತಲೆಮಾರುಗಳ ಚಿಂತನಶೀಲ ಪರಂಪರೆಯನ್ನು ಅವರು ಉಲ್ಲೇಖಿಸಿದರು. ಭಾರತದ ಮಹಾನ್ ಋಷಿಗಳು, ಆಚಾರ್ಯರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆಯನ್ನು ಅವರು ಗುರುತಿಸಿದರು, ಭಾರತದ ಜ್ಞಾನ, ಸಂಪ್ರದಾಯಗಳು ಮತ್ತು ವೈಜ್ಞಾನಿಕ ಪರಂಪರೆಯನ್ನು ಒತ್ತಿ ಹೇಳಿದರು. ಜ್ಞಾನ ಭಾರತಂ ಮಿಷನ್ ಮೂಲಕ ಈ ಪರಂಪರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕಾರ್ಯಾಚರಣೆಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಡೀ ಜ್ಞಾನ ಭಾರತಂ ತಂಡ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.
ಹಸ್ತಪ್ರತಿಯನ್ನು ನೋಡುವುದು ಕಾಲಯಾನದಂತೆಯೇ ಭಾಸವಾಗುತ್ತದೆ ಎಂದು ಹೇಳಿದ ಶ್ರೀ ಮೋದಿ, ಇಂದಿನ ಪರಿಸ್ಥಿತಿಗಳು ಮತ್ತು ಹಿಂದಿನ ಪರಿಸ್ಥಿತಿಗಳ ನಡುವಿನ ಅಗಾಧ ವ್ಯತ್ಯಾಸವನ್ನು ಪ್ರತಿಬಿಂಬಿಸಿದರು. ಇಂದು, ಕೀಬೋರ್ಡ್‌ಗಳ ಸಹಾಯದಿಂದ, ಅಳಿಸುವಿಕೆ ಮತ್ತು ತಿದ್ದುಪಡಿ ಆಯ್ಕೆಗಳ ಅನುಕೂಲದೊಂದಿಗೆ ನಾವು ವ್ಯಾಪಕವಾಗಿ ಬರೆಯಲು ಸಾಧ್ಯವಾಗುತ್ತದೆ ಮತ್ತು ಮುದ್ರಕಗಳ ಮೂಲಕ, ಒಂದೇ ಪುಟದ ಸಾವಿರಾರು ಪ್ರತಿಗಳನ್ನು ಉತ್ಪಾದಿಸಬಹುದು ಎಂಬುದರತ್ತ ಅವರು ಗಮನ ಸೆಳೆದರು. ಶತಮಾನಗಳ ಹಿಂದಿನ ಜಗತ್ತನ್ನು ಕಲ್ಪಿಸಿಕೊಳ್ಳುವಂತೆ ಪ್ರೇಕ್ಷಕರನ್ನು ಆಗ್ರಹಿಸಿದ ಅವರು, ಆ ಸಮಯದಲ್ಲಿ ಆಧುನಿಕ ವಸ್ತು ಸಂಪನ್ಮೂಲಗಳು ಲಭ್ಯವಿರಲಿಲ್ಲ ಮತ್ತು ನಮ್ಮ ಪೂರ್ವಜರು ಬೌದ್ಧಿಕ ಸಂಪನ್ಮೂಲಗಳ ಮೇಲೆ ಮಾತ್ರ ಅವಲಂಬಿತರಾಗಬೇಕಾಗಿತ್ತು ಎಂದು ಒತ್ತಿ ಹೇಳಿದರು. ಪ್ರತಿ ಪತ್ರವನ್ನು ಬರೆಯುವಾಗ ವಹಿಸಬೇಕಾಗಿದ್ದ ನಿಖರವಾದ ಗಮನವನ್ನು ಅವರು ಎತ್ತಿ ತೋರಿಸಿದರು. ಪ್ರತಿಯೊಂದು ಗ್ರಂಥವನ್ನು ರಚಿಸುವಲ್ಲಿ ಒಳಗೊಂಡಿರುವ ಅಪಾರ ಪ್ರಯತ್ನವನ್ನು ಒತ್ತಿ ಹೇಳಿದ ಶ್ರೀ ಮೋದಿ, ಆ ಕಾಲದಲ್ಲೂ ಸಹ, ಭಾರತದ ಜನರು ಜಾಗತಿಕ ಜ್ಞಾನದ ಕೇಂದ್ರಗಳಾಗಿ ಮಾರ್ಪಟ್ಟ ಭವ್ಯ ಗ್ರಂಥಾಲಯಗಳನ್ನು ನಿರ್ಮಿಸಿದರು ಎಂಬುದನ್ನೂ ಗಮನಿಸಿದರು. ಭಾರತವು ವಿಶ್ವದ ಅತಿದೊಡ್ಡ ಹಸ್ತಪ್ರತಿ ಸಂಗ್ರಹವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು ಮತ್ತು ಭಾರತದ ಬಳಿ ಸುಮಾರು ಒಂದು ಕೋಟಿ ಹಸ್ತಪ್ರತಿಗಳಿವೆ ಎಂದು ಒತ್ತಿ ಹೇಳಿದರು.
ಇತಿಹಾಸದ ಕ್ರೂರ ಅಲೆಗಳಲ್ಲಿ ಲಕ್ಷಾಂತರ ಹಸ್ತಪ್ರತಿಗಳು ನಾಶವಾಗಿ ಕಳೆದುಹೋಗಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಉಳಿದಿರುವ ಹಸ್ತಪ್ರತಿಗಳು ನಮ್ಮ ಪೂರ್ವಜರು ಜ್ಞಾನ, ವಿಜ್ಞಾನ, ಓದು ಮತ್ತು ಕಲಿಕೆಯ ಕಡೆಗೆ ಹೊಂದಿದ್ದ ಆಳವಾದ ಸಮರ್ಪಣೆಗೆ ಸಾಕ್ಷಿಯಾಗಿವೆ ಎಂದು ಒತ್ತಿ ಹೇಳಿದರು. ಭೋಜಪತ್ರ ಮತ್ತು ತಾಳೆಗರಿಗಳ ಮೇಲೆ ಬರೆದ ಗ್ರಂಥಗಳ ದುರ್ಬಲತೆ ಮತ್ತು ತಾಮ್ರದ ಫಲಕಗಳ ಮೇಲೆ ಕೆತ್ತಲಾದ ಪದಗಳಲ್ಲಿ ಲೋಹದ ಸವೆತದ ಅಪಾಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಈ ಸವಾಲುಗಳ ಹೊರತಾಗಿಯೂ, ನಮ್ಮ ಪೂರ್ವಜರು ಪದಗಳನ್ನು ದೈವಿಕವೆಂದು ಪೂಜಿಸುತ್ತಿದ್ದರು ಮತ್ತು 'ಅಕ್ಷರ ಬ್ರಹ್ಮ ಭವ' ಎಂಬ ಮನೋಭಾವದಿಂದ ಅವುಗಳನ್ನು ಆರಾಧಿಸುತ್ತಿದ್ದರು ಎಂದು ಹೇಳಿದರು. ಪೀಳಿಗೆಯಿಂದ ಪೀಳಿಗೆಗೆ, ಕುಟುಂಬಗಳು ಈ ಗ್ರಂಥಗಳು ಮತ್ತು ಹಸ್ತಪ್ರತಿಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿವೆ ಇದು, ಜ್ಞಾನದ ಮೇಲಿನ ಅಪಾರ ಗೌರವವನ್ನು ತೋರಿಸುತ್ತದೆ ಎಂದರು. ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಒತ್ತಿ ಹೇಳಿದರು. ರಾಷ್ಟ್ರದ ಬಗ್ಗೆ ಭಕ್ತಿಯ ಮನೋಭಾವವನ್ನು ಅವರು ಪುನರುಚ್ಚರಿಸಿದರಲ್ಲದೆ, ಅಂತಹ ಬದ್ಧತೆಯ ಹೆಚ್ಚಿನ ಉದಾಹರಣೆ ಬೇರೆಲ್ಲಿ ಸಿಗಬಹುದು ಎಂದು ಹೇಳಿದರು.
"ಭಾರತದ ಜ್ಞಾನ ಪರಂಪರೆ ಇಂದಿಗೂ ಶ್ರೀಮಂತವಾಗಿದೆ ಏಕೆಂದರೆ ಅದು ಸಂರಕ್ಷಣೆ, ನಾವೀನ್ಯತೆ, ಸೇರ್ಪಡೆ ಮತ್ತು ರೂಪಾಂತರ ಎಂಬ ನಾಲ್ಕು ಮೂಲಭೂತ ಸ್ತಂಭಗಳ ಮೇಲೆ ನಿರ್ಮಿಸಲ್ಪಟ್ಟಿದೆ" ಎಂದು ಪ್ರಧಾನಮಂತ್ರಿ ನುಡಿದರು. ಮೊದಲ ಸ್ತಂಭ - ಸಂರಕ್ಷಣೆ ಬಗ್ಗೆ ವಿವರಿಸುತ್ತಾ, ಭಾರತದ ಅತ್ಯಂತ ಪ್ರಾಚೀನ ಗ್ರಂಥಗಳಾದ ವೇದಗಳನ್ನು ಭಾರತೀಯ ಸಂಸ್ಕೃತಿಯ ಅಡಿಪಾಯವೆಂದು ಪರಿಗಣಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ವೇದಗಳು ಸರ್ವೋಚ್ಚವೆಂದು ದೃಢಪಡಿಸಿದ ಅವರು, ಹಿಂದೆ, ವೇದಗಳನ್ನು ಮೌಖಿಕ ಸಂಪ್ರದಾಯ - 'ಶ್ರುತಿ' ಮೂಲಕ ಮುಂದಿನ ಪೀಳಿಗೆಗೆ ರವಾನಿಸಲಾಗುತ್ತಿತ್ತು ಎಂದು ವಿವರಿಸಿದರು. ಸಾವಿರಾರು ವರ್ಷಗಳ ಕಾಲ, ವೇದಗಳನ್ನು ಸಂಪೂರ್ಣ ದೃಢೀಕರಣದೊಂದಿಗೆ ಮತ್ತು ದೋಷಗಳಿಲ್ಲದೆ ಸಂರಕ್ಷಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ನಂತರ ಪ್ರಧಾನಮಂತ್ರಿ ಎರಡನೇ ಸ್ತಂಭ - ನಾವೀನ್ಯತೆ ಬಗ್ಗೆ ಮಾತನಾಡಿದರು, ಭಾರತವು ಆಯುರ್ವೇದ, ವಾಸ್ತು ಶಾಸ್ತ್ರ, ಜ್ಯೋತಿಷ್ಯ ಮತ್ತು ಲೋಹಶಾಸ್ತ್ರದಲ್ಲಿ ನಿರಂತರವಾಗಿ ಹೊಸತನವನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಪ್ರತಿ ಪೀಳಿಗೆಯು ಹಿಂದಿನದನ್ನು ಮೀರಿ ಮುಂದುವರೆದಿದೆ ಮತ್ತು ಪ್ರಾಚೀನ ಜ್ಞಾನವನ್ನು ಹೆಚ್ಚು ವೈಜ್ಞಾನಿಕವಾಗಿಸಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಅವರು ಸೂರ್ಯ ಸಿದ್ಧಾಂತ ಮತ್ತು ವರಾಹಮಿಹಿರ ಸಂಹಿತದಂತಹ ಪಠ್ಯಗಳನ್ನು ನಿರಂತರ ಪಾಂಡಿತ್ಯಪೂರ್ಣ ಕೊಡುಗೆಗಳು ಮತ್ತು ಹೊಸ ಜ್ಞಾನದ ಸೇರ್ಪಡೆಯ ಉದಾಹರಣೆಗಳಾಗಿ ಉಲ್ಲೇಖಿಸಿದರು. ಮೂರನೇ ಸ್ತಂಭ - ಸೇರ್ಪಡೆ ಬಗ್ಗೆ ಚರ್ಚಿಸುತ್ತಾ, ಶ್ರೀ ಮೋದಿ ಅವರು ಪ್ರತಿ ಪೀಳಿಗೆಯೂ ಹಳೆಯ ಜ್ಞಾನವನ್ನು ಸಂರಕ್ಷಿಸುವುದಲ್ಲದೆ ಹೊಸ ಒಳನೋಟಗಳನ್ನು ಸಹ ನೀಡಿದೆ ಎಂದು ವಿವರಿಸಿದರು. ಮೂಲ ವಾಲ್ಮೀಕಿ ರಾಮಾಯಣದ ನಂತರ, ಇತರ ಅನೇಕ ರಾಮಾಯಣಗಳನ್ನು ರಚಿಸಲಾಗಿದೆ ಎಂಬ ಉದಾಹರಣೆಯನ್ನು ಅವರು ಉಲ್ಲೇಖಿಸಿದರು. ಈ ಸಂಪ್ರದಾಯದಿಂದ ಹೊರಹೊಮ್ಮಿದ ರಾಮಚರಿತಮಾನಸಗಳಂತಹ ಪಠ್ಯಗಳನ್ನು ಅವರು ಉಲ್ಲೇಖಿಸಿದರು, ಜೊತೆಗೆ ವೇದಗಳು ಮತ್ತು ಉಪನಿಷತ್ತುಗಳ ಮೇಲೆ ವ್ಯಾಖ್ಯಾನಗಳನ್ನು ಬರೆಯಲಾಗಿದೆ. ಭಾರತೀಯ ಆಚಾರ್ಯರು ದ್ವೈತ ಮತ್ತು ಅದ್ವೈತದಂತಹ ವ್ಯಾಖ್ಯಾನಗಳನ್ನು ನೀಡಿದರು ಎಂಬುದನ್ನೂ ಅವರು ಎತ್ತಿ ತೋರಿಸಿದರು.
ಭಾರತದ ಜ್ಞಾನ ಪರಂಪರೆಯ ನಾಲ್ಕನೇ ಸ್ತಂಭ - ರೂಪಾಂತರದ ಬಗ್ಗೆ ಚರ್ಚಿಸುತ್ತಾ, ಪ್ರಧಾನಮಂತ್ರಿ ಅವರು, ಕಾಲಾನಂತರದಲ್ಲಿ ಭಾರತವು ಆತ್ಮಾವಲೋಕನದಲ್ಲಿ ತೊಡಗಿಸಿಕೊಂಡು ಅಗತ್ಯ ಬದಲಾವಣೆಗಳನ್ನು ಮಾಡಿದೆ ಎಂದು ವಿವರಿಸಿದರು. ಚರ್ಚೆಗಳ ಮೇಲಿನ ಪ್ರಾಮುಖ್ಯತೆ ಮತ್ತು ಶಾಸ್ತ್ರಾರ್ಥ ಪರಂಪರೆಯ ಮುಂದುವರಿಕೆಯನ್ನು ಅವರು ಒತ್ತಿ ಹೇಳಿದರು. ಸಮಾಜವು ಹಳೆಯ ವಿಚಾರಗಳನ್ನು ತ್ಯಜಿಸಿ ಹೊಸದನ್ನು ಅಳವಡಿಸಿಕೊಂಡಿದೆ ಎಂಬುದರತ್ತ ಅವರು ಗಮನ ಸೆಳೆದರು. ಮಧ್ಯಕಾಲೀನ ಅವಧಿಯಲ್ಲಿ, ವಿವಿಧ ಸಾಮಾಜಿಕ ಅನಿಷ್ಟಗಳು ಹೊರಹೊಮ್ಮಿದಾಗ, ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಶ್ರೇಷ್ಠ ವ್ಯಕ್ತಿಗಳು ಹೊರಹೊಮ್ಮಿದರು ಎಂದು ಶ್ರೀ ಮೋದಿ ಹೇಳಿದರು. ಈ ವ್ಯಕ್ತಿಗಳು ಭಾರತದ ಬೌದ್ಧಿಕ ಪರಂಪರೆಯನ್ನು ಸಂರಕ್ಷಿಸಿ ರಕ್ಷಿಸಿದ್ದಾರೆ ಎಂದು ಅವರು ಎತ್ತಿ ತೋರಿಸಿದರು.
"ರಾಷ್ಟ್ರೀಯತೆಯ ಆಧುನಿಕ ಕಲ್ಪನೆಗಳಿಗಿಂತ ಭಿನ್ನವಾಗಿ, ಭಾರತವು ವಿಶಿಷ್ಟವಾದ ಸಾಂಸ್ಕೃತಿಕ ಗುರುತು, ತನ್ನದೇ ಆದ ಪ್ರಜ್ಞೆ ಮತ್ತು ತನ್ನದೇ ಆದ ಆತ್ಮವನ್ನು ಹೊಂದಿದೆ" ಎಂದು ಪ್ರಧಾನಮಂತ್ರಿ ಹೇಳಿದರು, ಭಾರತದ ಇತಿಹಾಸವು ಕೇವಲ ರಾಜವಂಶದ ಗೆಲುವು ಮತ್ತು ಸೋಲುಗಳ ದಾಖಲೆಯಲ್ಲ ಎಂದು ಒತ್ತಿ ಹೇಳಿದರು. ರಾಜಪ್ರಭುತ್ವದ ರಾಜ್ಯಗಳು ಮತ್ತು ಸಾಮ್ರಾಜ್ಯಗಳ ಭೌಗೋಳಿಕತೆಯು ಕಾಲಾನುಕ್ರಮದಲ್ಲಿ ಬದಲಾಗಿದ್ದರೂ, ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಅಖಂಡವಾಗಿ ಉಳಿದಿದೆ ಎಂದು ಅವರು ಗಮನಿಸಿದರು. ಭಾರತವು ಅದರ ಆಲೋಚನೆಗಳು, ಆದರ್ಶಗಳು ಮತ್ತು ಮೌಲ್ಯಗಳಿಂದ ರೂಪುಗೊಂಡ ಜೀವಂತ ಪ್ರವಾಹವಾಗಿದೆ ಎಂದು ಅವರು ದೃಢಪಡಿಸಿದರು. "ಭಾರತದ ಪ್ರಾಚೀನ ಹಸ್ತಪ್ರತಿಗಳು ಈ ನಾಗರಿಕತೆಯ ಪ್ರಯಾಣದ ನಿರಂತರ ಹರಿವನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ರೀ ಮೋದಿ ಉದ್ಗರಿಸಿದರು, ಈ ಹಸ್ತಪ್ರತಿಗಳು ವೈವಿಧ್ಯತೆಯಲ್ಲಿ ಏಕತೆಯ ಘೋಷಣೆಗಳಾಗಿವೆ ಎಂದು ಹೇಳಿದರು. ದೇಶಾದ್ಯಂತ ಸುಮಾರು 80 ಭಾಷೆಗಳಲ್ಲಿ ಹಸ್ತಪ್ರತಿಗಳು ಇವೆ ಎಂದು ಅವರು ಮಾಹಿತಿ ನೀಡಿದರು. ಭಾರತದ ವಿಶಾಲ ಜ್ಞಾನ ಸಾಗರವನ್ನು ಸಂರಕ್ಷಿಸಲಾಗಿರುವ ಅನೇಕ ಭಾಷೆಗಳಲ್ಲಿ ಸಂಸ್ಕೃತ, ಪ್ರಾಕೃತ, ಅಸ್ಸಾಮಿ, ಬಂಗಾಳಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ ಮತ್ತು ಮರಾಠಿಗಳನ್ನು ಅವರು ಪಟ್ಟಿ ಮಾಡಿದರು. ಗಿಲ್ಗಿಟ್ ಹಸ್ತಪ್ರತಿಗಳು ಕಾಶ್ಮೀರದ ಬಗ್ಗೆ ಅಧಿಕೃತ ಐತಿಹಾಸಿಕ ಒಳನೋಟಗಳನ್ನು ಒದಗಿಸುತ್ತವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯು ಭಾರತದ ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರದ ಆಳವಾದ ತಿಳುವಳಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರು. ಆಚಾರ್ಯ ಭದ್ರಬಾಹು ಅವರ ಕಲ್ಪಸೂತ್ರ ಹಸ್ತಪ್ರತಿ ಜೈನ ಧರ್ಮದ ಪ್ರಾಚೀನ ಜ್ಞಾನವನ್ನು ರಕ್ಷಿಸುತ್ತದೆ ಮತ್ತು ಸಾರನಾಥದ ಹಸ್ತಪ್ರತಿಗಳು ಭಗವಾನ್ ಬುದ್ಧನ ಬೋಧನೆಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ರಸಮಂಜರಿ ಮತ್ತು ಗೀತಗೋವಿಂದದಂತಹ ಹಸ್ತಪ್ರತಿಗಳು ಭಕ್ತಿ, ಸೌಂದರ್ಯ ಮತ್ತು ಸಾಹಿತ್ಯದ ವೈವಿಧ್ಯಮಯ ಸಂಗತಿಗಳನ್ನು ಸಂರಕ್ಷಿಸಿವೆ ಎಂದು ಅವರು ಒತ್ತಿ ಹೇಳಿದರು.
"ಭಾರತದ ಹಸ್ತಪ್ರತಿಗಳು ಮಾನವೀಯತೆಯ ಸಂಪೂರ್ಣ ಅಭಿವೃದ್ಧಿ ಪ್ರಯಾಣದ ಹೆಜ್ಜೆಗುರುತುಗಳನ್ನು ಹೊಂದಿವೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು, ಈ ಹಸ್ತಪ್ರತಿಗಳು ತತ್ವಶಾಸ್ತ್ರ ಮತ್ತು ವಿಜ್ಞಾನವನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ಅವು ಔಷಧ ಮತ್ತು ಆಧ್ಯಾತ್ಮಿಕತೆಯನ್ನು ಒಳಗೊಂಡಿವೆ ಮತ್ತು ಕಲೆ, ಖಗೋಳಶಾಸ್ತ್ರ ಮತ್ತು ವಾಸ್ತುಶಿಲ್ಪದ ಜ್ಞಾನವನ್ನು ಸಹ ಸಂರಕ್ಷಿಸುತ್ತವೆ ಎಂದು ಅವರು ನುಡಿದರು. ಗಣಿತಶಾಸ್ತ್ರದಿಂದ ಬೈನರಿ ಆಧಾರಿತ ಕಂಪ್ಯೂಟರ್ ವಿಜ್ಞಾನದವರೆಗೆ, ಆಧುನಿಕ ವಿಜ್ಞಾನದ ಅಡಿಪಾಯವು ಶೂನ್ಯದ ಪರಿಕಲ್ಪನೆಯ ಮೇಲೆ ನಿಂತಿದೆ ಎಂಬುದನ್ನು ಎತ್ತಿ ತೋರಿಸುವ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ಉಲ್ಲೇಖಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಶೂನ್ಯದ ಆವಿಷ್ಕಾರವು ಭಾರತದಲ್ಲಿ ನಡೆಯಿತು ಎಂದು ದೃಢಪಡಿಸಿದ ಶ್ರೀ ಮೋದಿ, ಬಕ್ಷಲಿ ಹಸ್ತಪ್ರತಿಯು ಶೂನ್ಯ ಮತ್ತು ಗಣಿತದ ಸೂತ್ರಗಳ ಪ್ರಾಚೀನ ಬಳಕೆಯ ಪುರಾವೆಗಳನ್ನು ಹೊಂದಿದೆ ಎಂದು ಹೇಳಿದರು. ಯಶೋಮಿತ್ರ ಅವರ ಬೋವರ್ ಹಸ್ತಪ್ರತಿಯು ಶತಮಾನಗಳಷ್ಟು ಹಳೆಯ ವೈದ್ಯಕೀಯ ವಿಜ್ಞಾನದ ಒಳನೋಟಗಳನ್ನು ಒದಗಿಸುತ್ತದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಚರಕ ಸಂಹಿತ ಮತ್ತು ಸುಶ್ರುತ ಸಂಹಿತದಂತಹ ಪಠ್ಯಗಳ ಹಸ್ತಪ್ರತಿಗಳು ಇಂದಿಗೂ ಆಯುರ್ವೇದದ ಜ್ಞಾನವನ್ನು ಸಂರಕ್ಷಿಸಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸುಲ್ವ ಸೂತ್ರವು ಪ್ರಾಚೀನ ಜ್ಯಾಮಿತೀಯ ಜ್ಞಾನವನ್ನು ನೀಡುತ್ತದೆ, ಕೃಷಿ ಪರಾಶರವು ಸಾಂಪ್ರದಾಯಿಕ ಕೃಷಿ ಜ್ಞಾನದ ಮಾಹಿತಿಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ನಾಟ್ಯ ಶಾಸ್ತ್ರದಂತಹ ಪಠ್ಯಗಳ ಹಸ್ತಪ್ರತಿಗಳು ಮಾನವನ ಭಾವನಾತ್ಮಕ ಬೆಳವಣಿಗೆಯ ಪ್ರಯಾಣವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ ಎಂದವರು ವಿವರಿಸಿದರು.
ಪ್ರತಿಯೊಂದು ರಾಷ್ಟ್ರವು ತನ್ನ ಐತಿಹಾಸಿಕ ಆಸ್ತಿಗಳನ್ನು ನಾಗರಿಕತೆಯ ಶ್ರೇಷ್ಠತೆಯ ಸಂಕೇತಗಳಾಗಿ ಜಗತ್ತಿಗೆ ಪ್ರಸ್ತುತಪಡಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ದೇಶಗಳು ಒಂದೇ ಒಂದು ಹಸ್ತಪ್ರತಿ ಅಥವಾ ಕಲಾಕೃತಿಯನ್ನು ಸಹ ರಾಷ್ಟ್ರೀಯ ನಿಧಿಯಾಗಿ ಸಂರಕ್ಷಿಸಿದ ಉದಾಹರಣೆ ಇದೆ ಎಂದು ನುಡಿದರು. ಭಾರತವು ಅಪಾರವಾದ ಹಸ್ತಪ್ರತಿಗಳನ್ನು ಹೊಂದಿದೆ, ಇದು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ಭಾರತದ ಪ್ರಾಚೀನ ಸಮುದ್ರ ವ್ಯಾಪಾರ ಮಾರ್ಗಗಳನ್ನು ವಿವರಿಸುವ ಐತಿಹಾಸಿಕ ದಾಖಲೆಗಳ ವ್ಯಾಪಕ ಸಂಗ್ರಹವನ್ನು ಹೊಂದಿದ್ದ ಒಬ್ಬ ವ್ಯಕ್ತಿಯನ್ನು ತಾವು ಕುವೈಟ್ ಪ್ರವಾಸದ ಸಂದರ್ಭ ಭೇಟಿಯಾದ ವೈಯಕ್ತಿಕ ಅನುಭವವನ್ನು ಪ್ರಧಾನಮಂತ್ರಿ ಹಂಚಿಕೊಂಡರು. ಶತಮಾನಗಳ ಹಿಂದೆ ಭಾರತ ಸಮುದ್ರ ಆಧಾರಿತ ವ್ಯಾಪಾರವನ್ನು ಹೇಗೆ ನಡೆಸಿತು ಎಂಬುದನ್ನು ಪ್ರದರ್ಶಿಸುವ ಸಾಮಗ್ರಿಗಳನ್ನು ಆ ವ್ಯಕ್ತಿ ಬಹಳ ಹೆಮ್ಮೆಯಿಂದ ಪ್ರಸ್ತುತಪಡಿಸಿದರು ಎಂದು ಅವರು ಹೇಳಿದರು. ಅಂತಹ ಸಂಗ್ರಹಗಳು ಭಾರತದ ಜಾಗತಿಕ ತೊಡಗಿಸಿಕೊಳ್ಳುವಿಕೆಯ ಆಳವನ್ನು ಮತ್ತು ಗಡಿಯಾಚೆ ಪ್ರದೇಶಗಳಲ್ಲಿ ಅದು ಹೊಂದಿರುವ ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ನುಡಿದರು. ಈ ಚದುರಿ ಹೋಗಿರುವ ಸಂಪತ್ತನ್ನು ವಿಶಾಲವಾದ ರಾಷ್ಟ್ರೀಯ ಪ್ರಯತ್ನದಲ್ಲಿ ಸಂರಕ್ಷಿಸುವ ಮತ್ತು ಸಂಯೋಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ದಾಖಲೆಗಳು - ಅವು ಎಲ್ಲೇ ಕಂಡುಬಂದರೂ - ಭಾರತದ ನಾಗರಿಕತೆಯ ಪರಂಪರೆಯ ಭಾಗವಾಗಿ ದಾಖಲಿಸಬೇಕು, ಡಿಜಿಟಲೀಕರಣಗೊಳಿಸಬೇಕು ಮತ್ತು ಸಂಭ್ರಮಿಸಬೇಕು ಎಂದು ಅವರು ದೃಢವಾಗಿ ಹೇಳಿದರು.
"ಭಾರತವು ಪ್ರಪಂಚದ ವಿಶ್ವಾಸವನ್ನು ಗಳಿಸಿದೆ. ಇಂದು, ರಾಷ್ಟ್ರಗಳು ಭಾರತವನ್ನು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮತ್ತು ಗೌರವಿಸಲು ಸರಿಯಾದ ಸ್ಥಳವೆಂದು ನೋಡುತ್ತವೆ" ಎಂದು ಶ್ರೀ ಮೋದಿ ಹೇಳಿದರು. ಈ ಹಿಂದೆ, ಕದ್ದ ಕೆಲವೇ ಭಾರತೀಯ ವಿಗ್ರಹಗಳನ್ನು ಮಾತ್ರ ಹಿಂತಿರುಗಿಸಲಾಗುತ್ತಿತ್ತು ಎಂದು ಅವರು ಗಮನಿಸಿದರು. ಆದರೆ ಈಗ, ನೂರಾರು ಪ್ರಾಚೀನ ವಿಗ್ರಹಗಳನ್ನು ಹಿಂತಿರುಗಿಸಲಾಗುತ್ತಿದೆ. ಈ ವಾಪಸಾತಿಗಳು ಭಾವನೆ ಅಥವಾ ಸಹಾನುಭೂತಿಯಿಂದ ನಡೆಸಲ್ಪಡುತ್ತಿಲ್ಲ, ಬದಲಾಗಿ ಆತ್ಮವಿಶ್ವಾಸದಿಂದ - ಭಾರತವು ತಮ್ಮ ಸಾಂಸ್ಕೃತಿಕ ಮೌಲ್ಯವನ್ನು ಘನತೆಯಿಂದ ಸಂರಕ್ಷಿಸುತ್ತದೆ ಮತ್ತು ಉನ್ನತೀಕರಿಸುತ್ತದೆ ಎಂಬ ವಿಶ್ವಾಸದಿಂದ ಎಂದು ಅವರು ಒತ್ತಿ ಹೇಳಿದರು. ಭಾರತವು ಪ್ರಪಂಚದ ದೃಷ್ಟಿಯಲ್ಲಿ ಪರಂಪರೆಯ ವಿಶ್ವಾಸಾರ್ಹ ರಕ್ಷಕನಾಗಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಬೌದ್ಧ ಸನ್ಯಾಸಿಗಳೊಂದಿಗೆ ಸಂವಹನ ನಡೆಸಿದ ಮತ್ತು ಅವರ ಶ್ರೀಮಂತ ಹಸ್ತಪ್ರತಿ ಸಂಗ್ರಹವನ್ನು ವೀಕ್ಷಿಸಿದ ಮಂಗೋಲಿಯಾಕ್ಕೆ ಭೇಟಿ ನೀಡಿದ ವೈಯಕ್ತಿಕ ಅನುಭವವನ್ನು ಅವರು ಹಂಚಿಕೊಂಡರು. ಆ ಹಸ್ತಪ್ರತಿಗಳ ಮೇಲೆ ಕೆಲಸ ಮಾಡಲು ಅನುಮತಿ ಕೋರಿದ್ದನ್ನು ಅವರು ನೆನಪಿಸಿಕೊಂಡರು, ನಂತರ ಅವುಗಳನ್ನು ಭಾರತಕ್ಕೆ ತರಲಾಯಿತು, ಡಿಜಿಟಲೀಕರಣಗೊಳಿಸಲಾಯಿತು ಮತ್ತು ಗೌರವಯುತವಾಗಿ ಹಿಂತಿರುಗಿಸಲಾಯಿತು. ಆ ಹಸ್ತಪ್ರತಿಗಳು ಈಗ ಮಂಗೋಲಿಯಾಕ್ಕೆ ಅಮೂಲ್ಯವಾದ ಪರಂಪರೆಯಾಗಿವೆ ಎಂದು ಅವರು ದೃಢಪಡಿಸಿದರು.
ಭಾರತವು ಈಗ ಈ ಪರಂಪರೆಯನ್ನು ಜಗತ್ತಿಗೆ ಹೆಮ್ಮೆಯಿಂದ ಪ್ರಸ್ತುತಪಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ದೃಢಪಡಿಸಿದ ಶ್ರೀ ಮೋದಿ, ಜ್ಞಾನ ಭಾರತಂ ಮಿಷನ್ ಈ ಮಹತ್ತರ ಉಪಕ್ರಮದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು. ದೇಶಾದ್ಯಂತ ಹಲವಾರು ಸಂಸ್ಥೆಗಳು ಸಾರ್ವಜನಿಕ ಭಾಗವಹಿಸುವಿಕೆಯ ಉತ್ಸಾಹದಲ್ಲಿ ಸರ್ಕಾರದ ಜೊತೆಗೂಡಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಅವರು ಕಾಶಿ ನಗರಿ ಪ್ರಚಾರಿಣಿ ಸಭಾ, ಕೋಲ್ಕತ್ತಾದ ಏಷಿಯಾಟಿಕ್ ಸೊಸೈಟಿ, ಉದಯಪುರದ 'ಧರೋಹರ್', ಗುಜರಾತ್‌ನ ಕೋಬಾದಲ್ಲಿ ಆಚಾರ್ಯ ಶ್ರೀ ಕೈಲಾಶಸುರಿ ಜ್ಞಾನಮಂದಿರ, ಹರಿದ್ವಾರದಲ್ಲಿ ಪತಂಜಲಿ, ಪುಣೆಯ ಭಂಡಾರ್ಕರ್ ಓರಿಯೆಂಟಲ್ ಸಂಶೋಧನಾ ಸಂಸ್ಥೆ ಮತ್ತು ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯಗಳನ್ನು ಹೆಸರಿಸಿದರು. ಇಂತಹ ನೂರಾರು ಸಂಸ್ಥೆಗಳ ಬೆಂಬಲದೊಂದಿಗೆ ಇಲ್ಲಿಯವರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಅನೇಕ ನಾಗರಿಕರು ತಮ್ಮ ಕುಟುಂಬದ ಪರಂಪರೆಯನ್ನು ರಾಷ್ಟ್ರಕ್ಕೆ ಲಭ್ಯವಾಗುವಂತೆ ಮಾಡಲು ಮುಂದೆ ಬಂದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು ಮತ್ತು ಈ ಎಲ್ಲಾ ಸಂಸ್ಥೆಗಳು ಮತ್ತು ಅಂತಹ ಪ್ರತಿಯೊಬ್ಬ ನಾಗರಿಕರಿಗೂ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಭಾರತವು ತನ್ನ ಜ್ಞಾನವನ್ನು ಎಂದಿಗೂ ಹಣದ ಬಲದಿಂದ ಅಳೆಯಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಜ್ಞಾನವೇ ಶ್ರೇಷ್ಠ ದಾನ ಎಂಬ ಭಾರತೀಯ ಋಷಿಮುನಿಗಳ ಪ್ರಾಚೀನ ಜ್ಞಾನವನ್ನು ಉಲ್ಲೇಖಿಸಿದ ಅವರು, ಪ್ರಾಚೀನ ಕಾಲದಲ್ಲಿ, ಭಾರತದ ಜನರು ಉದಾರ ಮನೋಭಾವದಿಂದ ಹಸ್ತಪ್ರತಿಗಳನ್ನು ದಾನ ಮಾಡುತ್ತಿದ್ದರು ಎಂದು ಒತ್ತಿ ಹೇಳಿದರು. ಚೀನಾದ ಪ್ರವಾಸಿ ಹ್ಯೂಯೆನ್ ತ್ಸಾಂಗ್ ಭಾರತಕ್ಕೆ ಭೇಟಿ ನೀಡಿದಾಗ, ಅವರು ಆರುನೂರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದರು ಎಂಬುದನ್ನೂ ಶ್ರೀ ಮೋದಿ ಉಲ್ಲೇಖಿಸಿದರು. ಅನೇಕ ಭಾರತೀಯ ಹಸ್ತಪ್ರತಿಗಳು ಚೀನಾ ಮೂಲಕ ಜಪಾನ್ ತಲುಪಿದವು ಎಂದು ಅವರು ಹೇಳಿದರು. 7 ನೇ ಶತಮಾನದಲ್ಲಿ, ಈ ಹಸ್ತಪ್ರತಿಗಳನ್ನು ಜಪಾನ್‌ನ ಹೊರಿಯು-ಜಿ ಮಠದಲ್ಲಿ (ಮೊನಾಸ್ಟ್ರಿ) ರಾಷ್ಟ್ರೀಯ ಆಸ್ತಿಯಾಗಿ ಸಂರಕ್ಷಿಸಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಂದಿಗೂ ಸಹ, ಪ್ರಪಂಚದಾದ್ಯಂತದ ಅನೇಕ ದೇಶಗಳು ಭಾರತದ ಪ್ರಾಚೀನ ಹಸ್ತಪ್ರತಿಗಳನ್ನು ಹೊಂದಿವೆ ಎಂದು ಹೇಳಿದರು. ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ, ಭಾರತವು ಮಾನವೀಯತೆಯ ಈ ಹಂಚಿಕೆಯ ಪರಂಪರೆಯನ್ನು ಏಕೀಕರಿಸಲು ಶ್ರಮಿಸುತ್ತದೆ ಎಂದು ಅವರು ಹೇಳಿದರು.
ಜಿ-20 ರ ಸಾಂಸ್ಕೃತಿಕ ಸಂವಾದದ ಸಂದರ್ಭದಲ್ಲಿ ಭಾರತ ಈ ಪ್ರಯತ್ನವನ್ನು ಪ್ರಾರಂಭಿಸಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತದೊಂದಿಗೆ ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಸಂಬಂಧ ಹೊಂದಿರುವ ದೇಶಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಒತ್ತಿ ಹೇಳಿದರು. ಮಂಗೋಲಿಯನ್ ಕಂಜೂರ್‌ನ ಮರುಮುದ್ರಿತ ಸಂಪುಟಗಳನ್ನು ಮಂಗೋಲಿಯಾದ ರಾಯಭಾರಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2022 ರಲ್ಲಿ, ಈ 108 ಸಂಪುಟಗಳನ್ನು ಮಂಗೋಲಿಯಾ ಮತ್ತು ರಷ್ಯಾದ ಮಠಗಳಿಗೆ ವಿತರಿಸಲಾಗಿದೆ ಎಂದು ಅವರು ಹೇಳಿದರು. ಭಾರತವು ಥೈಲ್ಯಾಂಡ್ ಮತ್ತು ವಿಯೆಟ್ನಾಂನ ವಿಶ್ವವಿದ್ಯಾಲಯಗಳೊಂದಿಗೆ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದೆ ಎಂಬುದರತ್ತಲೂ ಶ್ರೀ ಮೋದಿ ಬೆಟ್ಟು ಮಾಡಿದರು. ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲು ಈ ದೇಶಗಳ ವಿದ್ವಾಂಸರಿಗೆ ತರಬೇತಿ ನೀಡಲಾಗುತ್ತಿದೆ ಎಂದೂ ಅವರು ಹೇಳಿದರು. ಈ ಪ್ರಯತ್ನಗಳ ಪರಿಣಾಮವಾಗಿ, ಪಾಲಿ, ಲನ್ನಾ ಮತ್ತು ಚಾಮ್ ಭಾಷೆಗಳಲ್ಲಿ ಹಲವಾರು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಎತ್ತಿ ತೋರಿಸಿದ ಶ್ರೀ ಮೋದಿ, ಜ್ಞಾನ ಭಾರತಂ ಮಿಷನ್ ಮೂಲಕ ಭಾರತವು ಈ ಉಪಕ್ರಮಗಳನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ದೃಢಪಡಿಸಿದರು.
ಜ್ಞಾನ ಭಾರತಂ ಮಿಷನ್ ಒಂದು ಪ್ರಮುಖ ಸವಾಲನ್ನು ಸಹ ಪರಿಹರಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ಶತಮಾನಗಳಿಂದ ಬಳಸಲಾಗುತ್ತಿರುವ ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಹಲವಾರು ಅಂಶಗಳನ್ನು ಇತರರು ಹೆಚ್ಚಾಗಿ ನಕಲು ಮಾಡಿ ಪೇಟೆಂಟ್ ಪಡೆದಿದ್ದಾರೆ ಎಂದು ಒತ್ತಿ ಹೇಳಿದರು. ಈ ರೀತಿಯ ಕಳ್ಳತನವನ್ನು (ಕೃತಿ ಚೌರ್ಯ) ನಿಗ್ರಹಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು, ಡಿಜಿಟಲ್ ಹಸ್ತಪ್ರತಿಗಳು ಅಂತಹ ದುರುಪಯೋಗವನ್ನು ಎದುರಿಸಲು ಪ್ರಯತ್ನಗಳನ್ನು ವೇಗಗೊಳಿಸುತ್ತವೆ ಮತ್ತು ಬೌದ್ಧಿಕ ಕಳ್ಳತನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ವಿವಿಧ ವಿಷಯಗಳಲ್ಲಿ ಅಧಿಕೃತ ಮತ್ತು ಅವುಗಳ ಮೂಲಗಳಿಗೆ ಜಗತ್ತು ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಶ್ರೀ ಮೋದಿ ದೃಢಪಡಿಸಿದರು.
ಜ್ಞಾನ ಭಾರತಂ ಮಿಷನ್‌ನ ಮತ್ತೊಂದು ನಿರ್ಣಾಯಕ ಆಯಾಮ ಮತ್ತು ಸಂಶೋಧನೆ ಹಾಗು ನಾವೀನ್ಯತೆಯ ಹೊಸ ಕ್ಷೇತ್ರಗಳನ್ನು ತೆರೆದಿಡುವಲ್ಲಿ (ಅನ್‌ಲಾಕ್ ಮಾಡುವಲ್ಲಿ) ಅದರ ಪಾತ್ರವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಜಾಗತಿಕ ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮದ ಮೌಲ್ಯ ಸುಮಾರು $2.5 ಟ್ರಿಲಿಯನ್ ಎಂದು ಗಮನಿಸಿದರು. ಡಿಜಿಟಲೀಕರಿಸಿದ ಹಸ್ತಪ್ರತಿಗಳು ಈ ಉದ್ಯಮದ ಮೌಲ್ಯ ಸರಪಳಿಗಳಿಗೆ ಬೆಂಬಲ ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಕೋಟ್ಯಂತರ ಹಸ್ತಪ್ರತಿಗಳು ಮತ್ತು ಅವುಗಳೊಳಗೆ ಹುದುಗಿರುವ ಪ್ರಾಚೀನ ಜ್ಞಾನವು ವಿಶಾಲವಾದ ದತ್ತಾಂಶ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು, ಇದು ದತ್ತಾಂಶ-ಚಾಲಿತ ನಾವೀನ್ಯತೆಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ದೃಢಪಡಿಸಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಜನರಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತವೆ ಎಂದು ಹೇಳಿದ ಶ್ರೀ ಮೋದಿ, ಹಸ್ತಪ್ರತಿ ಡಿಜಿಟಲೀಕರಣ ಮುಂದುವರೆದಂತೆ, ಶೈಕ್ಷಣಿಕ ಸಂಶೋಧನೆಗೆ ಹೊಸ ಸಾಧ್ಯತೆಗಳು ಸಹ ತೆರೆದುಕೊಳ್ಳುತ್ತವೆ ಎಂದು ಹೇಳಿದರು.
ಈ ಡಿಜಿಟಲೀಕರಿಸಿದ ಹಸ್ತಪ್ರತಿಗಳನ್ನು ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು, ಕೃತಕ ಬುದ್ಧಿಮತ್ತೆಯಂತಹ ಮುಂದುವರಿದ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದ ಪ್ರಧಾನಮಂತ್ರಿ, ಎ.ಐ. ಸಹಾಯದಿಂದ, ಪ್ರಾಚೀನ ಹಸ್ತಪ್ರತಿಗಳನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಹೆಚ್ಚು ಸಮಗ್ರವಾಗಿ ವಿಶ್ಲೇಷಿಸಬಹುದು ಎಂದು ಒತ್ತಿ ಹೇಳಿದರು. ಈ ಹಸ್ತಪ್ರತಿಗಳಲ್ಲಿರುವ ಜ್ಞಾನವನ್ನು ಜಗತ್ತಿಗೆ ಅಧಿಕೃತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ ಎ.ಐ. ಸಹಾಯ ಮಾಡುತ್ತದೆ ಎಂದೂ ಅವರು ಹೇಳಿದರು.
ದೇಶದ ಎಲ್ಲಾ ಯುವಜನರು ಮುಂದೆ ಬಂದು ಜ್ಞಾನ ಭಾರತಂ ಮಿಷನ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದ ಶ್ರೀ ಮೋದಿ, ತಂತ್ರಜ್ಞಾನದ ಮೂಲಕ ಭೂತಕಾಲವನ್ನು ಅನ್ವೇಷಿಸುವ ಮಹತ್ವವನ್ನು ಒತ್ತಿ ಹೇಳಿದರು. ಪುರಾವೆ ಆಧಾರಿತ ನಿಯತಾಂಕಗಳ ಮೇಲೆ ಈ ಜ್ಞಾನವನ್ನು ಮಾನವ ಕುಲಕ್ಕೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ದೇಶಾದ್ಯಂತದ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಈ ದಿಕ್ಕಿನಲ್ಲಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿ ಒತ್ತಾಯಿಸಿದರು. ಇಡೀ ರಾಷ್ಟ್ರವು ಸ್ವದೇಶಿ ಮನೋಭಾವ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಈ ಮಿಷನ್ ಆ ರಾಷ್ಟ್ರೀಯ ಚೈತನ್ಯದ ವಿಸ್ತರಣೆಯಾಗಿದೆ ಎಂದು ದೃಢಪಡಿಸಿದರು. ಭಾರತವು ತನ್ನ ಪರಂಪರೆಯನ್ನು ತನ್ನ ಶಕ್ತಿಯ ಸಂಕೇತವಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು. ಜ್ಞಾನ ಭಾರತಂ ಮಿಷನ್ ಭವಿಷ್ಯದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ಅವರು ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ರಾವ್ ಇಂದ್ರಜಿತ್ ಸಿಂಗ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
"ಹಸ್ತಪ್ರತಿ ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಮರಳಿ ಪಡೆಯುವುದು" ಎಂಬ ವಿಷಯದ ಅಡಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. ಭಾರತದ ಅಪ್ರತಿಮ ಹಸ್ತಪ್ರತಿ ಸಂಪತ್ತನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಮತ್ತು ಜಾಗತಿಕ ಜ್ಞಾನ ಸಂವಾದದ ಹೃದಯಭಾಗದಲ್ಲಿ ಇರಿಸಲು ಸಮ್ಮೇಳನವು ಪ್ರಮುಖ ವಿದ್ವಾಂಸರು, ಸಂರಕ್ಷಣಾವಾದಿಗಳು, ತಂತ್ರಜ್ಞರು ಮತ್ತು ನೀತಿ ತಜ್ಞರನ್ನು ಒಟ್ಟುಗೂಡಿಸುತ್ತದೆ. ಹಸ್ತಪ್ರತಿ ಸಂರಕ್ಷಣೆ, ಡಿಜಿಟಲೀಕರಣ ತಂತ್ರಜ್ಞಾನಗಳು, ಮೆಟಾಡೇಟಾ ಮಾನದಂಡಗಳು, ಕಾನೂನು ಚೌಕಟ್ಟುಗಳು, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಪ್ರಾಚೀನ ಲಿಪಿಗಳ ಅರ್ಥೈಸುವಿಕೆಯಂತಹ ನಿರ್ಣಾಯಕ ಕ್ಷೇತ್ರಗಳ ಕುರಿತು ಅಪರೂಪದ ಹಸ್ತಪ್ರತಿಗಳು ಮತ್ತು ವಿದ್ವತ್ಪೂರ್ಣ ಪ್ರಸ್ತುತಿಗಳನ್ನು ಪ್ರದರ್ಶಿಸುವ ಪ್ರದರ್ಶನವೂ ಇದರಲ್ಲಿ ಸೇರಿದೆ.
****
(Release ID: 2166260)
Visitor Counter : 2
Read this release in:
Odia
,
Telugu
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Malayalam