ಪ್ರಧಾನ ಮಂತ್ರಿಯವರ ಕಛೇರಿ
ಮಿಜೋರಾಂನ ಐಜ್ವಾಲ್‌ನಲ್ಲಿ 9,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶಂಕುಸ್ಥಾಪನೆ, ಉದ್ಘಾಟನೆ
ದೇಶಕ್ಕೆ ಅದರಲ್ಲೂ ವಿಶೇಷವಾಗಿ ಮಿಜೋರಾಂ ಜನತೆಗೆ ಇಂದು ಐತಿಹಾಸಿಕ ದಿನ, ಇಂದಿನಿಂದ ಐಜ್ವಾಲ್ ಭಾರತದ ರೈಲ್ವೆ ನಕ್ಷೆಯಲ್ಲಿ ಸ್ಥಾನ ಪಡೆಯಲಿದೆ: ಪ್ರಧಾನಮಂತ್ರಿ
ಈಶಾನ್ಯ ಭಾರತವು ಬೆಳವಣಿಗೆಯ ಚಾಲನಾಶಕ್ತಿ(ಎಂಜಿನ್) ಆಗುತ್ತಿದೆ: ಪ್ರಧಾನಮಂತ್ರಿ
ನಮ್ಮ ಈಶಾನ್ಯದತ್ತ ಕ್ರಮ ವಹಿಸಿ(ಆಕ್ಟ್ ಈಸ್ಟ್) ನೀತಿ ಮತ್ತು ಉದಯೋನ್ಮುಖ ಈಶಾನ್ಯ ಆರ್ಥಿಕ ಕಾರಿಡಾರ್ ಇವೆರಡರಲ್ಲೂ ಮಿಜೋರಾಂ ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ
ಮುಂದಿನ ಪೀಳಿಗೆಯ ಜಿ.ಎಸ್.ಟಿ(NextGenGST) ಸುಧಾರಣೆ ಎಂದರೆ ಅನೇಕ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತದೆ, ಕುಟುಂಬಗಳಿಗೆ ಜೀವನ ಸುಲಭಗೊಳಿಸುತ್ತದೆ: ಪ್ರಧಾನಮಂತ್ರಿ
ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ಪ್ರಧಾನಮಂತ್ರಿ
Posted On:
13 SEP 2025 11:23AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಿಜೋರಾಂನ ಐಜ್ವಾಲ್‌ನಲ್ಲಿಂದು 9,000 ಕೋಟಿ ರೂ.ಗಿಂತ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟನೆ ನೆರವೇರಿಸಿದರು. ಈ ಯೋಜನೆಗಳು ರೈಲ್ವೆ, ರಸ್ತೆ ಮಾರ್ಗಗಳು, ಇಂಧನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿವೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ನೀಲಿ ಪರ್ವತಗಳ ಸುಂದರ ಭೂಮಿಯನ್ನು ರಕ್ಷಿಸುತ್ತಿರುವ ಪರಮಾತ್ಮ ಪಥಿಯಾನ್‌ಗೆ ತಲೆಬಾಗಿ ನಮಸ್ಕರಿಸುವೆ. ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದ ಪ್ರತೀಕೂಲ ಹವಾಮಾನದಿಂದಾಗಿ ಐಜ್ವಾಲ್‌ನಲ್ಲಿ ಜನರೊಂದಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯ ಹೊರತಾಗಿಯೂ, ಈ ಮಾಧ್ಯಮದ ಮೂಲಕವೂ ಜನರ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಾತಂತ್ರ್ಯ ಚಳವಳಿಯೇ ಆಗಲಿ ಅಥವಾ ರಾಷ್ಟ್ರ ನಿರ್ಮಾಣವೇ ಆಗಲಿ, ಮಿಜೋರಾಂನ ಜನರು ಯಾವಾಗಲೂ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ. ಲಾಲ್ನು ರೋಪುಲಿಯಾನಿ ಮತ್ತು ಪಸಲ್ತಾ ಖುವಾಂಗ್‌ಚೇರಾ ಅವರಂತಹ ವ್ಯಕ್ತಿಗಳ ಆದರ್ಶಗಳು ರಾಷ್ಟ್ರಕ್ಕೆ ಸದಾ ಸ್ಫೂರ್ತಿ ನೀಡುತ್ತಲೇ ಇವೆ. ತ್ಯಾಗ ಮತ್ತು ಸೇವೆ, ಧೈರ್ಯ ಮತ್ತು ಸಹಾನುಭೂತಿಯು ಮಿಜೋರಾಂ ಸಮಾಜದಲ್ಲಿ ಆಳವಾಗಿ ಅಡಗಿರುವ ಮೌಲ್ಯಗಳಾಗಿವೆ. "ಇಂದು, ಮಿಜೋರಾಂ ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಈ ದಿನವು ಇಡೀ ರಾಷ್ಟ್ರಕ್ಕೆ, ವಿಶೇಷವಾಗಿ ಮಿಜೋರಾಂ ಜನರಿಗೆ ಐತಿಹಾಸಿಕ ಎಂದು ಬಣ್ಣಿಸಿದ ಶ್ರೀ ಮೋದಿ, "ಇಂದಿನಿಂದ ಐಜ್ವಾಲ್ ಭಾರತದ ರೈಲ್ವೆ ನಕ್ಷೆಯಲ್ಲಿ ಸೇರಿದೆ". ಕೆಲವು ವರ್ಷಗಳ ಹಿಂದೆ ಐಜ್ವಾಲ್ ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. ಇದೀಗ ರೈಲ್ವೆ ಮಾರ್ಗವನ್ನು ರಾಷ್ಟ್ರದ ಜನರಿಗೆ ಹೆಮ್ಮೆಯಿಂದ ಸಮರ್ಪಿಸುತ್ತಿದ್ದೇನೆ. ಕಷ್ಟಕರವಾದ ಭೂಪ್ರದೇಶ ಸೇರಿದಂತೆ ಹಲವು ಸವಾಲುಗಳ ಹೊರತಾಗಿಯೂ, ಬೈರಾಬಿ-ಸೈರಾಂಗ್ ರೈಲು ಮಾರ್ಗವು ಈಗ ವಾಸ್ತವವಾಗಿದೆ. ಈ ಸವಾಲಿನ ಕಾರ್ಯ ಪೂರ್ಣಗೊಳಿಸಿದ ಎಂಜಿನಿಯರ್‌ಗಳ ಕೌಶಲ್ಯ ಮತ್ತು ಕಾರ್ಮಿಕರ ಮನೋಭಾವ ಶ್ಲಾಘನೀಯ. ಅವರೆಲ್ಲರ ಪ್ರಯತ್ನಗಳು ಈ ಸಾಧನೆಯನ್ನು ಸಾಧ್ಯವಾಗಿಸಿದೆ ಎಂದು ಹೇಳಿದರು.
ದೇಶದ ಜನರ ಹೃದಯಗಳು ಮತ್ತು ಜನರು ಯಾವಾಗಲೂ ನೇರವಾಗಿ ಸಂಪರ್ಕ ಹೊಂದಿದ್ದಾರೆ ಎಂದು ದೃಢಪಡಿಸಿದ ಪ್ರಧಾನಮಂತ್ರಿ, ಮಿಜೋರಾಂನ ಸಾಯಿರಂಗವನ್ನು ಮೊದಲ ಬಾರಿಗೆ ರಾಜಧಾನಿ ಎಕ್ಸ್‌ಪ್ರೆಸ್ ಮೂಲಕ ದೆಹಲಿಗೆ ನೇರ ಸಂಪರ್ಕ ಒದಗಿಸಲಾಗುವುದು ಎಂದು ಘೋಷಿಸಿದರು. ಇದು ಕೇವಲ ರೈಲ್ವೆ ಸಂಪರ್ಕವಲ್ಲ, ಬದಲಾಗಿ ಪರಿವರ್ತನೆಯ ಜೀವನಾಡಿಯಾಗಿದೆ. ಇದು ಮಿಜೋರಾಂ ಜನರ ಜೀವನ ಮತ್ತು ಜೀವನೋಪಾಯದಲ್ಲಿ ಕ್ರಾಂತಿ ಉಂಟು ಮಾಡುತ್ತದೆ. ಮಿಜೋರಾಂನ ರೈತರು ಮತ್ತು ವ್ಯವಹಾರಗಳು ಈಗ ರಾಷ್ಟ್ರಾದ್ಯಂತ ಹೆಚ್ಚಿನ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗುತ್ತದೆ. ಜನರು ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಹೆಚ್ಚಿನ ಆಯ್ಕೆಗಳನ್ನು ಪಡೆಯುತ್ತಾರೆ. ಈ ಅಭಿವೃದ್ಧಿಯು ಪ್ರವಾಸೋದ್ಯಮ, ಸಾರಿಗೆ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ದೀರ್ಘ ಕಾಲದವರೆಗೆ ದೇಶದ ಕೆಲವು ರಾಜಕೀಯ ಪಕ್ಷಗಳು ಮತಬ್ಯಾಂ ಕ್ ರಾಜಕೀಯ ಮಾಡುತ್ತಲೇ ಬಂದರು. ಹೆಚ್ಚಿನ ಮತಗಳು ಮತ್ತು ಸ್ಥಾನಗಳನ್ನು ಹೊಂದಿರುವ ಸ್ಥಳಗಳ ಮೇಲೆ ಅವರು ತಮ್ಮ ಗಮನ ಹರಿಸಿದ್ದರು. ಪರಿಣಾಮವಾಗಿ, ಮಿಜೋರಾಂನಂತಹ ರಾಜ್ಯಗಳು ಸೇರಿದಂತೆ ಇಡೀ ಈಶಾನ್ಯವು ಈ ಮನೋಭಾವದಿಂದಾಗಿ ಬಹಳವಾಗಿ ಬಳಲಿತು. ಪ್ರಸ್ತುತ ರಾಜಕೀಯ ವಿಧಾನವು ತುಂಬಾ ವಿಭಿನ್ನವಾಗಿದೆ, ಹಿಂದೆ ನಿರ್ಲಕ್ಷಿಸಲ್ಪಟ್ಟವರು ಈಗ ಮುಂಚೂಣಿಯಲ್ಲಿದ್ದಾರೆ. ಒಂದು ಕಾಲದ ನಿರ್ಲಕ್ಷಿತರು ಈಗ ಸಮಾಜದ ಮುಖ್ಯವಾಹಿನಿಯ ಭಾಗವಾಗಿದ್ದಾರೆ. ಕಳೆದ 11 ವರ್ಷಗಳಿಂದ ಸರ್ಕಾರ ಈಶಾನ್ಯ ಭಾಗದ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಪ್ರದೇಶವು ಭಾರತದ ಬೆಳವಣಿಗೆಯ ಚಾಲನಾಶಕ್ತಿ(ಎಂಜಿನ್) ಆಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಅನೇಕ ವರ್ಷಗಳ ನಂತರ, ಈಶಾನ್ಯದ ಹಲವು ರಾಜ್ಯಗಳು ಭಾರತದ ರೈಲು ನಕ್ಷೆಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿವೆ. ಗ್ರಾಮೀಣ ರಸ್ತೆಗಳು ಮತ್ತು ಹೆದ್ದಾರಿಗಳು, ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕಗಳು, ವಿದ್ಯುತ್, ನಲ್ಲಿ ನೀರು ಮತ್ತು ಎಲ್‌ಪಿಜಿ ಸಂಪರ್ಕಗಳು ಸೇರಿದಂತೆ ಎಲ್ಲಾ ರೀತಿಯ ಸಂಪರ್ಕ ಬಲಪಡಿಸಲು ಭಾರತ ಸರ್ಕಾರ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ವೈಮಾನಿಕ ಪ್ರಯಾಣಕ್ಕಾಗಿ ಆರಂಭಿಸಿರುವ ಉಡಾನ್ ಯೋಜನೆಯಿಂದ ಮಿಜೋರಾಂ ಕೂಡ ಪ್ರಯೋಜನ ಪಡೆಯಲಿದೆ. ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಇದು ಮಿಜೋರಾಂನ ದೂರದ ಪ್ರದೇಶಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ಹೇಳಿದರು.
"ಈಶಾನ್ಯದತ್ತ ಕ್ರಮ ವಹಿಸಿ(ಆಕ್ಟ್ ಈಸ್ಟ್ ಪಾಲಿಸಿ) ನೀತಿ ಮತ್ತು ಉದಯೋನ್ಮುಖ ಈಶಾನ್ಯ ಆರ್ಥಿಕ ಕಾರಿಡಾರ್ ಇವೆರಡರಲ್ಲೂ ಮಿಜೋರಾಂ ಪ್ರಮುಖ ಪಾತ್ರ ವಹಿಸುತ್ತದೆ". ಕಲಾದನ್ ಬಹು-ಮಾದರಿ ಸಾರಿಗೆ ಸಂಪರ್ಕ ಯೋಜನೆ ಮತ್ತು ಸೈರಾಂಗ್-ಹ್ಮಾಂಗ್‌ಬುಚುವಾ ರೈಲು ಮಾರ್ಗದ ಮೂಲಕ ಮಿಜೋರಾಂ ಅನ್ನು ಆಗ್ನೇಯ ಏಷ್ಯಾದ ಮೂಲಕ ಬಂಗಾಳ ಕೊಲ್ಲಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ಸಂಪರ್ಕವು ಈಶಾನ್ಯ ಭಾರತ ಮತ್ತು ಆಗ್ನೇಯ ಏಷ್ಯಾದ್ಯಂತ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ಮಿಜೋರಾಂ ರಾಜ್ಯದಲ್ಲಿ ಪ್ರತಿಭಾನ್ವಿತ ಯುವಕರ ಸಮೂಹವೇ ಇದೆ. ಅವರನ್ನು ಸಬಲೀಕರಣಗೊಳಿಸುವುದು ಸರ್ಕಾರದ ಧ್ಯೇಯವಾಗಿದೆ. ಮಿಜೋರಾಂನಲ್ಲಿ ಈಗಾಗಲೇ 11 ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ, ಇನ್ನೂ 6 ಶಾಲೆಗಳನ್ನು ಆರಂಭಿಸುವ ಕೆಲಸ ನಡೆಯುತ್ತಿದೆ. ಈಶಾನ್ಯವು ನವೋದ್ಯಮಗಳಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ಪ್ರದೇಶದಲ್ಲಿ ಪ್ರಸ್ತುತ ಸುಮಾರು 4,500 ನವೋದ್ಯಮಗಳು ಮತ್ತು 25 ಪೋಷಣಾ ಕೇಂದ್ರ(ಇನ್ ಕ್ಯುಬೇಟರ್ಸ್)ಗಳು ಕಾರ್ಯ ನಿರ್ವಹಿಸುತ್ತಿವೆ, ಇದು ಸಂತಸದ ವಿಷಯ. ಮಿಜೋರಾಂನ ಯುವಜನರು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ತಮಗೂ ಮತ್ತು ಇತರರಿಗೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತವು ಜಾಗತಿಕ ಕ್ರೀಡೆಗಳಿಗೆ ಪ್ರಮುಖ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ, ಈ ಬೆಳವಣಿಗೆಯು ದೇಶದಲ್ಲಿ ಕ್ರೀಡಾ ಆರ್ಥಿಕತೆಗೂ ಕಾರಣವಾಗುತ್ತಿದೆ. ಮಿಜೋರಾಂ ಕ್ರೀಡೆಯು ಶ್ರೀಮಂತ ಸಂಪ್ರದಾಯ ಹೊಂದಿದೆ. ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಅನೇಕ ಚಾಂಪಿಯನ್‌ಗಳನ್ನು ಸೃಜಿಸುವಲ್ಲಿ ಮಿಜೋರಾಂ ಅಪಾರ ಕೊಡುಗೆ ನೀಡಿದೆ. ಸರ್ಕಾರದ ಕ್ರೀಡಾ ನೀತಿಗಳು ಮಿಜೋರಾಂಗೂ ಪ್ರಯೋಜನ ನೀಡುತ್ತಿವೆ. ಖೇಲೋ ಇಂಡಿಯಾ ಯೋಜನೆಯಡಿ, ಆಧುನಿಕ ಕ್ರೀಡಾ ಮೂಲಸೌಕರ್ಯಗಳ ಸೃಷ್ಟಿಗೆ ಬೆಂಬಲ ನೀಡಲಾಗುತ್ತಿದೆ. ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಕ್ರೀಡಾ ನೀತಿ - ಖೇಲೋ ಇಂಡಿಯಾ ಖೇಲ್ ನೀತಿಯನ್ನು ಪರಿಚಯಿಸಿದೆ. ಈ ಉಪಕ್ರಮವು ಮಿಜೋರಾಂ ಯುವಕರಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು.
ದೇಶದೊಳಗೆ ಮತ್ತು ವಿದೇಶಗಳಲ್ಲಿ ಈಶಾನ್ಯದ ಸುಂದರ ಸಂಸ್ಕೃತಿಯು ರಾಯಭಾರಿ ಪಾತ್ರ ನಿರ್ವಹಿಸಿದೆ, ಇದು ಸಂತಸದ ವಿಚಾರ. ಈಶಾನ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಗಳನ್ನು ಪ್ರೋತ್ಸಾಹಿಸುವ ಮಹತ್ವವಿದೆ. ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಅಷ್ಟ ಲಕ್ಷ್ಮಿ ಉತ್ಸವದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ, ಉತ್ಸವವು ಈಶಾನ್ಯದ ಜವಳಿ, ಕರಕುಶಲ ವಸ್ತುಗಳು, ಜಿ.ಐ.-ಟ್ಯಾಗ್ ಮಾಡಲಾದ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ರೈಸಿಂಗ್ ನಾರ್ತ್ ಈಸ್ಟ್ ಶೃಂಗಸಭೆಯಲ್ಲಿ, ಈ ಪ್ರದೇಶದ ಅಗಾಧ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಹೂಡಿಕೆದಾರರನ್ನು ಪ್ರೋತ್ಸಾಹಿಸಲಾಗಿದೆ. ಈ ಶೃಂಗಸಭೆಯು ಬೃಹತ್ ಹೂಡಿಕೆಗಳು ಮತ್ತು ಯೋಜನೆಗಳಿಗೆ ದಾರಿ ಮಾಡಿಕೊಡುತ್ತಿದೆ. ವೋಕಲ್ ಫಾರ್ ಲೋಕಲ್ ಅಥವಾ ಸ್ಥಳೀಯವಾಗಿ ಉತ್ಪಾದಿಸಿ ಉಪಕ್ರಮವು ಈಶಾನ್ಯದ ಕುಶಲಕರ್ಮಿಗಳು ಮತ್ತು ರೈತರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಮಿಜೋರಾಂನ ಬಿದಿರಿನ ಉತ್ಪನ್ನಗಳು, ಸಾವಯವ ಶುಂಠಿ, ಅರಿಶಿನ ಮತ್ತು ಬಾಳೆಹಣ್ಣುಗಳು ಪ್ರಸಿದ್ಧವಾಗಿವೆ ಎಂದು ಹೇಳಿದರು.
ಸುಲಭವಾಗಿ ಜೀವನ ನಡೆಸಲು ಮತ್ತು ಸುಲಭವಾಗಿ ವ್ಯವಹಾರ ನಡೆಸುವುದನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. "ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳನ್ನು ಇತ್ತೀಚೆಗೆ ಪರಿಚಯಿಸಲಾಗಿದೆ. ಇದರರ್ಥ ಅನೇಕ ಉತ್ಪನ್ನಗಳ ಮೇಲಿನ ತೆರಿಗೆಗಳು ಕಡಿಮೆಯಾಗುತ್ತವೆ, ಇದು ಕುಟುಂಬಗಳಿಗೆ ಜೀವನವನ್ನು ಸುಲಭಗೊಳಿಸುತ್ತದೆ". 2014ಕ್ಕಿಂತ ಮೊದಲು, ಟೂತ್‌ಪೇಸ್ಟ್, ಸೋಪ್ ಮತ್ತು ಎಣ್ಣೆಯಂತಹ ದೈನಂದಿನ ಅಗತ್ಯ ವಸ್ತುಗಳ ಮೇಲೆ 27% ತೆರಿಗೆ ವಿಧಿಸಲಾಗುತ್ತಿತ್ತು. ಇಂದು, ಈ ವಸ್ತುಗಳ ಮೇಲೆ ಕೇವಲ 5% ಜಿ.ಎಸ್.ಟಿ ಅನ್ವಯಿಸುತ್ತದೆ. ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಔಷಧಿಗಳು, ಪರೀಕ್ಷಾ ಕಿಟ್‌ಗಳು ಮತ್ತು ವಿಮಾ ಪಾಲಿಸಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು. ಇದು ಆರೋಗ್ಯ ರಕ್ಷಣೆಯನ್ನು ದುಬಾರಿ ಮಾಡಿತ್ತು, ಸಾಮಾನ್ಯ ಕುಟುಂಬಗಳು ವಿಮೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು, ಈ ಎಲ್ಲಾ ಸೇವೆಗಳು ಮತ್ತು ಉತ್ಪನ್ನಗಳು ಕೈಗೆಟುಕುವಂತಾಗಿವೆ. ಹೊಸ ಜಿ.ಎಸ್.ಟಿ ದರಗಳು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಅಗ್ಗದ ದರದಲ್ಲಿ ಔಷಧಗಳು ಲಭ್ಯವಾಗುತ್ತವೆ. ಸೆಪ್ಟೆಂಬರ್ 22ರ ನಂತರ, ಸಿಮೆಂಟ್ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳು ಸಹ ಅಗ್ಗವಾಗುತ್ತವೆ. ಸ್ಕೂಟರ್‌ಗಳು ಮತ್ತು ಕಾರುಗಳನ್ನು ತಯಾರಿಸುವ ಅನೇಕ ಕಂಪನಿಗಳು ಈಗಾಗಲೇ ಬೆಲೆಗಳನ್ನು ಕಡಿಮೆ ಮಾಡಿವೆ. ಮುಂಬರುವ ಹಬ್ಬದ ಋತುವು ದೇಶಾದ್ಯಂತ ಇನ್ನಷ್ಟು ರೋಮಾಂಚಕವಾಗಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುಧಾರಣೆಗಳ ಭಾಗವಾಗಿ, ಹೆಚ್ಚಿನ ಹೋಟೆಲ್‌ಗಳ ಮೇಲಿನ ಜಿ.ಎಸ್.ಟಿಯನ್ನು ಕೇವಲ 5% ಗೆ ಇಳಿಸಲಾಗಿದೆ. ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದು, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದು ಮತ್ತು ಹೊರಗೆ ಊಟ ಮಾಡುವುದು ಸಹ ಈಗ ಜನರಿಗೆ ಕೈಗೆಟುಕುವಂತಾಗಿದೆ. ಇದು ಹೆಚ್ಚಿನ ಜನರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು, ಅನ್ವೇಷಿಸಲು ಮತ್ತು ಆನಂದಿಸುವುದನ್ನು ಪ್ರೋತ್ಸಾಹಿಸುತ್ತದೆ. ಈಶಾನ್ಯದಂತಹ ಪ್ರವಾಸಿ ಕೇಂದ್ರಗಳು ಈ ಬದಲಾವಣೆಯಿಂದ ವಿಶೇಷವಾಗಿ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು.
"ಭಾರತದ ಆರ್ಥಿಕತೆಯು 2025–26ರ ಮೊದಲ ತ್ರೈಮಾಸಿಕದಲ್ಲಿ 7.8% ಬೆಳವಣಿಗೆ ದಾಖಲಿಸಿದೆ. ಇದರರ್ಥ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ". ಮೇಕ್ ಇನ್ ಇಂಡಿಯಾ ಮತ್ತು ರಫ್ತುಗಳಲ್ಲಿಯೂ ದೇಶವು ಬಲವಾದ ಬೆಳವಣಿಗೆ ಕಾಣುತ್ತಿದೆ. ಆಪರೇಷನ್ ಸಿಂದೂರ್ ಉಲ್ಲೇಖಿಸಿದ ಪ್ರಧಾನಮಂತ್ರಿ, ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ಭಾರತೀಯ ಸೈನಿಕರು ಹೇಗೆ ಪಾಠ ಕಲಿಸಿದರು ಎಂಬುದನ್ನು ಇಡೀ ದೇಶವೇ ನೋಡಿದೆ. ಇಡೀ ದೇಶವೇ ಸಶಸ್ತ್ರ ಪಡೆಗಳ ಶೌರ್ಯವನ್ನು ಹೆಮ್ಮೆಯಿಂದ ಶ್ಲಾಘಿಸಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮೇಡ್-ಇನ್-ಇಂಡಿಯಾ ಶಸ್ತ್ರಾಸ್ತ್ರಗಳು ರಾಷ್ಟ್ರವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಭಾರತದ ಆರ್ಥಿಕತೆ ಮತ್ತು ಉತ್ಪಾದನೆ ಅಥವಾ ತಯಾರಿಕೆ ವಲಯದ ಬೆಳವಣಿಗೆ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ನಾಗರಿಕ, ಪ್ರತಿ ಕುಟುಂಬ ಮತ್ತು ಪ್ರತಿಯೊಂದು ಪ್ರದೇಶದ ಕಲ್ಯಾಣಕ್ಕೆ ಸರ್ಕಾರ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ, ಜನರ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲಾಗುವುದು. ಈ ಪ್ರಯಾಣದಲ್ಲಿ ಮಿಜೋರಾಂನ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಐಜ್ವಾಲ್ ಭಾರತದ ರೈಲ್ವೆ ನಕ್ಷೆಗೆ ಸೇರ್ಪಡೆ ಆಗಿದ್ದನ್ನು ಸ್ವಾಗತಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಐಜ್ವಾಲ್‌ಗೆ ಭೇಟಿ ನೀಡಲು ಈಗ ಸಾಧ್ಯವಾಗದಿದ್ದರೂ, ಅತಿ ಶೀಘ್ರದಲ್ಲೇ ಭೇಟಿಯಾಗುತ್ತೇನೆ ಎಂಬ ವಿಶ್ವಾಸವಿದೆ ಎಂದು ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಮಿಜೋರಾಂ ರಾಜ್ಯಪಾಲ ಜನರಲ್ ವಿ.ಕೆ. ಸಿಂಗ್, ಮಿಜೋರಾಂ ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಅನತಿ ದೂರದ ಜನರಿಗೆ ಸಂಪರ್ಕ ಕಲ್ಪಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು 8,070 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗಕ್ಕೆ ಹಸಿರುನಿಶಾನೆ ತೋರಿದರು. ಇದು ಮಿಜೋರಾಂ ರಾಜಧಾನಿಯನ್ನು ಭಾರತೀಯ ರೈಲ್ವೆ ಜಾಲಕ್ಕೆ ಮೊದಲ ಬಾರಿಗೆ ಸಂಪರ್ಕ ಕಲ್ಪಿಸಿದೆ. ಸವಾಲಿನ ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗ ಯೋಜನೆಯು ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ ನಿರ್ಮಿಸಲಾದ 45 ಸುರಂಗಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು 55 ಪ್ರಮುಖ ಸೇತುವೆಗಳು ಮತ್ತು 88 ಸಣ್ಣ ಸೇತುವೆಗಳನ್ನು ಸಹ ಒಳಗೊಂಡಿದೆ. ಮಿಜೋರಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ನೇರ ರೈಲು ಸಂಪರ್ಕವು ಈ ಪ್ರದೇಶದ ಜನರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಪ್ರಯಾಣ ಆಯ್ಕೆಗಳನ್ನು ನೀಡುತ್ತದೆ. ಇದು ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ವಸ್ತುಗಳ ಸಕಾಲಿಕ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸುತ್ತದೆ, ಇದರಿಂದಾಗಿ ಒಟ್ಟಾರೆ ಸಾಗಣೆ ದಕ್ಷತೆ ಮತ್ತು ಪ್ರಾದೇಶಿಕ ಪ್ರವೇಶವನ್ನು ಹೆಚ್ಚಿಸುತ್ತದೆ.
ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ 3 ಹೊಸ ಎಕ್ಸ್‌ಪ್ರೆಸ್ ರೈಲುಗಳಾದ ಸೈರಾಂಗ್ (ಐಜ್ವಾಲ್)-ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ರಾಜಧಾನಿ ಎಕ್ಸ್‌ಪ್ರೆಸ್, ಸೈರಾಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್‌ಗಳಿಗೆ ಹಸಿರುನಿಶಾನೆ ತೋರಿದರು. ಐಜ್ವಾಲ್ ಈಗ ರಾಜಧಾನಿ ಎಕ್ಸ್‌ಪ್ರೆಸ್ ಮೂಲಕ ದೆಹಲಿಯೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲಿದೆ. ಸೈರಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮಿಜೋರಾಂ ಮತ್ತು ಅಸ್ಸಾಂ ನಡುವಿನ ಸಂಚಾರಕ್ಕೆ ಅನುಕೂಲವಾಗಲಿದೆ. ಸೈರಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್ ಮಿಜೋರಾಂ ಅನ್ನು ಕೋಲ್ಕತಾಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಈ ಹೆಚ್ಚುವರಿ ಸಂಪರ್ಕವು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ, ಇದರಿಂದಾಗಿ ಈ ಪ್ರದೇಶದಾದ್ಯಂತ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ರಸ್ತೆ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ಭಾಗವಾಗಿ ಪ್ರಧಾನಮಂತ್ರಿ ಅವರು ಬಹುರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಐಜ್ವಾಲ್ ಬೈಪಾಸ್ ರಸ್ತೆ, ಥೆನ್ಜಾಲ್-ಸಿಯಾಲ್ಸುಕ್ ರಸ್ತೆ ಮತ್ತು ಖಾಂಕಾನ್-ರೊಂಗುರಾ ರಸ್ತೆ ಸೇರಿವೆ.
ಪ್ರಧಾನಮಂತ್ರಿಗಳ ಈಶಾನ್ಯ ಪ್ರದೇಶಕ್ಕಾಗಿ ಅಭಿವೃದ್ಧಿ ಉಪಕ್ರಮ(PM-DevINE) ಯೋಜನೆಯಡಿ, 500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 45 ಕಿ.ಮೀ ಐಜ್ವಾಲ್ ಬೈಪಾಸ್ ರಸ್ತೆ, ಐಜ್ವಾಲ್ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಲುಂಗ್ಲೈ, ಸಿಯಾಹಾ, ಲಾಂಗ್ಟ್ಲೈ, ಲೆಂಗ್ಪುಯಿ ವಿಮಾನ ನಿಲ್ದಾಣ ಮತ್ತು ಸೈರಂಗ್ ರೈಲು ನಿಲ್ದಾಣಕ್ಕೆ ಸಂಪರ್ಕ ಸುಧಾರಿಸುವ ಗುರಿ ಹೊಂದಿದೆ. ಇದು ದಕ್ಷಿಣ ಜಿಲ್ಲೆಗಳಿಂದ ಐಜ್ವಾಲ್‌ಗೆ ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ತಾಸು ಕಡಿಮೆ ಮಾಡುತ್ತದೆ, ಇದು ಈ ಪ್ರದೇಶದ ಜನರಿಗೆ ಗಮನಾರ್ಹ ಪ್ರಯೋಜನ ನೀಡುತ್ತದೆ. ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ(NESIDS) ನಿರ್ಮಿಸಲಾದ ಥೆಂಜಾಲ್-ಸಿಯಾಲ್ಸುಕ್ ರಸ್ತೆಯು ಅನೇಕ ತೋಟಗಾರಿಕಾ ರೈತರು, ಡ್ರ್ಯಾಗನ್ ಹಣ್ಣು ಬೆಳೆಗಾರರು, ಭತ್ತ ಬೆಳೆಗಾರರು ಮತ್ತು ಶುಂಠಿ ಸಂಸ್ಕರಣಾಗಾರಗಳಿಗೆ ಪ್ರಯೋಜನ ನೀಡಲಿದೆ, ಜತೆಗೆ ಐಜ್ವಾಲ್-ಥೆಂಜಾಲ್-ಲುಂಗ್ಲೈ ಹೆದ್ದಾರಿಗೆ ಸಂಪರ್ಕ ಬಲಪಡಿಸಲಿದೆ. ಸೆರ್ಚಿಪ್ ಜಿಲ್ಲೆಯ NESIDS(ರಸ್ತೆಗಳು) ಅಡಿ ನಿರ್ಮಿಸಲಾದ ಖಾಂಕಾವ್ನ್-ರೊಂಗುರಾ ರಸ್ತೆಯು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶ ಒದಗಿಸುತ್ತದೆ, ಯೋಜಿತ ಶುಂಠಿ ಸಂಸ್ಕರಣಾ ಘಟಕಗಳಿಗೆ ಬೆಂಬಲ ನೀಡುವ ಜತೆಗೆ, ಈ ಪ್ರದೇಶದ ವಿವಿಧ ತೋಟಗಾರಿಕಾ ರೈತರು ಮತ್ತು ಇತರೆ ಜನರಿಗೆ ಪ್ರಯೋಜನ ನೀಡುತ್ತದೆ.
ಲಾಂಗ್ಟ್ಲೈ - ಸಿಯಾಹಾ ರಸ್ತೆಯಲ್ಲಿರುವ ಚಿಮ್ಟುಯಿಪುಯಿ ನದಿ ಸೇತುವೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಎಲ್ಲಾ ಹವಾಮಾನದಲ್ಲೂ ಸಂಪರ್ಕ ಒದಗಿಸುತ್ತದೆ, ಪ್ರಯಾಣ ಸಮಯವನ್ನು 2 ತಾಸು ಕಡಿಮೆ ಮಾಡುತ್ತದೆ. ಈ ಸೇತುವೆಯು ಕಲಾದನ್ ಬಹುಮಾದರಿ ಸಂಚಾರ ಸಂಪರ್ಕ ಮಾರ್ಗಸೂಚಿ ಅಡಿ, ಗಡಿಯಾಚೆಗಿನ ವಾಣಿಜ್ಯವನ್ನು ಸಹ ಬೆಂಬಲಿಸುತ್ತದೆ.
ಕ್ರೀಡಾ ಅಭಿವೃದ್ಧಿಗಾಗಿ ಖೇಲೋ ಇಂಡಿಯಾ ಬಹುಪಯೋಗಿ ಒಳಾಂಗಣ ಸಭಾಂಗಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ತುಯಿಕುವಾಲ್‌ನಲ್ಲಿರುವ ಸಭಾಂಗಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಮಿಜೋರಾಂ ಯುವಕರಿಗೆ ಪ್ರಯೋಜನ ನೀಡುವ ಮತ್ತು ಪೋಷಿಸುವ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ.
ಈ ಪ್ರದೇಶದಲ್ಲಿ ಇಂಧನ ಮೂಲಸೌಕರ್ಯ ಬಲಪಡಿಸುವ ಸಲುವಾಗಿ, ಐಜ್ವಾಲ್‌ನ ಮುಲ್ಖಾಂಗ್‌ನಲ್ಲಿ 30 ಟಿ.ಎಂ.ಟಿ.ಪಿ.ಎ(ವರ್ಷಕ್ಕೆ ಸಾವಿರ ಮೆಟ್ರಿಕ್ ಟನ್) ಎಲ್.ಪಿ.ಜಿ ಬಾಟ್ಲಿಂಗ್ ಸ್ಥಾವರಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಮಿಜೋರಾಂ ಮತ್ತು ನೆರೆ ರಾಜ್ಯಗಳಲ್ಲಿ ಎಲ್.ಪಿ.ಜಿಯ ಸ್ಥಿರ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ, ಇದು ಸ್ವಚ್ಛ ಅಡುಗೆ ಇಂಧನಕ್ಕೆ ಸುಲಭ ಪ್ರವೇಶ ಒದಗಿಸುತ್ತದೆ. ಇದು ಸ್ಥಳೀಯ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ.
ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ್(ಪಿ.ಎಂ.ಜೆ.ವಿ.ಕೆ) ಯೋಜನೆಯಡಿ, ಪ್ರಧಾನಮಂತ್ರಿ ಅವರು ಕವರ್ತಾದಲ್ಲಿ ವಸತಿ ಶಾಲೆ ಉದ್ಘಾಟಿಸಿದರು. ಮಾಮಿತ್ ಮಹತ್ವಾಕಾಂಕ್ಷೆಯ ಜಿಲ್ಲೆಯ ಈ ಶಾಲೆಯು ಆಧುನಿಕ ತರಗತಿ ಕೊಠಡಿಗಳು, ಹಾಸ್ಟೆಲ್‌ಗಳು ಮತ್ತು ಕೃತಕ ಫುಟ್‌ಬಾಲ್ ಟರ್ಫ್ ಸೇರಿದಂತೆ ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಿದೆ. ಇದು 10,000ಕ್ಕಿಂತ ಹೆಚ್ಚಿನ ಮಕ್ಕಳು ಮತ್ತು ಯುವಕರಿಗೆ ಪ್ರಯೋಜನ ನೀಡಲಿದ್ದು, ದೀರ್ಘಕಾಲೀನ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಭದ್ರ ಅಡಿಪಾಯ ಹಾಕಲಿದೆ.
ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನ ಮುಂದುವರೆಸುತ್ತಾ, ಪ್ರಧಾನಮಂತ್ರಿ ಅವರು ತ್ಲಾಂಗ್ನುವಾಮ್‌ನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಉದ್ಘಾಟಿಸಿದರು. ಈ ಶಾಲೆಯು ಮಕ್ಕಳ ದಾಖಲಾತಿಯನ್ನು ಸುಧಾರಿಸುತ್ತದೆ, ಶಾಲೆ ತೊರೆಯುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಬುಡಕಟ್ಟು ಯುವಕರಿಗೆ ಸಮಗ್ರ ಶಿಕ್ಷಣದ ಅವಕಾಶಗಳನ್ನು ಒದಗಿಸುತ್ತದೆ.
****
(Release ID: 2166250)
Visitor Counter : 2